ಭಾವ ಭೈರಾಗಿ
ಕಾಯುತ್ತಿದ್ದೇನೆ ಕಲ್ಯಾಣದ ಬಸ್ಸಿಗೆ
ನನಗೆ ಅರ್ಜೆಂಟ್ ಆಗಿ ಕಲ್ಯಾಣಕ್ಕೆ ಹೋಗಬೇಕಿದೆ, ಬರುವ ಬಸ್ಸುಗಳೆಲ್ಲ ಬೆಂಗಳೂರು, ಬಾಂಬೆ ಎಂಬ ಬೋರ್ಡ್‌ನ್ನು ತಗುಲಿಸಿಕೊಂಡಿವೆ, ಕಲ್ಯಾಣದ ಬಸ್ಸಿನ ಬಗ್ಗೆ ಯಾರನ್ನೂ ವಿಚಾರಿಸಿದರು ಈಗ ಬರುವುದು, ಆಗ ಬರುವುದು ಎಂದು ಹೇಳುತ್ತಾರೆ ಹೊರತು, ಎಷ್ಟೊತ್ತಿಗೆ ಬರುತ್ತದೆ ಎಂದು ಹೇಳುತ್ತಿಲ್ಲ
ನನಗೆ ಕಲ್ಯಾಣದಲ್ಲಿ ಅರ್ಜೆಂಟ್ ಆದ ಹತ್ತು ಹಲವು ಕೆಲಸ ಕಾರ್ಯಗಳಿವೆ, ಇಂಗ್ಲೆಂಡಿನ ಜನತೆ ಸಿದ್ದಪಡಿಸುತ್ತಿರುವ ‘ ಮ್ಯಾಗ್ನಕಾರ್ಟ’ ಎಂಬ ಸನ್ನದಿಗೆ ಕಲ್ಯಾಣದ ಜನರ ಅನುಭವದ ಟಿಪ್ಪಣಿಗಳನ್ನು ಕೊರಿಯರ್ ಮಾಡಬೇಕಿದೆ
ನನಗೆ ಕಲ್ಯಾಣದಲ್ಲಿ ಅರ್ಜೆಂಟ್ ಆಗಿ ಫ್ರಾನ್ಸಿನ ಜನರು ಮಾಡುತ್ತಿರುವ ಫ್ರೆಂಚ್ ಕ್ರಾಂತಿಯ ಘೋಷ ವಾಕ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಭಾತೃತ್ವದ ಪರಿಕಲ್ಪನೆಗೆ ಕಲ್ಯಾಣದ ಜನರ ಅಭಿಪ್ರಾಯಗಳನ್ನು ರಿಜಿಸ್ಟರ್ ಪೋಸ್ಟ್ ಮಾಡಬೇಕಿದೆ.
ನನಗೆ ಕಲ್ಯಾಣದಿಂದ ಯುರೋಪಿನ ಬುದ್ದಿ ಜೀವಿ ಕಾರ್ಲ್ ಮಾರ್ಕ್ಸ್ ರಚಿಸುತ್ತಿರುವ ಮ್ಯಾನಿಫಿಸ್ಟ್ ಗ್ರಂಥಕ್ಕೆ ಕಾಯಕವೇ ಕೈಲಾಸದ ಪ್ರತಿಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕಿದೆ
ನನಗೆ ಕಲ್ಯಾಣದಿಂದ ಯುನೆಸ್ಕೋದ ಭಾಷೆ ಮತ್ತು ಧರ್ಮ ಎಂಬ ಕಮಿಟಿಯ ಮುಂದೆ ಮಂಡಿಸಲು ನಮ್ಮ ಬಾಸ್ ಬಸವಣ್ಣನವರು ಸಿದ್ದಪಡಿಸಿರುವ ಲಿಂಗಾಯತ ಮತ್ತು ಕನ್ನಡ ಭಾಷೆ ಎಂಬ ಪ್ರಬಂಧವನ್ನು ಅರ್ಜೆಂಟ್ ಆಗಿ ಟೈಪು ಮಾಡಬೇಕಿದೆ
ಎಲ್ಲಕ್ಕಿಂತ ಮಿಗಿಲಾಗಿ ಕಲ್ಯಾಣದ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಹರಳಯ್ಯ ಮತ್ತು ಮಧುವರಸನ ಮಕ್ಕಳ ಮದುವೆಯನ್ನು ರಿಜಿಸ್ಟರ್ ಮಾಡಿ, ಅವರ ಜೀವಕ್ಕೆ ಸೂಕ್ತ ಭದ್ರತೆ ನೀಡುವಂತೆ ಡಿವೈಎಸ್ಪಿ ಸಾಹೇಬರನ್ನು ಭೇಟಿ ಮಾಡಬೇಕಿದೆ
ಕಲ್ಯಾಣದ ಬಸ್ಸು ಈಗ ಬರಬಹುದು, ಆಗ ಬರಬಹುದು ಎಂದು ತಾಸು ಗಟ್ಟಲೆ ಕಾಯುತ್ತಲೇ ಇದ್ದೆನೆ, ಬರುವ ಬಸ್ಸಿನ ಕಂಡಕ್ಟರ್ ಗಳಿಗೆ ಕಲ್ಯಾಣಕ್ಕೆ ಹೋಗುವುದಾ? ಎಂದು ಕೇಳುತ್ತಲೇ ಇದ್ದೆನೆ, ಎಲ್ಲರೂ ಕಲ್ಯಾಣದ ಹೆಸರು ಕೇಳಿದೊಡನೆ ಕೈ ಅಲ್ಲಾಡಿಸಿ, ತಲೆ ಅಲ್ಲಾಡಿಸಿ, ಹೋಗದು ಎಂಬಂತೆ ಸಂಜ್ಞೆ ಮಾಡಿ ಮುಂದಕ್ಕೆ ಹೋಗುತ್ತಿದ್ದರೆ, ನಾನು ಕಲ್ಯಾಣದ ಬಸ್ಸಿಗಾಗಿ ಕಾಯುತ್ತಲೇ ಇದ್ದೆನೆ, ಕಲ್ಯಾಣವನ್ನು ತಲುಪುವ ದಾರಿಯ ಬಗ್ಗೆ ಚಿಂತಿತನಾಗಿದ್ದೇನೆ.
– ನಿಮ್ಮವನು
(Jagannaatha Ramaswamy ಅವರ ಫೇಸ್‌ಬುಕ್ ವಾಲ್ ನಿಂದ ಈ ಕವಿತೆ ತೆಗೆದುಕೊಳ್ಳಲಾಗಿದೆ.)
https://m.facebook.com/story.php?story_fbid=1255484837938914&id=100004322293788
ಸುದ್ದಿದಿನ.ಕಾಂ|ವಾಟ್ಸಾಪ್|9980346243