ಲೈಫ್ ಸ್ಟೈಲ್

ಗೋವಿನ ಉದರವೆಂಬ ಬ್ರಹ್ಮಾಂಡ ಬಾಂಡ, ಅದ್ಭುತ ಲೋಕ..!

Published

on

  • ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ

ಏನ್, ದನಾ ತಿಂದ ಹಾಗೆ ತಿಂತೀಯಲ್ಲೋ” ಎಂದು ಕೆಲವರು ಮೂದಲಿಸುವುದನ್ನು ನೋಡುತ್ತೇವೆ. ಅಣ್ಣಾವ್ರು ಸಂಪತ್ತಿಗೆ ಸವಾಲ್ ಚಿತ್ರದಲ್ಲಿನ ಪ್ರಸಿದ್ಧ ಎಮ್ಮೆ ಹಾಡಿನಲ್ಲಿ “ಕಸವನ್ನೇ ತಿಂದರು ಕೊನೆಗೆ..ಹಾಲನ್ನೇ ನೀಡುವೆ ನಮಗೆ… ಎಂದು ಎಮ್ಮೆಯ ಮೇಲೆ ಸವಾರಿ ಮಾಡುತ್ತಾ ಹಾಡುತ್ತಾ ಹೋಗುವುದನ್ನೂ ಗಮನಿಸಿದ್ದೀರಿ.

ಏನೇನೂ ಕೆಲಸಕ್ಕೆ ಬರದ ವಸ್ತುಗಳು ನಮ್ಮಲ್ಲಿ ಅನೇಕ. ಅದರಲ್ಲಿ ತೆನೆಕೊಯ್ದ ಮೇಲೆ ಇರುವ ಜೋಳದ ಸಿಪ್ಪೆ, ಭತ್ತದ ಕಟಾವು ಆದ ನಂತರ ಸಿಗುವ ಒಣಹುಲ್ಲು, ಅಡಿಕೆಯ ಹಾಳೆ, ಅಕ್ಕಿ ಹೊಟ್ಟು, ಶೇಂಗಾ ಹೊಟ್ಟು, ರಾಗಿ ಹೊಟ್ಟು, ಅಡಿಕೆ ಹಾಳೆ ಇತ್ಯಾದಿಗಳನ್ನು ತಿಂದು ಜೀರ್ಣಿಸಿಕೊಂಡು ಅತ್ಯಂತ ಪೌಷ್ಟಿಕಾಂಶ ಹೊಂದಿದ ರುಚಿಕಟ್ಟಾದ ಅಮೃತದಂತ ಹಾಲನ್ನು ನೀಡುವಂತ ಪ್ರಪಂಚದ ಏಕೈಕ ಪ್ರಾಣಿ ನಮ್ಮ ಗೋಮಾತೆ.

ಅದೆಂತ ಅದ್ಭುತ ಉದರವನ್ನು ಹೊಂದಿದೆಯೆಂದರೆ ಮನುಷ್ಯನಿಗೆ ಏನೇನೂ ಪ್ರಯೋಜನ ಬಾರದ ಅನುಪಯುಕ್ತ ವಸ್ತುಗಳನ್ನು ತಿಂದು ಹಾಲನ್ನಾಗಿ ಪರಿವರ್ತಿಸುವ ಅದ್ಭುತ ಗುಣ ಹೊಂದಿದೆ. ಅದಕ್ಕೆ ಅದರ ಹೆಸರು “ಗೋಮಾತೆ” ಎಂದಿರಬಹುದು.

ಹಾಗಿದ್ದರೆ ಏನಿದೆ ಅದರ ಉದರದಲ್ಲಿ !? ಇದನ್ನು ತಿಳಿಯುವ ಕುತೂಹಲ ಇದೆಯೇ? ಈ ಲೇಖನವನ್ನು ಕೊನೆಯವರೆಗೆ ಓದಿ ಬಿಡಿ.

ನಮ್ಮ ಜಾನುವಾರುಗಳ ಜೀರ್ಣಕ್ರಿಯೆಯ ಅದ್ಭುತ ಪರಿಯನ್ನು ನೋಡಿಯೇ ಬರೆದಿರಬಹುದು. ಮೊದಲನೆಯದು-ಅವನು ಹೆಚ್ಚು ಆಹಾರ ತಿನ್ನುತ್ತಾನೆ ಎಂದು. ಎರಡನೆಯದೆಂದರೆ, ನಿಧಾನವಾಗಿ ಮೆಲುಕು ಹಾಕುತ್ತ ತಿನ್ನುತ್ತಾನೆ ಎಂದು! ನಿಜವೇ. ದನಗಳಿಗೆ ಅಧಿಕ ಆಹಾರ ಬೇಕು. ಜೊತೆಗೆ ಅವು ಒಮ್ಮೆ ತಿಂದ ಆಹಾರವನ್ನು ಬಿಡುವಾದಾಗ ಪುನಃ ಬಾಯಿಗೆ ತಂದುಕೊAಡು ಮೆಲುಕು ಹಾಕುವ ಮೂಲಕ ಚೆನ್ನಾಗಿ ನುರಿಸಿ ಆಮೇಲೆ ನುಂಗುತ್ತವೆ. ಮನುಷ್ಯರಿಗೆ ಈ ಸೌಲಭ್ಯವಿಲ್ಲ.

ಒಮ್ಮೆ ತಿಂದರೆ ಮುಗಿಯಿತು, ಆಹಾರದ ಮುಮ್ಮುಖ ಪ್ರಯಾಣ ಆರಂಭವಾದಂತೆಯೇ. ಆದರೆ ಜಾನುವಾರುಗಳು ಒರಟಾದ ಮತ್ತು ಕಡಿಮೆ ಗುಣಮಟ್ಟದ ಮೇವನ್ನು ತಿಂದು ಜೀರ್ಣಿಸಿಕೊಳ್ಳಲು ವಿಶಿಷ್ಟವಾದ ಜೀರ್ಣಾಂಗವ್ಯೂಹವನ್ನು ಹೊಂದಿವೆ. ಇದರ ರಚನೆ ಮತ್ತು ಕಾರ್ಯವಿಧಾನಗಳು ನಿಜಕ್ಕೂ ಅದ್ಭುತ ಮತ್ತು ಕುತೂಹಲಕರ.

ಜಾನುವಾರುಗಳಿಗೆ ನಾಲ್ಕು ಹೊಟ್ಟೆಗಳಿರುತ್ತವೆ! ಆಶ್ಚರ್ಯವೆನಿಸಿದರೂ ಸತ್ಯ. ಅಂದರೆ, ಅವುಗಳ ಹೊಟ್ಟೆಯು ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದು ಪ್ರತಿಯೊಂದು ಭಾಗದ ರಚನೆ ಮತ್ತು ಕಾರ್ಯಗಳು ಸಂಪೂರ್ಣವಾಗಿ ವಿಭಿನ್ನವಾಗಿದೆ. ಅಂತೆಯೇ ಅವುಗಳಿಗೆ ಅಧಿಕ ಪ್ರಮಾಣದ ಆಹಾರ ಹಾಗೂ ನೀರು ಬೇಕು. ದೇಹದ ಎಡ ಭಾಗದಲ್ಲಿರುವುದು ದೊಡ್ಡದಾದ ಮೊದಲ ಹೊಟ್ಟೆ. ಅದಕ್ಕೆ ರುಮೆನ್ ಎನ್ನುತ್ತಾರೆ. ಇದೊಂದು ಬ್ರಹ್ಮಾಂಡ ಬಾಂಡ!.

ಇದರ ಸಾಮರ್ಥ್ಯವೆಷ್ಟು ಗೊತ್ತೇ? ಸುಮಾರು 150 ಲೀಟರ್‌ಗಳು! ಅಂದರೆ ನಮ್ಮ ಹೊಟ್ಟೆಯ 100 ಪಟ್ಟು !. ದೇಹದ ಎಡಭಾಗವನ್ನು ಬಹುಮಟ್ಟಿಗೆ ಆಕ್ರಮಿಸಿದ ಇದರ ಒಳ ಮೈ ರಚನೆ ಕಂದು ಟರ್ಕಿ ಟವೆಲ್ಲಿನಂತಿವೆ. ಈ ಮೊದಲ ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾಗುವ 2000 ಕೋಟಿಗಿಂತೆ ಹೆಚ್ಚಿನ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳಿವೆ. ಅವುಗಳಲ್ಲಿ ಶೇ. 40-60 ರಷ್ಟು ಪ್ರೊಟೊಜೋವಾ ಏಕಾಣುಗಳು, ಶೇ. 30-40 ರಷ್ಟು ನಿರುಪದ್ರವಿ ಬ್ಯಾಕ್ಟೀರಿಯಾಗಳು ಹಾಗೂ ಶೇ. 8-10ರಷ್ಟು ಶಿಲೀಂಧ್ರಗಳು ಇವೆ. ರುಮೆನ್ ಇರುವುದರಿಂದಲೇ ಈ ಪ್ರಾಣಿ ಜಾತಿಗೆ “ರುಮಿನೆಂಟ್” ಎಂಬ ಹೆಸರು ಬಂದಿದ್ದು. ಇವುಗಳನ್ನು “ರೋಮಾಂತಕ” ಪ್ರಾಣಿಗಳೆಂದೂ ಸಹ ಕರೆಯಬಹುದು.

ಎರಡನೆಯ ಹೊಟ್ಟೆಯೇ ಜೇನುಗೂಡಿನ ರಚನೆಯನ್ನು ಹೋಲುವ ರೆಟಿಕ್ಯೂಲಂ. ಹೃದಯಕ್ಕೆ ಹತ್ತಿರದಲ್ಲಿರುವ ಇದರ ಮುಖ್ಯ ಕೆಲಸ ಆಹಾರದಲ್ಲಿ ಬಂದ ಗಟ್ಟಿಯಾದ ಅಥವಾ ಚೂಪಾದ ವಸ್ತುಗಳನ್ನು ಮುಂದೆ ಹೋಗದಂತೆ ತಡೆಯುವುದು. ಅದಕ್ಕೆ ಪಾಪ. ಅನೇಕ ಸಲ ನಮ್ಮ ಅಸಡ್ಡೆಯಿಂದ ಜಾನುವಾರಿನ ಉದರ ಸೇರುವ ಮೊಳೆ, ಸೂಜಿ ಇತ್ಯಾದಿ ಇಲ್ಲಿ ಉಳಿದುಕೊಂಡು ವಫೆಯನ್ನು ಚುಚ್ಚಿ ಹೃದಯವನ್ನು ಘಾಸಿಗೊಳಿಸುತ್ತವೆ.

ಅನೇಕ ಪದರುಗಳನ್ನು ಹೊಂದಿದ “ಒಮೇಸಂ” 3 ನೇ ಹೊಟ್ಟೆ. ಇಲ್ಲಿ ಆಹಾರ ಮತ್ತಷ್ಟು ಸಣ್ಣದಾಗಿ ನುರಿಯಲ್ಪಡುತ್ತದೆ. ಇದನ್ನು ಅಕ್ಕಿ ಗಿರಣಿಯ ಹಲ್ಲರ್‌ಗೆ ಹೋಲಿಸಬಹುದು. ರುಮೆನ್ನಿಗೆ ಹೋಲಿಸಿದರೆ ಒಮೇಸಂ ಇದರ ಗಾತ್ರ ಚಿಕ್ಕದು.

ನಾಲ್ಕನೆಯ ಹೊಟ್ಟೆಯಾದ ಅಬೋಮೇಸಮ್ ಮಾನವನ ಹೊಟ್ಟೆಯನ್ನು ಹೋಲುತ್ತದೆ. ತಿಂದ ಆಹಾರವು ಇಲ್ಲಿ ಇನ್ನಷ್ಟು ಸಣ್ಣ ಸಣ್ಣ ಕಣಗಳಾಗುತ್ತದೆ. ಇದಕ್ಕೂ ನಮ್ಮ ಹೊಟ್ಟೆಯಲ್ಲಿ ಆದ ಹಾಗೇ ಅಲ್ಸರುಗಳಾಗುತ್ತವೆ ಎನ್ನುವುದು ನಿಜ. ಬೇಕಾಬಿಟ್ಟಿ ನೋವು ನಿವಾರಕಗಳನ್ನು 2-3 ದಿನ ನೀಡಿದರೆ ಅಲ್ಸರ್ ಹುಣ್ಣಾಗುವುದು ಗ್ಯಾರಂಟಿ. ಗೋವಿನ ಉದರಭಾಗದ ಶೇ.80 ಭಾಗವನ್ನು ರೂಮೆನ್ (ಮೆಲಕು ಚೀಲ) ಆವರಿಸಿಕೊಂಡರೆ, ಶೇ.4-5 ಭಾಗ ರೆಟಿಕ್ಯುಲಮ್, ಶೇ.6-7 ಭಾಗ ಒಮೇಸಂ ಹಾಗೂ ಶೇ.7-8 ಭಾಗ ಅಬೋಮೇಸಂಗಳು ಆವರಿಸಿವೆ.

ಗೋವು ಹೇಗೆ ಕಸವನ್ನು ರಸ(ಹಾಲು)ವನ್ನಾಗಿ ಪರಿವರ್ತಿಸುತ್ತದೆ?

ಇದೊಂದು ಅದ್ಭುತ ಪ್ರಕ್ರಿಯೆ. ಗೋವುಗಳು ಮೇವು, ಹಿಂಡಿ ತಿಂದು ನೀರು ಕುಡಿದು ಬದುಕುತ್ತವೆ. ಮೇಯುವಾಗ ಹಸಿ ಅಥವಾ ಒಣ ಹುಲ್ಲನ್ನು ಯಾವುದು ಸಿಗುವುದೋ ಅದನ್ನು ನಮ್ಮ ಹಾಗೇ ಅಗಿಯದೇ ಆದಷ್ಟು ಲಗುಬಗೆಯಿಂದ ಗಬಗಬನೆ ತಿನ್ನುತ್ತವೆ. ಇದು ಅವು ಹಿಂಸ್ರ ಮೃಗಗಳಿಗೆ ಅಂಜಿ ಮಾಡುವ ಪ್ರಕ್ರಿಯೆ ಇರಬಹುದೇನೋ?. ತಿಂದ ಮೇವನ್ನು ವಿರಾಮದ ವೇಳೆಯಲ್ಲಿ ಬಾಯಿಗೆ ಪುನಃ ತಂದು ಜೊಲ್ಲು ಸೇರಿಸಿ ಅರೆದು ವಾಪಸ್ಸು ಕಳಿಸುವ “ಮೆಲುಕು” ಹಾಕುತ್ತವೆ.

ಅವುಗಳ ಎಡಭಾಗದ ಎದೆಗೂಡಿನ ಹಿಂಭಾಗದಲ್ಲಿ ತ್ರಿಕೋನಾಕಾರದ ತಗ್ಗು ಇದ್ದು, ನೋಡುವಾಗ ಅದರ ಏರಿಳಿತದ ಅನುಭವವಾಗುತ್ತದೆ. ಹೀಗೆ, ಗೋವೊಂದನ್ನು ಸೂಕ್ಷö್ಮವಾಗಿ ಗಮನಿಸಿದರೆ ವಿಸ್ಮಯವೆನಿಸುತ್ತದೆ ಅಲ್ಲವೇ? ನಾವು ಕೊಡುವ ನಮಗೆ ಅನಾವಶ್ಯವಾದ, ಕೃಷಿಯಲ್ಲಿ ಯಾರಿಗೂ ಬೇಡವಾದ ಜೋಳದ ಕಣಿಕೆ, ಭತ್ತದ ಹುಲ್ಲು, ಮರದ ಒಣಗಿದೆ ಎಲೆಗಳು, ಅಡಿಕೆ ಹಾಳೆ ಇತ್ಯಾದಿ ಮನುಷ್ಯನಿಗೆ ಯಾತಕ್ಕೂ ಬೇಡವಾದ ವಸ್ತುಗಳನ್ನು ಮೆಂದು ಈ ವಸ್ತುಗಳನ್ನು ಜೀರ್ಣ ಮಾಡಿಕೊಂಡು ನಮಗೆ ಅದ್ಭುತವಾದ ಹಾಲನ್ನು ನೀಡುವ ಆಕಳನ್ನು “ಗೋಮಾತೆ” “ಅಮೃತವರ್ಷಿಣಿ” ಎಂದು ಕರೆಯದೇ ಇದ್ದರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತೆ!

ಇವುಗಳ ಜೀರ್ಣಕ್ರಿಯೆ ಬೇರೆ ಪ್ರಾಣಿಗಳಿಗಿಂತ ಭಿನ್ನವಾಗಿದೆ. ಜಾನುವಾರುಗಳ ಆಹಾರದಲ್ಲಿ ಬಹುಪಾಲು ನಾರು, ದಂಟು ಅಥವಾ ಗಟ್ಟಿ ಪದಾರ್ಥಗಳಿರುವುದರಿಂದ ಜೀರ್ಣ ರಸದಿಂದ ಬೇಗ ಜೀರ್ಣವಾಗುವುದಿಲ್ಲ. ತಿಂದ ಆಹಾರವನ್ನು ಜೀರ್ಣಗೊಳಿಸುವ ಈ ಕೆಲಸವನ್ನು ಹೊಟ್ಟೆಯಲ್ಲಿರುವ ಅಸಂಖ್ಯಾತ ಸೂಕ್ಷಾö್ಮಣುಗಳು ಮಾಡುತ್ತವೆ. ಇಲ್ಲಿನ ರಸಸಾರ (ಪಿ.ಎಚ್.) 6.5-7.0 ಇರುತ್ತದೆ. ಆಹಾರದ ಆಮ್ಲತೆ ಅಥವಾ ಕ್ಷಾರತೆ ಅಧಿಕವಾದರೆ ಈ ರಸಸಾರದಲ್ಲೂ ವ್ಯತ್ಯಾಸವಾಗಿ ಸೂಕ್ಷ್ಮಾ ಣುಗಳು ಸಾವನ್ನಪ್ಪಿ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದಿಲ್ಲ.

ಅವಸರದಲ್ಲಿ ಗೋವು ನುಂಗಿದ ಆಹಾರವು ವಿರಾಮದಲ್ಲಿ ಮೆಲುಕಾಡುವಾಗ ಗ್ರೈಂಡರಿನಲ್ಲಿ ಅಕ್ಕಿ ನೀರು ಒಟ್ಟಿಗೇ ಹಾಕಿ ರುಬ್ಬಿದಂತೆ ಬಾಯಿಯಲ್ಲಿ ಸೃವಿಸುವ ಜೊಲ್ಲುರಸದೊಂದಿಗೆ ಮಿಶ್ರಗೊಳ್ಳುವುದರ ಮೂಲಕ ಜೀರ್ಣಕ್ರಿಯೆ ಆರಂಭಗೊಳ್ಳುತ್ತದೆ. ಹಸುವೊಂದು ದಿನದಲ್ಲಿ 8 ಗಂಟೆಗಳಷ್ಟು ಕಾಲ ಮೆಲುಕು ಹಾಕುವುದರಲ್ಲೇ ಕಳೆಯುತ್ತದೆ! ಆಹಾರ ಸರಿಯಾಗಿ ಜೀರ್ಣವಾಗಬೇಕಾದರೆ ಇದು ಅಗತ್ಯ ಕೂಡಾ. ಗೋವಿನಲ್ಲಿ ದಿನಕ್ಕೆ 150-180 ಲೀಟರಿನಷ್ಟು ಅಂದರೆ 4-5 ದೊಡ್ಡ ಬಕೇಟ್ ತುಂಬಾ ಅಂದರೆ ನಾವು ಜೊಲ್ಲು ಉತ್ಪಾದನೆಯಾಗುತ್ತದೆಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ?.

ಹೀಗೆ ಚೆನ್ನಾಗಿ ಅಗಿಯಲ್ಪಟ್ಟ ಜೊಲ್ಲು ಮಿಶ್ರಿತ ಆಹಾರವು ಜಠರದ ನಾಲ್ಕು ಕೋಣೆಗಳಲ್ಲಿ ಮೊದಲನೇ ಹೊಟ್ಟೆಯಾದ ‘ರೂಮೆನ್’ ಎಂಬ ಚೀಲಕ್ಕೆ ಹೋಗುತ್ತದೆ. ಇದೊಂದು ದೊಡ್ಡ ಉಗ್ರಾಣವಿದ್ದಂತೆ. ತಿಂದಷ್ಟೂ ಹಿಗ್ಗುವ ಚರ್ಮದ ಚೀಲದಂತೆ. ತಿಂದ ಆಹಾರವು 10-12 ತಾಸುಗಳ ಕಾಲ ಇಲ್ಲಿದ್ದು ಸೂಕ್ಷ್ಮಾಣುಗಳಿಂದ ಭಾಗಶಃ ಜೀರ್ಣಗೊಂಡು ಮುಂದೆ ಸಾಗುತ್ತದೆ.

ಇಲ್ಲಿ ತಂಗಿರುವಾಗ ಕೋಟ್ಯಾಂತರ ಸೂಕ್ಷಾö್ಮಣುಗಳು ಅದನ್ನು ಅವುಗಳ ಆಹಾರವಾಗಿ ಮಾಡಿಕೊಂಡು ಜೀರ್ಣಿಸುತ್ತವೆ. ಈ ಸೂಕ್ಷ್ಮಾಣುಗಳು ನಿರುಪದ್ರವಿಗಳು. ಜೀರ್ಣಕ್ರಿಯೆಗೆ ಸಹಕಾರಿಗಳು. ಅವುಗಳ ಸಹಾಯದಿಂದಲೇ ಜಾನುವಾರುಗಳು ನಾರು ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯ. ಹಸು ತನ್ನ ಹೊಟ್ಟೆಯಲ್ಲಿ ಈ ಸೂಕ್ಷ್ಮಾಣುಗಳಿಗೆ ಜಾಗ ನೀಡಿ ಅವುಗಳ ವೃದ್ಧಿಗೆ ಬೇಕಾದ ಆಹಾರವನ್ನು ಕೊಡುತ್ತದೆ.

ಬದಲಾಗಿ ಸೂಕ್ಷ್ಮಾಣುಗಳು ನಿರ್ವಾತ ವಾತಾವರಣದಲ್ಲಿ ಹಸುಗಳ ಆಹಾರವನ್ನು ಶೇ.70ರಷ್ಟು ಜೀರ್ಣಗೊಳಿಸುತ್ತವೆ. ಅಷ್ಟೇ ಅಲ್ಲದೇ ಇವುಗಳಿಂದ ದೇಹಕ್ಕೆ ಬೇಕಾದ ಪ್ರೋಟೀನ್, ವಿಟಮಿನ್ ಬಿ ಕಾಂಪ್ಲೆಕ್ಸ್ ಹಾಗೂ ಇನ್ನಿತರ ಪೋಷಕಾಂಶಗಳು ತಯಾರಾಗುತ್ತವೆ. ಹೀಗಾಗಿ ಹಸು ಮತ್ತು ಈ ಸೂಕ್ಷ್ಮಾ ಣುಜೀವಿಗಳು ಪರಸ್ಪರರ ಉಳಿವಿಗಾಗಿ ಪೂರಕ ಸಂಬ೦ಧ ಹೊಂದಿವೆ.

ಇದಕ್ಕೆ ಒಂದು ರೀತಿಯ ಸಹಬಾಳ್ವೆಯ ಕೂಡು ಜೀವನ ಅನ್ನಬಹುದು. ಗೋವು ತನ್ನದೇ ಉದರದಲ್ಲಿರುವ ಅಸಂಖ್ಯ ಸೂಕ್ಷ್ಮಾಣುಗಳಿಗೆ ಸೆಲ್ಯುಲೋಸ್ ಎಂಬ ಕಚ್ಚಾ ವಸ್ತು ಪೂರೈಸಿದರೆ ಇದನ್ನು ಸೂಕ್ಷ್ಮಾಣುಗಳುು ಸೆಲ್ಯುಲೇಸ್ ಎಂಬ ಕಿಣ್ವವನ್ನು ಉತ್ಪಾದಿಸಿ ಜೀರ್ಣಿಸಿಕೊಂಡು ಹಾಲಿನ ಉತ್ಪಾದನೆಗೆ ಅವಶ್ಯವಾದ ಶರ್ಕರ ಪಿಷ್ಟ ಲ್ಯಾಕ್ಟೋಸ್ ಇತ್ಯಾದಿ ಅನೇಕ ಉಪವಸ್ತುಗಳನ್ನು ತಯಾರು ಮಾಡಿ ಕೆಚ್ಚಲಿಗೆ ರಕ್ತದ ಮೂಲಕ ಪೂರೈಸುತ್ತವೆ.

ಹಾಲಿನ ಉತ್ಪಾದನೆಗೆ ಅವಶ್ಯವಿರುವ ಅನೇಕಾನೇಕ ಕಚ್ಚಾ ವಸ್ತುಗಳು ಕೆಚ್ಚಲಿಗೆ ರಕ್ತ ಪ್ರಸರಣದ ಮೂಲಕ ತಲುಪುತ್ತವೆ. 1 ಲೀಟರ್ ಹಾಲು ಉತ್ಪಾದಿಸಲು 500 ಲೀಟರಿನಷ್ಟು ರಕ್ತವು ಕೆಚ್ಚಲಿನ ವಿಶೇಷ ಗ್ರಂಥಿಗಳಿಗೆ ಹರಿಯುತ್ತದೆ. ಅಂದರೆ ಹೊತ್ತಿಗೆ 10 ಲೀಟರ್ ಹಾಲು ಹಾಲು ಉತ್ಪಾದಿಸಲು 5000 ಲೀಟರ್ ರಕ್ತವು ಕೆಚ್ಚಲಿಗೆ ನುಗ್ಗಿ ಅಲ್ಲಿಗೆ ಅವಶ್ಯಕ ವಸ್ತುಗಳನ್ನು ಸರಬರಾಜು ಮಾಡಿ ರುಚಿಯಾದ ಹಾಲನ್ನು ಉತ್ಪಾದಸಲು ಸಹಕಾರಿಯಾಗಿದೆ.

ಕಸದಿಂದ ರಸ ತೆಗೆಯುವುದು ಎಂದರೆ ಇದೇ ಇರಬೇಕಲ್ಲವೇ? ಇದಕ್ಕೆ ಗೋಮಾತೆಯ ಅದ್ಭುತ ಶಕ್ತಿ ಕಾರಣ. ಏನಂತೀರಿ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version