ಭಾವ ಭೈರಾಗಿ
ಕನ್ನಡದ ಕಾವ್ಯ ಲೋಕದ ಗಾರುಡಿಗ
- ಜಗದೀಶ್ ಕೊಪ್ಪ
ಕನ್ನಡದ ಸಾಹಿತ್ಯದಲ್ಲಿ ನವೋದಯದ ಕಾಲಘಟ್ಟ ಅತ್ಯಂತ ಮಹತ್ವವಾದುದು. ಜೈನಸಾಹಿತ್ಯದ ಕೊಡುಗೆ ಎಂದು ಕರೆಯಬಹುದಾದ ಹಳೆಗನ್ನಡ ಕಾವ್ಯವು ಕನ್ನಡ ಸಾಹಿತ್ಯ ಮತ್ತು ಭಾಷೆ ಹಾಗೂ ಸಂಸ್ಕೃತಿಗೆ ಭದ್ರ ಬುನಾದಿ ಹಾಕಿದ ನಂತರ, ನವೋದಯ ಸಾಹಿತ್ಯದ ಕಾಲಘಟ್ಟವು ತನ್ನ ಆಧುನಿಕ ಪರಿಭಾಷೆಯ ಮೂಲಕ ಕಾವ್ಯ, ನಾಟಕ, ವಿಮರ್ಶೆ ಹೀಗೆ ಕನ್ನಡ ಸಾಹಿತ್ಯಲೋಕವನ್ನು ಸಮೃದ್ಧಿಗೊಳಿಸಿತು. ನವೋದಯ ಕಾಲಘಟ್ಟದ ಕಾವ್ಯವನ್ನು ಕನ್ನಡದ ಸಾಹಿತ್ಯದ ಸುವರ್ಣಕಾಲ ಎಂದು ಬಣ್ಣಿಸಬಹುದು.
ಬಿ.ಎಂ.ಶ್ರೀ ಅವರ ಇಂಗ್ಲೀಷ್ ಗೀತಗಳು ಕಾವ್ಯದ ಮೂಲಕ ಆರಂಭವಾದ ನವೋದಯಕಾವ್ಯವನ್ನು ಬೇಂದ್ರೆ, ಕುವೆಂಪು, ಪು.ತಿ.ನ. ಮುಂತಾದ ದಿಗ್ಗಜರು ಕಾವ್ಯದ ಭಾಷೆ, ವಸ್ತು, ನಿರೂಪಣೆಯ ವೈವಿಧ್ಯತೆಯಿಂದ ಶ್ರೀಮಂತಗೊಳಿಸಿದರು. ನವೋದಯ ಕಾವ್ಯದ ಪ್ರಮುಖ ಕವಿಗಳಲ್ಲಿ ದ.ರಾ.ಬೇಂದ್ರೆ ಅತ್ಯಂತ ಪ್ರಮುಖರಾದವರು.
ಆ ಕಾಲದ ಪ್ರತಿಯೊಬ್ಬ ಬರಹಗಾರರ ಮೇಲೆ ಕನ್ನಡ ಸಾಹಿತ್ಯವನ್ನು ಪುನರುಜ್ಜೀವನಗೊಳಿಸುವ ನೈತಿಕ ಜವಾಬ್ದಾಯಿತ್ತು. ಹಾಗಾಗಿ ಬೇಂದ್ರೆ, ಕುವೆಂಪು ಆದಿಯಾಗಿ ಪ್ರತಿಯೊಬ್ಬ ಲೇಖಕನೂ ತನಗೆ ಇಷ್ಟವಾದ ಪ್ರಕಾರದ ಜೊತೆಗೆ ಇತರೆ ಪ್ರಕಾರಗಳಲ್ಲಿಯೂ ತೊಡಗಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಈ ಕಾರಣಕ್ಕಾಗಿ ಬೇಂದ್ರೆ ಮತ್ತು ಕುವೆಂಪುರಂತಹ ಮಹಾನ್ ಕವಿಗಳು ಕಾವ್ಯದ ಜೊತೆ ಜೊತೆಯಲ್ಲಿ ನಾಟಕ, ವಿಮರ್ಶೆ. ಗದ್ಯ ಮುಂತಾದ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದರು.
ದ.ರಾ. ಬೇಂದ್ರೆಯವದು ಕಾವ್ಯ ಸೃಷ್ಟಿಯಲ್ಲಿ ವಿರಾಟ್ ಸ್ವರೂಪ ಎಂದು ಬಣ್ಣಿಸಬಹುದು. ಅವರು ತಮ್ಮ ಕಾವ್ಯ ಸೃಷ್ಟಿಗೆ ಬಳಸಿಕೊಂಡ ಭಾಷೆ, ಛಂದಸ್ಸು, ಲಯ, ವಸ್ತು ಎಲ್ಲವೂ ದೇಸಿಗುಣಗಳಿಂದ ಕೂಡಿರುವುದು ವಿಶೇಷ. ಹಾಗಾಗಿ ಬೇಂದ್ರೆಯವರ ಕಾವ್ಯಗಳು ಕೇವಲ ಹಾಳೆಯ ಮೇಲಿನ ಕವಿತೆಗಳಾಗಿರದೆ, ಜನಸಾಮಾನ್ಯರ ನಾಲಿಗೆಯ ಮೇಲೆ ಹಾಡುಗಳಾಗಿ ಅನುರಣಿಸಿದವು.
ಕನ್ನಡ ಭಾಷೆಯ ಬಂಧ, ಲಯ, ನುಡಿಗಟ್ಟು ಇವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬಿ.ಎಂ.ಶ್ರೀ.ಯವರ ಇಂಗ್ಲೀಷ್ ಗೀತಗಳ ಪ್ರಭಾವದಿಂದ ಕಾವ್ಯ ಸೃಷ್ಟಿಗೆ ತೊಡಗಿದ ಕುವೆಂಪು ಮತ್ತು ಪು.ತಿ.ನ. ಅವರ ಕಾವ್ಯದ ಅಭಿವ್ಯಕ್ತಿಗೂ ಹಾಗೂ ಕನ್ನಡದ ದೇಶಿ ಪರಂಪರೆಯಿಂದ ಅಂದರೆ, ಲಾವಣಿ,ತತ್ವಪದ, ಜಾನಪದಗೀತೆಗಳಿಂದ ಪ್ರಭಾವಿತರಾದ ಮಧುರಚೆನ್ನ, ಬೇಂದ್ರೆ, ಆನಂದಕವಿ ಮುಂತಾದ ಕವಿಗಳ ಕಾವ್ಯರಚನೆಯಲ್ಲಿರುವ ಭಿನ್ನತೆಯನ್ನು ನಾವು ಕಾಣಬಹುದು.
ಕನ್ನದ ಕಾವ್ಯದ ಸಂದರ್ಭದಲ್ಲಿ ದ.ರಾ.ಬೇಂದ್ರೆಯವರ ರೀತಿಯಲ್ಲಿ ತಮ್ಮ ಭಾವನೆಗಳ ಅಭಿವ್ಯಕ್ತಿಗೆ ಕಾವ್ಯ ಪ್ರಕಾರವನ್ನು ಪರಿಣಾಮಕಾರಿಯಾಗಿ ಬಳಸಿದ ಕವಿ ಮತ್ತೊಬ್ಬರಿಲ್ಲ. ತಮ್ಮ ಬದುಕಿನ ಸುಖ,ಧುಃಖಗಳಿಂದ ಹಿಡಿದು, ಮನಸ್ಸು ಪ್ರಫುಲ್ಲವಾಗಿದ್ದ ಸಂದರ್ಭದಲ್ಲಿ ತಾವು ಕಂಡ ಲೋಕದ ಎಲ್ಲಾ ಸಂಗತಿಗಳನ್ನು ಕಾವ್ಯದಲ್ಲಿ ಹಿಡಿದಿಡಬೇಕೆಂಬ ದೀಕ್ಷೆ ತೊಟ್ಟವರಂತೆ ಬೇಂದ್ರೆಯವರು ನಮಗೆ ಕಾಣುತ್ತಾರೆ. ಕಾವ್ಯ ಸೃಷ್ಟಿಗೆ ಬೇಂದ್ರೆಯವರಿಗೆ ಇಂತಹದ್ದೇ ಎನ್ನುವ ನಿರ್ಧಿಷ್ಟ ಕಾರಣ ಬೇಕಾಗಿರಲಿಲ್ಲ.
ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕಾ?
ಒಂದು ಹೂತ ಹುಣಿಸ ಮರ ಸಾಕಾ.
ಇದು ಬೇಂದ್ರೆ ಎಂಬ ಕಾವ್ಯ ಗಾರುಡಿಗ ಜೀವನದ ದೃಷ್ಟಿ ಕೋನ. ತಮ್ಮ ಜೀವಿತಾವಧಿಯಲ್ಲಿ ಒಟ್ಟು ಮುವತ್ತೇಳು ಕವನ ಸಂಕಲಗಳನ್ನು ಹೊರತಂದಿರುವ ಬೇಂದ್ರೆಯವರು ಕಾವ್ಯವನ್ನೇ ಉಸಿರಾಡಿದ ಅಪರೂಪದ ಕನ್ನಡದ ಕವಿ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಪಾದ ಪದ್ಧತಿಯಲಿ ಪದ ಕೂಡಿ ಬರುವಾಗ
ಯಾರಾರ ಗುರು-ಲಯ ಎಣಿಸುವರೆ
ಯಾವ ರಾಗವೆಂದರು ಯಾರಾಗ ಕೇಳುವರು
ಅನುರಾಗವನುರಣಿಸಿ ತಣಿಸುತಿರೆ
ಎಂದು ಬಲವಾಗಿ ನಂಬಿದ್ದ ಬೇಂದ್ರೆಯುವರು ಇಡೀ ಜಗತ್ತು ಮತ್ತು ಅದರ ಲೋಕ ವ್ಯವಹಾರವನ್ನು ಕಾವ್ಯದ ಕಣ್ಣಿನಿಂದ ನೋಡಿದವರು. ಅವರ ಪಾಲಿಗೂ ಕನಿಷ್ಟ ಅಥವಾ ತುಚ್ಛ ಎಂಬುದು ಯಾವುದೂ ಇರಲಿಲ್ಲ.
ಇಳೆ ಎಂದರೆ ಬರಿ ಮಣ್ಣಲ್ಲ
ನಮಗೋ ನೋಡುವ ಕಣ್ಣಿಲ್ಲ
ಏನು ತಿಂದರೂ ತೀರದಿದೆ
ಏನು ತುಂಬಿಯೂ ಮೀರದಿದೆ
ಎಂಬ ತಮ್ಮ ಜೀವನ ದೃಷ್ಟಿಕೋನವನ್ನು ಬದುಕಿನುದ್ದಕ್ಕು ಬಲವಾಗಿ ಪ್ರತಿಪಾದಿಸಿಕೊಂಡು ಬಂದವರು.
ಬೇಂದ್ರೆಯ ಹುಟ್ಟಿದ ಪರಿಸರ, ಬೆಳೆದ ಸಂಸ್ಕೃತಿ ಇವೆಲ್ಲವೂ ವೈದಿಕ ಪರಂಪರೆಗೆ ಸೇರಿದ ಕಾರಣ ಅವರಲ್ಲಿ ಆಸ್ತಿಕತೆ ಮನೆ ಮಾಡಿತ್ತು ನಿಜ. ಆದರೆ, ಆಸ್ತಿಕತೆಯನ್ನು ಮೀರುವಂತಹ ಅನುಭಾವ ಪ್ರಜ್ಞೆ ಮತ್ತು ಅಲೌಕಿಕತೆಯ ದೃಷ್ಟಿಕೋನ ಅವರಲ್ಲಿದ್ದ ಕಾರಣ ಅವರ ಬಹುತೇಕ ಕವಿತೆಗಳು ಎಲ್ಲಾ ಗಡಿಗಳನ್ನು ದಾಟಿ ಮನುಕುಲದ ಗೀತೆಗಳಂತೆ ಕನ್ನಡಿಗರ ಎದೆಯನ್ನು ಮುಟ್ಟಿವೆ.
ವೈಯಕ್ತಿಕ ಬದುಕಿನ ಕಷ್ಟ, ಸಾವು ಮತ್ತು ದುಃಖಗಳ ನಡುವೆ ಹಾಗೂ ಬದುಕಿನ ಅಭದ್ರತೆಯ ನಡುವೆಯೂ ಅವರ ಎದೆಯೊಳಗೆ ಅಪ್ರತಿಮ ಕಾವ್ಯ ಸೃಷ್ಟಿಯಾದದ್ದು ಹಾಗೂ ಬತ್ತದ ಚಿಲುಮೆಯಂತೆ ಅವರೊಳಗೆ ಜೀವಂತವಾಗಿದ್ದ ಸಂಗತಿ ಇಂದಿಗೂ ವಿಸ್ಮಯದ ಸಂಗತಿಯೇ ಸರಿ. ಪ್ರಕೃತಿಯ ಬಣ್ಣನೆಯೂ ಸೇರಿದಂತೆ, ಅವರ ಸಖಿಗೀತ ಮತ್ತು ವೈಯಕ್ತಿಕ ಬದುಕಿನ ದುರಂತದ ಸಮಯದಲ್ಲಿ ಅವರ ನೊಂದ ಎದೆಯೊಳಗೆ ಹುಟ್ಟಿದ ಕಾವ್ಯವನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ.
ಬೆಳಗು ಕವಿತೆಯ ಮೂಲಕ ಕಾವ್ಯಾಸಕ್ತರನ್ನು ತಮ್ಮತ್ತ ಸೆಳೆದ ಬೇಂದ್ರೆಯವರು, ಹಕ್ಕಿ ಹಾರುತ್ತಿದೆ ನೋಡಿದಿರಾ ಕವಿತೆಯನ್ನು ಬರೆದು ಎಲ್ಲರಲ್ಲೂ ಬೆರಗು ಮೂಡಿಸಿದರು. ಇನ್ನು ಶ್ರಾವಣದ ಮಳೆ ಅದರಲ್ಲೂ ವಿಶೇಷವಾಗಿ ಧಾರವಾಡದ ಮಳೆ ಬೇಂದ್ರೆಯವರ ಕಾವ್ಯದ ಸ್ಪೂರ್ತಿಯ ಮೂಲ ಸೆಲೆಯಾಗಿತ್ತು.
ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ
ಬಂತು ಬೀಡಿಗೆ ಶ್ರಾವಣಾ ಬಂತು!
ಕಡಲಿಗೆ ಬಂತು ಶ್ರಾವಣಾ! ಕುಣಿದಾಂಗ ರಾವಣ
ಕುಣಿದಾವ ಗಾಳಿ ಭೈರವನ ರೂಪ ತಾಳಿ
ಶ್ರಾವಣಾ ಬಂತು ಘಟ್ಟಕ ರಾಜ್ಯ ಪಟ್ಟಕ
ಬಾನ ಮಟ್ಟಕ
ಎಂದು ಹುಚ್ಚೆದ್ದು ಹಾಡು ಕುಣಿಯುವ ಮನಸ್ಸು ಬೇಂದ್ರೆಯವರದು. ಆದ್ದರಿಂದಲೇ ಕನ್ನಡಸ ಸಾಂಸ್ಕೃತಿಕ ಜಗತ್ತು ಅವರನ್ನು ಶ್ರಾವಣದ ಪ್ರತಿಭೆ ಎಂದು ಗುರುತಿಸಿ ಗೌರವಿಸಿದೆ. ಇದರ ಜೊತೆಗೆ ತಾವು ಬದುಕಿದ ಧಾರವಾಡದ ಸಾಧನಕೇರಿಯ ಪ್ರದೇಶ ಅವರ ಪಾಲಿನ ಭಾವ ವಿಹಾರದ ಲೋಕವಾಗಿತ್ತು. ಸೊಲ್ಲಾಪುರದಲ್ಲಿ ತಮ್ಮ ಹನ್ನೆರೆಡು ವರ್ಷಗಳ ಉಪನ್ಯಾಸಕ ವೃತ್ತಿಗೆ ವಿದಾಯ ಹೇಳಿ ಬರಿಗೈಲಿ ಧಾರವಾಡಕ್ಕೆ ಹಿಂತಿರುವಾಗ, ಸಾಧನಕೆರೆಯನ್ನು ಅವರು ತುಂಬು ಹೃದಯದಿಂದ ಬಣ್ಣಿಸುವುದು ಹೀಗೆ..
ಅಲ್ಲಿ ಸಂಪಿಗೆಯಿತ್ತು, ಪಾರಿಜಾತವಿತ್ತು
ಮಾವು ಮಲ್ಲಿಗೆಯಿತ್ತು ಮನೆಯೆದುರು
ಮಾವು ಮಲ್ಲಿಗೆಯಿತ್ತು ತೆಂಗಿತ್ತು, ಹಲಸಿತ್ತು
ನಿಂಬಿಯಾ ಇಂಬಿತ್ತು ಎಡೆಯೆಡೆಗೆ
ಹೊಬೆಯ ಹೂವಿನ ರಂಗವಲ್ಲಿಯ ಬಿಡಿಸಿ
ನೆರಳನು ನೀಡುತ ನಿಲ್ಲುವುದು
ಮುತ್ತುಗ, ಬೂರಲ ದೀಪಮಾಲೆಯ ಕಂಬ
ಗಗನದ ಬಯಲೊಳಗೆತ್ತುವುದು.
ಬೇಂದ್ರೆಯವರು ಸಾಧನಕೇರಿಯನ್ನು ನೆನೆದು ರೋಮಾಂಚನಗೊಳ್ಳುವುದು ಹಾಗೂ ಇದೇ ಪರಿಯಲ್ಲಿ ಕುವೆಂಪು ತಾವು ಹುಟ್ಟಿ ಬೆಳೆದ ಮಲೆನಾಡನ್ನು ನೆನೆದು “ಹೋಗುವೆನು ನಾ ನನ್ನ ಒಲುಮೆಯ ನಾಡಿಗೆ/ ಮಲೆಯ ನಾಡಿಗೆ, ಮಳೆಯ ಬೀಡಿಗೆ” ಎಂದು ಬಣ್ಣಿಸಿರುವದು ಕನ್ನಡದ ಕಾವ್ಯ ಲೋಕದಲ್ಲಿ ವಿಶಿಷ್ಟ ಹಾಗೂ ಗಮನಾರ್ಹ ಸಂಗತಿ.
ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ, ಬೇಂದ್ರೆಯವರು ವೈಯಕ್ತಿನ ಬದುಕಿನ ದುರಂತದ ಕ್ಷಣಗಳಲ್ಲಿ ಬರೆದ ಕವಿತೆಗಳು ಕವಿಯೊಬ್ಬನ ಭಾವನೆಗಳ ಪರಕಾಷ್ಟೆಯ ಪ್ರತೀಕ ಎನಿಸುತ್ತವೆ. ದುಂಃಖದಲ್ಲಿ ಮನುಷ್ಯನ ಎದೆಯೊಳಗೆ ಭಾವನೆಗಳು ಸತ್ತುಹೋಗಿ ಶೋನ್ಯತೆ ಆವರಿಸುವಾಗ ಬೇಂದ್ರೆಯವರು ದುಃಖ ಮತ್ತು ಕಣ್ಣೀರಿಗೂ ಕವಿತೆಯ ರೂಪ ನೀಡಿರುವುದನ್ನು ನೋಡಿ ನಾನು ಹಲವು ಬಾರಿ ಕಣ್ಣಿರು ಹಾಕಿರುವುದುಂಟು.
ಬಾಲ್ಯದಲ್ಲಿ ಧಾರವಾಡದ ಕಾಮನ ಕಟ್ಟೆಯಲ್ಲಿ ಖಾನಾವಳಿ ನಡೆಸುತ್ತಾ ತಮ್ಮನ್ನು ಸಾಕಿ ಸಲುಹಿದ ಅಜ್ಜಿ ನಿಧನ ಹೊಂದಿದಾಗ ಅವರ ಅಂತ್ಯಕ್ರಿಯೆ ನೆರವೇರಿ ಮನೆಗೆ ಬರುವಾಗ ಬೇಂದ್ರೆಯಲ್ಲಿ ಎದೆಯಲ್ಲಿ ಹುಟ್ಟಿದ ಕಾವ್ಯದ ಸಾಲುಗಳಿವು.
ಮರಳಿದೆ ಮನೆಯತ್ತ ಮರುಳಂತೆ ನರಳಂತೆ
ಕರುಳೆಲ್ಲಾ ಕಡಲೊಳು ಕುದಿಯುತಿರೆ.
ಅದೇ ರೀತಿ ಎದೆಯುದ್ದ ಬೆಳೆದ ಪ್ರೀತಿಯ ಪುತ್ರ ರಾಮು ತೀರಿಕೊಂಡಾಗ; ನೊಂದು ಬೆಂದು ಹೋದ ಬೇಂದ್ರೆಯವರ ಹೃದಯ ತನ್ನನ್ನು ತಾನು ಸಂತೈಸಿಕೊಳ್ಳುವುದು ಹೀಗೆ
ಸತ್ತ ದಶರಥ ಇದ್ದ ರಾಮನಾಗಿ ಅತ್ತನು ಅಂದಿಗೆ
ಸತ್ತ ರಾಮಗೆ ಅತ್ತೇ ಅಳುವನು ಇರುವ ದತ್ತನು ಇಂದಿಗೆ.
ಬೇಂದ್ರೆಯವರ ದಾಂಪತ್ಯದ ಜೀವನದ ಸುಖ ದುಃಖಗಳು ಮತ್ತು ನೋವು ನಲಿವು ಅವರ ಸಖಿಗೀತದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ದಾಖಲಾಗಿವೆ.
ಬೇಂದ್ರೆಯವರ ಕಾವ್ಯ ಅಭಿವ್ಯಕ್ತಿಯಲ್ಲಿ ಇಲ್ಲಿ ಉತ್ತುಂಗಕ್ಕೇರಿದೆ ಎಂದರೆ ಅತಿಶಯೋಕ್ತಿಯ ಮಾತಲಾಗಲಾರದು.
ನಾನು ಬಡವಿ ಆತ ಬಡವ ಒಲುವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು ಅದಕು ಇದಕು ಎದಕು
ಎಂದು ತಮ್ಮ ಬದುಕಿನ ಬಡತನವನ್ನು ಪ್ರೀತಿಯ ಮೂಲಕ ಹಂಚಿಕೊಂಡ ಪರಿಯನ್ನು ಬಣ್ಣಿಸುವ ಬೇಂದ್ರೆಯವರು ಅದೇ ತಮ್ಮ ಬಾಲ ಸಂಗಾತಿ ನಿಧನ ಹೊಂದಿದಾಗ “ ಹೋದ ಬುಧುವಾರ ಬರೋಲ್ದು” ಕವಿತೆಯಲ್ಲಿ ಹೀಗೆ ದಾಖಲಿಸಿದ್ದಾರೆ.
ನೀ ಹೊರಗ ಬಿದ್ದಿ ಅಮತ ಪುಕಾರು ಆತು
ನೀ ಒಳಗೆ ಅಂತಾ ಪಿಸು ಮಾತು
ಭಾಷೆ ಯಾವುದೇ ಆಗಿರಲಿ, ಯಾವುದೇ ಕವಿ ಬರೆದ ಕಾವ್ಯವೆಲ್ಲಾ ಉತ್ಕೃಷ್ಟ ಕವಿತೆಗಳೇ ಆಗಬೇಕೆಂಬ ನಿಯಮವಿಲ್ಲ. ಬರೆದ ನೂರು ಕವಿತೆಗಳಲ್ಲಿ ಕೇವಲ ಮೂರು ಕವಿತೆಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಂಡರೆ ಸಾಕು ಅವನು ಯಶಸ್ವಿ ಕವಿ ಎಂತಲೇ ಅರ್ಥ. ಈ ವಿಷಯದಲ್ಲಿ ದ.ರಾ. ಬೇಂದ್ರೆಯವರು ಯಶಸ್ವಿ ಕವಿ ಮಾತ್ರವಲ್ಲ ಜಗದ ಕವಿಯಾಗಿ, ಜನರ ಕವಿಯಾಗಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.
( ಜನವರಿ 31, 2021,ವರಕವಿ ಬೇಂದ್ರೆಯವರ 125 ನೇ ಜನ್ಮದಿನಾಚರಣೆಯ ವರ್ಷ. ಲೇಖಕಿ ಗೀತಾವಸಂತ್ ಮತ್ತು ಯುವ ಕವಿ ರಾಜುಕುಮಾರ್ ಮಡಿವಾಳ ಇವರು ಬೇಂದ್ರೆ ಕುರಿತಾಗಿ ಸಂಪಾದಿಸಿರುವ : ಕಂಡವರಿಗಷ್ಟೇ” ಕೃತಿಯು ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕಾಗಿ ಸಿದ್ಧಪಡಿಸಿದ ಲೇಖನವಿದು. 25 ವರ್ಷದ ಹಿಂದೆ ನಾನು ಬರೆದಿದ್ದ “ ಸಾಧನಕೇರಿಯ ಕಿಂದರಿ ಜೋಗಿಗೆ” ಎಂಬ ಕವಿತೆ ಅವರ ನೂರನೇ ವರ್ಷದ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕ ವಾರ್ತಾ ಇಲಾಖೆಯ ಜನಪದ ಮಾಸಿಕ ಪತ್ರಿಕೆಯಲ್ಲಿ ವಿಶೇಷ ಕವಿತೆಯಾಗಿ ಪ್ರಕಟವಾಗಿತ್ತು. – ಜಗದೀಶ್ ಕೊಪ್ಪ)
ಸುದ್ದಿದಿನ.ಕಾಂ|ವಾಟ್ಸಾಪ್|9980346243