Connect with us

ಭಾವ ಭೈರಾಗಿ

ಕನ್ನಡದ ಕಾವ್ಯ ಲೋಕದ ಗಾರುಡಿಗ

Published

on

  • ಜಗದೀಶ್ ಕೊಪ್ಪ

ನ್ನಡದ ಸಾಹಿತ್ಯದಲ್ಲಿ ನವೋದಯದ ಕಾಲಘಟ್ಟ ಅತ್ಯಂತ ಮಹತ್ವವಾದುದು. ಜೈನಸಾಹಿತ್ಯದ ಕೊಡುಗೆ ಎಂದು ಕರೆಯಬಹುದಾದ ಹಳೆಗನ್ನಡ ಕಾವ್ಯವು ಕನ್ನಡ ಸಾಹಿತ್ಯ ಮತ್ತು ಭಾಷೆ ಹಾಗೂ ಸಂಸ್ಕೃತಿಗೆ ಭದ್ರ ಬುನಾದಿ ಹಾಕಿದ ನಂತರ, ನವೋದಯ ಸಾಹಿತ್ಯದ ಕಾಲಘಟ್ಟವು ತನ್ನ ಆಧುನಿಕ ಪರಿಭಾಷೆಯ ಮೂಲಕ ಕಾವ್ಯ, ನಾಟಕ, ವಿಮರ್ಶೆ ಹೀಗೆ ಕನ್ನಡ ಸಾಹಿತ್ಯಲೋಕವನ್ನು ಸಮೃದ್ಧಿಗೊಳಿಸಿತು. ನವೋದಯ ಕಾಲಘಟ್ಟದ ಕಾವ್ಯವನ್ನು ಕನ್ನಡದ ಸಾಹಿತ್ಯದ ಸುವರ್ಣಕಾಲ ಎಂದು ಬಣ್ಣಿಸಬಹುದು.

ಬಿ.ಎಂ.ಶ್ರೀ ಅವರ ಇಂಗ್ಲೀಷ್ ಗೀತಗಳು ಕಾವ್ಯದ ಮೂಲಕ ಆರಂಭವಾದ ನವೋದಯಕಾವ್ಯವನ್ನು ಬೇಂದ್ರೆ, ಕುವೆಂಪು, ಪು.ತಿ.ನ. ಮುಂತಾದ ದಿಗ್ಗಜರು ಕಾವ್ಯದ ಭಾಷೆ, ವಸ್ತು, ನಿರೂಪಣೆಯ ವೈವಿಧ್ಯತೆಯಿಂದ ಶ್ರೀಮಂತಗೊಳಿಸಿದರು. ನವೋದಯ ಕಾವ್ಯದ ಪ್ರಮುಖ ಕವಿಗಳಲ್ಲಿ ದ.ರಾ.ಬೇಂದ್ರೆ ಅತ್ಯಂತ ಪ್ರಮುಖರಾದವರು.

ಆ ಕಾಲದ ಪ್ರತಿಯೊಬ್ಬ ಬರಹಗಾರರ ಮೇಲೆ ಕನ್ನಡ ಸಾಹಿತ್ಯವನ್ನು ಪುನರುಜ್ಜೀವನಗೊಳಿಸುವ ನೈತಿಕ ಜವಾಬ್ದಾಯಿತ್ತು. ಹಾಗಾಗಿ ಬೇಂದ್ರೆ, ಕುವೆಂಪು ಆದಿಯಾಗಿ ಪ್ರತಿಯೊಬ್ಬ ಲೇಖಕನೂ ತನಗೆ ಇಷ್ಟವಾದ ಪ್ರಕಾರದ ಜೊತೆಗೆ ಇತರೆ ಪ್ರಕಾರಗಳಲ್ಲಿಯೂ ತೊಡಗಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಈ ಕಾರಣಕ್ಕಾಗಿ ಬೇಂದ್ರೆ ಮತ್ತು ಕುವೆಂಪುರಂತಹ ಮಹಾನ್ ಕವಿಗಳು ಕಾವ್ಯದ ಜೊತೆ ಜೊತೆಯಲ್ಲಿ ನಾಟಕ, ವಿಮರ್ಶೆ. ಗದ್ಯ ಮುಂತಾದ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದರು.

ದ.ರಾ. ಬೇಂದ್ರೆಯವದು ಕಾವ್ಯ ಸೃಷ್ಟಿಯಲ್ಲಿ ವಿರಾಟ್ ಸ್ವರೂಪ ಎಂದು ಬಣ್ಣಿಸಬಹುದು. ಅವರು ತಮ್ಮ ಕಾವ್ಯ ಸೃಷ್ಟಿಗೆ ಬಳಸಿಕೊಂಡ ಭಾಷೆ, ಛಂದಸ್ಸು, ಲಯ, ವಸ್ತು ಎಲ್ಲವೂ ದೇಸಿಗುಣಗಳಿಂದ ಕೂಡಿರುವುದು ವಿಶೇಷ. ಹಾಗಾಗಿ ಬೇಂದ್ರೆಯವರ ಕಾವ್ಯಗಳು ಕೇವಲ ಹಾಳೆಯ ಮೇಲಿನ ಕವಿತೆಗಳಾಗಿರದೆ, ಜನಸಾಮಾನ್ಯರ ನಾಲಿಗೆಯ ಮೇಲೆ ಹಾಡುಗಳಾಗಿ ಅನುರಣಿಸಿದವು.

ಕನ್ನಡ ಭಾಷೆಯ ಬಂಧ, ಲಯ, ನುಡಿಗಟ್ಟು ಇವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬಿ.ಎಂ.ಶ್ರೀ.ಯವರ ಇಂಗ್ಲೀಷ್ ಗೀತಗಳ ಪ್ರಭಾವದಿಂದ ಕಾವ್ಯ ಸೃಷ್ಟಿಗೆ ತೊಡಗಿದ ಕುವೆಂಪು ಮತ್ತು ಪು.ತಿ.ನ. ಅವರ ಕಾವ್ಯದ ಅಭಿವ್ಯಕ್ತಿಗೂ ಹಾಗೂ ಕನ್ನಡದ ದೇಶಿ ಪರಂಪರೆಯಿಂದ ಅಂದರೆ, ಲಾವಣಿ,ತತ್ವಪದ, ಜಾನಪದಗೀತೆಗಳಿಂದ ಪ್ರಭಾವಿತರಾದ ಮಧುರಚೆನ್ನ, ಬೇಂದ್ರೆ, ಆನಂದಕವಿ ಮುಂತಾದ ಕವಿಗಳ ಕಾವ್ಯರಚನೆಯಲ್ಲಿರುವ ಭಿನ್ನತೆಯನ್ನು ನಾವು ಕಾಣಬಹುದು.

ಕನ್ನದ ಕಾವ್ಯದ ಸಂದರ್ಭದಲ್ಲಿ ದ.ರಾ.ಬೇಂದ್ರೆಯವರ ರೀತಿಯಲ್ಲಿ ತಮ್ಮ ಭಾವನೆಗಳ ಅಭಿವ್ಯಕ್ತಿಗೆ ಕಾವ್ಯ ಪ್ರಕಾರವನ್ನು ಪರಿಣಾಮಕಾರಿಯಾಗಿ ಬಳಸಿದ ಕವಿ ಮತ್ತೊಬ್ಬರಿಲ್ಲ. ತಮ್ಮ ಬದುಕಿನ ಸುಖ,ಧುಃಖಗಳಿಂದ ಹಿಡಿದು, ಮನಸ್ಸು ಪ್ರಫುಲ್ಲವಾಗಿದ್ದ ಸಂದರ್ಭದಲ್ಲಿ ತಾವು ಕಂಡ ಲೋಕದ ಎಲ್ಲಾ ಸಂಗತಿಗಳನ್ನು ಕಾವ್ಯದಲ್ಲಿ ಹಿಡಿದಿಡಬೇಕೆಂಬ ದೀಕ್ಷೆ ತೊಟ್ಟವರಂತೆ ಬೇಂದ್ರೆಯವರು ನಮಗೆ ಕಾಣುತ್ತಾರೆ. ಕಾವ್ಯ ಸೃಷ್ಟಿಗೆ ಬೇಂದ್ರೆಯವರಿಗೆ ಇಂತಹದ್ದೇ ಎನ್ನುವ ನಿರ್ಧಿಷ್ಟ ಕಾರಣ ಬೇಕಾಗಿರಲಿಲ್ಲ.

ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕಾ?
ಒಂದು ಹೂತ ಹುಣಿಸ ಮರ ಸಾಕಾ.

ಇದು ಬೇಂದ್ರೆ ಎಂಬ ಕಾವ್ಯ ಗಾರುಡಿಗ ಜೀವನದ ದೃಷ್ಟಿ ಕೋನ. ತಮ್ಮ ಜೀವಿತಾವಧಿಯಲ್ಲಿ ಒಟ್ಟು ಮುವತ್ತೇಳು ಕವನ ಸಂಕಲಗಳನ್ನು ಹೊರತಂದಿರುವ ಬೇಂದ್ರೆಯವರು ಕಾವ್ಯವನ್ನೇ ಉಸಿರಾಡಿದ ಅಪರೂಪದ ಕನ್ನಡದ ಕವಿ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಪಾದ ಪದ್ಧತಿಯಲಿ ಪದ ಕೂಡಿ ಬರುವಾಗ
ಯಾರಾರ ಗುರು-ಲಯ ಎಣಿಸುವರೆ
ಯಾವ ರಾಗವೆಂದರು ಯಾರಾಗ ಕೇಳುವರು
ಅನುರಾಗವನುರಣಿಸಿ ತಣಿಸುತಿರೆ

ಎಂದು ಬಲವಾಗಿ ನಂಬಿದ್ದ ಬೇಂದ್ರೆಯುವರು ಇಡೀ ಜಗತ್ತು ಮತ್ತು ಅದರ ಲೋಕ ವ್ಯವಹಾರವನ್ನು ಕಾವ್ಯದ ಕಣ್ಣಿನಿಂದ ನೋಡಿದವರು. ಅವರ ಪಾಲಿಗೂ ಕನಿಷ್ಟ ಅಥವಾ ತುಚ್ಛ ಎಂಬುದು ಯಾವುದೂ ಇರಲಿಲ್ಲ.

ಇಳೆ ಎಂದರೆ ಬರಿ ಮಣ್ಣಲ್ಲ
ನಮಗೋ ನೋಡುವ ಕಣ್ಣಿಲ್ಲ
ಏನು ತಿಂದರೂ ತೀರದಿದೆ
ಏನು ತುಂಬಿಯೂ ಮೀರದಿದೆ

ಎಂಬ ತಮ್ಮ ಜೀವನ ದೃಷ್ಟಿಕೋನವನ್ನು ಬದುಕಿನುದ್ದಕ್ಕು ಬಲವಾಗಿ ಪ್ರತಿಪಾದಿಸಿಕೊಂಡು ಬಂದವರು.
ಬೇಂದ್ರೆಯ ಹುಟ್ಟಿದ ಪರಿಸರ, ಬೆಳೆದ ಸಂಸ್ಕೃತಿ ಇವೆಲ್ಲವೂ ವೈದಿಕ ಪರಂಪರೆಗೆ ಸೇರಿದ ಕಾರಣ ಅವರಲ್ಲಿ ಆಸ್ತಿಕತೆ ಮನೆ ಮಾಡಿತ್ತು ನಿಜ. ಆದರೆ, ಆಸ್ತಿಕತೆಯನ್ನು ಮೀರುವಂತಹ ಅನುಭಾವ ಪ್ರಜ್ಞೆ ಮತ್ತು ಅಲೌಕಿಕತೆಯ ದೃಷ್ಟಿಕೋನ ಅವರಲ್ಲಿದ್ದ ಕಾರಣ ಅವರ ಬಹುತೇಕ ಕವಿತೆಗಳು ಎಲ್ಲಾ ಗಡಿಗಳನ್ನು ದಾಟಿ ಮನುಕುಲದ ಗೀತೆಗಳಂತೆ ಕನ್ನಡಿಗರ ಎದೆಯನ್ನು ಮುಟ್ಟಿವೆ.

ವೈಯಕ್ತಿಕ ಬದುಕಿನ ಕಷ್ಟ, ಸಾವು ಮತ್ತು ದುಃಖಗಳ ನಡುವೆ ಹಾಗೂ ಬದುಕಿನ ಅಭದ್ರತೆಯ ನಡುವೆಯೂ ಅವರ ಎದೆಯೊಳಗೆ ಅಪ್ರತಿಮ ಕಾವ್ಯ ಸೃಷ್ಟಿಯಾದದ್ದು ಹಾಗೂ ಬತ್ತದ ಚಿಲುಮೆಯಂತೆ ಅವರೊಳಗೆ ಜೀವಂತವಾಗಿದ್ದ ಸಂಗತಿ ಇಂದಿಗೂ ವಿಸ್ಮಯದ ಸಂಗತಿಯೇ ಸರಿ. ಪ್ರಕೃತಿಯ ಬಣ್ಣನೆಯೂ ಸೇರಿದಂತೆ, ಅವರ ಸಖಿಗೀತ ಮತ್ತು ವೈಯಕ್ತಿಕ ಬದುಕಿನ ದುರಂತದ ಸಮಯದಲ್ಲಿ ಅವರ ನೊಂದ ಎದೆಯೊಳಗೆ ಹುಟ್ಟಿದ ಕಾವ್ಯವನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ.

ಬೆಳಗು ಕವಿತೆಯ ಮೂಲಕ ಕಾವ್ಯಾಸಕ್ತರನ್ನು ತಮ್ಮತ್ತ ಸೆಳೆದ ಬೇಂದ್ರೆಯವರು, ಹಕ್ಕಿ ಹಾರುತ್ತಿದೆ ನೋಡಿದಿರಾ ಕವಿತೆಯನ್ನು ಬರೆದು ಎಲ್ಲರಲ್ಲೂ ಬೆರಗು ಮೂಡಿಸಿದರು. ಇನ್ನು ಶ್ರಾವಣದ ಮಳೆ ಅದರಲ್ಲೂ ವಿಶೇಷವಾಗಿ ಧಾರವಾಡದ ಮಳೆ ಬೇಂದ್ರೆಯವರ ಕಾವ್ಯದ ಸ್ಪೂರ್ತಿಯ ಮೂಲ ಸೆಲೆಯಾಗಿತ್ತು.

ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ
ಬಂತು ಬೀಡಿಗೆ ಶ್ರಾವಣಾ ಬಂತು!
ಕಡಲಿಗೆ ಬಂತು ಶ್ರಾವಣಾ! ಕುಣಿದಾಂಗ ರಾವಣ
ಕುಣಿದಾವ ಗಾಳಿ ಭೈರವನ ರೂಪ ತಾಳಿ
ಶ್ರಾವಣಾ ಬಂತು ಘಟ್ಟಕ ರಾಜ್ಯ ಪಟ್ಟಕ
ಬಾನ ಮಟ್ಟಕ

ಎಂದು ಹುಚ್ಚೆದ್ದು ಹಾಡು ಕುಣಿಯುವ ಮನಸ್ಸು ಬೇಂದ್ರೆಯವರದು. ಆದ್ದರಿಂದಲೇ ಕನ್ನಡಸ ಸಾಂಸ್ಕೃತಿಕ ಜಗತ್ತು ಅವರನ್ನು ಶ್ರಾವಣದ ಪ್ರತಿಭೆ ಎಂದು ಗುರುತಿಸಿ ಗೌರವಿಸಿದೆ. ಇದರ ಜೊತೆಗೆ ತಾವು ಬದುಕಿದ ಧಾರವಾಡದ ಸಾಧನಕೇರಿಯ ಪ್ರದೇಶ ಅವರ ಪಾಲಿನ ಭಾವ ವಿಹಾರದ ಲೋಕವಾಗಿತ್ತು. ಸೊಲ್ಲಾಪುರದಲ್ಲಿ ತಮ್ಮ ಹನ್ನೆರೆಡು ವರ್ಷಗಳ ಉಪನ್ಯಾಸಕ ವೃತ್ತಿಗೆ ವಿದಾಯ ಹೇಳಿ ಬರಿಗೈಲಿ ಧಾರವಾಡಕ್ಕೆ ಹಿಂತಿರುವಾಗ, ಸಾಧನಕೆರೆಯನ್ನು ಅವರು ತುಂಬು ಹೃದಯದಿಂದ ಬಣ್ಣಿಸುವುದು ಹೀಗೆ..

ಅಲ್ಲಿ ಸಂಪಿಗೆಯಿತ್ತು, ಪಾರಿಜಾತವಿತ್ತು
ಮಾವು ಮಲ್ಲಿಗೆಯಿತ್ತು ಮನೆಯೆದುರು
ಮಾವು ಮಲ್ಲಿಗೆಯಿತ್ತು ತೆಂಗಿತ್ತು, ಹಲಸಿತ್ತು
ನಿಂಬಿಯಾ ಇಂಬಿತ್ತು ಎಡೆಯೆಡೆಗೆ
ಹೊಬೆಯ ಹೂವಿನ ರಂಗವಲ್ಲಿಯ ಬಿಡಿಸಿ
ನೆರಳನು ನೀಡುತ ನಿಲ್ಲುವುದು
ಮುತ್ತುಗ, ಬೂರಲ ದೀಪಮಾಲೆಯ ಕಂಬ
ಗಗನದ ಬಯಲೊಳಗೆತ್ತುವುದು.

ಬೇಂದ್ರೆಯವರು ಸಾಧನಕೇರಿಯನ್ನು ನೆನೆದು ರೋಮಾಂಚನಗೊಳ್ಳುವುದು ಹಾಗೂ ಇದೇ ಪರಿಯಲ್ಲಿ ಕುವೆಂಪು ತಾವು ಹುಟ್ಟಿ ಬೆಳೆದ ಮಲೆನಾಡನ್ನು ನೆನೆದು “ಹೋಗುವೆನು ನಾ ನನ್ನ ಒಲುಮೆಯ ನಾಡಿಗೆ/ ಮಲೆಯ ನಾಡಿಗೆ, ಮಳೆಯ ಬೀಡಿಗೆ” ಎಂದು ಬಣ್ಣಿಸಿರುವದು ಕನ್ನಡದ ಕಾವ್ಯ ಲೋಕದಲ್ಲಿ ವಿಶಿಷ್ಟ ಹಾಗೂ ಗಮನಾರ್ಹ ಸಂಗತಿ.

ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ, ಬೇಂದ್ರೆಯವರು ವೈಯಕ್ತಿನ ಬದುಕಿನ ದುರಂತದ ಕ್ಷಣಗಳಲ್ಲಿ ಬರೆದ ಕವಿತೆಗಳು ಕವಿಯೊಬ್ಬನ ಭಾವನೆಗಳ ಪರಕಾಷ್ಟೆಯ ಪ್ರತೀಕ ಎನಿಸುತ್ತವೆ. ದುಂಃಖದಲ್ಲಿ ಮನುಷ್ಯನ ಎದೆಯೊಳಗೆ ಭಾವನೆಗಳು ಸತ್ತುಹೋಗಿ ಶೋನ್ಯತೆ ಆವರಿಸುವಾಗ ಬೇಂದ್ರೆಯವರು ದುಃಖ ಮತ್ತು ಕಣ್ಣೀರಿಗೂ ಕವಿತೆಯ ರೂಪ ನೀಡಿರುವುದನ್ನು ನೋಡಿ ನಾನು ಹಲವು ಬಾರಿ ಕಣ್ಣಿರು ಹಾಕಿರುವುದುಂಟು.

ಬಾಲ್ಯದಲ್ಲಿ ಧಾರವಾಡದ ಕಾಮನ ಕಟ್ಟೆಯಲ್ಲಿ ಖಾನಾವಳಿ ನಡೆಸುತ್ತಾ ತಮ್ಮನ್ನು ಸಾಕಿ ಸಲುಹಿದ ಅಜ್ಜಿ ನಿಧನ ಹೊಂದಿದಾಗ ಅವರ ಅಂತ್ಯಕ್ರಿಯೆ ನೆರವೇರಿ ಮನೆಗೆ ಬರುವಾಗ ಬೇಂದ್ರೆಯಲ್ಲಿ ಎದೆಯಲ್ಲಿ ಹುಟ್ಟಿದ ಕಾವ್ಯದ ಸಾಲುಗಳಿವು.

ಮರಳಿದೆ ಮನೆಯತ್ತ ಮರುಳಂತೆ ನರಳಂತೆ
ಕರುಳೆಲ್ಲಾ ಕಡಲೊಳು ಕುದಿಯುತಿರೆ.

ಅದೇ ರೀತಿ ಎದೆಯುದ್ದ ಬೆಳೆದ ಪ್ರೀತಿಯ ಪುತ್ರ ರಾಮು ತೀರಿಕೊಂಡಾಗ; ನೊಂದು ಬೆಂದು ಹೋದ ಬೇಂದ್ರೆಯವರ ಹೃದಯ ತನ್ನನ್ನು ತಾನು ಸಂತೈಸಿಕೊಳ್ಳುವುದು ಹೀಗೆ
ಸತ್ತ ದಶರಥ ಇದ್ದ ರಾಮನಾಗಿ ಅತ್ತನು ಅಂದಿಗೆ
ಸತ್ತ ರಾಮಗೆ ಅತ್ತೇ ಅಳುವನು ಇರುವ ದತ್ತನು ಇಂದಿಗೆ.
ಬೇಂದ್ರೆಯವರ ದಾಂಪತ್ಯದ ಜೀವನದ ಸುಖ ದುಃಖಗಳು ಮತ್ತು ನೋವು ನಲಿವು ಅವರ ಸಖಿಗೀತದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ದಾಖಲಾಗಿವೆ.

ಬೇಂದ್ರೆಯವರ ಕಾವ್ಯ ಅಭಿವ್ಯಕ್ತಿಯಲ್ಲಿ ಇಲ್ಲಿ ಉತ್ತುಂಗಕ್ಕೇರಿದೆ ಎಂದರೆ ಅತಿಶಯೋಕ್ತಿಯ ಮಾತಲಾಗಲಾರದು.
ನಾನು ಬಡವಿ ಆತ ಬಡವ ಒಲುವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು ಅದಕು ಇದಕು ಎದಕು
ಎಂದು ತಮ್ಮ ಬದುಕಿನ ಬಡತನವನ್ನು ಪ್ರೀತಿಯ ಮೂಲಕ ಹಂಚಿಕೊಂಡ ಪರಿಯನ್ನು ಬಣ್ಣಿಸುವ ಬೇಂದ್ರೆಯವರು ಅದೇ ತಮ್ಮ ಬಾಲ ಸಂಗಾತಿ ನಿಧನ ಹೊಂದಿದಾಗ “ ಹೋದ ಬುಧುವಾರ ಬರೋಲ್ದು” ಕವಿತೆಯಲ್ಲಿ ಹೀಗೆ ದಾಖಲಿಸಿದ್ದಾರೆ.

ನೀ ಹೊರಗ ಬಿದ್ದಿ ಅಮತ ಪುಕಾರು ಆತು
ನೀ ಒಳಗೆ ಅಂತಾ ಪಿಸು ಮಾತು

ಭಾಷೆ ಯಾವುದೇ ಆಗಿರಲಿ, ಯಾವುದೇ ಕವಿ ಬರೆದ ಕಾವ್ಯವೆಲ್ಲಾ ಉತ್ಕೃಷ್ಟ ಕವಿತೆಗಳೇ ಆಗಬೇಕೆಂಬ ನಿಯಮವಿಲ್ಲ. ಬರೆದ ನೂರು ಕವಿತೆಗಳಲ್ಲಿ ಕೇವಲ ಮೂರು ಕವಿತೆಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಂಡರೆ ಸಾಕು ಅವನು ಯಶಸ್ವಿ ಕವಿ ಎಂತಲೇ ಅರ್ಥ. ಈ ವಿಷಯದಲ್ಲಿ ದ.ರಾ. ಬೇಂದ್ರೆಯವರು ಯಶಸ್ವಿ ಕವಿ ಮಾತ್ರವಲ್ಲ ಜಗದ ಕವಿಯಾಗಿ, ಜನರ ಕವಿಯಾಗಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.

( ಜನವರಿ 31, 2021,ವರಕವಿ ಬೇಂದ್ರೆಯವರ 125 ನೇ ಜನ್ಮದಿನಾಚರಣೆಯ ವರ್ಷ. ಲೇಖಕಿ ಗೀತಾವಸಂತ್ ಮತ್ತು ಯುವ ಕವಿ ರಾಜುಕುಮಾರ್ ಮಡಿವಾಳ ಇವರು ಬೇಂದ್ರೆ ಕುರಿತಾಗಿ ಸಂಪಾದಿಸಿರುವ : ಕಂಡವರಿಗಷ್ಟೇ” ಕೃತಿಯು ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕಾಗಿ ಸಿದ್ಧಪಡಿಸಿದ ಲೇಖನವಿದು. 25 ವರ್ಷದ ಹಿಂದೆ ನಾನು ಬರೆದಿದ್ದ “ ಸಾಧನಕೇರಿಯ ಕಿಂದರಿ ಜೋಗಿಗೆ” ಎಂಬ ಕವಿತೆ ಅವರ ನೂರನೇ ವರ್ಷದ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕ ವಾರ್ತಾ ಇಲಾಖೆಯ ಜನಪದ ಮಾಸಿಕ ಪತ್ರಿಕೆಯಲ್ಲಿ ವಿಶೇಷ ಕವಿತೆಯಾಗಿ ಪ್ರಕಟವಾಗಿತ್ತು. – ಜಗದೀಶ್ ಕೊಪ್ಪ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕತೆ | ಹದ್ದುಗಳ ರಾಜ್ಯ

Published

on

~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್‌, ಕನ್ನಡಕ್ಕೆ: ಡಾ.ಶಿವಕುಮಾರ್‌ ಕಂಪ್ಲಿ

ಮಟಮಟ ಮಧ್ಯಾನ್ಹದೊಳಗ ಬರ ಬರನ ಕಾಲು ಬೀಸಿಗೋಂತ ಪಟ್ನದ ಕಡಿಗೆ ಹೋಗಿ ಬರುತಿದ್ದ ವೀರಭದ್ರಿ. ಆತ ಎಲ್ಯಾನ ಸೊಲುಪೊತ್ತು ನಿರುಮ್ಮಳವಾಗಲು ನೆಳ್ಳು ಕಂಡರೆ ಕುಂತಗಾ ಬೇಕು ಎಂದುಕೊಳ್ಳುತಿದ್ದಾನೆ.

ಅಸಲಿಗೆ ನೆಳ್ಳು ಎಲ್ಲೈತಿ?
ನೆಳ್ಳನ್ನು ನೀಡುವ ಹಚ್ಚನೆ ಮರಗಳ ಹಸುರು ಎಲ್ಲೈತಿ?
ಬರಗಾಲದ ಹೊಡೆತಕ್ಕೆ ಭೂಮಿತಾಯಿಯು ಬಿರುಕು ಬಿಟ್ಟು ನೆಲ ಸೀಳಿಕೊಂಡು ವಿಲ ವಿಲನೆ ವದ್ದಾಡುತ್ತಾ.. ಕೆಂಡದಂತಹ ಉಗಿಯನ್ನು ಉಗುಳುತ್ತಾ ಕೊತ ಕೊತನೆ ಕುದಿಯುತಿದ್ದಾಳೆ.
ನಡೆಯುವ ಕಾಲುಗಳು ಸೋತುಹೋಗುತ್ತಿವೆ.
ಕೆಂಪಗೆ ಕಾದ ಬಿಸಿಲ ಶೂಲವು ತಿವಿಯುತ್ತಿದೆ.
ಹಸನಾದ ನೆಲಕೆ ಬೀಜಗಳ ಚೆಲ್ಲಿ ಮಳೆ ಮೋಡಗಳ ಕನಸು ಕಾಣುವ ಕಣ್ಣುಗಳಿಗೆ ಒಂದು ಮಳೆ ಹನಿಯೂ ಕೂಡಾ ನಿಲುಕುತಿಲ್ಲ.
ರೋಹಿಣಿಯ ಮಳೆಗೆ ಓಣೆಲ್ಲಾ ಕಾಳು ಅನ್ನಂಗ, ಕಲ್ಲನಕೇರಿ ಕೆರೆ ಕೋಡಿ ಯೊಡೆದು ಹರಿಯುತ್ತಿದ್ದ ನೀರಿಂದ ಬರುತಿದ್ದ ಬಳ್ಳ ಬಳ್ಳದ ಜೋಳದ ಒಕ್ಕಲು ಊರಿಗೆ ತಾಗಿದ ನೆಲೆದ ಹಗೇವುಗಳಿಗೆ ಈಗ ನೆನಪುಗಳದೇ ಬದುಕಾಗಿದೆ.
ತಟುಗು ಕುಂದ್ರಾಕ ಎಲ್ಯಾನ ನೆರಳುಬೇಕು…ನೆರಳು…ನೆರಳು.
ಮ್ಯಾಲ ನೋಡಿದರೆ ಎಲ್ಡು ಮೂರು ಹದ್ದುಗಳು ಹರ‍್ಯಾಡುತ್ತಿವೆ.
ಕೆಳಗ ತನ್ನ ನೆಳ್ಳನ್ನ ತಾನೇ ನೋಡಿದರೆ, ತನಗೇ ತುಚ್ಚನಿಸುತ್ತಿದೆ.
ಥೂ…ಇವನೌವನಾ…ನರ ಜಲುಮ ನಾಯಿ ಜಲುಮ!
ಗಂಟಲು ಸಣ್ಣಕ ಒಣಗುತೈತಿ…
ಎಲೈತಪ್ಪೋ…ನೀರು…ನೀರು…
ಎದಿ ಒಡೆಯೋ ಹಂಗ ಕುಂತು ಅಬ್ಬರಿಸಿದರೂ ಕಣ್ಣೀರು ಕೂಡಾ ಸೆಟಗೊಂಡು ಕುಂತಾವು!
ತಾನು ಬದುಕುತ್ತಿರುವುದು ಒಂದು ಬದುಕೇನಾ?
ನೆಳ್ಳಿಲ್ಲದಿದ್ದರೆ ಪರಾವಾಗಿಲ್ಲ.
ನೀರಿಲ್ಲದಿದ್ದರೂ ಪರವಾಗಿಲ್ಲ.
ನಾಳೆ ವಿರುಪಾಪುರದೊಳಗ ನಡಿಯೋ ಪಂಚಾಯ್ತಿ ಏನಾದ್ರೂ ಪರವಾಗಿಲ್ಲ.
ನನಗೆ ಮೊದಲೇ ಗೊತ್ತು… ಪಂಚಾಯ್ತಿಯೊಳಗ ನನಗೆ ಅನ್ಯಾಯವೇ ಆಗುತ್ತದ.
ನಡೀಲಿ…ನಡೀಲಿ…ಮತ್ತೆ ಮತ್ತೆ ನಡೀಲಿ..!, ಹೊಸಾದು ನಡೆಯೋದು ಏನೈತಿ?
ಆ ಫಕ್ಕೀರ ಗೌಡನಿಗೆ ನಾಳೆಯಿಂದ ಏನಾರ ಒಂದಾಗುತ್ತದೆ.
ಅಂಗಾ ಅವನ ಸವಾಸಗಾರರಿಗೂ ಕೂಡಾ!
ಲಮ್ಡಿ ನನ ಮಕ್ಕಳು ಹೊಕ್ಕಾರ…ಹೊಕ್ಕಾರ.
ಊರಿಗೆ ಹಿಡಿದ ಶನಿ ಹೊಕ್ಕಾತಿ. ಅನಿಷ್ಟ ಹೊಕ್ಕತಿ…ಎಲ್ಲಾ ಸುಡಗಾಡಿಗೆ ಹೊಕ್ಕತಿ.
ಒಣಗುತ್ತಿರುವ ಗಂಟಲನ್ನ ಎಂಜಲು ನುಂಗಿ ವೀರಭದ್ರಿ ತಣ್ಣಗ ಮಾಡಿಕೊಂಡ.
ಕೈಗೆ ತಗುಲಿಸಿಕೊಂಡ ಹೊಲೆದ ಚೀಲದೊಳಗ ಆತನ ಹೊಸಾ ಬ್ಯಾಟಿಯ ಕೊಡ್ಲಿ ಬೆಚ್ಚಗೆ ನಿದ್ದಿ ಮಾಡುತ್ತಿತ್ತು …
ವೀರಭದ್ರಿಯ ಹೆಜ್ಜೆಗಳು ಬಡ ಬಡನೇ ಹಳ್ಳಿಯ ಕಡೆಗೆ ಹೊಂಟಿವೆ.
***
ಸುಮಾರು ಇಪ್ಪತೈದು ರ‍್ಷಕ್ಕೂ ಮೊದಲು…
ಪ್ರಶಾಂತವಾದ ಊರೊಳಗೆ ರಾಜಕೀಯ ಪರ‍್ಟಿಗಳ ನಡುವೆ ಕಿಚ್ಚು ಹೊತ್ತಿಕೊಂಡಿತ್ತು. ಮಲ್ಲನ ಗೌಡ, ಕೆಂಚನ ಗೌಡ ಇಬ್ಬರೂ ಒಂದೇ ಮನೆಯ ಅಣ್ಣ ತಮ್ಮಂದಿರು. ಅಣ್ಣ ಮಲ್ಲನ ಗೌಡ ಒಂದು ಪರ‍್ಟಿ ಸೇರಿದ್ದು ನೋಡಿ ಪೈಪೋಟಿಗೆ ಬಿದ್ದ ಇನ್ನೊಂದು ಪರ‍್ಟಿಯವರು ಬಣ್ಣದ ಮಾತಗಳನ್ನ ಹೇಳಿ, ಅಧಿಕಾರದ ಆಸೆ ತೋರಿಸಿ ಆತನ ತಮ್ಮ ಕೆಂಚನ ಗೌಡನನ್ನು ಆತನಿಗೆ ಎದುರು ನಿಲ್ಲಿಸಿದರು. ಊರು ಅವರಿಬ್ಬರ ರಾಜಕೀಯಗಳಿಗೆ ಒಡೆದು ಎರಡು ಹೋಳಾಯಿತು. ತಣ್ಣಗೆ ಸುಖವಾಗಿದ್ದ ಕುಟುಂಬವೂ ಛಿದ್ರವಾಯಿತು!
ಅಲ್ಲಿಯ ತನಕ ಮನೆಯ ಹಿರಿಯ ಯಜಮಾನ ರಾಜೇ ಗೌಡ ಈ ಇಬ್ಬರು ಮಕ್ಕಳ ಮೇಲೆ ಪ್ರಾಣ ಇಟ್ಟುಕೊಂಡು ಬದುಕುತಿದ್ದ. ಆತನ ಕಣ್ಣಿನೆದುರೇ ತನ್ನ ಕೂಡು ಕುಟುಂಬ ಚೂರಾಗುತಿದ್ದರೆ ತಡಕೊಳ್ಳಲಾರದೇ ರೋಷಿಗೊಂಡು ಮಕ್ಕಳಿಬ್ಬರಿಗೂ ಭೂಮಿ, ಆಸ್ತಿ, ಆದಾಯಗಳನ್ನು ಎರಡು ಸರಪಾಲುಗಳಾಗಿ ಮಾಡಿ ಹರಿದು ಹಂಚಿದನು. ಪತ್ನಿ ಜಾನಕವ್ವನನ್ನು ಕರಕೊಂಡು ಏಳು ಕೆರೆ ದಾಟಿ ಮಲ್ಲನ ಕೇರಿಗೆ ಹೋಗಿಬಿಟ್ಟನು.
ಹಿರೇ ಗೌಡರು ಊರು ಬಿಟ್ಟ ನಂತರ ಆತನ ಇಬ್ಬರು ಮಕ್ಕಳು ಹೊಟ್ಟೆ ತುಂಬಾ ಉಂಡದ್ದಿಲ್ಲ. ಕಣ್ ತುಂಬಾ ನಿದ್ರಿಸಿದ್ದಿಲ್ಲ. ಇವರ ಪರ‍್ಟಿಗಳ ಹೊಡೆತಕ್ಕೆ ಊರೂ ಕೂಡಾ ಎರಡು ಹೋಳಾಯಿತು. ಜನರಲ್ಲಿಯೂ ರ‍್ಧ ಮಂದಿ ಒಬ್ಬರ ಕಡಿಗೆ ಸರಿದರೆ, ಉಳಿದ ರ‍್ಧ ಮಂದಿ ಮತ್ತೊಬ್ಬರ ಕಡಿಗೆ ಸರಕೊಂಡು ನಿಂತು ಬಿಟ್ಟರು. ನೋಡು ನೋಡುತಿದ್ದಂಗೇನೆ ಅಧಿಕಾರಗಳ ಯುದ್ಧ ಶುರುವಾಯಿತು. ಊರೊಳಗೆ ಜೀಪುಗಳು ಬಂದವು. ನಾಡ ತುಪಾಕಿಗಳು ನುಗ್ಗಿದವು. ನಾಡ ಬಾಂಬುಗಳು ತಯಾರಾದವು. ಎರಡೂ ರ‍್ಗಗಳು ಬಲಿಷ್ಟವಾಗಿ ದರ‍್ಭಲವಾದ ಜನರನ್ನು ಬಲಿಪಶುಗಳನ್ನಾಗಿ ಮಾಡಲು ಪ್ರಾರಂಭಿಸಿದವು. ಒಮ್ಮಿಂದ ಒಮ್ಮೆಲೇ ಊರೊಳಗೆ ಹೊಡೆದಾಟಗಳು ಭುಗಿಲೆದ್ದವು.
ಪಟ್ನದಿಂದ ನಡುರಾತ್ರಿಯಲ್ಲಿ ಕಣಿವಿಹಳ್ಳಿ ಮೇಲೆ ಬರುತ್ತಿದ್ದ ಮಲ್ಲನ ಗೌಡನ ಜೀಪಿನ ಮೇಲೆ ಕೆಂಚನ ಗೌಡನ ಕಡೆಯವರು ನಾಡ ಬಾಂಬುಗಳಿಂದ ದಾಳಿ ಮಾಡಿದರು. ಎಗರಿದ ಜೀಪು ತುಂಡು ತುಂಡಾಗಿ ಸಿಡಿದಿತು.ಜನರ ಸುಳಿವರಿತು ಒಮ್ಮೆಲೇ ಜಿಗಿದು ಹಾರಿಕೊಂಡ ಮಲ್ಲನ ಗೌಡ ಪೆಳಿಯೊಳಗೆ ಎಗರಿ ಬಿದ್ದಿದ್ದ. ಸಣ್ಣಪುಟ್ಟ ಗಾಯಗಳಲ್ಲಿ ಪೆಳಿಯ ಹಿಂದೆ ಎದ್ದವನೇ ಅಲಮರಸಿಕೇರಿ ಕಾಲು ದಾರಿ ಕಡೆಗೆ ಓಡಿ ತಲೆ ಉಳಿಸಿಕೊಂಡಿದ್ದ. ಬೆಳಗಾ ಮುಂಜಾನೆ ಬಂದು ನೋಡಿದರೆ ಆ ನೆಲದೊಳಗೆ ಆರು ಹೆಣಗಳು ಬಕ್ಕಬಾರಲೇ ಬಿದ್ದಿದ್ದವು. ನಾಲ್ಕು ಜನ ಕುಂಬಾರ ಹುಡುಗರು ಇಬ್ಬರು ಮಾದರ ಹುಡುಗರು ಆ ರಾತ್ರಿಯ ಜೀಪು ದಾಳಿಯೊಳಗ ಸತ್ತಿದ್ದರು. ಹಗೆಯು ಅಲ್ಲಿಗೇ ಮುಗಿಯಲಿಲ್ಲ.
ಮರುದಿನವೇ ಕರೇಕಲ್ಲು ಗುಡ್ಡದ ಕರೆ ದಾರಿಯಿಂದ ಹಳ್ಳಿಗೆ ಬರುತ್ತಿರುವಾಗ ಕೆಂಚನ ಗೌಡನ ಕಡೆಯ ಎಂಟು ಜನರು ಹಾಳು ಬಿದ್ದ ಅಗಸಿ ಬಾವಿಯೊಳಗ ಶವಗಳಾಗಿ ತೇಲಿದರು! ನಾಲ್ವರು ಹೊಲೆಯರು, ನಾಕು ಜನ ತಳವಾರರು.
ಊರು ಊರೆಲ್ಲಾ ಉರಿಯಲ್ಲಿ ಹೊತ್ತಿಕೊಂಡು ಬೆಂದು ಹೋಯಿತು. ನಾಲ್ಕಂತಸ್ಥಿನ ಮಹಡಿ ಮನಿಯೊಳಗ ಕೆಂಚನ ಗೌಡ ಅರಾಮಾಗಿದ್ದ.ಎಕರೆ ಎಕರೆ ಕಲ್ಲಿನ ವಾಡೆಯೊಳಗ ಮಲ್ಲನ ಗೌಡ ಮಲ್ಲಿಗೆ ಹೂವಿನಂಗ ಕಳ ಕಳ ತುಂಬಿಕೊಂಡಿದ್ದ. ಊರೊಳಗೆ ಮಾತ್ರ ಎರಡು ದಿನದೊಳಗೆ ಹನ್ನೆರಡು ಜನರು ಶವಗಳಾದರು!
ರಾಜಕೀಯಗಳ ರಕ್ತಪಾತಗಳಾದವು. ದೊಡ್ಡಸ್ಥಿಕೆಗಾಗಿ ಕುಣಿವ ನಾಯಕರು ತಮ್ಮನ್ನು ನೆಚ್ಚಿಕೊಂಡ ಜನರ ಕುರಿತು ಎಳ್ಳಷ್ಟೂ ಆಲೋಚಿಸಲಿಲ್ಲ. ಕೊನೆ ಕೊನೆಗೆ ಈ ರಾಜಕೀಯದ ಗೊಡವೆಗಳು ಜಾತಿ ಗೊಡವೆಗಳಾದವು. ಮಾದರ, ಹೊಲೆಯ, ಕುಂಬಾರ, ತಳವಾರರ ಮದ್ಯ ಹಸಿರು ಹುಲ್ಲು ಹಾಕಿದರೂ ಭಗ್ಗನೆದ್ದು ಹೊತ್ತಿ ಕೊಳ್ಳುವಷ್ಟು ಉರಿ ಎದ್ದವು!
ಯಾರಾದರೂ ರಾತ್ರಿ ಹೊತ್ತು ಒಂಟಿಯಾಗಿ ತಿರುಗ ಬೇಕೆಂದರೂ ಕೂಡಾ ಜನ ಭಯ ಪಡುತಿದ್ದಾರೆ. ಪಟ್ನಕ್ಕೆ ಹೋಗ ಬೇಕೆಂದರೂ ಹೊಲಕ್ಕ ಹೋಗ ಬೇಕೆಂದರೂ..ಒಬ್ಬರ ಜೊತೆ ಇಲ್ಲಂದ್ರ ಹೊರಾಕೂ ಕೂಡಾ ಯಾರೂ ಇಣುಕಿ ನೋಡರು. ಊರು ಹಿಂಗೆ ಸುಡುಗಾಡಾಗಿ ಬದಲಾಗುತ್ತಿರುವ ಸುದ್ಧಿ ತಿಳಿದ ಹಿರಿಯ ಯಜಮಾನ ರಾಜುಗೌಡರು ಕುಂತಲ್ಲೇ….ಕಣ್ಣೀರು ಹಾಕಿದರು.
ಮಧ್ಯಾನ್ಹದ ಬಸ್ಸಿಳಿದು ಕಾಳವ್ವನ ಹೋಟಲ ಕಡೆಯಿಂದ ಬರುತಿದ್ದ ಅಲ್ಲಾ ಭಕ್ಷಿಯ ಮಗ ಗೌಸ್‌ ಮೊಯಿನುದ್ದೀನನನ್ನು ಕೆಂಚನ ಗೌಡನ ಕಡೆಯ ಜನ ಬೇಟೆಗಾರರಂತೆ ಬೆನ್ನಟ್ಟಿ ಬೆನ್ನಟ್ಟಿ, ಮಂಡಿ ದುರುಗಮ್ಮನ ಗುಡಿ ಹತ್ರ ಕತ್ತಿ ಬೀಸಿ ಒಂದು ಕೈ ತೋಳನ್ನೇ ಕಡಿದು ಬಿಟ್ಟರು! ಜಗ್ಗದ ಗೌಸ್‌ ಮೊಯಿನುದ್ದೀನ್‌ ಅಲ್ಲೇ ಸವಾಕಾರರ ಜೀನಿನ ಕಡೆಯ ಮುಳ್ಳ ಬೇಲಿ ಹಾರಿ ಮಲ್ಲನ ಗೌಡನ ಮನೆ ಸೇರಿಕೊಂಡು ಜೀವ ಉಳಿಸಿಕೊಂಡ.
“ ಬ್ಯಾಡಲೋ ಬ್ಯಾಡಲೋ … ಅಂತ ನಾಲಿಗಿ ಗಂಟಲು ಹರಿಯಂಗ ಬಡಕೊಂಡೆನಲ್ಲಲೋ… ಆ ರಾಜಕೀ ಪರ‍್ಟಿಗಳ ಜೊತಿಗೆ ತಿರುಗ್ಯಾಡ ಬೇಡ ಅಂದಿನಿ… ಬಂಗಾರದಂತಹ ನಿನ್ನ ಕೈ ಇಲ್ಲದಂಗಾತಲ್ಲೋ.. ಏನು ಮಾಡಿ ನಾ ಸಾಯಲೋ …ಅಲ್ಲಾ …ಅಲ್ಲಾ” ಎಂದು ಗೌಸ್‌ ಮೊಯಿನುದ್ದೀನನ ತಾಯಿ ಬಿದ್ದು ಬಿದ್ದೂ ಅತ್ತಳು.
“ ನಮಗ್ಯಾಕಲೇ ಒಣ ರಾಜಕೀ ಪರ‍್ಟಿಗಳು.. ಆ ಜೀಪುಗಳು? ಅವರ ಹಿಂದ ಹೋಗಬ್ಯಾಡ.. ಹೋಗಬ್ಯಾಡ …ಅಂದೆ… ಇದು ಎಂದೋ ಒಂದು ದಿನ ತಿರುಗು ಬಾಣ ಆಗಿ ಬಡಿತೈತಿ ಅಂದಿದ್ದನಲ್ಲಲೇ.. ನನ್ನ ಮಾತು ಕೇಳಲಿಲ್ಲೋ..ಸುವ್ವರ್‌ ” ಎಂದು ತಂದಿ ಅಲ್ಲಾ ಭಕ್ಷಿ ಎದಿ ಎದಿ ಹೊಡಕೊಂಡು ಅತ್ತನು.
ಅಗಸಿ ಬಾವಿಯೊಳಗ ಶವಗಳಾಗಿ ತೇಲಿದ ಎಂಟು ಜನರ ಕಥಿ ಹಿಂದ ಗೌಸ್‌ ಮೊಯಿನುದ್ದೀನನ ಕೈವಾಡ ಇತ್ತೆಂದು ತಿಳಿದುಕೊಂಡ ಕೆಂಚನ ಗೌಡನ ಜನರು ಕಾವಲು ಕಾದು ಹಿಂಗ ಒಳ ಏಟು ಕೊಟ್ಟಿದ್ದರು. ಗೌಸ್‌ ಮೊಯಿನುದ್ದೀನ್‌ ಮೇಲೆ ನಡೆದ ದಾಳಿಯೊಳಗೆ ಜಮಾಲ್‌ ಸಾಬ್ ಕೆಂಚನ ಗೌಡನ ಕಡೆಯವರೊಳಗ ಇದ್ದದ್ದರಿಂದಾಗಿ ಊರೊಳಗಿನ ಸಾಬರೂ ಎರಡು ರ‍್ಗಗಳಾಗಿ ಹೋಳಾಗಿ ಬಿಟ್ಟರು. ಪ್ರತಿ ರ‍್ಷ ಜಾಂಡಾ ಕಟ್ಟಿಯ ಹತ್ತಿರ ನಡೆಯೋ ಪರ‍್ಲ ದೇವರ ಹಬ್ಬ ಕೂಡಾ ಈ ರ‍್ತಿ ಯಾರೂ ಮಾಡದಂಗಾದರು.
ಊರೀಗ ಊರಂತಿಲ್ಲ.
ಹಬ್ಬಗಳಿಲ್ಲ. ಆಚರಣೆಗಳಿಲ್ಲ..
ಒಬ್ಬರಿಗೊಬ್ಬರ ಸಹಕಾರವಿಲ್ಲ. ಅವರೆಂದರೆ ಇವರಿಗೆ ಕೋಪ,ಇವರೆಂದರೆ ಅವರಿಗೆ ಉರಿ. ಊರು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತಿದೆ. ಎಲ್ಲರೂ ಕೂಡಿ ನಕ್ಕು ನಲಿದು ಇದ್ದ ಊರೊಳಗೆ ಕಲಹಗಳೇ ಕುಣಿದು ಕೊರಳ ಕಡಿಯುತ್ತಿವೆ. ಊರೀಗ ಹಾಳುಬಿದ್ದ ಸ್ಮಶಾನವಾಗಿದೆ.
ಊರೀಗ ಒಡೆದು ಸರಿಪಾಲಾಗಿದೆ. ದೊಡ್ಡ ಕೇರಿಗಳೆಲ್ಲಾ ಮಲ್ಲನ ಗೌಡನ ಪಾಲಿಗಾದರೆ ಕೆಳಗೇರಿಗಳೆಲ್ಲಾ ಕೆಂಚನ ಗೌಡನ ಸೊತ್ತಾಗಿವೆ. ಊರಿಗೆ ಎರಡು ದಾರಿಗಳಾಗಿವೆ. ಕಾಳವ್ವನ ಹೋಟಲ ತನಕಾ ಬಸ್ಸು ಬರುತ್ತದೆ. ಅಲ್ಲಿಂದ ಊರೊಳಕ್ಕೆ ಬರದು. ಊರಿಗೆ ಸಂಬಂಧಿಸಿದ ಪಂಚಾಯ್ತಿಗಳು ನಡದ್ರೆ ಮಾತ್ರ ಕಾಳವ್ವನ ಹೋಟಲ ಹತ್ರದ ಚಾವಡಿಯೊಳಗೇ ನಡಿತದೆ.
“ಊರಿಗೆ ಶಾಲೆಯೊಂದು ಮಂಜೂರಾಗಿದೆ” ಎಂಬ ಸುದ್ಧಿ ತಿಳಿದೊಡನೆಯೇ ಊರಿನ ಎರಡೂ ಗುಂಪುಗಳವರು ಪೈಪೋಟಿಗೆ ಬಿದ್ದರು. ದೊಡ್ಡ ಕೇರಿಯಲ್ಲಿಯೇ ಆಗಬೇಕೆಂದು ಮಲ್ಲನ ಗೌಡ. ಕೆಳಗೇರಿಯಲ್ಲೇ ಆಗಬೇಕೆಂದು ಕೆಂಚನ ಗೌಡ. ಇಬ್ಬರೂ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ಕಂಡು ಬಲು ಪ್ರಯತ್ನಗಳನ್ನು ನಡೆಸಿದರು. ಇದರ ಮೇಲಾಗಿ ಮಲ್ಲನ ಗೌಡ ಶಾಸಕರನ್ನು ಹಿಡಕೊಂಡು ರಾಜಕೀಯ ನಡೆಸಿದ. ಶಾಲೆ ಎಲ್ಲಿ ತೆಗೆಯಬೇಕೋ… ರ‍್ಥವಾಗದೇ ಶಿಕ್ಷಣ ಶಾಖೆಗೇ ತಿಕ್ಕಲೆದ್ದಿತು.
ಊರಿನೊಳಗೆ ಶಾಲೆ ತೆಗೆಯುವ ಸುದ್ಧಿಯನ್ನು ನಂತರ ಪರಿಶೀಲಿಸೋಣವೆಂದು ಹೇಳಿ ಪೆಂಡಿಗ್‌ ನಲ್ಲಿಟ್ಟು ಫೈಲ್‌ ಮುಚ್ಚಿಹಾಕಿ ಶಿಕ್ಷಣ ಶಾಖೆಯು ಕೈ ತೊಳೆದುಕೊಂಡಿತು.
ಶಾಲೆಯಿಲ್ಲದ ಊರಲ್ಲಿ ಮಕ್ಕಳಿಗೆ ಇನ್ನೇನು ಕೆಲಸವಿರುತ್ತದೆ? ಕೆಲವು ಜನ ಎತ್ತು,ಎಮ್ಮೆ,ಕುರಿ, ಅಡು ಮೇಯಿಸಲಿಕ್ಕೆ ಗುಡ್ಡದ ಕಡೆಗೆ ಹೊರಟರು. ಮತ್ತೆ ಕೆಲವರು ಪಟ್ನದ ಕಡೆಗೆ ಹೋಗಿ ಆಟೋ ರಿಕ್ಷಾಗಳನ್ನು ನಡೆಸಿ ಬದುಕ ತೊಡಗಿದರು. ಇನ್ನೂ ಕೆಲವರು ಮಲ್ಲನ ಗೌಡನ ಜೀಪಿಗೆ ಆತುಕೊಂಡು ಪರ‍್ಟಿಗಳ ಮಾಡತೊಡಗಿದರು. ಯಾವಕ್ಕೂ ಸೇರದವರು ಕೆಂಚನ ಗೌಡ ತಯಾರು ಮಾಡೋ ನಾಡ ಬಾಂಬಿನ ಕರ‍್ಖಾನೆಯೊಳಗೆ ಕೆಲಸಕ್ಕೆ ಹೋಗುತಿದ್ದಾರೆ.
ಕಥೆಯಲ್ಲಾ ಹೀಗೆ ನಡೀತಿರುವಾಗಲೇ ….
ಗ್ರಾಮ ಪಂಚಾಯ್ತಿ ಚುನಾವಣೆಗಳು ಬಂದು ಸತ್ತವು.
ಊರ ಪರಿಸ್ಥಿತಿಯು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು.
ಇದಕ್ಕೆ ಜೊತೆಯಾಗಿ ಮೀಸಲಾತಿ ಸೀಟು ಬಂದು ಖಾಯಂ ಆಗಿದೆ. ಊರೊಳಗೆ ಎಲ್ಲಿ ನೋಡಿದರೂ ಇದೇ ಸುದ್ದಿಯೇ… ದೊಡ್ಡದಾಗಿದೆ. ಲಿಂಗಾಯ್ತರು,ಬಿ.ಸಿ. ರ‍್ಗಗಳು, ಮೈನಾರಿಟಿ ರ‍್ಗಗಳು, ಒಳಗೊಳಗೇ ಬೈದುಕೊಂಡರು, ಆದ್ರೆ ಹೊರಗೆ ಯಾರಿಗೆ ಕೊಟ್ಟರೂ ಒಳ್ಳೆಯದೇ ಅಂತ ಹೇಳುತಿದ್ದರು.
ಊರೊಳಗೆ ಎರಡು ಗುಂಪಿನ ಮಧ್ಯೆ ಈ ಚುನಾವಣೆಯು ಮತ್ತಷ್ಟು ಬೆಂಕಿಯನ್ನು ಬೆಳಸಿತು.
ಒಂದು ಪರ‍್ಟಿಯ ಕಡೆಗೆ ಮಲ್ಲನ ಗೌಡ ತನ್ನ ವ್ಯಕ್ತಿ ಮಾದಿಗರ ಅಂಕಪ್ಪನನ್ನ ಅಭ್ರ‍್ಥಿಯಾಗಿ ನಿಲ್ಲಿಸಿದರೆ, ಕೆಂಚನಗೌಡ ತನ್ನ ಮತ್ತೊಂದು ಪರ‍್ಟಿಯ ಅಭ್ರ‍್ಥಿಯಾಗಿ ಹೊಲ್ಯಾರ ಹುಚ್ಚಪ್ಪನನ್ನ ಪ್ರತಿಸ್ರ‍್ಧಿಯಾಗಿಸಿದ. ಎರಡೂ ಅರ‍್ಥಿಗಳು ರ‍್ಥಿಕವಾಗಿ ಏನೂ ಇಲ್ಲದವರೇ. ಇಬ್ಬರದೂ ಗುಡಿಸಲ ಬಾಳು, ಆದರೆ ನಂಬಿಗಸ್ಥರು. ಮಾದಿಗರ ಅಂಕಪ್ಪ ಹೊಡೆದಾಟ ಜಗಳವೆಂದರೆ ಮಾರು ದೂರ ಇರುವ ಮನುಷ್ಯ.ಪ್ರತಿ ಗುರುವಾರದ ದಿನ ಸಂತೆಗೋಗಿ ತರಕಾರಿ ವ್ಯಾಪಾರ ಮಾಡುತಿದ್ದ. ಹೆಬ್ಬಟ್ಟಿನವನು.
ಇನ್ನ ಹುಚ್ಚಪ್ಪ ಕೆಂಚನ ಗೌಡ ಹಾಕಿದ ಗೆರೆ ದಾಟಲಾರ. ಬಾಳಾ ಕಾಲದಿಂದಲೂ ಜೀಪು ಡ್ರೈವರಾಗಿ ಅಲ್ಲೇ ಇದ್ದವ.ಹುಚ್ಚಪ್ಪ ಕಾಗದ ಬರೆಯೋವಷ್ಟು ಓದನ್ನೂ ಕಲಿತಿದ್ದಾನೆ. ನಾಕು ಜನ ಹೆಣ್ಣ ಮಕ್ಕಳ ತಂದೆ ಎಂಬ ಸಣ್ಣ ಸಹಾನುಭೂತಿಯೂ ಈತನ ಮೇಲಿದೆ.
ಊರೊಳಗೆ…
ಕುವೈತ್‌ ನಿಂದ ಅಕ್ಬರ್‌ ಭಾಷಾ ಮಗಳು ಬಂದಿದ್ದಾಳೆ.
ಅವರಿರೋದು ಕೆಳಗೇರಿಯಲ್ಲೇ…
ಆ ಹುಡುಗಿಯ ಮೇಲೆ ಕೆಂಚನ ಗೌಡನ ಕಣ್ಣು ಬಿದ್ದಿತು.
“ ಅಕ್ಬರ್‌ ಮಾವಾ… ನಿನಿಗೆ ತಿಳಿಯದೇನೈತಿ? ನೋಡು ನನಿಗೆ ಮದುವಿ ಆಗೇತಿ ಅದ್ರ ಹೊಟ್ಯಾಗ ಮಕ್ಕಳಿಲ್ಲ. ನೀನು ಒಪ್ಪಿಕೊಂಡ್ರೆ ನಿನ್ನ ಮಗಳನ್ನ ಮಾಡಿಕ್ಯಾಬೇಕಂತ ಅದಾನಿ” ಅಂತ ನಾಟಿ ಕೋಳಿ ರೆಡಿ ಮಾಡಿಸಿ, ರಾತ್ರಿ ತನ್ನ ನಾಲ್ಕಂತಸ್ಥಿನ ಮಹಡಿ ಮನೆಯೊಳಗ ಕೂಡಿಸಿ ಹೇಳಿದನು ಕೆಂಚನ ಗೌಡ.
ಅಕ್ಬರ್‌ ಭಾಷಾ ಗೌಡನ ಮಾತಿಗೆ ಎದರು ಮಾತಾಡಿದರೆ ಊರೊಳಗೆ ಇರಲಾಗದೆಂದು ಒಪ್ಪಿಕೊಂಡನೋ..
ಕುಡಿದ ಅಮಲಿನೊಳಗೆ ತಲೆಯಾಡಿಸಿದನೋ ತಿಳಿಯದು.
ಆದರೆ ಅಂದಿನಿಂದ ಇಬ್ಬರ ಮನೆ ನಡುವೆ ಹೋಗೋದು ಬರೋದು ನಡಿಯತೊಡಗಿದವು.
ಮಗಳ ನಿಖಾದೊಂದಿಗೆ ಅಕ್ಕ ಪಕ್ಕದ ಸಾಬರೆಲ್ಲಾ ಕೆಂಚನ ಗೌಡನ ಕಡಿಗೇ ಕಲೆತು ಸೇರೋ ಹಂಗಾಯಿತು.
ಸ್ರ‍್ಧೆಗೆ ನಿಂತ ಮಾದಿಗರ ಅಂಕಪ್ಪನಿಗೆ ಕರೆಕಲ್ಲು ಗುಡ್ಡದ ಹತ್ರ ಹೊಲವಿತ್ತು. ರಾತ್ರಿ ಹೊಲಕ್ಕ ನೀರು ಕಟ್ಟಲೆಂದು ಹೊಲಕ್ಕೆ ಹೋಗಿದ್ದ ಆತನನ್ನ ಯಾರೋ…ಹೊಲದಲ್ಲಿರುವ ಬೇವಿನ ಮರಕ್ಕೆ ಉರುಲು ಹಾಕಿ ಹೋಗಿ ಬಿಟ್ಟರು. ಕುಟುಂಬಕ್ಕೇ ದೊಡ್ಡ ಆಧಾರವಾಗಿದ್ದ ತನ್ನ ಗಂಡನ ಸಾವನ್ನ ಕಂಡ ಅಂಕಪ್ಪನ ಹೆಂಡತಿ ನಾಕು ರ‍್ಷದ ಮಗನನ್ನ ಹಿಡಕೊಂಡು ಬರ‍್ಯಾಡಿ ಅತ್ತಳು.
“ ಸಿಗತಾರ…ಸಿಗತಾರ…
ಯಾರನ್ನೂ ಬಿಡಲಾರೆವು. ಸೊಲುಪ ಉಸಿರಾಡಲಿ….” ಎಂದು ಅಂದು ಹೆಣ ತಂದ ಮನಿ ಮುಂದೆ ನಾಕು ಸಮಾಧಾನದ ಮಾತುಗಳೇಳಿ ಹೋದನು ಮಲ್ಲನ ಗೌಡ.
ಚುನಾವಣೆಯ ದಿನಾಂಕವು ಘೋಷಣೆಯಾಯಿತು.
“ ನಾನು ಹೇಳೋದು ಕೇಳಮ್ಮಾ…
ಆ.. ನನ ಮಕ್ಕಳು ನಮ್ಮ ಅಂಕಪ್ಪನನ್ನ ಯಂಗ ಉರುಲು ಹಾಕಿದರೋ…? ಅದನ್ನ ಮರೆತು ಬಿಟ್ಟೆಯಾ?…
ಏನು? ನೀನು ನಮ್ಮ ಕಡೆ ಮನುಷಾಳು ಭಯ ಪಡಬೇಡ… ಎಲ್ಲಾ ನಾನು ಹತ್ತಿರವಿದ್ದು ನೋಡಿಕೊಳ್ಳುತ್ತೇನೆ. ಇಂತಾ ಹೊತ್ನಾಗ ಧರ‍್ಯ ತೋರಿಸಬೇಕು…. ನೀನು ನನ್ನ ಮಾತು ಕೇಳಿ ನಾಮಿನೇಷನ್‌ ಮಾಡು ಬಾ… ಎಂದು ಮಲ್ಲನ ಗೌಡ ಅಂಕಪ್ಪನ ಹೆಂಡತಿ ಆದಿ ಲಕ್ಷ್ಮಿಯನ್ನ ಸ್ರ‍್ಧೆಗೆ ಇಳಿಯಲು ಹೇಳಿದ.
“ ಸೋಮಿ … ನನಗ್ಯಾಕ ರಾಜಕೀಯದ ಉಸಾಬರಿ? ಇರೋ ಒಬ್ಬ ಮಗನ ಮೇಲೆಯೇ ನನ್ನ ಜೀವ ಸಾಮಿ. ಅವನ್ನ ಇಟ್ಟಕೊಂಡು ಬದುಕು ಸವಸತಾ ಅದೀನಿ. ನನಗೂ ಏನಾನ ಅದೂ ಇದೂ ಆದ್ರೆ ಮಗ ಅನಾಥ ಅಕ್ಕಾನ” ಎಂದು ಆಕಿ ಹಲುಬ್ಯಾಡಿದಳು.
ಆದರೂ….
ಅದ್ಯಾವುದನ್ನೂ ಲೆಕ್ಕಿಸದದಂತೆ ಮಲ್ಲನ ಗೌಡ ನಿಂತು ಆದಿಲಕ್ಷ್ಮಿಯನ್ನು ನಾಮಿನೇಷನ್‌ ಮಾಡಿಸಿದ.
ಪಾಪ… ಗಂಡನನ್ನು ಕಳೆದುಕೊಂಡ ಹೆಂಗಸು.
ದಿಕ್ಕೆಟ್ಟ ಬಡ ಕುಟುಂಬವೆಂದು ಜನರೊಳಗೆ ಸಹಾನುಭೂತಿ ಹುಟ್ಟಿತು.
ಸ್ರ‍್ಧೆಯೊಳಗೆ ಆದಿಲಕ್ಷ್ಮಿ ಗೆದ್ದಳು.
ಮಲ್ಲನ ಗೌಡ ಮೀಸೆ ತಿರುವಿದನು.
ಹೊಲದ ಹತ್ರ ಅಂಕಪ್ಪನನ್ನು ನಿಜವಾಗಿಯೂ ಕೆಂಚನ ಗೌಡನ ಕಡೆಯವರು ಸಾಯಿಸಿದರಾ…? ತನ್ನ ರಾಜಕೀಯ ಆದಿಪತ್ಯವನ್ನು ಉಳಿಸಿಕೊಳ್ಳಲಿಕ್ಕೆ ಚುನಾವಣೆಯಲ್ಲಿ ತನ್ನ ಅಭ್ರ‍್ಥಿಯನ್ನು ಗೆಲ್ಲಿಸಲಿಕ್ಕೇ ಮಲ್ಲನ ಗೌಡ ಈ ಕೆಲಸ ಮಾಡಿಸಿದನೋ? ಎಂಬ ಅನುಮಾನಗಳ ಹಕ್ಕಿಗಳೂ ರೆಕ್ಕೆ ಬಿಚ್ಚಿ ಹರ‍್ಯಾಡಿದ್ದು ಗುಸು ಗುಸು ಸುದ್ಧಿಯಾಗಿಯೇ ಉಳಿದು ಹೋಯಿತು.
***
ಕೆಂಚನ ಗೌಡ ಮದುವೆ ಆಗುತ್ತೇನೆಂದು ಹೇಳಿದನೇ ವಿನಾ ಅದೇನೂ ನಡಿಯಲೇ ಇಲ್ಲ. ರಾಜಾ ರೋಷವಾಗಿ ಅಕ್ಬರ್‌ ಭಾಷಾ ನ ಮಗಳನ್ನ ಇಟ್ಟುಕೊಂಡು ಆಕೆಗೊಂದು ಚಿಕ್ಕ ಮನೆ ಮಾಡಿದನು. ಕೆಲವು ಕಾಲ ಇಬ್ಬರ ಸಂಸಾರವೂ ಸಾಗಿತು. ಆಕೆ ತಾಯಿಯೂ ಆದಳು. ಕೆಂಚನ ಗೌಡನ ಆನಂದಕ್ಕೆ ಎಣೆಯಿಲ್ಲದಂಗಾಯಿತು. ಅದು ಅಷ್ಟಿಷ್ಟಲ್ಲ. ಕೆಂಚನ ಗೌಡ ತನ್ನ ಕಾಲು ನೆಲಕ್ಕಿಡದಂತೆ ಹಕ್ಕಿಯಾಗಿ ಮುಗಿಲೊಳಗೇ ತೇಲಾಡ ಹತ್ತಿದ. ದೇವರ ಪೂಜೆಗಳ ಮಾಡಿಸಿದ.ದಾನ ರ‍್ಮಗಳ ಮಾಡಿಸಿದ.
ಕೆಂಚನ ಗೌಡನಿಗೆ ಮಗ ಹುಟ್ಟಿದನು.
ಮಗ ಬಲಹೀನವಾಗಿರುವನೆಂದು ಡಾಕ್ಟರ್‌ ಗಳು ಹೇಳಿದ್ದರಿಂದ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ತಿರುಗ್ಯಾಡಿ ಬಂದನು. ಗ್ರಹ ಬಲದೊಳಗೆ ದೋಷ ವಿದೆಯೆಂದು ಫಕ್ಕೀರ ಗೌಡ ಎಂದು ಹೆಸರಿಡಬೇಕೆಂದು ಕೆಲವು ಜೋತಿಷಿಗಳು ಹೇಳಿದಂಗೆಯೇ ಮಾಡಿದನು. ಅತ್ತ ಮಸೀದಿಯೊಳಗೆ ಇತ್ತ ದೇವಾಲಯಗಳೊಳಗೆ ಎರಡೂ ಕಡಿಗೆ ಆತ ಪೂಜೆಗಳ ಮಾಡಿಸಿದ..
“ಬಲಹೀನವಾದ ಮಗು ಆರೋಗ್ಯವಾಗುತ್ತದೆ. ಆಯಿತವಾರ ಅಮಾಸೆ ದಿನ ರ‍್ಧರಾತ್ರಿ ಹೊತ್ತು ಹುಟ್ಟಿದ ಮಗ ದೊಡ್ಡ ರ‍್ವಜ್ಞನಾಗುತ್ತಾನೆ. ಇಲ್ಲಾಂದ್ರ ಪಾಪರು ಪಟ್ಟಿ ಪಟಿಂಗ ಕಳ್ಳನಾಗುತ್ತಾನೆ” ಎಂದು ಕೂಡಾ ಪೂಜಾರಿಗಳು ಹೇಳಿದರು.
ಈ ಮಾತುಗಳನ್ನ ಕೇಳಿ ಕೆಂಚನಗೌಡ ಬಿದ್ದೂ ಬಿದ್ದೂ ನಕ್ಕನು.
ಮಗನು ಬಂದ ಗಳಿಗೆ ಚಲೋದೈತೇನೋ, ಆದರೆ ಮಲ್ಲನ ಕೇರಿಯಿಂದ ಕೆಟ್ಟ ಸುದ್ಧಿಯೊಂದು ಆಗಲೇ ಬಂದು ಬಡಿಯಿತು. ತಂದೆ ರಾಜೇ ಗೌಡ ಸತ್ತನೆಂಬ ಸುದ್ಧಿ ತಿಳಿಯುತ್ತಲೇ ಕೆಂಚನ ಗೌಡನ ಎದೆಗೆ ಸಿಡಿಲು ಬಿಡಿದಂಗಾತು. ಪಟ್ಟನೇ ಮನೆಯಿಂದ ಹೊರ ಬಿದ್ದನು.
ಅಷ್ಟೊತ್ತಿಗೆ ಅಣ್ಣ ಮಲ್ಲನ ಗೌಡ ಕೂಡಾ ಬಂದು ಅಳುತಿದ್ದನು.
ಕೆಂಚನ ಗೌಡ ಕೂಡಾ ಬಂದು ಶವದ ಮೇಲೆ ಬಿದ್ದೂ ಬಿದ್ದು ಅತ್ತನು.
ಆ ನಂತರ ಮಷಾಣದ ಕರ‍್ಯಗಳೆಲ್ಲಾ… ಒಂದರ ನಂತರ ಒಂದು ಆಗಿ ಹೋದವು.
ಶವವನ್ನು ಗುದ್ದಿನೊಳಗೆ ಹೂತ ನಂತರ ಇಬ್ಬರೂ ಕೂಡಿ ಮೂರು ದಿನಗಳ ಹಿಂಡೇ ಕೂಳು ಎಡಿ ಮಾಡಿದರು.
ಮನೆಗೆ ತಂದ ಹೊಸ ಗಡಿಗೆಯೊಳಗೆ ಐದು ಪಾವುಗಳ ಅನ್ನ ಕುದಿಯುತ್ತಿರುವಾಗಲೇ ಮನೆಯೊಳಗೆ ಅಣ್ಣ ತಮ್ಮರಿಬ್ಬರೂ ದೇವರಿಗೆ ಪೂಜೆ ಮಾಡಿದರು. ದೀಪ ವಿಟ್ಟು ಹೊರಗೆ ಬಂದರು. ಒಳಗೆ ಏನು ಮಾತಾಡಿಕೊಂಡರೋ ತಿಳಿಯದು. ಆದರೆ ರಾಜ್ಯ ಮಟ್ಟದಲ್ಲಿ ರಾಜಕೀಯಗಳು ನಡೆದವು. ಎಂ.ಎಲ್.ಎ. ಯೊಂದಿಗೆ ಮಾತಾಡಿ ಬಂದಮೇಲೆ ರಾಜ್ಯ ಮಟ್ಟದಲ್ಲಿ ರಚಿಸಲಾದ ಕೃಷಿ ಮಾರುಕಟ್ಟೆ ಸಮತಿಯ ಕರ‍್ಯಕಾರಿ ಸದಸ್ಯನನ್ನಾಗಿ ಮಲ್ಲನ ಗೌಡನನ್ನು ಆಯ್ಕೆ ಮಾಡಲಾಯಿತು. ಇದಕ್ಕೆ ತೆರಿ ಹಿಂದೆ ಕೆಲಸ ಮಾಡಿದ್ದೇ ಕೆಂಚನಗೌಡನೆಂದು ಒಳಗಿನ ಗುಸು ಗುಸು….
ರ‍್ಕಾರದ ಬಂಗ್ಲೆ,ಕಾರು, ಆಫೀಸು ಪಡೆದು ಬೆಂಗಳೂರೊಳಗೆ ಕುಂತ ಮೇಲೆ ಊರೊಳಗಿನ ತನ್ನ ಕುಟುಂಬವನ್ನೆಲ್ಲಾ ಮಲ್ಲನ ಗೌಡ ಸಿಟಿಗೆ ಕರೆಸಿಕೊಂಡು ಬಿಟ್ಟ.
ಮಲ್ಲನ ಗೌಡನನ್ನು ಇಷ್ಟು ಕಾಲದಿಂದ ಊರೊಳಗೆ ನಂಬಿಕೊಂಡು ಬಂದವರ ಕಥೆಯೇನು? ಹೇಳಿಕೊಳ್ಳಲಾರದಂಗಾಯಿತು.
“ ನಾನು ಎಲ್ಲಿದ್ದರೂ ನಿಮಗೆ ಒಳ್ಳೆಯದೇ ಆಗುತ್ತದೆ. ರಾಜಧಾನಿಯೊಳಗೆ ಕುಳಿತರೆ ಎಂತಾ ಕೆಲಸಗಳಾದರೂ ಆಗುತ್ತವೆ. ನಿಮಗಾಗಿಯೇ ನಾನು ಹೋಗುತ್ತಿರುವುದು ” ಎಂದು ಹೇಳಿ ಮೊಸಳೆ ಕಣ್ಣೀರು ವರೆಸಿಕೊಂಡನು ಮಲ್ಲನ ಗೌಡ.
ಅಣ್ಣ ತಮ್ಮಂದಿರಿಬ್ಬರೂ ಕೂಡಿಕೊಂಡ ಮೇಲೆ ಊರು ಉದ್ದಾರ ವಾಗುತ್ತದೆಂದು ಎಲ್ಲರೂ ಅಂದುಕೊಂಡರು.
ಆದರೆ ಅದೇನೂ ಆಗಲಿಲ್ಲ.
ಊರೊಳಗೆ ಕೆಂಚನ ಗೌಡನದೇ ಆಡಳಿತವಾಯಿತು.
ಆತ ಹೇಳಿದ್ದೇ ಶಾಸನವಾಯಿತು.
ಅಲ್ಲಿ ತನಕ ಮಲ್ಲನ ಗೌಡನ ಬಳಿ ಕೆಲಸ ಮಾಡಿದವರನ್ನೆಲ್ಲಾ ಪೀಡಿಸುವುದು, ಕತ್ತರಿಸುವುದು, ಹೆಚ್ಚಾಯಿತು. ಕಷ್ಟ ಬಿದ್ದು ಎರಡು ಮೂರು ಸಲ ಬೆಂಗಳೂರಿಗೆ ಹೋಗಿ ಊರಿನ ಸಂಗತಿಗಳನ್ನೆಲ್ಲಾ ಮಲ್ಲನ ಗೌಡನಿಗೆ ಹೇಳಿದರೂ… ಏನೂ ಪ್ರಯೋಜನ ವಿಲ್ಲದಂಗಾಯಿತು.
“ಊರೊಳಗೆ ವಡೆದಾಟಗಳ್ಯಾಕೆ? ಯಾರೋ ಒಬ್ಬರು ಅನುಸರಿಸಿಕೊಂಡು ಹೋಗಬೇಕಪ್ಪಾ…ಏಷ್ಟು ಕಾಲ ಬಡಿದಾಡತೀರಿ ಅವು ಎಷ್ಟು ದಿನ ನಡೀತಾವೆ? ಸುಮ್ಮಕ ಸಿಕ್ಕಿದ್ದು ಗಳಿಸಿಕೊಂಡು ಸುಖ ಪಡಾದನ್ನ ನೋಡ್ರಿ. ಸಾಕಿನ್ನ… ಇಂಥಾ ರಾಡಿಗಳನ್ನ ಹೊತ್ತಗೊಂಡು ಇಲ್ಲಿತಂಕಾ ಬರಬ್ಯಾಡ್ರಿ. ಬೆಂಗಳೂರು ತಂಕ ತರಬ್ಯಾಡ್ರಿ ಬೇಸಿರಕಿಲ್ಲ ನಡ್ರೀ… ಇದಾ ಕಡೇ ಮಾತು ಎಚ್ಚರ” ಎಂದು ಕಡ್ಡಿ ಮುರಿದ ಮಲ್ಲನ ಗೌಡ.
ಅದಾ…ಕೊನಿ…
ಆ ಮ್ಯಾಲ ಅತನಿಂದ ಯಾರೂ ಒಳ್ಳೇದು ಬಯಸಲೂ ಇಲ್ಲ.
ನಮ್ಮ ರಾಡಿ ಪಂಚಾಯ್ತಿ ತೀರಿಸ ಬಾರಪ್ಪ ಎಂದು ಕೇಳಿಕೊಳ್ಳಲೂ ಇಲ್ಲ.
ಊರೊಳಗೆ ಕೆಂಚನ ಗೌಡಪ್ಪನದೇ ರ‍್ಭಾರಿಕಿ ನಡೆಯತೊಡಗಿತು. ಊರೊಳಗೆ ಆತನಿಗೆ ಯಾರ ಅಡೆತಡೆಯೇ… ಇಲ್ಲದಂಗಾಗಿ ಹೋಯಿತು.
ರೈತರು ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದ ಬೆಳೆಯನ್ನ ತನಗೇ ಮಾರಬೇಕೆಂದು ಕೆಂಚನ ಗೌಡ ಠರಾವು ಹೊರಡಿಸಿದ. ರೈತರಿಗೆ ನ್ಯಾಯಯುತವಾದ ಬೆಲೆಯನ್ನು ಸಯಿತಾ ನೀಡಲಿಲ್ಲ.
ಊರೊಳಗೆ ರೈತರು ಕಷ್ಟ ಪಡುತ್ತಾರೆಯೇ ವಿನಾ, ಅವರು ಬೆಳೆದ ಬೆಳೆಗೆ ಬೆಲೆ ಕಟ್ಟುವುದು ಮಾತ್ರ ಕೆಂಚನ ಗೌಡನದೇ ಆಯಿತು. ʼಗೌಡನನ್ನು ಬಿಟ್ಟು ಮಾರಿದರೆ ಬೂದಿ ಪಾಲು ಗೌಡನಿಗೆ ತಂದು ಮಾರಿದರೆ ಕಾಡುಪಾಲುʼ ಅನ್ನಂಗಾತು. ಅವರ ಪಾಡು.
“ವ್ಯವಸಾಯವೆಂದರೆ ಜೂಜಾಟವಾ? ಕೊನೆಗಾಣದ ದುಃಖವಾ?”…
ಹೊಲಗಳ ಬಳಿಯೇ ಕೆಂಚನ ಗೌಡರ ನಾಲ್ಕು ಜನ ನಿಂತು, ಮುಖಕ್ಕೆ ಹೊಡೆದಂತೆ, ಟ್ರ‍್ಯಾಕ್ಟರ್‌ ಗಳೊಳಗೆ, ಲಾರಿಗಳೊಳಗೆ ರೈತರು ಬೆಳೆದ ಬೆಳೆಗಳನ್ನ ಹದ್ದುಗಳಂತೆ ಹಾರಿಸಿಕೊಂಡು ಹೋಗುತ್ತಿದ್ದಾರೆ…
ರೈತರು ತಿರುಗಿ ಬೀಳಲಾಗದೇ ಹೋದರು.
ಯಾರಿಗೆ ಹೇಳಿಕೊಳ್ಳುತ್ತಾರೆ?
ಇದಕ್ಕೆ ಜೊತೆಯಾಗಿ….
ಊರೊಳಗೆ ನಂಬರ್‌ ಗಳಾಟದ ಮಟ್ಕವೂ ಬಂದಿದೆ.
ಸುತ್ತು ಮುತ್ತಲ ಹಳ್ಳಿಗಳನ್ನೆಲ್ಲಾ ಸೆಳಕೊಂಡಿದೆ.
“ ರೂಪಾಯಿಗೆ ನೂರು ರೂಪಾಯಿಗಳು” ಎಂದು ಹೇಳಿದ್ದರಿಂದ ಆಸೆಪಟ್ಟ ಜನರು ತಮ್ಮ ಹತ್ತಿರ ಉಳಿಸಿದ ಹಣವನ್ನೆಲ್ಲಾ ತೆಗೆದು ತಮ್ಮ ಅದೃಷ್ಟವನ್ನ ಪರೀಕ್ಷಸಲು ನೋಡಿದರು. ಆ ಆಟ ಕೆಂಚನ ಗೌಡನ ಮನೆಗೆ ಹಣದ ಬೆಳೆಯಾಗಿ ಒದಗಿತು.
ರಾತ್ರೋ ರಾತ್ರಿಗೆ ಲಕ್ಷಾಧೀಶ್ವರರಾಗಬೇಕು,ಕೋಟ್ಯಾಧೀಶ್ವರರಾಗಬೇಕು ಎಂದು ಕನಸು ಕಾಣುವವರನ್ನು ಬೇಟೆಯಾಡುತ್ತಲೇ ಕೆಂಚನ ಗೌಡ ಬೆಳೆದುಬಿಟ್ಟನು. ಮಟ್ಕಾದ ಏಟಿಗೆ ಸುಖದ ಕುಟುಂಬಗಳು ಒಡೆದು ಛಿದ್ರ ಛಿದ್ರಗೊಂಡವು. ಹೆಣ್ಣು ಮಕ್ಕಳ ಕೊರಳೊಳಗಿನ ತಾಳಿ ಸರಗಳು ಕೂಡಾ ಮಟ್ಕಾದ ಮಹಾ ಮಾರಿಗೆ ಆಹುತಿ ಆದವು.
ನೋಡು ನೋಡುತ್ತಿದ್ದಂತೆಯೇ ಊರೊಳಗೆ ಮತ್ತೊಂದು ಅನಿಷ್ಟವು ಊರನ್ನು ಪ್ರವೇಶಿಸಿತು.
ರ‍್ಕರವು ಎರಡು ಬ್ರಾಂದಿ ಶಾಪುಗಳನ್ನು ತೆರೆಯಲು ಕೆಂಚನ ಗೌಡನಿಗೆ ರ‍್ಮಿಷನ್‌ ನೀಡಿತು.
ಇದರೊಂದಿಗೆ ಊರೆಲ್ಲಾ ಮತ್ತಾಗಿ ಮಲಗಿತು.
ಹೆಸರಿಗೆ ಅವು ಬ್ರಾಂದಿ ಶಾಪುಗಳಾದವೇ ವಿನಃ ಒಳಗೆಲ್ಲಾ ಅವು ಕಳ್ಳ ಬಟ್ಟಿ ಸರಾಯಿಯ ಸರಕೇ ಆಗಿದ್ದವು.
ಕಲ್ಲಪ್ಪನ ಗುಡಿ ಕೆಳಗಿನ ಕೆರೆ ಅಂಗಳದಲ್ಲಿ ಬಟ್ಟಿ ಸರಾಯಿ ತಯಾರು ಮಾಡುವುದು…
ಆ ಸರಕನ್ನು ಪ್ಲಾಸ್ಟಿಕ್‌ ಕ್ಯಾನ್‌ ಗಳೊಳಗೆ ಹಳ್ಳಿಗಳಿಗೆ ತರುವುದು…
ಆ ಸರಕಿನ ಯಾಪಾರವನ್ನು ಪುಲ್‌ ಬಾಟಲು.. ಆಫ್‌ ಬಾಟಲುಗಳಾಗಿ ಮರ‍್ಪಡಿಸುವ ವ್ಯಾಪಾರ ಸುರುವಾಯಿತು.
ಆ ನಂತರ ಕೆಂಚನ ಗೌಡ ಹಿಂದಕ್ಕೆ ತಿರುಗಿ ನೋಡಲೇ ಇಲ್ಲ…
ಮಲ್ಲನ ಗೌಡ ರಾಜಧಾನಿ ಲೆವೆಲ್‌ ನೊಳಗೆ ಸಂಪಾದಿಸಿಕೊಳ್ಳುತ್ತಾ ಊರಿನ ಕಡೆಗೆ ಬರಲೇ ಇಲ್ಲ.
ನೋಡಲೇ ಇಲ್ಲ.
***
ಕಾಲ ಕಳೆಯುತ್ತಲೇ ಇತ್ತು.
ಎಂ.ಎಲ್.ಎ ಈ ಸಲ ಚುನಾವಣೆಯೊಳಗೆ ತಾನು ನಿಲ್ಲಲಾರದೇ ತನ್ನ ಮಗ ವೀರನ ಗೌಡನನ್ನು ನಿಲ್ಲಿಸಿದನು. ಮಲ್ಲನ ಗೌಡನ ಪರ‍್ಟಿಯ ಗೆಲುವಿಗಾಗಿ ಕೆಂಚನ ಗೌಡ ಶ್ರಮಿಸಿದನು. ಎಂ.ಎಲ್.ಎ. ಮಗನನ್ನು ಗೆಲಿಸಿಕೊಳ್ಳಲಿಕ್ಕಾಗಿ ತಮಗೆ ಎದುರು ಬಿದ್ದ ಎರಡು ಮೂರು ಕಡೆಯ ಅಭ್ರ‍್ಥಿಗಳನ್ನು ಕಾವಲು ಕಾದು ಕಿಡ್ನಾಪ್‌ ಮಾಡಿಸಿದನು.
“ ಯಂಗಾದರೂ ಎಷ್ಟು ರ‍್ಚಾದರೂ ನನ್ನ ಮಗ ಗೆಲ್ಲಬೇಕು..” ಎಂದು ಎಂ.ಎಲ್.ಎ. ಶಪಥ ಮಾಡಿದ್ದ.
ಎರಡು ದಿನಗಳು ಹಳ್ಳಿ ಹಳ್ಳಿಗಳೊಳಗೆ ಬಿಳಿಯ ಸುಮೋ ಕಾರ್‌ ಗಳಲ್ಲಿ ಮಲ್ಲನ ಗೌಡ ತಿರುಗಾಡಿದ.
ಜನವ್ಯಾರೂ ಆತನನ್ನ ಗೌರವದಿಂದ ನೋಡಲಿಲ್ಲ.
ಅಭಿಮಾನಪಟ್ಟು ಆದರಿಸಲಿಲ್ಲ.
ಪ್ರಚಾರಗಳ ರ‍್ವವೂ ಮುಗಿಯಿತು.
ಓಟು ಹಾಕುವ ದಿನ ಬಂದೇ ಬಿಟ್ಟಿತು.
ಕಳ್ಳ ಬಟ್ಟಿ ಸರಾಯಿ ಹಳ್ಳಿಗಳನ್ನು ಹೊಕ್ಕು ಹಿಂಡಿ ಹಾಕಿತು. ನೋಟಿನ ಕಂತೆಗಳು ರೆಕ್ಕೆ ಬಿಚ್ಚಿಕೊಂಡು ಬಾಗಿಲುಗಳಿಗೆ ಮಾವಿನ ತೋರಣಗಳಾದವು. ಓಟಿಂಗ್‌ ಎಲ್ಲೂ ನಡೆಯಲಿಲ್ಲ. ಪೋಲಿಂಗ್‌ ಆಫೀಸರ್‌ ಗಳು ಮಾರಾಟವಾದರು. ಎಲ್ಲಾ ಓಟುಗಳನ್ನು ಕೆಂಚನ ಗೌಡನ ಕಡೆಯವರೇ ಗುದ್ದಿ ಬ್ಯಾಲೆಟ್‌ ಬಾಕ್ಸಗೆ ತುಂಬಿದರು. ಈ ಸಲದ ಚುನಾವಣೆಯ ನೇತೃತ್ವವನ್ನು ಕೆಂಚನ ಗೌಡನ ಮಗ ಫಕ್ಕೀರ ಗೌಡನೇ ವಹಿಸಿಕೊಂಡಿದ್ದ.
ಫಕೀರಗೌಡನ ಕಡೆಯವರು ಪೋಲಿಂಗ್‌ ದಿನ, ಕೋಡಿ ಹಳ್ಳಿಯ ವಿರೋಧ ಪಕ್ಷದ ಅಭ್ರ‍್ಥಿಯ ಏಜೆಂಟು ನಾಗಭೂಷಣನನ್ನು ತುಂಡು ತುಂಡಾಗಿ ಕತ್ತರಿಸಿದರು.
ಚುನಾವಣಾ ಅಧಿಕಾರಿಗಳು ಅಲ್ಲಿ ರೀಪೋಲಿಂಗ್‌ ʼಗೆ ಆದೇಶ ನೀಡಿದರು.
ಆ ನಂತರ ಅದನ್ನು ಕೂಡಾ ಮತ್ತೆ ಫಕ್ಕೀರಗೌಡ ರಾಜಕೀಯ ಮಾಡಿ ತಮ್ಮದನ್ನಾಗಿಸಿಕೊಂಡ.
ಎಂ.ಎಲ್.ಎ. ಮಗ ವೀರನ ಗೌಡ ಚುನಾವಣೆಯಲ್ಲಿ ಗೆದ್ದನು.
ಅವರಿಗಾದ ಸಂತೋಷ ಅಷ್ಟಿಷ್ಟಲ್ಲ.
“ಯುವಕರು ರಾಜಕೀಯದೊಳಗೆ ಕಾಲಿಡುವಂತಹ ಅಗತ್ಯವೇನೋ ಇದೆ. ಅದಕ್ಕೆ ಆತನಿಗೆ ಈ ಚುನಾವಣೆಯೇ ಶ್ರೀಕಾರವಾಯಿತು.” ಎಂದು ಶಾಸಕರು ಮೀಸೆ ತಿರುವಿಕೊಳ್ಳುತ್ತಾ ಹೇಳಿದರು.
ವೀರನ ಗೌಡ ತನ್ನ ಬೆಂಬಲಿಗರಾದ ಕೆಂಚನ ಗೌಡ, ಪಕ್ಕೀರ ಗೌಡರ ಜೊತೆಗೆ ಬಣ್ಣದಗಳಲ್ಲಿ ಮುಳುಗಿ ಕುಂಕುಮದ ತಿಲಕ ಇಟ್ಟುಕೊಂಡು ಸಂಭ್ರಮದಿಂದ ಪೇಪರ್‌ ಗಳಲ್ಲಿ ಕಾಣಿಸಿಕೊಂಡ.
ಫಕ್ಕೀರ ಗೌಡನೇ ಆ ಸಮಾರಂಭಕ್ಕೆ ರ‍್ಚು ಮಾಡಿದನೆಂದು ಸುದ್ಧಿಯಾಯಿತು..
ಈ ಚುನಾವಣೆಯೊಂದಿಗೆ ಕೆಂಚನ ಗೌಡನಿಗೆ ಒಂದು ನಂಬಿಕೆ ಕುದುರಿತು.
ಫಕ್ಕೀರ ಗೌಡ ತನ್ನಂತೆಯೇ ಬೆಳೆಯ ಬಲ್ಲ.
ಮಟ್ಕಾ ವ್ಯಾಪಾರಗಳು, ಭಟ್ಟಿ ಸರಾಯಿ, ರಸ್ತೆ ಕಾಮಗಾರಿಗಳ ಕಾಂಟ್ರಾಕ್ಟಗಳನ್ನೆಲ್ಲಾ ಆತನಿಗೇ ವಹಿಸಿದ.
ತಾನು ಎಲ್ಲಿಗೂ ಹೋಗಲಿಲ್ಲ.
ದಿನಗಳು ಹೀಗೇ ಕಳೆಯುತ್ತಲೇ ಇದ್ದವು…
ಇದ್ದಕ್ಕಿದ್ದ ಹಾಗೇ ಒಂದು ದಿನ ಎಂ.ಎಲ್.ಎ. ಮಲ್ಲನಗೌಡರು ಬಂದು ಹೊಸ ಸಂದೇಶವೊಂದನ್ನು ಬಿತ್ತರಿಸಿದರು.
“ ಅಮೇರಿಕಾಕ್ಕೆ ಹೋಗಿ ಎರಡು ರ‍್ಷ ಇದ್ದು ಬರೋಣಪ್ಪಾ ಬಾ” ಎಂದು ತಿಳಿಸಿದರು.
ಕೆಂಚನ ಗೌಡ ತುಟಿಗಳಲ್ಲಿ ನಗು ಅರಳಿಸುತ್ತಾ “ ಏನಣ್ಣಾ … ಆ ಕಡಿಕೆ ಗಾಳಿ ಬೀಸುಬುಟೈತೆ” ಎಂದ.
“ ಬುಡಾ ಇಷ್ಟು ರ‍್ಷಗಳೆಲ್ಲಾ ಮಾಡಿದವನ್ನೇ ಮಾಡಿ ಮಾಡಿ ಸಾಕಾತು. ಇನ್ನಾನ ಓಟು ಆ ದೂರದ ದೇಶಕ್ಕ ಹೋಗಿ ನಿರುಮ್ಮಳವಾಗಿ ಲೋಕ ಸುತ್ಯಗಂಡು ಬರೋನಾ ನಡಿ, ಇಲ್ಲಿ ಎಲ್ಲಾ ಸರಿ ಹೋಗೇತಿ ನಡಿ…” ಅಂತಾ ತೂಗ್ಯಾಡೋ ಕರ‍್ಚಿಯೊಳಗ ಕುಂತು ತೂಗುತ್ತಾ ಹೇಳಿದನು.
“ ಬಿಡು ನಡಿಯಣ್ಣಾ… ನನಗೂ ಅಂಗಾ ಅನಸಾಕತ್ತೇತಿ…. ನಮ್ಮ ಮ್ಯಾಲ ಯಾ ಜವಾಬ್ದಾರಿಗಳು ಗುಡಾ ಇಲ್ಲ. ಯಾಪಾರ..ಅಧಿಕಾರಗಳನ್ನೆಲ್ಲಾ ಮಕ್ಕಳೇ ನೋಡಿಕೊನಾಕತ್ಯಾವು. ಹ್ವಾದ ರ‍್ಷ ಅದೇನೋ ಪಾಸ್‌ ಪರ‍್ಟ ವಿಸಾ ಅದೆಲ್ಲಾ ಮಾಡಿಸಿದ್ದೆಲ್ಲಾ ಇದಕಾ ಏನು?, ಅಬಬಬೋ ಭಾರಿ ಬಿಡು ನೀನು. ಆತು ನಡಿಯಣ್ಣಾ ಹೋಗಾನ..ನಮಗೂ ಆ ಕಡಿ ಗಾಳಿ ಕುಡದಂಗಕ್ಕಾತಿ” ನಿರುಮ್ಮಳವಾಗಿ ಒಪ್ಪಿದನು ಕೆಂಚನ ಗೌಡ.
ಅಷ್ಟೇ….
ಬರೋ ವಾರಕ್ಕೇನೇ.. ಎಲ್ಲಾ ಹೊಂದಿಸಿಕೊಂಡರು.
ವಿಮಾನ ಗಾಳಿಯೊಳಗೆ ಹಾರಿತು.
***
ಕೆಂಚನ ಗೌಡ, ಮಲ್ಲನ ಗೌಡರು ಅತ್ತ ಅಮೇರಿಕಾಕ್ಕೆ ಹೋಗುತ್ತಲೇ…
ಇತ್ತ ಹೊಸ ಎಂ. ಎಲ್.ಎ. ವೀರನ ಗೌಡನ ಬೆಂಬಲಿಗರೊಂದಿಗೆ ಫಕ್ಕೀರ ಗೌಡ ಎದ್ದು ಕುಂತನು.
ಊರೊಳಗೆ ತನಗೆ ಎಡಗೈ ಬಲಗೈ ಆಗಿದ್ದ ಬಾರಕೀರ ಸಿದ್ಧಪ್ಪ, ತಳವಾರ ರೇವಣ ಸಿದ್ಧಪ್ಪನನ್ನ ಬೆನ್ನ ಹಿಂದೆ ಇಟ್ಟಕೊಂಡು ಹೊಲಗಳಿಗೆ ಕೆಲಸಕ್ಕೆಂದು ಬರುವ ಚಂದುಳ್ಳ ಹೆಣ್ಣುಮಕ್ಕಳನ್ನು ಬಿಡದೆ ಅನುಭವಿಸುವುದನ್ನು ಶುರುಮಾಡಿದನು.
ತನ್ನ ಹತ್ತಿರಕ್ಕೆ ನ್ಯಾಯ ಕೇಳಿಕೊಂಡು ಬರುವ ಬಡಜನರನ್ನು ಪೀಡಿಸಿ ಹಣ ವಸೂಲಿ ಮಾಡುವುದು…
ವಾರ ಬಡ್ಡಿಗೆ ರೊಕ್ಕ ಕೊಟ್ಟು ತನಗೆ ಬೇಕಾದಂಗೆ ಬಾಂಡು ಬರೆಸಿಕೊಂಡು… ಮನಿ ಮಠ ಎತ್ತಾಕಿಕೊಳ್ಳೋದು.
ಅಡ್ಡ ಬಂದವರನ್ನ…
ತಿರುಗಿ ಬಿದ್ದವರನ್ನ…
ಹಿಡಿ ಹಿಡಿದು ಊರ ಹೊರಗಿನ ತೋಟದ ಮನಿಗೆ ತಂದು ನಾದಿ ನಾದಿ.. ನರಗಳನ್ನ ಕತ್ತಿರಿಸೋದ ಮಾಡತೊಡಗಿದ.
ಫಕ್ಕೀರ ಗೌಡನ ಏಟಿಗೆ ಎದುರೇ ಇಲ್ಲದಂಗಾತು.
ಭೂಮಿ ಹುಚ್ಚು ಹಿಡಿಯಿತು.
ತನಗೆ ಹಿಡಿಸಿದ ಕಾಲುವೆ ಮ್ಯಾಗಳ ಭೂಮಿಗಳ ಮೇಲೆಲ್ಲಾ ಕಣ್ಣಾಕಿದ.
ರಾತ್ರೋ ರಾತ್ರಿ ನಂಬರ್‌ ಕಲ್ಲುಗಳನ್ನ ಬದಲಿಸಲು ಹೇಳಿದ…
ಹಳ್ಳಗಳನ್ನು ಮಾಯ ಮಾಡಿಸಿದ…
ಭೂಮಿಗಳನ್ನೆಲ್ಲಾ ಖಬ್ಜಾ ಮಾಡಿಕೊಳ್ಳ ತೊಡಗಿದ.
ಫಕ್ಕೀರ ಗೌಡನ ಕಡೆಯೋರಿಗೆಲ್ಲಾ ಇದೇ ಕಸಬಾಯಿತು.
ಅವರೆಲ್ಲಾ ಈ ಕಸಬಿನೊಳಗೇ ಮುಳುಗಿ ಹೋದರು.
ವೀರ ಭದ್ರಿಯ ಮನಸೆಲ್ಲಾ ಉರಿಯುತ್ತಿದೆ.
ರಕ್ತ ಕುದಿಯುತ್ತಿದೆ.
ಇದಕ್ಕೆ ನಾನು ಅಡ್ಡಲಾಗಬೇಕು.
ನನ್ನ ಭೂಮಿನ ನಾನು ಉಳಿಸಿಗ್ಯಾಬೇಕು.
***
ಅರಳೀ ಮರದ ರೆಂಬೆಗಳು ಗಾಳಿಗೆ ಸಣ್ಣಗೆ ತೂಗುತ್ತಿವೆ…
ಹೊತ್ತುಟ್ಟಿ ಎಳೆ ಬಿಸಿಲು ಬಿದ್ದು ಎಲೆಗಳೆಲ್ಲಾ ಥಳ ಥಳನೇ ಹೊಳೆಯುತ್ತಿವೆ…. ಪಕ್ಷಿಗಳ ಕೊರಳಿಂದ ನೂರಾ ಒಂದು ಸದ್ದು….
ಮರದ ರೆಂಬೆಗಳು ತೂಗುತ್ತಾ ತೂಗುತ್ತಾ ನೆಲದ ಬಳಿಗೆ ಹಾಯುತ್ತಿವೆ. ಅವು ಭೂಮಿ ತಾಯಿಯನ್ನ ಪ್ರೀತಿಯಿಂದ ಮುತ್ತಿಡಲು ಬಾಗಿದಂಗೆಯೇ ಕಾಣುತ್ತವೆ…
ಒಂದು ಕೈಯೊಳಗೆ ಖಡ್ಗವನ್ನು ಮತ್ತೊಂದು ಕೈಯೊಳಗೆ ಕುದುರೆಯ ಹಗ್ಗವನ್ನು ಹಿಡಕೊಂಡು ಹೋರಾಟ ಮಾಡುತ್ತಿರುವ ವೀರಗಲ್ಲೊಂದು ಆ ಮರದ ಪೊಟರೆಯೊಳಗೆ ಅತುಕೊಂಡು ನಿಂತಿದೆ.
ಅದೇ ಕಟ್ಟೆಯ ಮೇಲೆ ಊರ ಹಿರೀಕರು ಕುಳಿತಿದ್ದಾರೆ. ಉಳಿದವರೆಲ್ಲಾ ನೆಲದ ಮ್ಯಾಲೆಯೇ ಕುಳಿತಿದ್ದಾರೆ.
“ ಹಂಗಾದ್ರೆ… ಏನಂತಿಯಾ…ವೀರಭದ್ರೀ…? ಫಕ್ಕೀರ ಗೌಡ್ರು ನಿನ್ನ ಭೂಮಿನಾ ಒತ್ತಿಕ್ಯಂಡಾನ ಅಂತೀಯಾ? ಹಂಗದ್ರ ನೀನು ಆತನ್ನಾ… ಭೂಮಿ ಕಳ್ಳಾ ಅಂತೀಯಾ!?” ಅಂತಾ ಕೇಳಿದನು ರೇವಣಪ್ಪ.
ಅತ್ತ ಕಿವಿಗೊಡದೇ ಪಂಚಾಯ್ತಿ ಕಟ್ಟೆ ಕಡೆಗೆ ತಿರುಗಿದ ವೀರಭದ್ರಿ “ ಏನೇಳ್ತೀರಿ ಗೌಡ್ರೇ…ಎಕರಿಯಿಂದ ಈಗ ಎಲ್ಡೆಕ್ರೀ ಹಿಡದಾರ, ರಾತ್ರಿಗೆ ರಾತ್ರಿಯೇ ಮ್ಯಾರಿ ಕಲ್ಲು ಕಿತ್ತು ಈ ಕಡಿಗೆ ಹುಗುದಾರ. ಇದರ ಮ್ಯಾಲ ಪಂಚಾಯ್ತಿ ಇಟ್ಟರ ಅವರೇ ಹೇಳಿದ್ದ ಕೇಳಬೇಕು ಅಂತ ಅವತ್ತು ಕಳಿಸಿಬಿಟ್ಟಿರಿ. ಈಗ ಅವರೇ….ಸರಕಂತಾ ಸರಕಂತಾ.. ಹೊಲವೀಟೂ ಹಿಡದಾರ… ಈಗ ನಮಗ ಉಳಿದಿರೋದು ಹಳ್ಳದ ತುಂಡು ಹೊಲ ಒಂದಾ… ಅದು ಕೂಡಾ ಮೊನ್ನೆ ರಾತ್ರಿ ಫಕ್ಕೀರ ಗೌಡ್ರ ಭೂಮಿ ಒಳಗಾ ಬರತೈತಿ ಅನ್ನಂಗ ಮ್ಯಾರಿ ಕಲ್ಲು ಕಿತ್ತಕ್ಯಾರಪ್ಪೋ… ಇನ್ನ ನಾನೇನ್‌ ಮಾಡದು?” ಅಂತಾ ವೀರಭದ್ರ ದುಃಖಿಸಿದನು.
ಕಟ್ಟಿ ಮ್ಯಾಗ ಕುಂತ ದೊಡ್ಡ ಜನರೆಲ್ಲಾ ಆನಂದ ಪಡುತಿದ್ದರೆ ಕೆಳಗೆ ನೆಲದ ಮೇಲೆ ಕುಂತ ಹಳ್ಳಿ ಜನರು ಕಕ್ಕ ಬಿಕ್ಕಿಯಾಗಿ ನೋಡ್ತಾ ಇದ್ರು.
ಮರದ ಬುಡದಲ್ಲೇ ನಿಂತ ಫಕ್ಕೀರ ಗೌಡ ಮೀಸಿ ತಿರುವುತಿದ್ದಾನೆ.
ಮರದ ಕೊಂಬೆಗಳ ತೂಗಾಟವಿಲ್ಲ. ಶಬ್ದಗಳಿಲ್ಲ…. ಪಕ್ಷಿಗಳ ಕಲರವವಿಲ್ಲ…
ಕಣ್ಣಗಲಕ್ಕೂ….ವೀರಭದ್ರ ಅಳುತ್ತಿರುವ ನೋಟ.
“ ಅತ್ತು ಬಿಡಲೇ… ಗಂಡಸು ಅತ್ರೆ ಮುಂಡೆ ನೋಡಿದಂಗ ಅಕ್ಕಾತಿ…. ತಟಗನ್ನಾ ರೋಷವಿಲ್ಲದ ಕಳ್ಳ ಸೂಳೇ ಮಗನೇ…ನಮ್ಮ ಫಕ್ಕೀರ ಗೌಡ್ರನ್ನ ಪಂಚಾಯ್ತಿಗೆ ಕರಿತೀಯಾ ನೀನು!? ಅವ್ರ ಮೇಲೆನೇ… ಭೂಮಿ ಕಳುವು ಹೊರಸ್ತೀಯಾ?… ಅಂದ್ರ ಕಳ್ಳ ಅಂತೀಯೇನ್ಲೇ…
ಅಂತ ಪೊಗರು ಬಂದತೇನ್ಲೇ ನಿನಗೆ…” ಎಂದು ಎಗರಿ ಜಾಡಿಸಿ ಒದ್ದ ಬಾರಿಕೇರ ಸಿದ್ದಪ್ಪ.
ವೀರಭದ್ರಿ ಸಿಡಿದು ಅಷ್ಟು ದೂರ ಉರುಳಿದ.
ಏಳಲು ಹೋದವನಿಗೆ ಮತ್ತೊಂದು ಒದೆ ಬಿತ್ತು.
ಇದೇ ಅವಕಾಶ ನೋಡಿಕೊಂಡು ಫಕ್ಕೀರ ಗೌಡ ಕೂಡಾ ಒದೆಯಲು ಶುರುವಿಟ್ಟನು.
“ ಬೀಳ್ಲಿ ಸೊಕ್ಕು ಕರಗತಾವು. ಏಟು ತಿಮರು ಇರಬೇಕು ಈ ತಿರಬೋಕಿಗೆ ನಮ್ಮ ಗೌಡನ್ನ ಪಂಚಾಯ್ತಿಗೆ ಕರಸಾಕ. ಇನ್ನಾ ನಾಕು ಹಾಕ್ರಿ. ಬುದ್ಧಿ ರ‍್ತಾವು… ಲಮ್ಡಿ ನನ ಮಗನಿಗೆ” ….ಕುಂತು ಕಾರಿಕೊಂಡ ತಳವಾರ ರೇವಣಪ್ಪ.
ವೀರ ಭದ್ರನಿಗೆ ಎರಡೂ ಕಡೆಯಿಂದ ಏಟು ಬೀಳತೊಡಗಿದವು.
ಒಂದು ಕಡಿಗೆ ಸಿದ್ದಪ್ಪ, ಇನ್ನೊಂದು ಕಡಿಗೆ ಫಕ್ಕೀರ ಗೌಡ…. ಕೆಳಗೆ ಬೀಳಿಸಿಕೊಂಡು ರುಬ್ಬತೊಡಗಿದರು.
ಈ ರ‍್ತಿ ಫಕ್ಕೀರ ಗೌಡನು ಹಿಡಿದು ಎಳೆದು ಒದ್ದ ಏಟಿಗೆ ವೀರ ಭದ್ರ ಹಾರಿ ಮರದ ಪೊಟರಿ ಹತ್ರ ಬಿದ್ದ.
ಆತನ ಇನ್ನೊಂದು ಹೊಡ್ತ ಬೀಳೋ ಮುನ್ನವೇ ಬಗಲಾಗ ನೇತಾಡುತಿದ್ದ ಚೀಲದಿಂದ ಗಂಡು ಗೊಡಲಿ ತೆಗೆದು ಮಿಂಚಿನಂತೆ ಮೇಲಕ್ಕೆದ್ದ…
ಸುತ್ತು ಸೇರಿದ ಜನರು ಓಟ ಕಿತ್ತರು…
ವೀರಭದ್ರಿ ಬೀಸಿದ ಒಂದೇ ಒಂದು ಏಟಿಗೆ ಫಕ್ಕೀರ ಗೌಡನ ತಲೆ ಹಾರಿ ಕುಳ್ಳು ತುಂಬಿದ ಗೋಣೀ ಚೀಲದೊಳಕ್ಕೆ ಬಿತ್ತು!
ಇದನ್ನ ನೋಡಿ ಪ್ರಾಣವನ್ನ ಅಂಗೈಲೇ… ಹಿಡಕೊಂಡು ಓಡಲು ನೋಡಿದ ಬಾರಕೇರ ಸಿದ್ಧಪ್ಪ.
ಬೆನ್ನಟ್ಟಿ ಹಿಡಿಯಿತು ವೀರಭದ್ರನ ರುದ್ರಾವತಾರ!
ಹಾರಿ.. ಸಿದ್ಧಪ್ಪನು ಒದ್ದ ಬಲಗಾಲನ್ನು ಕಡಿದು ಬಿಟ್ಟ.
ಹಾ….ಎಂದು ಕುಸಿದ ಸಿದ್ಧಪ್ಪನ ಬಾಯನ್ನ ಹಂಗೇ ಗಂಡು ಗೊಡಲಿಯೊಳಗೆ ಕಡಿದು ಎರಡು ಹೋಳು ಮಾಡಿಬಿಟ್ಟ!
ತಲೆ ತುಂಬಾ ಮಾತಾಡಿದ ತಳವಾರ ರೇವಣಪ್ಪ ಓಡಲೆಂದು ನೋಡಿದನೇ ವಿನಃ. ಆತನ ಕೈ ಕಾಲೇ ಆಡುತಿಲ್ಲ. ನಿಂತಲ್ಲೇ ನಡುಗುತ್ತಾ… ರೇವಣಿ ಎದೆ ಒಡೆದು ಹಂಗೇ ಕುಸಿದು ಪ್ರಾಣ ಬಿಟ್ಟ!
ಅದರೂ…
ಬಿಡದ ವೀರಭದ್ರ ಎಳೆದು ಅವನ ರುಂಡವನ್ನ ಎಗರಿಸಿದ. ಅದು ಹಾರಿ ವೀರಗಲ್ಲಿನ ಪೊಟರೆಯ ಎದುರು ಕಾವಲು ಕಾಯುವಂತೆ ಕುಂತಿತು!
ಅವತ್ತೇ ಕೊನೆ….
ಊರೊಳಗೆ ಹದ್ದುಗಳು ಹಾರಿದ್ದು….
ಊರೊಳಗೆ ಪಾಪದ ಕೆಲಸ ನಿಂತವು.
ಊರ ಪಂಚಾಯ್ತಿಗಳು ನಿಂತವು.
ಊರೀಗ ಊರಿನಂತೆಯೇ ಇದೆ.
ಕಾಲ ಕಾಲಕ್ಕೆ ಮಳೆಯಾಗುತ್ತಿದೆ.
ಕಾಲುವೆಗಳು ತುಂಬಿ ಹರಿಯುತ್ತಿವೆ.
ಎಲ್ಲರ ಹೊಲಗಳೂ ಹಚ್ಚ ಹಸಿರಾಗಿವೆ.
ಎಲ್ಲರೂ ಸಮನಾಗಿ ಬಾಳುತಿದ್ದಾರೆ.
ಮರದ ಕೊಂಬೆಗಳು ಎಂದಿನ ಹಾಗೇ ನೆಲ ತಾಯಿಯ ಕೆನ್ನೆಗೆ ಬಾಗಿ ಮುದ್ದಿಡಲು ನೋಡುತ್ತಿವೆ.
ಸಣ್ಣಗೆ ಹನಿವ ಹನಿಗಳ ನಡುವೆ ಮೂಡಿದ ಕಾಮನ ಬಿಲ್ಲಿನ ಚಲುವಾದ ಬಣ್ಣಗಳು ಮುಗಿಲ ಸೆರಗನ್ನು ತುಂಬಿಕೊಂಡಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending