ಲೋಕಾರೂಢಿ

ಅರ್ಥವ್ಯವಸ್ಥೆ ಗಂಭೀರ ಸ್ಥಗಿತತೆಯತ್ತ ಜಾರುತ್ತಿದೆ : ಮೋದಿ ಅಂಡ್ ಕೊ ಗೆ ಇದರ ಪರಿವೆಯೂ ಇಲ್ಲ

Published

on

  • ಸರಕಾರ ಅಂಕಿ-ಅಂಶಗಳಲ್ಲಿ ಏನೇ ಕಸರತ್ತು ಮಾಡಿದರೂ, 2019-20ರ ಹಣಕಾಸು ವರ್ಷದ ಜಿಡಿಪಿ ವೃದ್ಧಿದರ 5ಶೇ.ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ಈಗ ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್‌ಎಸ್‌ಒ) ಹೇಳುತ್ತಿದೆ. ಇದು ಕಳೆದ 11 ವರ್ಷಗಳಲ್ಲೇ ಅತೀ ಕಡಿಮೆ ವೃದ್ಧಿದರ. ವಿವಿಧ ಹಣಕಾಸು ಸಂಸ್ಥೆಗಳ ಈ ಕುರಿತ ಅಂದಾಜುಗಳು ಇನ್ನೂ ಕೆಳಮಟ್ಟದಲ್ಲಿ ಇವೆ. ನಮ್ಮ ಮೇಲೀಗ ಒಂದು ಗಂಭೀರ ಆರ್ಥಿಕ ಸ್ಥಗಿತತೆಯ ಹೊರೆ ಬಿದ್ದಿದೆ. ಇದನ್ನು ನಿವಾರಿಸಿಕೊಳ್ಳಬೇಕಾದರೆ, ನವ-ಉದಾರವಾದದ ಒಪ್ಪಿಗೆಯನ್ನು ಲೆಕ್ಕಿಸದೆ, ಅದನ್ನು ಮೀರಿ ಬಹಳ ದೂರ ಹೋಗುವ ಒಂದು ಶಕ್ತಿಶಾಲೀ ಹಣಕಾಸು ಮಧ್ಯಪ್ರವೇಶವನ್ನು ಮಾಡಬೇಕಾಗುತ್ತದೆ. ಬೇಸರದ ಸಂಗತಿಯೆಂದರೆ ಮೋದಿ ಮತ್ತು ಕಂಪನಿಗೆ ಇದರ ಯೋಚನೆಯೂ ಇಲ್ಲ.

ಪ್ರೊ. ಪ್ರಭಾತ್ ಪಟ್ನಾಯಕ್
ಅನುವಾದ : ಕೆ.ವಿ

ಭಾರತೀಯ ಅರ್ಥವ್ಯವಸ್ಥೆಯನ್ನು ಕುರಿತ ಅಂಕಿ-ಅಂಶಗಳು ಅವನ್ನು ಅಂದಾಜು ಮಾಡುವ ವಿಧಾನಗಳಲ್ಲಿ ಮಾಡುತ್ತಿರುವ ಬದಲಾವಣೆಗಳಿಂದಾಗಿ ಹೆಚ್ಚೆಚ್ಚು ತಬ್ಬಿಬ್ಬುಗೊಳಿಸುವಂತದ್ದಾಗಿ ಬಿಡುತ್ತಿವೆ. ಅಲ್ಲದೆ, ಈ ಅಂಕಿ-ಅಂಶಗಳು ಅರ್ಥವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತೋರಿಸಿದಾಗಲೆಲ್ಲ ಬಿಜೆಪಿ ಸರಕಾರ ಅದನ್ನು ಬಚ್ಚಿಟ್ಟು ಬಿಡುತ್ತದೆ. ಆದರೆ ಭಾರತದ ಅರ್ಥವ್ಯವಸ್ಥೆ ಒಂದು ಗಂಭೀರ ಸ್ಥಗಿತತೆಯ ಸ್ಥಿತಿಗೆ ಜಾರುತ್ತಿದೆ ಎಂಬುದನ್ನು ಕಾಣದಂತೆ ಮಾಡುವುದು ಯಾವುದರಿಂದಲೂ ಸಾಧ್ಯವಿಲ್ಲ.

ಈ ಹಣಕಾಸು ವರ್ಷದ 3ನೇ ತ್ರೈಮಾಸಿಕದ(ಅಕ್ಟೋಬರ್-ಡಿಸೆಂಬರ್) ಜಿಡಿಪಿ ಕಳೆದ ವರ್ಷದಲ್ಲಿ ಈ ಅವಧಿಯಲ್ಲಿನ ಬೆಳವಣಿಗೆಗೆ ಹೋಲಿಸಿದರೆ 4.7ಶೇ.ದಷ್ಟು ಮಾತ್ರ ಬೆಳೆದಿದೆ. ಎರಡನೇ ತ್ರೈಮಾಸಿಕದಲ್ಲಿ ಈ ಬೆಳವಣಿಗೆ ದರ 4.5ಶೇ. ಇತ್ತು. 2019-20ರ ಹಣಕಾಸು ವರ್ಷದ ಜಿಡಿಪಿ ವೃದ್ಧಿದರ 5ಶೇ.ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ಈಗ ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್‌ಎಸ್‌ಒ)ಯ ನಂಬಿಕೆ. ವಿವಿಧ ಹಣಕಾಸು ಸಂಸ್ಥೆಗಳ ಈ ಕುರಿತ ಅಂದಾಜುಗಳು ಇನ್ನೂ ಕೆಳಮಟ್ಟದಲ್ಲಿ ಇವೆ.

5ಶೇ. ಎಂದೇ ಇಟ್ಟುಕೊಂಡರೂ, ಇದು ಕಳೆದ 11 ವರ್ಷಗಳಲ್ಲೇ ಅತೀ ಕಡಿಮೆ ವೃದ್ಧಿದರ. ಜಿಡಿಪಿಯನನು ಅಂದಾಜು ಮಾಡುವ ಹೊಸ ವಿಧಾನ ವೃದ್ಧಿದರವನ್ನು ಗಂಭೀರವಾಗಿ ಮೇಲಂದಾಜು ಮಾಡುತ್ತದೆ ಎಂಬುದೀಗ ಬಹಳ ಸ್ಪಷ್ಟವಾಗಿರುವ ಸಂಗತಿ. ನಿಜ ಹೇಳಬೇಕೆಂದರೆ, ಆರ್ಥಿಕ ಮಂದಗತಿ ಆರಂಭವಾಗುವ ಮೊದಲಿನ ಅವಧಿಯಲ್ಲಿ 7ಶೇ. ವೃದ್ಧಿದರ ಇತ್ತು ಎಂದು ಹೇಳಿಕೊಂಡಿದ್ದರೂ ನಿಜವಾದ ವೃದ್ಧಿದರ ಸುಮಾರು 4.5ಶೇ.ದಷ್ಟು ಇದ್ದಿರಬಹುದು ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರರೊಬ್ಬರು ಸೂಚಿಸಿದ್ದರು. ಇದರ ಅರ್ಥ,5ಶೇ. ಅಧಿಕೃತ ವೃದ್ಧಿದರ ವಾಸ್ತವವಾಗಿ ಅದಕ್ಕಿಂತ ಕಡಿಮೆ, ಬಹುಶಃ ಸುಮಾರು 3ರಿಂದ 3.5ಶೇ. ದಾಟಲಾರದ ದರವನ್ನು ಸೂಚಿಸುತ್ತಿರಬಹುದು. ಇದನ್ನು ಈ ಹಿಂದಿನ ದಿನಗಳಲ್ಲಿ ‘ಹಿಂದೂ ವೃದ್ಧಿ ದರ’ ಎಂದು ಕುಚೋದ್ಯ ಮಾಡಲಾಗುತ್ತಿತ್ತು.

ಹಿಂದುತ್ವ ಶಕ್ತಿಗಳ ಉಚ್ಛ್ರಾಯ ವೃದ್ಧಿದರವನ್ನೂ ಕೂಡ ಹಿಂದೂಕರಿಸಿದಂತೆ ಕಾಣುತ್ತದೆ! ಆದರೆ ಈ 3.5ಶೇ. ವೃದ್ಧಿ ಮತ್ತು ಆ ಹಳೆಯ ದಿನಗಳ 3.5ಶೇ.ದ ನಡುವೆ ಕೆಲವು ಮಹತ್ವದ ವ್ಯತ್ಯಾಸಗಳಿವೆ. ಅವುಗಳಲ್ಲಿ ಕನಿಷ್ಟ ಮೂರನ್ನು ಗಮನಿಸಲೇ ಬೇಕಾಗಿದೆ.

ಮೊದಲನೆಯದಾಗಿ, ಆ ಹಳೆಯ ದಿನಗಳ 3.5ಶೇ. ಜಿಡಿಪಿ ವೃದ್ಧಿದರದೊಂದಿಗೆ ಅದಕ್ಕಿಂತ ಬಹಳ ಹೆಚ್ಚಿನ ಉದ್ಯೋಗ ವೃದ್ಧಿ ದರಗಳು ಇರುತ್ತಿದ್ದವು. ಏಕೆಂದರೆ ಆಗ ಶ್ರಮವನ್ನು ಹೊರಹಾಕುವ ತಂತ್ರಜ್ಞಾನ-ಸಂರಚನಾ ಬದಲಾವಣೆಗಳನ್ನು ತರುವುದರ ಮೇಲೆ ನಿರ್ಬಂಧಗಳಿದ್ದವು.

ಎರಡನೆಯದಾಗಿ, ಆದಾಯ ವಿತರಣೆಯಲ್ಲಿನ ಅಸಮಾನತೆ ಈ ದಿನಗಳಲ್ಲಿ ಹೆಚ್ಚುತ್ತಿರುವಂತೆ ಆ ಕಾಲದಲ್ಲಿ ಇರಲಿಲ್ಲ. ನಿಜಸಂಗತಿಯೆಂದರೆ, ಪಿಕೆಟಿ ಮತ್ತು ಚಾನ್ಸೆಲ್ ಆದಾಯ ತೆರಿಗೆ ದತ್ತಾಂಶಗಳ ಆಧಾರದಲ್ಲಿ ಅಂದಾಜು ಮಾಡಿರುವಂತೆ 1980ರ ದಶಕದ ಆರಂಭದಲ್ಲಿ ಅತ್ಯಂತ ಮೇಲಿನ 1ಶೇ. ಕುಟುಂಬಗಳ ಪಾಲು ೬ಶೇ.ದಷ್ಟು ಕಡಿಮೆ ಮಟ್ಟದಲ್ಲಿತ್ತು. ಅದೀಗ 2013-14 ರವೇಳೆಗೆ 22ಶೇ.ಕ್ಕೆ ಜಿಗಿದಿದೆ. 1922ರಲ್ಲಿ ಭಾರತದಲ್ಲಿ ಆದಾಯ ತೆರಿಗೆಯನ್ನು ಆರಂಭಿಸಿದ ನಂತರ ಎಂದೂ ಅದು ಈ ಮಟ್ಟಕ್ಕೆ ಏರಿರಲಿಲ್ಲ.

ಮೂರನೆಯದಾಗಿ, ಕೃಷಿಯಲ್ಲಿ, ಅದರಲ್ಲೂ ಆಹಾರಧಾನ್ಯಗಳ ಗಮನಾರ್ಹ ವೃದ್ಧಿದರ ಒಟ್ಟಾರೆ ವೃದ್ಧಿದರವನ್ನು ಉಳಸಿಕೊಂಡು ಬರುತ್ತಿತ್ತು. ಈ ಮೂಲಕ ವಸಾಹತುಶಾಹೀ ಆಳ್ವಿಕೆಯ ಕೊನೆಯ ಅರ್ಧ ಶತಮಾನದಲ್ಲಿದ್ದ ತೀವ್ರ ಬರದ ಪ್ರವೃತ್ತಿ ಬದಲಾಗಿ ತಲಾ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಲಭ್ಯತೆ ಗಮನಾರ್ಹವಾಗಿ ಹೆಚ್ಚಿದ್ದವು. ತಲಾ ಲಭ್ಯತೆ 1900ರಲ್ಲಿ 200 ಕೆ.ಜಿ. ಇದ್ದದ್ದು ಸ್ವಾತಂತ್ರ್ಯದ ವೇಳೆಗೆ 140 ಕೆ.ಜಿ.ಗೆ ಇಳಿದಿತ್ತು. 1980ರ ದಶಕದ ವೇಳೆಗೆ ಅದು 180 ಕೆ.ಜಿ. ಬಳಿ ತಲುಪಿತ್ತು. ಆನಂತರ ಮತ್ತೆ ಇಳಿದಿದೆ.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಉದಾರೀಕರಣದ ಹಿಂದಿನ ಅವಧಿಯಲ್ಲಿ ಜಿಡಿಪಿ ವೃದ್ಧಿದರ ಕಡಿಮೆಯಿದ್ದರೂ, ವಿತರಣೆಯಲ್ಲಿನ ಅಸಮಾನತೆ ಕಡಿಮೆಯಿತ್ತು, ಮತ್ತು ಹಸಿವನ್ನು, ನವ-ಉದಾರವಾದ ಶಿಖರಕ್ಕೇರಿದ್ದ ಅವಧಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಶಮನ ಗೊಳಿಸಿತ್ತು. ಈಗ ಮಂದಗತಿಯನ್ನು ಕಾಣುತ್ತಿರುವಾಗಲಂತೂ ಹೇಳುವಂತೆಯೆ ಇಲ್ಲ.

2018-19ರಲ್ಲಿ ವೃದ್ಧಿ ದರ 6.1ಶೇ. ಎಂದು ಅಂದಾಜು ಮಾಡಲಾಗಿತ್ತು. ಇದಕ್ಕೆ ಹೋಲಿಸಿದರೆ 2019-20ರ ಮಂದಗತಿಯ ಬೆಳವಣಿಗೆಗೆ ಮುಖ್ಯವಾಗಿ ಕಾರಣ ಕೃಷಿಯೇತರ ವಲಯದಲ್ಲಿನ ಮಂದಗತಿ. ಕೃಷಿವಲಯದಲ್ಲಿನ ವೃದ್ಧಿ ದರ 2019-20ರಲ್ಲಿ ಹಿಂದಿನ ವರ್ಷದಲ್ಲಿ ಇದ್ದಷ್ಟೇ ಇರುತ್ತದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ ಕಳೆದ ವರ್ಷ 2.88ಶೇ. ಇದ್ದರೆ ಈ ವರ್ಷ 2.9ಶೇ. ಇರಬಹುದು. ಅಂದರೆ ಸುಮಾರಾಗಿ ಸ್ಥಿರವಾಗಿದೆ. ಬೇರೆ ವಲಯಗಳಲ್ಲಿ ಮಾತ್ರ ವೃದ್ಧಿದರ ಮಂದಗತಿಗಿಳಿದಿದೆ, ಇದರಿಂದಾಗಿ ಒಟ್ಟಾರೆ ವೃದ್ಧಿದರ 5ಶೇ.ಕ್ಕೆ ಇಳಿಯಬಹುದೆಂದು ಹೇಳಲಾಗುತ್ತಿದೆ. ವಿಶೇಷವಾಗಿ ಎದ್ದು ಕಾಣುತ್ತಿರುವ ಸಂಗತಿಯೆಂದರೆ ಕೈಗಾರಿಕಾ ವೃದ್ಧಿ, ಅದರಲ್ಲೂ ತಯಾರಿಕಾ ವಲಯದ ಬೆಳವಣಿಗೆ ನಿಧಾನಗೊಳ್ಳುತ್ತಿದೆ.

ಸರಕಾರ ಕೈಗಾರಿಕಾ ವೃದ್ಧಿ ದರ ಸುಮಾರು 2ಶೇ.ದಷ್ಟಿರಬಹುದು ಎಂದು ನಿರೀಕ್ಷಿಸುತ್ತಿದೆ. ಆದರೆ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ವಾಸ್ತವವಾಗಿ ವೃದ್ಧಿದರ ನಕಾರಾತ್ಮಕವಾಗಿತ್ತು. ಹೀಗಿರುವಾಗ 2ಶೇ. ವೃದ್ಧಿಯ ಸಂಭವವೂ ಬಹಳ ಕಡಿಮೆ. ಕೃಷಿ ವಲಯದ ವೃದ್ಧಿದರ ಬದಲಾಗದಿರುವಾಗ ಕೈಗಾರಿಕಾ ವಲಯದಲ್ಲಿ ಮಂದಗತಿ ಮೇಲ್ನೋಟಕ್ಕೆ ವಿಚಿತ್ರವೆನಿಸಬಹುದು. ಆದರೆ ಇದಕ್ಕೆ ಮೂರು ಮೂಲ ಕಾರಣಗಳಿವೆ.

ಒಂದು, ಕೃಷಿ ವೃದ್ಧಿ ದರ ಮತ್ತು ಗ್ರಾಮೀಣ ಬಳಕೆ ಖರ್ಚುಗಳ ವೃದ್ಧಿ ದರ ಎರಡೂ ಒಂದೇ ಅಲ್ಲ. ಕೃಷಿ ವೃದ್ಧಿ ದರ ಹೆಚ್ಚಿದ್ದಾಗಲೂ ಗ್ರಾಮೀಣ ಬಳಕೆ ಖರ್ಚುಗಳ ಏರಿಕೆಯಲ್ಲಿ ಮಂದಗತಿ ಕಾಣ ಬಹುದು. ಇದಕ್ಕೆ 2017-18 ಒಂದು ಒಳ್ಳೆಯ ಉದಾಹರಣೆ. ಅದು ಬಂಪರ್ ಬೆಳೆ ಬಂದ ವರ್ಷವಾಗಿತ್ತು. ಆದರೂ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ದತ್ತಾಂಶಗಳ ಪ್ರಕಾರ ಆ ವರ್ಷ ಗ್ರಾಮೀಣ ಭಾರತದಲ್ಲಿ ತಲಾ ನಿಜ ವೆಚ್ಚ 2011-12ಕ್ಕೆ ಹೋಲಿಸಿದಾಗ ಬಹಳ ಕಮ್ಮಿಯಿತ್ತು, ಸುಮಾರು ೮ಶೇ.ದಷ್ಟು. ಇದು ಕೃಷಿ ವೃದ್ಧಿ ಅಂದಾಜುಗಳಲ್ಲಿನ ದೌರ್ಬಲ್ಯಗಳಿಂದ ಆಗಿರಬಹುದು, ಅಥವ ಹೆಚ್ಚು ಮಹತ್ವದ್ದೆಂದರೆ, ರೈತರು ಮತ್ತು ಕೃಷಿ ಕೂಲಿಕಾರರ ಜೀವನ ವೆಚ್ಚ ಸೂಚ್ಯಂಕ ನಿಜ ಚಿತ್ರವನ್ನು ಇದ್ದುದಕ್ಕಿಂತ ಬಹಳ ಕೆಳಗಿನ ಮಟ್ಟದಲ್ಲಿ ಲೆಕ್ಕ ಹಾಕಿರುವುದರಿಂದಾಗಿ ಇರಬಹುದು. ಏಕೆಂದರೆ ಅದು ಶಿಕ್ಷಣ ಮತ್ತು ಆರೋಗ್ಯಪಾಲನೆಯ ಖಾಸಗೀಕರಣದಿಂದಾಗುವ ವೆಚ್ಚದ ಹೆಚ್ಚಳದ ಪರಿಣಾಮಗಳನ್ನು ಗಮನಕ್ಕೆ ತಗೊಂಡಿಲ್ಲ.

ಎರಡು, ಒಂದು ನವ-ಉದಾರವಾದಿ ಅರ್ಥವ್ಯವಸ್ಥೆಯಲ್ಲಿ ಹೊರಗಣ ಮಾರುಕಟ್ಟೆಯ ಪಾತ್ರ ಆಂತರಿಕ ಮಾರುಕಟ್ಟೆಗೆ ಹೋಲಿಸಿದರೆ ಬಹಳಷ್ಟು ಹೆಚ್ಚುತ್ತದೆ. ಏಕೆಂದರೆ, ಅಂತರ್ರಾಷ್ಟ್ರೀಯ ಸ್ಪರ್ಧಾತ್ಮಕತೆಯನ್ನು ಉತ್ತಮ ಪಡಿಸುವುದಕ್ಕಾಗಿ ಕೂಲಿ/ಸಂಬಳಗಳನ್ನು ಕೆಳಮಟ್ಟದಲ್ಲಿ ಇಡುವುದರ ಪರಿಣಾಮವಾಗಿ ಆಂತರಿಕ ಮಾರುಕಟ್ಟೆಯ ಮೇಲೆ ಉದ್ದೇಶಪೂರ್ವಕವಾಗಿಯೇ ನಿರ್ಬಂಧ ಉಂಟಾಗುತ್ತದೆ. ಇದು ಭಾರತೀಯ ಅರ್ಥವ್ಯವಸ್ಥೆಯಲ್ಲಿ ಚಟುವಟಿಕೆಯ ಮಟ್ಟದ ಮೇಲೆ ವಿಶ್ವ ಆರ್ಥಿಕ ಬಿಕ್ಕಟ್ಟು ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ದಾರಿ ಒದಗಿಸುತ್ತದೆ. ರಫ್ತು ವೃದ್ಧಿ ನಿಜವಾಗಿಯೂ ನಿಧಾನಗೊಂಡಿದೆ. ಇದು ಕೈಗಾರಿಕಾ ವಲಯವೂ ಸೇರಿದಂತೆ ಒಟ್ಟು ಅರ್ಥ ವ್ಯವಸ್ಥೆಯ ಮೇಲೆ ಹಲವಾರು ರೀತಿಗಳಲ್ಲಿ ಪರಿಣಾಮ ಬೀರಿದೆ.

ಇಲ್ಲಿ ಭಾರತದ ಅರ್ಥವ್ಯವಸ್ಥೆಯ ಒಂದು ವಿಲಕ್ಷಣತೆಯನ್ನು ಗಮನಿಸಬೇಕು. ಜಾಗತಿಕ ಸರಕು ಮತ್ತು ಬಂಡವಾಳ ಹರಿವಿಗೆ ತನ್ನನ್ನು ‘ತೆರೆದು’ಕೊಳ್ಳುವ ಮೂಲಕ ಭಾರತದ ಹಲವಾರು ಸೇವಾವಲಯದ ಉತ್ಪನ್ನಗಳ, ವಿಶೇಷವಾಗಿ ಐಟಿ-ಸಂಬಂಧಿತ ಸೇವೆಗಳ ರಫ್ತುಗಳು ಹೆಚ್ಚುವುದು ನಿಜವಾಗಿಯೂ ಸಾಧ್ಯವಾಗಿದೆ. ಆದರೆ ಕೈಗಾರಿಕಾ ವಲಯಕ್ಕೆ ಸಂಬಂಧಿಸಿದಂತೆ ಈ ರೀತಿ ‘ತೆರೆದಿಟ್ಟಿದ್ದ’ರಿಂದ ಭಾರತೀಯ ಅರ್ಥವ್ಯವಸ್ಥೆಗೆ ಯಾವುದೇ ನಿವ್ವಳ ಪ್ರಯೋಜನ ಆಗಿಲ್ಲ, ತದ್ವಿರುದ್ಧವಾಗಿ, ನಿವ್ವಳವಾಗಿ ನಕಾರಾತ್ಮಕ ಪರಿಣಾಮವೇ ಉಂಟಾಗಿರಬಹುದು. ನಿಜ ಹೇಳಬೇಕೆಂದರೆ ಕೈಗಾರಿಕಾ ವೃದ್ಧಿದರ ಇಡೀ ನವ-ಉದರವಾದೀ ಅವಧಿಯಲ್ಲಿ, ಅದಕ್ಕೆ ಮೊದಲಿದ್ದ ನಿರ್ಬಂಧಗಳ ಅವಧಿಗಿಂತ ಹೆಚ್ಚೇನೂ ಇರಲಿಲ್ಲ.

ಭಾರತೀಯ ಕೈಗಾರಿಕೆಗಳಿಗೆ ಆಂತರಿಕ ಮಾರುಕಟ್ಟೆಯಲ್ಲಿ, ಪೂರ್ವ ಏಷ್ಯಾದ, ಅದರಲ್ಲೂ ಚೀನಾದ ಸ್ಪರ್ಧೆಯನ್ನು ಎದುರಿಸಿ ನಿಲ್ಲಲು ಕಷ್ಟವೆನಿಸಿದ್ದು ಒಂದೆಡೆಯಾದರೆ, ರಫ್ತು ಮಾರುಕಟ್ಟೆಯಲ್ಲೂ ಬಹಳೇನೂ ಮುಂದೊತ್ತಲು ಆಗಲಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅರ್ಥವ್ಯವಸ್ಥೆಯನ್ನು ತೆರೆದಿಟ್ಟ ಪರಿಣಾಮವಾಗಿ ಕೆಲವು ಸೇವೆಗಳಿಗೆ ಉತ್ತೇಜನೆ ಸಿಕ್ಕಿದರೂ, ಕೈಗಾರಿಕಾ ಬೆಳವಣಿಗೆಯನ್ನು ದಬಾಯಿಸಿಟ್ಟಂತಾಯಿತು.

ಈಗ ನವ-ಉದಾರವಾದಕ್ಕೆ ಮುಂದೆ ದಾರಿಗಾಣದೆ ಜಾಗತಿಕ ಆರ್ಥಿಕ ವ್ಯವಸ್ಥೆ ಒಂದು ಮಂದಗತಿಯ ಅವಧಿಯನ್ನು ಪ್ರವೇಸಿಸಿರುವಾಗ, ಈ ಕೈಗಾರಿಕಾ ದಬಾವಣೆ, ಒಂದು ಕೈಗಾರಿಕಾ ಹಿನ್ನಡೆಯಾಗಿ ಪರಿವರ್ತನೆಗೊಂಡಿದೆ, ಅತ್ತ ಸೇವಾವಲಯಕ್ಕಿದ್ದ ಉತ್ತೇಜನೆ ಕೊನೆಗೊಳ್ಳುತ್ತಿದೆ. ಇದು ಒಟ್ಟು ಅರ್ಥವ್ಯವಸ್ಥೆಯನ್ನು ಒಂದು ಸುದೀರ್ಘವಾದ ಸ್ಥಗಿತತೆಯ ಅವಧಿಯತ್ತ ನೂಕುತ್ತಿದೆ. ಇಲ್ಲಿಯೇ ಕೈಗಾರಿಕಾ ಸ್ಥಗಿತತೆಯ ಮೂರನೆಯ ಅಂಶ ಕೆಲಸ ಮಾಡಲಾರಂಭಿಸಿರುವುದು. ಇದು ಹೂಡಿಕೆಯಲ್ಲಿ ಕಡಿತಕ್ಕೆ ಸಂಬಂಧಪಟ್ಟ ಅಂಶ. ಈ ಹೂಡಿಕೆ ಇಳಿಕೆ ಕೈಗಾರಿಕಾ ಸ್ಥಗಿತತೆಯ ಕಾರಣವೂ ಹೌದು, ಪರಿಣಾಮವೂ ಹೌದು. ಈ ಹೂಡಿಕೆ ಕಡಿತ ಬಂಡವಾಳ ಸರಕು ವಲಯವನ್ನಂತೂ ಬಹಳವಾಗಿ ತಟ್ಟಿದೆ.

ಭಾರತದ ಅರ್ಥವ್ಯವಸ್ಥೆಗೆ ಹೇಗೆ ಮತ್ತೆ ಜೀವ ತುಂಬುವುದು ಎಂಬುದರ ಒಂದೇ ಒಂದು ಹೊಳಹು ಕೂಡ ಬಿಜೆಪಿ ಸರಕಾರಕ್ಕೆ ಇಲ್ಲ ಎಂದು ಬೇರೆ ಹೇಳಬೇಕಾಗಿಲ್ಲ. ಅದು ಕೊಟ್ಟ ಕಾರ್ಪೊರೇಟ್ ತೆರಿಗೆಗಳ ಕಡಿತ, ಮೊದಲೇ ನಿರೀಕ್ಷಿಸದಂತೆ, ಖಾಸಗಿ ಕಾರ್ಪೊರೇಟ್ ಹೂಡಿಕೆಯಲ್ಲಿ ಒಂದಿನಿತೂ ವ್ಯತ್ಯಾಸವನ್ನು ತಂದಿಲ್ಲ. ಏಕೆಂದರೆ, ಇಂತಹ ಹೂಡಿಕೆಗಳು ಮಾರುಕಟ್ಟೆಯ ಬೆಳವಣಿಗೆ ಎಷ್ಟರ ಮಟ್ಟಿಗೆ ಆಗುತ್ತದೆ ಎಂಬ ನಿರೀಕ್ಷೆಯನ್ನು ಅವಲಂಬಿಸಿರುತ್ತವೆ. ಮಾರುಕಟ್ಟೆಯ ವೃದ್ಧಿಯನ್ನು ಚುರುಕುಗೊಳಿಸದೇ ಇರುವ ವರೆಗೆ, ಎಷ್ಟೇ ತೆರಿಗೆ ಕಡಿತಗಳನ್ನೂ ಕೊಟ್ಟರೂ, ಹೆಚ್ಚಿನ ಹೂಡಿಕೆಗಳೇನೂ ಆಗುವುದಿಲ್ಲ. ತದ್ವಿರುದ್ಧವಾಗಿ, ಇಂತಹ ಕಡಿತಗಳಿಂದಾಗಿ ಹಣಕಾಸು ಕೊರತೆಯ ಗುರಿಯನ್ನು ತಲುಪುವುದಕ್ಕಾಗಿ ಸರಕಾರದ ವೆಚ್ಚಗಳಲ್ಲಿ ಇಳಿಕೆಯಾದರೆ, ಆಗ ಉತ್ಪಾದನಾ ಸಾಮರ್ಥ್ಯದಬಳಕೆಯೂ ಇಳಿಯುತ್ತದೆ, ಖಾಸಗಿ ಕಾರ್ಪೊರೇಟ್ ಹೂಡಿಕೆಗಳೂ ಇಂತಹ ಕಡಿತಗಳಿಂದಾಗಿ ಇಳಿಯುತ್ತವೆ.

ಅದರ ಇತರ ಕ್ರಮಗಳು, ಜಿಎಸ್‌ಟಿ ದರಗಳಲ್ಲಿ ಕೈಯಾಡಿಸುವುದು, ಮತ್ತು ಮೇಕ್ ಇನ್ ಇಂಡಿಯಾ ಪ್ರಚಾರ ಕೂಡ ಅಷ್ಟೇ ದೋಷಪೂರ್ಣವಾಗಿವೆ. ಇದರಿಂದೇನೂ ನೆರವು ಸಿಗುವುದಿಲ್ಲ. ಮತ್ತು ಇದರಿಂದ ರೆವಿನ್ಯೂ ಆದಾಯಗಳು ಕಡಿಮೆಯಾದರೆ ಮತ್ತು ಅದರಿಂದಾಗಿ, ಮತ್ತೆ ಹಣಕಾಸು ಕೊರತೆಯ ಗುರಿಯನ್ನು ತಲುಪಲಿಕ್ಕಾಗಿ ವೆಚ್ಚಗಳಲ್ಲಿ ಕಡಿತವಾದರಂತೂ, ನೆರವಿನ ಬದಲು ತೊಂದರೆಯೇ ಉಂಟಾಗುತ್ತದೆ.

ಇನ್ನು, ‘ಮೇಕ್ ಇನ್ಇಂಡಿಯಾ’ದ ಬಗ್ಗೆ ಹೇಳುವುದಾದರೆ, ಜಾಗತಿಕ ಅರ್ಥಿಕ ಬಿಕ್ಕಟ್ಟಿನಿಂದಾಗಿ ಹೆಚ್ಚೇನೂ ಹೂಡಿಕೆಗಳು ನಡೆಯದೇ ಇರುವಾಗ, ಭಾರತದೊಳಕ್ಕೆ ಹೆಚ್ಚಿನ ಹೂಡಿಕೆಗಳನ್ನು ಪಡೆಯುವ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಈಗ ಸಿಎಎ ಮತ್ತು ಎನ್‌ಆರ್‌ಸಿ ಉಂಟು ಮಾಡಿರುವ ಸಾರ್ವತ್ರಿಕ ಸಾಮಾಜಿಕ ಅಸಂತೃಪ್ತಿ, ಅದಕ್ಕೂ ಮೇಲಾಗಿ ಮುಸ್ಲಿಮರ ವಿರುದ್ಧ ಹತ್ಯಾಕಾಂಡ, ಇಂತಹ ಹೂಡಿಕೆಗಳನ್ನು ಆಕರ್ಷಿಸುವ ಬದಲು, ಹೊಡೆದೋಡಿಸುತ್ತದಷ್ಟೇ.

(‘ಜನಶಕ್ತಿ’ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version