ಭಾಮಿನಿ

ಮರ ಮುಪ್ಪಾದರೂ ಹುಳಿ ಮುಪ್ಪೆ…?

Published

on

ಇಂದಿಗೂ ಕಾಡುತ್ತಾಳೆ ಆ ಬೆಣ್ಣೆ ಅಜ್ಜಿ..!

ಯಸ್ಸು 70 ರ ಗಡಿ ದಾಟಿ ಬಹಳ ವರ್ಷಗಳೇ ಆಗಿದ್ದವು. ಆದರೂ ಕುಗ್ಗದ ಉತ್ಸಾಹ, ಬತ್ತದ ಹುರುಪಿನ ಹೊಳೆ .ದುಡಿದು ತಿನ್ನಬೇಕೆಂಬ ಆರೋಗ್ಯಪೂರ್ಣ ಸ್ವಾರ್ಥ.. ಯಾರ ಹಂಗಲ್ಲೂ ಬದುಕಲ್ಲ ಎಂಬ ಅನುಕರಣೀಯ ಅಹಂಕಾರ..! ಹೌದು ನಾನೀಗ ಹೇಳ ಹೊರಟಿರುವುದು ಮುಪ್ಪಿಗೆ ಸವಾಲೆಸಿದು ಬದುಕಿದ, ಬದುಕುತ್ತಿರುವ ಅಜ್ಜಿಯರ ಬಗ್ಗೆ . ಈ ಅಜ್ಜಿಯರ ಬಗ್ಗೆ ಬರೆಯ ಹೊರಟಾಗ ನನಗೆ ಮೊದಲು ನೆನಪಾಗಿದ್ದು, ನನ್ನ ಪ್ರೀತಿಯ ಬೆಣ್ಣೆ ಅಜ್ಜಿ. ಅವಳು ಬದುಕಿರುವರೆಗೂ ನನ್ನನ್ನು ಪ್ರೀತಿಯಿಂದ ಬೆಣ್ಣೆ ಎಂದು ಕರೆಯುತ್ತಿದ್ದಳು. ನನಗೂ ಆವಳನ್ನು ಬೆಣ್ಣೆ ಅಜ್ಜಿ ಎನ್ನುವುದೇ ಇಷ್ಟ. ಹಾಗಂತ ಅವಳು ಬೆಣ್ಣೆಯಷ್ಟು ಮೃದು ಸ್ವಭಾವದವಳಲ್ಲ. ಘಾಟಿ ಮುದುಕಿ, ಸುಖಾಸುಮ್ಮನೆ ಯಾರೊಂದಿಗೂ ವಾದಕ್ಕಿಳಿಯುತ್ತಿರಲಿಲ್ಲ. ಆದರೆ ಅವಳ ಸುದ್ದಿಗೆ ಬಂದರೆ ಮಾತ್ರ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡುಬಿಡುತ್ತಿದ್ದಳು. ಜೀವನದಲ್ಲಿ ಸಾಕಷ್ಟು ಏರು ಪೇರುಗಳನ್ನುದಾಟಿ ಬಂದವಳು. ಸ್ವಂತ ಕಾಲಿನಲ್ಲಿ ನಿಂತು ಇತರರಿಗೆ ಮಾದರಿಯಾದವಳು.

ಹೌದು ಆ ನನ್ನ ಬೆಣ್ಣೆ ಅಜ್ಜಿ ಇದ್ದಿದ್ದು, ನನ್ನ ಹಳೆಯ ಆಫೀಸಿನ ಎದುರು ಚಿಕ್ಕದೊಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಳು. ಎಂದೂ ಯಾರನ್ನು ದಮ್ಮಯ್ಯ ದತ್ತಯ್ಯ ಎನ್ನದ ಸ್ವಾಭಿಮಾನಿ ಅವಳು. 10 ಮೆಟ್ಟಿಲುಗಳನ್ನು ಹತ್ತಲು ಸುಸ್ತು ಎನ್ನುವ ಈಗಿನ ಕಾಲದ ಹರೆಯದ ಹುಡುಗಿಯರನ್ನು ನಾಚಿಸುವ ರೀತಿ ಮೆಟ್ಟಿಲುಗಳನ್ನು ಹತ್ತಿ ಅಷ್ಟೇ ಹುಮ್ಮಸ್ಸಿನಿಂದ ಕೆಳಗಿಳಿಯುತ್ತಿದ್ದ ಅವಳು ನಿಜಕ್ಕೂ ಆಶ್ಚರ್ಯ ಅನಿಸುತ್ತಿದ್ದಳು. ಸುಮಾರು 20 ವರ್ಷಗಳಿಂದ ಆ ಪುಟ್ಟ ಗೂಡಿನ ಅಂಗಡಿಯಲ್ಲೇ ಜೀವನಾಧಾರ ಕಂಡುಕೊಂಡ ಅವಳು ಆ ರೋಡಿನಲ್ಲಿ ಓಡಾಡುತ್ತಿದ್ದ ಎಲ್ಲರಿಗೂ ಅಚ್ಚುಮೆಚ್ಚು. ಎಲ್ಲರೂ ಆಕೆಯ ಧೈರ್ಯವನ್ನು ಕೊಂಡಾಡುತ್ತಿದ್ದವರೇ. ಹೋಗುವಾಗ ಬರುವಾಗ ದಾರಿಯಲ್ಲಿ ಆಕೆಯನ್ನು ಮಾತನಾಡಿಸದೇ ಹೋಗುತ್ತಿರಲಿಲ್ಲ.. ಈ ಅಜ್ಜಿ ಕೈ ಲಾಗದ ಮತ್ತೊಂದು ಅಜ್ಜಿಗೆ ದಿನ ಊಟ ನೀಡುತ್ತಿದ್ದಳು. ಅವಳ ನೋವಿಗೆ ದನಿಯಾಗಿ ಸಾಂತ್ವನ ಹೇಳುತ್ತಿದ್ದಳು. ತಲೆ ತಗ್ಗಿಸಿ ಬದುಕುವುದನ್ನೇ ಕರಗತ ಮಾಡಿಕೊಂಡಿದ್ದ ಅವಳ ಕಾಲದವರ ನಡುವೆ ಗಂಡಸಿನಂತೆ ತಲೆ ಎತ್ತಿ ಬದುಕಿದವಳು ನಿಜಕ್ಕೂ ಒಳಗೆ ಕರುಣಾಮಯಿ. ಅದು ಅವಳನ್ನು ಹತ್ತಿರದಿಂದ ಕಂಡವರಿಗೆ ಮಾತ್ರ ಗೊತ್ತು.

ಆ ಅಜ್ಜಿಯೇನು ಶೋಕಿಗೆ ವ್ಯಾಪಾರಕ್ಕೆ ಇಳಿದವಳಲ್ಲ. ಜೀವನ ಆಕೆಗೆ ತುಂಬಾ ಪಾಠ ಕಲಿಸಿತ್ತು. ಆ ಸಿಟಿಯಲ್ಲಿ ಅಂಗಡಿ ಇಟ್ಟುಕೊಂಡು 20 ವರ್ಷಗಳ ಕಾಲ ಮುನ್ನಡೆಸುವುದೆಂದರೆ ಅದು ಸುಲಭದ ಮಾತಲ್ಲ. ದುಡ್ಡಿಗಾಗಿ ಹಪಹಪಿಸುವ ಬಕ ಪಕ್ಷಿಗಳ ಮಧ್ಯೆ…! ಇತ್ತ ಮನೆಯಲ್ಲೂ ಆಕೆಗೆ ನೆಮ್ಮದಿ ಇರಲಿಲ್ಲ. ದಾಂಡಿಗನಂಥ ಮೊಮ್ಮಗ ಯಾವಾಗ್ಲೂ ಅಜ್ಜಿಗೆ ದುಡ್ಡು ಕೊಡುವಂತೆ ಪೀಡಿಸುತ್ತಿದ್ದ. ಆದರೂ ಅಜ್ಜಿ ಎದೆಗುಂದಲಿಲ್ಲ. ಬದುಕಿನುದ್ದಕ್ಕೂ ಹೋರಾಟ ಮಾಡಿ ಸತ್ತಳು. ನನ್ನ ಪ್ರೀತಿಯ ಬೆಣ್ಣೆ ಅಜ್ಜಿ.. ಅದೇಕೋ ನನ್ನ ಕಂಡರೆ ಅವಳಿಗೆ ಅಚ್ಚುಮೆಚ್ಚು. ಆಫೀಸಿಗೆ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದಳು, ತಲೆ ಸವರಿ ಗುಲಾಬಿ ಹೂ ಕೊಡುತ್ತಿದ್ದಳು. ದೇವಸ್ಥಾನಕ್ಕೆ ಹೋದಾಗ ಮರೆಯದೇ ನಮ್ಮ ಆಫೀಸಿನವರೆಗೆ ಪ್ರಸಾದ ತಂದುಕೊಡುತ್ತಿದ್ದಳು. ಎಲ್ಲೇ ಕಂಡರೂ ಬೆಣ್ಣೆ ಎಂದು ಕೂಗಿ ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಆ ಸೊಕ್ಕು ಮುಖದಲ್ಲೂ ಮೂಡುತ್ತಿದ್ದ ಆ ಸುಂದರ ನಗು ಇಂದಿಗೂ ಕಾಡುತ್ತದೆ. ಜೇವನದ ಕುರಿತು ಜಿಗುಪ್ಸೆ ಆವರಿಸಿದಾಗ ಅವಳು ನೆನಪಾಗಿ ಕಾಡುತ್ತಾಳೆ. ಅವಳ ಧೈರ್ಯ, ಎದೆಗಾರಿಕೆ ರಪ್ಪನೆ ಮುಖಕ್ಕೆ ರಾಚುತ್ತದೆ. ಬದುಕಲು ಸ್ಫೂರ್ತಿ ತುಂಬುತ್ತದೆ. ಹೌದು ಕೆಲವರೂ ಸತ್ತರೂ ಬದುಕಿರುತ್ತಾರೆ ನಮ್ಮೊಳಗೆ. ಅಂತಹವರ ಲಿಸ್ಟ್ ನಲ್ಲಿ ನನ್ನ ಬೆಣ್ಣೆ ಅಜ್ಜಿಗೆ ಮೊದಲ ಸ್ಥಾನ.

ಇನ್ನು ತಾಯವ್ವ ನನ್ನ ಅಜ್ಜಿ. ನನ್ನ ಸಾಕಿ ಬೆಳೆಸಿದವಳು, ಕೇವಲ ನನ್ನನ್ನಷ್ಟೇ ಅಲ್ಲ. ನಮ್ಮೂರಿನ ಅದೆಷ್ಟೋ ಮಕ್ಕಳಿಗೆ ಕೈ ತುತ್ತು ನೀಡಿದವಳು. ಅಂಗನವಾಡಿ ಸಹಾಯಕಿಯಾಗಿದ್ದ ನನ್ನ ಅಜ್ಜಿ, ನನ್ನ ಜೀವನದ ಮೊದಲ ಸ್ಫೂರ್ತಿ. ಎಂತಹ ಸಮಯ ಸಂದರ್ಭವನ್ನು ಜಾಗರೂಕತೆಯಿಂದ ನಿಭಾಯಿಸಬಲ್ಲ ಅವಳು ನಿಜಕ್ಕೂ ಅನುಕರಣೀಯ. ನಮ್ಮೂರಿನ ಅದೆಷ್ಟೋ ಮಕ್ಕಳಿಗೆ ತನ್ನ ಮಡಿಲಲ್ಲಿ ಸ್ನಾನ ಮಾಡಿಸಿ , ಹಾರೈಸಿ ಹರಸಿದವಳು.. ಮನೆಯ ನಾಲ್ಕು ಜನ ಮೊಮ್ಮಕ್ಕಳು, ಪದೇ ಪದೇ ಹಾಸಿಗೆ ಹಿಡಿಯುತ್ತಿದ್ದ ಪತಿ, ಬಂಧು – ಬಳಗ, ಅಂಗನವಾಡಿ ಕರ್ತವ್ಯ ಎಲ್ಲವನ್ನೂ ಅದೇಗೆ ನಿಭಾಯಿಸುತ್ತಿದ್ದಳೋ. ಹಳ್ಳಿಯಲ್ಲಿ ಸಂಸಾರವನ್ನು ಸರಿದೂಗಿಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಆದರೆ ನನ್ನ ಅಜ್ಜಿ ಸಂಸಾರ ತಕ್ಕಡಿಯನ್ನು ಸಮವಾಗಿ ತೂಗಿಸಿದವಳು.. ಬದುಕಿನಲ್ಲಿ ಹತ್ತಿರದವರನ್ನು ಕಳೆದುಕೊಂಡು, ನೋವಿನಲ್ಲಿದ್ದಾಗ ಅಜ್ಜಿ ಹೇಳುತ್ತಿದ್ದ ಧೈರ್ಯದ ಮಾತುಗಳು, ತುಂಬುತ್ತಿದ್ದ ಉತ್ಸಾಹ, ಬದುಕನ್ನು ಕುಗ್ಗಿಸದಂತೆ ನೋಡಿಕೊಂಡಿವೆ. ಎಷ್ಟೇ ನೋವಿನಲ್ಲಿದ್ದರೂ ಅವಳೊಂದಿಗೆ ಐದು ನಿಮಿಷ ಮಾತನಾಡಿದರೆ ಸಾಕು ಅವಳು ಆಡುವ ಮಾತುಗಳು ಬದುಕಲ್ಲಿ ಮತ್ತೆ ಛಲ ಹುಟ್ಟಿಸುತ್ತದೆ. ಭರವಸೆಯ ಚಿಲುಮೆ ಚಿಮ್ಮಿಸುತ್ತದೆ. ನನ್ನ ಅಜ್ಜಿ ಎಂದೂ ತಾಳ್ಮೆ ಕಳೆದುಕೊಂಡವಳಲ್ಲ. ಬದುಕಿನಲ್ಲಿ ಅವಳಿಂದ ಕಲಿತ ದೊಡ್ಡ ಪಾಠ ತಾಳ್ಮೆ ಮತ್ತು ಧೈರ್ಯ.

ಮಕ್ಕಳು-ಸೊಸೆಯರು ಚೆನ್ನಾಗಿ ನೋಡಿಕೊಳ್ಳಲ್ಲ ಎಂದು ಮಕ್ಕಳ ಮೇಲೆ ಹಾರಾಡುವ ಕೂಗಾಡುವ ಅದೆಷ್ಟೋ ಅಜ್ಜಿಯರ ನಡುವೆ , ಸೊಸೆಯರೂ ನಮ್ಮ ಮಕ್ಕಳಂತೆ, ಮಕ್ಕಳಿಗೆ ನಾವೇಕೆ ಭಾರವಾಗಬೇಕು. ನಾವು ದುಡಿದು ತಿನ್ನಬೇಕು ಎನ್ನುವ ಮನಸ್ಥಿತಿಯ ಅಜ್ಜಿಯರು ನಿಜ್ಕಕ್ಕೂ ವಿಶೇಷವಾಗಿ ಕಾಣುತ್ತಾರೆ. ಎಂತಹ ಸಮಯದಲ್ಲಿಯೂ ತಮ್ಮ ಸ್ವಾಭಿಮಾನವನ್ನು ಬಿಟ್ಟು ಕೊಡದ ಅವರು ಕಣ್ಣ ಮುಂದೆ ಮಾದರಿಯಾಗಿ ನಿಲ್ಲುತ್ತಾರೆ. ಹುಡುಕುತ್ತಾ ಹೋದರೆ ವಯಸ್ಸಿಗೆ ಸವಾಲೆಸೆದು ಬದುಕುತ್ತಿರುವ ಇಂಥ ಸಾವಿರ ಅಜ್ಜಿಯರು ಉದಾಹರಣೆಗಳಾಗಿ ಸಿಗುತ್ತಾರೆ.. ಮಾರ್ಕೆಟ್ ನಲ್ಲಿ ಸೊಪ್ಪು-ತರಕಾರಿ ಮಾರುವ ಅಜ್ಜಿಯರೂ ಬೆಳಗ್ಗೆಯೇ ಎದ್ದು, ಮನೆಯವರನೆಲ್ಲಾ ಸಂಭಾಳಿಸಿ, ನೈ ಟ್ ಆಲ್ಟ್ ಬಸ್ ಹತ್ತಿ, ಸೂರ್ಯ ಹುಟ್ಟುವ ಮೊದಲೇ ಮಾರುಕಟ್ಟೆಗೆ ಬಂದು ವ್ಯಾಪಾರ ಆರಂಭಿಸುತ್ತಾರೆ. ಹಣ ಸಂಪಾದಿಸಿ, ಯಾರೂ ತಮ್ಮ ಕಡೆ ಬೊಟ್ಟು ಮಾಡಿ ತೋರಿಸದಂತೆ ಬದುಕುತ್ತಿರುವ ಅವರು ನಿಜಕ್ಕೂ ಆದರ್ಶನೀಯ. 7 ಗಂಟೆಗೆ ಎದ್ದರೂ ಬೇಗ ಎದ್ದೆವೆಂದು ಕುಣಿದಾಡುವ ನಮ್ಮೆದುರು 5 ಗಂಟೆಗೆ ಎದ್ದರೂ ಲೇಟಾಗಿ ಎದ್ದೆವಲ್ಲಾ ಎಂಬ ನಮ್ಮಈ ಅಜ್ಜಿಯರು ನಿಜಕ್ಕೂ ವೀರ ವನಿತೆಯರು. ದೊಡ್ಡ – ದೊಡ್ಡ ಸಾಧನೆಗಳನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳುವ ನಾವು, ಇವರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಬದುಕಲ್ಲಿ ಸಣ್ಣ –ಸಣ್ಣ ವಿಷಯಗಳಲ್ಲೇ ಎಲ್ಲವೂ ಅಡಕವಾಗಿರುವುದು.ನಿಜವಾದ ಜೀವನದ ಅರ್ಥ ಅಡಕವಾಗಿರುವುದೇ ಇಲ್ಲಿಯೇ..

ನಾನು ಮೇಲೆ ಹೇಳಿದ ಯಾವ ಅಜ್ಜಿಯರೂ ಹೆಚ್ಚು ಕಲಿತವರಲ್ಲ, ಆದರೂ ಜೀವನವೆಂಬ ಸಾಗರವನ್ನು ಯಶಸ್ವಿಯಾಗಿ ಈಜಿ ದಡ ಸೇರಿದವರು.. ಬದುಕಲ್ಲಿ ಕಳೆದುಕೊಂಡಿರುವುದರ ಬಗ್ಗೆಯೇ ಚಿಂತೆ ಮಾಡುತ್ತಾ ನಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುವ ನಮಗೆ ಇವರ ಬದುಕು ಆದರ್ಶಪ್ರಿಯವೆನಿಸುತ್ತದೆ. ಕೆಲವೊಂದು ಅನಿಶ್ಚಿತ ಆಘಾತಗಳು ಎದುರಾದಾಗ ಎಲ್ಲ ಮುಗಿದೇ ಹೋಯಿತು ಎಂದು ಜೀವನ , ಜೀವ ಎರಡನ್ನೂ ಕಳೆದುಕೊಳ್ಳುವ ಯುವಜನತೆಗೆ ಈ ಅಜ್ಜಿಯರ ಧೈರ್ಯ, ಜೀವನ ಅನುಭವ,ಅವರು ಬದುಕಿದ ರೀತಿ ಎಲ್ಲವನ್ನು ಕಂಡಾಗ ಎಲ್ಲೋ ಒಂದು ಕಡೆ ಬದುಕುವ ಉತ್ಸಾಹ ಬರದೇ ಇರದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version