ದಿನದ ಸುದ್ದಿ

ಜೆಎನ್‌ಯು ಸಮಸ್ಯೆ ಎಡ- ಬಲಗಳ ಪ್ರಶ್ನೆಯೇ..?

Published

on

  • ಜಿ.ಎನ್. ನಾಗರಾಜ್

ಜೆಎನ್‌ಯು ಸಮಸ್ಯೆ ಎಡ- ಬಲಗಳ ಪ್ರಶ್ನೆಯೇ..? ಹಾಗೆಂದು ಬಿಜೆಪಿಯ ಮತ್ತು ಬಿಜೆಪಿ ಪರ ಮಾಧ್ಯಮಗಳು ಬೊಬ್ಬಿರಿಯುತ್ತಿವೆ.ಎಬಿವಿಪಿಯೂ ಸೇರಿ ಎಲ್ಲ ವಿದ್ಯಾರ್ಥಿಗಳ ಒಗ್ಗಟ್ಟಿನ ಹೋರಾಟವಾಗಿದ್ದದ್ದು ಇದ್ದಕ್ಕಿದ್ದಂತೆ ಎಡ- ಬಲವಾಗಿ ತಿರುಗಿದ್ದು ಹೇಗೆ, ತಿರುಗಿಸಿದ್ದು ಯಾರು ?

ಜಗಕ್ಕೆಲ್ಲಾ ತಿಳಿದಂತೆ ಇತ್ತೀಚಿನ ಜೆ‌ಎನ್‌ಯುವನ್ನು ಭಾರತದ 40 ಕೇಂದ್ರ ವಿವಿಗಳಲ್ಲಿ ಉಳಿದೆಲ್ಲ ಕೇಂದ್ರ ವಿವಿಗಳಿಗಿಂತ ಅತಿ ಹೆಚ್ಚಿನ ಫೀ ನೀಡಬೇಕಾದ ವಿವಿಯಾಗಿ ಕೇಂದ್ರ ಸರ್ಕಾರ ಮಾಡಹೊರಟಿತು. ಈ ಫೀ ಬೇರೆಲ್ಲ ವಿವಿಗಳಲ್ಲಿ ವರ್ಷಕ್ಕೆ 14,000 ರೂ ನಿಂದ 35,000ರೂ ವರೆಗಿದೆ. ಆದರೆ ಜೆಎನ್‌ಯು ಫೀ ಏರಿಕೆ ಅದನ್ನು 27, 000- 32,000 ದಿಂದ 55,000-65,000 ಕ್ಕೆ ಏರಿಸ ಹೊರಟಿತು.

ಬಿಹಾರ,ಅಸ್ಸಾಂ,ಜಾರ್ಕ‌ಂಡ್ ಮೊದಲಾದ ಅತ್ಯಂತ ಹಿಂದುಳಿದ ಪ್ರದೇಶದ ಬಡ ವಿದ್ಯಾರ್ಥಿಗಳು ಶೇ.40 ರಷ್ಟು ಇರುವ ಈ ವಿವಿಯಲ್ಲಿ ಬಡವರು ವಿದ್ಯಾಭ್ಯಾಸವನ್ನು ಬಿಡಬೇಕಾದ ಪರಿಸ್ಥಿತಿಯಲ್ಲಿ ಅಲ್ಲಿಯ ವಿದ್ಯಾರ್ಥಿ ಸಂಘ ಎಲ್ಲ ವಿದ್ಯಾರ್ಥಿಗಳ ಜೊತೆ ವಿವರವಾಗಿ ಪ್ರತಿ ಹಾಸ್ಟೆಲ್‌ಗಳಲ್ಲಿ ಚರ್ಚಿಸಿ ಎಲ್ಲ ಬಣ್ಣದ ವಿದ್ಯಾರ್ಥಿ ಸಂಘಗಳು ಸೇರಿ ಈ ಫೀ ಏರಿಕೆ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿತು.

ಎಬಿವಿಪಿ ಕೂಡಾ ಇದನ್ನು ವಿರೋಧಿಸಲಾಗದೆ ಒಟ್ಟಿಗೆ ಸೇರಿತು. ವಿಸಿಗೆ ಮನವಿ, ಚರ್ಚಿಸಲು ವಿನಂತಿ , ವಿವಿಯೊಳಗೆ ಧರಣಿ, ತರಗತಿ ಬಹಿಷ್ಕಾರ ಇತ್ಯಾದಿ ಹಲವು ಹಂತಗಳನ್ನು ದಾಟಿ ವಿವಿಯ ಹೊರಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಮುಂದೆ ಹಲವು ಹೋರಾಟ ನಡೆಯಿತು. ಈ ಹಂತದಲ್ಲಿ ಎಬಿವಿಪಿ ಈ ಹೋರಾಟವನ್ನು ವಿಭಜಿಸಲು ಪ್ರಯತ್ನಿಸಿ ವಿಫಲವಾಗಿ ಹೊರನಡೆಯಿತು.

ಆದರೆ ವಿದ್ಯಾರ್ಥಿಗಳ ತೀವ್ರ
ಹೋರಾಟದಿಂದಾಗಿ ಕೆಲ ರಿಯಾಯಿತಿಯನ್ನು ಸರ್ಕಾರ ಘೋಷಿಸಿತು. ಆದರೆ ಅದರಲ್ಲಿ ಹಲವು if’s and but’s ಸೇರಿಸಿ ವಿದ್ಯಾರ್ಥಿಗಳ ಅದರ ನಿಜ ಪ್ರಯೋಜನ ದಕ್ಕದಂತೆ ಆಜ್ಞೆ ಹೊರಡಿಸಿತು. ಅಸಗ ಮತ್ತೆ ವಿದ್ಯಾರ್ಥಿಗಳೆಲ್ಲರ ಸಭೆ ಸೇರಿ ಚರ್ಚಿಸಿ ಫೀ ಏರಿಕೆ ಮತ್ತು ಇತರ ನಿಯಮಗಳನ್ನು ಹಿಂತೆಗೆದುಕೊಳ್ಳುವವರಿಗೂ ಹೋರಾಟ ಮುಂದುವರೆಸಬೇಕೆಂದು ತೀರ್ಮಾನಿಸಲಾಯಿತು. ಕಡಿಮೆ ವಿದ್ಯಾರ್ಥಿಗಳ ಬೆಂಬಲವುಳ್ಳ ಎಬಿವಿಪಿ ಹೊರತು ಪಡಿಸಿ ಉಳಿದೆಲ್ಲರೂ ಹೋರಾಟ ಮುಂದುವರೆಸಿದ್ದಾರೆ.

ಇಂತಹ ಹೋರಾಟ ಫೀ ಹೆಚ್ಚಿಸಿದ ಐಐಟಿ ಮತ್ತಿತರ ಸಂಸ್ಥೆಗಳಲ್ಲೂ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದಾರೆ. ಹಿಂದುಳಿದ ಪ್ರದೇಶಗಳ ಬಡ ವಿದ್ಯಾರ್ಥಿಗಳ ಶಿಕ್ಷಣ ವಂಚನೆಗೆ ಕಾರಣವಾಗುವ ಫೀ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು ಎನ್ನುವ ಎಲ್ಲ ವಿದ್ಯಾರ್ಥಿಗಳ ಹೋರಾಟವನ್ನು ಎಡ ಬಲ ರಾಜಕೀಯ ಎಂಬ ರೂಪ ಕೊಟ್ಟು ವಿದ್ಯಾರ್ಥಿಗಳಿಗೆ ಮಸಿ ಬಳಿಯುವ ಕೆಲಸವನ್ನು ಈಗ ಎಬಿವಿಪಿ, ಮಾಧ್ಯಮ ಮತ್ತು ಪೋಲೀಸರ ಮೂಲಕ ಆರೆಸ್ಸೆಸ್ ಮತ್ತು ಬಿಜೆಪಿ ಮಾಡುತ್ತಿದೆ.

ಈ ಹೋರಾಟ ಕೇವಲ ಜೆ‌ಎನ್‌ಯು ವಿದ್ಯಾರ್ಥಿಗಳದೆಂದು ,ಎಡಪಂಥೀಯವೆಂದು ಸರ್ಕಾರ ವಿರೂಪಗೊಳಿಸುತ್ತಿರುವುದರ ಉದ್ದೇಶವೆಂದರೆ ಮುಂದೆ ಭಾರತದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ , ಕೇಂದ್ರ ವಿವಿಗಳಲ್ಲಿನ ಫೀ ಏರಿಕೆಗೆ ಇದು ಟೆಸ್ಟಿಂಗ್ ಡೋಸ್ ಅಷ್ಟೇ. ಇದು ಇಂದು ದೇಶದೆಲ್ಲ ವಿವಿ ವಿದ್ಯಾರ್ಥಿಗಳ ಪರವಾಗಿ ಜೆ‌ಎನ್‌ಯು ವಿದ್ಯಾರ್ಥಿಗಳ ಹೋರಾಟವಷ್ಟೇ.
ಆದ್ದರಿಂದಲೇ ಎಲ್ಲ ವಿವಿಗಳಲ್ಲಿಯೂ ಪಂಥಗಳನ್ನು ಮೀರಿ ಜನ ಬೆಂಬಲವನ್ನು ಪಡೆದುಕೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version