ಅಂತರಂಗ
‘ಮಂಜು’ ಕನ್ನಡ ಪತ್ರಿಕೋದ್ಯಮದ ಆಸ್ತಿಯೇ ಆಗಲಿದ್ದ
- ಹರ್ಷಕುಮಾರ್ ಕುಗ್ವೆ
2006ರ ಸುಮಾರಿಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಜರ್ನಲಿಸಂ ಡಿಗ್ರಿ ಓದುತ್ತಿದ್ದ ಮಂಜು ಎಂಬ ಈ ಹುಡುಗ ಹೆಚ್ಚು ಮಾತಾಡುವ ಹುಡುಗನಾಗಿರಲಿಲ್ಲ. ಸಿಕ್ಕಿದಾಗಲೆಲ್ಲಾ ನಸುನಕ್ಕು ಮಾತಾಡಿಸುತ್ತಿದ್ದ. ಇವನೊಳಗೆ ಒಬ್ಬ ಅದ್ಭುತ ಪತ್ರಕರ್ತನಿದ್ದ ಎಂಬುದು ತಿಳಿದಿದ್ದು ಈತ ಶಂಕರಘಟ್ಟದಲ್ಲಿ ಪಿಜಿ ಮುಗಿಸಿ ಪ್ರಜಾವಾಣಿ ಸೇರಿ ಕ್ರೈಂ ತನಿಖಾ ಸುದ್ದಿಗಳನ್ನು ಬರೆಯತೊಡಗಿದ ಮೇಲೆಯೇ.
ಒಂದು ದಿನ ಎಂಜಿ ರೋಡಿನಲ್ಲಿ ಎದುರು ಸಿಕ್ಕ ನನ್ನನ್ನು ತುಂಬಾ ಪ್ರೀತಿಯಿಂದ ಮಾತಾಡಿಸಿದ್ದ.
ಇಂದು ವಾಟ್ಸಾಪ್ ಗ್ರೂಪೊಂದರಲ್ಲಿ ಹಾವೇರಿಯ ಪ್ರಜಾವಾಣಿ ವರದಿಗಾರ ಮಂಜುನಾಥ್ ರಸ್ತೆ ಅಪಘಾತದಲ್ಲಿ ದುರ್ಮರಣ ಎಂಬ ಸುದ್ದಿ ಓದಿದಾಗ ಕೂಡಲೇ ಇವನೇ ಎಂದು ಗೊತ್ತಾಗಲಿಲ್ಲ. ಕೊನೆಗೆ ಸ್ನೇಹಿತರೊಬ್ಬರು ಹಾಕಿದ ಫೋಟೋ ನೋಡಿದಾಗ ಆಘಾತವೇ ಆಯಿತು. ಅರಿಯದೇ ಕಣ್ಣು ಮಂಜಾದವು.
ಇದೇ ರೀತಿಯಲ್ಲಿ ರಸ್ತೆ ಅಪಘಾತದಲ್ಲಿ ಅನಾರೋಗ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅದೆಷ್ಟು ಹುಡುಗರು ಬಲಿಯಾಗಿಬಿಟ್ಟರು! ಇವರೆಲ್ಲರೂ ಕನ್ನಡ ಪತ್ರಿಕೋದ್ಯಮದ ಮಿನುಗುತಾರೆಗಳೇ ಆಗಿದ್ದರು. ಮಂಜು ಅಂತೂ ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನದೇ ಶೈಲಿಯನ್ನು ಮೈಗೂಡಿಸಿಕೊಂಡು ಬರೆಯತೊಡಗಿದ್ದ. ಮುಂದಿನ ದಿನಗಳಲ್ಲಿ ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಅವನೊಬ್ಬ ಆಸ್ತಿಯೇ ಆಗಲಿದ್ದ ಎಂಬುದನ್ನು ಅವನು ಮಾಡಿರುವ ವರದಿಗಳೇ ಹೇಳುತ್ತವೆ.
ಇತ್ತೀಚೆಗೆ ಅವನು ಹಾವೇರಿಗೆ ವರ್ಗವಾಗಿ ಅಲ್ಲಿ ಭೀಕರ ಸ್ವರೂಪದಲ್ಲಿರುವ ಜಾತಿ ದೌರ್ಜನ್ಯದ ವಿಷಯಗಳನ್ನು ಸರಣಿಯಾಗಿ ವರದಿ ಮಾಡಿದ್ದನ್ನೂ ನೋಡಬಹುದು. ನಿಜಕ್ಕೂ ಒಬ್ಬ ಜವಾಬ್ದಾರಿಯುತ ಪತ್ರಕರ್ತನಾಗಿ ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜು ಹೀಗೆ ತಾನು ನಂಬಿದ್ದ ಪತ್ರಿಕೋದ್ಯಮವನ್ನು, ತನ್ನ ಕುಟುಂಬವನ್ನು ಕೊನೆಗೆ ಈ ಜಗತ್ತನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಶಾಶ್ವತವಾಗಿ ಅಗಲಿ ಹೋಗಿದ್ದಾನೆ.
ಮಂಜು ಸಾವು ಅವನೊಂದಿಗೆ ತೀರಾ ಆತ್ಮೀಯನಲ್ಲದ ನನಗೇ ಇಷ್ಟು ಸಂಕಟ ಉಂಟು ಮಾಡುತ್ತಿರುವಾಗ ಇನ್ನು ಅವನ ಕುಟುಂಬ ಮತ್ತು ಸ್ನೇಹಿತರಿಗೆಲ್ಲ ಎಷ್ಟು ದುಃಖ, ನೋವುಂಟುಮಾಡಬಹುದು? ಮಂಜು ಬದುಕನ್ನು ಬಹಳವಾಗಿ ಪ್ರೀತಿಸುವ ಕನಸುಗಣ್ಣಿನ ಹುಡುಗನಾಗಿದ್ದ. ಇದು ನಿಜಕ್ಕೂ ಘೋರ ಅನ್ಯಾಯ.
ಮಂಜು ಕುಟುಂಬದವರಿಗೆಲ್ಲರಿಗೂ ಅವನ ಈ ಅಕಾಲಿಕ ಮರಣವನ್ನು ಸೈರಿಸಿಕೊಳ್ಳುವ ಶಕ್ತಿ ಒದಗಲೆಂದು ಹಾರೈಸುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243