ಭಾವ ಭೈರಾಗಿ
ಬಾಳು ಕೊಟ್ಟೆ ಎಂದವನು ಪರಮಪಾಪಿಯಂತೆ ಕಾಣುತ್ತಾನೆ
ಇನ್ನು ಚೆಂದ ಅಂದ್ರೆ ನಿನ್ನ ಹೇಗ್ ನೋಡ್ಕೊಳೋದು, ಯಾವತ್ತಾದರೂ ನಾನು ಗಂಡ ಅನ್ನೋ ಅಧಿಕಾರ ಚಲಾಯಿಸಿದ್ದೇನಾ? ಇಲ್ಲ, ಪಕ್ಕದ ಮನೆಯವನಂತೆ ದಿನಾ ಕುಡಿದು ಬಂದು ಬಡಿಯುತ್ತೇನಾ? ಸಿಗರೇಟಿನಿಂದ ಸುಟ್ಟಿದ್ದೇನಾ? ಮನೇಲಿ ಕೂಡಿಹಾಕಿ ಹಿಂಸೆಕೊಟ್ಟಿದ್ದೇನಾ? ಹೋಗಲಿ ಯಾವತ್ತಾದರೂ ವರದಕ್ಷಿಣೆ ಅಂತ ಮಾತಾಡಿದ್ದೇನಾ? ಯಾವುದೂ ಇಲ್ಲ. ಆದರೂ ನೀನು ಯಾಕ್ ಹೀಗಾಡ್ತಿದಿಯೋ ಅರ್ಥವಾಗ್ತಿಲ್ಲ. ಇನ್ನು ಹೇಗೆ ನೋಡ್ಕೋಬೇಕು ನಿನ್ನ?
ಹೀಗೆ ಕೇಳುವ ಗಂಡ ಅದೆಷ್ಟು ಒಳ್ಳೆಯವನು ಅಂತ ನಿಮಗನ್ನಿಸುತ್ತಾ.. ನನಗಂತೂ ಖಂಡಿತಾ ಅನಿಸಲ್ಲ. ಬದಲಿಗೆ ಅವನ ಬುದ್ದಿಮಟ್ಟ ಇಷ್ಟೇನಾ ಅಂತ ಅನುಮಾನ ಕಾಡಲಾರಂಭಿಸುತ್ತೆ. ಯಾಕಂದ್ರೆ ಇಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿನೋಡಿದರೆ ಆತ ಮಾಡಿರುವ ಅಥವಾ ಮಾಡಬೇಕಿರುವ ಯಾವುದೇ ಒಳ್ಳೆಯ ಕೆಲಸದ ಬಗ್ಗೆ ಮಾತಾಡ್ತಿಲ್ಲ, ಬದಲಾಗಿ ತಾನು ಮಾಡಬಹುದಾಗಿರುವ ಕೆಟ್ಟತನಗಳನ್ನು ಮಾಡಿಲ್ಲ ಹೀಗಾಗಿ ತಾನೊಬ್ಬ ಸಭ್ಯಸ್ಥ ಎಂದು ಸರ್ಟಿಫಿಕೇಟು ಕೊಟ್ಟುಕೊಳ್ತಿದಾನೆ. ಅಂದರೆ ಅವೆಲ್ಲ ಕೆಲಸಗಳನ್ನೂ ಮಾಡುವ ಅವಕಾಶ ನನಗಿದೆ ಮನಸು ಮಾಡಿದರೆ ನಾನು ಅವೆಲ್ಲವನ್ನೂ ಮಾಡಬಹುದಿತ್ತು ಆದರೆ ಅವನ್ನು ಮಾಡದೇ ಇರುವ ಕಾರಣಕ್ಕಾಗಿ ನೀನು ನನಗೆ ಕೃತಜ್ಞಳಾಗಿರಬೇಕು ಎಂಬುದು ಆತನ ಮಾತಿನ ಅರ್ಥ ಅಲ್ವಾ?
ಅಂಗವಿಕಲೆಯೊಬ್ಬಳನ್ನು ಪ್ರೀತಿಸಿ ಮದುವೆಯಾದಾತ ಕೊನೆಗೊಂದು ದಿನ ‘ನಾನು ಅಂಗವಿಕಲೆಯೊಬ್ಬಳಿಗೆ ಬಾಳು ಕೊಟ್ಟೆ ಎಂದು ಹೇಳಿ ಮೈಲೇಜ್ ತೆಗೆದುಕೊಂಡದ್ದೇ ಆದರೆ ಆತನ ಇಡೀ ಪ್ರೀತಿ ಮಣ್ಣುಪಾಲಾದಂತೆ. ಮತ್ತೊಬ್ಬರು ಈತನನ್ನು ಹಾಗೆ ಹೊಗಳುವಾಗ ಮಿಣಮಿಣ ಕಣ್ಣುಬಿಡುತ್ತಾ ತ್ಯಾಗಮಯಿಯಂತೆ ಪೋಸ್ ಕೊಟ್ಟರೂ ಆತನೊಳಗೆ ಅಂಥ ಒಂದು ಆಲೋಚನೆಯಿದೆ ಎಂದೇ ನಾನು ಭಾವಿಸುತ್ತೇನೆ. ಅಸಲಿಗೆ ಆತ ಇದನ್ನು ತ್ಯಾಗ ಅಥವಾ ಉಪಕಾರ ಎಂದು ಭಾವಿಸುವುದಾದರೆ ಆಕೆಯನ್ನು ಮದುವೆಯಾಗದೇ ಸುಮ್ಮನಿರುವುದೇ ಲೇಸು. ಮದುವೆಯಾದ ನಂತರ ಹೀಗೆ ಮಾತನಾಡಿ ಆಕೆಗೆ ಭಯಂಕರ ಗಿಲ್ಟ್ ಬರುವಂತೆಯೋ ಅಥವಾ ಜೀವನವಿಡೀ ಕೃತಜ್ಞಳಾಗಿರುವಂತೆಯೋ ಮಾಡಿಬಿಟ್ಟರೆ ನನ್ನ ಕಣ್ಣಿಗವನು ಪರಮಪಾಪಿಯಂತೆ ಕಾಣುತ್ತಾನೆ.
ಹೀಗೆ ಮಾತನಾಡುವ ಬಹಳಷ್ಟು ಜನರನ್ನ ನಾನು ನೀವು ಆಗಾಗ ಭೇಟಿಯಾಗಿರ್ತೇವೆ. ಕೆಲಸ ಮಾಡಿಸಿಕೊಂಡ ಬಾಸು ‘ನಿಮಗೆ ತಿಂಗಳಿಗೆ ಸರಿಯಾಗಿ ಸಂಬಳ ಕೊಡ್ತೇನೆ ಆ ಕೃತಜ್ಞತೆ ನಿಮಗಿರಲಿ’ ಅಂದಾಗ ಇದೇ ಮಾತು ಮತ್ತೆ ನೆನಪಾಗುತ್ತೆ. ಕೆಲಸ ಮಾಡಿಸಿಕೊಂಡವನು ಸಂಬಳ ಕೊಡಲೇಬೇಕಾದುದು ಕರ್ತವ್ಯ ಅಲ್ವಾ, ಅದನ್ನೇ ತಾನು ಮಾಡುತ್ತಿರುವ ಮಹದುಪಕಾರ ಅಂತ ಹೇಳಿದರೆ ಹೇಗಿರುತ್ತೆ? ಯಾವುದೇ ಸಾಧನೆಯಿಲ್ಲದ, ಉತ್ತಮ ಕೆಲಸವೊಂದನ್ನೂ ಮಾಡದ, ಯಾರಿಗೂ ಉಪಕಾರಿಯಲ್ಲದ ಒಬ್ಬ ವ್ಯಕ್ತಿಯನ್ನು ಕರೆತಂದು ಈತ ಯಾರಿಗೂ ಮೋಸ ಮಾಡಿಲ್ಲ ಅಂತ ಸನ್ಮಾನ ಮಾಡಲಾದೀತೆ, ಇದೂ ಹಾಗೆ ಅಲ್ಲವಾ?
ಹೆಂಡತಿಗೆ ನಾನು ಬಡಿಯುವುದಿಲ್ಲ ಎಂಬುದೊಂದು ಹೆಗ್ಗಳಿಕೆಯಾ? ಅಸಲಿಗೆ ಬಡಿಯುವಂಥ ಕ್ರೂರ ಮೃಗ ನೀನಾಗಲು ಸಾಧ್ಯವಾ, ವರದಕ್ಷಿಣೆಗಾಗಿ ಹೆಂಡತಿಯನ್ನು ಪೀಡಿಸುವ ಮನುಷ್ಯ ಎಷ್ಟು ಮೂರ್ಖನೋ, ವರದಕ್ಷಿಣೆ ಕೇಳಿಲ್ಲದ್ದಕ್ಕೆ ಬಡಾಯಿ ಕೊಚ್ಚಿಕೊಳ್ಳುವವನೂ ಅಷ್ಟೇ ಮೂರ್ಖನಾಗಿರುತ್ತಾನೆ. ಹೆಂಡತಿಯನ್ನು ಹಿಡಿದು ಬಡಿಯುವವನಂತೆಯೇ, ತಾನು ಬಡಿಯುವುದಿಲ್ಲವೆಂದು ಹೇಳಿಕೊಳ್ಳುವವನೂ ಸಣ್ಣವನಾಗುತ್ತಾನೆ. ನಮ್ಮನ್ನು ನಾವು ಯಾರೊಂದಿಗೆ ಹೋಲಿಸಿಕೊಳ್ಳುತ್ತೇವೆ ಎಂಬುದೂ ಬಹಳಷ್ಟು ಬಾರಿ ನಮ್ಮ ಯೋಗ್ಯತೆಗಳನ್ನು ನಿರ್ಧರಿಸುತ್ತವೆ.
(-ದರ್ಶನ್ ಆರಾಧ್ಯ, ಪತ್ರಕರ್ತರು, ಬೆಂಗಳೂರು)