ಅಂತರಂಗ
ಮನೆ ಮುಳುಗಿದರೂ ನೆನಪು ಮುಳುಗುವುದೇ..?
- ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರರು, ಮುಂಬೈ
ಕುರ್ಡಿ ಎಂಬುದು ಗೋವಾದ ಸೆಲವುಲಿಂ ನದಿಯ ಪಕ್ಕದ ಒಂದು ಊರು. ಪಶ್ಚಿಮ ಘಟ್ಟದ ಕಾಲುಬುಡದ ಈ ಸುಂದರ ಊರಿನ ಮೂಲಕ ಸೆಲವುಲಿಂ ನದಿ ಹರಿದು, ಗೋವಾದ ಅತ್ಯಂತ ದೊಡ್ಡ ನದಿಯಾದ ಝವಾರಿಯನ್ನು ಕೂಡುತ್ತದೆ.
ಕುರ್ಡಿ ಒಂದು ಕಾಲದಲ್ಲಿ ಶ್ರೀಮಂತ ಹಳ್ಳಿಯಾಗಿತ್ತು. ಇಲ್ಲಿ ವಿವಿಧ ಧರ್ಮ, ವಿವಿಧ ಜಾತಿಗೆ ಸೇರಿದ ಸುಮಾರು 3000 ಜನ ಬದುಕುತ್ತಿದ್ದರು. ಜೈಪುರ ಅತ್ರೌಳಿ ಘರಾಣದ ಖ್ಯಾತ ಗಾಯಕಿ ಪದ್ಮವಿಭೂಷಣ ಮೋಗುಬಾಯಿ ಇದೇ ಊರಿನವರು. ಅವರ ಶಿಷ್ಯೆ ಪದ್ಮಭೂಷಣ ಕಿಶೋರಿ ಅಮೋಣ್ಕರ್ ಕೂಡಾ ಇದೇ ಗ್ರಾಮಕ್ಕೆ ಸೇರಿದವರು.
ಇಲ್ಲಿನ ಮಣ್ಣು ಬಹಳ ಫಲವತ್ತಾಗಿದ್ದು ಜನ ಗದ್ದೆ ಉತ್ತು, ತಮಗೆ ಬೇಕಾದುದನ್ನುಬೆಳೆಯುತ್ತಿದ್ದರು. ಯಾವ ಮನೆಯನ್ನು ನೋಡಿದರೂ ಅದರ ಸುತ್ತ ಹಲಸಿನ ಹಣ್ಣಿನ ಮರಗಳು, ತೆಂಗಿನ ಮರಗಳು, ಮಾವಿನ ಮರಗಳು ಸೊಂಪಾಗಿ ಬೆಳೆದು ಇಡೀ ಊರು ಹಸಿರು ಹೊದ್ದು ಕಂಗೊಳಿಸುತ್ತಿತ್ತು.
ಹಲವಾರು ಮಂದಿರಗಳಿದ್ದವು. ಒಂದು ಮಸೀದಿ, ಮತ್ತೊಂದು ಚರ್ಚು ಕೂಡಾ ಇತ್ತು. ಇಂತಹ ಕುರ್ಡಿ 1986 ರಲ್ಲಿ ಇಲ್ಲವಾಯಿತು! ಆ ವರ್ಷ ಗೋವಾದ ಪ್ರಪ್ರಥಮ ಅಣೆಕಟ್ಟು (ಸೆಲವುಲಿಂ ಅಣೆಕಟ್ಟು)ಕಟ್ಟಲ್ಪಟ್ಟಾಗ ಕುರ್ಡಿ ಸಂಪೂರ್ಣವಾಗಿ ಜನಸಮಾಧಿಯಾಯಿತು! ಅಲ್ಲಿನ ಜನರೆಲ್ಲ ಪಕ್ಕದ ವಾಲ್ಕಾಣಿಗೆ ವಲಸೆ ಹೋದರು.
ಹೀಗೆ ಬೇರೆಡೆ ವಲಸೆ ಹೋದ ಕುರ್ಡಿ ನಿವಾಸಿಗಳು ಪ್ರತಿವರ್ಷ ಮೇ ತಿಂಗಳ ಸಮಯದಲ್ಲಿ ತಾವು ಬಿಟ್ಟು ಹೋದ ಕುರ್ಡಿಯ ತಮ್ಮ ಮೂಲ ಜಾಗಕ್ಕೆ ಬರುತ್ತಾರೆ. ಏಕೆಂದರೆ, ಮೇ ತಿಂಗಳಲ್ಲಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕೆಳಕ್ಕಿಳಿದು, ಬಿರುಕು ಬಿಟ್ಟ ನೆಲಕಾಣುತ್ತದೆ; ಮರಗಳ ಮೋಟು ಬುಡಗಳು ಕಾಣಿಸುತ್ತವೆ; ಮಂದಿರ, ಮಸೀದಿ, ಚರ್ಚುಗಳ ಅಳಿದುಳಿದ ಅವಶೇಷಗಳು ಕಾಣುತ್ತವೆ.
ಹಾಗೆಯೇ, ತಲಮಾರುಗಳಿಂದ ಅವರು, ಮತ್ತವರ ಹಿರಿಯರು ಬದುಕಿದ್ದ ಮನೆಗಳ ಅವಶೇಷಗಳೂ ಕಾಣುತ್ತವೆ! ಮುಳುಗಡೆಯಾದ ತಮ್ಮ ಮನೆಗಳನ್ನು ಗುರುತಿಸಿ, ಅದರ ಅಕ್ಕಪಕ್ಕ ಕುಳಿತು, ಕಟ್ಟಿಕೊಂಡು ತಂದ ಬುತ್ತಿಗಳನ್ನು ಬಿಚ್ಚಿ ಉಣ್ಣುತ್ತಾರೆ, ಹಾಡುತ್ತಾರೆ, ಕುಣಿಯುತ್ತಾರೆ. ಸೆಲ್ಫಿ ತೆಗೆದುಕೊಳ್ಳುತ್ತಾರೆ. ಹೀಗೆ, ಕೆಲವು ಗಂಟೆ ಕಾಲ ಅಲ್ಲಿದ್ದು, ಆ ಮನೆಯಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿ, ತಮ್ಮ ಇಂದಿನ ಜಾಗಕ್ಕೆ ವಾಪಾಸಾಗುತ್ತಾರೆ. ಪ್ರತಿವರ್ಷ ಇದು ಪುನರಾವರ್ತನೆಗೊಳ್ಳುತ್ತದೆ.
1979 ರಲ್ಲಿ ಹಾಸನದಲ್ಲಿ ಹೇಮಾವತಿ ಅಣೆಕಟ್ಟು (ಗೊರೂರು ಅಣೆಕಟ್ಟು) ಕಟ್ಟಲ್ಪಟ್ಟಾಗ ಮುಳುಗಡೆಯಾದ ಆನೇಕ ಹಳ್ಳಿಗಳಲ್ಲಿ ಶೆಟ್ಟಿಹಳ್ಳಿ ಎಂಬುದೂ ಒಂದು. ಕುರ್ಡಿಯಲ್ಲಾದಂತೆ ಶೆಟ್ಟಿಹಳ್ಳಿಯಲ್ಲಿಯೂ ಮನೆಮಠಗಳು, ಅಂಗಡಿಮುಗ್ಗಟ್ಟುಗಳು, ಧಾರ್ಮಿಕ ಸ್ಥಳಗಳೂ ಮುಳುಗಡೆಯಾದವು.
ಹೀಗೆ ಮುಳುಗಡೆಯಾದ ಕಟ್ಟಡಗಳಲ್ಲಿ ರೋಸರಿ ಚರ್ಚೂ (ಒಳಚಿತ್ರ) ಒಂದು. 1860 ರಲ್ಲಿ ಫ್ರೆಂಚ್ ಮಿಷನರಿಗಳಿಂದ ಕಟ್ಟಲ್ಪಟ್ಟ ಈ ಚಚರ್ು ಗಾಥಿಕ್ ಶೈಲಿಯ ವಾಸ್ತು ನಿಮರ್ಾಣದ ಒಂದು ಸುಂದರ ಉದಾಹರಣೆ.
ಮಳೆಗಾಲದಲ್ಲಿ ರೋಸರಿ ಚರ್ಚ್ ನ ಬಹುಭಾಗ ನೀರಡಿಯಲ್ಲಿದ್ದು, ತುದಿಭಾಗವಷ್ಟೇ ಕಾಣುತ್ತದೆ. ಆದರೆ, ಬೇಸಿಗೆ ಕಾಲದಲ್ಲಿ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, ಆಗ ಇದು ನೀರಿನಿಂದ ಎದ್ದು ಬಂದಂತೆ ಕಾಣಿಸುತ್ತದೆ! ಇತ್ತೀಚಿನ ವರ್ಷಗಳಲ್ಲಿ ರೊಸರಿ ಚರ್ಚನ್ನು ನೋಡಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.
ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ರೋಸರಿ ಚರ್ಚು ನೀಡುವ ಅನುಭವ ವಿಶಿಷ್ಟವಾದುದು. ಬೇಸಿಗೆಯಲ್ಲಿ ಪ್ರವಾಸಿಗರು ಇದನ್ನು ಇಡೀಯಾಗಿ ಕಂಡು ಕಣ್ಮನವನ್ನು ತುಂಬಿಸಿಕೊಳ್ಳಬಹುದು. ಮಳೆಗಾಲದಲ್ಲಿ, ದೋಣಿಯಲ್ಲಿ ಕುಳಿತು ಇದರ ಒಳಭಾಗದಲ್ಲಿ ವಿಹಾರ ಮಾಡುವುದು ಹ್ಯಾರಿ ಪಾಟರ್ ಕತೆಯಲ್ಲಿನ ಮ್ಯಾಜಿಕಲ್ ಅನುಭವವನ್ನು ನೀಡುತ್ತದೆ!
ಸುದ್ದಿದಿನ.ಕಾಂ|ವಾಟ್ಸಾಪ್|9980346243