ಅಂತರಂಗ
ಅರಿಮೆಯ ಅರಿವಿರಲಿ-49 : ತನ್ನತನದ ಪರೀಕ್ಷೆ
- ಯೋಗೇಶ್ ಮಾಸ್ಟರ್
ತನ್ನತನದ ಪ್ರತಿಮೆಯು ನಮ್ಮ ವ್ಯಕ್ತಿತ್ವದ ಮೂಲಕ ಪ್ರದರ್ಶನಗೊಳ್ಳುತ್ತದೆ. ಈ ಪ್ರದರ್ಶನವು ಕೆಲವು ಸಲ ಬಯಕೆಯಿಂದಾದರೆ, ಮತ್ತೆ ಕೆಲವು ಸಲ ಸಹಜ ಪ್ರಕಟಣೆಯಾಗಿರುತ್ತದೆ. ಏನಾದರಾಗಲಿ, ತನ್ನತನದ ಪ್ರಜ್ಞೆಯು ನಾನು ಎಂಬ ಭ್ರಮೆಯ ಅಹಂಕಾರಕ್ಕೆ ಜಾರದಿರಲು ಮಾನಸಿಕವಾಗಿ ಕೆಲವು ಚಟುವಟಿಕೆಗಳನ್ನು ಮಾಡಿಕೊಳ್ಳುತ್ತಿರಬೇಕು. ಜೊತೆಗೆ ಕೆಲವು ಅರಿವುಗಳನ್ನು ಜೀವಂತವಾಗಿರಿಸಿಕೊಂಡಿರಬೇಕು.
1. ಮೊದಲನೆಯದಾಗಿ ಯಾರು ಗುರುತಿಸಿದರೂ, ಗುರುತಿಸದಿದ್ದರೂ, ಪರಿಗಣಿಸಿದರೂ, ನಗಣ್ಯ ಮಾಡಿದರೂ ಅದಕ್ಕೆ ಮೌಲ್ಯವಿದೆ ಎಂಬುದರ ಬಗ್ಗೆ ತನ್ನಲ್ಲಿ ಸಮಾಧಾನವಿರಬೇಕು.
2. ತನ್ನ ತನ್ನತನವು ಮತ್ತೊಬ್ಬರ ಆತ್ಮಚಿತ್ರಣ ಅಥವಾ ತಾವು ಇರುವುದು ಹೀಗೆ ಎಂದು ತೋರುವ ಪ್ರದರ್ಶನದೊಂದಿಗೆ ಸ್ಪರ್ಧೆಯನ್ನು ಹೊಂದುವ ಮನೋಭಾವ ಇರಕೂಡದು. ಮತ್ತೊಬ್ಬರ ಅವರತನದೊಂದಿಗೆ ತಮ್ಮತನವನ್ನು ಪೈಪೋಟಿಗಿಡುವುದು ಅತ್ಯಂತ ಬಾಲಿಶವೂ ಮತ್ತು ತನ್ನತನದ ಸಾಕ್ಷಾತ್ಕಾರವಾಗಿಲ್ಲ ಎಂಬುದರ ಸ್ಪಷ್ಟ ಸೂಚನೆಯು. ಹೋಲಿಕೆಗಳು, ತುಲನೆಗಳು ಉಂಟಾಗಬಹುದು.
ಅದರಿಂದ ತಮ್ಮಲ್ಲಿ ಕೆಲವು ಸಲ ಬದಲಾವಣೆಗೆ ಅವಕಾಶವಾಗಬಹುದು.ಉತ್ತಮಗೊಳಿಸಿಕೊಳ್ಳಬಹುದು. ಆದರೆ ಈ ಮನೋಭಾವ ಪ್ರೇರಣೆಯಿಂದ ಆಗುತ್ತದೆಯೇ ಹೊರತು ಸ್ಪರ್ಧೆಯಿಂದಲ್ಲ.
ಪ್ರೇರಣೆಗೊಳ್ಳುವುದಕ್ಕೂ ಮತ್ತು ಪ್ರಚೋದನೆಗೊಂಡು ಸ್ಪರ್ಧೆಗಿಳಿಯುವುದಕ್ಕೂ ವ್ಯತ್ಯಾಸವಿದೆ. ಒಟ್ಟಾರೆ ಸ್ಫೂರ್ತಿ ಮತ್ತು ಸ್ಪರ್ಧೆ ಇವೆರಡರ ವ್ಯತ್ಯಾಸ ತಿಳಿದರೆ ಸಾಕು.
3. ವ್ಯಕ್ತಿಯ ಬೆಳವಣಿಗೆಯ ಹಂತಗಳಲ್ಲಿ ಈ ತನ್ನತನದ ಪ್ರಜ್ಞೆಯು ಪೊರೆ ಕಳಚಿಕೊಂಡು, ಹೊಸಹೊಸ ಸ್ಫೂರ್ತಿಗಳನ್ನು ಬಳಸಿಕೊಂಡು ವಿಕಾಸವಾಗುತ್ತಾ ಬರುತ್ತದೆ. ಈ ವಿಕಾಸದ ಹಂತವು ವ್ಯಕ್ತಿಯು ಜೀವಂತವಾಗಿರುವವರೆಗೂ ಪ್ರಕ್ರಿಯೆಯಲ್ಲಿಯೇ ಇರಬಹುದು. ಆದರೆ ಯೌವನದಿಂದ ವಯಸ್ಕನಾಗುವ ಹೊತ್ತಿಗೆ ಒಂದು ಹಂತಕ್ಕೆ ನಿಗದಿತವಾಗಿರುತ್ತದೆ. ಗಟ್ಟಿಗೊಂಡಿರುತ್ತದೆ. ಪೆಡಸುತನವಲ್ಲದಿದ್ದರೂ ಬಲವಾಗಿರುತ್ತದ್ದೆ. ಎಳಸುತನವನ್ನು ದಾಟಿ ಪ್ರಬುದ್ಧವಾಗಿರುತ್ತದೆ. ದೃಢವಾಗಿದ್ದರೂ ಕೂಡಾ ಸಲಿಲತೆಯನ್ನು (ಫ್ಲೆಕ್ಸಿಬಲಿಟಿ) ಹೊಂದಿರುತ್ತದೆ.
4. ತನ್ನತನವು ರೂಪುಗೊಳ್ಳುವುದು ಅನುಭವ, ಗಮನಿಸುವಿಕೆ ಮತ್ತು ಗ್ರಹಿಕೆಗಳಿಂದಾಗಿ. ಆದ್ದರಿಂದ ತಾನು ಪಡೆಯುವ ಅನುಭವದ ಬಗ್ಗೆ, ಅದನ್ನು ಗಮನಿಸುವ ತನ್ನ ದೃಷ್ಟಿಯ ಬಗ್ಗೆ, ಗ್ರಹಿಸುವ ರೀತಿಯ ಬಗ್ಗೆ ಪ್ರಜ್ಞಾಪೂರ್ವಕವಾಗಿ ಸಾಕ್ಷೀಕರಿಸುತ್ತಿರಬೇಕು. ಸರಳವಾಗಿ ಹೇಳುವುದಾದರೆ ತನ್ನ ತಾನು ನೋಡಿಕೊಳ್ಳುವ ಚಟುವಟಿಕೆಯನ್ನು ಎಂದಿಗೂ ನಿಲ್ಲಿಸಬಾರದು.
5. ತನ್ನತನವು ಜೀವಂತವಾಗಿದೆಯೇ ಇಲ್ಲವೇ ಎಂದು ನೋಡಿಕೊಳ್ಳಲು ತಮ್ಮ ಆಲೋಚನೆ, ವರ್ತನೆ, ಪ್ರತಿಕ್ರಿಯೆ ಮತ್ತು ನಡವಳಿಕೆಗಳ ಮೌಲ್ಯಮಾಪನ ಮಾಡಿಕೊಳ್ಳುತ್ತಿರಬೇಕು. ಕೆಲವೊಮ್ಮೆ ಉಳಿಕೆಯ (ಸರ್ವೈವ್) ಪ್ರಶ್ನೆಯಿಂದಾಗಿ, ಕೆಲವು ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳಿಂದಾಗಿ ತತ್ಕಾಲಕ್ಕೆ ತನ್ನತನವನ್ನು ಮರೆಯುವಂತಾಗಿ ಆ ಹೊತ್ತಿನ ವ್ಯವಸ್ಥೆಯ ಭಾಗವಾಗುವ ಅನಿವಾರ್ಯತೆ ಒದಗಿಬಿಡುತ್ತದೆ.
ಆದರೆ, ಅಂತಹ ಸಂದರ್ಭದಲ್ಲಿಯೂ ತಾನು ತನ್ನತನದ ಸ್ವರೂಪ ಮತ್ತು ಸ್ವಭಾವಕ್ಕೆ ವಿರುದ್ಧವಾಗಿ ಅಥವಾ ವ್ಯತಿರಿಕ್ತವಾಗಿ ಹೋಗುತ್ತಿದ್ದೇನೆ ಎಂಬ ಅರಿವು, ಸಂಕೋಚ, ಅಳುಕು ಇರಬೇಕು. ಒಂದು ವೇಳೆ ಆ ಹೊತ್ತಿಗೆ ಇರದಿದ್ದರೂ ನಂತರವಾದರೂ ನೆನಪಿಗೆ ಬಂದು ಸಂಕೋಚ, ಅಳುಕು, ಬೇಸರ ಉಂಟಾಗಬೇಕು. ಈ ನಾಚಿಕೆ ಮತ್ತು ಬೇಸರವು ಮತ್ತೆ ಸಾಯಲಿರುವ ತನ್ನತನವನ್ನು ಮತ್ತೆ ಉಜ್ಜೀವನಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಯಂ ಮೌಲ್ಯಮಾಪನದ ಚಟುವಟಿಕೆಯು ತನ್ನತನದ ಉಜ್ಜೀವನಕ್ಕೆ ಬಹಳ ಉಪಯುಕ್ತವಾಗಿರುತ್ತದೆ.
6. ತನ್ನತನದ ವ್ಯಕ್ತಿತ್ವವು ಹೇಗಿರುತ್ತದೆ ಮತ್ತು ಇತರ ವ್ಯವಸ್ಥೆಯಲ್ಲಿ ಅಥವಾ ಇತರರ ಸಹವಾಸಗಳಲ್ಲಿ ಇದೇ ವ್ಯಕ್ತಿತ್ವವು ಹೇಗೆ ವರ್ತಿಸುತ್ತದೆ ಎಂಬ ಹೋಲಿಕೆಯನ್ನು ಮಾಡಿಕೊಳ್ಳಬೇಕು. ತನ್ನತನಕ್ಕೆ ಸಲಿಲತೆಯ ಗುಣವೂ ಇರುವುದರಿಂದ ಅದು ಹೊರಗಿನ ಪ್ರಭಾವಕ್ಕೆ ಸುಲಭವಾಗಿ ಒಳಗಾಗುವ ಸಾಧ್ಯತೆಗಳಿರುತ್ತವೆ. ಆದರೆ ಅವು ತನ್ನತನದ ನೈತಿಕ ಮೌಲ್ಯದ ಪರಿಮಿತಿಯಲ್ಲಿ ಇದೆಯೋ ಇಲ್ಲವೋ ಎಂದು ತಕ್ಷಣಕ್ಕೆ ಗೊತ್ತಾಗದಿರಬಹುದು. ಆದರೆ ಪರೀಕ್ಷಿಸಿ ನೋಡಿಕೊಂಡಾಗ ಆಮೇಲಾದರೂ ಗೊತ್ತಾಗುತ್ತದೆ. ಮುಂದಿನ ದಾರಿಯಲ್ಲಿ ಎಚ್ಚರಿಕೆಯಿಂದ ಇದ್ದರಾಯಿತು.
7. ಸಾಮಾಜಿಕ ಜೀವನದಲ್ಲಿ ನಾವೆಂದಿಗೂ ಸರ್ವತಂತ್ರ ಸ್ವತಂತ್ರರಲ್ಲ ಎಂಬ ಅರಿವು ಸದಾ ಜಾಗೃತರಾಗಿರಬೇಕು. ವ್ಯಕ್ತಿಯೊಬ್ಬನ ನೈಸರ್ಗಿಕ ಸ್ವರೂಪವು, ಸ್ವಭಾವವು ಮತ್ತು ಸ್ವಧರ್ಮವು ಏನೇ ಇರಲಿ, ಅದರಿಂದ ರೂಪಿಸಿಕೊಂಡಂತಹ ತನ್ನತನದ ಪರಿಕಲ್ಪನೆಯು ಹೇಗೇ ಇರಲಿ, ಅದರ ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಮತ್ತು ಪ್ರಕಟಣೆಗೆ ಹಾತೊರೆಯಬಾರದು ಎಂಬ ಸೂಕ್ಷ್ಮತೆಯನ್ನು ಕೂಡಾ ಹೊಂದಿರಬೇಕು. ಅಲ್ಲದೇ ತನ್ನತನದ ವ್ಯಕ್ತಿಗೆ ರಹಸ್ಯ, ಖಾಸಗಿ, ಸಹಜತೆ ಮತ್ತು ಸಾರ್ವಜನಿಕ; ಈ ಮೂರರ ಬಗ್ಗೆ ಸ್ಪಷ್ಟತೆ ಇರುತ್ತದೆ.
8. ವ್ಯಕ್ತಿಯೊಬ್ಬನಿಗಿರುವ ತನ್ನತನದ ಸ್ಪರ್ಷತೆಯು ತನ್ನ ವ್ಯಕ್ತಿತ್ವದ ಪ್ರತಿಮೆಯ ಪ್ರದರ್ಶನ ಅಥವಾ ಪ್ರಕಟಣೆಯ ಬಗ್ಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಅದರ ತಾಳಿಕೆ ಮತ್ತು ಬಾಳಿಕೆಗೆ ಸೂಕ್ತವಾದಂತ ಚಟುವಟಿಕೆಗಳನ್ನು ಮಾಡುತ್ತಿರುತ್ತಾನೆ.
ಹೊಣೆಯರಿವ ತನ್ನತನ
ತನ್ನತನದ ಮೂಲದಲ್ಲಿ ಒಪ್ಪಿಕೊಂಡಿರುವ ಮತ್ತು ಅಪ್ಪಿಕೊಂಡಿರುವ ನೈತಿಕ ಮೌಲ್ಯವನ್ನು ಕಾಪಾಡಿಕೊಳ್ಳುವ ವ್ಯಕ್ತಿಯು ತನ್ನ ಪಾತ್ರಗಳ ನಿರ್ವಹಣೆಯ ಜೊತೆಜೊತೆಗೇ ಅವುಗಳ ತಾಳಿಕೆ ಮತ್ತು ಬಾಳಿಕೆಗೆ ಹೊಣೆಯರಿತ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ. ಉದಾಹರಣೆಗೆ ಅನಿರ್ಬಂಧಿತ ಪ್ರೇಮದ ಪ್ರತಿಮೆಯ ಪರಿಕಲ್ಪನೆಯೇ ತನ್ನತನವಾಗಿ ಒಬ್ಬ ವ್ಯಕ್ತಿಯು ರೂಪಿಸಿದ್ದಾನೆಂದುಕೊಳ್ಳಿ. ಯಾವ ಪಕ್ಷಪಾತವೂ ಇಲ್ಲದೇ ಎಲ್ಲರನ್ನೂ ಪ್ರೀತಿಸುವ ರೂಢಿಯನ್ನು ಮಾಡಿಕೊಂಡಿದ್ದಾನೆಂದುಕೊಳ್ಳಿ.
ಉಣ್ಣುವ, ಉಡುವ, ಕೊಡುವ ವಿಷಯಗಳು ಬಂದಾಗ ಅವನು ಎಲ್ಲರೊಂದಿಗೂ ತಮ್ಮವರು ಪರಕೀಯರು ಎಂಬ ಬೇಧಭಾವ ಇಲ್ಲದೇ ವರ್ತಿಸಬಹುದು. ಆದರೆ ತನ್ನ ಹೆಂಡತಿ, ಮಗಳು, ತನ್ನ ತಾಯಿ, ತಂದೆ, ತನ್ನ ವಿದ್ಯಾರ್ಥಿಗಳು, ತಮ್ಮ ಮನೆಯ ನಾಯಿ, ಮನೆಗೆ ತರಕಾರಿ ಮಾರುವವನು; ಹೀಗೆ ಪ್ರತಿಯೊಬ್ಬರ ಬಳಿಯೂ ಅವರ ಪಾತ್ರಗಳು ಭಿನ್ನವಾಗಿರುತ್ತವೆ. ಮತ್ತು ಜವಾಬ್ದಾರಿಗಳೂ ಕೂಡಾ ಬೇರೆಬೇರೆಯಾಗಿರುತ್ತದೆ.
ಅವುಗಳೆಲ್ಲದರ ಸ್ಪಷ್ಟತೆ ಅವನಿಗೆ ಇದ್ದು, ಅದಕ್ಕೆ ಸರಿಯಾಗಿ ವರ್ತಿಸುತ್ತಾನೆ. ಹಾಗೆಯೇ ಅವನ ವರ್ತನೆ, ಅವನ ನಿವೇದನೆಯೂ ಕೂಡಾ ಹೆಂಡತಿಯ ಬಳಿ, ಮಗಳ ಬಳಿ, ಸೊಪ್ಪು ಮಾರುವವಳ ಬಳಿ ಒಂದೇ ಆಗಿರುವುದಿಲ್ಲ. ಆದರೆ ಈ ಮೂವರ ಕುರಿತೂ ಒಂದೇ ಬಗೆಯಾಗಿ ಅನಿರ್ಬಂಧಿತ ಪ್ರೇಮವನ್ನು ಹೊಂದಿರಬಲ್ಲ. ಪ್ರೇಮವೆಂಬುದು ಅವನ ಗುಣಸ್ವಭಾವವೇ ಆಗಿರುತ್ತದೆ ಅಷ್ಟೇ. ಅವನ ಸಂಪರ್ಕಕ್ಕೆ ಬಂದವರಿಗೆಲ್ಲರಿಗೂ ಅದರ ಅನುಭವವಾಗಬಹುದು.
ವ್ಯತ್ಯಾಸಗಳ ಅರಿವು
ಒಟ್ಟಾರೆ ಈ ನನ್ನತನವೆಂಬದಕ್ಕೆ ಸ್ವಾಭಿಮಾನ ಮತ್ತು ಅಹಂಕಾರದ ನಡುವಿನ ವ್ಯತ್ಯಾಸ, ಪ್ರೇಮ ಮತ್ತು ಕಾಮದ ನಡುವಿನ ವ್ಯತ್ಯಾಸ, ಸಂಬಂಧ ಮತ್ತು ವ್ಯಾಮೋಹದ ನಡುವಿನ ವ್ಯತ್ಯಾಸ, ಧೋರಣೆಗಳಿಗೂ ಮತ್ತು ಮಾನಸಿಕ ಸಮಸ್ಯೆಗಳಿಗೂ ಇರುವ ವ್ಯತ್ಯಾಸ, ವ್ಯಕ್ತಿತ್ವದ ಸಹಜ ಪ್ರಕಟಣೆಗೂ ಮತ್ತು ವ್ಯಕ್ತಿತ್ವವನ್ನು ಕೃತಕವಾಗಿ ಪ್ರದರ್ಶಿಸುವುದಕ್ಕೂ ಇರುವ ವ್ಯತ್ಯಾಸ; ಇವೆಲ್ಲದರ ಬಗ್ಗೆ ಸ್ಪಷ್ಟವಾದ ಅರಿವು ಮತ್ತು ಅವಲೋಕಿಸಿಕೊಳ್ಳುವ ದೃಷ್ಟಿ ಇರಬೇಕು.
ತನ್ನನ್ನು ತಾನು ಮೌಲ್ಯಮಾಪನ ಮಾಡಿಕೊಳ್ಳುವ ವಿಮರ್ಶಾತ್ಮಕವಾದ ಮನೋಭಾವವನ್ನು ಹೊಂದಿರಬೇಕು. ಯಾವುದೇ ವಿಷಯದಲ್ಲಿ ಸ್ಪಷ್ಟತೆಯನ್ನು ಹೊಂದಿದ್ದಾರೆಂದರೆ ವ್ಯತ್ಯಾಸದ ಅರಿವು ಇರಬೇಕು. ವ್ಯತ್ಯಾಸಗಳ ಸ್ಪಷ್ಟತೆಯೇ ಗೊಂದಲಗಳಿಲ್ಲದ ಮನಸ್ಥಿತಿಗೆ ತಳಹದಿ. ತನ್ನಲ್ಲಿ ತಪ್ಪುಗಳೇನಿವೆ, ಒಪ್ಪುಗಳೇನಿವೆ ಎಂದು ಆತ್ಮವಿಮರ್ಶೆ ಮಾಡಿಕೊಂಡು, ಈ ತಪ್ಪುಗಳು ಹೇಗಾದವು? ಯಾವುದರಿಂದಾದವು? ಎಂದು ಆತ್ಮಾವಲೋಕನವನ್ನೂ ಮಾಡಿಕೊಳ್ಳಬೇಕು. ತನ್ನತನದ ಪರಿಕಲ್ಪನೆಯ ಗಟ್ಟಿತನವೇ ಈ ಆತ್ಮವಿಮರ್ಶೆ ಮತ್ತು ಆತ್ಮಾವಲೋಕನದ ಮೇಲಿದೆ.
ಆತ್ಮಸಾಕ್ಷಾತ್ಕಾರ ಎಂದರೆ ಬೇರೇನಲ್ಲ. ತನ್ನ ತಾನು ಅರಿಯುವುದಷ್ಟೇ. ಮನಶಾಸ್ತ್ರದಲ್ಲಿ ಕೆಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಪ್ರಾಮಾಣಿಕವಾಗಿ ಅವುಗಳಿಗೆ ಉತ್ತರಿಸುತ್ತಾ ತನ್ನ ವ್ಯಕ್ತಿತ್ವದ ಬಗೆ, ಅರಿಮೆಯ ಅರಿವು, ಮಾನಸಿಕ ಸಮಸ್ಯೆ; ಇತ್ಯಾದಿಗಳನ್ನು ತಿಳಿದುಕೊಳ್ಳುತ್ತೇವೆ. ನಮ್ಮತನದ ಪರೀಕ್ಷೆಯನ್ನು ಕೆಲವು ವೈಜ್ಞಾನಿಕ ಮತ್ತು ತಾರ್ಕಿಕ ಮಾನದಂಡದಿಂದ ಮಾಡಿಕೊಳ್ಳುತ್ತೇವೆ.
ಆಧ್ಯಾತ್ಮದಲ್ಲಿ, ಧಾರ್ಮಿಕತೆಯಲ್ಲಿ ಕೆಲವು ನೈತಿಕ ಮಾನದಂಡವನ್ನು ಮುಂದಿಟ್ಟುಕೊಂಡು ತಮ್ಮತನವನ್ನು ಪರೀಕ್ಷಿಸಿಕೊಳ್ಳಲಾಗುತ್ತದೆ. ಈ ಎರಡರ ಉದ್ದೇಶವೂ ಆರೋಗ್ಯಪೂರ್ಣಾವಾಗಿರುವ ಮನಸ್ಸು ಮತ್ತು ಆ ಮನಸ್ಸು ಉಂಟುಮಾಡುವ ಆರೋಗ್ಯಪೂರ್ಣವಾದ ಸಾಮಾಜಿಕ ಪರಿಸರ. ಇನ್ನುಳಿದ ಸ್ವರ್ಗ, ನರಕಗಳ ಪರಿಕಲ್ಪನೆಗಳು ಮುಗುದ ಮಗುವಿನಂತಹ ಮನಸುಗಳಿಗೆ ಕಲ್ಪಿತ ಚಾಕೊಲೆಟ್‍ಗಳ ಆಮಿಷವಷ್ಟೇ.
ಮುಂದುವರಿಯುವುದು
ಸುದ್ದಿದಿನ.ಕಾಂ|ವಾಟ್ಸಾಪ್|9980346243