ಬಹಿರಂಗ
ಮೈಸೂರು ವಿವಿಗೆ ‘ನಾಲ್ವಡಿ’ ಹೆಸರಿಡುವುದು ಇತಿಹಾಸ ಪ್ರಜ್ಞೆಯ ಸಂಕೇತ
ಮೈಸೂರು ಎಂಬ ಹೆಸರು ಬೌದ್ಧ ದೊರೆ ಮಹಿಷನು ಈ ಭಾಗವನ್ನು ಪ್ರಜಾಸತ್ತಾತ್ಮಕವಾಗಿ ಆಳಿ ಉದ್ಧರಿಸಿದ ಕಾರಣಕ್ಕಾಗಿ ಮಹಿಷಮಂಡಲ, ಮಹಿಷಪುರಿ, ಮಹಿಷೂರು ಮೊದಲಾದ ಹೆಸರುಗಳಿಂದ ಚಾರಿತ್ರಿಕವಾಗಿ ಹುಟ್ಟಿಕೊಂಡಿದೆ ಎಂಬುದು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಕನ್ನಡ ವಿಶ್ವಕೋಶ, ಇತಿಹಾಸಕಾರ ಶ್ರೀನಿವಾಸ ಹಾವನೂರರ ಬರವಣಿಗೆಗಳು ಮತ್ತು ಇತರ ಗ್ರಂಥಗಳ ಪರಾಮರ್ಶೆಯಿಂದ ದೃಢಪಡುತ್ತದೆ. ಹಿಂದಿನ ರಾಜ ಶ್ರೀ ಜಯಚಾಮರಾಜಒಡೆಯರ್ ಅವರು ತಮ್ಮ ಎಲ್ಲ ಪತ್ರ ವ್ಯವಹಾರಗಳಲ್ಲಿಯೂ ನಮ್ಮ ನಗರವನ್ನು ಮಹಿಷೂರು ಎಂದೇ ನಮೂದಿಸಿರುವುದು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಕೆಲವರು ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ನೀಡಿರುವ ಮೈಸೂರು ಎಂಬ ಈ ಹೆಸರಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವುದಾಗಿ ವಾದಿಸುತ್ತಿರುವುದು ಅರ್ಥಹೀನ.
ರಾಜರ್ಷಿ ನಾಲ್ವಡಿ ಕೃಷ್ಣರಾಜಒಡೆಯರ ದೂರದರ್ಶಿತ್ವದ ಫಲವಾಗಿ 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದಿತು. ನಾಲ್ವಡಿ ಕೃಷ್ಣರಾಜಒಡೆಯರ್ ಮೈಸೂರು ಸಂಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ನೀಡಿರುವ ಕೊಡುಗೆ ಅಮೂಲ್ಯವಾದುದು. ವಿಶೇಷವಾಗಿ ಅವರು ಮಹಿಳೆಯರು ಮತ್ತು ಹಿಂದುಳಿದ ವರ್ಗದವರ ಶಿಕ್ಷಣ ಮತ್ತು ಸಬಲೀಕರಣಗಳಿಗಾಗಿ ಸ್ವಾತಂತ್ರ್ಯಪೂರ್ವದಲ್ಲಿ ನೀಡಿರುವ ಕೊಡುಗೆ ಐತಿಹಾಸಿಕವಾದುದು. ರಾಷ್ಟ್ರಪಿತ ಗಾಂಧಿ ನಾಲ್ವಡಿಯವರ ಆಡಳಿತವನ್ನು ತುಂಬು ಹೃದಯದಿಂದ ಪ್ರಶಂಶಿಸಿ ಅವರನ್ನು ಸಮತಾರಾಜ್ಯ ಹರಿಕಾರ ಎಂದು ಕರೆದಿರುವುದು ಚರಿತ್ರೆಯಲ್ಲಿ ದಾಖಲಾಗಿದೆ.
ನಾಲ್ವಡಿಯವರ ಸಿದ್ಧಾಂತ ಮತ್ತು ಬದುಕನ್ನು ಬ್ರಾಹ್ಮಣಶಾಹಿಯ ವಕ್ತಾರರು ಅವರದೇ ಕಾರಣಗಳಿಗಾಗಿ ವಿರೋಧಿಸುತ್ತಾರೆ. ಅಲ್ಲದೇ ಮೈಸೂರು ಎಂಬ ಹೆಸರಿನಲ್ಲಿ ಇಲ್ಲದೇ ಇರುವಂತಹ ಭಾವ, ಸಂಸ್ಕøತಿ, ಪರಂಪರೆ ಮೊದಲಾದವುಗಳನ್ನು ಹುಡುಕಲು ಯತ್ನಿಸಿ ಯಾವುದೇ ಚಾರಿತ್ರಿಕ ಮಹತ್ವ ಇಲ್ಲದಿದ್ದರೂ ಮೈಸೂರು ವಿವಿಗೆ ಹಳೆಯ ಹೆಸರು ಮುಂದುವರೆಯಬೇಕೆಂಬ ವಿತಂಡವಾದವನ್ನು ಅವರು ಮಂಡಿಸುತ್ತಾರೆ. ಇದು ಸರಿಯಲ್ಲ. ಇತಿಹಾಸದ ಬಗ್ಗೆ, ನಾಲ್ವಡಿಯವರ ಕೊಡುಗೆ ಬಗ್ಗೆ ಮತ್ತು ಮಹಿಷೂರಿನ ಘನತೆ ಬಗ್ಗೆ ಕಾಳಜಿ ಇರುವವರು ಮೈಸೂರು ವಿವಿಗೆ ನಾಲ್ವಡಿ ಹೆಸರಿಡುವುದು ಸರ್ವರೀತಿಯಲ್ಲೂ ಸಮರ್ಥನೀಯವಾಗಿದೆ. ಮೊನ್ನೆ ಜರುಗಿದ ದಸರಾ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ರಾಜಮಾತೆ ಪ್ರಮೋದಾದೇವಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀಹೆಚ್.ಡಿ.ಕುಮಾರಸ್ವಾಮಿಯವರು ಮೈಸೂರು ವಿವಿಗೆ ನಾಲ್ವಡಿಯವರ ಹೆಸರನ್ನಿಡುವುದಾಗಿ ನೀಡಿರುವ ಭರವಸೆ ಶ್ಲಾಘನೀಯ.
-ಪ್ರೊ. ಬಿ.ಪಿ ಮಹೇಶ್ ಚಂದ್ರ ಗುರು
ಮೈಸೂರು ವಿಶ್ವವಿದ್ಯಾಲಯ