ದಿನದ ಸುದ್ದಿ
ತ್ಯಾವಣಿಗೆಯ ಪ್ರಸಿದ್ಧ ಐವಿನ್ ಕಂಪ್ಯೂಟರ್ ತರಬೇತಿ ಕೇಂದ್ರ ; ಸೃಜನಶೀಲ ಚಟುವಟಿಕೆಯೊಂದಿಗೆ ಕಂಪ್ಯೂಟರ್ ಕಲಿಸ್ತಾರೆ ಈ ಚೇತನ್
ಸುದ್ದಿದಿನ ವಿಶೇಷ – ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ : ಕಂಪ್ಯೂಟರ್ ತರಬೇತುದಾರರೊಬ್ಬರು ತನ್ನ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಬರುವ ಶಿಭಿರಾರ್ಥಿ ಗಳಿಗೆ ಕೇವಲ ಕಂಪ್ಯೂಟರ್ ತರಬೇತಿ ಮಾತ್ರವಲ್ಲದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮನೆಮಾತಾಗಿದ್ದಾರೆ.
ಹೌದು ಚನ್ನಗಿರಿ ತಾಲ್ಲೂಕಿನ ತ್ಯಾವಣಿಗೆ ಗ್ರಾಮದಲ್ಲಿರುವ ಐವಿನ್ ಕಂಪ್ಯೂಟರ್ ತರಬೇತಿ ಕೇಂದ್ರದ ಚೇತನ್ ಕುಮಾರ್ ವಿಶಿಷ್ಟ ರೀತಿಯಲ್ಲಿ ತಮ್ಮ ಕಾಯಕ ವೃತ್ತಿಯನ್ನು ನಿರ್ವಹಿಸುವ ಜೊತೆಗೆ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿರುವುದು ಮನುಷ್ಯತ್ವದ ಅಚಲ ನಂಬಿಕೆಯನ್ನ ಪ್ರತಿಬಿಂಬಿಸುತ್ತದೆ.
ಇಲ್ಲಿನ ವೈವಿಧ್ಯಮಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಸಂಭ್ರಮ ಮತ್ತು ಸಂಸ್ಕಾರವನ್ನು ಬೆಳೆಸುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಜೂನ್ 27,2022ರಲ್ಲಿ ಐವಿನ್ ಕಂಪ್ಯೂಟರ್ ತರಬೇತಿ ಕೇಂದ್ರ ಶುರು ಮಾಡಿದ ಇವರು ಕೇವಲ ಕಂಪ್ಯೂಟರ್ ಕಲಿಕೆ ಮಾತ್ರವಲ್ಲದೆ ಮಕ್ಕಳಿಗೆ ಬೇರೆ ಬೇರೆಯ ವಿಷಯಗಳ ಬಗ್ಗೆ ಅರಿವು ನೀಡಬೇಕು ಎಂದು ತೀರ್ಮಾನ ಮಾಡಿ ತಮ್ಮದೇ ಶೈಲಿಯಲ್ಲಿ ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ.
ಜೀವನದ ಜಂಜಾಟದಲ್ಲಿ ಮನೆಯ ಕಷ್ಟ ಜೀವನವನ್ನ ಅರಿತ ಮಕ್ಕಳು ಗೊಂದಲಕ್ಕೆ ಈಡಾಗುತ್ತಾರೆ ಎಂಬುದನ್ನು ಮನಗಂಡ ಇವರು ಮಕ್ಕಳ ಒತ್ತಡವನ್ನು ಕಡಿಮೆ ಮಾಡಲು ಮತ್ತು ವಿದ್ಯಾರ್ಥಿಗಳಲ್ಲಿ ಹಾಸ್ಯ ಪ್ರಜ್ಞೆ ಹಾಗೂ ಅಭಿವ್ಯಕ್ತಿ ಕಲೆ ಬೆಳೆಸಲು ಈ ವಿಶಿಷ್ಟ ಕಾರ್ಯಕ್ರಮವನ್ನ ಪ್ರತಿ ಶುಕ್ರವಾರ ಹಮ್ಮಿಕೊಂಡು ಮಕ್ಕಳನ್ನ ನಕ್ಕು ನಗಿಸುವ ಮೂಲಕ ಕಲಿಕೆಗೆ ಸ್ಫೂರ್ತಿ ನೀಡುತ್ತಿದ್ದಾರೆ.
ಆಟೋಟಗಳು
ಬೆಳೆವ ಮಕ್ಕಳು ದೇಶದ ಆಸ್ತಿ.. ಆ ಮಕ್ಕಳು ದೈಹಿಕ ಮತ್ತು ಮಾನಸಿಕ ಸದೃಢರಾಗಿರಬೇಕು ಆಗಲೇ ಕಲಿಕೆಗೆ ಸ್ಫೂರ್ತಿ ಸಿಗುತ್ತೆ ಎನ್ನುವ ಕಾರಣಕ್ಕೆ ಮಕ್ಕಳ ಜೊತೆಯಲ್ಲಿ ಮಕ್ಕಳಾಗಿ ಕೆಲವು ಆಟಗಳನ್ನ ಆಡಿಸುವ ಪರಿಪಾಠವನ್ನು ಮುಂದುವರಿಸುತ್ತ ಬಂದಿದ್ದಾರೆ.
ಒಂದು ದಿನದ ಪಿಕ್ನಿಕ್
ಸದರಿ ತರಬೇತಿ ಕೇಂದ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ ವರ್ಷಕ್ಕೊಮ್ಮೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ನಕ್ಕು ನಲಿಸಿ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಂಡು ಬರುವ ವಾಡಿಕೆ ಮುಂದುವರೆಯುತ್ತಲೇ ಇದೆ. ಇದರ ಮೂಲಕ ವಿದ್ಯಾರ್ಥಿಗಳಲ್ಲಿ ಸ್ನೇಹಭಾವ ಮತ್ತು ಹೊರಜಗತ್ತಿನ ಅರಿವು ಮೂಡಿಸಲು ಸಹಕಾರಿಯಾಗಿದ್ದಾರೆ.
ಸಾಮೂಹಿಕ ಭೋಜನ
ಇತ್ತೀಚಿಗೆ ರಾಜಕೀಯ ವ್ಯವಸ್ಥೆಯಲ್ಲಿ ಬಡಜನರ ಮನೆಯಲ್ಲಿ ಊಟ ಮಾಡುವುದೇ ದೊಡ್ಡ ಸುದ್ದಿಯನ್ನಾಗಿ ಬಿಂಬಿಸುವ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಬಡತನ ಸಿರಿತನ ಹಾಗೂ ಜಾತಿ-ಭೇದದ ಅರಿವು ಇರದೇ ಎಲ್ಲರು ಎಲ್ಲರನ್ನು ಪ್ರೀತಿಸಬೇಕು, ಎಲ್ಲರೊಟ್ಟಿಗೆ ಸಾಮೂಹಿಕವಾಗಿ ಒಬ್ಬರ ಮನೆಯಲ್ಲಿನ ಊಟ ಮತ್ತೊಬ್ಬರು ಮಾಡುವ ಮೂಲಕ ಬೇಧ ಭಾವ ಅಳಿಸುವ ಕಾರ್ಯಕ್ಕೆ ಮುನ್ನಡಿ ಬರೆದಿದ್ದಾರೆ.
ಜನ್ಮ ದಿನಾಚರಣೆ
ಈ ತರಬೇತಿ ಕೇಂದ್ರಕ್ಕೆ ಬರುವ ಮಕ್ಕಳ ಜನ್ಮ ದಿನಾಚರಣೆ ಮಾಡಿ ಶುಭ ಹಾರೈಸಿ ಸಿಹಿ ಹಂಚಿ ಸಂಭ್ರಮ ಪಡುತ್ತಾರೆ.
ಪೂಜೆ ಪುನಸ್ಕಾರ
ಇನ್ನು ಮಕ್ಕಳಲ್ಲಿ ಸಂಪ್ರದಾಯ, ದೇಶದ ಮೇಲೆ ಅಭಿಮಾನ, ದೇವರ ಮೇಲೆ ನಂಬಿಕೆ, ಉತ್ತಮ ಕೆಲಸದ ಬಗ್ಗೆ ಸಾರ್ಥಕತೆ ಭಾವ ಬರಬೇಕು ಎಂಬ ಕಾರಣಕ್ಕೆ ಪೂಜೆ ಪುನಸ್ಕಾರ, ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವುದು ಸ್ವಾಗತರ್ಹ.
ಆರೋಗ್ಯ ಶಿಬಿರ ಆಯೋಜನೆ
ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ತರಬೇತಿ ಕೇಂದ್ರದಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು ಅತ್ಯಂತ ಮೆಚ್ಚುವಂತಹ ಕೆಲಸವಾಗಿದೆ.
ಕೌಶಲ್ಯ ಸ್ಪರ್ಧೆ
ಇನ್ನು ಪ್ರತಿವರ್ಷ ತಮ್ಮ ತರಬೇತಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಅರಿವು ಮೂಡಿಸುವ ಸಲುವಾಗಿ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲಾಗುತ್ತದೆ. ಇದರ ಜೊತೆಗೆ ಅತ್ಯುತ್ತಮ ವಿದ್ಯಾರ್ಥಿಗಳಿಗೆ
ಬಹುಮಾನ ವಿತರಿಸುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಐವಿನ್ ತರಬೇತಿ ಕೇಂದ್ರ ಸಾಮಾಜಿಕವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ.
ಬೀಳ್ಕೊಡುಗೆ ಸಮಾರಂಭ
ಇನ್ನೂ ಕೋರ್ಸ್ ಮುಗಿಸಿ ಹೋಗುವ ವಿದ್ಯಾರ್ಥಿಗಳಿಗೆ ಗೌರವಪೂರ್ವಕವಾಗಿ ವಿದಾಯ ಹೇಳುವ ಮೂಲಕ ಗುರುವಿನ ಮತ್ತು ಸಂಸ್ಥೆಯ ಬಾಂಧವ್ಯವನ್ನು ಗಟ್ಟಿಗೊಳಿಸಲಾಗುತ್ತದೆ.
300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ
ಜೂನ್ 27, 2022ರಲ್ಲಿ ಆರಂಭವಾದ ಈ ತರಬೇತಿ ಕೇಂದ್ರದಲ್ಲಿ ಇಲ್ಲಿಯವರೆಗೆ 300ಕ್ಕೂ ಹೆಚ್ಚು ಶಿಬಿರಾರ್ಥಿಗಳು ತರಬೇತಿ ಪಡೆದಿದ್ದಾರೆ. ಒಂದು ಬ್ಯಾಚ್ ಗೆ 8 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.
ನಮಗೆ ಕಂಪ್ಯೂಟರ್ ಕಲಿಕೆಯೊಂದಿಗೆ ಉತ್ತಮ ವಿಚಾರಗಳನ್ನು ಇಲ್ಲಿ ಕಲಿಸಲಾಗುತ್ತಿದೆ. ಪ್ರತಿ ವಾರವು ಒಂದೊಂದು ವಿಭಿನ್ನ ಪ್ರಯತ್ನ ಮಾಡುವ ಮೂಲಕ ಚೇತನ್ ಸರ್ ಹೊಸ ವಿಚಾರಗಳನ್ನು ಕಲಿಸುತ್ತಾರೆ. ನಮ್ಮಲ್ಲಿರುವ ಭಯ ಹೊರಗಡೆ ತಗೆಯೋಕೆ ತುಂಬಾ ಪ್ರಯತ್ನ ಪಡ್ತಾರೆ.. ಅವರ ಆದರ್ಶ ಗುಣಗಳೇ ನಮಗೆ ನಮ್ಮ ಸಾಧನೆಯ ಮೆಟ್ಟಿಲುಗಳಾಗಬೇಕು ಅದಕ್ಕಾಗಿ ನಮ್ಮ ಪ್ರಯತ್ನ ಇದ್ದೇ ಇದೆ.
~ಶಿಬಿರಾರ್ಥಿಗಳು
ಗ್ರಾಮೀಣ ಭಾಗದ ಒಂದು ಕಂಪ್ಯೂಟರ್ ಸೆಂಟರ್ ಇಷ್ಟೊಂದು ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನೀಯ. ಇದು ಮಕ್ಕಳಲ್ಲಿ ಕೇವಲ ಡಿಜಿಟಲ್ ಕೌಶಲ್ಯವನ್ನಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿಯನ್ನು ಕೂಡ ಬೆಳೆಸುತ್ತದೆ.
ತ್ಯಾವಣಿಗೆಯ ಐವಿನ್ ಕಂಪ್ಯೂಟರ್ ಸೆಂಟರ್‌ನ ಈ ಮಾದರಿ ಕಾರ್ಯಕ್ರಮಗಳು ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ವರದಾನವಾಗಿದೆ.
ತ್ಯಾವಣಿಗೆ, ಅರೇಹಳ್ಳಿ -ಕದರನಹಳ್ಳಿ, ಕಬ್ಬಳ, ಕರೆಕಟ್ಟೆ, ಮತ್ತಿ, ಬೆಳಲಗೆರೆ, ಮಿಯಾಪುರ ಸೇರಿದಂತೆ ಅಕ್ಕಪಕ್ಕ ಗ್ರಾಮದ ಹಲವಾರು ಮಕ್ಕಳು ಈ ತರಬೇತಿ ಕೇಂದ್ರಕ್ಕೆ ಬಂದು ತರಬೇತಿ ಪಡೆದಿದ್ದಾರೆ.
ಸಮಾಜದಲ್ಲಿ ಆದಷ್ಟು ಒಳ್ಳೆಯ ಕೆಲಸಗಳನ್ನ ಮಾಡಿ ಮಕ್ಕಳಿಗೆ ಮಾದರಿ ಯಾಗಿರಬೇಕು. ಈ ತರಬೇತಿ ಕೇಂದ್ರ ಆರಂಭಕ್ಕೆ ತುಂಬಾ ಕಷ್ಟಪಟ್ಟಿದ್ದೇನೆ. ನಾವು ಪಟ್ಟ ಕಷ್ಟ ಮುಂದಿನ ಪೀಳಿಗೆ ಪಡಬಾರದು. ಕಲಿಕೆಗೂ ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಎಷ್ಟೋ ಮಕ್ಕಳಿಗೆ ನಾವು ಹೇಳಿದಷ್ಟು ಹಣ ಕೊಡೋಕೆ ಆಗಲ್ಲ ಹಾಗಂತ ಅವರನ್ನು ಕಲಿಸದೇ ಕಳಿಸಲ್ಲ.. ಹಣದಲ್ಲಿ ರಿಯಾಯ್ತಿ ನೀಡಿ ಅವರನ್ನು ಕಲಿಸೋಕೆ ಹುರಿದುಂಬಿಸುತ್ತೇವೆ ಎನ್ನುತ್ತಾರೆ ಚೇತನ್ ಕುಮಾರ್.
ಇನ್ನು ಟ್ರೈನರ್ ಗಾಯತ್ರಿ ಅವರು ಕೂಡ ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿ ಕಂಪ್ಯೂಟರ್ ಕಲಿಸುತ್ತಾರೆ. ಹಾಗೆಯೇ ಈ ಹಿಂದೆ ಇದ್ದ ವಿನುತಾ ಎಂಬ ಟ್ರೈನರ್ ಅವರ ಶ್ರಮ ತುಂಬಾ ಇದೆ ಎನ್ನುತ್ತಾರೆ ಚೇತನ್ ಕುಮಾರ್. ಒಟ್ಟಾರೆ ವಿಭಿನ್ನ ರೀತಿಯಲ್ಲಿ ಕಂಪ್ಯೂಟರ್ ಕಲಿಕೆ ಜೊತೆಗೆ ಬೇರೆ ಬೇರೆ ವಿಷಯಗಳ ಬಗ್ಗೆ ಅರಿವು ಮೂಡಿಸುವ ಇವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ.
ಸುದ್ದಿದಿನ|ವಾಟ್ಸಾಪ್|9980346243

ದಿನದ ಸುದ್ದಿ
ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’
ಸುದ್ದಿದಿನ,ದಾವಣಗೆರೆ: ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಶ್ಮಿ . ಸಿ. ಹೆಚ್ ಅವರು ಉದ್ಘಾಟಿಸಿದರು.
ಸನಾವುಲ್ಲಾ ನವಿಲೇಹಾಳು ಅವರು ಉಪನ್ಯಾಸ ಮಾಡಿ ಹೊಸ ತಲೆಮಾರಿನವರು ಸಮಾಜಿಕ ಜಾಲತಾಣಗಳಲ್ಲಿ ಗೇಮ್ , ರೀಲ್ಸ್ ಇತರೆ ವಿಷಯಗಳಲ್ಲಿ ಮುಳುಗಿ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟರು.
ಉಪಸ್ಥಿತರಿದ್ದ ಕಾಲೇಜಿನ ಕುಲಸಚಿವರಾದ ಶ್ರೀ ಜಗದೀಶ್ ಹೆಚ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮಗೆ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿನಿಂತು ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದರು. ಸಿಸಿಟೆಕ್ ಮ್ಯಾನೇಜರ್ ಆದ ಶ್ರೀ ಶಿವಕುಮಾರ ಸ್ವಾಮಿ ಎಸ್.ಹೆಚ್. ಸಂಯೋಜಕರಾದ ಶ್ರೀ ಮತಿ ಆಸೀಯಾ ಬಾನು ಬಿ. ಪ್ರಾಸ್ಥಾವಿಕವಾಗಿ ಮಾತನಾಡಿದರು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಬೃಂದ ಕಾರ್ಯಕ್ರಮ ನಿರೂಪಿಸಿದರು,
ವೈಷ್ಣವಿ, ಲಾವಣ್ಯ, ಭಾವನ ಪ್ರಾರ್ಥಿಸಿದರು, ಉಪನ್ಯಾಸಕಿ ಪ್ರಿಯಾಂಕ ಟಿ ಎಸ್ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ4 days agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ2 days agoಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’
-
ದಿನದ ಸುದ್ದಿ4 days agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
-
ದಿನದ ಸುದ್ದಿ4 days agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್


