ಅಂತರಂಗ
ನೀವೇನಂತೀರಿ…?
ಹಿಂದೆಲ್ಲಾ ಕೇವಲ ಅಧಿಕೃತ ಸರ್ಕಾರಿ ಇಲಾಖೆಗಳು ಅಥವಾ ಸ್ಥಳೀಯ ಸಂಸ್ಥೆಗಳು ಮಾತ್ರವೇ ಪ್ರಶಸ್ತಿ – ಪುರಸ್ಕಾರ ನೀಡುತ್ತಿದ್ದವು… ಆದರೆ ಇಂದು ಕಾಲ ಬದಲಾಗಿದೆ,, ಅನೇಕ ಖಾಸಗಿ ಸಂಘ – ಸಂಸ್ಥೆಗಳು ನಾನಾ ಕ್ಷೇತ್ರಗಳಲ್ಲಿ ನಾನಾ ವಿಧದಲ್ಲಿ ವೇದಿಕೆಗಳ ಮೂಲಕ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಆದರೆ ಪ್ರಶಸ್ತಿ -ಪುರಸ್ಕಾರಗಳ ಭರಾಟೆ ಜೋರಾಗಿ ಅದರ ಮೌಲ್ಯ ಕುಸಿಯುತ್ತಿರುವುದು ಮಾತ್ರ ಶೋಚನೀಯ ಸಂಗತಿ. ಎಲ್ಲಕ್ಕೂ ಮಿಗಿಲಾಗಿ ಕೊಡುಕೊಳ್ಳುವ ವ್ಯಾಪಾರದ ಸರಕಾಗಿ ಮಾರ್ಪಡುತ್ತಿರುವುದು ಮತ್ತು ವ್ಯಾವಹಾರಿಕ ಲಾಭದ ಲೆಕ್ಕಾಚಾರದ ಮೇಲೆ ಪ್ರಶಸ್ತಿಗಳ ಶೀರ್ಷಿಕೆ ಪ್ರಕಟಗೊಳ್ಳುತ್ತಿರುವುದು ನಿಜಕ್ಕೂ ಖೇದಕರ… ಪ್ರೋತ್ಸಾಹ – ಪ್ರೇರಣೆಗೆ – ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಟ್ಟರೆ ಸಾಕಲ್ಲವೇ ? ಕೆಲವೊಮ್ಮೆ ಕಾರ್ಯಕ್ರಮಗಳ ಆಯೋಜನೆಗೆ ಪರಸ್ಪರ ಸಹಕಾರ ತತ್ವ ಅವಶ್ಯವೆಂಬ ಮಾತನ್ನು ಒಪ್ಪೋಣ. ಆದರೆ ಸದ್ದಿಲ್ಲದೆ ಲೋಭಿತನಕ್ಕೆ ದೂಡಿ ವ್ಯಕ್ತಿ ಮತ್ತು ವ್ಯಕ್ತಿತ್ವದ ಅದಃಪತನಕ್ಕಚ್ಚಿ, ವಾಮ ಮಾರ್ಗದ ಹಾದಿ ಹಿಡಿಸುವ ಇವುಗಳ ಅವಶ್ಯಕತೆಯಾದರೂ ಇದೆಯೇ ? ಪ್ರತಿಭೆಗೆ ಪ್ರಶಸ್ತಿಯೇ ಮಾನದಂಡವೇ ? ಸಿಕ್ಕವನಿಗೆ ಸೀರುಂಡೆ ಎಂಬಂತೆ ಬಾಚಿ ತಬ್ಬುತ್ತಿರುವ ಇವುಗಳಿಗೆ ಶಾಶ್ವತತೆ ಮತ್ತು ಸಾರ್ಥಕತೆಯಾದರೂ ದೊರಕೀತೇ…? ಅನೇಕ ಬುದ್ಧಿ ಜೀವಿಗಳಿಗಿದು ದಂಧೆಯಾಗಿರುವುದಂತೂ ದುರಂತವೇ ಸರಿ. ಇವುಗಳಿಗಾಗಿ ಮುಗಿ ಬೀಳುತ್ತಿರುವ ಬಹುತೇಕರ ಮೂರ್ಖತನದ ಪರಮಾವಧಿಯ ಕಂಡು ಭಗವಂತನಿಗೂ ನಗು ಬಂದಿರಬಹುದು… ಕ್ಷೇತ್ರ ಯಾವುದೇ ಇರಲಿ ಆತ್ಮ ತೃಪ್ತಿಗಾಗಿ ಕ್ರಿಯಾಶೀಲರಾಗಿರುವವರಿಗೆ ಇವುಗಳ ಹಂಗೇ ಬೇಕಿಲ್ಲ.. ಅಂಥವರು ಅರ್ಜಿ ಹಿಡಿದು ನಿಲ್ಲುತ್ತಿಲ್ಲ , ಶಿಫಾರಸ್ಸಿನ ಗೋಜಿಗೂ ಹೋಗುತ್ತಿಲ್ಲ,,, ಅದರ ಗೊಡವೆಯೂ ಅವರಿಗೆ ಬೇಕಿಲ್ಲ.. ನಿತ್ಯ ಕಾಯಾ – ವಾಚಾ – ಮನಸಾ ಜೀವ ತೇಯುತ್ತಿರುವ ಯಾವ ಶ್ರಮಜೀವಿಗಳು ಅರ್ಜಿ ಹಾಕುತ್ತಿದ್ದಾರೆ ಹೇಳಿ ? ಅಂಥವರಿಗೆ ಯಾರು ಶಿಫಾರಸ್ಸು ಮಾಡುತ್ತಿದ್ದಾರೆ ? ಯಾರು ಕೊಡುತ್ತಿದ್ದಾರೆ ಹೇಳಿ ?ಹಣ, ಕಮೀಷನ್, ಥಳಕು – ಬಳಕು ಇತ್ಯಾದಿ ಸೇರಿದಂತೆ ಯಾವ ರೂಪದಲ್ಲಾದರೂ ಸರಿಯೇ ಬಹುಪಾಲು ಕೊಡುವವರು ಮತ್ತು ಶಿಫಾರಸ್ಸಿಗರದು ಲಾಭದ ನಿರೀಕ್ಷೆ ಇರುವುದಂತೂ ವಾಸ್ತವ ಸತ್ಯ .. ಇಂತಹ ಪ್ರಶಸ್ತಿಗಳಿಗೆ ಧಿಕ್ಕಾರ ಹೇಳಿ ಸುಮ್ಮನೆ ತಮ್ಮ ಪಾಡಿಗೆ ತಾವು ಕಾಯಕದಲ್ಲಿ ಕೈಲಾಸ ಕಾಣುವ ಬುದ್ಧಿ ನಮ್ಮ ಜನಕ್ಕೆ ಬರಬೇಕಿದೆ… ಸಂಘ – ಸಂಸ್ಥೆಗಳಿಗೆ ನಿಜವಾಗಿಯೂ ಕಳಕಳಿ ಇರುವುದೇ ಆದರೆ ಈ ಹುಚ್ಚಾಟಗಳನ್ನ ಬಿಟ್ಟು ಜನರನ್ನು ಕ್ರಿಯಾಶೀಲರನ್ನಾಗಿಸುವ – ದುಡಿಮೆಗಚ್ಚುವ -ಪ್ರಾಮಾಣಿಕರನ್ನಾಗಿಸುವ ಯೋಚನೆ ಮತ್ತು ಯೋಜನೆಗಳತ್ತ ಚಿತ್ತ ಹರಿಸಬೇಕಿದೆ..
– ಗಂಗಾಧರ ಬಿ ಎಲ್ ನಿಟ್ಟೂರ್
ದಾವಣಗೆರೆ