ಅಂತರಂಗ
ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!
- ಕೆ.ಶ್ರೀಧರ್ (ಕೆ.ಸಿರಿ), ಯುವ ಸಾಹಿತಿ
ಗಡಿ ಪ್ರದೇಶಗಳೆ ಹಾಗೆ ವಿವಿಧ ರೀತಿಯ ವೈಶಿಷ್ಟ್ಯ ಹಾಗೂ ಪ್ರಪಂಚದ ಮೂಲೆಯಲ್ಲಾಗುವ ಕ್ರಿಯೆಗಳಿಗೆ ಪ್ರತಿಕ್ರಿಯಿಸುವ ಸ್ಪಂದನಾಶೀಲತೆಯನ್ನು ಗಡಿರೇಖೆಯಲ್ಲಿರುವ ಜಿಲ್ಲೆಗಳಾಗಲಿ,ರಾಜ್ಯಗಳಾಗಲಿ ಅಥವಾ ದೇಶದ ಗಡಿಯಲ್ಲಾಗಲಿ ಹೊಂದಿರುತ್ತವೆ ಗಡಿರೇಖೆಯಲ್ಲಿನ ಚಟುವಟಿಕೆಗಳು, ಸಂಪ್ರದಾಯಗಳು, ಜನಜೀವನ ಪದ್ದತಿಗಳುಆಡಳಿತಾತ್ಮಕ ವಿಚಾರಗಳು ವಿಭಿನ್ನವಾಗಿರುತ್ತವೆ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಮರಾಜನಗರ ಹಚ್ಚ ಹಸಿರುಳ್ಳ ಬೆಟ್ಟ ಗುಡ್ಡಗಳು, ನದ-ನದಿಗಳನ್ನೊಳಗೊಂಡಿರುವ ಒಂದು ಪ್ರವಾಸಿಗರನ್ನು ಸೆಳೆಯುವ ಭೂ ಲೋಕದ ಸ್ವರ್ಗ ಎಂದರೆ ಬಹುಶಃ ತಪ್ಪಾಗಲಾರದು. ಇಂತಹ ಗಡಿಜಿಲ್ಲೆಯಿಂದ ಕನ್ಯಾಕುಮಾರಿ ಪ್ರಸಿದ್ದ ಪ್ರವಾಸಿ ತಾಣಕ್ಕೆ ಹೋಗಬೇಕೆಂದು ಗೆಳೆಯರೆಲ್ಲರೂ ನಿರ್ಧರಿಸಿ ದಿನಾಂಕ 30/04/2022 ರ ಸಂಜೆ ಹೊತ್ತಿಗೆ ವಾಹನವೇರಿ ಕನ್ಯಾಕುಮಾರಿಯ ಕಡೆಗೆ ಹೊರಟೆವು.
ಲಗೇಜುಗಳು, ಶೂಗಳು, ಚಾರ್ಜರ್, ಪವರ್ ಬ್ಯಾಂಕ್ ಎಲ್ಲವೂ ತುಂಬಿಕೊಂಡು ಪುಣಜನೂರು ಚೆಕ್ ಪೋಸ್ಟ್ ದಾಟಿ ಹೊರಟೆವು ಆರಂಭದಲ್ಲಿಯೇ ದಾರಿಯಲ್ಲಿ ನಮಗೆ ಆನೆಗಳ ದಂಡು ಕಂಡು ಸಂತೋಷವಾಯಿತು ಆನೆ ಅಂದ್ರೆ ಎಂತಾ ಆನೆಗಳಿಂತೀರಾ ದೊಡ್ಡ ದೊಡ್ಡ ಕಾಡಾನೆಗಳು ರೋಡಿನ ಪಕ್ಕದ ಹುಲ್ಲುಗಾವಲಿನಲ್ಲಿ ಬೆಟ್ಟದಂತೆ ನಿಂತು ಸೊಂಡಿಲಾಡಿಸುತ್ತಿದ್ದವು.
ಹಾಗೆಯೇ ವಾಹನದಲ್ಲಿ ಪ್ರಯಾಣಿಸುತ್ತಾ ಸಿನೆಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಹಾಡುಗಳನ್ನು ಹಾಡುತ್ತಾ ನಾನ ತರಹದ ಚೇಷ್ಟೆಗಳೊಂದಿಗೆ ನಮ್ಮ ಪ್ರಯಾಣ ಸಾಗಿ ಬಣ್ಣಾರಿಯ ಬಣ್ಣಾರಮ್ಮನ ದರ್ಶನ ಪಡೆದು ಡಾಬಾವೊಂದರಲ್ಲಿ ಊಟ ಸೇವಿಸಿ ಮುಂದೆ ಸಾಗಿದೆವು ಊಟದ ನಂತರ ಎಲ್ಲರೂ ಮೊಬೈಲ್ ಎಂಬ ಮಾಯಲೋಕದಲ್ಲಿ ಮುಳುಗಿ ಮಗ್ನರಾದೆವು ಮಧ್ಯದಲ್ಲಿ ಒಬ್ಬ ಗೆಳೆಯ ಬಸಣ್ಣಿ ಬಾ….ಬಸಣ್ಣಿ..ಬಾ ಎಂಬ ಹಾಡು ಪ್ಲೇ ಆಗಿದ್ದೆ ತಡ ಕುಳಿತಿರುವ ಹಾಸನದಿಂದ ಎದ್ದು ಬಂದು ಕುಣಿಯಲಾರಂಭಿಸಿ ಉಳಿದವರು ಕುಣಿಯಲಾರಂಭಿಸಿದೆವುಕುಣಿಯಲಾರಂಭಿಸಿದೆವು.
ಬೆವರು ಹರಿದು ದಮ್ಮತ್ತಿದಾಗ ರಾತ್ರಿಯ ಆ ಕಿಟಕಿಯ ಗಾಳಿಗೆ ತಲೆಗಳು ತೂಗಿ ಕುಳಿತಲ್ಲಿಯೇ ಎಲ್ಲರೂ ನಿದ್ರೆಗೆ ಜಾರಿದೆವು ನಿದ್ದೆ ಯಾವಾಗ ಬಂತೋ ಕಾಣೆ ಬೆಳಿಗ್ಗೆ 6.18 ಕ್ಕೆ ಕಣ್ಣು ತೆರೆದು ನೋಡಿದರೆ ಯಾವುದೋ ನಮ್ಮದಲ್ಲದ ಊರಿಗೆ ಬಂದಂತೆನಿಸಿತು, ತಮಿಳು ಭಾಷೆಯ ಗಂಧವೆ ತಿಳಿಯದ ನಮಗೆ ದಿಕ್ಕುತಪ್ಪಿ ಬಂದಂತಾಯಿತು ” ವಾಂಗ್ ತಂಬಿ ನಲ್ಲ ರೂಂ ಇರುಕಾ ಕುಲೀರಂತ ನೀರ್, ವೆನ್ನೀರ್ ಅಂಕು ಉಲ್ಲತ್, ಆಯಿರಮ್ ವಾಟಕೈಕ್ಕು ವಾಕನತ್ತೈ ನಿರುತ್ತುವತ್ತಮ್” ಎಂದು ಯಾರೋ ಒಬ್ಬ ಕೊಂಗರ ನಾಡಿನವನು ನಮ್ಮನ್ನು ಕರೆದಾಗ ನಮ್ಮ ವಾಹನ ಆಗಾಗಲೇ ಸಮುದ್ರದ ತೀರದ ಹತ್ತಿರವಿರುವ ಶ್ರೀ ರಾಮೇಶ್ವರ ದೇವಾಲಯದ ಬಳಿ ನಿಂತಿತ್ತು ಕುತೂಹಲದಿಂದ ನಮಗೆ ಬರುವ ಹರಕು ಮುರುಕು ತಮಿಳಿನಲ್ಲ “ಇಂಕ ಸಮುದ್ರಕ್ ಪೇರು ಸೊಲ್ಲು” ಎಂದಾಗ “ಅಗ್ನಿತೀರ್ಥಂ” ಎಂದು ಟೀ ಬೋಂಡಾ ಬೇಯಿಸುತ್ತಲೇ ಒಬ್ಬ ವ್ಯಾಪಾರಿ ತಿಳಿಸಿದ ಗಾಡಿ ಹೊರಟು ದಾರಿ ಕಾಣದೆ ಟ್ರಾಫಿಕಿನಲ್ಲಿ ನಿಂತಾಗ ನಮ್ಮ ಹುಡುಗರು ಸಮುದ್ರ ದಡ ನೋಡಿ ಸುಮ್ಮನೆ ಬಿಡುವರೆ ಆಗಲೇ ಅನ್ವೇಷಕರಂತೆ ಗೂಗಲ್ ಮ್ಯಾಪ್ ಹುಡುಕಿ ಭಾರತದ ಕೆಳಭಾಗದ ಶ್ರೀಲಂಕಾದ ಗಡಿಯಲ್ಲಿದ್ದೇವೆಂದರಿತು ಗೂಗಲ್ ಮ್ಯಾಪ್ ನ್ನು ಸ್ಕ್ರೀನ್ ಶಾಟ್ ತೆಗೆದು ವಾಟ್ ಆಫ್ ಸ್ಟೇಟಸ್ ಹಾಕಿದ್ದೇ ಹಾಕಿದ್ದು ಇನ್ನು ಹಲವು ಪೋಟೋ ಪ್ರೇಮಿಗಳು ಹಾಳು ಮುಖದಲ್ಲಿಯೇ ಸಮುದ್ರ ತೀರದಲ್ಲಿ ನಿಂತು ಆ ಬೋಟ್ ಗಳು ಕಾಣುವಂತೆ ಪೋಟೋ ತೆಗೆಸಿಕೊಂಡು ವಾಟ್ಸ್ ಆಫ್ ಸ್ಟೇಟಸ್ಸಿನಲ್ಲಿ ಹಂಚಿಕೊಂಡು ಸಂಭ್ರಮಿಸಿದರು ಅಂತೂ ಇಂತೂ ರಾಮೇಶ್ವರಂ ನ ಬಾಡಿಗೆ ರೂಂ ಗೆ ಹೋಗಿ ಬೇಗ ಬೇಗನೆ ಜಳಕ ಮಾಡಿ ಎಷ್ಟು ಸಾಧ್ಯವೋ ಅಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಕವರ್ ಮಾಡುವ ಆಸೆಯಿಂದ ಹೋದರೆ ಕೆಲವರು ಜಳಕ ಮಾಡಿ ರೆಡಿಯಾದರೆ ಇನ್ನು ಕೆಲವರು ಮಲಗಿ ಮೊಬೈಲ್ನಲ್ಲಿ ಹರಟುತ್ತಾ ಕುಳಿತು ನೀ ಬಾ…ನಾ …ಬಾ ನಿನ್ನಿಂದ ಲೇಟು….ನಿನ್ನಿಂದಾ ಲೇಟು ಎಂದು ವಾದಿಸುತ್ತಾ ಅಲ್ಲಿಯೇ ಪುಟ್ ಪಾತ್ ಮೇಲಿರುವ ಹೋಟೆಲ್ಲೊಂದರಲ್ಲಿ ಇಡ್ಲಿ ಸವಿದೆವು ಇಲ್ಲಿಯೂ ಕೂಡ ಅರೆ ಬರೆ ತಮಿಳು ಕಲಿತ ನನ್ನ ದೋಸ್ತ್ ರಾಕೇಶ್ ನಮ್ಮ ಮೇಸ್ತ್ರೀಯಂತೆ ‘ಇಡ್ಲಿ ಕೊಡಂಗ, ತಣ್ಣೀ ಕೊಡಂಗ’ ಎಂದು ಹಾವ ಭಾವ ಮಾಡಿ ಬಲು ಜೋಕಾಗಿ ತಿಣುಕಾಡಿ ಹೇಳಹತ್ತಿದ ನಾವು ಕೂಡಾ ಭಾಷೆ ಬಾರದೆ ಇತ್ತ ಸುಮ್ಮನೆ ಇರದೆ ತೆಲುಗು ಕನ್ನಡ ತಮಿಳು ಸೇರಿಸಿ “ರಂಡು ಇಡ್ಲಿ ಕೊಡಿ ” ಎಂದು ಕೇಳಿ ಮುಖ ಮುಖ ನೋಡಿಕೊಂಡು ನಕ್ಕು ತಿಂದು ಧನುಷ್ ಕೋಡಿ ಮತ್ತು ಆರ್ಚಲ್ ಮುನಾಯ್ ನೋಡಬೇಕು ಬಿಸಿಲು ನೆತ್ತಿಗೇರುವ ಹೊತ್ತಿಗಾಗಲೇ ಎಂದು ಅವಸರವಸರವಾಗಿ ಹೊರಟೆವು ಸಮುದ್ರ ತೀರದ ತಾಪ ಯಪ್ಪಾ ! ಹೇಳತೀರದು.
ಧಗೆಗೆ ಮೈಯಲ್ಲಿ ಹರಿಯುವ ಬೆವರಿಗೆ ಎಷ್ಟು ಸ್ನಾನ ಮಾಡಿದರೂ ವ್ಯರ್ಥ ಆ ಧಗೆಗೆ ಮುಖಗಳುರಿದು ನಿದ್ದೆಗೆಟ್ಟ ನಮ್ಮ ಮುಖಗಳು ಇನ್ನಷ್ಟು ಕಳೆಗುಂದಿದವು….. ಹಾಗೆಯೇ ಕಿಟಕಿಯಲ್ಲಿ ಕಣ್ಣಾಡಿಸಿ ನೋಡಿದರೆ ಆಕಾಶ ಯಾವುದೋ ಸಮುದ್ರ ಯಾವುದೋ ಒಂದು ಕಾಣೆ ಎಲ್ಲವೂ ಕರತಲಾಮಲಕ ಧೊಪ್ಪೆಂದು ಫೀನಿಕ್ಸ್ ನಂತೆ ಬರುವ ಆ ರಕ್ಕಸ ಅಲೆಗಳ ಕಂಡು ನಾವು ವಿಚಲಿತರಾದೆವು ಹೋ……. ಎಂದು ಕೂಗಿ ವಾವ್ಹ್ ಎಂದು ಅರಚಿ ಅಲೆಗಳನ್ನು ನೋಡಿ ಸಮುದ್ರದಲ್ಲಿ ಒತ್ತಡ ಎಷ್ಟಿರಬೇಕೆಂದು ಚರ್ಚಿಸಿ ತಮ ತಮಗೆ ತಿಳಿದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಆರ್ಚಲ್ ಮುನಾಯ್ ಪ್ರಸಿದ್ದ ಸ್ಥಳಕ್ಕೆ ಬಂದೆವು ಅದು ಮೂರು ಸಮುದ್ರಗಳು ಸಂಗಮವಾಗುವ ಜಾಗ , ಸ್ವರ್ಗದ ಗಡಿಯೆಂದರೂ ತಪ್ಪಾಗಲಾರದೂ ಆ ಸಮುದ್ರದ ಅಲೆಗಳ ನರ್ತನ ಕಂಡು ಕ್ಲಿಚಕ್… ಕ್ಲಿಚಕ್… ಎಂದು
ಪೋಟೋ ತೆಗಿಸಿಕೊಂಡು ಹುಚ್ಚೆದ್ದು ಕುಣಿದು ಲೋಕವನ್ನೆ ಮರೆತು ಸಂಭ್ರಮಿಸಿ ಮುಂದೆ ಧನುಷ್ ಕೋಡಿ ಎಂಬ ಬೇಚಿರಾಕ್ ಗ್ರಾಮಕ್ಕೆ ಬಂದೆವು ಧನುಷ್ ಕೋಡಿ ಶ್ರೀ ರಾಮನು ಬಾಣ ಬಿಟ್ಟ ಊರು 1964 ರಲ್ಲಿ ಸೈಕ್ಲೋನ್ ಬಂದು ಇಡೀ ಗ್ರಾಮಕ್ಕೆ ಗ್ರಾಮವೇ ಕೊಚ್ಚಿಕೊಂಡು ನೀರುಪಾಲಾಗಿದೆ ಅಲ್ಲಿ ಇಂದಿಗೂ ಪಾಳು ಮನೆಗಳು ರೈಲ್ವೇ ಜಂಕ್ಷನ್ ಇದ್ದು ಅಲ್ಲಿ ರಾಮಸೇತುವೆಗೆ ಬಳಸಿದ ‘ನೀರಿನಲ್ಲಿ ತೇಲುವ ಕಲ್ಲು’ ನೋಡಿ ಖುಷಿಪಟ್ಟೆವು ಮುಂದೆ ಸಾಗಿ ರಾವಣನು ತನ್ನ ಸಹೋದರನಿಗೆ ಪಟ್ಟಾಭಿಷೇಕ ಮಾಡಿದ ಸ್ಥಳವನ್ನು ನೋಡಿ ಕೈ ಮುಗಿದು, ಎಳನೀರು, ಐಸ್ ಕ್ರೀಂ ತಿಂದು ರಾಮೇಶ್ವರಂ ಕಡೆಗೆ ಹೊರಟು ಸೀದಾ ರಾಮೇಶ್ವರ ದೇವಾಲಯಕ್ಕೆ ಹೊರಟೆವು ಅಬ್ಬಾಬ್ಬ ! ಅದೆಂತ ಅದ್ದೂರಿ ದೇವಾಲಯ ಆ ಕಂಬಗಳು ಆ ಹಜಾರಗಳು, ಆ ಮಂಟಪಗಳು, ಆ ಮೇಲ್ಚಾವಣಿಗಳು, ಆ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತ ಭಕ್ತರು, ಆ 21 ಕೊಳದ ನೀರಿನಲ್ಲಿ ಸ್ನಾನ ಮಾಡಲು ನಿಂತ ಜನರು ಕಲೆ ಮತ್ತು ವಾಸ್ತುಶಿಲ್ಪ ನೋಡಿ ಯಾವ ಶತಮಾನದ ದೇವಾಲಯಗಳೆಂದು ನೋಡಿದರೆ 7-8 ನೇ ಶತಮಾನದ ಭವ್ಯವಾದ ರಾಮೇಶ್ವರ ದೇವಾಲಯದ ಶಿಲ್ಪಿಗಳಿಗೆ ನನ್ನ ಧೀರ್ಘದಂಡ ನಮಸ್ಕಾರಗಳು.
ದರ್ಶನ ಮುಗಿಸಿಕೊಂಡು ಮಜ್ಜಿಗೆ ಕುಡಿದು ಜನನ-ಮರಣ ನಾಗೇಂದ್ರನ ಕಪಿಚೇಷ್ಟೇ ಗೂಗಲ್ ಮ್ಯಾಪ್ ರೂಟ್ ಹಿಡಿದು ದಾರಿ ಸಿಗದೆ ಹೆಣಗಾಡಿ ನಾಗನಿಗೆ ಬೈದಾಡಿ ಬಸವಳಿದು ರೂಂ ತಲುಪಿದ್ದಾಯ್ತು ಪುನ: ನೇರ ಕನ್ಯಾಕುಮಾರಿಗೆ ಹೋಗಲು ನಿರ್ಧರಿಸಿ ಕೆಲಹೊತ್ತು ವಿಶ್ರಮಿಸಿ ಹೋಗೋಣವೆಂದು ವಾಗ್ವಾದ ನಡೆಸಿ ಯಾರ ಮಾತಿಗೂ ಒಲಿಯದ ನಮ್ಮ ಹುಡುಗರು ಧಗೆಯ ಏಟಿಗೆ ಒಲಿದು ಗಂಟುಮೂಟೆ ಕಟ್ಟಿಕೊಂಡು ಕನ್ಯಾಕುಮಾರಿಯ ಹಾದಿ ಹಿಡಿದೆವು.
ಉಫ್ss…ಧಗೆಯ ಛಡಿ ಏಟಿಗೆ ಹಸಿದ ಹೊಟ್ಟೆಗೆ ಊಟ ಮಾಡಲು ನಿರ್ಧರಿಸಿ ಯಾವುದಾದರೂ ಚೀಫ್ ಅಂಡ್ ಬೆಸ್ಟ್ ಹೋಟೆಲ್ ಹತ್ತಿರ ವಾಹನ ನಿಲ್ಲಿಸಲು ಹೇಳಿದೆವು ಸಮುದ್ರದ ಮಧ್ಯೆ ಮೇಲ್ಸುತೆವೆಯ ಹತ್ತಿ ಮಾವಿನ ಹಣ್ಣು, ಪೈನಾಪಲ್ ಸವಿಯುತ್ತಾ ಸಮುದ್ರದ ವಿಹಂಗಮ ನೋಟ ನೋಡಿ ಕಣ್ತುಂಬಿಕೊಂಡು ಮುಂದೆ ಸಾಗಿ ಒಂದೆರೆಡು ಹೋಟೆಲ್ಲುಗಳ ನೋಡಿ ಕೊನೆಗೆ ಒಂದು ಪುಟ್ಟ ಗುಡಿಸಲಿನ ಹೋಟೆಲ್ ಹತ್ತಿರ ಊಟಕ್ಕೆ ಹೋದಾಗ ಅಲ್ಲಿ ಅನ್ನ ಮೀನುಳಿ ಮತ್ತು ಫಿಶ್ ಫ್ರೈ ಮಾತ್ರವೇ ಇದ್ದುದಾಗಿ ಹೇಳಿದರು ನಾವು ಅಲ್ಲಿಯೇ ಊಟ ಮಾಡಲು ಕುಳಿತೆವು ಊಟ, ಅಂದ್ರೆ ಅದು ಕಣ್ರೀ ಆ ಹೋಟೆಲ್ಲಿನ ಬೀಟ್ ರೋಟ್ ಪಲ್ಯಾ, ಅಲಸಂದೆ ಪಲ್ಯಾ, ಆಮ್ಲೇಟ್, ಆ ಮೀನಿನ ಫ್ರೈ ಅಬ್ಬಾ ನಾಲಿಗೆ ಮೇಲೆ ಆ ರುಚಿ ಇನ್ನೂ ಹಾಗೆಯೇ ಇದೆ ಸಮುದ್ರದ ಮೀನಲ್ವಾ ಹೊಳೆಯ ಮೀನು ತಿಂದ ನಮಗೆ ಸಮುದ್ರದ ಮೀನು ಬಲು ರುಚಿ ಕೊಡ್ತು ಈ ಬರಗೆಟ್ಟ ನಾಲಿಗೆಗೆ ಪ್ರಯಾಣ ಹಾಗೆಯೇ ಸಾಗಿತು.
ಒಂದೆರಡು ಕಡೆ ಟೀ ಕುಡಿದು ಹೊರಟು ಸೀದಾ ಬಾಲಮುರುಗನ್ ದೇವಾಲಯಕ್ಕೆ ಹೊರಟೆವು ಬೀಚ್ನಲ್ಲಿ ಕೆಲವರು ಈಜಿ ಕೆಲವರು ದರ್ಶನ ಪಡೆದು ಸಂಭ್ರಮಿಸಿ ಮುಂದೆ ಡಾಬ ಒಂದರಲ್ಲಿ ಊಟ ಮುಗಿಸಿ ವಾಹನದಲ್ಲಿ ಸಿನೆಮಾ ಹಾಡುಗಳ ಮಧ್ಯೆ ಪ್ರಯಾಣ ಸಾಗಿ ರಾತ್ರಿ 12 ಗಂಟೆಯ ಮೇಲೆ ಕನ್ಯಾಕುಮಾರಿ ತಲುಪಿ ವಾಗ್ ಯುದ್ಧಕ್ಕಿಳಿದು ಎರಡು ರೂಂ ಮಾಡಿ ಬೆಳಗ್ಗೆ ಕನ್ಯಾಕುಮಾರಿಯ ಪ್ರಸಿದ್ಧ ಸೂರ್ಯೋದಯ ಆಗುವ ದೃಶ್ಯವನ್ನು ನೋಡಬೇಕೆಂದು ಚರ್ಚಿಸಿ ಮೊಬೈಲ್ ಚಾರ್ಜ್ ಗೆ ಹಾಕಿ, ಹಸಿ ಬಟ್ಟೆಗಳ ಒಣಗಾಕಿ ಮಲಗಿ ಅಲಾರಾಂ ಸದ್ದಿಗೆ ನೀ ಏಳು, ನಾ ಏಳು ಎಂದು ಕೊನೆಗೆ ಒಂದ್ಮೂರ್ನಾಲ್ಕು ಜನ ಮಾತ್ರವೇ ಕನ್ಯಾಕುಮಾರಿಯ ಕವಿ ತಿರುವಳ್ಳೂರು ಪ್ರತಿಮೆ ಮತ್ತು ಸ್ವಾಮಿ ವಿವೇಕಾನಂದ ರಾಕ್ ಗಾರ್ಡನ್ ಹತ್ತಿರದ ಕಡಲ ತೀರಕ್ಕೆ ಹೊರಟೆವು ” ಸ್ವರ್ಗ ಮೇಲೆಲ್ಲೂ ಇಲ್ಲ ಕನ್ಯಾಕುಮಾರಿಯಲ್ಲೆ ಇದೆ ಅಂತ ನನಗನಿಸ್ತು ಏನ್ರೀ ಆ ಸಮುದ್ರದ ಅಲೆಗಳ ಶಬ್ಧ ಅಬ್ಬಾ…..! ಏನ್ರೀ ಸೂರ್ಯೋದಯಕ್ಕೂ ಮುನ್ನ ಸಮುದ್ರದಾಸಿಗೆಯ ಮೇಲೆ ಬೀಳೋ ಹೊಂಬಣ್ಣ, ಕೆಂಬಣ್ಣ ಮತ್ತು ಮೀನುಗಾರಾರು ಸಮುದ್ರದ ಸಣ್ಣ ಹಡಗಿನಲ್ಲಿ ಬಲೆಯನಾಕುವ ದೃಶ್ಯ ಎಲ್ಲವೂ ಸ್ವರ್ಗಸದೃಶ್ಯವೇ ಸರಿ” ಅಂತೂ ಇಂತೂ ಸಮುದ್ರದಿಂದಲೇ ಸೂರ್ಯ ಹುಟ್ಟೋದೇನೋ ಅನಿಸ್ತು ಆ ಸೂರ್ಯೋದಯ ಆ ಚೆಲುವನ್ನು ವರ್ಣಿಸೋಕೆ ನನ್ನ ಹತ್ತಿರ ಪದಗಳೇ ಇಲ್ಲ ಆ ಸಮುದ್ರದಲೆಯ ನರ್ತನದ ಮುಂದೆ ನನ್ನ ಶಬ್ದ ಕೋಶವೇ ಸೋತು ಹೋಗಿದೆ.
ಸೂರ್ಯನನ್ನು ಕೈಯಲ್ಲಿ ಸೆರೆಹಿಡಿಯುವುದು, ವಿಡಿಯೋ ಮಾಡಿಕೊಳ್ಳುವುದು ಬೆಳ್ಳಂಬೆಳಗ್ಗೆ ಇಂದ್ರಲೋಕಕ್ಕೆ ಹೋಗಿ ಬಂದಂಗಾಯ್ತು ನನಗೆ ಇದನ್ನ ನೋಡಿದ ನಾವೇ ಧನ್ಯರು ಅಲ್ಲಿಯವರೆಗೆ ಬಂದು ಸೂರ್ಯೋದಯ ನೋಡದೆ ಕುಂಭಕರ್ಣನಂತೆ ನಿದ್ರಿಸಿದ ನಮ್ಮ ಹುಡುಗರೆ ನತದೃಷ್ಟರು. ಅಂತೂ ಇಂತೂ ಸೂರ್ಯೋದಯ ನೋಡಿ ಬೋಟ್ನಲ್ಲಿ ಸ್ವಾಮಿ ವಿವೇಕಾನಂದ ರಾಕ್ ಪ್ರತಿಮೆ ಹತ್ತಿರ ಹೋಗಬೇಕು ಅಂತ ಕ್ಯೂನಲ್ಲಿ ಮಧ್ಯ ಹೋಗಿ ಸೇರಿಕೊಂಡಾಗ ನಮ್ಮ ಹಿಂದೆ ಇದ್ದ ಕೆಲವರು ತಿಳಿಯದ ತಮಿಳು ಭಾಷೆಯಲ್ಲಿ ಶಪಿಸಿ ಪೋಲಿಸರಿಗೆ ಹೇಳಿದರು ಪ್ರಯೋಜನವಾಗಲಿಲ್ಲ ಅವರು ಬೈಯ್ಯೋದೆಲ್ಲ ನಮಗೆ “ಹಳೆಗನ್ನಡದ ಪದ್ಯದ” ತರ ಕೇಳಿಸ್ತು ಅಂತೂ ಇಂತೂ ಬೋಟ್ನಲ್ಲಿ ಪ್ರತಿಮೆ ಹತ್ತಿರ ಹೋಗಿ ಸಮುದ್ರದ ಮಧ್ಯೆ ನಿಂತು ಕುಣಿದು ಕುಪ್ಪಳಿಸಿ, ಕಣ್ಣಿಗೆ ಎಟಕುವಷ್ಟು ಸಮುದ್ರ ನೋಡಿ ವಾಪಾಸ್ ರೂಂಗೆ ಬಂದು ಮಧುರೈಗೆ ಊಟ ಮುಗಿಸಿಕೊಂಡು ಹೊರಟೆವು ಮಧ್ಯೆ ಒಂದು ಬೀಚ್ನಲ್ಲಿ ಸಂಜೆ ಈಜಾಡಿ ಸಮುದ್ರದ ದಡದಲ್ಲಿ ಕಬ್ಬಡಿ ಆಟ ಆಡಿ ಮತ್ತೆ ಪ್ರಯಾಣ ಸಾಗಿತು.
ನನ್ನ ಮಧುರೈ ‘ದೇವಾಲಯಗಳ ನಾಡು’ ಸಾಹಿತ್ಯಿಕ ಪುಷ್ಪಮಯ & ಧಾರ್ಮಿಕ ಉತ್ಸಾಹಕ್ಕೆ ಮಧುರೈ ಹೆಸರುವಾಸಿ ‘ಮತಿರೈ’, ‘ಕೂಡಲ್’ & ‘ಆಲವ್ಯಡಿನರು’ ಮಧುರೈನ ಮೂಲ ಹೆಸರು ಮಧುರೈ ಮೀನುಗಾರಿಕೆ ಉದ್ಯಮಕ್ಕೆ ಹೆಸರುವಾಸಿ ಗ್ರೀಕ್, ರೋಮನ್, ಅರೇಬಿಕ್ ವಿದೇಶಿ ವ್ಯಾಪಾರಿಗಳು ಮಧುರೈಗೆ ಭೇಟಿ ನೀಡಿದ್ದಾರೆ. ‘ದೇವಾಲಯಗಳ ನಗರ’, ‘ಹಬ್ಬಗಳ ನಗರ’ ಅದೆಂತಹ ವೈಭವ ರೀ ಆ ದೇವಾಲಯದ್ದು. ಮಧುರೈ ಭಾರತೀಯ ಉಪಖಂಡದ ಪ್ರಾಚೀನ & ವೈಭವದ ನಗರಗಳಲ್ಲಿ ಒಂದು ಇದು ಭಾರತೀಯ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿದೆ.
ಅಬ್ಬಾ ರಾತ್ರಿ ಹೊತ್ತಿಗೆ ಮಧುರೈಗೆ ಬಂದು ವಸತಿ ಮಾಡಿ ಬೆಳಗ್ಗೆ ಎದ್ದು ಮಧುರೈ “ಅರಳ್ಮಿಗು ಮೀನಾಕ್ಷಿ ಸುಂದರೇಶ್ವರ” ದೇವಾಲಯದ ಗೋಪುರ ಕೋಟೆ ವಿನ್ಯಾಸದ ಆ ಶೈಲಿ ನೋಡಿ ನಾವು ಅಕ್ಷರಶಃ ದಂಗಾಗಿ ಹೋದ್ವಿ. ಬಾದಾಮಿ ಐಹೊಳೆ ಪಟ್ಟದಕಲ್ಲು ಹಿಂದೂ ಶಿಲ್ಪಕಲೆಯ ಸಂಪ್ರದಾಯದ ತೊಟ್ಟಿಲುಗಳು. ಆದರೆ ಮೀನಾಕ್ಷಿ ದೇವಾಲಯವನ್ನು ಸೂಕ್ಷ್ಮರೂಪ ಅಥವಾ ಬ್ರಹ್ಮಾಂಡ ಮಾದರಿಯ ಸ್ಥೂಲಕಾಯ ಎಂದು ಕಲ್ಪಿಸಲಾಗಿದೆ . ತಮಿಳರಿಗೆ ‘ಸಂಗಂ’ ಶಿಲ್ಪಕಲೆ ಚೆನ್ನಾಗಿ ಪರಿಚಿತವಿತ್ತು ಮಧುರೈ ದೇವಾಲಯ ಯಾವ ಒಬ್ಬರ ಆಳ್ವಿಕೆಯಲ್ಲಿ ಪೂರ್ಣಗೊಂಡ ದೇವಾಲಯವಲ್ಲ ಆರಂಭದಲ್ಲಿ ಪಲ್ಲವರು,ಪಾಂಡ್ಯರು, ಚೋಳರು, ಗಂಗರು, ಹಾಗೂ ವಿಜಯನಗರ ಸಾಮ್ರಾಜ್ಯದ ಮಧುರೈನ ನಾಯಕರ ಕೊಡುಗೆ ಅಪಾರ ದೆಹಲಿಯ ಸುಲ್ತಾನರು, ಮುಸ್ಲಿಂ ಆಡಳಿತಗಾರರು, ಆಳ್ವಿಕೆ ನಡೆಸಿದರು ಆದ್ದರಿಂದ ಮಧುರೈಯನ್ನ ಜಾತ್ಯತೀತ ವಾಸ್ತುಶಿಲ್ಪ & ಶಿಲ್ಪಕಲೆ ಅಲಂಕಾರಗಳ ಆಕರ್ಷಣೆ & ವಿವಿಧ ಧರ್ಮಗಳು & ಸಾಮಾಜಿಕ ವ್ಯವಸ್ಥೆಗಳಿಗೆ ಸೇರಿದ ಜನರು ಸಾಮರಸ್ಯದಿಂದ ಬದುಕಿದ ನಾಡೆಂದು ಪ್ರಸಿದ್ದಿ ಹಿಂದೂ ಪ್ರತಿಮಾಶಾಸ್ತ್ರ ಮತ್ತು ಧರ್ಮಶಾಸ್ತ್ರ, ಪಂಚಾಯತನ & ಶರ್ಮತಾ ಪರಿಕಲ್ಪನೆಗಳ ಚಿತ್ರಣ ದೈವತ್ವಗಳ ಚಿತ್ರಣ,ವಿಶ್ಣುವಿನ ಹತ್ತು ಅವತಾರಗಳು ವೈಷ್ಣವ ಧರ್ಮದ ಒಲವು, ಕೃಷ್ಣ, ರಾಮಾಯಣ, ಮಹಾಭಾರತ, ಬೇಟೆಯ ದೃಶ್ಯಗಳು, ನೃತ್ಯಗಳು, ಕೋಲಾಟ, ಜಾನಾನದ ಕಲೆಗಳ ಸಾಮಾಜಿಕ ಚಟುವಟಿಕೆಗಳ ಚಿತ್ರಣ, ರತಿ&ಮನ್ಮಥನ ಪ್ರತಿಮೆಗಳು ಕಾಮಾಯಣದ ಆಧಾರ, ಆಡಳಿತಾಧಿಕಾರಿಗಳು ಮತ್ತು ಅಧಿಕಾರಿಗಳ ಭಾವಚಿತ್ರ & 2000 ವರ್ಷಗಳ ಬ್ರಾಹ್ಮಿ & ತಮಿಳು ಶಾಸನಗಳನ್ನು ಹೊಂದಿದೆ.
ಮೀನಾಕ್ಷಿ ಕಾಂಚನಮಾಲ, ನೆಲಮಾಳಿಗೆ, ಮಧುರೈ ಮಂಟಪ, ಆನಂದ ನಂದಿ, ಅಗ್ನಿ ವೀರಭದ್ರ, ಅಘೋರ ವೀರಭದ್ರ, ನವಗ್ರಹಮಂಟಪ, 49 ಕವಿಗಳ ಶಿಲ್ಪ, ಕದಂಬ ವೃಕ್ಷಗಳು , ನಾಗರಮಂಟಪ, ಸಂಗೀತ ವಾದ್ಯಗಳು, ಅಷ್ಟಶಕ್ತಿ ಮಂಟಪ, ವೇದಮರಬಡ್ಡೆ, ನೃತ್ಯ ಗಣಪತಿ & ಸುಬ್ರಮಣ್ಯ, ಎರಡು ಗೋಲ್ಡನ್ ಟವರ್ 12 ಗೋಪುರಗಳು, ರೋಸ್ ಪೀಟರ್ ಎಂಬ ಆಂಗ್ಲ ಜಿಲ್ಲಾಧಿಕಾರಿ ಮೀನಾಕ್ಷಿ ದೇವಿಯ ಪವಾಡದಿಂದ ಜೀವ ಉಳಿದುದಕ್ಕಾಗಿ ಬಂಗಾರದ & ಅಮೂಲ್ಯವಾದ ಕಲ್ಲುಗಳಿಂದ ಹೊದಿಸಿದ ಸ್ಟಿರಫ್ ಅನ್ನು ಮಾಡಿಸಿದನೆಂಬ ಐತಿಹ್ಯವಿದೆ 45 ಎಕರೆಯಲ್ಲಿರುವ ದೇವಾಲಯವನ್ನು ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್ ಒಮ್ಮೆ ದಾಳಿ ಅಪಾರ ಪ್ರಮಾಣದ ಸಂಪತ್ತನ್ನು ಲೂಟಿ ಮಾಡಿದ್ದನು ಮತ್ತು ದೇವಾಲಯದ ಒಳಗಡೆ ಇರುವ ಒಂದು ಕೊಳದಲ್ಲಿ ಬಂಗಾರದ ತಾವರೆಗಳು ಅರಳುತ್ತಿದ್ದವು ಆ ಕಾಲದಲ್ಲಿ ಕವಿಗಳು ಬರೆದ ಪುಸ್ತಕಳು ಗಟ್ಟಿಯಾಗಿದ್ದರೆ ನೀರಿನಲ್ಲಿ ತೇಲುತ್ತಿದ್ದವು ಜೊಳ್ಳಾಗಿದ್ದರೆ ನೀರಿನಲ್ಲಿ ಮುಳುಗುತ್ತಿದ್ದವು ಈ ರೀತಿಯಾಗಿ ಪುಸ್ತಕಗಳ ಸತ್ವವನ್ನು ತಿಳಿಯಲು ಈ ಕೊಳವನ್ನು ಬಳಸಲಾಗುತ್ತಿತ್ತು ಎಂಬ ಐತಿಹ್ಯವಿದೆ. ಮಧುರೈ ನಗರವು ದೇವಾಲಯದ ತಾವರೆಯ ಎಲೆಗಳಂತೆ ಚಾಚಿಕೊಂಡು ಬೆಳೆದಿದೆ.
ಮಧುರೈನ ಮೀನಾಕ್ಷಿ ದೇವಾಲಯ ನೋಡಿಕೊಂಡು ಪಳನಿ ಬೆಟ್ಟಕ್ಕೆ ಹೋಗಿ ಪಳನಿ ಸುಬ್ರಮ್ಯ ಸ್ವಾಮಿಯ ದರ್ಶನವನ್ನು ಮೆಟ್ಟಿಲು ಏರಿ ಹತ್ತಿ ದರ್ಶನ ಪಡೆದು ಪುನಃ ಚಾಮರಾಜನಗರಕ್ಕೆ ಹೊರಟೆವು ಇಂತಹ ಸಮುದ್ರಗಳೊಂದಿಗೆ ಮಾತು, ದೇಗುಲಗಳ ದರ್ಶನ, ಸಂಭ್ರಮದೊಂದಿಗೆ ಪ್ರಯಾಣ ಜೀವನವೆಂಬ ಪುಸ್ತಕರ ಒಂದೊಳ್ಳೆ ಪುಟವಾಗಿದೆ.
(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿ
636229492)
ಸುದ್ದಿದಿನ.ಕಾಂ|ವಾಟ್ಸಾಪ್|9980346243