ಅಂತರಂಗ

ಸಕಲರಿಗೂ ಲೇಸನ್ನೇ ಬಯಸುವ ಸುರಪುರ ಹಿರೇಮಠ

Published

on

ಸುರಪುರ ಹಿರೇಮಠ್ ಅವರೊಂದಿಗೆ ಲೇಖಕ ಗಂಗಾಧರ ಬಿ.ಎಲ್. ನಿಟ್ಟೂರ್

ಭಕ್ತರ ಪಾಲಿನ ಬೆಳಕಿಂಡಿ 

ಸಂಖ್ಯೆಗಾಗಿ ಎಣಿಸುತ್ತಾ ಕೂತರೆ ಮಠ-ಮಂದಿರಗಳ ಸಂಖ್ಯೆ ಅಗಣಿತವೇ ಸರಿ. ಆದರೆ ಧರ್ಮ, ದೇವರು ಮತ್ತು ಧಾರ್ಮಿಕತೆಯ ನಿಜ ಮರ್ಮವನ್ನು ಅರಿತು ಮನುಕುಲದ ಸೇವೆಯಲ್ಲಿ ತೊಡಗಿರುವ ಮಠ-ಮಾನ್ಯಗಳ ಸಂಖ್ಯೆ ಅತಿ ವಿರಳವೇ ಎನ್ನಬಹುದು. ಕೆಲವು ಸದ್ದು ಮಾಡುತ್ತಲೇ ಸುದ್ದಿಯಲ್ಲಿದ್ದರೆ, ಕೆಲವು ಸದ್ದಿಲ್ಲದೆ ಸೇವೆ ಗೈಯುತ್ತಾ ಮನುಕುಲದ ಸರ್ವೋನ್ನತಿಗಾಗಿ ಶ್ರಮಿಸುತ್ತಿವೆ. ಕಾಯಕ ಒಂದನ್ನೇ ಗುರಿಯಾಗಿಸಿಕೊಂಡು ಭಕ್ತ ಜನರ ಕಲ್ಯಾಣಕ್ಕಾಗಿ ತಮ್ಮ ಪಾಡಿಗೆ ತಾವು ನಿಸ್ವಾರ್ಥ ಪಾರಮಾರ್ಥಿಕ ಸೇವೆಯಲ್ಲಿ ತೊಡಗಿರುವ ಮಠಗಳ ಸಾಲಿನಲ್ಲಿ ಬೆಳಕಿಂಡಿಯಾಗಿ ನಿಲ್ಲುತ್ತದೆ ಸುರಪುರ ಹಿರೇಮಠ.

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಕಡತಿ ಕ್ಯಾಂಪ್‍ನ ರೇಣುಕಾ ನಗರದಲ್ಲಿ ನೆಲೆಸಿರುವ ಶ್ರೀಮದ್ ಕಾಶೀ ಪೀಠದ ಶಾಖಾಮಠವಾಗಿರುವ ಸುರಪುರ ಹಿರೇಮಠವು ಭಕ್ತ ಜನರ ಉದ್ಧಾರಕ್ಕಾಗಿಯೇ ಜನ್ಮ ತಾಳಿದಂತಿದೆ. ದಾವಣಗೆರೆಯಿಂದ ಸುಮಾರು 30 ಕಿ.ಮೀ., ಹರಿಹರದಿಂದ ಸುಮಾರು 20 ಕಿ.ಮೀ. ಹಾಗೂ ಹರಪನಹಳ್ಳಿಯಿಂದ 25-30 ಕಿ.ಮೀ. ದೂರದಲ್ಲಿರುವ ಈ ಮಠ ಹೆಸರೇ ಸೂಚಿಸುವಂತೆ ಭಕ್ತರ ಪಾಲಿನ ಸುರಪುರವೇ ಸರಿ.

ಆತ್ಮೋದ್ಧಾರದ ಅಡಿಗಲ್ಲು

ದಿನಾಂಕ : 17-10-1994 ರಂದು ಕಡತಿ ಗ್ರಾಮದ ರೇಣುಕಾ ನಗರಕ್ಕೆ ಸಂಭ್ರಮದ ದಿನ. ಆತ್ಮೋದ್ಧಾರಕ್ಕೆ ಅಡಿಗಲ್ಲು ಹಾಕಿದ ದಿನವಿದು. ಶ್ರೀಮದ್ ಕಾಶಿಪೀಠದ 1008 ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಅಮೃತ ಹಸ್ತದಿಂದ ಶ್ರೀಮಠದ ಕಟ್ಟಡಕ್ಕೆ ಅಡಿಗಲ್ಲು ಹಾಕಲಾಯಿತು.

ದಿನಾಂಕ : 20-10-1996 ರಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದ 1008 ಜಗದ್ಗುರು ಶ್ರೀ ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಮೃತಹಸ್ತದಿಂದ ಶ್ರೀಮಠದಲ್ಲಿ ಜಗದ್ಗುರು ಶ್ರೀ ವಿಶ್ವಾರಾಧ್ಯ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಆ ಮೂಲಕ ಆತ್ಮೋದ್ಧಾರ ಕಾರ್ಯಕ್ಕೆ ಮುನ್ನಡಿ ಇಡಲಾಯಿತು. ಅಂದಿನಿಂದ ಈವರೆಗೂ ಶ್ರೀಮಠದಲ್ಲಿ ಧಾರ್ಮಿಕಸೇವೆ ನಿರಂತರ ಸಾಗುತ್ತಲಿದೆ.

ಅಡ್ಡಪಲ್ಲಕ್ಕಿ ಮಹೋತ್ಸವದ ಹೆಗ್ಗಳಿಕೆ

ಶ್ರೀಮಠದಲ್ಲಿ ವಿಶೇಷ ಪೂಜೆ ಪುನಸ್ಕಾರಗಳ ಜೊತೆ ಪಂಚಪೀಠಾಧೀಶ್ವರರನ್ನು ಬರಮಾಡಿಕೊಂಡು ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸಿರುವ ಕಾರ್ಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಆಧ್ಯಾತ್ಮಿಕ ಶಕ್ತಿಯ ಔನತ್ಯಕ್ಕೆ ಮೇಲ್ಪಂಕ್ತಿ ಒದಗಿಸಿದೆ.
1996ರಲ್ಲಿ ಶ್ರೀ1008 ಜಗದ್ಗುರು ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರರಾದ ಶ್ರೀ ಮರುಳಸಿದ್ಧ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ ಮಹೋತ್ಸವ, 2006ರಲ್ಲಿ ಶ್ರೀ 1008 ಜಗದ್ಗುರು ಶ್ರೀಮದ್ ಕಾಶೀಪೀಠದ ಸಿಂಹಾಸನಾಧೀಶ್ವರರಾದ ಶ್ರೀ ಡಾ||ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ, 2010ರಲ್ಲಿ ಶ್ರೀ1008 ಜಗದ್ಗುರು ಶ್ರೀಶೈಲ ಶ್ರೀಮದ್‍ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರರಾದ ಶ್ರೀ ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದ ಮಹಸ್ವಾಮಿಗಳವರ ಅಡ್ಡಪಲ್ಲಕ್ಕಿ, 2012ರಲ್ಲಿ ಶ್ರೀ 1008 ಜಗದ್ಗುರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರರಾದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಹಾಗೂ 2014 ರಲ್ಲಿ ಶ್ರೀ 1008 ಜಗದ್ಗುರು ಶ್ರೀಮದ್ ರೇಣುಕ ವೈರಾಗ್ಯ ಸಿಂಹಾಸನಾಧೀಶ್ವರರಾದ ರಾಮ್ ಪದ ವಿಭೂಷಿತ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯುವ ಮೂಲಕ ಶ್ರೀ ಕ್ಷೇತ್ರಕ್ಕೆ ಅಪಾರ ಆಧ್ಯಾತ್ಮಿಕ ಶಕ್ತಿಯ ಸಿಂಚನ ಉಂಟಾಗಿದೆ.ಶ್ರೀಮಠದಲ್ಲಿ ಪ್ರತಿನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಪೂಜಾ ಕಾರ್ಯಗಳು ಸಾಂಗವಾಗಿ ನೆರವೇರುತ್ತಿವೆ. ಅಲ್ಲದೆ ಭಕ್ತರ ಸಮಸ್ಯೆ ಮತ್ತು ಸಂಕಷ್ಟಗಳಿಗೆ ಪರಿಹಾರ ಒದಗಿಸುವ ಕಾರ್ಯ ಕೂಡ ನಿರಂತರ ನಡೆಯುತ್ತಿದೆ. ಈ ಪರಿಹಾರ ಸೇವೆಯ ಮೂಲಕರ್ತೃ ವೇದಮೂರ್ತಿ ಶ್ರೀ ಅಜ್ಜಯ್ಯ ಶಿವಾಚಾರ್ಯ ಸ್ವಾಮಿಗಳು.

ವಿಶೇಷ ಕಾರ್ಯಕ್ರಮಗಳು

ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಶ್ರೀಮಠದಲ್ಲಿ ವಿಶೇಷ ಪೂಜಾ, ಅರ್ಚನ ಕಾರ್ಯಕ್ರಮಗಳು ನಡೆಯುತ್ತವೆ. ರುದ್ರಾಭಿಷೇಕ, ಶಾಂತಿ ಇತ್ಯಾದಿ ವಿಶೇಷ ಸೇವೆ ಮೂಲಕ ಬರುವ ಭಕ್ತರ ಸಂಕಷ್ಟ ನಿವಾರಣೆಗಾಗಿ ಸಂಕಲ್ಪ ಮಾಡಲಾಗುತ್ತದೆ. ಪ್ರತಿ ವರ್ಷ ಶಿವರಾತ್ರಿಯಂದು ಕಾಶಿ ಪೀಠದ ಜಗದ್ಗುರು ವಿಶ್ವಾರಾಧ್ಯ ಸ್ವಾಮಿಯ ಜಯಂತ್ಯುತ್ಸವ ಅಂಗವಾಗಿ ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಲಾಗುವುದು. ಅಲ್ಲದೆ ಸರ್ವಧರ್ಮದವರಿಗೂ ಉಚಿತ ಸಾಮೂಹಿಕ ವಿವಾಹಗಳು ಜರುಗುತ್ತವೆ.
ಪ್ರತಿ ವರ್ಷ ಡಿಸೆಂಬರ್ ಮಾರ್ಗಶಿರ ಮಾಸದ 3ನೇ ಸೋಮವಾರ 1008 ದೀಪಗಳ ದೀಪೆÇೀತ್ಸವ ಅಥವಾ ಕಾರ್ತಿಕೋತ್ಸವ ಜರುಗುತ್ತದೆ. ಶ್ರದ್ಧಾ ಭಕ್ತಿಯಿಂದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧನ್ಯತಾ ಭಾವ ಮೆರೆಯುತ್ತಾರೆ.

ಶ್ರೀ ಮಠದ ಆದರ್ಶ

ಇಲ್ಲಿ ನಡೆಯುವ ಯಾವುದೇ ಸೇವಾ ಕಾರ್ಯಕ್ಕೆ ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ. ಉಚಿತ ಸೇವೆಯ ಈ ಪರಂಪರೆ ಹಿಂದಿನ ಪೀಳಿಗೆಯಿಂದಲೇ ನಡೆದುಕೊಂಡು ಬಂದಿದೆ. ಶ್ರೀಮಠಕ್ಕೆ ಬರುವ ಭಕ್ತರು ತಾವಾಗಿಯೇ ತಿಳಿದು ಹಾಕುವ ಕಾಣಿಕೆ ಹಣದಿಂದಲೇ ಶ್ರೀಮಠದ ಸರ್ವ ಧಾರ್ಮಿಕ ಸೇವಾ ಕಾರ್ಯಗಳು ಜರುಗುತ್ತಿವೆ ಎಂಬುದು ಅಚ್ಚರಿಯ ಸಂಗತಿ. ಯಾವುದೇ ಜಾತಿ, ಜನಾಂಗ ಅಥವಾ ಧರ್ಮಕ್ಕೆ ಸೀಮಿತವಾಗದೆ ಮನುಕುಲದ ಕಲ್ಯಾಣವನ್ನೇ ಮುಖ್ಯ ಗುರಿಯನ್ನಾಗಿಸಿ ಕೊಂಡು ಧಾರ್ಮಿಕ ಸೇವೆಗೈಯುತ್ತಿರುವ ಈ ಶ್ರೀಮಠದ ಕಾರ್ಯ ಆದರ್ಶ ಪ್ರಾಯ ಹಾಗೂ ಅನುಕರಣೀಯವೇ ಸರಿ.

ಬಡತನದ ಬೇಗೆಯಲ್ಲಿ ಅರಳಿದ ದೈವಭಕ್ತಿ 

ಪ್ರಸ್ತುತ ಶ್ರೀಮಠದ ಗುರುಗಳಾದ ಶ್ರೀ ವೇ.ಮೂ. ಅಜ್ಜಯ್ಯ ಸ್ವಾಮಿಗಳ ಕುಟುಂಬ ಬಡತನದ ಬೇಗೆಯನ್ನು ಅನುಭವಿಸಿದೆ. ಆದರೆ ಸರ್ವರಿಗೂ ಹಿತವನ್ನು ಬಯಸುವ ಶ್ರೇಷ್ಠ ಸಂಸ್ಕಾರವು ಈ ಕುಟುಂಬಕ್ಕೆ ಹೃದಯ ಶ್ರೀಮಂತಿಕೆ ಮತ್ತು ಶ್ರೇಷ್ಠತೆಯನ್ನು ತಂದು ಕೊಟ್ಟಿದೆ. ಅಜ್ಜಯ್ಯ ಸ್ವಾಮಿಗಳ ತಂದೆ ಲಿಂಗೈಕ್ಯ ವೇ|ಮೂ| ಬಸಪ್ಪಯ್ಯ ಶಾಸ್ತ್ರಿ ಹಾಗೂ ತಾಯಿಯವರಾದ ಲಿಂಗೈಕ್ಯ ಶ್ರೀಮತಿ ಕೊಟ್ರಮ್ಮ ದಂಪತಿಗಳು ಅಪಾರ ದೈವಭಕ್ತರು.
ಬಸಪ್ಪಯ್ಯ ಶಾಸ್ತ್ರಿಗಳು ಮೂಲತಃ ಗುಲ್ಬರ್ಗಾ ಜಿಲ್ಲಾ ಸುರಪುರ ಬಿಲ್ವಂ ಕೊಂಡಿಮಠದ ವಂಶಸ್ಥರು. ಕಡುಬಡತನದಲ್ಲಿಯೂ ಸದಾ ಸಚ್ಛಾರಿತ್ರ್ಯ, ಶುದ್ಧ ಸಂಸ್ಕಾರ, ಪರೋಪಕಾರ, ಸಹಬಾಳ್ವೆಯಂತಹ ಉದಾತ್ತ ಚಿಂತನೆಗಳನ್ನು ಬೆಳೆಸಿಕೊಂಡು ಬಂದಂತಹ ಕುಟುಂಬವಿದು. ರಾಜ ವೆಂಕಟಪ್ಪ ನಾಯಕ ಕೂಡ ಈ ಮಠದ ಶಿಷ್ಯರಾಗಿದ್ದರಂತೆ. ಈಗಲೂ ವೆಂಕಟಪ್ಪ ನಾಯಕನ ಕುಟುಂಬದವರು ಈ ಮಠಕ್ಕೆ ಶಿಷ್ಯರಾಗಿ ನಡೆದುಕೊಳ್ಳುತ್ತಿದ್ದಾರೆ. ಬಡತನದ ಪರಿಣಾಮ ಬರಗಾಲದ ಸಂದರ್ಭದಲ್ಲಿ ಒಮ್ಮೆ ಬಸಪ್ಪ ಶಾಸ್ತ್ರಿಗಳು ಅನಿವಾರ್ಯವಾಗಿ ಹರಪನಹಳ್ಳಿ ತಾಲ್ಲೂಕು ಹೊಂಬಳಗಟ್ಟಿಗೆ ವಲಸೆ ಬಂದು ನೆಲೆಸಿದರು. ಯಾವುದೇ ಆಸ್ತಿ ಪಾಸ್ತಿ ಇರದ ಅವರು ಶಾಸ್ತ್ರ ಮತ್ತು ಜ್ಯೋತಿಷ್ಯ ಸೇವೆ ಮೂಲಕ ಭಕ್ತರಿಂದ ಬಂದ ಕಾಣಿಕೆಯಿಂದಲೇ ಜೀವನ ನಿರ್ವಹಣೆ ಮಾಡುವ ಜೊತೆಗೆ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಸಹ ಕೊಡಿಸಿದ್ದುದು ಅವರ ಆತ್ಮಶಕ್ತಿಗೆ ಸಾಕ್ಷಿಯಾಗಿದೆ.
ಇವರ ಗರ್ಭಾಂಬುದಿಯಲ್ಲಿ 5ನೇ ಪುತ್ರರಾಗಿ ಜನಿಸಿದವರೇ ಶ್ರೀ ವೇ| ಮೂ| ಅಜ್ಜಯ್ಯ ಸ್ವಾಮಿಗಳು. ಅಂತರಂಗದಲ್ಲಿ ಬಾಲ್ಯದಿಂದಲೇ ವಿಶ್ವ ಪ್ರೇಮ, ಮಾನವ ಕಲ್ಯಾಣ, ಆತ್ಮೋದ್ಧಾರ ಸೇವೆಯಂತಹ ಉತ್ಕøಷ್ಟ-ಉನ್ನತ ವಿಚಾರಧಾರೆಗಳು ಒಡಮೂಡಿ ಬಂದ ಕಾರಣ ತಮ್ಮ ಜೀವನವನ್ನು ಶುದ್ಧ ಆಧ್ಯಾತ್ಮಿಕ ಸೇವೆ ಹಾಗೂ ಮಾನವ ಕಲ್ಯಾಣಕ್ಕಾಗಿ ಮುಡುಪಾಗಿಟ್ಟಿದ್ದಾರೆ.

ಅನ್ನದಾಸೋಹ : ಪ್ರತಿ ಭಾನುವಾರ, ಸೋಮವಾರ, ಗುರುವಾರ ಹಾಗೂ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಶ್ರೀ ಮಠದಲ್ಲಿ ಜನಜಾತ್ರೆ ನಡೆಯುತ್ತದೆ. ದೈವದರ್ಶನದ ಜೊತೆ ತಮ್ಮ ಕಷ್ಟ, ನಷ್ಟ, ನೋವು ನಿವಾರಣೆಗಾಗಿ ಭಕ್ತರು ಪರಿಹಾರ ಪಡೆದು ಸಾಗುತ್ತಾರೆ. ಈ ದಿನಗಳಲ್ಲಿ ಬರುವ ಎಲ್ಲಾ ಭಕ್ತರಿಗೂ ಬೆಳಿಗ್ಗೆ ಮತ್ತು ಸಂಜೆ ಸೇರಿದಂತೆ ಎರಡೂ ಹೊತ್ತು ಅನ್ನದಾಸೋಹ ಸದಾ ನಡೆಯುತ್ತಿದೆ.ಸಕಲರಿಗೂ ಲೇಸನ್ನೇ ಬಯಸುವ ಶ್ರೀ ವೇ| ಮೂ| ಅಜ್ಜಯ್ಯ ಶಿವಾಚಾರ್ಯ ಸ್ವಾಮಿಗಳು,1-7-1946ರಲ್ಲಿ ಜನಿಸಿದ ಅಜ್ಜಯ್ಯ ಸ್ವಾಮಿಗಳು ಬಾಲ್ಯದಿಂದಲೇ ಶಿಸ್ತು, ಸಮಯ ಪ್ರಜ್ಞೆ , ಆಚಾರ -ವಿಚಾರ, ಮಡಿ-ಉಡಿ ಮತ್ತು ಧರ್ಮಕ್ಕೆ ಪ್ರಾಧಾನ್ಯತೆ ನೀಡುತ್ತಾ ಬೆಳೆದವರು. ಶ್ರೀ ಅಜ್ಜಯ್ಯ ಸ್ವಾಮಿಗಳು ಮೂಲತಃ ಶಿಕ್ಷಕರು. ಹರಪನಹಳ್ಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿ ಮಲ್ಲಾಡಹಳ್ಳಿ ಶ್ರೀ ರಾಘವೇಂದ್ರ ಆಶ್ರಮದಲ್ಲಿ ಟಿಸಿಹೆಚ್. ತರಬೇತಿ ಪಡೆದು ಸರ್ಕಾರಿ ನೌಕರಿಗೆ ನೇಮಕಗೊಂಡು ಹರಪನಹಳ್ಳಿ ತಾಲ್ಲೂಕು, ಆಲದಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮೊದಲನೇ ವೃತ್ತಿ ಸೇವೆ ಆರಂಭಿಸಿದರು. ನಂತರ ಯಲ್ಲಾ ಪುರ, ನಂದಿಯಾಲ, ಕಡತಿ ಮುಂತಾದ ಕಡೆ ಮುಖ್ಯ ಗುರುಗಳಾಗಿ ಸರ್ಕಾರಿ ಶಿಕ್ಷಕ ವೃತ್ತಿಯ ಸೇವೆ ಸಲ್ಲಿಸಿ 2004ರ ಜೂ.30 ರಂದು ನಿವೃತ್ತರಾದರು. ಶಿಕ್ಷಣ ಕ್ಷೇತ್ರ ಮತ್ತು ಸಾರ್ವಜನಿಕ ರಂಗಗಳೆರಡರಲ್ಲೂ ಶ್ರೀ ಅಜ್ಜಯ್ಯ ಸ್ವಾಮಿಗಳು ಸಮಯ ಪ್ರಜ್ಞೆ, ಶಿಸ್ತು, ಸಂಘಟನೆ, ಸೇವೆ, ವಾಕ್ಯ ಪರಿಪಾಲನೆ ಮೂಲಕವೇ ಹೆಸರಾಗಿದ್ದಾರೆ. ಹಿಂದೊಮ್ಮೆ ನಂದಿಯಾಲ ಗ್ರಾಮದಲ್ಲಿ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕಟ್ಟಡವಿರದ ಕಾರಣ ಕಡತಿ, ನಿಟ್ಟೂರು, ನಂದಿಯಾಲ, ಅಲಗಿಲವಾಡ, ಮುತ್ತೂರು, ಯರಬಾಳು, ವಟ್ಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ತಮ್ಮ ಹಳೆಯ ವಿದ್ಯಾರ್ಥಿಗಳನ್ನೇ ಸಂಘಟಿಸಿ ಸರ್ಕಾರಿ ಶಾಲೆಗೊಂದು ಕಟ್ಟಡ ನಿರ್ಮಾಣ ಮಾಡಿದ್ದುದು ಅವರ ಸಾಮಾಜಿಕ ಕಳಕಳಿ, ನಿಷ್ಕಲ್ಮಶ ಸೇವಾ ಭಾವನೆ ಮತ್ತು ಸಂಕಲ್ಪ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಈ ಘಟನೆ ಇಂದಿಗೂ ಇತಿಹಾಸವಾಗಿ ಉಳಿದಿದೆ.

ಅಪಾರವಾದ ಆಧ್ಯಾತ್ಮಿಕ ಒಲವು ಮೂಡಿಸಿಕೊಂಡು ಶ್ರದ್ಧಾ, ಭಕ್ತಿಯ ಮೈದಳೆದಂತಿರುವ ಶ್ರೀ ಅಜ್ಜಯ್ಯ ಸ್ವಾಮಿಗಳು ಶಿಕ್ಷಕ ವೃತ್ತಿಯ ಜೊತೆ ಬಿಡುವಿನ ವೇಳೆಯಲ್ಲಿ, ಸಂಕಟದಲ್ಲಿರುವವರಿಗೆ ಶಾಸ್ತ್ರ ಹೇಳುವ ಮೂಲಕ ಪರಿಹಾರ ಒದಗಿಸುವ ಕಾರ್ಯವನ್ನು ರೂಢಿಸಿ ಕೊಂಡಿದ್ದರು. ನಿವೃತ್ತಿಯ ನಂತರ ತಮಗೆ ಬಂದ ಪಿಂಚಣಿ ಹಣ ಹಾಗೂ ಸದ್ಭಕ್ತರ ಸಹಕಾರದೊಂದಿಗೆ ಕಡತಿ ಗ್ರಾಮದ ಶ್ರೀ ರೇಣುಕ ನಗರದಲ್ಲಿ ಶ್ರೀಮಠದ ಸ್ಥಾಪನೆ ಮಾಡಿ, ತಮ್ಮ ಸಂಪೂರ್ಣ ಜೀವನವನ್ನು ಆಧ್ಯಾತ್ಮಿಕ ಸೇವೆ ಹಾಗೂ ಭಕ್ತೋದ್ಧಾರ ಕಾರ್ಯಕ್ಕಾಗಿಯೇ ಮುಡುಪಾಗಿಟ್ಟಿದ್ದಾರೆ. ಯಾವುದೇ ದೇಣಿಗೆ ಇಲ್ಲದೆ ತಮ್ಮ ಪಿಂಚಣಿ ಹಣ ಹಾಗೂ ಭಕ್ತರ ಕಾಣಿಕೆಯನ್ನೇ ಸಂಗ್ರಹಿಸಿ ಶ್ರೀ ಮಠದ ಸ್ಥಾಪನೆ ಮಾಡಿರುವ ಶ್ರೀ ಅಜ್ಜಯ್ಯನವರ ಮನೋಬಲಕ್ಕೆ ಸಾಟಿಯಿಲ್ಲ. ಮನೆಯ ನಿರ್ವಹಣೆಗೆ ಶ್ರೀ ಮಠದ ಯಾವುದೇ ಹಣವನ್ನು ಖರ್ಚು ಮಾಡುವಂತಿಲ್ಲ ಎಂಬ ಷರತ್ತನ್ನು ಕೂಡ ಕುಟುಂಬದವರಿಗೆ ವಿಧಿಸಿದ್ದಾರೆ. ಶ್ರೀಗಳ ಮಕ್ಕಳು ತಾವು ದುಡಿದು ತಂದ ಹಣದಿಂದ ತಮ್ಮ ಕುಟುಂಬದ ನಿರ್ವಹಣೆ ನಡೆಯುತ್ತಿದೆ. ನಿಜಕ್ಕೂ ಇದು ಇತರರಿಗೆ ಮಾದರಿಯಾದ ಕಾರ್ಯ ಎನ್ನಬಹುದು.

ದೈವೀ ಪರಿವಾರ : ಮೂಲತಃ ಅಜ್ಜಯ್ಯನವರದು ಸಾತ್ವಿಕ ಮತ್ತು ದೈವಿಕ ಕುಟುಂಬ. ಸದಾ ಪರರಿಗೆ ಲೇಸನ್ನೇ ಬಯಸುತ್ತಾ ಸರ್ವರ ಏಳ್ಗೆಗಾಗಿ ಶ್ರಮಿಸುವ ಕುಟುಂಬ. ಅಂತೆಯೇ ಪ್ರಸ್ತುತ ಶ್ರೀ ಮಠದ ಸೇವಾ ಕಾರ್ಯಾದಿಗಳಲ್ಲಿ ಅಜ್ಜಯ್ಯನವರ ಕುಟುಂಬದ ಸರ್ವ ಸದಸ್ಯರು ಶ್ರದ್ಧಾಭಕ್ತಿಯಿಂದ ಭಾಗವಹಿಸುತ್ತಿದ್ದಾರೆ.ಅಜ್ಜಯ್ಯನವರ ಹಿರಿಯ ಮಗ ಶ್ರೀ ವಿಶ್ವನಾಥ ಸ್ವಾಮಿಯವರು ದಾವಣಗೆರೆ ವಿ.ಆರ್.ಎಲ್‍ನಲ್ಲಿ ನೌಕರಿ ಮಾಡುತ್ತಿದ್ದಾರೆ. ಎರಡನೇ ಮಗ ಡಾ. ಕೊಟ್ರೇಶ್ವರಸ್ವಾಮಿ ಸುರಪುರಮಠ ರವರು ಬೆಂಗಳೂರಿನ ಖಾಸಗಿ ಎಂ.ಇಡಿ. ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಮಗಳು ಸಿದ್ಧಮ್ಮ ಬಳ್ಳಾರಿ ಜಿಲ್ಲಾ, ಹಡಗಲಿ ತಾಲ್ಲೂಕು, ಹರವಿ ಗ್ರಾಮದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಶ್ರೀ ಅಜ್ಜಯ್ಯನವರ ಮೊಮ್ಮಗ ಹಾಗೂ ಶ್ರೀ ವಿಶ್ವನಾಥ ಸ್ವಾಮಿಯವರ ಪುತ್ರನಾದ ಶ್ರೀ ಕಾಶಿನಾಥ ಸ್ವಾಮಿ ಸುರಪುರಮಠ್ ಅವರು ತಮ್ಮ ಅಜ್ಜನವರ ಬಳಿ ವೇದಾಧ್ಯಯನ, ಶಾಸ್ತ್ರ, ಪಂಚಾಂಗ, ಪೌರೋಹಿತ್ಯ ಇತ್ಯಾದಿ ಅಧ್ಯಯನ ಮಾಡುತ್ತಿದ್ದು, ಶ್ರೀಮಠದ ಸರ್ವ ಧಾರ್ಮಿಕ ಸೇವೆಯಲ್ಲಿ ಅಜ್ಜಯ್ಯನವರಿಗೆ ಸಾಥಿಯಾಗಿ ಧಾರ್ಮಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಸೇವಾ ಶಿರೋಮಣಿ ಲಿ|| ಕೊಟ್ರಮ್ಮ :   ಕಡತಿ ಗ್ರಾಮದ ಗುರುದೇವರ ಮಠದ ಶ್ರೀಮತಿ ಹಾಲಮ್ಮ ಮತ್ತು ಶ್ರೀ ಕೊಟ್ರಯ್ಯ ದಂಪತಿಗಳ ಸುಪುತ್ರಿಯಾದ ಕೊಟ್ರಮ್ಮನವರು ಸೇವೆಯಿಂದಲೇ ಹೆಸರಾದವರು. ಭಕ್ತರ ಪಾಲಿಗೆ ಅವರು ಸಾದ್ವಿ-ಸೇವಾ ಶಿರೋಮಣಿ. ಅಜ್ಜಯ್ಯನವರ ಧರ್ಮಪತ್ನಿಯಾದ ಕೊಟ್ರಮ್ಮನವರು ಸದಾ ಪತಿಯ ಸೇವೆ, ಕುಟುಂಬ ಸೇವೆ ಹಾಗೂ ಶ್ರೀಮಠದ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟು ಸಾರ್ಥಕ ಜೀವನ ನಡೆಸಿ ಲಿಂಗೈಕ್ಯರಾಗಿದ್ದಾರೆ. ಇಂದಿಗೂ ಶ್ರೀಮಠದಲ್ಲಿ ಅವರ ಸೇವೆ ಸ್ಮರಣೀಯವಾಗಿದೆ.

ಗುರುಸ್ಮರಣೆ – ವಾಕ್ಯ ಪರಿಪಾಲನೆ :  ಅಜ್ಜಯ್ಯ ಸ್ವಾಮಿಗಳು ಸದಾ ತಮ್ಮ ಗುರುಗಳನ್ನು ಸ್ಮರಿಸುತ್ತಾರೆ. ಅಜ್ಜಯ್ಯನವರ ಗುರುಗಳಾದ ಹಡಗಲಿ ತಾ|| ಶ್ರೀ ಸಿದ್ಧಾಪುರ ಮಠದ ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಅಖಂಡ ತಪಸ್ವಿಗಳು. ಅವರ ತಪೋಬಲ ಒಂದು ಪವಾಡವೇ ಸರಿ. ಇಂತಹ ಸದ್ಗುರುವಿನ ಕೃಪಾಶೀರ್ವಾದದಿಂದ ಪ್ರಸಾದಿಕರಾದ ಅಜ್ಜಯ್ಯ ಸ್ವಾಮಿಗಳು ಸತ್ಯ, ನ್ಯಾಯ, ನಿಷ್ಠೆ, ಆಚಾರ-ವಿಚಾರ, ಪ್ರಾಮಾಣಿಕತೆ – ಪರಿಶುದ್ಧತೆಗೆ ಅತಿ ಮಹತ್ವ ನೀಡುವ ಸಾದ್ವಿ ಪುರುಷರು. ತಮ್ಮ ಗುರುವಿನ ವಾಕ್ಯಗಳನ್ನು ಅಜ್ಜಯ್ಯನವರು ಸದಾ ಪರಿಪಾಲಿಸುತ್ತಾರೆ. ಈ ಜಗತ್ತಿನಲ್ಲಿ ಈಶ್ವರನೊಬ್ಬನನ್ನು ಬಿಟ್ಟು ಯಾರನ್ನೂ ದಾನಿಯೆನ್ನಕೂಡದು, ಸ್ತ್ರೀ-ಪುರುಷ ಮಾನವರಿಬ್ಬರೂ ಹಣೆಯಲ್ಲಿ ವಿಭೂತಿ ಧರಿಸಿಕೊಂಡು ಕೊರಳಲ್ಲಿ ಇಷ್ಟಲಿಂಗ ಧರಿಸಬೇಕು, ಪ್ರತಿನಿತ್ಯ ಶಿವಪೂಜೆ ಮಾಡಬೇಕು. ಲಿಂಗಕ್ಕೆ ಪ್ರಸಾದ ನೈವೇದ್ಯ ಮಾಡಿದ ನಂತರವೇ ಆಹಾರ ಸೇವಿಸಬೇಕು. ಮಾಡದಿದ್ದರೆ ಮುಕ್ತಿ ದೊರಕುವುದಿಲ್ಲ, ಗುರುಕೃಪೆ, ಶಿವಕೃಪೆ ಆಗುವುದಿಲ್ಲ. ಆದ್ದರಿಂದ ಆಚಾರ ವಿಚಾರಗಳಲ್ಲಿ ಕಟ್ಟು ನಿಟ್ಟಿನ ಪಾಲನೆ ಇರಬೇಕು ಎಂಬ ತಮ್ಮ ಗುರುವಿನ ವಾಕ್ಯಗಳನ್ನು ಅಜ್ಜಯ್ಯನವರು ಸದಾ ಪರಿಪಾಲಿಸುತ್ತಾ ಇತರರಿಗೂ ಬೋಧಿಸುತ್ತಿದ್ದಾರೆ. ತಮ್ಮ ಗುರುಗಳ ಅಮೃತ ಹಸ್ತದ ಮೂಲಕವೇ ಶ್ರೀ ಮಠಕ್ಕೆ ಶ್ರೀ ಜಗದ್ಗುರು ವಿಶ್ವಾರಾಧ್ಯ ಮೂರ್ತಿಯನ್ನು ಅರ್ಪಿಸಿ ಸಂತುಷ್ಠಿಯ ಭಾವ ತಳೆದಿದ್ದಾರೆ.

ಕಾಯಕ ಯೋಗಿ:ಸದಾ ಕ್ರಿಯಾಶೀಲರಾಗಿರುವ ಶ್ರೀ ಅಜ್ಜಯ್ಯ ಸ್ವಾಮಿಯವರು ಶಿಕ್ಷಕ ವೃತ್ತಿಯಲ್ಲೂ ಸಹ ಸೇವಾನಿಷ್ಠೆಯಿಂದ ಹೆಸರು ಗಳಿಸಿರುವುದಲ್ಲದೇ ಆಧ್ಯಾತ್ಮಿಕ ಕ್ಷೇತ್ರದಲ್ಲೂ ಸರ್ವ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಸದಾ ಹಸನ್ಮುಖತೆ, ಲವಲವಿಕೆಯಿಂದ ಎಲ್ಲರೊಡನೆ ಪ್ರೀತಿಯಿಂದ ಮಾತನಾಡುವ ಇವರಿಗೆ ದಣಿವೆಯ ಅನುಭವವೇ ಎಂದಿಗೂ ಆಗಿಲ್ಲ. ತಮ್ಮ70ರ ಈ ವಯಸ್ಸಿನಲ್ಲೂ ಅವರು ಇಷ್ಟೊಂದು ಕ್ರಿಯಾಶೀಲರಾಗಿರುವುದನ್ನು ಕಂಡರೆ ಎಲ್ಲರಿಗೂ ಆಶ್ಚರ್ಯವೇ ಸರಿ. ಅವರ ನಿಷ್ಕಲ್ಮಶ ಪ್ರೀತಿ ಬೆರೆತ ಮುಗುಳ್ನಗೆಯೇ ಭಕ್ತರಿಗೆ ಒಂದು ದಿವ್ಯ ಔಷದವಾಗಿದೆ. ಪ್ರತಿ ಭಾನುವಾರ-ಸೋಮವಾರ ಹಾಗೂ ಗುರುವಾರ ಮತ್ತು ಹುಣ್ಣಿಮೆ, ಅಮಾವಾಸ್ಯೆಯಂತಹ ವಿಶೇಷ ದಿನಗಳಲ್ಲಿ ನೂರಾರು ಭಕ್ತರು ಶ್ರೀಮಠಕ್ಕೆ ಬರುತ್ತಾರೆ. ತಮ್ಮ ಕಷ್ಟ -ಸುಖ- ಸಮಸ್ಯೆಗಳನ್ನು ಅಜ್ಜಯ್ಯನವರ ಬಳಿ ಹೇಳಿಕೊಂಡು ಪರಿಹಾರ ಪಡೆದು ಕೊಳ್ಳುತ್ತಿದ್ದಾರೆ. ಈ ದಿನಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಅವರು ಒಂದಿನಿತು ಕೂಡ ದಣಿವು, ಸುಸ್ತು, ಆಯಾಸ ತೋರಿಸದಂತೆ ಸದಾ ಹಸನ್ಮುಖತೆ ಯಿಂದಲೇ ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡಿ ಕಳುಹಿಸುತ್ತಾರೆ. ಅಜ್ಜಯ್ಯನವರ ಈ ಲವಲವಿಕೆ ಇತರರಿಗೆ ಮಾದರಿಯೇ ಸರಿ. ಅಜ್ಜಯ್ಯನವರ ನಿಷ್ಕಲ್ಮಶ ಪ್ರೀತಿಯ ನುಡಿಗಳೇ ನಮಗೆ ಸಾಕಷ್ಟು ಪರಿಹಾರ ಒದಗಿಸುತ್ತಿವೆ ಎಂಬುದು ಭಕ್ತರ ಅಂಬೋಣ. ಸರಳತೆ ಮತ್ತು ಸಜ್ಜನಿಕೆಯ ಸಾಕಾರ ಮೂರ್ತಿಯಂತಿರುವ ಅಜ್ಜಯ್ಯನವರು ಸದಾ ನಿಷ್ಠೆ ಮತ್ತು ಪ್ರಾಮಾಣಿಕತೆಯ ಜೀವನಕ್ಕೆ ಬದ್ಧತೆ ನೀಡಿದವರು. ಹಾಗಾಗಿ ತಮ್ಮ ಗುರುವಾಕ್ಯ ನುಡಿಯ ಪರಿಣಾಮದಿಂದ ಪರಿಹಾರ ಪಡೆದ ಕೆಲ ಭಕ್ತರು ದುಬಾರಿ ಬೆಲೆಯ ವಸ್ತುಗಳು, ಬೆಳ್ಳಿ, ಬಂಗಾರ, ಕಾರು ಇತ್ಯಾದಿ ದೊಡ್ಡ ದೊಡ್ಡ ಉಡುಗೊರೆ ಅಥವಾ ಐಷಾರಾಮಿ ಕೊಡುಗೆ ನೀಡಲು ಬಂದಾಗಲೂ ನಯವಾಗಿ ತಿರಸ್ಕರಿಸಿದ ಖ್ಯಾತಿಗೆ ಭಾಜನರಾಗಿದ್ದಾರೆ.

ಕೊನೆಯ ಮಾತು:ಒಟ್ಟಾರೆ ಭಕ್ತರಿಗೆ ಸರಳ, ಸುಂದರ, ಸಚ್ಚಾರಿತ್ರ್ಯ ಸುಖ ಜೀವನಕ್ಕೆ ಕರೆ ನೀಡುತ್ತಾ, ಮೋಕ್ಷ ಸಾಧನೆಯ ಸಂದೇಶ ನೀಡುತ್ತಾ, ಶುದ್ಧ-ಸುಸಂಸ್ಕøತ ಬದುಕಿಗೆ ಬೋಧೆಗೈಯುತ್ತ, ಸಕಲರ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತಾ, ಲೋಕ ಕಲ್ಯಾಣಾರ್ಥ ಆಧ್ಯಾತ್ಮಿಕ ಸೇವೆ ಸಲ್ಲಿಸುತ್ತಿರುವ ಈ ಶ್ರೀಮಠವು ದೈವ ದರ್ಶನದ ಕೇಂದ್ರವೇ ಆಗಿದೆ ಎಂದರೂ ಅತಿಶಯೋಕ್ತಿಯೇನಲ್ಲ. ಅಂತೆಯೇ, ಈ ಶ್ರೀಮಠದ ಮೂಲಕ ನೊಂದವರ ನೆರಳಾಗಿರುವ ಶ್ರೀ ಅಜ್ಜಯ್ಯ ಸ್ವಾಮೀಜಿಯವರ ಸೇವಾಕಾರ್ಯವೂ ಪ್ರಶಂಸನಾರ್ಹವೇ ಸರಿ. ನಾವೆಲ್ಲಾ ಅವರಿಗೆ ( ಮೊ.ಸಂ – 9901198400 ) ಅಭಿನಂದಿಸಿ, ಒಂದಷ್ಟು ಗೌರವಿಸಿ – ಪ್ರೋತ್ಸಾಹಿಸೋಣ.

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

Leave a Reply

Your email address will not be published. Required fields are marked *

Trending

Exit mobile version