ಅಂತರಂಗ
ಸಕಲರಿಗೂ ಲೇಸನ್ನೇ ಬಯಸುವ ಸುರಪುರ ಹಿರೇಮಠ
ಭಕ್ತರ ಪಾಲಿನ ಬೆಳಕಿಂಡಿ
ಸಂಖ್ಯೆಗಾಗಿ ಎಣಿಸುತ್ತಾ ಕೂತರೆ ಮಠ-ಮಂದಿರಗಳ ಸಂಖ್ಯೆ ಅಗಣಿತವೇ ಸರಿ. ಆದರೆ ಧರ್ಮ, ದೇವರು ಮತ್ತು ಧಾರ್ಮಿಕತೆಯ ನಿಜ ಮರ್ಮವನ್ನು ಅರಿತು ಮನುಕುಲದ ಸೇವೆಯಲ್ಲಿ ತೊಡಗಿರುವ ಮಠ-ಮಾನ್ಯಗಳ ಸಂಖ್ಯೆ ಅತಿ ವಿರಳವೇ ಎನ್ನಬಹುದು. ಕೆಲವು ಸದ್ದು ಮಾಡುತ್ತಲೇ ಸುದ್ದಿಯಲ್ಲಿದ್ದರೆ, ಕೆಲವು ಸದ್ದಿಲ್ಲದೆ ಸೇವೆ ಗೈಯುತ್ತಾ ಮನುಕುಲದ ಸರ್ವೋನ್ನತಿಗಾಗಿ ಶ್ರಮಿಸುತ್ತಿವೆ. ಕಾಯಕ ಒಂದನ್ನೇ ಗುರಿಯಾಗಿಸಿಕೊಂಡು ಭಕ್ತ ಜನರ ಕಲ್ಯಾಣಕ್ಕಾಗಿ ತಮ್ಮ ಪಾಡಿಗೆ ತಾವು ನಿಸ್ವಾರ್ಥ ಪಾರಮಾರ್ಥಿಕ ಸೇವೆಯಲ್ಲಿ ತೊಡಗಿರುವ ಮಠಗಳ ಸಾಲಿನಲ್ಲಿ ಬೆಳಕಿಂಡಿಯಾಗಿ ನಿಲ್ಲುತ್ತದೆ ಸುರಪುರ ಹಿರೇಮಠ.
ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಕಡತಿ ಕ್ಯಾಂಪ್‍ನ ರೇಣುಕಾ ನಗರದಲ್ಲಿ ನೆಲೆಸಿರುವ ಶ್ರೀಮದ್ ಕಾಶೀ ಪೀಠದ ಶಾಖಾಮಠವಾಗಿರುವ ಸುರಪುರ ಹಿರೇಮಠವು ಭಕ್ತ ಜನರ ಉದ್ಧಾರಕ್ಕಾಗಿಯೇ ಜನ್ಮ ತಾಳಿದಂತಿದೆ. ದಾವಣಗೆರೆಯಿಂದ ಸುಮಾರು 30 ಕಿ.ಮೀ., ಹರಿಹರದಿಂದ ಸುಮಾರು 20 ಕಿ.ಮೀ. ಹಾಗೂ ಹರಪನಹಳ್ಳಿಯಿಂದ 25-30 ಕಿ.ಮೀ. ದೂರದಲ್ಲಿರುವ ಈ ಮಠ ಹೆಸರೇ ಸೂಚಿಸುವಂತೆ ಭಕ್ತರ ಪಾಲಿನ ಸುರಪುರವೇ ಸರಿ.
ಆತ್ಮೋದ್ಧಾರದ ಅಡಿಗಲ್ಲು
ದಿನಾಂಕ : 17-10-1994 ರಂದು ಕಡತಿ ಗ್ರಾಮದ ರೇಣುಕಾ ನಗರಕ್ಕೆ ಸಂಭ್ರಮದ ದಿನ. ಆತ್ಮೋದ್ಧಾರಕ್ಕೆ ಅಡಿಗಲ್ಲು ಹಾಕಿದ ದಿನವಿದು. ಶ್ರೀಮದ್ ಕಾಶಿಪೀಠದ 1008 ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಅಮೃತ ಹಸ್ತದಿಂದ ಶ್ರೀಮಠದ ಕಟ್ಟಡಕ್ಕೆ ಅಡಿಗಲ್ಲು ಹಾಕಲಾಯಿತು.
ದಿನಾಂಕ : 20-10-1996 ರಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದ 1008 ಜಗದ್ಗುರು ಶ್ರೀ ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಮೃತಹಸ್ತದಿಂದ ಶ್ರೀಮಠದಲ್ಲಿ ಜಗದ್ಗುರು ಶ್ರೀ ವಿಶ್ವಾರಾಧ್ಯ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಆ ಮೂಲಕ ಆತ್ಮೋದ್ಧಾರ ಕಾರ್ಯಕ್ಕೆ ಮುನ್ನಡಿ ಇಡಲಾಯಿತು. ಅಂದಿನಿಂದ ಈವರೆಗೂ ಶ್ರೀಮಠದಲ್ಲಿ ಧಾರ್ಮಿಕಸೇವೆ ನಿರಂತರ ಸಾಗುತ್ತಲಿದೆ.
ಅಡ್ಡಪಲ್ಲಕ್ಕಿ ಮಹೋತ್ಸವದ ಹೆಗ್ಗಳಿಕೆ
ಶ್ರೀಮಠದಲ್ಲಿ ವಿಶೇಷ ಪೂಜೆ ಪುನಸ್ಕಾರಗಳ ಜೊತೆ ಪಂಚಪೀಠಾಧೀಶ್ವರರನ್ನು ಬರಮಾಡಿಕೊಂಡು ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸಿರುವ ಕಾರ್ಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಆಧ್ಯಾತ್ಮಿಕ ಶಕ್ತಿಯ ಔನತ್ಯಕ್ಕೆ ಮೇಲ್ಪಂಕ್ತಿ ಒದಗಿಸಿದೆ.
1996ರಲ್ಲಿ ಶ್ರೀ1008 ಜಗದ್ಗುರು ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರರಾದ ಶ್ರೀ ಮರುಳಸಿದ್ಧ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ ಮಹೋತ್ಸವ, 2006ರಲ್ಲಿ ಶ್ರೀ 1008 ಜಗದ್ಗುರು ಶ್ರೀಮದ್ ಕಾಶೀಪೀಠದ ಸಿಂಹಾಸನಾಧೀಶ್ವರರಾದ ಶ್ರೀ ಡಾ||ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ, 2010ರಲ್ಲಿ ಶ್ರೀ1008 ಜಗದ್ಗುರು ಶ್ರೀಶೈಲ ಶ್ರೀಮದ್‍ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರರಾದ ಶ್ರೀ ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದ ಮಹಸ್ವಾಮಿಗಳವರ ಅಡ್ಡಪಲ್ಲಕ್ಕಿ, 2012ರಲ್ಲಿ ಶ್ರೀ 1008 ಜಗದ್ಗುರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರರಾದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಹಾಗೂ 2014 ರಲ್ಲಿ ಶ್ರೀ 1008 ಜಗದ್ಗುರು ಶ್ರೀಮದ್ ರೇಣುಕ ವೈರಾಗ್ಯ ಸಿಂಹಾಸನಾಧೀಶ್ವರರಾದ ರಾಮ್ ಪದ ವಿಭೂಷಿತ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯುವ ಮೂಲಕ ಶ್ರೀ ಕ್ಷೇತ್ರಕ್ಕೆ ಅಪಾರ ಆಧ್ಯಾತ್ಮಿಕ ಶಕ್ತಿಯ ಸಿಂಚನ ಉಂಟಾಗಿದೆ.ಶ್ರೀಮಠದಲ್ಲಿ ಪ್ರತಿನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಪೂಜಾ ಕಾರ್ಯಗಳು ಸಾಂಗವಾಗಿ ನೆರವೇರುತ್ತಿವೆ. ಅಲ್ಲದೆ ಭಕ್ತರ ಸಮಸ್ಯೆ ಮತ್ತು ಸಂಕಷ್ಟಗಳಿಗೆ ಪರಿಹಾರ ಒದಗಿಸುವ ಕಾರ್ಯ ಕೂಡ ನಿರಂತರ ನಡೆಯುತ್ತಿದೆ. ಈ ಪರಿಹಾರ ಸೇವೆಯ ಮೂಲಕರ್ತೃ ವೇದಮೂರ್ತಿ ಶ್ರೀ ಅಜ್ಜಯ್ಯ ಶಿವಾಚಾರ್ಯ ಸ್ವಾಮಿಗಳು.
ವಿಶೇಷ ಕಾರ್ಯಕ್ರಮಗಳು
ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಶ್ರೀಮಠದಲ್ಲಿ ವಿಶೇಷ ಪೂಜಾ, ಅರ್ಚನ ಕಾರ್ಯಕ್ರಮಗಳು ನಡೆಯುತ್ತವೆ. ರುದ್ರಾಭಿಷೇಕ, ಶಾಂತಿ ಇತ್ಯಾದಿ ವಿಶೇಷ ಸೇವೆ ಮೂಲಕ ಬರುವ ಭಕ್ತರ ಸಂಕಷ್ಟ ನಿವಾರಣೆಗಾಗಿ ಸಂಕಲ್ಪ ಮಾಡಲಾಗುತ್ತದೆ. ಪ್ರತಿ ವರ್ಷ ಶಿವರಾತ್ರಿಯಂದು ಕಾಶಿ ಪೀಠದ ಜಗದ್ಗುರು ವಿಶ್ವಾರಾಧ್ಯ ಸ್ವಾಮಿಯ ಜಯಂತ್ಯುತ್ಸವ ಅಂಗವಾಗಿ ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಲಾಗುವುದು. ಅಲ್ಲದೆ ಸರ್ವಧರ್ಮದವರಿಗೂ ಉಚಿತ ಸಾಮೂಹಿಕ ವಿವಾಹಗಳು ಜರುಗುತ್ತವೆ.
ಪ್ರತಿ ವರ್ಷ ಡಿಸೆಂಬರ್ ಮಾರ್ಗಶಿರ ಮಾಸದ 3ನೇ ಸೋಮವಾರ 1008 ದೀಪಗಳ ದೀಪೆÇೀತ್ಸವ ಅಥವಾ ಕಾರ್ತಿಕೋತ್ಸವ ಜರುಗುತ್ತದೆ. ಶ್ರದ್ಧಾ ಭಕ್ತಿಯಿಂದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧನ್ಯತಾ ಭಾವ ಮೆರೆಯುತ್ತಾರೆ.
ಶ್ರೀ ಮಠದ ಆದರ್ಶ
ಇಲ್ಲಿ ನಡೆಯುವ ಯಾವುದೇ ಸೇವಾ ಕಾರ್ಯಕ್ಕೆ ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ. ಉಚಿತ ಸೇವೆಯ ಈ ಪರಂಪರೆ ಹಿಂದಿನ ಪೀಳಿಗೆಯಿಂದಲೇ ನಡೆದುಕೊಂಡು ಬಂದಿದೆ. ಶ್ರೀಮಠಕ್ಕೆ ಬರುವ ಭಕ್ತರು ತಾವಾಗಿಯೇ ತಿಳಿದು ಹಾಕುವ ಕಾಣಿಕೆ ಹಣದಿಂದಲೇ ಶ್ರೀಮಠದ ಸರ್ವ ಧಾರ್ಮಿಕ ಸೇವಾ ಕಾರ್ಯಗಳು ಜರುಗುತ್ತಿವೆ ಎಂಬುದು ಅಚ್ಚರಿಯ ಸಂಗತಿ. ಯಾವುದೇ ಜಾತಿ, ಜನಾಂಗ ಅಥವಾ ಧರ್ಮಕ್ಕೆ ಸೀಮಿತವಾಗದೆ ಮನುಕುಲದ ಕಲ್ಯಾಣವನ್ನೇ ಮುಖ್ಯ ಗುರಿಯನ್ನಾಗಿಸಿ ಕೊಂಡು ಧಾರ್ಮಿಕ ಸೇವೆಗೈಯುತ್ತಿರುವ ಈ ಶ್ರೀಮಠದ ಕಾರ್ಯ ಆದರ್ಶ ಪ್ರಾಯ ಹಾಗೂ ಅನುಕರಣೀಯವೇ ಸರಿ.
ಬಡತನದ ಬೇಗೆಯಲ್ಲಿ ಅರಳಿದ ದೈವಭಕ್ತಿ
ಪ್ರಸ್ತುತ ಶ್ರೀಮಠದ ಗುರುಗಳಾದ ಶ್ರೀ ವೇ.ಮೂ. ಅಜ್ಜಯ್ಯ ಸ್ವಾಮಿಗಳ ಕುಟುಂಬ ಬಡತನದ ಬೇಗೆಯನ್ನು ಅನುಭವಿಸಿದೆ. ಆದರೆ ಸರ್ವರಿಗೂ ಹಿತವನ್ನು ಬಯಸುವ ಶ್ರೇಷ್ಠ ಸಂಸ್ಕಾರವು ಈ ಕುಟುಂಬಕ್ಕೆ ಹೃದಯ ಶ್ರೀಮಂತಿಕೆ ಮತ್ತು ಶ್ರೇಷ್ಠತೆಯನ್ನು ತಂದು ಕೊಟ್ಟಿದೆ. ಅಜ್ಜಯ್ಯ ಸ್ವಾಮಿಗಳ ತಂದೆ ಲಿಂಗೈಕ್ಯ ವೇ|ಮೂ| ಬಸಪ್ಪಯ್ಯ ಶಾಸ್ತ್ರಿ ಹಾಗೂ ತಾಯಿಯವರಾದ ಲಿಂಗೈಕ್ಯ ಶ್ರೀಮತಿ ಕೊಟ್ರಮ್ಮ ದಂಪತಿಗಳು ಅಪಾರ ದೈವಭಕ್ತರು.
ಬಸಪ್ಪಯ್ಯ ಶಾಸ್ತ್ರಿಗಳು ಮೂಲತಃ ಗುಲ್ಬರ್ಗಾ ಜಿಲ್ಲಾ ಸುರಪುರ ಬಿಲ್ವಂ ಕೊಂಡಿಮಠದ ವಂಶಸ್ಥರು. ಕಡುಬಡತನದಲ್ಲಿಯೂ ಸದಾ ಸಚ್ಛಾರಿತ್ರ್ಯ, ಶುದ್ಧ ಸಂಸ್ಕಾರ, ಪರೋಪಕಾರ, ಸಹಬಾಳ್ವೆಯಂತಹ ಉದಾತ್ತ ಚಿಂತನೆಗಳನ್ನು ಬೆಳೆಸಿಕೊಂಡು ಬಂದಂತಹ ಕುಟುಂಬವಿದು. ರಾಜ ವೆಂಕಟಪ್ಪ ನಾಯಕ ಕೂಡ ಈ ಮಠದ ಶಿಷ್ಯರಾಗಿದ್ದರಂತೆ. ಈಗಲೂ ವೆಂಕಟಪ್ಪ ನಾಯಕನ ಕುಟುಂಬದವರು ಈ ಮಠಕ್ಕೆ ಶಿಷ್ಯರಾಗಿ ನಡೆದುಕೊಳ್ಳುತ್ತಿದ್ದಾರೆ. ಬಡತನದ ಪರಿಣಾಮ ಬರಗಾಲದ ಸಂದರ್ಭದಲ್ಲಿ ಒಮ್ಮೆ ಬಸಪ್ಪ ಶಾಸ್ತ್ರಿಗಳು ಅನಿವಾರ್ಯವಾಗಿ ಹರಪನಹಳ್ಳಿ ತಾಲ್ಲೂಕು ಹೊಂಬಳಗಟ್ಟಿಗೆ ವಲಸೆ ಬಂದು ನೆಲೆಸಿದರು. ಯಾವುದೇ ಆಸ್ತಿ ಪಾಸ್ತಿ ಇರದ ಅವರು ಶಾಸ್ತ್ರ ಮತ್ತು ಜ್ಯೋತಿಷ್ಯ ಸೇವೆ ಮೂಲಕ ಭಕ್ತರಿಂದ ಬಂದ ಕಾಣಿಕೆಯಿಂದಲೇ ಜೀವನ ನಿರ್ವಹಣೆ ಮಾಡುವ ಜೊತೆಗೆ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಸಹ ಕೊಡಿಸಿದ್ದುದು ಅವರ ಆತ್ಮಶಕ್ತಿಗೆ ಸಾಕ್ಷಿಯಾಗಿದೆ.
ಇವರ ಗರ್ಭಾಂಬುದಿಯಲ್ಲಿ 5ನೇ ಪುತ್ರರಾಗಿ ಜನಿಸಿದವರೇ ಶ್ರೀ ವೇ| ಮೂ| ಅಜ್ಜಯ್ಯ ಸ್ವಾಮಿಗಳು. ಅಂತರಂಗದಲ್ಲಿ ಬಾಲ್ಯದಿಂದಲೇ ವಿಶ್ವ ಪ್ರೇಮ, ಮಾನವ ಕಲ್ಯಾಣ, ಆತ್ಮೋದ್ಧಾರ ಸೇವೆಯಂತಹ ಉತ್ಕøಷ್ಟ-ಉನ್ನತ ವಿಚಾರಧಾರೆಗಳು ಒಡಮೂಡಿ ಬಂದ ಕಾರಣ ತಮ್ಮ ಜೀವನವನ್ನು ಶುದ್ಧ ಆಧ್ಯಾತ್ಮಿಕ ಸೇವೆ ಹಾಗೂ ಮಾನವ ಕಲ್ಯಾಣಕ್ಕಾಗಿ ಮುಡುಪಾಗಿಟ್ಟಿದ್ದಾರೆ.
ಅನ್ನದಾಸೋಹ : ಪ್ರತಿ ಭಾನುವಾರ, ಸೋಮವಾರ, ಗುರುವಾರ ಹಾಗೂ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಶ್ರೀ ಮಠದಲ್ಲಿ ಜನಜಾತ್ರೆ ನಡೆಯುತ್ತದೆ. ದೈವದರ್ಶನದ ಜೊತೆ ತಮ್ಮ ಕಷ್ಟ, ನಷ್ಟ, ನೋವು ನಿವಾರಣೆಗಾಗಿ ಭಕ್ತರು ಪರಿಹಾರ ಪಡೆದು ಸಾಗುತ್ತಾರೆ. ಈ ದಿನಗಳಲ್ಲಿ ಬರುವ ಎಲ್ಲಾ ಭಕ್ತರಿಗೂ ಬೆಳಿಗ್ಗೆ ಮತ್ತು ಸಂಜೆ ಸೇರಿದಂತೆ ಎರಡೂ ಹೊತ್ತು ಅನ್ನದಾಸೋಹ ಸದಾ ನಡೆಯುತ್ತಿದೆ.ಸಕಲರಿಗೂ ಲೇಸನ್ನೇ ಬಯಸುವ ಶ್ರೀ ವೇ| ಮೂ| ಅಜ್ಜಯ್ಯ ಶಿವಾಚಾರ್ಯ ಸ್ವಾಮಿಗಳು,1-7-1946ರಲ್ಲಿ ಜನಿಸಿದ ಅಜ್ಜಯ್ಯ ಸ್ವಾಮಿಗಳು ಬಾಲ್ಯದಿಂದಲೇ ಶಿಸ್ತು, ಸಮಯ ಪ್ರಜ್ಞೆ , ಆಚಾರ -ವಿಚಾರ, ಮಡಿ-ಉಡಿ ಮತ್ತು ಧರ್ಮಕ್ಕೆ ಪ್ರಾಧಾನ್ಯತೆ ನೀಡುತ್ತಾ ಬೆಳೆದವರು. ಶ್ರೀ ಅಜ್ಜಯ್ಯ ಸ್ವಾಮಿಗಳು ಮೂಲತಃ ಶಿಕ್ಷಕರು. ಹರಪನಹಳ್ಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿ ಮಲ್ಲಾಡಹಳ್ಳಿ ಶ್ರೀ ರಾಘವೇಂದ್ರ ಆಶ್ರಮದಲ್ಲಿ ಟಿಸಿಹೆಚ್. ತರಬೇತಿ ಪಡೆದು ಸರ್ಕಾರಿ ನೌಕರಿಗೆ ನೇಮಕಗೊಂಡು ಹರಪನಹಳ್ಳಿ ತಾಲ್ಲೂಕು, ಆಲದಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮೊದಲನೇ ವೃತ್ತಿ ಸೇವೆ ಆರಂಭಿಸಿದರು. ನಂತರ ಯಲ್ಲಾ ಪುರ, ನಂದಿಯಾಲ, ಕಡತಿ ಮುಂತಾದ ಕಡೆ ಮುಖ್ಯ ಗುರುಗಳಾಗಿ ಸರ್ಕಾರಿ ಶಿಕ್ಷಕ ವೃತ್ತಿಯ ಸೇವೆ ಸಲ್ಲಿಸಿ 2004ರ ಜೂ.30 ರಂದು ನಿವೃತ್ತರಾದರು. ಶಿಕ್ಷಣ ಕ್ಷೇತ್ರ ಮತ್ತು ಸಾರ್ವಜನಿಕ ರಂಗಗಳೆರಡರಲ್ಲೂ ಶ್ರೀ ಅಜ್ಜಯ್ಯ ಸ್ವಾಮಿಗಳು ಸಮಯ ಪ್ರಜ್ಞೆ, ಶಿಸ್ತು, ಸಂಘಟನೆ, ಸೇವೆ, ವಾಕ್ಯ ಪರಿಪಾಲನೆ ಮೂಲಕವೇ ಹೆಸರಾಗಿದ್ದಾರೆ. ಹಿಂದೊಮ್ಮೆ ನಂದಿಯಾಲ ಗ್ರಾಮದಲ್ಲಿ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕಟ್ಟಡವಿರದ ಕಾರಣ ಕಡತಿ, ನಿಟ್ಟೂರು, ನಂದಿಯಾಲ, ಅಲಗಿಲವಾಡ, ಮುತ್ತೂರು, ಯರಬಾಳು, ವಟ್ಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ತಮ್ಮ ಹಳೆಯ ವಿದ್ಯಾರ್ಥಿಗಳನ್ನೇ ಸಂಘಟಿಸಿ ಸರ್ಕಾರಿ ಶಾಲೆಗೊಂದು ಕಟ್ಟಡ ನಿರ್ಮಾಣ ಮಾಡಿದ್ದುದು ಅವರ ಸಾಮಾಜಿಕ ಕಳಕಳಿ, ನಿಷ್ಕಲ್ಮಶ ಸೇವಾ ಭಾವನೆ ಮತ್ತು ಸಂಕಲ್ಪ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಈ ಘಟನೆ ಇಂದಿಗೂ ಇತಿಹಾಸವಾಗಿ ಉಳಿದಿದೆ.
ಅಪಾರವಾದ ಆಧ್ಯಾತ್ಮಿಕ ಒಲವು ಮೂಡಿಸಿಕೊಂಡು ಶ್ರದ್ಧಾ, ಭಕ್ತಿಯ ಮೈದಳೆದಂತಿರುವ ಶ್ರೀ ಅಜ್ಜಯ್ಯ ಸ್ವಾಮಿಗಳು ಶಿಕ್ಷಕ ವೃತ್ತಿಯ ಜೊತೆ ಬಿಡುವಿನ ವೇಳೆಯಲ್ಲಿ, ಸಂಕಟದಲ್ಲಿರುವವರಿಗೆ ಶಾಸ್ತ್ರ ಹೇಳುವ ಮೂಲಕ ಪರಿಹಾರ ಒದಗಿಸುವ ಕಾರ್ಯವನ್ನು ರೂಢಿಸಿ ಕೊಂಡಿದ್ದರು. ನಿವೃತ್ತಿಯ ನಂತರ ತಮಗೆ ಬಂದ ಪಿಂಚಣಿ ಹಣ ಹಾಗೂ ಸದ್ಭಕ್ತರ ಸಹಕಾರದೊಂದಿಗೆ ಕಡತಿ ಗ್ರಾಮದ ಶ್ರೀ ರೇಣುಕ ನಗರದಲ್ಲಿ ಶ್ರೀಮಠದ ಸ್ಥಾಪನೆ ಮಾಡಿ, ತಮ್ಮ ಸಂಪೂರ್ಣ ಜೀವನವನ್ನು ಆಧ್ಯಾತ್ಮಿಕ ಸೇವೆ ಹಾಗೂ ಭಕ್ತೋದ್ಧಾರ ಕಾರ್ಯಕ್ಕಾಗಿಯೇ ಮುಡುಪಾಗಿಟ್ಟಿದ್ದಾರೆ. ಯಾವುದೇ ದೇಣಿಗೆ ಇಲ್ಲದೆ ತಮ್ಮ ಪಿಂಚಣಿ ಹಣ ಹಾಗೂ ಭಕ್ತರ ಕಾಣಿಕೆಯನ್ನೇ ಸಂಗ್ರಹಿಸಿ ಶ್ರೀ ಮಠದ ಸ್ಥಾಪನೆ ಮಾಡಿರುವ ಶ್ರೀ ಅಜ್ಜಯ್ಯನವರ ಮನೋಬಲಕ್ಕೆ ಸಾಟಿಯಿಲ್ಲ. ಮನೆಯ ನಿರ್ವಹಣೆಗೆ ಶ್ರೀ ಮಠದ ಯಾವುದೇ ಹಣವನ್ನು ಖರ್ಚು ಮಾಡುವಂತಿಲ್ಲ ಎಂಬ ಷರತ್ತನ್ನು ಕೂಡ ಕುಟುಂಬದವರಿಗೆ ವಿಧಿಸಿದ್ದಾರೆ. ಶ್ರೀಗಳ ಮಕ್ಕಳು ತಾವು ದುಡಿದು ತಂದ ಹಣದಿಂದ ತಮ್ಮ ಕುಟುಂಬದ ನಿರ್ವಹಣೆ ನಡೆಯುತ್ತಿದೆ. ನಿಜಕ್ಕೂ ಇದು ಇತರರಿಗೆ ಮಾದರಿಯಾದ ಕಾರ್ಯ ಎನ್ನಬಹುದು.
ದೈವೀ ಪರಿವಾರ : ಮೂಲತಃ ಅಜ್ಜಯ್ಯನವರದು ಸಾತ್ವಿಕ ಮತ್ತು ದೈವಿಕ ಕುಟುಂಬ. ಸದಾ ಪರರಿಗೆ ಲೇಸನ್ನೇ ಬಯಸುತ್ತಾ ಸರ್ವರ ಏಳ್ಗೆಗಾಗಿ ಶ್ರಮಿಸುವ ಕುಟುಂಬ. ಅಂತೆಯೇ ಪ್ರಸ್ತುತ ಶ್ರೀ ಮಠದ ಸೇವಾ ಕಾರ್ಯಾದಿಗಳಲ್ಲಿ ಅಜ್ಜಯ್ಯನವರ ಕುಟುಂಬದ ಸರ್ವ ಸದಸ್ಯರು ಶ್ರದ್ಧಾಭಕ್ತಿಯಿಂದ ಭಾಗವಹಿಸುತ್ತಿದ್ದಾರೆ.ಅಜ್ಜಯ್ಯನವರ ಹಿರಿಯ ಮಗ ಶ್ರೀ ವಿಶ್ವನಾಥ ಸ್ವಾಮಿಯವರು ದಾವಣಗೆರೆ ವಿ.ಆರ್.ಎಲ್‍ನಲ್ಲಿ ನೌಕರಿ ಮಾಡುತ್ತಿದ್ದಾರೆ. ಎರಡನೇ ಮಗ ಡಾ. ಕೊಟ್ರೇಶ್ವರಸ್ವಾಮಿ ಸುರಪುರಮಠ ರವರು ಬೆಂಗಳೂರಿನ ಖಾಸಗಿ ಎಂ.ಇಡಿ. ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಮಗಳು ಸಿದ್ಧಮ್ಮ ಬಳ್ಳಾರಿ ಜಿಲ್ಲಾ, ಹಡಗಲಿ ತಾಲ್ಲೂಕು, ಹರವಿ ಗ್ರಾಮದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಶ್ರೀ ಅಜ್ಜಯ್ಯನವರ ಮೊಮ್ಮಗ ಹಾಗೂ ಶ್ರೀ ವಿಶ್ವನಾಥ ಸ್ವಾಮಿಯವರ ಪುತ್ರನಾದ ಶ್ರೀ ಕಾಶಿನಾಥ ಸ್ವಾಮಿ ಸುರಪುರಮಠ್ ಅವರು ತಮ್ಮ ಅಜ್ಜನವರ ಬಳಿ ವೇದಾಧ್ಯಯನ, ಶಾಸ್ತ್ರ, ಪಂಚಾಂಗ, ಪೌರೋಹಿತ್ಯ ಇತ್ಯಾದಿ ಅಧ್ಯಯನ ಮಾಡುತ್ತಿದ್ದು, ಶ್ರೀಮಠದ ಸರ್ವ ಧಾರ್ಮಿಕ ಸೇವೆಯಲ್ಲಿ ಅಜ್ಜಯ್ಯನವರಿಗೆ ಸಾಥಿಯಾಗಿ ಧಾರ್ಮಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಸೇವಾ ಶಿರೋಮಣಿ ಲಿ|| ಕೊಟ್ರಮ್ಮ : ಕಡತಿ ಗ್ರಾಮದ ಗುರುದೇವರ ಮಠದ ಶ್ರೀಮತಿ ಹಾಲಮ್ಮ ಮತ್ತು ಶ್ರೀ ಕೊಟ್ರಯ್ಯ ದಂಪತಿಗಳ ಸುಪುತ್ರಿಯಾದ ಕೊಟ್ರಮ್ಮನವರು ಸೇವೆಯಿಂದಲೇ ಹೆಸರಾದವರು. ಭಕ್ತರ ಪಾಲಿಗೆ ಅವರು ಸಾದ್ವಿ-ಸೇವಾ ಶಿರೋಮಣಿ. ಅಜ್ಜಯ್ಯನವರ ಧರ್ಮಪತ್ನಿಯಾದ ಕೊಟ್ರಮ್ಮನವರು ಸದಾ ಪತಿಯ ಸೇವೆ, ಕುಟುಂಬ ಸೇವೆ ಹಾಗೂ ಶ್ರೀಮಠದ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟು ಸಾರ್ಥಕ ಜೀವನ ನಡೆಸಿ ಲಿಂಗೈಕ್ಯರಾಗಿದ್ದಾರೆ. ಇಂದಿಗೂ ಶ್ರೀಮಠದಲ್ಲಿ ಅವರ ಸೇವೆ ಸ್ಮರಣೀಯವಾಗಿದೆ.
ಗುರುಸ್ಮರಣೆ – ವಾಕ್ಯ ಪರಿಪಾಲನೆ : ಅಜ್ಜಯ್ಯ ಸ್ವಾಮಿಗಳು ಸದಾ ತಮ್ಮ ಗುರುಗಳನ್ನು ಸ್ಮರಿಸುತ್ತಾರೆ. ಅಜ್ಜಯ್ಯನವರ ಗುರುಗಳಾದ ಹಡಗಲಿ ತಾ|| ಶ್ರೀ ಸಿದ್ಧಾಪುರ ಮಠದ ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಅಖಂಡ ತಪಸ್ವಿಗಳು. ಅವರ ತಪೋಬಲ ಒಂದು ಪವಾಡವೇ ಸರಿ. ಇಂತಹ ಸದ್ಗುರುವಿನ ಕೃಪಾಶೀರ್ವಾದದಿಂದ ಪ್ರಸಾದಿಕರಾದ ಅಜ್ಜಯ್ಯ ಸ್ವಾಮಿಗಳು ಸತ್ಯ, ನ್ಯಾಯ, ನಿಷ್ಠೆ, ಆಚಾರ-ವಿಚಾರ, ಪ್ರಾಮಾಣಿಕತೆ – ಪರಿಶುದ್ಧತೆಗೆ ಅತಿ ಮಹತ್ವ ನೀಡುವ ಸಾದ್ವಿ ಪುರುಷರು. ತಮ್ಮ ಗುರುವಿನ ವಾಕ್ಯಗಳನ್ನು ಅಜ್ಜಯ್ಯನವರು ಸದಾ ಪರಿಪಾಲಿಸುತ್ತಾರೆ. ಈ ಜಗತ್ತಿನಲ್ಲಿ ಈಶ್ವರನೊಬ್ಬನನ್ನು ಬಿಟ್ಟು ಯಾರನ್ನೂ ದಾನಿಯೆನ್ನಕೂಡದು, ಸ್ತ್ರೀ-ಪುರುಷ ಮಾನವರಿಬ್ಬರೂ ಹಣೆಯಲ್ಲಿ ವಿಭೂತಿ ಧರಿಸಿಕೊಂಡು ಕೊರಳಲ್ಲಿ ಇಷ್ಟಲಿಂಗ ಧರಿಸಬೇಕು, ಪ್ರತಿನಿತ್ಯ ಶಿವಪೂಜೆ ಮಾಡಬೇಕು. ಲಿಂಗಕ್ಕೆ ಪ್ರಸಾದ ನೈವೇದ್ಯ ಮಾಡಿದ ನಂತರವೇ ಆಹಾರ ಸೇವಿಸಬೇಕು. ಮಾಡದಿದ್ದರೆ ಮುಕ್ತಿ ದೊರಕುವುದಿಲ್ಲ, ಗುರುಕೃಪೆ, ಶಿವಕೃಪೆ ಆಗುವುದಿಲ್ಲ. ಆದ್ದರಿಂದ ಆಚಾರ ವಿಚಾರಗಳಲ್ಲಿ ಕಟ್ಟು ನಿಟ್ಟಿನ ಪಾಲನೆ ಇರಬೇಕು ಎಂಬ ತಮ್ಮ ಗುರುವಿನ ವಾಕ್ಯಗಳನ್ನು ಅಜ್ಜಯ್ಯನವರು ಸದಾ ಪರಿಪಾಲಿಸುತ್ತಾ ಇತರರಿಗೂ ಬೋಧಿಸುತ್ತಿದ್ದಾರೆ. ತಮ್ಮ ಗುರುಗಳ ಅಮೃತ ಹಸ್ತದ ಮೂಲಕವೇ ಶ್ರೀ ಮಠಕ್ಕೆ ಶ್ರೀ ಜಗದ್ಗುರು ವಿಶ್ವಾರಾಧ್ಯ ಮೂರ್ತಿಯನ್ನು ಅರ್ಪಿಸಿ ಸಂತುಷ್ಠಿಯ ಭಾವ ತಳೆದಿದ್ದಾರೆ.
ಕಾಯಕ ಯೋಗಿ:ಸದಾ ಕ್ರಿಯಾಶೀಲರಾಗಿರುವ ಶ್ರೀ ಅಜ್ಜಯ್ಯ ಸ್ವಾಮಿಯವರು ಶಿಕ್ಷಕ ವೃತ್ತಿಯಲ್ಲೂ ಸಹ ಸೇವಾನಿಷ್ಠೆಯಿಂದ ಹೆಸರು ಗಳಿಸಿರುವುದಲ್ಲದೇ ಆಧ್ಯಾತ್ಮಿಕ ಕ್ಷೇತ್ರದಲ್ಲೂ ಸರ್ವ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಸದಾ ಹಸನ್ಮುಖತೆ, ಲವಲವಿಕೆಯಿಂದ ಎಲ್ಲರೊಡನೆ ಪ್ರೀತಿಯಿಂದ ಮಾತನಾಡುವ ಇವರಿಗೆ ದಣಿವೆಯ ಅನುಭವವೇ ಎಂದಿಗೂ ಆಗಿಲ್ಲ. ತಮ್ಮ70ರ ಈ ವಯಸ್ಸಿನಲ್ಲೂ ಅವರು ಇಷ್ಟೊಂದು ಕ್ರಿಯಾಶೀಲರಾಗಿರುವುದನ್ನು ಕಂಡರೆ ಎಲ್ಲರಿಗೂ ಆಶ್ಚರ್ಯವೇ ಸರಿ. ಅವರ ನಿಷ್ಕಲ್ಮಶ ಪ್ರೀತಿ ಬೆರೆತ ಮುಗುಳ್ನಗೆಯೇ ಭಕ್ತರಿಗೆ ಒಂದು ದಿವ್ಯ ಔಷದವಾಗಿದೆ. ಪ್ರತಿ ಭಾನುವಾರ-ಸೋಮವಾರ ಹಾಗೂ ಗುರುವಾರ ಮತ್ತು ಹುಣ್ಣಿಮೆ, ಅಮಾವಾಸ್ಯೆಯಂತಹ ವಿಶೇಷ ದಿನಗಳಲ್ಲಿ ನೂರಾರು ಭಕ್ತರು ಶ್ರೀಮಠಕ್ಕೆ ಬರುತ್ತಾರೆ. ತಮ್ಮ ಕಷ್ಟ -ಸುಖ- ಸಮಸ್ಯೆಗಳನ್ನು ಅಜ್ಜಯ್ಯನವರ ಬಳಿ ಹೇಳಿಕೊಂಡು ಪರಿಹಾರ ಪಡೆದು ಕೊಳ್ಳುತ್ತಿದ್ದಾರೆ. ಈ ದಿನಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಅವರು ಒಂದಿನಿತು ಕೂಡ ದಣಿವು, ಸುಸ್ತು, ಆಯಾಸ ತೋರಿಸದಂತೆ ಸದಾ ಹಸನ್ಮುಖತೆ ಯಿಂದಲೇ ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡಿ ಕಳುಹಿಸುತ್ತಾರೆ. ಅಜ್ಜಯ್ಯನವರ ಈ ಲವಲವಿಕೆ ಇತರರಿಗೆ ಮಾದರಿಯೇ ಸರಿ. ಅಜ್ಜಯ್ಯನವರ ನಿಷ್ಕಲ್ಮಶ ಪ್ರೀತಿಯ ನುಡಿಗಳೇ ನಮಗೆ ಸಾಕಷ್ಟು ಪರಿಹಾರ ಒದಗಿಸುತ್ತಿವೆ ಎಂಬುದು ಭಕ್ತರ ಅಂಬೋಣ. ಸರಳತೆ ಮತ್ತು ಸಜ್ಜನಿಕೆಯ ಸಾಕಾರ ಮೂರ್ತಿಯಂತಿರುವ ಅಜ್ಜಯ್ಯನವರು ಸದಾ ನಿಷ್ಠೆ ಮತ್ತು ಪ್ರಾಮಾಣಿಕತೆಯ ಜೀವನಕ್ಕೆ ಬದ್ಧತೆ ನೀಡಿದವರು. ಹಾಗಾಗಿ ತಮ್ಮ ಗುರುವಾಕ್ಯ ನುಡಿಯ ಪರಿಣಾಮದಿಂದ ಪರಿಹಾರ ಪಡೆದ ಕೆಲ ಭಕ್ತರು ದುಬಾರಿ ಬೆಲೆಯ ವಸ್ತುಗಳು, ಬೆಳ್ಳಿ, ಬಂಗಾರ, ಕಾರು ಇತ್ಯಾದಿ ದೊಡ್ಡ ದೊಡ್ಡ ಉಡುಗೊರೆ ಅಥವಾ ಐಷಾರಾಮಿ ಕೊಡುಗೆ ನೀಡಲು ಬಂದಾಗಲೂ ನಯವಾಗಿ ತಿರಸ್ಕರಿಸಿದ ಖ್ಯಾತಿಗೆ ಭಾಜನರಾಗಿದ್ದಾರೆ.
ಕೊನೆಯ ಮಾತು:ಒಟ್ಟಾರೆ ಭಕ್ತರಿಗೆ ಸರಳ, ಸುಂದರ, ಸಚ್ಚಾರಿತ್ರ್ಯ ಸುಖ ಜೀವನಕ್ಕೆ ಕರೆ ನೀಡುತ್ತಾ, ಮೋಕ್ಷ ಸಾಧನೆಯ ಸಂದೇಶ ನೀಡುತ್ತಾ, ಶುದ್ಧ-ಸುಸಂಸ್ಕøತ ಬದುಕಿಗೆ ಬೋಧೆಗೈಯುತ್ತ, ಸಕಲರ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತಾ, ಲೋಕ ಕಲ್ಯಾಣಾರ್ಥ ಆಧ್ಯಾತ್ಮಿಕ ಸೇವೆ ಸಲ್ಲಿಸುತ್ತಿರುವ ಈ ಶ್ರೀಮಠವು ದೈವ ದರ್ಶನದ ಕೇಂದ್ರವೇ ಆಗಿದೆ ಎಂದರೂ ಅತಿಶಯೋಕ್ತಿಯೇನಲ್ಲ. ಅಂತೆಯೇ, ಈ ಶ್ರೀಮಠದ ಮೂಲಕ ನೊಂದವರ ನೆರಳಾಗಿರುವ ಶ್ರೀ ಅಜ್ಜಯ್ಯ ಸ್ವಾಮೀಜಿಯವರ ಸೇವಾಕಾರ್ಯವೂ ಪ್ರಶಂಸನಾರ್ಹವೇ ಸರಿ. ನಾವೆಲ್ಲಾ ಅವರಿಗೆ ( ಮೊ.ಸಂ – 9901198400 ) ಅಭಿನಂದಿಸಿ, ಒಂದಷ್ಟು ಗೌರವಿಸಿ – ಪ್ರೋತ್ಸಾಹಿಸೋಣ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ4 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ದಿನದ ಸುದ್ದಿ2 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ದಿನದ ಸುದ್ದಿ15 hours agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ಅಂತರಂಗ22 minutes agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು



