ಅಂತರಂಗ

ಅರಿಮೆಯ ಅರಿವಿರಲಿ – 59 : ಶಿಶುಗಣ್ಣಿನ ಒಳಗಣ್ಣು

Published

on

  • ಯೋಗೇಶ್ ಮಾಸ್ಟರ್

ಗುವನ್ನು ಮನೆಯಲ್ಲಿ ಪೋಷಿಸುವುದಾಗಲಿ, ಶಾಲೆಯಲ್ಲಿ ಶಿಕ್ಷಣ ನೀಡುವುದಾಗಲಿ ಅಥವಾ ಇನ್ನಾವುದೇ ಕಾರಣ ಮತ್ತು ತರಬೇತಿಗಳಿಗೆ ಮಗುವಿನ ಸಂಪರ್ಕದಲ್ಲಿ ವ್ಯವಹರಿಸುವವರಾಗಲಿ ಎರಡು ಸಾಮರ್ಥ್ಯವಿರಬೇಕು. ಒಂದು ಶಿಶುವಿನ ದೃಷ್ಟಿಯಲ್ಲಿ ನಾವು ಮತ್ತು ನಮ್ಮ ಕೆಲಸ ಹೇಗೆ ಕಾಣುತ್ತಿದೆ ಎಂದು ಗ್ರಹಿಸಲು ಸಾಧ್ಯವಾಗಬೇಕು.

ಹಾಗೆಯೇ ಮತ್ತೊಂದು ಸಾಮರ್ಥ್ಯ ಮಗುವಿಗೆ ದಾಟಿಸಬೇಕಾದ ವಿಷಯವನ್ನು ಅದು ಮೆಚ್ಚುವ ಹಾಗೆ ಮತ್ತು ಆನಂದಿಸುವ ಹಾಗೆ ರೂಪಿಸುವುದು.
ಮಗುವಿನ ವಯಸ್ಸು, ಮನಸ್ಸು, ಹಿನ್ನೆಲೆ, ನೈಸರ್ಗಿಕವಾಗಿ ಇರುವ ಸಾಮರ್ಥ್ಯ ಮತ್ತು ಗಳಿಸಿಕೊಂಡಿರುವ ಸಾಮರ್ಥ್ಯದ ಆಧಾರದ ಮೇಲೆ ನೀಡುವ ಸಂದೇಶವಾಗಲಿ, ಶಿಕ್ಷಣವಾಗಲಿ, ತರಬೇತಿಯಾಗಲಿ ಯೋಜಿತಗೊಳ್ಳಬೇಕು.

ಕಲಿಕೆಯೆಂಬ ಪ್ರಕ್ರಿಯೆ ನಿರಂತರವಾಗಿರುವ ಕಾರಣದಿಂದಾಗಿ, ಹಾಗೂ ಮಗುವಿನ ಬದುಕಿನುದ್ದಕ್ಕೂ ವಿಷಯಗಳು ಮತ್ತು ಕೌಶಲ್ಯಗಳು ಪರಸ್ಪರ ಬೆಸೆದುಕೊಂಡಿರುವ ಕೊಂಡಿಗಳಂತಿರುವ ಕಾರಣದಿಂದ ಅವರೇ ಅದನ್ನು ಗ್ರಹಿಸಿ, ಪ್ರಶಂಸಿಸಿ, ಆನಂದಿಸಿ ತಮ್ಮದಾಗಿಸಿಕೊಳ್ಳುವ ರೀತಿಯಲ್ಲಿ ನಾವು ಅವರಿಗೆ ಮುಟ್ಟಿಸುವ ವಿಷಯಗಳನ್ನು ರಚಿಸಿಕೊಳ್ಳಬೇಕು.

ಒಟ್ಟಾರೆ ಹೇಳುವುದಾದರೆ ಶಿಶುಗಣ್ಣು ನಮಗಿರಬೇಕು. ಶಿಶುವಿನ ಕಣ್ಣಲ್ಲಿ ನಮ್ಮ ಚಿತ್ರಣವು ಹೇಗಿರುತ್ತದೆ ಎಂಬ ಪರಿಕಲ್ಪನೆ ನಮಗೆ ಸ್ಪಷ್ಟವಾಗಿರಬೇಕು.

ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ಹೊಂದುವ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ತರಬೇತಿ ಕೇಂದ್ರಗಳೆಲ್ಲವೂ ಶಿಶುವಿಹಾರಗಳಾಗಬೇಕು. ಹಾಗೂ ಮಕ್ಕಳೊಡನೆ ನಡೆಸುವ ವ್ಯವಹಾರಗಳಲ್ಲಿ ಯಾವುದೇ ರೀತಿ ಭಾಗಿಯಾಗುವ ಹಿರಿಯರಲ್ಲಿ ಈ ಶಿಶುಗಣ್ಣು ಅತ್ಯಂತ ನಿಚ್ಚಳವಾಗಿ ತೆರೆದಿರಬೇಕು. ಏಕೆಂದರೆ ಮಕ್ಕಳು ತಮ್ಮ ಎಳೆಗಣ್ಣಲ್ಲಿ ಗ್ರಹಿಸಿದ್ದು ಅವರ ವ್ಯಕ್ತಿತ್ವದ ಭಾಗವಾಗಿ, ಕೌಶಲ್ಯದ ಬುನಾದಿಯಾಗಿ, ಮನೋಭಾವದ ನೆಲೆಯಾಗಿ ಬೇರೂರುತ್ತದೆ. ಅವರ ವ್ಯಕ್ತಿತ್ವ ವಿಕಸನವೂ ಕೂಡಾ ಅದರಿಂದಲೇ ಆಗುತ್ತದೆ.

ವಸ್ತುಗಳನ್ನು, ವಿಷಯಗಳನ್ನು ಮತ್ತು ವ್ಯಕ್ತಿಗಳನ್ನು ನೋಡುವ ಬಗೆ ಎಂಬುದು ಸಾಧಾರಣ ವಿಚಾರವಲ್ಲ. ಬಹಳ ಮಹತ್ವದ್ದು ಮಾತ್ರವಲ್ಲದೇ ಅದು ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ, ಜೀವನ ಕ್ರಮಗಳನ್ನು ರೂಢಿಸಿಕೊಳ್ಳುವಲ್ಲಿ, ಸಂಕಲ್ಪಗಳನ್ನು ಮಾಡುವಲ್ಲಿ, ವಿವೇಚನೆಯಿಂದ ವಿಷಯಗಳನ್ನು ಸ್ವೀಕರಿಸುವಲ್ಲಿ ಅಥವಾ ತಿರಸ್ಕರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನೋಡುವ ಬಗೆಯ ತರಬೇತಿ ಕೂಡಾ ಶಿಶುಗಣ್ಣಿಗೆ ಬೇಕು. ಏಕೆಂದರೆ ಅವರದು ಕಾಮಾಲೆ ಕಣ್ಣಾಗಬಾರದಲ್ಲ!

ಶಿಶುಮತಿ

ಮನಸ್ಸನ್ನು ಹದಗೊಳಿಸಬೇಕು, ಮತಿಗೆ ತಿದಿಯೊತ್ತಬೇಕು. ಮಗುವಿನ ಮನಸ್ಸು ಮತ್ತು ಮತಿಗಳ ವಿಷಯದಲ್ಲಿಯೂ ಕೂಡಾ ಅದೇ ಮಾಡಬೇಕಾಗಿರುವುದು. ಅದರ ಮನಸ್ಸಿಗೆ ಅಗತ್ಯದ ಭಾವನೆಗಳು ಹುಟ್ಟುವಂತೆ, ಅನುಭವಗಳು ದಕ್ಕುವಂತೆ, ದೃಷ್ಟಿಗಳು ಮೂಡುವಂತೆ, ಕನಸುಗಳು ಕಟ್ಟುವಂತೆ ಮಾಡಿದರೆ, ಅವುಗಳನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ನಿರ್ವಹಿಸಲು ಬುದ್ಧಿಗೆ ತರಬೇತಿಯನ್ನು ನೀಡಬೇಕು. ಮನಕ್ಕೆ ಮತಿಯೊಂದು ಉಪಕರಣ. ಮತಿಯೆಂದರೆ ಬುದ್ಧಿಯೆಂಬ ಅರ್ಥದಲ್ಲಿ ಇಲ್ಲಿ ಬಳಸುತ್ತಿದ್ದೇನೆ.

ಮನಸ್ಸು ಉದಾತ್ತವಾದಂತೆ, ನೈತಿಕತೆಯನ್ನು ನೆಚ್ಚಿಕೊಂಡಂತೆ, ತನ್ನ ತಾನು ತಿಳಿದ ಮೇಲೆ, ತನ್ನ ಸಾಮರ್ಥ್ಯವನ್ನು ಸಾಕ್ಷಾತ್ಕರಿಸಿಕೊಂಡ ಮೇಲೆ ಬುದ್ಧಿಯನ್ನು ಸಾಣೆ ಹಿಡಿಯುವ ಕೆಲಸವನ್ನು ಮಾಡಬೇಕು. ಈ ಕೆಲಸವಾಗುವುದು ಕೌಶಲ್ಯಗಳನ್ನು ಬೆಳೆಸುವುದರ ಮೂಲಕ. ಶಿಸ್ತುಗಳನ್ನು ಅನುಸರಿಸುವುದರ ಮೂಲಕ. ಮಾಡುವ ಕೆಲಸಗಳಲ್ಲಿ ಕ್ರಮಗಳನ್ನು ಕಂಡುಕೊಳ್ಳುವುದರ ಮೂಲಕ, ಮೆದುಳಿಗೆ ಸಾಕಷ್ಟು ಕಸರತ್ತುಗಳನ್ನು ನೀಡಿ ಅದನ್ನು ಚುರುಕಾಗಿರಿಸಿಕೊಳ್ಳುವುದರ ಮೂಲಕ.

ಅಧ್ಯಯನದಲ್ಲಿ ಆಸಕ್ತಿ, ಕೌಶಲ್ಯಗಳಲ್ಲಿ ತರಬೇತಿ, ಜೀವನ ಕ್ರಮಗಳಲ್ಲಿ ಶಿಸ್ತು ಮತ್ತು ಕಲಿಕೆಯ ಪ್ರಕ್ರಿಯೆಗಳಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಮಕ್ಕಳ ವೈಚಾರಿಕತೆಗೆ ಮತ್ತು ವೈಜ್ಞಾನಿಕ ಧೋರಣೆಗಳಿಗೆ ವಸ್ತುನಿಷ್ಟ ಮೌಲ್ಯಗಳನ್ನು ನೀಡಲು ಸಾಧ್ಯವಾಗುವುದು.

ಯಾವುದೇ ಸನ್ನಿವೇಶಗಳಲ್ಲಿ ಭಾವೋದ್ರೇಕಕ್ಕೆ ಒಳಗಾಗಿ ಬುದ್ಧಿಯನ್ನು ಬಲಿಗೊಡದೇ ಕೌಶಲ್ಯದಿಂದ ಅದನ್ನು ಸಮಚಿತ್ತದಿಂದ ಗಮನಿಸಿ ವರ್ತಿಸಲು, ಪ್ರವರ್ತಿಸಲು ಸಾಧ್ಯವಾಗುತ್ತದೆ. ಈ ಭಾವುಕತೆಯ ನಿರ್ವಹಣೆಯ ಕೌಶಲ್ಯವೂ ಕೂಡಾ ಜೀವನ ಕೌಶಲ್ಯದಂತೆ ತರಬೇತಿಯಿಂದ ಪಡೆಯಲು ಸಾಧ್ಯ. ಮನಸ್ಸಿನ ಮತ್ತು ದೇಹದ ಜಡತ್ವವನ್ನು ನೀಗಲು ಶಿಸ್ತು ಮತ್ತು ತರಬೇತಿ ಬೇಕು.

ಪ್ರತಿಭೆ, ಸಾಮರ್ಥ್ಯ, ತಿಳುವಳಿಕೆ, ಅಧ್ಯಯನ; ಇವೆಲ್ಲಾ ಇದ್ದರೂ ಕೂಡಾ ಕೌಶಲ್ಯವು ಇಲ್ಲದಿರುವ ಕಾರಣದಿಂದ ಎಷ್ಟೋ ಬಾರಿ ವ್ಯಕ್ತಿಗಳು ಅವುಗಳನ್ನು ಸಮರ್ಪಕವಾಗಿ ಬಳಸಲು, ಉಪಯುಕ್ತವನ್ನಾಗಿಸಿಕೊಳ್ಳಲು ಬರುವುದಿಲ್ಲ. ಇದಕ್ಕೆ ಬೇಕಾಗಿರುವುದು ಸೂಕ್ತ ತರಬೇತಿ. ತೊಡಕಾಗಿರುವಂತಹ ಅರಿಮೆಗಳನ್ನು ನಿವಾರಿಸಿಕೊಂಡು, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು, ಇತಿಮಿತಿಯನ್ನು ತಿಳಿದುಕೊಂಡು ಅದನ್ನು ದಾಟಿ ಗುರಿ ತಲುಪಲು ಬೇಕಾದ ಜಾಣ್ಮೆಯನ್ನು ಪಡೆದುಕೊಳ್ಳಲು ಮಕ್ಕಳಿಗೆ ತರಬೇತಿಯನ್ನು ನೀಡುವುದು ಮನೆಯಲ್ಲಿ ಪೋಷಕರದು, ಶಾಲೆಯಲ್ಲಿ ಶಿಕ್ಷಕರದು ಮತ್ತು ಇನ್ನುಳಿದಂತೆ ಸಮಾಜದಲ್ಲಿ ಎಲ್ಲಾ ಹಿರಿಯ ಸದಸ್ಯರದು.

ಶಿಶುಗಲಿಕೆ

ಶಿಕ್ಷಣ ಶಿಶುವಿಗೆ ಅಗತ್ಯ ಎಂದು ತಾತ್ವಿಕವಾಗಿ ನಂಬುವುದೇನೂ ನಮಗೆ ಸಾಲದು. ಏಕೆಂದರೆ ತಾಂತ್ರಿಕವಾಗಿ ಅದನ್ನು ಮಕ್ಕಳಿಗೆ ಮುಟ್ಟಿಸದಿದ್ದರೆ ಇಡೀ ಶಿಕ್ಷಣ ವ್ಯವಸ್ಥೆಯೇ ಕುಸಿಯುತ್ತದೆ. ಅನುಚಿತ ಮತ್ತು ಸಮರ್ಪಕ ಶಿಕ್ಷಣದ ವ್ಯವಸ್ಥೆಯಿಂದಾಗಿ ಸಮಾಜವು ಟೊಳ್ಳಾಗುತ್ತದೆ. ಈ ಎಚ್ಚರಿಕೆ ನಮಗಿರಬೇಕು.

ಕುಣಿಯಲಾರದವರು ನೆಲ ಡೊಂಕು ಅಂದಂತೆ ಶಿಕ್ಷಕರು ಮತ್ತು ಪೋಷಕರು ಸಾಮಾನ್ಯವಾಗಿ ಮಗುವಿಗೆ ಅದೆಷ್ಟು ಹೇಳಿಕೊಟ್ಟರೂ ಕಲಿಯಲಿಲ್ಲ ಗ್ರಹಿಸುತ್ತಿಲ್ಲ ಎಂದು ದೂರುತ್ತಿರುತ್ತಾರೆ. ಆದರೆ ಮಕ್ಕಳು ಯಂತ್ರಗಳ ಉತ್ಪಾದನೆಗಳಲ್ಲದ ಕಾರಣ ಅವರಿಗೆ ಬೋಧನಾ ಕ್ರಮಗಳಗಲ್ಲಿ, ಕಲಿಸುವ ತಂತ್ರಗಳಲ್ಲಿ ಸೂಕ್ತವಾದ ಮತ್ತು ಸಾಕಷ್ಟು ಬದಲಾವಣೆಗಳನ್ನು ತಂದುಕೊಳ್ಳುವುದು ಶಿಕ್ಷಕರ ಸಾಮರ್ಥ್ಯ.

ಕಲಿಯುವ ಮತ್ತು ಕಲಿಸುವ ವಿಧಾನಗಳಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ. ಅವುಗಳನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳದೇ ಹೋದರೆ ಪೆÇಳ್ಳು ವ್ಯಕ್ತಿತ್ವದ ಮತ್ತು ಟೊಳ್ಳು ವೃತ್ತಿಪರತೆಯ ವ್ಯಕ್ತಿಗಳನ್ನು ಮುಂದೆ ಕಾಣುತ್ತೇವೆ. ಜೊತೆಗೆ ಗಟ್ಟಿಯಾದ ಸಂಪನ್ಮೂಲ ವ್ಯಕ್ತಿಗಳನ್ನೇ ಕಾಣಲಾಗದಷ್ಟು ಅಪಾಯವನ್ನು ಎದುರಿಸಬೇಕಾಗುತ್ತದೆ.

ತಮ್ಮ ವಿಷಯದಲ್ಲಿ ತಾವೇ ಸ್ಪಷ್ಟತೆಯನ್ನು ಮತ್ತು ಸಾಮರ್ಥ್ಯವನ್ನು ಹೊಂದಿಲ್ಲದಂತ ಟೊಳ್ಳು ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಕ್ಷಕರು ಕ್ಷೇತ್ರದಲ್ಲಿ ಕೆಲಸಕ್ಕೆ ಇಳಿದರೆ, ಅವರಿಂದ ಕಲಿಕೆಯನ್ನು ಪಡೆಯುವವರೂ ಕೂಡಾ ಟೊಳ್ಳಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮಕ್ಕಳ ಕಲಿಕೆಯ ವಿಷಯದಲ್ಲಿ ಸೂಕ್ತವಾದ ತಂತ್ರಗಳನ್ನು ಬಳಸುವ ವಿಷಯದಲ್ಲಿ ಪೋಷಕರೂ, ಶಿಕ್ಷಕರೂ ಮತ್ತು ಇತರ ತರಬೇತುದಾರರು ಪಳಗಬೇಕು. ಮಗುವಿಗೆ ಕಲಿಸುವುದು ಎಂದರೆ ಪಠ್ಯ ಮಾತ್ರವಲ್ಲದೆ, ನೈತಿಕತೆ, ಆರ್ಥಿಕ ಪ್ರಜ್ಞೆ, ಜೀವನ ಕೌಶಲ್ಯ, ಕಲೆ ಮತ್ತು ಸಾಂಸ್ಕೃತಿಕ ತರಬೇತಿ, ಸೃಜನಶೀಲತೆ; ಇತ್ಯಾದಿಗಳೆಲ್ಲಾ ಅಡಕವಾಗಿರುತ್ತದೆ.

ಅವೆಲ್ಲವೂ ಕೂಡಾ ಜೀವನದ ಸಾರ ಗ್ರಹಿಕೆಗೆ ಮತ್ತು ಬದುಕನ್ನು ಆನಂದಿಸಲು ಬೇಕಾದ ವಿಷಯಗಳೇ ಆಗಿರುತ್ತವೆ. ಹಾಗಾಗಿ ಮಕ್ಕಳಿಗೆ ಅವುಗಳಲ್ಲಿ ಆಸಕ್ತಿ ಕಳೆಯದಂತೆ, ಕಲಿಸುವವರ ದೌರ್ಬಲ್ಯದಿಂದ ಮತ್ತು ವೃತ್ತಿಪರತೆಯ ಕೊರತೆಯಿಂದ ಮಕ್ಕಳು ಆ ವಿಷಯಗಳಿಂದ ವಂಚಿತರಾಗರಂತೆ ನೋಡಿಕೊಳ್ಳುವ ಜವಾಬ್ದಾರಿ ಕುಟುಂಬದ್ದು, ಶಿಕ್ಷಣ ಸಂಸ್ಥೆಗಳದ್ದು ಮತ್ತು ಶಿಕ್ಷಣ ವ್ಯವಸ್ಥೆಯದ್ದು.

ಶಿಶುಪಾಲ

ಮಗುವಿನ ಲಾಲನೆ ಪಾಲನೆ ಮಕ್ಕಳಾಟವಲ್ಲ. ಅವರು ನೈಸರ್ಗಿಕವಾಗಿ ಪಶುವಿನಂತಿದ್ದು ಅವರನ್ನು ಮನುಷ್ಯನ ಸಾಮಾಜಿಕ ಜೀವನಕ್ಕೆ ಅಣಿ ಮಾಡುವ ಗುರುತರವಾದಂತಹ ಹೊಣೆಗಾರಿಕೆ ಹಿರಿಯರದು. ಅದರಲ್ಲೂ ಶಾರೀರಿಕ ಬೆಳವಣಿಗೆ, ಮಾನಸಿಕ ವಿಕಸನ, ಭಾವನಾತ್ಮಕ ಬೆಸುಗೆ, ಸಾಮಾಜಿಕ ಹೊಣೆಗಾರಿಕೆ, ನೈತಿಕ ಬದ್ಧತೆ, ಶೈಕ್ಷಣಿಕ ಪ್ರಗತಿ, ಬೌದ್ಧಿಕ ವಿಕಾಸ, ಜೀವನ ನಿರ್ವಹಣೆ; ಹೀಗೆ ಹಲವಾರು ಆಯಾಮಗಳಿಂದ ಮಗುವನ್ನು ಗಮನಿಸಿಕೊಂಡು ಸರ್ವತೋಮುಖ ಅಭಿವೃದ್ಧಿಗೆ ನಾವು ವಿವಿಧೋದ್ದೇಶ ಯೋಜನೆಗಳನ್ನೇ ಹಾಕಿಕೊಳ್ಳಬೇಕು.

ಸಾಮಾನ್ಯವಾಗಿ ಇವುಗಳಲ್ಲಿ ಯಾವುದೇ ಕೊರತೆಯಾದರೂ ಮಗುವು ವ್ಯಕ್ತಿಯಾಗಿ ರೂಪುಗೊಂಡಮೇಲೆ ಅಲ್ಪಮಟ್ಟಿಗಿನ ಎಡರುತೊಡರುಗಳನ್ನು ಎದುರಿಸುತ್ತದೆ. ಆಗ ಕುಟುಂಬವನ್ನು ದೂರುವುದು, ಶಿಕ್ಷಕರನ್ನು ಮತ್ತು ಶಿಕ್ಷಣ ಸಂಸ್ಥೆಗಳನ್ನು ದೂರುವುದು, ಮನೆಯವರು ತಮ್ಮ ಆರ್ಥಿಕತೆಯ ಅಥವಾ ಮತ್ತೇನೋ ಸಮಸ್ಯೆಯ ಕಾರಣಗಳನ್ನು ಹೇಳುವುದು. ನಮಗೆ ಆಗ ಅದು ಸರಿ ಇದ್ದಿದ್ದರೆ ಈಗ ನಾವು ಹೀಗೆ ಇರಬೇಕಿರಲಿಲ್ಲ ಎಂದು ವಯಸ್ಕರು ತಮ್ಮ ಮುಂದಿನ ಹೊಸ ಪೀಳಿಗೆಯ ಮುಂದೆ ಅವಲತ್ತುಕೊಳ್ಳುವುದು; ಹೀಗೆ ನಡೆಯುತ್ತಿರುತ್ತದೆ.

ಯಾವುದೇ ರಾಷ್ಟ್ರವಾಗಲಿ, ಸಮಾಜವಾಗಲಿ ಸಶಕ್ತವಾಗಿ ನಿರ್ಮಾಣವಾಗಬೇಕಾದಲ್ಲಿ ಆ ಹೊತ್ತಿನ ಸಮಸ್ಯೆಗಳಿಗೆ ಪರಿಹಾರ ಮತ್ತು ಅಗತ್ಯಗಳಿಗೆ ಸ್ಪಂದಿಸುವುದು ಎಷ್ಟು ಮುಖ್ಯವೋ, ಕನಿಷ್ಟಪಕ್ಷ ಮುಂದಿನ ಹದಿನೈದರಿಂದ ಇಪ್ಪತ್ತು ವರ್ಷಗಳಷ್ಟು ದೂರದೃಷ್ಟಿಯನ್ನು ಹೊಂದಿದ್ದು ಅದರ ಸಲುವಾಗಿ ದುಡಿಯಲು ಮತ್ತು ರಚನಾತ್ಮಕವಾಗಿ ತೊಡಗಲು ಪ್ರಸ್ತುತದಿನದಲ್ಲಿ ಕಾಲವನ್ನು ಮೀಸಲಿಡಬೇಕು. ಆಗ ಸಮಾಜವಾಗಲಿ, ದೇಶವಾಗಲಿ ಸಮರ್ಥವಾಗಿ ಮತ್ತು ಪ್ರಗತಿ ಹೊಂದಿರುವಂತಹ ಸ್ಥಿತಿಯನ್ನು ಕಾಣಲು ಸಾಧ್ಯ. ಆ ಹೊತ್ತಿನ ಊಟಕ್ಕೆ ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಹೇಳಿಕೊಡುವುದರಲ್ಲಿ ಮಗುವಿನ ಭವಿಷ್ಯದ ದೂರದೃಷ್ಟಿ ಇರುತ್ತದೆ.

ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಕುಟುಂಬ, ಸಾಮಾಜಿಕ ವ್ಯವಸ್ಥೆ ಮತ್ತು ಸರ್ಕಾರಗಳೆಲ್ಲವೂ ಒಟ್ಟಾಗಿ ದುಡಿದರೇನೇ ಈಗಿನ ಮತ್ತು ಮುಂದಿನ ಸಶಕ್ತ ಮತ್ತು ಸುಭದ್ರ ಬದುಕನ್ನು ವೈಯಕ್ತಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಹೊಂದಲು ಸಾಧ್ಯ. ಸಧ್ಯದ ಆಗುಹೋಗುಗಳಷ್ಟೇ ಜೀವಪರ ಮತ್ತು ಸಮಾಜಮುಖಿಗಳಾಗಿರುವವರ ಕಾಳಜಿಯಲ್ಲ. ಅವರು ಮಕ್ಕಳ ಸಮಗ್ರ ಪಾಲನೆ ಪೋಷಣೆ ಮಾಡುವ ಮೂಲಕ ತಮ್ಮಂತೆಯೇ ಮುಂದೆ ಬರುವವರ ಬದುಕಿಗೆ ಜೀವನ ಕ್ಷೇತ್ರವನ್ನು ಹಸನು ಮಾಡಿಟ್ಟಿರಬೇಕು.

(ಮುಂದುವರೆಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version