ಅಂತರಂಗ
ನುಡಿಯೊಳಗಿನ ಜೀವಸತ್ವ ಸಾರುತಿರುವ ಕನ್ನಡದ ಅನರ್ಘ್ಯ ರತ್ನ ಪ್ರೊ.ಬಾತಿ ಬಸವರಾಜ್
ಮಾತಿಗೂ ಮುನ್ನ….
ದಾವಣಗೆರೆ ಸಮೀಪದ ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರ ದೊಡ್ಡಬಾತಿಯ ಶ್ರೀಯುತ ಸಿದ್ದಲಿಂಗಪ್ಪ ಶ್ರೀಮತಿ ಸಾವಮ್ಮ ದಂಪತಿಗಳ ಸುಪುತ್ರರಾದ ಪ್ರೊ. ಬಾತಿ ಬಸವರಾಜ್ ಅವರು ಮಾತಾಡಲು ನಿಂತರೆ ಶುದ್ಧ, ಸ್ವಚ್ಛ, ಸುಂದರ, ಸುಲಲಿತವಾದ ಕನ್ನಡ ಪದಗಳು ಅವರ ನಾಲಿಗೆ ಮೇಲೆ ನರ್ತನ ಮಾಡುತ್ತವೆ.
ಅವರು ಬಳಸುವ ಕನ್ನಡ ಪದಗಳನ್ನು ಕೆಲವರಿಗೆ ಉಚ್ಛರಿಸುವುದೇ ಕಷ್ಟ. ಕನ್ನಡ ಭಾಷೆಯಲ್ಲಿ ಅವರಿಗಿರುವ ಪಾಂಡಿತ್ಯ ನಿಜಕ್ಕೂ ಯಾರಿಗಾದರೂ ಅಚ್ಚರಿ ಉಂಟು ಮಾಡುತ್ತದೆ. ಅಷ್ಟೇ ನಿರರ್ಗಳವಾಗಿ ಆಂಗ್ಲ ಭಾಷೆಯಲ್ಲೂ ಮಾತನಾಡಬಲ್ಲ ಪ್ರಾವಿಣ್ಯತೆ ಅವರಿಗೆ ಸಿದ್ಧಿಯಾಗಿದೆ.
ಗಾದೆ, ಒಗಟು, ಕಥೆ, ನುಡಿಗಟ್ಟು, ಒಡಪು ಇತ್ಯಾದಿ ಕನ್ನಡದ ಎಲ್ಲಾ ಪ್ರಕಾರಗಳನ್ನು ಅವರ ಬಾಯಿಯಿಂದಲೇ ಕೇಳಬೇಕು. ಕನ್ನಡ ನಾಡು ನುಡಿ, ಸಾಹಿತ್ಯದ ಬಗ್ಗೆ ಕೇವಲ ಡಾಂಭೀಕವಾಗಿ ಬಡಬಡಾಯಿಸುವ ಕನ್ನಡದ ವಿದ್ವನ್ಮಣಿಗಳನ್ನು ಹಿಡಿದು ಕರೆ ತಂದು ಒಮ್ಮೆ ಶ್ರೀಯುತರೊಂದಿಗೆ ಭೇಟಿ ಮಾಡಿಸಿ ಕೆಲವು ನಿಮಿಷ ಕಾಲವಾದರೂ ಕನ್ನಡದಲ್ಲಿ ಮಾತನಾಡಿಸಬೇಕೆನಿಸುತ್ತದೆ.
ಮನೆಯಲ್ಲಿ ಸದ್ಗøಹಸ್ಥರಾಗಿ, ಹೊಲ-ಗದ್ದೆಗಳಲ್ಲಿ ಅಪ್ಪಟ ಕೃಷಿಕರಾಗಿ, ಪಾಠದಲ್ಲಿ ಅಚ್ಛ ಕನ್ನಡದ ಮೇಷ್ಟ್ರಾಗಿ, ಹಿರಿ ಕಿರಿಯರೆನ್ನುವ ಭೇದವಿಲ್ಲದೆ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆವ ಸರಳ ಜೀವಿಯಾಗಿ ಅವರ ಬದುಕಿನ ವಿವಿಧ ಮಗ್ಗಲುಗಳೆಲ್ಲವೂ ಮಾದರಿ ವ್ಯಕ್ತಿತ್ವ ಕಟ್ಟಿಕೊಡುತ್ತವೆ.
ದೊಡ್ಡಬಾತಿ ಮತ್ತು ಹರಿಹರದಲ್ಲಿ ಪ್ರಥಮಿಕ ಶಿಕ್ಷಣ, ಕೊಪ್ಪದಲ್ಲಿ ಮಾಧ್ಯಮಿಕ, ಚಿಕ್ಕಮಗಳೂರಿನಲ್ಲಿ ಫ್ರೌಢ ಮತ್ತು ಪದವಿ ಪೂರ್ವ ಹಾಗೂ ದಾವಣಗೆರೆ ಡಿ.ಆರ್.ಎಂ.ಕಾಲೇಜ್‍ನಲ್ಲಿ ಪದವಿ, ಮೈಸೂರು ಮತ್ತು ಧಾರವಾಡದಲ್ಲಿ ಸ್ನಾತಕೊತ್ತರ ಪದವಿ ಪಡೆದ ಶ್ರೀಯುತರು ಸದಾ ಅಧ್ಯಯನಶೀಲರು. ಇವರ ಪಾಠ ಕೇಳುವ ಸೌಭಾಗ್ಯ ಪಡೆದ ದಾವಣಗೆರೆ ಮಾ.ಸ.ಬ.ಸಂಜೆ ಕಾಲೇಜು, ಎ.ವಿ.ಕೆ. ಮಹಿಳಾ ಕಾಲೇಜು, ಮಾ.ಸ.ಬ.ಕಾಲೇಜು, ಎ.ಆರ್.ಜಿ.ಕಾಲೇಜಿನ ವಿದ್ಯಾರ್ಥಿಗಳು ಧನ್ಯರು. ತಮ್ಮ ಸುದೀರ್ಘ ಉಪನ್ಯಾಸಕ ವೃತ್ತಿಯಿಂದ ವಿದ್ಯಾರ್ಥಿಗಳಿಗೆ ಕನ್ನಡದ ನೈಜ ಸೊಬಗು ಮತ್ತು ಸೊಗಡನ್ನು ಉಣಬಡಿಸಿದ ಶ್ರೀಯುತರ ಶಿಕ್ಷಕ ವೃತ್ತಿಯ ಪ್ರೇಮ ನಿವೃತ್ತಿಯ ನಂತರವೂ ನಿಂತಿಲ್ಲ. ಪ್ರಸ್ತುತ ದಾವಣಗೆರೆ ದವನ್ ಕಾಲೇಜು ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಾ. ಚಿದಾನಂದ ಮೂರ್ತಿಯವರ ನೇತೃತ್ವದಲ್ಲಿ ಹಂಪಿಯ ಉತ್ಖನನಕಾರ್ಯ, ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಕಾದಂಬರಿಯ ‘ಒಂದು ನೋಟ’ ಶೀರ್ಷಿಕೆಯಡಿ ಲೇಖನ ಮಂಡನೆ, ಬೆಂಗಳೂರು ಅಖಿಲ ಕರ್ನಾಟಕ ದೇವಾಂಗ ಪರಿಷತ್ತಿನ ದೇವಲ ದಾಸಿಮಯ್ಯ, ಕುವೆಂಪು ವಿಶ್ವವಿದ್ಯಾನಿಲಯದ 3ನೇ ಚತುರ್ಮಾಸದ ವಾಣಿಜ್ಯ ಕನ್ನಡ ಕೃತಿಯ ಸಂಪಾದನೆ ಇವರ ವಿದ್ವತ್ತಿಗೆ ಸಾಕ್ಷಿಯಾಗಿ ನಿಂತಿವೆ.
09.05.20011ರಲ್ಲಿ ಮಲೇಶಿಯಾದ ರಾಜಧಾನಿ ಕೌಲಾಲಂಪುರದ “ತೆಂಗ ವಿಶ್ವವಿದ್ಯಾನಿಲಯ” ಮತ್ತು ಇತರೆ ಪ್ರದೇಶಗಳ ಭೇಟಿ ನೀಡಿ ಕನ್ನಡದ ಕಂಪು ಹರಡಿ ಬಂದಿದ್ದಾರೆ. 26.08.2011ರಲ್ಲಿ ಉತ್ತರ ಅಮೆರಿಕದ ನ್ಯೂ ಹೆವನ್ ನಲ್ಲಿರುವ ‘ಯಲೆವಿಶ್ವವಿದ್ಯಾನಿಲಯ’ದಲ್ಲಿ ಒಂದು ಉಪನ್ಯಾಸ ನೀಡುವ ಮೂಲಕ ತಮ್ಮ ಪಾಂಡಿತ್ಯ ಮೆರೆದಿದ್ದಾರೆ.
ದೊಡ್ಡಬಾತಿಯಲ್ಲಿ 25.12.2013ರಂದು ನಡೆದ 5ನೇ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾಲ್ನಡಿಗೆಯಲ್ಲಿ ಕನ್ನಡಾಂಬೆಯ ತೇರು ಎಳೆದು, ತಮ್ಮ ವಿದ್ವತ್‍ಪೂರ್ಣ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ನಾಡು ನುಡಿ ಭಾಷೆ ಹಾಗೂ ಗ್ರಾಮೀಣ ಸೊಗಡನ್ನು ಮೆರೆದದ್ದು ಈಗ ಇತಿಹಾಸ.
ಮಾತಿಗಿಳಿದಾಗ
ಓದುಗರಿಗೆ ಅವರ ವ್ಯಕ್ತಿತ್ವ ಪರಿಚಯಿಸುವ ಜೊತೆ ಅವರ ಮಾತುಗಳನ್ನು ಸಹ ಕೇಳಿಸಬೇಕೆಂಬ ಸಲುವಾಗಿ ಅವರನ್ನು ಭೇಟಿಯಾಗಿ ಸಂದರ್ಶಿಸಿದಾಗ ಅವರಿಂದ ಹೊರಹೊಮ್ಮಿದ ಚಿಂತನಾತ್ಮಕ ನುಡಿ ಮುತ್ತುಗಳಿವು…………
ಕನ್ನಡ ಸಾಹಿತ್ಯದ ಆಸಕ್ತಿ
ಮೂಲತಃ ನಮ್ಮದು ಕೃಷಿಕ ಮನೆತನ. ಕೂಡು ಕುಟುಂಬ. ನಮ್ಮ ಅಜ್ಜ ಸ್ವಾತಂತ್ರ್ಯ ಹೋರಾಟಗಾರರು. ಹಾಗಾಗ್ಗೆ ಕಥೆ ಹೇಳುತ್ತಿದ್ದರು. ಈಸೋಪನ ಕಥೆ, ಪಂಚತಂತ್ರ ಸೇರಿದಂತೆ ಇತರೆ ನೀತಿ ಕಥೆಗಳನ್ನು ಸ್ವಾರಸ್ಯಕರವಾಗಿ, ರೋಚಕವಾಗಿ ಅವರು ಹೇಳುತ್ತಿದ್ದ ರೀತಿ, ಕನ್ನಡ ವರ್ಣಗಳನ್ನು ಶುದ್ಧವಾಗಿ ಉಚ್ಛರಿಸುತ್ತಾ, ಕನ್ನಡದಲಿ ್ಲಅದ್ಭುತವಾಗಿ ಮಾತನಾಡುತ್ತಿದ್ದ ನಮ್ಮ ಕನ್ನಡ ಮೇಷ್ಟ್ರು ಎ.ಕೆ.ಹಾಲಪ್ಪನವರು ಹಾಗೂ ರಾಷ್ಟ್ರಕವಿ ಕುವೆಂಪು ಅವರಿಂದ ಕೇಳಿದ ಪಾಠ ಕನ್ನಡದ ಸೌಂದರ್ಯದೆಡೆ ನನ್ನನ್ನು ಆಕರ್ಷಿಸುವಂತೆ ಮಾಡಿದವು.
ಕೃಷಿಯ ಮೌಢ್ಯ ತೊಲಗಬೇಕು
ಆಧುನಿಕತೆಯ ಭರಾಟೆಗೆ ಬಿದ್ದಿರುವ ನಮ್ಮ ಸಮಾಜದಲ್ಲಿ ಕೃಷಿಯ ಬಗ್ಗೆ ಹಲವಾರು ಮೌಢ್ಯಗಳಿವೆ. ಹೊಟ್ಟೆಗೆ ಹಿಟ್ಟು ಕೊಡುವ ಕೃಷಿಯನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿರುವುದರಿಂದಾಗಿ ಮಾನವ ಪ್ರಕೃತಿಯಿಂದಲೂ ದೂರವಾಗುತ್ತಿದ್ದಾನೆ. ಸಹಜವಾಗಿ ಪ್ರಕೃತಿಯಿಂದ ಸಿಗಬಹುದಾದ ಸುಖ ಶಾಂತಿಗಳಿಂದಲೂ ವಂಚಿತನಾಗುತ್ತಿದ್ದಾನೆ. ವಿದ್ಯಾವಂತರು ಕೃಷಿಗಿಳಿಯುವುದು ತಮ್ಮ ಸ್ಥಾನಮಾನಕ್ಕೆ ಧಕ್ಕೆ ಎಂಬ ಭಾವ ಬೇರೂರಿರುವುದರಿಂದಾಗಿ ನಮ್ಮ ದೇಶದ ಆರ್ಥಿಕ ಸಂಪತ್ತಿನ ಮೇಲೂ ಏರುಪೇರು ಉಂಟಾಗುತ್ತಿದೆ.
ಬುದ್ಧಿವಂತರು ಕೃಷಿಗಿಳಿಯಬೇಕು
ಬುದ್ಧಿವಂತರು ಎಲ್ಲ ಕೀಳರಿಮೆಯನ್ನು ಕಿತ್ತೊಗೆದು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡು, ತಮ್ಮ ಬುದ್ಧಿ, ಜ್ಞಾನವನ್ನು ಕೃಷಿ ಅಭಿವೃದ್ಧಿಗೆ ಬಳಕೆ ಮಾಡಿದಲ್ಲಿ ವೈಯಕ್ತಿಕ ಮತ್ತು ದೇಶದ ಆರ್ಥಿಕ ಸ್ಥಿತಿ ಎರಡರಲ್ಲೂ ಉನ್ನತಿ – ಪ್ರಗತಿ ಕಾಣಬಹುದು.
ಅಮೆರಿಕಾದಲ್ಲಿ ಬುದ್ಧಿವಂತರೆಲ್ಲಾ ಕೃಷಿಗೆ ಮೊದಲ ಆದ್ಯತೆ ನೀಡುತ್ತಾರೆ. ಹಾಗಾಗಿಯೇ ಆ ದೇಶ ಶ್ರೀಮಂತವಾಗುತ್ತಲೇ ಹೋಗುತ್ತಿದೆ. ಆದರೆ ನಮ್ಮ ದೇಶದಲ್ಲಿ ತದ್ವಿರುದ್ಧದ ವಾತಾವರಣ ಇದೆ. ಹಾಗಾಗಿ ನಾವಿನ್ನೂ ಅಭಿವೃದ್ಧಿ ಪಥದಲ್ಲಿಯೇ ಸಾಗುತ್ತಿದ್ದೇವೆ.
ಹಳ್ಳಿಯ ಮಣ್ಣಿಗೆ ಜೀವ ಸತ್ವವಿದೆ
ನಗರಗಳು ಕಟ್ಟಲ್ಪಟ್ಟಿರುವಂತವು. ಆದರೆ ಹಳ್ಳಿಗಳು ಬೆಳೆದು ಬಂದತಹವು. ಹಳ್ಳಿಯ ಮಣ್ಣಿನ ವಾಸನೆ, ಪರಿಸರ, ವಾತಾವರಣ ಎಲ್ಲದಕ್ಕೂ ವಿಶೇಷ ಸತ್ವವಿದೆ, ಅದಮ್ಯ ಚೈತನ್ಯವಿದೆ. ಹಳ್ಳಿಗರ ಬದುಕಿನ “ಕೂಡಿಉಣ್ಣುವ” ಸಂಸ್ಕøತಿಯ ಹಿಂದೆ ಒಗ್ಗಟ್ಟಿನ ಬಲವಿದೆ, ಹೊಂದಾಣಿಕೆ ಬಾಂಧವ್ಯಗಳ ಬೆಸುಗೆ ಇದೆ. ಸಂಬಂಧಗಳ ಗಟ್ಟಿತನವನ್ನು ನಾವು ಹಳ್ಳಿಗಳಲ್ಲಿ ಮಾತ್ರ ಕಾಣಬಹುದು. ನಿಜವಾದ ಮಾನವೀಯ ಮೌಲ್ಯ ಭಾಷಣಗಳ ಸರಕಿನಲ್ಲಿ ಇಲ್ಲ, ಹಳ್ಳಿಗರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಸರಳತೆ ಇದ್ದಷ್ಟು ಸಾತ್ವಿಕತೆ ಹೆಚ್ಚು. ಸರಳ ಜೀವನ ಉದಾತ್ತ ಚಿಂತನೆಗೆ ನಮ್ಮ ಮನಸ್ಸು ತೆರೆದಾಗ ಬದುಕಿನ ಸಾರ್ಥಕತೆ ಆರಂಭವಾಗುತ್ತದೆ.
ಬೆಳಗ್ಗೆ ಎದ್ದು ಅಂಗಳ ಕಸ ಹೊಡೆದು ಸಗಣಿ ಎತ್ತಿ ಹಾಕಿ, ದನ-ಕರು, ಕುರಿ-ಮರಿಗಳ ಮೈದಡವುವ ಹಳ್ಳಿಗರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಗೋವುಗಳ ಮೂತ್ರ, ಆ ಸಗಣಿಯ ಗಂಜಲಲ್ಲಿ, ಹೊಲ ಗದ್ದೆಗಳ ಆ ಬಯಲಲ್ಲಿ ಸಿಗುವ ಸಾತ್ವಿಕತೆ, ಶಕ್ತಿ, ಆನಂದ ಮತ್ತ್ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಅಲ್ಲಿನ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಕ್ಕ, ಅಣ್ಣ, ತಂಗಿಯರೆಂಬ ಆ ಗಟ್ಟಿ ಸಂಬಂಧಗಳ ಸೆಲೆಯು ನೀಡುವ ಸಾಂತ್ವನ, ಬಿದ್ದಾಗ ನಮ್ಮನ್ನೆತ್ತಿ ಹಿಡಿವ ಆ ಕೈಗಳ ಕೋಮಲತೆ, ಹೃದಯದ ಆಪ್ತತೆ ಆಧುನಿಕ ಯಂತ್ರಗಳಿಂದ ಸಿಗಲು ಸಾಧ್ಯವೇ ? ವಲಸೆ ಹೋಗಲು ಹವಣಿಸುವ ನಮ್ಮ ವಿದ್ಯಾವಂತರು ಮತ್ತು ಯುವ ಪೀಳಿಗೆಗೆ ಈ ಮಣ್ಣಿನ ಗುಣದ ಪರಿಚಯ ಮಾಡಿಕೊಡಬೇಕಿದೆ.
ಆಳಾಗಿ ದುಡಿದು ಅರಸನಾಗಿ ಉಣ್ಣಬೇಕು
ಹಳ್ಳಿಗರ ಮೂಲ ಕಸುಬಾದ ಕೃಷಿ ಇಂದು ಕೆಲವೆಡೆ ಹಳ್ಳಿಗರಿಂದಲೇ ತಾತ್ಸರಕ್ಕೆ ಒಳಗಾಗುತ್ತಿರುವುದು ನೋವಿನ ಸಂಗತಿ. ಹಳ್ಳಿಯ ಆ ಸತ್ವಯುತ ಸ್ವಾವಲಂಬಿ ಬದುಕಿನಿಂದ ವಿಮುಖನಾಗುವುದು ಖಂಡಿತ ಖೇದಕರ. ಹಾಳಾಗಿ ದುಡಿದು ಅರಸನಾಗಿ ಉಣ್ಣು ಎಂಬ ನಮ್ಮ ಜನಪದೀಯರ ಅನುಭವ ವಾಣಿಯ ಹಿಂದೆ ವಿಜ್ಞಾನದ ಜೊತೆ ಶ್ರಮದ ಸಂದೇಶ ಮತ್ತು ಕಾಯಕತತ್ವವೂ ಅಡಗಿದೆ. ಅತ್ಯಂತ ಶ್ರೇಷ್ಠ ವ್ಯಕ್ತಿಗಳು ಉದಯಿಸಿದ್ದು ಹಳ್ಳಿಯ ಸತ್ವಭರಿತ ಮಣ್ಣಿನಲ್ಲೇ.
ನಮ್ಮ ಯುವ ಪೀಳಿಗೆ ಗ್ರಾಮೀಣ ಜನತೆಯ ಆ ಶ್ರಮಿಕ ಬದುಕಿನ ತುಡಿತವನ್ನು, ಅದರ ಹಿಂದಿನ ಸಾರವನ್ನು ಖುದ್ದಾಗಿ ಕಂಡು ಅರಿಯುವ ಮನಸ್ಸು ಮಾಡಬೇಕಿದೆ. ಚಿಕ್ಕ ಮಾತಿಗೇ ದೊಡ್ಡ ಮುನಿಸಿಗೊಳಗಾಗಿ ಡೈವರ್ಸ್ ಹಂತ ತಲುಪುವ ಚಿಕ್ಕ-ಚಿಕ್ಕ ಕುಟುಂಬಗಳು ಗ್ರಾಮೀಣ ಜನತೆಯ ದೊಡ್ಡ-ದೊಡ್ಡ ಕುಟುಂಬಗಳಲ್ಲಿನ ಹೊಂದಾಣಿಕೆಯ ಬದುಕಿನ ಒಳ ಹೊರವುಗಳನ್ನು ತಿಳಿಯಬೇಕಿದೆ.
ಹಾರ್ಡ್ ಆಗುತ್ತಿರುವ ಸಾಫ್ಟ್‍ವೇರ್ ಮನಸ್ಸುಗಳು
ಒಂದೆಡೆ ಕಂಪ್ಯೂಟರ್, ಹಾರ್ಡ್‍ವೇರ್, ಸಾಫ್ಟ್‍ವೇರ್‍ಗಳ ಅತಿಜಾಣತನದ ನಾಗಲೋಟವು ಮನಸ್ಸುಗಳನ್ನು ಹಾರ್ಡ್ ಮಾಡಿ ಜೀವನವನ್ನು ಕಂದಕಕ್ಕೆ ನೂಕುತ್ತಿದೆ. ಹೀಗಾದರೆ ಕಲಿತ ವಿದ್ಯೆಯ ಫಲಿತವಾದರೂ ಏನು ? ವಿದ್ಯೆ, ಬುದ್ಧಿ, ಕಲಿಕೆಗಳು ನಮ್ಮ ಬದುಕನ್ನು ಕಟ್ಟಿಕೊಡದಿದ್ದರೆ ಅಂತಹ ವಿದ್ಯೆಗೆ ಸಾರ್ಥಕತೆ ದೊರೆಯುವುದೇ ? ವಿಪರೀತ ಬುದ್ಧಿ ವಿನಾಶಕ್ಕೆ ದಾರಿ ಎಂಬಂತಾಗುತ್ತದೆ ಅಷ್ಟೆ.
ವಾಸ್ತವತೆಯನ್ನು ಮರೆತರೆ ಬದುಕು ಬಲಹೀನವಾಗುತ್ತದೆ. ಮಾನವೀಯ ಸಂಬಂಧಗಳು ದಡ ಸೇರದ ದೋಣಿಗಳಾಗುತ್ತವೆ. ಆಧುನಿಕತೆಯ ಜ್ಞಾನ, ತೀವ್ರ ಬೆಳವಣಿಗೆಗಳು, ಹೊಸ ಹೊಸ ಆವಿಷ್ಕಾರಗಳು ನಮ್ಮ ಹಳೆಯ ಪರಂಪರೆಯನ್ನು ಮರೆಸಿ ನಮ್ಮನ್ನು ಜೀವಂತ ಶವವನ್ನಾಗಿಸಬಾರದು. ಆ ವಿಶೇಷ ಕೌಶಲ್ಯಗಳ ಬಳಕೆ ನಮ್ಮ ಬದುಕಿನ ಮೇಲ್ಪಂಕ್ತಿಗೆ ಸೇತುವೆಗಳಾಗಬೇಕು.
ಕನ್ನಡ ಎಂದಿಗೂ ನಾಶವಾಗದು
ಕನ್ನಡ ನಶಿಸುತ್ತಿದೆ ಎಂಬುದು ಶುದ್ಧ ಸುಳ್ಳು. ಎಲ್ಲಿಯವರೆಗೂ ಶುದ್ಧ ಕನ್ನಡ ಉಚ್ಛರಿಸುವ ಗ್ರಾಮೀಣ ಭಾಗದ ಜನತೆ ಇರುತ್ತಾರೋ ಅಲ್ಲಿವರೆಗೂ ಕನ್ನಡದ ಅವನತಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಭಾಷೆಯ ಶುದ್ಧತೆ, ಸರಳತೆ ಮತ್ತು ನೈಜಸೌಂದರ್ಯ ಕಾಣಬರುವುದು ಹಳ್ಳಗಳಲ್ಲೇ. ಜಾನಪದೀಯರ ಬದುಕಿನ ಸೊಗಡು ಜೀವಂತ ಇರುವವರೆಗೂ ಕನ್ನಡ ನಶಿಸಲು ಸಾಧ್ಯವಿಲ್ಲ. ಕನ್ನಡಕ್ಕೆ ಅಂತಹ ಗಟ್ಟಿತನ, ಪುರಾತನತೆ ಮತ್ತು ಸನಾತನತೆ ಇದೆ.
ಕನ್ನಡ ಮಣ್ಣಿನ ವೈಭವವನ್ನು ಸಾರುವ ಕೆಲಸವಾಗಬೇಕಿದೆ. ಅದರ ಅಂತರ್ಸತ್ವವನ್ನು ಅರಿಯದಿದ್ದರೆ ಕನ್ನಡ ಉಳಿಸಬೇಕೆನ್ನುವ ಡಾಂಭಿಕ ಹೋರಾಟಗಳ ಅಗತ್ಯ ಬೀಳುತ್ತದೆ. ಯಾರೂ ಕನ್ನಡವನ್ನು ಉಳಿಸಿ ಬೆಳಸಬೇಕಿಲ್ಲ. ಅದು ಈಗಾಗಲೇ ಬೆಳೆದು ಹೆಮ್ಮರವಾಗಿದೆ. ಅದರ ನೆರಳಲ್ಲಿ ನಾವು ಬದುಕುವುದನ್ನು ಕಲಿಯಬೇಕಿದೆ ಅಷ್ಟೆ. ಹೇಳುವವರು ಸರಿಯಾಗಿ ಹೇಳಬೇಕಾದನ್ನು ಹೇಳಿದರೆ ಕೇಳುವವರು ಕೇಳುವುದನ್ನು ಸರಿಯಾಗಿ ಕೇಳಿಯೇ ಕೇಳುತ್ತಾರೆ.
ನಮ್ಮ ಜನಪದೀಯರ ಬದುಕಿನ ಮೌಲ್ಯಗಳು, ದೇವರನ್ನೂ ಕೂಡ ಜೊತೆಗೆ ಕರೆದುಕೊಂಡು ಊಟ ಮಾಡುವ ಅವರ ಸರಳತನ ಮತ್ತು ಮುಗ್ಧತೆ, ವಚನ ಸಾಹಿತ್ಯದ ವೈಭವ ಇಂತಹ ಹತ್ತಾರು ದೃಷ್ಟಿಕೋನಗಳಲ್ಲಿ ಕನ್ನಡದ ಹಿರಿಮೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಸಾಗಬೇಕಿದೆ.
ಯುವಕರೇ ಸಾತ್ವಿಕರಾಗಿ
ನಾನು ನಮ್ಮ ಯುವ ಪೀಳಿಗೆಗೆ ಮಾಡುವ ಮನವಿ ಇಷ್ಟೆ _ ದಯಮಾಡಿ ಯುವಕರೇ, ಸಾತ್ವಿಕರಾಗಿ, ಸಾತ್ವಿಕ ಚಿಂತನೆ ಮಾಡಿ, ಸಾತ್ವಿಕವಾದ ಊಟ ಮಾಡಿ, ಸಾತ್ವಿಕವಾದ ನಿದ್ದೆ ಮಾಡಿ. ನಿಮ್ಮಿಂದಲೇ ದೇಶ, ನೀವೇ ದೇಶ. ದೇಶ ಉಳಿದರೆ ನಾವು ಉಳಿದೇವು. ಈ ಮಣ್ಣಿನ ಸಾತ್ವಿಕತೆ ಅರಿಯುವ ಮನಸ್ಸು ಮಾಡಿ. ಮನಸ್ಸಿನ ಒಳಗೆ ಕುಣಿಯುವ ರಿಂಗಣವನ್ನು ಹದಗೊಳಿಸಿ ಮುದಗೊಳಿಸಿ ಭವ್ಯ ಭವಿಷ್ಯದ ನಿರ್ಮಾತೃಗಳಾಗಿ ಭವ್ಯ ಭಾರತದ ಶಿಲ್ಪಿಗಳಾಗಿರಿ. ಹಸಿ ಹಸಿಯಾದ ಹೇಸಿಗೆಯ ಆಸೆಗಳ ಹಿಂದೆ ಬೆನ್ನತ್ತಿದರೆ ಬದುಕು ಬರಡಾಗುತ್ತದೆ ಎಂಬ ಅರಿವೊಂದು ಮನದಲ್ಲಿರಲಿ.