ಬಹಿರಂಗ
ಅವಳು ಲುಬೈನಾ
- ಯೋಗೇಶ್ ಮಾಸ್ಟರ್
ಹಿಜಾಬು ಅವಳ ಸೌಂದರ್ಯವನ್ನು ಅವಿಸಿಟ್ಟಿರಲಿಲ್ಲ. ಬದಲಾಗಿ ಚೊಕ್ಕವಾಗಿ ಅಚ್ಚುಕಟ್ಟಾಗಿಸಿಟ್ಟಿತ್ತು. ಬಟ್ಟೆಯ ತೆರೆಯೊಡ್ಡುತ್ತಿದ್ದ ಕುತೂಹಲದ ಅಡಗುಕಟ್ಟೆಯ ಹಿಂದಿನಿಂದ ಅವಳ ಕಣ್ಣುಗಳೇ ನಗುತ್ತಿದ್ದವು. ಗೆಳತಿ ಮತ್ತು ಸಹಧರ್ಮೀಯಳಾಗಿದ್ದ ಆಸ್ಮಾ ಜೊತೆಗೇನೇ ಬರುತ್ತಿದ್ದದ್ದು, ಹೋಗುತ್ತಿದ್ದದ್ದು.
“ಯೋಗಿ” ಅಂತ ಅವಳು ಕರೆದಾಗೆಲ್ಲಾ ಅದು ಹೋಗಿ ಅಂತಾನೇ ಕೇಳಿಸುತ್ತಿದ್ದದ್ದು. ಅದನ್ನು ಅವಳಿಗೆ ಹೇಳಿದೆ ಒಮ್ಮೆ. “ಹೇ, ನಾನು ಸರಿಯಾಗೇ ಕರೆಯುತ್ತೇನಲ್ಲಾ?” ಎಂದು ಆಸ್ಮಾಳ ಕಡೆಗೆ ನೋಡಿ ಕೇಳಿ ಮತ್ತೆ ನನ್ನ ಕಡೆ ತಿರುಗಿ, “ಯೋಗಿ” ಎಂದಳು.
ನನಗೆ ‘ಹೋಗಿ’ ಎಂದೇ ಕೇಳಿಸಿತು. ಆಸ್ಮಾ ಸರಿಯಾಗಿ ಹೇಳಿದಳು “ಅವನಿಗೆ ಹಾಗೆ ಕೇಳಿಸಿರತ್ತೆ.” ಹಾಗೆ ನೋಡಲು ಹೋದರೆ ಆಸ್ಮಾ ಇಡೀ ತರಗತಿಯಲ್ಲಿ ಜೋರು ಜೋರಾಗಿ ಮಾತಾಡಿಕೊಂಡು, ನಗಾಡಿಕೊಂಡು ಇರುವವಳು. ಲುಬೈನಾ ಹಿಂಜರಿಕೆ ಮತ್ತು ಮುಚ್ಚುಮರೆ ಇಲ್ಲದೆ ಮಾತಾಡುವವಳಾದರೂ ಅಗತ್ಯವಿದ್ದರೆ ಮಾತ್ರ ಮುಂದಾಗುವವಳು. ಈ ಆಸ್ಮಾ ಇದ್ದಾಳಲ್ಲಾ, ಒಂದು ತರ ರೌಡಿ. ಮನೆಯಿಂದ ಬುರುಕಾ ಹಾಕಿಕೊಂಡು ಬರುತ್ತಾಳೆ.
ಕ್ಯಾಂಪಸ್ಸಿಗೆ ಬಂದ ಮೇಲೆ ಬುರುಕಾ ಬಿಚ್ಚಿಟ್ಟು, ತಲೆಗವಸು ಹಾಕಿಕೊಂಡು ಇಡೀ ದಿನ ಇರುತ್ತಾಳೆ. ಮನೆಗೆ ಹೋಗುವಾಗ ಮತ್ತೆ ಬುರುಕಾ ಹಾಕಿಕೊಂಡು ಮರಳುತ್ತಾಳೆ. ಇಬ್ಬರೂ ಎಲ್ಲರ ಜೊತೆಗೂ ಎಲ್ಲರಂತೆಯೇ ಮಾತಾಡುತ್ತಿದ್ದರು, ಊಟ ಹಂಚಿಕೊಳ್ಳುತ್ತಿದ್ದರು. ಸುಮಂಗಲಿ ಮನೆಯ ಚಿತ್ರಾನ್ನ, ಪಲ್ಲವಿ ಮನೆಯ ಪುಳಿಯೋಗರೆ, ಪರಿಮಳ ಮನೆಯ ತಂಬುಳಿ, ಗಿರೀಶ್ ಮನೆಯ ಚಪಾತಿ ಪಲ್ಯ, ನಮ್ಮ ಮನೆಯ ಇಡ್ಲಿ ಸಾಂಬಾರ್ ಅಂದರೆ ಇಬ್ಬರೂ ಖುಷಿಖುಷಿಯಾಗಿ ತಿನ್ನುತ್ತಿದ್ದರು.
ಅದರಲ್ಲೂ ಪುಳಿಯೋಗರೆ ಮತ್ತು ಮಜ್ಜಿಗೆ ಹುಳಿ ಎಂದರೆ ಇವರಿಬ್ಬರೂ ಲೊಟ್ಟೆ ಹಾಕಿಕೊಂಡು ತಿನ್ನುತ್ತಿದ್ದರು. ತರುವವರು ಕೂಡಾ ಇವರಿಗೆಂದೇ ಹೆಚ್ಚಾಗಿ ತರುತ್ತಿದ್ದರು. ಇವರೂ ಕೂಡಾ ವಿಶೇಷವಾಗಿ ಬಿರಿಯಾನಿ, ಪಾಯಸ ಮಾಡಿದಾಗ ನಮಗೆಲ್ಲರಿಗೆಂದು ದೊಡ್ಡ ಕ್ಯಾರಿಯರ್ ಬಾಕ್ಸುಗಳಲ್ಲೇ ತಂದುಬಿಡುತ್ತಿದ್ದರು. ಮಾಂಸಾಹಾರ ಮತ್ತು ಸಸ್ಯಾಹಾರದ ಊಟಗಳೆರಡೂ ಬಂದಾಗಲೂ ಊಟಕ್ಕೆ ಕುಳಿತುಕೊಳ್ಳುವ ವರ್ತುಲ ಮಾತ್ರ ಒಂದೇ ಇರುತ್ತಿತ್ತು. ಆದರೆ ಡಬ್ಬ ಮಾತ್ರ ಕೆಲವರನ್ನು ಹಾದು ಹೋಗುತ್ತಿತ್ತು ಅಷ್ಟೇ.
ಲುಬೈನಾ ಮತ್ತು ಆಸ್ಮಾ ಇಬ್ಬರೂ ಹುಡುಗಿಯರ ಜೊತೆಯಲ್ಲೇ ಅವರವರು ಇದ್ದಾಗ, ತಲೆಗವಸನ್ನು ತೆಗೆದು, ಕೂದಲನ್ನು ಬಾಚಿಕೊಂಡು, ನೀಟಾಗಿ ಪಿನ್ ಹಾಕಿಕೊಂಡು ಮತ್ತೆ ತಲೆಗೆ ಬಟ್ಟೆಯನ್ನು ಸರಿಯಾಗಿ ಹಾಕಿಕೊಳ್ಳುತ್ತಿದ್ದರು.
ಲುಬೈನಾ ಮತ್ತು ಆಸ್ಮಾಳ ತಂದೆ, ತಾಯಿಗಳೋ, ಅಣ್ಣಂದಿರೋ ಬಂದಾಗ ಹುಡುಗಿಯರೆಲ್ಲಾ ಗುಂಪುಗಟ್ಟಿ ಮಾತಾಡಿಸುತ್ತಿದ್ದರು. ಅವರೂ ಬಲೇ ನಗುಮುಖದಿಂದ ಎಲ್ಲರನ್ನೂ ಮಾತಾಡಿಸಿ, ಚೆನ್ನಾಗಿ ಓದಿ ಅಂತ ಹೇಳಿ ಹೋಗುತ್ತಿದ್ದರು.
ಅದರಲ್ಲೂ ಲುಬೈನಾಳ ತಂದೆಯಂತೂ; ಮುಖವೋ ಪೂರ್ಣ ಚಂದಿರ, ನಗುವೋ ಬೆಳದಿಂಗಳು, ಇನ್ನು ಮಾತಂತೂ ತಿಂಗಳ ತಂಪು. ಅವರು ನಿದ್ರಿಸುವಾಗಲೂ ಮುಗುಳುನಗುವಿನ ಮುಖದಲ್ಲೇ ಇರುತ್ತಾರೆ ಎಂಬುದು ನನ್ನ ಖಚಿತ ಅನಿಸಿಕೆ.
ಅದೊಂದು ದಿನ ಹುಡುಗಿಯರ ಗುಂಪಿನಲ್ಲಿ ಮಾತಾಡುವಾಗ ಲುಬೈನಾಳ ತಾಯಿ ಲೋಕಾಭಿರಾಮವಾಗಿ ಮಾತಾಡುತ್ತಾ “ನಮ್ಮ ಲುಬೈನಾ ನೋಡಲು ಡಿಟ್ಟೋ ಅವಳ ತಂದೆಯ ಹಾಗೆ, ಬುದ್ಧಿ ಮತ್ತು ಆಡುವುದೆಲ್ಲಾ ನನ್ನ ಹಾಗೆ” ಎನ್ನುತ್ತಿದ್ದರು.
ಆಹಾ, ಎಂಥಾ ಒಳ್ಳೆಯ ಸಂಯೋಜನೆ ಎನಿಸಿ, “ಆಂಟೀ, ಒಳ್ಳೆಯ ಕಾಂಬಿನೇಶನ್” ಎಂದುಬಿಟ್ಟೆ. ಅವರೋ, ಪಾಪ ಏನೂ ಹೇಳಲು ತೋಚದೇ “ಆಹಾ?” ಎಂದಷ್ಟೇ ಅಂದರು. ಅವರಿಗೆ ಮುಜುಗರವಾಯಿತೋ ಏನೋ ಎಂದು ನನಗೆ ಮುಜುಗರವಾಗತೊಡಗಿತು.
ಮರುದಿನ ಲುಬೈನಾಗೆ ಕೇಳಿದೆ.
“ನಿಮ್ಮ ಅಮ್ಮ ಏನಾದರೂ ಬೇಜಾರು ಮಾಡಿಕೊಂಡರಾ?”
“ಯಾಕೆ?”
“ನಾನು ನಿನ್ನೆ ಹಾಗೆಂದಿದ್ದಕ್ಕೆ.”
“ಇಲ್ಲ. ಅದು ಅವರ ಕಿವಿಗೆ ಸರಿಯಾಗಿ ಹೋಗಿರೋದೇ ಇಲ್ಲ” ಎಂದು ನಕ್ಕ ಲುಬೈನಾ ಆರಾಮವಾಗಿದ್ದದ್ದು ನೋಡಿ ಸಮಾಧಾನವಾಯಿತು. ಅಂದಿನಿಂದ ಅವಳ ಕಂಡಷ್ಟು ಮುಖವನ್ನು ನೋಡುವಾಗೆಲ್ಲಾ ಅವಳ ತಂದೆಯ ಕಾಣುವಷ್ಟು ಮುಖವು ನೆನಪಿಗೆ ಬರುತ್ತಿತ್ತು. ಮೀಸೆ, ಗಡ್ಡ ಅಳಿಸುತ್ತಿದ್ದೆ. ಆ ಬಿಳಿಯಾದ ಪುಡಿಗೂದಲಿನ ತಲೆಯ ಮೇಲೆ ಉದ್ದನೆಯ ಕಪ್ಪು ಕೇಶರಾಶಿಯನ್ನು ಕಲ್ಪಿಸಿಕೊಳ್ಳುತ್ತಿದ್ದೆ.
“ಅದೇನು ಹಾಗೆ ನೋಡ್ತಿದ್ದೀಯಾ?” ಎಂದು ಕೇಳಿದಳು ಲುಬೈನಾ.
“ನಿಮ್ಮಪ್ಪನ ಮುಖವನ್ನು ಜ್ಞಾಪಿಸಿಕೊಳ್ತಿದ್ದೀನಿ” ಎಂದೆ.
ಅವಳು ನಕ್ಕು, “ನಿನ್ನ ತಲೆ” ಎಂದಳಷ್ಟೇ.
ಇಂಗ್ಲೀಷ್ ಬರದಿದ್ದ ನನಗೆ ಇತರ ಹುಡುಗಿಯರಲ್ಲಾ ಅವರವರ ಪಾಠವನ್ನು ಹೇಳಿಕೊಡುತ್ತಿದ್ದರು. ಆದರೆ ಲುಬೈನಾ ಮಾತ್ರ “ಇಂಗ್ಲೀಷ್ ಕಲಿ ಯೋಗಿ. ತುಂಬಾ ಇಂಪಾರ್ಟೆಂಟ್. ನೀನು ಮೊದಲು ಪಾರ್ಟ್ಸ್ ಆಫ್ ದ ಸ್ಪೀಚ್ ಕಲಿ. ಆಮೇಲೆ ಟೆನ್ಸ್ ಕಲಿ.
ಇಷ್ಟಾದರೆ ಟೆನ್ಶನ್ ಬೇಡ. ಇಂಗ್ಲೀಷ್ ಕಲಿತೆ ಎಂದೇ ಅರ್ಥ” ಎಂದವಳು ನನಗೆ, ಗಿರೀಶನಿಗೆ ಮತ್ತು ಕನ್ನಡ ಮೀಡಿಯಂನಿಂದ ಬಂದಿರುವ ಇತರ ಹುಡುಗ ಹುಡುಗಿಯರಿಗೆ ತಾನೇ ಮುಂದಾಗಿ ಇಂಗ್ಲೀಷ್ ಗ್ರಾಮರ್ ಕಲಿಸಲು ದಿನದ ಅರ್ಧ ಅಥವಾ ಮುಕ್ಕಾಲು ಗಂಟೆಯನ್ನು ಮೀಸಲಿಡುತ್ತಿದ್ದಳು.
ಅಂದೊಮ್ಮೆ, ನನ್ನ ಕಸಿನ್ ಒಬ್ಬ ತಾನು ಪ್ರೀತಿಸುವ ಹುಡುಗಿಯ ಬಗ್ಗೆ ಕಸಿನ್ಗಳ ಅಸೋಸಿಯೇಶನ್ನಿನಲ್ಲಿ ಹೇಳಿಕೊಳ್ಳುತ್ತಿದ್ದ. ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರಂತೆ, ಅವಳ ಮನೆಯವರಿಗೆ ಗೊತ್ತಾಯಿತಂತೆ, ಅವಳ ಅಣ್ಣ ಬಂದು ಅವಾಜ್ ಹಾಕಿ ಹೋದನಂತೆ. ಇವನು ಮತ್ತು ಅವಳು ಬೇಜಾರು ಮಾಡ್ಕೊಂಡರಂತೆ; ಹೀಗೇ ಸಾಗಿತ್ತು ಅವರು ಕಟ್ಟಿಕೊಡುತ್ತಿದ್ದ ಚಿತ್ರಣ.
“ಯೋಗಿ, ನಿನ್ನ ಲವ್ ಯಾರೋ?” ಗುಂಪಿನಿಂದ ಪ್ರಶ್ನೆಯೊಂದು ಬಂದಿತು.
ಹಾಗೆಂದ ಕೂಡಲೇ ಲುಬೈನಾ ಮುಖ ಕಣ್ಮುಂದೆ ಬಂದಿತು.
“ಯಾರೂ ಇಲ್ಲ” ಎಂದು ನಕ್ಕೆ.
“ತಿಕಾ ಮುಚ್ಚು. ಯಾರೋ ಇರ್ಬೇಕು. ಅದಕ್ಕೇ ಕಿಸಿತಾಯಿದ್ದೀಯ” ಎಂದ ನನ್ನ ಕಸಿನ್.
“ಇಲ್ಲ. ಯಾರೂ ಇಲ್ಲ. ಎಲ್ಲರೂ ನನ್ನ ಫ್ರೆಂಡ್ಸ್ ಅಷ್ಟೇ. ಎಲ್ಲರ ಜೊತೆಗೂ ನಾನು ಚೆನ್ನಾಗಿದ್ದೀನಿ” ಎನ್ನುತ್ತಿದ್ದರೂ ಕಣ್ಮುಂದೆ ಬರುತ್ತಿದ್ದ ಲುಬೈನಾ ಮುಖ ನನ್ನ ಮುಖವನ್ನು ಅರಳಿಸಿತ್ತು ಮತ್ತು ನಗುವನ್ನು ಸೂಸಿತ್ತು.
“ಮತ್ತೆ ಯಾಕೆ ಒಂದು ಥರಾ ಫಿಲಾಸಫರ್ ಸ್ಮೈಲ್ ಕೊಡ್ತಿದ್ದೀಯಾ?” ಅಂತ ಒಬ್ಬ ಕಸಿನ್ ಹೇಳಿದರೆ, ಮತ್ತೊಬ್ಬ ಕಸಿನ್ ಹೇಳಿದಳು.
“ಅದು ಫಿಲಾಸಫರ್ ಸ್ಮೈಲ್ ಅಲ್ವೋ. ಒನ್ ವೇ ಲವ್ವರ್ ಸ್ಮೈಲ್. ಅವನು ಇನ್ನೂ ಪ್ರೊಪೋಸ್ ಮಾಡಿಲ್ಲಾಂತ ಕಾಣತ್ತೆ. ಅದೇನಾರ ಸಕ್ಸಸ್ ಆದರೆ ಹೇಳ್ತಾನೆ. ಹೇಳಲೇ ಬೇಕು. ನಾವಲ್ಲದೇ ಇನ್ಯಾರು ದಿಕ್ಕು.”
ನನಗೂ ಅವಳು ಹೇಳುತ್ತಿರುವುದು ಸರಿ ಎನ್ನಿಸಿತು.
ಅಂದಾದ ಮೇಲೆ ಕ್ಲಾಸಿನಲ್ಲಿ ಪಾಠ ಮಾಡುವಾಗ ತನ್ನ ಪಾಡಿಗೆ ತಾನು ಪಾಠದ ಕಡೆಗೆ ಚಿತ್ತ ನೆಟ್ಟಿರುತ್ತಿದ್ದ ಲುಬೈನಾ ಕಡೆಗೆ ಆಗಾಗ ನೋಡುತ್ತಿದ್ದೆ. “ಇದೆಂತದೋ ಲವ್ವು… ಮಾಡಲೀ ಬಿಡಲಿ, ಅವರೊಂದಿಗೆ ಹೇಳಲಿ ಬಿಡಲಿ, ಅವರಿಗೆ ತಿಳಿಯಲಿ ಬಿಡಲಿ. ನಾವು ಮಾಡುತ್ತಿದ್ದೇವೆಂದು ಭಾವಿಸಿದರೇನೇ ಅದೆಷ್ಟು ಮಧುರವಾಗಿರುತ್ತದೆ. ನಾನು ಪ್ರೀತಿಸುತ್ತಿದ್ದೇನೆ ಎಂಬ ಭಾವವೇ ಅದೆಂತಾ ಆಪ್ಯಾಯಮಾನ! ಒಳಗೊಳಗಿಂದ ನಗು ಉಕ್ಕಿ ಬರುತ್ತದೆ.
ನಮ್ಮ ಪಕ್ಕದವರ ಕ್ರಿಯೆಗೆ ಕೊಡುವ ಪ್ರತಿಕ್ರಿಯೆ ಕೂಡಾ ಅದೆಷ್ಟು ನವಿರಾಗಿರುತ್ತದೆ! ಹೊಟ್ಟೆಯೊಳಗೆಲ್ಲಾ ತುಂಬಿಕೊಳ್ಳುತ್ತಿದ್ದ ನವಿರಾದ, ಮೆಲುವಾದ ನಗುವನ್ನು ಬಾಯಿಂದ ಪುಫ್ ಎಂದು ನಿಟ್ಟುಸಿರಂತೆ ಬಿಡುವುದೂ ಪ್ರೇಮದ ಉದ್ಗಾರವೇ. ಹೌದು, ಪ್ರೇಮವೆಂಬುದನ್ನು ಮಾಡುವಂತಹದ್ದಲ್ಲ. ಭಾವಿಸುವುದು. ಅನುಭವಿಸುವುದು. ತರಂಗಗಳಂತೆ ನಾವಿರುವ ಕಡೆಯಲ್ಲೆಲ್ಲಾ ಹರಡಿಸುತ್ತಿರುವುದು. ಖುಷಿಖುಷಿಯಾಗಿರುತ್ತದೆ. ಬಹುಶಃ ಪ್ರೇಮವೆಂದರೆ ಆನಂದವೇ ಇರಬೇಕು.
ಅಥವಾ ಆನಂದದ ಮತ್ತೊಂದು ಮಧುರವಾದ ಮಗ್ಗುಲು ಈ ಪ್ರೇಮವೇ! ಒಟ್ಟಾರೆ, ಐ ಲವ್ ಯೂ ಲುಬೈನಾ ಎನ್ನುವುದನ್ನು ಅವಳು ಕೇಳಿಸಿಕೊಳ್ಳದಿದ್ದರೂ, ಬಾರಿ ಬಾರಿ ಹೇಳಿಕೊಳ್ಳುವುದರಲ್ಲೇ ರೋಮಾಂಚನ ಉಂಟಾಗುತ್ತದೆ. ಆಶ್ಚರ್ಯವೆಂದರೆ ಆ ರೋಮಾಂಚನವು ದಿನದಿನಕ್ಕೂ ಹೆಚ್ಚಿನ ಆನಂದವನ್ನು ತರುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ನಿಜ ನಿದ್ರೆ ಬರುವುದಿಲ್ಲ. ಹಾಸುಗೆ ಮೇಲೆ ಮಲಗಿಕೊಂಡು ಕತ್ತಲಲ್ಲಿ ಆನಂದದಿಂದ ಪುಳಕಿತವಾಗುತ್ತಿರುವುದು, ಅಮ್ಮ, “ಏನೋ ಅದು ತಿಕ್ಲುತಿಕ್ಲಾಗಿ ಒಬ್ನೇ ನಕ್ಕೊಳ್ತಿದ್ದೀಯಾ?” ಎಂದು ಕೇಳುವಷ್ಟು.
ಅವತ್ತು ಕಾಲೇಜಿಗೆ ತುಂಬಾ ಬೇಗನೇ ಹೋಗಿದ್ದೆ.
“ಏ ಯೋಗಿ. ಪ್ಲೀಸ್ ಬಾರೋ ಇಲ್ಲಿ” ಎಂದು ಆತುರಾತುರವಾಗಿ ಆಸ್ಮಾ ಕರೆದಳು. ಏನೆಂದು ಕೇಳಿದರೆ, “ಲುಬೈನಾಗೆ ಸ್ವಲ್ಪ ಜ್ವರ ಬಂದಿರೋ ಹಾಗಿದೆ. ಆಫೀಸ್ ರೂಮಲ್ಲಿ ಟ್ಯಾಬ್ಲೆಟ್ಸ್ ಏನಾದ್ರೂ ಇದ್ರೆ ಕೇಳಿ ತಗಂಡು ಬಾ. ಅಲ್ಲಿಲ್ಲಾಂದ್ರೆ ಮೆಡಿಕಲ್ ಷಾಪಿಗೆ ಹೋಗಿ ಬರ್ತೀಯಾ?” ಎಂದು ಕೇಳಿದಳು. ನಾನು ಕೂಡಲೇ ಹೋದೆ ಆಫೀಸ್ ರೂಮಿನಲ್ಲೇ ಮಾತ್ರೆ ಸಿಕ್ಕಿತು. ತಕ್ಷಣವೇ ತಂದೆ.
ಆಸ್ಮಾ ಅವಳಿಗೆ ಮಾತ್ರೆ ನುಂಗಿಸಿ, ಅವಳದೂ ಮತ್ತು ತನ್ನ ಅಸೈನ್ಮೆಂಟುಗಳನ್ನು ತೆಗೆದುಕೊಂಡು, “ಯೋಗಿ, ಇವಳನ್ನು ನೋಡಿಕೊಂಡು ನೀನು ಇಲ್ಲೇ ಇರು. ನಾನು ಅಸೈನ್ಮೆಂಟ್ ಸೈನ್ ಹಾಕಿಸ್ಕೊಂಡು ಬರ್ತೀನಿ” ಎಂದು ಸ್ಟಾಫ್ ರೂಂ ಕಡೆಗೆ ಹೋದಳು.
ಇಡೀ ತರಗತಿಯಲ್ಲಿ ನಾನು ಮತ್ತು ಲುಬೈನಾ ಇಬ್ಬರೇ!
ಇಂತದ್ದೊಂದು ಏಕಾಂತವೇ ಇದುವರೆಗೂ ಸಿಕ್ಕಿರಲಿಲ್ಲ.
ಜ್ವರದಿಂದ ಬಾಡಿದ ಅವಳ ಮುಖವನ್ನು ನೋಡುತ್ತಾ ಮೆಲ್ಲನೆ ನಕ್ಕೆ. “ಲುಬೈನಾ, ನೀನು ಇವತ್ತು ಕಾಲೇಜಿಗೆ ಬರಬಾರದಿತ್ತು. ಮನೇಲೇ ಇದ್ದು ರೆಸ್ಟ್ ತಗೋಬೇಕಿತ್ತು” ಎಂದೆ.
“ಟೆಸ್ಟ್ ಇದೆಯಲ್ಲಾ ಅದಕ್ಕೇ ಬಂದೆ” ಎಂದ ಲುಬೈನಾ ಪದೇ ಪದೇ ಬಾಗಿಲ ಕಡೆಗೆ ನೋಡುತ್ತಾ, “ಯೋಗಿ, ನಾನು ನಿನಗೊಂದು ಮಾತು ಹೇಳಬೇಕು” ಎನ್ನುತ್ತಾ ಹತ್ತಿರವೇ ಕುಳಿತಿದ್ದ ನನ್ನ ಬಲಗೈಯನ್ನು ತನ್ನೆರಡೂ ಕೈಗಳಲ್ಲಿ ತಟ್ಟನೆ ಬಾಚಿ ಹಿಡಿದುಕೊಂಡಳು.
“ಅರೆ!”
ಇದೇನಾ ಪ್ರೇಮದ ಪುಳಕ. ಮೈಯೆಲ್ಲಾ ನವಿರೆದ್ದಿತು.
ಅದೆಷ್ಟು ಬೆಚ್ಚಗಿದೆ ಅವಳ ಪ್ರೇಮದ ಸ್ಪರ್ಷ!
ಗಂಟಲೊಣಗಿತು. ಉಗುಳು ತಾನೇ ಒಳಕ್ಕೆ ಧುಮುಕಿಕೊಂಡಿತು.
ನಾನು ಪ್ರಪೋಸ್ ಮಾಡಬೇಕೆಂದುಕೊಂಡಿರುವ ಪ್ರೇಮಿಯು ತಾನೇ ಪ್ರಪೋಸ್ ಮಾಡುತ್ತಾಳೆಂದರೆ ಅದಕ್ಕಿಂತ ಮಿಗಿಲಾದ ಆನಂದ ಇನ್ನೇನಿರುತ್ತದೆ!
“ಹೇಳು ಲುಬೈನಾ” ಎಂದು ನನ್ನ ಎಡಗೈಯಿಂದ ಹಿಡಿದಿದ್ದ ಅವಳ ಕೈಗಳ ಮುಷ್ಟಿಯನ್ನು ಮೆಲ್ಲನೆ ಮುಟ್ಟಿದೆ.
“ಯೋಗಿ, ನಿನ್ನ ಮೇಲೆ ನನಗೆ ನಂಬಿಕೆ ಇದೆ. ನನಗೆ ಪ್ಲೀಸ್ ಹೆಲ್ಪ್ ಮಾಡು” ಎಂದ ಲುಬೈನಾ ನನ್ನ ಹಿಡಿತದಿಂದ ಅವಳ ಕೈಗಳನ್ನು ತೆಗೆದುಕೊಂಡು ಬ್ಯಾಗಿನಿಂದ ಒಂದು ಮಡಿಸಿದ ಪತ್ರವನ್ನು ನನ್ನ ಕೈಗಿತ್ತಳು. ಅವಳ ಕಣ್ಣುಗಳು ಪದೇ ಪದೇ ಬಾಗಿಲಿನ ಕಡೆಗೆ.
“ಯೋಗಿ, ಇದು ಗಿರೀಶ್ ನನಗೆ ಕೊಟ್ಟಿರೋದು. ಲವ್ ಲೆಟರ್. ಬೇಕಾದರೆ ನೀನು ನಿಧಾನವಾಗಿ ಓದು. ಅವನಿಗೆ ವಾಪಸ್ ಕೊಟ್ಟುಬಿಡು. ಅವನಿಗೆ ಒಂದು ಮಾತು ಹೇಳಿಬಿಡು. ನನಗೆ ಈ ರೀತಿಯೆಲ್ಲಾ ಲವ್ವು ಅದೂ ಇದೂಂತ ಪ್ರಪೌಸ್ ಮಾಡಿದರೆ ಡಿಸ್ಟರ್ಬ್ ಆಗತ್ತೆ.
ನಮ್ಮ ಮನೆಯವರೆಲ್ಲಾ ನನಗೆ ಇಷ್ಟು ಮಾತ್ರ ಕಾಲೇಜಿಗೆ ಕಳಿಸುತ್ತಿರುವುದೇ ಹೆಚ್ಚು. ನಮ್ಮ ಮನೆಯ ಹೆಂಗಸರಲ್ಲಿ ನಾನೇ ಮೊದಲನೆಯವಳು ಈ ತರ ಕಾಲೇಜಿಗೆ ಬಂದು ಕಲಿಯುತ್ತಿರುವುದು. ನಮ್ಮ ಮನೆಯಲ್ಲಿ ಹೀಗೆಲ್ಲಾ ಅಂತ ಗೊತ್ತಾದರೆ ಕಾಲೇಜಿಗೇ ಕಳಿಸೊಲ್ಲ. ಅದೆಲ್ಲಾ ಬೇರೆ ವಿಷಯ. ಮುಖ್ಯವಾಗಿ ನನಗೇ ಇದರಲ್ಲೆಲ್ಲಾ ಇಂಟರೆಸ್ಟ್ ಇಲ್ಲ. ನಾನು ಚೆನ್ನಾಗಿ ಓದಬೇಕು. ಹೈಯರ್ ಸ್ಟಡೀಸ್ ಮಾಡಬೇಕು. ನನ್ನ ಕೆರಿಯರ್ ಬಗ್ಗೆ ನಾನು ಕಂಪ್ಲೀಟ್ ಕಾನ್ಸೆನ್ಟ್ರೇಶನ್ ಮಾಡ್ತಿದ್ದೀನಿ. ನಾವೂ ನೀವೂ ಎಲ್ಲಾ ಫ್ರೆಂಡ್ಲಿಯಾಗಿ ಇದ್ದೀವಲ್ಲಾ ಅಷ್ಟೇ ಒಂದು ಖುಷಿ.
ಈ ತರ ಲವ್ವು ಗಿವ್ವು ಅಂತ ಪ್ರಪೋಸ್ ಮಾಡೋದು, ಡಿಸ್ಟರ್ಬ್ ಮಾಡಿದರೆ ಈಗ ಇರೋ ಫ್ರೆಂಡ್ಶಿಪ್ ಕೂಡಾ ಇರಲ್ಲ. ಅವನ ಪಾಡಿಗೆ ಅವನಿಗೆ ಇರಕ್ಕೆ ಹೇಳು. ಆಸ್ಮಾಗೇನಾದರೂ ಗೊತ್ತಾದರೆ ಅವಳು ದೊಡ್ಡ ಬಾಯಿಯವಳು. ಜಗಳ ಮಾಡಿಬಿಡ್ತಾಳೆ. ನಿನ್ನೆ ಸಾಯಂಕಾಲ ಅವನು ಲೆಟರ್ ಕೊಟ್ಟ. ರಾತ್ರಿ ಪೂರ್ತಿ ನಿದ್ರೆನೇ ಬರಲಿಲ್ಲ. ಥೋ ಎಂತಾ ಕೆಲ್ಸ ಆಗೋಯ್ತು.
ಇವನೇನಾದರೂ ಹಟ ಮಾಡ್ಕೊಂಡು ಲವ್ವು ಗಿವ್ವು ಅಂತ ಹಿಂದಿಂದೆ ಬಿದ್ದರೆ ನನ್ನ ಸ್ಟಡೀಸ್ ಗತಿ ಏನು ಅಂತ ನೆನಿಸ್ಕೊಂಡು ನೆನಿಸ್ಕೊಂಡೇ ಅಳು ಬರ್ತಾಯಿತ್ತು. ಜ್ವರ ಬಂದಾಗಿಬಿಟ್ಟಿದೆ ಯೋಗಿ. ನೀನು ನನ್ನ ಬ್ರದರ್ ಅಂತ ತಿಳ್ಕೊಂಡು ರಿಕ್ವೆಸ್ಟ್ ಮಾಡ್ಕೊಳ್ತಿದ್ದೀನಿ. ಗಿರೀಶನಿಗೆ ಪ್ಲೀಸ್ ಕನ್ವೀನ್ಸ್ ಮಾಡು. ಮೊದಲಿದ್ದ ಹಾಗೇ ಇರಲಿ. ಇದೊಂದು ಅವನ ತಲೆಯಿಂದ ತೆಗೆದುಹಾಕಿಬಿಡಲಿ ಅಷ್ಟೇ. ಪ್ಲೀಸ್” ಲುಬೈನಾ ಕೈ ಮುಗಿದಳು.
ಮುಗಿದ ಅವಳ ಕೈಯನ್ನು ಹಿಡಿದುಕೊಂಡು ಹೇಳಿದೆ.
“ಯೋಚ್ನೆ ಮಾಡಬೇಡ. ನಾನು ಅವನ ಜೊತೆ ಮಾತಾಡ್ತೀನಿ. ನೀನು ಕೈಯೆಲ್ಲಾ ಏನೂ ಮುಗಿಯೋದು ಬೇಡ.”
“ಯಾರಿಗೂ ಹೇಳಬೇಡ. ಈ ವಿಷಯ ನಮ್ಮೂವರಲ್ಲೇ ಮುಗಿದು ಹೋಗಲಿ. ಪ್ಲೀಸ್” ಎಂದ ಲುಬೈನಾ ಆಸ್ಮಾ ಬರುವುದನ್ನು ನೋಡಿ ಮಾತು ನಿಲ್ಲಿಸಿದಳು.
ನಾನು ನಕ್ಕೆ. ಗಿರೀಶನಿಗೆ ಅವಳು ಹೇಳಿದ್ದನೆಲ್ಲಾ ಹೇಳಿದೆ. ಅವಳು ಕೊಟ್ಟ ಪತ್ರವನ್ನು ಮರಳಿಸಿದೆ.
“ಅನ್ನಿಸ್ತು ಪ್ರಪೋಸ್ ಮಾಡ್ದೆ. ಅವರಿಗೆ ಇಷ್ಟ ಇಲ್ಲಾಂದ್ರೆ ಬಿಡು, ಅಷ್ಟೇ!” ಎಂದ ಅವನ ಕಣ್ಣಂಚಿನಲ್ಲಿ ಜಿನುಗಲು ಸಿದ್ಧವಾಗಿದ್ದ ಕಣ್ಣೀರಿನ ಹನಿಗಳನ್ನು ಆದಷ್ಟು ತಡೆದುಕೊಂಡ.
ಆದರೆ ನನಗೆ ಧಳಧಳ ಸುರಿದೇ ಬಿಟ್ಟಿತು.
“ಹೋಗಲಿ ಬಿಡು” ಅವನಿಗೆ ಅಂದು ಜೀವನದಲ್ಲೇ ತುಂಬಾ ಆಪ್ತನಾದ ಸ್ನೇಹಿತ ಎಂದೆಸಿದ್ದಿರಬೇಕು. ತನ್ನ ಸ್ನೇಹಿತನ ಭಗ್ನ ಹೃದಯಕ್ಕೆ ಇಷ್ಟೊಂದು ಮರಗುತ್ತಿದ್ದಾನಲ್ಲಾ ಎಂದು ಅವನು ನನ್ನ ಬಗ್ಗೆ ತನ್ನ ಆತ್ಮೀಯತೆಯನ್ನು ಮತ್ತಷ್ಟು ಗಾಢ ಮಾಡಿಕೊಂಡಿರಬೇಕು.
“ಪ್ಚ್, ನೀನೇನೋ, ನನಗೊಸ್ಕರ ಇಷ್ಟು ಫೀಲ್ ಮಾಡ್ಕೊಳ್ತಿದ್ದೀಯಾ?” ಎಂದ ಅವನು ನನ್ನ ಭುಜವನ್ನು ಬಳಸಿ ಹಿಡಿದುಕೊಂಡು “ಇಷ್ಟು ಸಾಕು ಬಿಡು ಗುರು, ಇಷ್ಟು ಸಾಕು” ಎಂದ ಅವನ ಕಣ್ಣಿಂದಲೂ ಧುಮುಕುತ್ತಿತ್ತು.
ಯಾರೊಂದಿಗೂ ಹಂಚಿಕೊಳ್ಳದ ಅಂದು ನನ್ನ ಕಣ್ಣಿಂದ ನೀರು ಸುರಿದ ರಹಸ್ಯವನ್ನು ನಾನು ಬಿಚ್ಚಿಟ್ಟಿದ್ದು ಸುಮಾರು ಇಪ್ಪತ್ತೈದು ವರ್ಷಗಳ ನಂತರ. ಅದು ದಲೀಲ್ ಮುಂದೆ. ದಲೀಲ್ ಲುಬೈನಾಳ ಗಂಡ. ಅವನು ಮುಂಬೈನಲ್ಲಿ ರಂಗತಂಡವೊಂದನ್ನು ಹೊಂದಿದ್ದ. ನಾನೂ ರಂಗಕರ್ಮಿ ಎಂದು ಲುಬೈನಾಳಿಂದ ತಿಳಿದಾಗ ನನ್ನ ಜೊತೆ ಮಾತಾಡಲು ಇಷ್ಟ ಪಟ್ಟಿದ್ದ.
ನನ್ನ ರಂಗಪ್ರಯೋಗ ಖಲೀಲ್ ಗಿಬ್ರಾನನ ದ ಪ್ರಾಫೆಟ್ ಹಲವು ಪ್ರಯೋಗಗಳನ್ನು ಕಂಡು, ಪತ್ರಿಕೆಗಳಲ್ಲಿ ಅದರ ಬಗ್ಗೆ ಬರಹಗಳನ್ನು ನೋಡಿದಾಗ ಲುಬೈನಾ ಮತ್ತು ದಲೀಲ್ ನನಗೆ ಫೋನ್ ಮಾಡಿ ಮುಂದಿನ ಪ್ರಯೋಗ ಇದ್ದಾಗ ತಿಳಿಸಲು ಹೇಳಿದ್ದರು. ಅಲೆಯನ್ಸ್ ಡಿ ಫ್ರಾನಿಸ್ ನಲ್ಲಿ ಪ್ರಯೋಗವಾದಾಗ ಇಬ್ಬರೂ ಬಂದು ನಾಟಕ ನೋಡಿ ಖುಷಿಪಟ್ಟರು. ಇಬ್ಬರೂ ಬೆನ್ಸನ್ ಟೌನಿನಲ್ಲಿರುವ ತಮ್ಮ ಮನೆಗೆ ಊಟಕ್ಕೆ ಕರೆದರು. ಲುಬೈನಾಗೆ ದೇವಿಯನ್ನು ಕಂಡರೆ ಬಲೇ ಮುದ್ದಾಗಿತ್ತು.
ರಂಗಪ್ರಯೋಗದಲ್ಲಿಯೂ ಪುಟಪುಟನೆ ವೇದಿಕೆಯ ಮೇಲೆ ನಾಟಕದ ಭಾಗವಾಗಿದ್ದ ದೇವಿ ಪ್ರದರ್ಶನದ ವೇಳೆ ಕೆಳಗಿಳಿದು ಬಿಟ್ಟಳು. ಲುಬೈನಾ ಅವಳನ್ನು ಎತ್ತಿಕೊಂಡು ಮತ್ತೆ ವೇದಿಕೆ ಹತ್ತಿಸಿದ್ದಳು. ಕತ್ತಲಿನಲ್ಲಿ ನನಗೆ ಆ ವ್ಯಕ್ತಿ ಲುಬೈನಾ ಎಂದು ತಿಳಿದಿರಲಿಲ್ಲ. ಆದರೆ ನಾಟಕ ಮುಗಿದ ಮೇಲೆ ಅವಳೆಂಬ ಅಚ್ಚರಿ ಕಾದಿತ್ತು.
ಗಂಡ ಹೆಂಡಿರಿಬ್ಬರೇ ಇದ್ದ ಅವರ ಮನೆಯಲ್ಲಿ ನಾವು ಕುಟುಂಬ ಸಮೇತ ಊಟ ಮಾಡುವಾಗ ಲುಬೈನಾ “ನಾವು ಕಾಲೇಜಲ್ಲಿ ಓದುವಾಗ ಒಂದು ಘಟನೆ ನಡಿತು. ಏನೂಂತ ನೀನೇ ಕೇಳು” ಎಂದು ಲುಬೈನಾ ದಲೀಲನಿಗೆ ಹೇಳಿದಳು.
ನಾನು ಗಿರೀಶ್ ಪ್ರೇಮಪತ್ರ ಕೊಟ್ಟ ಕತೆಯನ್ನು ಹೇಳುತ್ತೇನೆ ಎಂದಷ್ಟೇ ತಿಳಿದಿದ್ದ ಲುಬೈನಾಗೆ ಅಚ್ಚರಿ ಕಾದಿತ್ತು.
ನನ್ನೊಮೆಯನ್ನೂ ತೆರೆದಿಟ್ಟಾಗ ದಲೀಲ್ ನಮ್ಮಿಬ್ಬರ ಮುಖವನ್ನು ನೋಡಿ ನೋಡಿ ನಗುತ್ತಿದ್ದ.
“ಅಯ್ಯೋ ನಿನ್ನಾ. ನೀನು ಹೇಳಲೇ ಇಲ್ಲಾ!” ಎಂದಳು ಲುಬೈನಾ.
ನಾನು ನಕ್ಕೆ. ಗಂಗಾ ಕೂಡಾ ನಗುತ್ತಿದ್ದಳು.
“ಇವರು ಹೇಳಿದ್ದರೆ ಏನು ಮಾಡುತ್ತಿದ್ದೆ?” ಎಂದು ಕೇಳಿದ ದಲೀಲ್.
“ಆವಾಗ ಇವನ ಕತೆ ಹೀಗೇಂತ ಗಿರೀಶನಿಗೇ ಹೇಳಿರುತ್ತಿದ್ದೆ” ಎಂದು ನಕ್ಕಳು ಲುಬೈನಾ.
“ಗಿರೀಶ ಮತ್ತೆ ಯೋಗೀಶ ಇಬ್ಬರೂ ಪ್ರಪೋಸ್ ಮಾಡಿದ್ದರೆ?” ಎಂದು ಕೇಳಿದ ದಲೀಲ್.
“ಮಹೇಶನಿಗೆ ಹೇಳ್ತಿದ್ದೆ!” ಎಂದಳು ಲುಬೈನಾ.
“ಅವನ್ಯಾರು?”
“ಪಕ್ಕದ ಕ್ಲಾಸ್ ರೌಡಿ” ಎಂದು ನಕ್ಕಳು ಲುಬೈನಾ.
“ನೋಡಿ ಗಂಗಾ ನಿಮ್ಮ ಗಂಡ ಭಯಂಕರ ಸೀಕ್ರೆಟ್ ಲವ್ವರ್. ಇಷ್ಟು ವರ್ಷ ಆದ ಮೇಲೆ ಹೇಳ್ತಿದ್ದಾರೆ” ಎಂದ ದಲೀಲ್.
“ಅವರ ಹತ್ತಿರ ಯಾವ ಸೀಕ್ರೇಟೂ ಇರಲ್ಲ. ಕತೆ ಕಾದಂಬರಿಗಳಲ್ಲಾದರೂ ಬಂದುಬಿಡತ್ತೆ” ಎಂದ ಗಂಗಾ, “ಅವರು ಒಳಗೊಳಗೇ ಏನೂ ಇಟ್ಕೊಳಲ್ಲ” ಎಂದು ಪುನರುಚ್ಚರಿಸಿದಳು.
ಹೌದು, ಹಾಗೆ ಇಟ್ಟುಕೊಳ್ಳಲ್ಲ. ಆದರೆ ಅದಿತ್ತು ಇಪ್ಪತ್ತೈದು ವರ್ಷ. ದಲೀಲ್ ಮತ್ತು ಲುಬೈನಾ ದಂಪತಿಗಳ ಮುಕ್ತ ಮನಸ್ಸು ಮತ್ತು ಒಡನಾಟ ನೋಡಿ ಅದನ್ನು ಹೇಳಲು ಸಾಧ್ಯವಾಯಿತು. ಲುಬೈನಾ ಕಾಲೇಜಿನಲ್ಲಿ ಹಿಂಜರಿಯುತ್ತಿದ್ದಂತೆ ಈಗ ಇರದೇ ಹಿಜಾಬಿನಲ್ಲೇ ಬಾಯ್ಬಿಟ್ಟು ನಗುತ್ತಿದ್ದಳು. ಕಣ್ಣರಳಿಸಿ ಹುಬ್ಬೆತ್ತಿ ಕೇಳುವ, ಹೇಳುವ ಬಗೆಯಲ್ಲಿ ಅವಳ ಮುಕ್ತತೆ, ಲವಲವಿಕೆ ಕಾಣುತ್ತಿತ್ತು.
ಒಂದು ವೇಳೆ ದಲೀಲ್ ಕಾಟೇವಾಡ ಹಾಕಿಕೊಂಡಿರುವ ವ್ಯಕ್ತಿಯಂತೆ ಕಂಡಿದ್ದರೆ ಊಟ ಮಾಡಿ “ನಮ್ಮನೆಗೂ ಬನ್ನಿ” ಎಂದು ಆಹ್ವಾನಿಸುವುದರಲ್ಲೇ ನಮ್ಮ ಮಾತುಕತೆ ಮುಗಿದಿರುತ್ತಿತ್ತು. ಗಂಗಾ ಹೇಳಿದಂತೆ ಯಾವುದೋ ಕತೆ, ಕಾದಂಬರಿಯಲ್ಲಿ ಯಾರದೋ ಕತೆಯಂತೆ, ಯಾವುದೋ ಪಾತ್ರದ್ದಂತೆ ಇದು ನುಸುಳೇ ತೀರಿರುತ್ತಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243