ಭಾವ ಭೈರಾಗಿ

ಕವಿತೆ | ನ್ಯಾಯ “ಮಂದಿರ”

Published

on

  • ಶಿವಸುಂದರ್

ಆಹಾ! ಈಗ ಎಲ್ಲಾ ಸರಿಹೊಯಿತು.
ಕಾಗದಪತ್ರವಿಲ್ಲದಿದ್ದರೂ
ಕಳ್ಳ ದೇವರ ಒಡೆತನ ಸಾಬೀತಾಯಿತು

ಸತ್ಯದ ಸೂಲಗಿತ್ತಿಯನ್ನು ಅಮಾನತ್ತಿನಲ್ಲಿರಿಸಿ
ಸಂವಿಧಾನಕ್ಕೆ ಸಿಸೇರಿಯನ್ ಮಾಡಲಾಯಿತು

ಹೆರಲೊಲ್ಲದ ನ್ಯಾಯ
ಉಸಿರಿಲ್ಲದ ಶಾಂತಿಯನ್ನು ಪ್ರಸವಿಸಿತು
ಸರ್ವೇ ಜನಾ ಸುಖೀನೋ ಭವಂತು!

ಇನ್ನು ಪೂರ್ತಿ ನಿಶ್ಚಿಂತೆ
ಸಾಕ್ಷಿ ಪುರಾವೇಗಳೆಂಬ ಪರದೇಸಿ ಪ್ರಮಾಣಗಳು ರದ್ದಾಗಿವೆ
ನ್ಯಾಯದ ಶೀಲ ರಕ್ಷಣೆಗೆ
ಸನಾತನ ಪಹರೆ ವಿಧಿಸಲಾಗಿದೆ…!

ಸತ್ಯದ ಮೋಹದಿಂದ ನಂಬಿಕೆಯ ಗಡಿ ದಾಟದಂತೆ
ನ್ಯಾಯದ ಸುತ್ತ ಲಕ್ಷಣ ರೇಖೆಯನ್ನು ಬಿಗಿಗೊಳಿಸಲಾಗಿದೆ

ಇನ್ನೂ ನಂಬಿಕೆಯೇ ಸಂವಿಧಾನ, ರಣ ಘೋಷಗಳೇ ವೇದವಾಕ್ಯ
ನಂಬಿಕೆಯಂತೆ ನಡೆದರೆ ಮೋಕ್ಷ, ಇಲ್ಲವೇ ನಿಜ ನಿರ್ವಾಣ…
ಪುರಾಣ ಮಂತ್ರ ತಂತ್ರ ಕವಡೆ
ಜನಸಂಖ್ಯೆಗೆ ಅನುಗುಣವಾಗಿ ನ್ಯಾಯದ ಬಟವಾಡೆ..!

ಅವರಿರುವುದು ಹಾಗೆ! ಕೇಳುತ್ತಾರೆ
ಕೊಡದಿದ್ದರೆ ಕೊಲ್ಲುತ್ತಾರೆ
ನಿಮಗೇನಾಗಿದೆ ಧಾಡಿ?
ಕೇಳಿದ್ದನ್ನು ಕೊಟ್ಟು ಶಾಂತಿ ಕಾಪಾಡಿ..!

ರಾಮರಾಜ್ಯ ಸ್ವಾಮಿ…
ಶಂಬೂಕರಾದರೆ ನರಕ
ಸಹಿಸಿಕೊಂಡು ಬಾಳಿ…. ಸ್ವರ್ಗಸುಖ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version