ಭಾವ ಭೈರಾಗಿ
‘ಬ್ರೇಕ್ ದಿ ರೂಲ್ಸ್ ಅಂದ್ರೆ’ ತಪ್ಪು ಮಾಡೋದಾ?
ಈ ಪ್ರಶ್ನೆಗೆ ಉತ್ತರ ಹುಡುಕುವ ಮುಂಚೆ ತಪ್ಪು ಅಂದ್ರೆ ಏನು ಅಂತ ತಿಳಿದುಕೊಳ್ಳಬೇಕಲ್ವಾ…? ಅವನು ಮಾಡಿದ್ದು ತಪ್ಪು ಕಣೋ ಆದರೂ ಇವನು ಮಾಡಿದ್ದೇನು ಮಹಾ ಸರಿಯಲ್ಲ ಬಿಡು ಅಂತ ಅಲ್ಲಲ್ಲಿ ಮಾತಾಡೋದು ಕೇಳಿರುತ್ತೇವೆ. ಈ ಸರಿ ತಪ್ಪುಗಳ ಲೆಕ್ಕಾಚಾರ ನಾವೇ ಮಾಡುಕೊಂಡದ್ದು ಎಂಬುದು ಮೊದಲ ಸತ್ಯ.
ಸೃಷ್ಟಿಯಲ್ಲಿ ಯಾವುದೇ ಸರಿ ತಪ್ಪು ಎಂಬ ವಿಂಗಡಣೆಯಿಲ್ಲ. ಮನುಷ್ಯ ವಿಕಸನಗೊಳ್ಳುತ್ತಾ ಹೋದಂತೆ ತನಗೆ ಅನುಕೂಲಕರವಾದುದ್ದೆಲ್ಲ ಸರಿ ಎಂದು ಭಾವಿಸತೊಡಗುತ್ತಾನೆ. ತನ್ನ ಅನುಕೂಲಕ್ಕೆ ತಕ್ಕಂತೆ ಸರಿ ತಪ್ಪುಗಳ ಲೆಕ್ಕಾಚಾರ ಹಾಕುತ್ತಾನೆ. ಹಿರಿಯರು ತಮಗೆ ಸರಿ ಅನಿಸಿದ್ದನ್ನು ಚಿಕ್ಕವರಿಂದ ಮಾಡಿಸಲು ಹೊರಟರು ಅದೇ ದೊಡ್ಡ ದೊಡ್ಡ ತಪ್ಪುಗಳಿಗೆ ದಾರಿಯಾಯ್ತು. ಈ ಸರಿ ತಪ್ಪುಗಳ ಬಗೆಗೆ ಮತ್ತೊಂದು ದಿನ ಮಾತನಾಡೋಣ ಈಗ ಬ್ರೇಕ್ ದಿ ರೂಲ್ಸ್ ಬಗ್ಗೆ ಮಾತನಾಡುವ.
ನಾವೆಲ್ಲರೂ ಆಗಾಗ ರೂಲ್ಸ್ ಆರ್ ಮೇಡ್ ಫಾರ್ ಬ್ರೇಕ್ ಅನ್ನುವುದನ್ನು ಕೇಳಿರ್ತೇವೆ, ಹೌದು ಬದುಕು ಅಂತ ಚೌಕಟ್ಟುಗಳನ್ನು ಮೀರಿದ್ದು. ಹಾಗೆ ಬದುಕಿದರೆ ಒಂದು ಸುಂದರ ಅನುಭವ ನಮ್ಮದಾಗಲು ಸಾಧ್ಯವಿದೆ. ಹಾಗಂತ ಇದೇ ಮಾತನ್ನು ನಂಬಿದ ಎಷ್ಟೋ ಜನ ತಪ್ಪು ಮಾಡುವುದೇ ಜೀವನದ ಪರಮಸುಖ ಎಂದು ಭಾವಿಸಿರುವುದು ದುರಂತವೇ ಸರಿ.
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದರಿಂದ ಹಿಡಿದು ಅಪ್ಪ ಅಮ್ಮನ ಪ್ರತಿ ಮಾತಿಗೂ ಎದಿರಾಡುವುದೇ ಜೀವನದ ಸುಖವಲ್ಲ, ನಿಯಮಗಳನ್ನು ಗಾಳಿಗೆ ತೂರಿ ಮತ್ತೊಬ್ಬರಿಗೆ ತೊಂದರೆ ಕೊಡುವುದರಲ್ಲಿ ಸುಖವಿಲ್ಲ. ಮೀರುವುದಾದರೆ ಮೀರಲೇಬೇಕಿರುವ ನಮ್ಮೊಳಗಿನ ಸಾವಿರ ಅಘೋಷಿತ ನಿಯಮಗಳಿವೆಯಲ್ಲ ಅವುಗಳನ್ನು ಮೀರಿಬಿಡಿ. ರಸ್ತೆಪಕ್ಕದಲ್ಲಿ ಚರಂಡಿಯೊಳಗೇ ಆಡುತ್ತಾ ಕಿಲ್ಲನೆ ನಗುವ ಪುಟ್ಟಕಂದನನ್ನು ನೋಡಿ ಮುಟ್ಟಿದರೆ ಯಾರು ಏನಂದುಕೊಂಡಾರೋ ಎಂದು ಸುಮ್ಮನೆ ಹೋಗುವ ನಿಯಮವನ್ನು ಮೀರಿಬಿಡಿ. ಉರಿಬಿಸಿಲಿನಲ್ಲೂ ಬೆವರೊರೆಸಿಕೊಂಡು ಟ್ರಾಫಿಕ್ ಕಂಟ್ರೋಲ್ ಮಾಡುವ ಕಾನ್ಸ್ಟೆಬಲ್ ಒಬ್ಬರಿಗೆ ಬಿಗುಮಾನ ಬಿಟ್ಟು ಥ್ಯಾಂಕ್ ಯೂ ಸರ್ ಎಂದು ಬನ್ನಿ, ಅತೀ ದಿಬ್ಬದ ದಾರಿಯಲ್ಲಿ ತರಕಾರಿ ಗಾಡಿ ತಳ್ಳಲು ಹೆಣಗಾಡುತ್ತಿರುವ ತಾತನಿಗೆ ಕೈಜೋಡಿಸಿಬಿಡಿ ಅದಕ್ಕಾಗಿ ಬೇಕಿದ್ದರೆ ನೋ ಪಾರ್ಕಿಂಗ್ ನಲ್ಲೂ ಗಾಡಿ ನಿಲ್ಲಿಸಿಕೊಳ್ಳಿ.
ಫುಟ್ ಪಾತ್ ನಲ್ಲಿ ನೆಲದಮೇಲೆ ಚಕ್ಕಳಂಬಕ್ಕಳ ಹಾಕಿಕೊಂಡು ಗೆಳೆಯರೊಡನೆ ಐಸ್ ಕ್ರೀಂ ತಿಂದು ನೋಡಿ, ಯಾರದೋ ಹುಟ್ಟುಹಬ್ಬಕ್ಕಾಗಿ ರಾತ್ರೋರಾತ್ರಿ ಗೆಳೆಯರನ್ನೆಲ್ಲ ಒಟ್ಟುಗೂಡಿಸಿ ಹನ್ನೆರಡುಗಂಟೆ ಆಚರಣೆಯ ಸಾಹಸ ಮಾಡಿ, ಜಿಟಿಜಿಟಿ ಮಳೆಯಲ್ಲಿ ಸ್ಕೂಟಿಹತ್ತಿ ಊರು ಸುತ್ತಿನೋಡಿ ಹೀಗೆ ಹೇಳುತ್ತಾ ಹೋದರೆ ನಾವು ಮಾಡಬಹುದಾದ ಮತ್ತು ಮಾಡಲೇಬೇಕಿರುವ ಸಾವಿರ ಕೆಲಸಗಳಿವೆ. ಇವುಗಳಿಗಾಗಿ ನಾವೇ ಮಾಡಿಕೊಂಡ ರೂಲ್ಸ್ ಬ್ರೇಕ್ ಮಾಡಿಬಿಡಿ. ವಿಧಾನಸೌಧದ ಕ್ಯಾಂಟೀನಿನಲ್ಲಿ ಕೆಲಸ ಮಾಡುವ ಹುಡುಗಿಗೆ ನೀವ್ ಚೆಂದ ನಗ್ತೀರ ಅಂತ ಹೇಳಿದ್ರೆ ಮತ್ತಷ್ಟು ಚೆಂದಗೆ ನಗುತ್ತಾಳೆ, ನಮ್ಮ ಡ್ರೈವರ್ ಗೆ ಬನ್ನಿ ಸಾರ್ ಒಟ್ಟಿಗೆ ಊಟ ಮಾಡೋಣ ಎಂದರೆ ಅವರ ಕಣ್ಣುಗಳಲ್ಲಿ ಆಶ್ಚರ್ಯ, ಪ್ರೆಸ್ ಮೀಟ್ ನಲ್ಲಿ ಜ್ಯೂಸ್ ಕೊಡುವ ಹುಡುಗನಿಗೆ ನಿಮ್ ಡ್ರೆಸ್ಸಿಂಗ್ ಸ್ಟೈಲ್ ಇಷ್ಟ ಆಯ್ತು ಅಂದ್ರೆ ಅವನ ಮುಂದಿನ ಹೆಜ್ಜೆಗೊಂದು ಗತ್ತು ಸೇರಿಕೊಳ್ಳುತ್ತೆ.
ತರಕಾರಿ ಮಾರುವ ಆಂಟಿಗೆ ನಮ್ಮಮ್ಮನಿಗೂ ನಿಮ್ಮಷ್ಟೇ ವಯಸ್ಸು ಆಂಟಿ ಅಂದ್ರೆ ನಾಳೆಯಿಂದ ಅವರು ನನ್ನ ದಾರಿ ಕಾಯ್ತಾರೆ, ದೇಶಕಾಯುವ ಸೈನಿಕ ಕಂಡಾಗೊಂದು ಸೆಲ್ಫಿ ಕೇಳಿ ಅವರು ಎದೆಯುಬ್ಬಿಸಿ ನಿಲ್ಲುತ್ತಾರೆ ಆ ಎದೆಯೊಳಗೆ ನಮ್ಮ ದೇಶದ ಉಸಿರಿರುತ್ತದೆ, ರೈತರು ಅಂತ ಗೊತ್ತಾದರೆ ಬಸ್ ನಲ್ಲಿ ಎದ್ದು ಸೀಟು ಕೊಡಿ ಅವರು ನಿಮ್ಮ ಮಕ್ಕಳು ಮೊಮ್ಮೊಕ್ಕಳಿಗೆ ಅನ್ನ ನೀಡುತ್ತಾರೆ, ಎಲ್ಲಕ್ಕಿಂತ ಮೊದಲು ಯಾರು ಏನೆಂದುಕೊಂಡರೂ ಸರಿ ನಿಮ್ಮಮ್ಮನಿಗೊಮ್ಮೆ ಕಾಲು ಮುಟ್ಟಿ ನಮಸ್ಕರಿಸಿಬಿಡಿ, ಇವತ್ತು ನಾನೇನಾಗಿದ್ದೇನೋ ಅದಕ್ಕೆ ನೀನೆ ಕಾರಣ ಅಪ್ಪ ಅಂತ ಆ ಹೊರಟು ಮನುಷ್ಯನಿಗೆ ಮನಸುಬಿಚ್ಚಿ ಹೇಳಿ ಅವರ ಕಣ್ಣಲ್ಲಿ ನೀರಿರುತ್ತದೆ ಅದು ನಿಮ್ಮ ಮಕ್ಕಳ ಮನಸ್ಸನ್ನು ತಣ್ಣಗಿಡುತ್ತದೆ.
–ದರ್ಶನ್ ಆರಾಧ್ಯ
ಸುದ್ದಿದಿನ.ಕಾಂ|ವಾಟ್ಸಾಪ್|9986715401