ಅಂತರಂಗ
ಧರ್ಮ ಮರ್ಮ-03 : ದೈವಿಕತೆ ಮತ್ತು ಧಾರ್ಮಿಕತೆ
- ಯೋಗೇಶ್ ಮಾಸ್ಟರ್
ದೇವರ ಪರಿಕಲ್ಪನೆ ವಿಶ್ವದ ಬಹುತೇಕ ಸಂಸ್ಕೃತಿಗಳಲ್ಲಿ ಭಯದ ಮೂಲವೇ ಆಗಿದ್ದು, ನಂತರ ಅದನ್ನು ಸುಧಾರಿಸಿದಂತಹ ಉದಾಹರಣೆಗಳು ಧಾರಾಳವಾಗಿ ಕಾಣುತ್ತದೆ. ಇಂದಿನ ಭಾಷೆಯಲ್ಲಿ ಭಾರತೀಯರು ಎನ್ನುವುದಾದರೂ ಸ್ಪಷ್ಟ ಸೀಮೆ, ಸಂಸ್ಕೃತಿ, ಭಾಷೆ, ಜನಾಂಗವೇನೂ ಇಲ್ಲದ ಈ ನೆಲದ ವಿವಿಧ ನೆಲೆಗಳಲ್ಲೇ ದೇವರ ಕಲ್ಪನೆಗಳು ಅನೇಕ ರೀತಿಗಳಲ್ಲಿ ಉಂಟಾದವು.
ಆದರೆ, ನಂತರ ರಾಜಕೀಯವಾಗಿ ಮತ್ತು ಭೌಗೋಳಿಕವಾಗಿ, ಮಾತಾಡುವ ಭಾಷೆಯೂ ಸೇರಿದಂತೆ ಜನಗಣಗಳನ್ನು ಒಂದು ಮಾಡಿರುವ ಕಾರಣಕ್ಕಾಗಿ, ರಾಷ್ಟ್ರೀಯತೆಯ ಹೆಸರಿನಲ್ಲಿ, ಅದಕ್ಕೂ ಮೀರಿ ಜಗತ್ಕುಟುಂಬದ ಪರಿಕಲ್ಪನೆಯಲ್ಲಿ ಈ ವಿವಿಧತೆಗಳಲ್ಲಿ ಏಕತೆಯನ್ನು ಕಾಣುವ ಪ್ರಯತ್ನವನ್ನು ಹಲವಾರು ದಿಕ್ಕುಗಳಿಂದ ಮಾಡುತ್ತಿದ್ದರೂ ಸಾಧ್ಯವಾಗಿಲ್ಲ. ಬಹುಶಃ ಸಾಧ್ಯವಾಗುವುದೂ ಇಲ್ಲ.
ನಿರ್ಧಮೀಯವಾಗಿ, ಸಂಪ್ರದಾಯರಹಿತವಾಗಿ ಏಕತೆಯನ್ನು ಸಾಧಿಸಲು ಸಾಧ್ಯವಾಗುವುದು ಜೀವಸೂಕ್ಷ್ಮವಾದ ಮಾನವೀಯ ನೆಲೆಗಟ್ಟಿನಿಂದ ಯೋಚಿಸಲು ಸಮರ್ಥವಾದಾಗ ಮಾತ್ರ. ಏಕತೆಯೆಂದರೆ ಆಲೋಚನೆಯಷ್ಟೇ. ಆ ಆಲೋಚನೆಯನ್ನು ಖಾಸಗಿಯಾಗಿ ತಮ್ಮದೆಂದು ಭಾವಿಸುವುದು. ಧರ್ಮವೂ ಕೂಡಾ ಒಂದು ಆಲೋಚನೆಯೇ ಆಗಿದೆ. ವಾಸ್ತವವಾಗಿ ಮನುಷ್ಯನೆಂದು ನಾವು ಯಾವ ಜೀವವರ್ಗಕ್ಕೆ ಕರೆಯುತ್ತೇವೆಯೋ ಆ ತಳಿಯು ಮೂಲದಲ್ಲಿ ಪ್ರಾಣಿಯೇ ಆಗಿದ್ದು ಒಂದು ವಿಶಿಷ್ಟ ಗುಣ ಲಕ್ಷಣವೆಂದರೆ ಮನಸ್ಸು.
ಈ ಮನಸ್ಸಿನ ಕಾರಣದಿಂದಲೇ ಅವನಿಗೆ ಆಲೋಚಿಸಲು ಸಾಧ್ಯವಾಗಿರುವುದು. ಪ್ರಾಣಿಗಳಿಗಿರುವಂತೆ ಪ್ರವೃತ್ತಿಯೂ ಕೂಡಾ ಸಹಜವಾಗಿ ಇದೆ ಮತ್ತು ಆ ಪ್ರವೃತ್ತಿಯನ್ನು ಕ್ರಮಬದ್ಧಗೊಳಿಸಿಕೊಂಡು ತನ್ನ ಜೀವನವನ್ನು ಮುಂಗಾಣುವಂತಹ ಆಲೋಚನಾ ಶಕ್ತಿಯೂ ಇದೆ. ಈ ಆಲೋಚನೆಯಿಂದಾಗಿ ತರ್ಕವೂ ಸಾಧ್ಯವಾಗುತ್ತದೆ.
ಈ ಮನಸ್ಸಿಗೆ ಇರುವ ಆಲೋಚನಾ ಶಕ್ತಿಯ ಪರಿಣಾಮವಾಗಿ ತನ್ನ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ಚಟುವಟಿಕೆಗಳನ್ನು ತಾನೇ ನೋಡಿಕೊಳ್ಳಬಲ್ಲ. ಹಾಗೆಯೇ ಇತರರದನ್ನು ಗಮನಿಸಬಲ್ಲ. ತನ್ನ ಹಿಂದಿನದನ್ನು ಸ್ಮರಣೆಗೆ ತಂದುಕೊಂಡು ಅದನ್ನು ದಾಖಲು ಮಾಡಲು ಸಾಧ್ಯವಾಗುತ್ತದೆ. ಮುಂದಿನದನ್ನು ದೂರದೃಷ್ಟಿಯಿಂದ ಗ್ರಹಿಸಿ ಅದಕ್ಕೆ ಯೋಜನೆಗಳನ್ನು ರೂಪಿಸಿಕೊಳ್ಳಲೂ ಸಾಧ್ಯವಾಗುತ್ತದೆ.
ಒಂದು ಸ್ಪಷ್ಟವಾಗಿ ತಿಳಿದುಕೊಳ್ಳೋಣ. ಪ್ರಾಣಿಗಳ ಪ್ರವೃತ್ತಿಯೂ ಮತ್ತು ಮನುಷ್ಯನ ವೈಚಾರಿಕ ಮನಸ್ಸೂ ಏಕಕಾಲದಲ್ಲಿ ನಮ್ಮಲ್ಲಿ ಅಸ್ತಿತ್ವದಲ್ಲಿರುವುದರಿಂದಲೇ ಮನುಕುಲ ವಿಕಾಸದ ಚರಿತ್ರೆಯಲ್ಲಿ ಸಂಘರ್ಷಗಳನ್ನು, ದಾಳಿಗಳನ್ನು, ಯುದ್ಧಗಳನ್ನು ಸತತವಾಗಿ ಕಾಣುತ್ತಿದ್ದೇವೆ. ಅಹಂಕಾರ ಎನ್ನುವುದು ವ್ಯಕ್ತಿಗತವಾಗಿರುವ ಒಂದು ಸ್ವಕೇಂದ್ರಿತ ಭಾವ. ಈ ಭಾವವು ವರವೂ ಹೌದು, ಶಾಪವೂ ಹೌದು. ಈ ಅಹಂಕಾರದ ಭಾವವನ್ನು ಮನುಷ್ಯ ತನ್ನಲ್ಲಿ ಮತ್ತು ತನ್ನಂತೆಯೇ ಇರುವ ಇತರರಲ್ಲಿ ಸ್ಪಷ್ಟವಾಗಿ ಗುರುತಿಸಿದ.
ಹಾಗೂ ಅದರಿಂದಾಗುವ ಒಳಿತು ಮತ್ತು ಕೆಡಕುಗಳನ್ನೂ ಕೂಡಾ ಕಂಡುಕೊಂಡ. ಆದರೆ ಕೆಡುಕು ಎನ್ನುವುದು ಸಹಜವಾಗಿ ಆಗ್ರಹ ಮತ್ತು ಆಕ್ರೋಶಭರಿತವಾಗಿದ್ದು ರಭಸವನ್ನು ಹೊಂದಿರುತ್ತದೆ. ಒಳಿತು ಎನ್ನುವುದು ರಭಸ ರಹಿತವಾಗಿ ಸಾತ್ವಿಕವಾಗಿರುವುದರಿಂದ, ಅಗ್ರಗಾಮಿಯಾಗಿಲ್ಲದಿರುವುದರಿಂದ ಅದು ಕೆಡುಕಿನ ರಭಸವನ್ನು ತಡೆಯಲಾರದ ಕಾರಣದಿಂದ ಒಂದು ಕ್ರಮಕ್ಕೆ ಮನುಷ್ಯನ ಮನವನ್ನು ಒಳಪಡಿಸಲೇ ಬೇಕಾಗಿರುವಂತಹ ಅನಿವಾರ್ಯವಿತ್ತು.
ಆದಿಮ ಕಾಲದಲ್ಲಿ ಮನುಷ್ಯರು ಮನುಷ್ಯರಿಂದಲೇ ಎರಡು ಬಹುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದರು. ಒಂದು ಬಲಶಾಲಿ ಮನುಷ್ಯರು ನಿರ್ಬಲರನ್ನು ನಿಗ್ರಹಿಸುತ್ತಿದ್ದರು. ಈ ನಿರ್ಬಲರು ದಾರ್ಷ್ಟ್ಯದ ಮತ್ತು ಆಕ್ರಮಣಕಾರಿಯಾದ ಬಲಶಾಲಿಗಳನ್ನು ಎದುರಿಸಲು ಸಂಘಟಿತರಾಗಬೇಕಿತ್ತು. ಅವರೂ ಶಕ್ತಿಶಾಲಿಗಳಾಗಬೇಕಿದೆ ಎಂಬುದನ್ನು ಕೆಲವರು ಮನಗಂಡರು.
ಆದರೆ ಇವರೂ ಬರಿದೇ ಶಕ್ತಿಶಾಲಿಗಳಾಗಿಬಿಟ್ಟಿದ್ದರೆ ಈ ಮೊದಲ ಕೇಡಿನ ವರ್ತನೆಗಳ ಶಕ್ತಿಶಾಲಿಗಳಂತೆಯೇ ವರ್ತಿಸುವ ಸಾಧ್ಯತೆಯೂ ಇರುವುದರಿಂದ ಒಂದು ಕ್ರಮದೊಳಗೆ ಅವರನ್ನು ಅಡಕ ಮಾಡಿಸುವ ಒಂದು ಅನಿವಾರ್ಯತೆ ಇತ್ತು. ಆ ಅನಿವಾರ್ಯತೆಯ ಫಲವೇ ಧರ್ಮ. ನಿರ್ಬಲರ ಮೇಲಿನ ಅನುಕಂಪವೇ ಧರ್ಮಗಳ ಉಗಮಕ್ಕೆ ಕಾರಣವಾಯಿತು.
ಪಶುತನದ ಕೆಂಡ
ಮನುಷ್ಯನ ಆಲೋಚನೆಗಳನ್ನು ಒಂದು ನಿರ್ಧಿಷ್ಟ ಕ್ರಮಕ್ಕೆ ಒಳಪಡಿಸಿದರೆ ಅಷ್ಟಕ್ಕೆ ಸುಮ್ಮನಾಗುವ ವರ್ಗವಲ್ಲ ಈ ಮಾನವ. ಅವನಲ್ಲಿ ಸ್ವಾಭಾವಿಕವಾದಂತಹ ಪಶುಪ್ರವೃತ್ತಿ ಸದಾ ಬೂಧಿ ಮುಚ್ಚಿದ ಕೆಂಡದಂತೆ ಇದ್ದೇ ಇರುತ್ತದೆ. ಅದಕ್ಕಾಗಿ ಆದಿಮ ಕಾಲದ ಪ್ರಕೃತಿಯ ವಿದ್ಯಮಾನಗಳಿಗೆ ಪಟ್ಟ ಭಯದ ಪ್ರತಿಫಲವಾಗಿ ಹುಟ್ಟಿದ ದೇವರ ಪರಿಕಲ್ಪನೆಯನ್ನು ಜಾಣ ನಾಯಕ ತೆಗೆದುಕೊಂಡ.
ತನ್ನನ್ನು ಪ್ರವಾದಿಯೆಂದು ಕರೆಯಿಸಿಕೊಂಡ ಆ ಜಾಣ ಮತ್ತು ಕರುಣಾಮಯಿ ಮನುಷ್ಯ ತನ್ನ ಸೂಕ್ಷ್ಮಗ್ರಹಿಕೆಗಳನ್ನು, ಕ್ರಮಕ್ಕೊಳಪಡಿಸುವ ರೀತಿಗಳನ್ನು ಮತ್ತು ದೂರಾಲೋಚನೆಗಳನ್ನು ತನ್ನೊಡನೆ ಇರುವವರಿಗೆ ದಾಟಿಸಲು ದೇವರನ್ನು ಮಾಧ್ಯಮವನ್ನಾಗಿಸಿಕೊಂಡ. ಇಲ್ಲವಾದರೆ ಇವನೂ ನಮ್ಮಂತೆಯೇ ಇರುವವನಾದರೆ ನಾವೇಕೆ ಇವನ ಮಾತನ್ನು ಕೇಳಬೇಕು? ಇದು ಮನುಷ್ಯನ ಸಾಧಾರಣ ಅಹಂಕಾರದ ಧೋರಣೆ.
ಅವನು ತಮ್ಮ ಜೀವನದ ಕ್ರಮವನ್ನೇ ನಿರ್ದೇಶಿಸಲು ಹೊರಟಿದ್ದಾನೆಂದರೆ ಒಂದೋ ಅವನು ಅತಿಮಾನುಷನಾಗಿರಬೇಕು, ಅಥವಾ ಮಾನವನಲ್ಲದೇ ಸರ್ವಶಕ್ತಿ ಇರುವಂತಹ ದೇವರು ತಾನು ಆಯ್ದ ಅವನ ಮೂಲಕ ತನ್ನ ಮಾತುಗಳನ್ನು ಹೇಳಬೇಕು. ಬೈಬಲ್ಲಂತೂ ಈ ವೈಚಾರಿಕತೆಯನ್ನು ತನ್ನ ಆದಿಕಾಂಡದಲ್ಲಿ ಬಹಳ ಸುಂದರವಾದ ಕಥನದ ರೂಪಕದಲ್ಲಿ ಕಟ್ಟಿಕೊಡುತ್ತದೆ.
ತನ್ನ ಶಕ್ತಿಯ ಬಗ್ಗೆ ಅಭಿಮಾನವಿದ್ದು ಅಹಂಕಾರದಿಂದ ತನ್ನ ದಾರ್ಷ್ಟ್ಯವನ್ನು ಪ್ರದರ್ಶಿಸುವ ಮನುಷ್ಯನ ಶಕ್ತಿಗೆ ಎಟುಕಲಾರದ ಶಕ್ತಿಯಾದ ದೇವರ ಪರಿಕಲ್ಪನೆ ಅವನನ್ನು ಭಯದಲ್ಲಿ ಹಿಡಿದಿಡಲೇ ನಂತರ ಬಳಕೆಯಾದದ್ದು. ಹಾಗೆಯೇ ಧರ್ಮವು ಈ ದಾರ್ಷ್ಟ್ಯದ ಮಾನವರನ್ನು ಕ್ರಮಗೊಳಿಸಿ ನಿರ್ಬಲರನ್ನು ರಕ್ಷಿಸಲೆಂದೇ ಜಾಣನೂ, ಅನುಭಾವಿಯೂ, ಅನುಕಂಪಪೂರಿತನೂ ಆದ ಮನುಷ್ಯನ ದಯೆಯಿಂದ ರೂಪುಗೊಂಡಿದ್ದು.
ಒಟ್ಟಿನಲ್ಲಿ ಇಷ್ಟು ತಿಳಿದುಕೊಳ್ಳೋಣ. ಭಯವೇ ದೇವರ ಮೂಲ. ದಯವೇ ಧರ್ಮದ ಮೂಲ.
ಇನ್ನು ಹಲವಾರು ಆಯಾಮಗಳಿಂದ ಧರ್ಮವನ್ನು ವಿವಿಧ ದೇಶಗಳಲ್ಲಿ, ವಿವಿಧ ಕಾಲಗಳಲ್ಲಿ ವಿವರಿಸಲು ಯತ್ನಿಸಿದ್ದಾರೆ. ಆ ವಿವರಣೆಗಳಿಗೂ ಆಯಾ ಪ್ರದೇಶಗಳ ಸಾಮಾಜಿಕ ವಿದ್ಯಮಾನಗಳು ಕಾರಣವಾಗಿರುತ್ತವೆ. ಅವುಗಳನ್ನು ಮುಂದೆ ಸಂದರ್ಭಾನುಸಾರ ನೋಡೋಣ.
ಒಟ್ಟಾರೆ ಧರ್ಮ, ಸಂಪ್ರದಾಯ, ನಂಬಿಕೆ ಇತ್ಯಾದಿಗಳ ಸಂಕೋಲೆಯಲ್ಲಿ ದೇವರನ್ನು ಬಂಧಿಸಿ, ತಾವು ಸೃಷ್ಟಿಸಿದ ದೇವರನ್ನು ತಮ್ಮ ಸೃಷ್ಟಿಕರ್ತನನ್ನಾಗಿ ಮಾಡಿಕೊಂಡು, ತನ್ನ ಪ್ರತಿರೂಪದಂತೆ ದೇವರು ತಮ್ಮನ್ನು ಸೃಷ್ಟಿಸಿದ ಎಂದು ತಮ್ಮ ಪ್ರತಿರೂಪವನ್ನು ಅವನಿಗೆ ಆರೋಪಿಸಿದ ಹೆಗ್ಗಳಿಗೆ ನಮ್ಮ ಮಾನವ ಜನಾಂಗಕ್ಕಿದೆ.
ಮಾನವನ ಶಕ್ತಿಯ ವಿಕಾಸ, ವಿಸ್ತರಣೆಯ ಮತ್ತು ಸಾಮರ್ಥ್ಯದ ಭೀಕರತೆಗಳನ್ನು ಮಾನವನೇ ಅರಿಯುತ್ತಿದ್ದಂತೆ, ಮಾನವನೇ ಇದನ್ನು ಒಂದು ತಹಂಬದಿಗೆ ತರಲು ಮತ್ತೊಂದು ಪರಿಕಲ್ಪನೆಯನ್ನು ಸೃಷ್ಟಿಸಿದ ಅಥವಾ ಸೃಷ್ಟಿಯಾಗಿದ್ದ ದೇವರ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ. ಈ ದೇವರ ಪರಿಕಲ್ಪನೆಯು ನಿರ್ಬಲರಿಗೆ ಭರವಸೆಯಾದರೆ, ಮತ್ತೂ ಕೆಲವರಿಗೆ ಶೋಷಣೆಯ ಅಸ್ತ್ರವಾಗಿದ್ದು ಮಾತ್ರ ವಿಪರ್ಯಾಸ.
ವಿಕಾಸವಾದ ಮಾನವನ ಬುದ್ಧಿಮತ್ತೆ
ಭೌತಿಕವಾಗಿ ಮಾನವನ ಶಕ್ತಿಯ ವಿಕಾಸವಾದದ್ದೇನೂ ನಮಗೆ ಕಾಣುವುದಿಲ್ಲ. ಸಹಸ್ರಾರು ವರ್ಷಗಳ ಹಿಂದೆ ಇದ್ದಂತಹ ಮನುಷ್ಯನ ದೈಹಿಕ ಸಾಮರ್ಥ್ಯವನ್ನು ಅಥವಾ ಅದೇ ಶಾರೀರಿಕ ಬಲದ ಉದಾಹರಣೆಗಳನ್ನು ಈಗಲೂ ಕಾಣಬಹುದು. ಆದರೆ ಜೀವನ ಪದ್ಧತಿ, ಆಹಾರ ಮತ್ತು ಉಡುಗೆ ತೊಡುಗೆಗಳ ಪದ್ಧತಿಗಳು, ತಂತ್ರಜ್ಞಾನದ ಬಳಕೆಗಳು ಒಂದೇ ಬಗೆಯಾಗಿ ಕಾಣುವುದಿಲ್ಲ.
ಅದೇ ಹಳೆಯ ಬಗೆಯ ಶರೀರಗಳು, ಅವೇ ಕಣ್ಣುಗಳು, ಅವೇ ಕೈಗಳು, ಅವೇ ಕರಳುಗಳು, ಯಕೃತ್ತು ಇತ್ಯಾದಿ, ಆದರೆ ಅವುಗಳು ಬಳಸುತ್ತಿರುವ ವಸ್ತುಗಳು, ಸೇವನೆಗಳು ಮತ್ತು ಪಡೆಯುತ್ತಿರುವ ಪೋಷಣೆಗಳಲ್ಲಿ ಧ್ರುವಾಂತರ ಮತ್ತು ಯುಗಾಂತರಗಳ ವ್ಯತ್ಯಾಸಗಳನ್ನು ಕಾಣಬಹುದು. ಆಗಿಲ್ಲದ ತಂತ್ರಜ್ಞಾನ ಈಗಿದೆ. ಆಗಿಲ್ಲದ ಜೀವನಪದ್ಧತಿ ಈಗ ಬಳಕೆಯಲ್ಲಿದೆ.
ಈಗ ನಾವು ಉಪಯೋಗಿಸುತ್ತಿರುವ, ಉಪಭೋಗಿಸುತ್ತಿರುವ ಆವಿಷ್ಕಾರದ ಫಲಗಳು ದೀರ್ಘಕಾಲದ, ಹಲವು ಜನಗಳ ಪ್ರಯತ್ನಗಳ, ತಪ್ಪು ಮತ್ತು ಪ್ರಯತ್ನಗಳಿಂದ ರೂಪುಗೊಂಡಿರುವವೇ. ಹಾಗೆಯೇ ನಮ್ಮ ಮುಂದಿನ ಪೀಳಿಗೆಗಳ ಬಳಕೆ ಮತ್ತು ಜೀವನ ಪದ್ಧತಿಯಲ್ಲಿ ಇನ್ನೂ ಮುಂದುವರಿದ ಅಥವಾ ವಿಕಸಿತ ಬದಲಾವಣೆಗಳನ್ನು ಕಾಣುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಆ ರೀತಿಯ ಬದಲಾವಣೆಗೆ ತಮ್ಮ ಬುದ್ಧಿ ಅಥವಾ ಮಿದುಳಿನ ಸಾಮರ್ಥ್ಯದ ಬಳಕೆಯೇ ಮತ್ತು ಅದರ ವ್ಯಾಪ್ತಿಯ ಅಪಾರ ಬಳಕೆಯೇ ಕಾರಣವಲ್ಲದೇ ಬೇರೇನೂ ಅಲ್ಲ. ಹಾಗೆಯೇ ಚಿಂತನಾ ಕ್ರಮ ಮತ್ತು ವಿಚಾರ ಧಾಟಿಯೂ ಕೂಡ ಬದಲಾಗುತ್ತಾ ಬಂದಿತು. ಆಗಿಲ್ಲದ ದೇವರು, ಧರ್ಮ, ನಂಬಿಕೆಗಳು ಈಗೆಲ್ಲಿಂದ ಬಂದವು? ಅವು ಹೇಗೆ ಬದಲಾಗದಂತಹ ಸತ್ಯವಾಯಿತು? ಯಾವ ದೇವರೂ, ಧರ್ಮವೂ ಈ ಜಗತ್ತಿನ ಸೃಷ್ಟಿಯಿಂದ ಇರಲಿ, ಮನುಷ್ಯನ ಸೃಷ್ಟಿಯಿಂದಲೇ ಇರಲಿಲ್ಲ.
ಮನುಕುಲ ವಿಕಾಸದ ಯಾವುದೋ ಒಂದು ಹಂತದಲ್ಲಿ ತನ್ನ ಆಲೋಚನೆಗಳಿಂದ ಉತ್ಪನ್ನವಾದ ವಿಚಾರಗಳಿಂದ ದೇವರು ಜಗತ್ತನ್ನು ಸೃಷ್ಟಿಸಿದನೆಂಬುದನ್ನು ಮನುಷ್ಯ ಹೇಗೆ ಗ್ರಹಿಸಿದ? ಕಾಣದ ದೇವರನ್ನು ಯಾರು, ಹೇಗೆ ಕಂಡ? ದೇವರೆಂಬುದು ಗ್ರಹಿಸಿದ, ವಿಚಾರ ಮಾಡಿದ, ಕಲ್ಪಿಸಿಕೊಂಡ, ವಿವಿಧ ಸತ್ವ, ಸಾರ, ಶಕ್ತಿಗಳಿಗೆ ಆರೋಪಿಸಿದಂತಹ ಪರಿಕಲ್ಪನೆಯೇ ಹೊರತು ಎಂದಿಗೂ ಸಾಕಾರಸ್ತಿತ್ವದಲ್ಲಿ ಕಾಣುವಂತಹ ಸತ್ಯವೇನಲ್ಲ.
ಆದರೂ ವಿಕಾಸವಾಗಿಸಲು ಒಪ್ಪದ ದೇವರ ಮತ್ತು ಧರ್ಮವನ್ನು, ಭಿನ್ನ ಬೇಧಗಳನ್ನು ಉಂಟು ಮಾಡುವ ಅವುಗಳ ಪ್ರಭಾವವು ಮನುಕುಲದ ಮೇಲೆ ಕಂಡೇ ಅದನ್ನು ಸುಧಾರಿಸಲು ಯತ್ನಿಸಿದರು. ಸಂಕೀರ್ಣವಾಗಿರುವ ಆ ನಿರಾಕಾರ ಮತ್ತು ಅಸಂಗತ ಪರಿಕಲ್ಪನೆಗಳನ್ನು ಸರಳೀಕರಣಗೊಳಿಸಿ ತಮ್ಮ ಸಹಜೀವಿಗಳನ್ನು ಒಂದು ಮಾನವೀಯ ಮತ್ತು ಉದಾರವಾದ ನೆಲೆಗಟ್ಟಿಗೆ ತರಲು ಶ್ರಮಿಸಿದರು.
ಆ ದೇವರ ಪರಿಕಲ್ಪನೆಗಳು ಜನಜೀವನದೊಳಗೆ ಅದೆಷ್ಟು ಹಾಸುಹೊಕ್ಕಾಗಿದ್ದವೆಂದರೆ, ಅವನ್ನು ನಿರಾಕರಿಸಿದರೆ, ಸುಧಾರಕರನ್ನೇ ತಿರಸ್ಕರಿಸುವ ಎಲ್ಲಾ ಸಾಧ್ಯತೆಗಳಿದ್ದವು. ಆದ್ದರಿಂದ ಆ ಪರಿಕಲ್ಪನೆಗಳನ್ನು ಸುಧಾರಿಸಲು, ತಮ್ಮ ಮುಂದುವರಿದ ಮತ್ತು ವಿಕಸಿತವಾದ ಚಿಂತನೆಗಳಿಂದ ವಿವರಿಸಲು, ಅರ್ಥ ನೀಡಲು ಪ್ರಯತ್ನಿಸಿದರು.
ಜೀವಂತವಿರುವುದರ ಲಕ್ಷಣವೇ ಬೆಳವಣಿಗೆ ಮತ್ತು ವಿಕಾಸ. ಆದರೆ, ತಮ್ಮದೇ ಆದಂತಹ ಕಾರಣಗಳಿಂದ ಈ ವಿಕಾಸವನ್ನಾಗಲಿ, ಬೆಳವಣಿಗೆಯನ್ನಾಗಲಿ ಒಪ್ಪದ ಮೂಲಭೂತವಾದಿಗಳು ಅವರನ್ನೇ ನಾಶಗೊಳಿಸಿದರು. ಅಥವಾ ಅವರ ನಂತರ ತಮ್ಮ ತೆಕ್ಕೆಗೇ ಅವರ ಚಿಂತನೆಗಳನ್ನೂ ಎಳೆದುಕೊಂಡು ಬಿಟ್ಟರು.
ದೇವರ ಸುಧಾರಕರು
ಕ್ರೈಸ್ತರ ದೇವರ ಪರಿಕಲ್ಪನೆಯ ಮೂಲ ಬ್ಯಾಬಿಲೋನಿಯನ್ನಿನ ಮಿಥಾಲಜಿಯ ಆಧಾರಿತ ವಿಚಾರಗಳಿಂದ ಮೂಡಿ, ಆದಮ, ಹವ್ವರಂತಹ ಆದಿ ಮಾನವರೂ ಮೊದಲ್ಗೊಂಡು ಯಹೂದಿಗಳ ಸಾಂಪ್ರದಾಯಿಕ ನಂಬುಗೆಗೆ ಎಡೆ ಮಾಡಿತ್ತು. ಅವುಗಳು ವಿಕಸಿತವಾದ ಹಂತಗಳು ಈಗ ನಮಗೆ ಬೇಡ. ಆದರೆ, ಯೇಸು ಎಂಬ ಸಮಾಜ ಸುಧಾರಕ ಅವರ ಪರಿಕಲ್ಪನೆಗಳನ್ನು ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ತಾತ್ವಿಕವಾಗಿ ಸುಧಾರಿಸುವ ನಿಟ್ಟಿನಲ್ಲಿ ಮಾನವತೆಯ ಮತ್ತು ಔದಾರ್ಯದ ನೆಲೆಗಟ್ಟಿನ ಸಮಾಜದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದ.
ಈಗಲೂ ಬಹಳಷ್ಟು ಕ್ರೈಸ್ತರು ಉಪಯೋಗಿಸುವ ಶಬ್ಧ ‘ಗಾಡ್ ಫಿಯರ್’. ದೇವರು ಎಂಬುವುದಕ್ಕೆ ಇಷ್ಟವಾಗದ್ದನ್ನು ಮಾಡದೇ ಹೋದರೆ ಅದರ ಆಗ್ರಹಕ್ಕೆ ಗುರಿಯಾಗುತ್ತೇವೆಂಬ ಪರಿಕಲ್ಪನೆ ಜನರು ನೈತಿಕವಾಗಿ ಬದುಕುವುದಕ್ಕೂ, ದುರ್ಮಾಗಿಗಳಾಗದೇ ಇರುವುದಕ್ಕೂ ಸಾಧ್ಯವಾಗುವುದಕ್ಕೆ ಸಹಾಯಕವಾದದ್ದು. ಉದ್ದೇಶ ಒಳ್ಳೆಯದೇ ಆದರೂ, ನಕಾರಾತ್ಮಕವಾದ ಅನುಸಂಧಾನದ ಬದಲಾಗಿ ಭೀತಿಯನ್ನು ಪ್ರೀತಿಗೆ ಬದಲಿಸಲು ಯೇಸು ಯತ್ನಿಸಿದ.
ಭೀತಿಯನ್ನು ಪ್ರೀತಿಯನ್ನಾಗಿ ಬದಲಿಸುವುದೂ ಕೂಡ ಅತಿ ಉನ್ನತವಾದ ಕ್ರಾಂತಿಕಾರಕ ನಡೆಯೇ ಆಗಿತ್ತು. ನಿರಾಕಾರವಾಗಿರುವ ದೇವರನ್ನು ತಂದೆಯೆಂಬಂತೆ ಭಾವನಾತ್ಮಕವಾಗಿ ಸಾಕಾರಗೊಳಿಸಿ, ಪ್ರೀತಿ ಮತ್ತು ವಾತ್ಸಲ್ಯಪೂರ್ಣವಾದ ತಂದೆಯಂತೆ ಅವನನ್ನು ಬಿಂಬಿಸಿ, ಅವನ ಇಷ್ಟಕ್ಕೆ ನಡೆದುಕೊಂಡು ಪ್ರೇಮಪೂರ್ಣ ಮತ್ತು ಔದಾರ್ಯಪೂರ್ಣವಾದ ಜನರ ಸಮಾಜವನ್ನು ಉಂಟುಮಾಡಲು ಯತ್ನಿಸಿದ.
ಭೀತಿಯ ಸ್ಥಾನದಲ್ಲಿ ಪ್ರೀತಿಯು ಬಂದಿತಾದರೂ, ಧಾರ್ಮಿಕತೆಯಾಗಲಿ, ಸಾಂಪ್ರದಾಯಕ ಧೋರಣೆಗಳಾಗಲಿ ಅದನ್ನು ಒಪ್ಪಲು ತಯಾರಿರಲಿಲ್ಲ. ರಾಜಕೀಯಪ್ರೇರಿತ ಅಥವಾ ಸ್ವಸ್ಥಾನಕೇಂದ್ರಿತರಾಗಿದ್ದ ಅಂದಿನ ಪುರೋಹಿತರೇ ಯೇಸುವಿನ ವಿಚಾರಗಳನ್ನು ಅವನ ದೇಹ ಸಮೇತ ನಾಶ ಮಾಡಲು ಯತ್ನಿಸಿ ಸಫಲರೂ ಆದರು. ಆದರೆ ಕ್ರೈಸ್ತರಲ್ಲಿ ಇಂದಿಗೂ ಪಾದ್ರಿಗಳೆಂಬ ಪುರೋಹಿತರು ಇದ್ದಾರೆ ಎಂಬುದು ವಿಪರ್ಯಾಸವೋ, ಅವಶ್ಯಕವೋ, ವ್ಯಂಗ್ಯವೋ; ವಿಭಿನ್ನ ನೆಲೆಗಳ ವಿಶ್ಲೇಷಣೆಗಳಲ್ಲಿ ವಿಭಿನ್ನ ರೀತಿಗಳಲ್ಲಿ ವ್ಯಕ್ತವಾಗುತ್ತದೆ.
ಆದರೆ ಆ ಪಾದ್ರಿಗಳು ಎಂತವರೆಂಬುದು ಧರ್ಮಾಧಾರಿತವಾದುದಲ್ಲ, ವ್ಯಕ್ತಿಗತವಾದದು. ಧರ್ಮದ ಲಾಂಛನದಡಿಯಲ್ಲಿ ತಮ್ಮ ಮಾನವೀಯ ಮತ್ತು ಉದಾರವಾದ ನೆಲೆಗಟ್ಟಿನ ಆಧಾರದಲ್ಲಿ ಧಾರ್ಮಿಕತೆಯನ್ನು ವಿವರಿಸುತ್ತಾರೆ ಮತ್ತು ಆಚರಿಸುತ್ತಾರೆ.
ಇರಲಿ, ಮುಂದೆ ಕ್ರೈಸ್ತ ಧರ್ಮದ ಅವತರಣವಾದ ಮೇಲೆ ಪಿತ, ಸುತ ಮತ್ತು ಪವಿತ್ರಾತ್ಮಗಳೆಂಬ ತ್ರಿಮೂರ್ತಿಯ ಪರಿಕಲ್ಪನೆಯಿಂದ ಸೈದ್ಧಾಂತಿಕವಾಗಿ ಮತ್ತಷ್ಟು ಸಂಕೀರ್ಣಗೊಂಡಂತಹ ವಿಷಯದ ಉಗಮವಾಯ್ತು. ತಮ್ಮನ್ನು ಪಾಪಿಯೆಂದು ನಕಾರಾತ್ಮಕ ಧೋರಣೆಯನ್ನೂ ಮತ್ತು ಪ್ರೀತಿಯೆಂಬ ಸಕಾರಾತ್ಮಕ ಧೋರಣೆಯನ್ನೂ ಒಟ್ಟೊಟ್ಟಿಗೇ ಸ್ವೀಕರಿಸಿದ್ದಾರೆ.
ಒಂದು ವೇಳೆ ಯೇಸುವೆಂಬ ಸುಧಾರಕನಿಗೆ ತನ್ನ ವಿಷನ್ ಮತ್ತು ಮಿಷನ್‍ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿದ್ದರೆ, ಇಂದು ಕ್ರೈಸ್ತಮತವೆಂಬುದೇ ಇರುತ್ತಿರಲಿಲ್ಲವೆಂದು ನನ್ನ ಗ್ರಹಿಕೆ. ಪಿತ, ಸುತ ಮತ್ತು ಪವಿತ್ರಾತ್ಮಗಳೂ ಇರುತ್ತಿರಲಿಲ್ಲ. ಆತನ ಸಾವಿನಾಧಾರಿತವಾದ ಆರಾಧನೆಗಳಾಗಲಿ, ಸಂಪ್ರದಾಯಗಳಾಗಲಿ ಇರುತ್ತಿರಲಿಲ್ಲ. ಪೂರ್ಣವಾಗಿ ಸಂವಹಿಸದ ಯೇಸುವಿನ ವಿಚಾರಗಳ ಅಲ್ಪ ಗ್ರಹಿಕೆಗಳು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗಳಾಗುತ್ತಾ ವಿಷಯಾಂತರವೇ ಆಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಮನುಕುಲದಲ್ಲಿ ಶೋಷಣೆಗೆ ಒಳಗಾಗುವ ನಿರ್ಬಲರನ್ನು ಮಾನಸಿಕವಾಗಿ ಮತ್ತು ಆತ್ಮಿಕವಾಗಿ ಸದೃಢಗೊಳಿಸಲು ಉದ್ದೇಶಿಸಿದ್ದ ಯೇಸುವಿನ ಬೋಧನೆಗಳು ಮತ್ತು ದೌರ್ಜನ್ಯ ಹಾಗೂ ನಿರ್ಲಜ್ಜ ಕ್ರೌರ್ಯ ಸಂಪ್ರದಾಯದ ವಿರುದ್ಧವಾದ ಸಾತ್ವಿಕವಾದ ಕ್ರಾಂತಿಯಿಂದ ಕೂಡಿದ ಆತನ ಜೀವನ ಚರಿತ್ರೆಯ ಪರಿಕ್ಷಿಪ್ತ ರೂಪ ಬೈಬಲ್.
ಬೈಬಲ್ ಕ್ರಿಸ್ತನೆಂಬ ಜಾಣ ಮತ್ತು ದಯಾಹೃದಯದ ಒಂದು ಪರಿಚಯವನ್ನಷ್ಟೇ ನೀಡುವುದು. ಆತನ ವಾಸ್ತವ ರೂಪವನ್ನಲ್ಲ. ಹಲವಾರು ಬೈಬಲ್ಲುಗಳಿವೆ ಅವುಗಳಲ್ಲಿರುವ ಹೊಟ್ಟು ಮತ್ತು ಕಾಳುಗಳನ್ನು ಬೇರ್ಪಡಿಸುವುದು ಮತ್ತು ಅದರಿಂದ ಕ್ರಿಸ್ತನೆಂಬ ಮನುಕುಲದ ಕರುಣೆಯ ಬೀಜವನ್ನು ಹೆಕ್ಕಿ ತೆಗೆಯುವುದು ಸಾಧ್ಯ. ಆದರೆ ಸಧ್ಯಕ್ಕೆ ಈ ಲೇಖನಕ್ಕೆ ಆ ಉದ್ದೇಶವಿಲ್ಲ. ಮುಂದೆ ಕ್ರೈಸ್ತಧರ್ಮದ ಚರಿತ್ರೆಯ ಸಮಯದಲ್ಲಿ ಇದನ್ನು ವಿವರವಾಗಿ ನೋಡೋಣ.
ಇದೊಂದು ಉದಾಹರಣೆಯಷ್ಟೇ! ಯಾವುದೇ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಸುಧಾರಕನಿಗೆ ಹಲವಾರು ರಾಜಕೀಯ, ಸಾಮಾಜಿಕ ಅಡೆತಡೆಗಳಿದ್ದು ಅಷ್ಟು ಸುಲಭವಾಗಿ ಆತನ ದೃಷ್ಟಿಯಂತೆ ತನ್ನ ಮಿಷನ್‍ನನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಸುಧಾರಕರ, ಹೋರಾಟಗಾರರ ವಿಫಲ ಮಿಷನ್‍ಗಳ ಮುಂದುವರಿಕೆಗಳೇ ಧರ್ಮಗಳಾಗುವವು.
ಆದರೆ ಅವು ವಿಕಾಸಕ್ಕೆ ಮಾರ್ಗವಾಗದೇ, ಮಂಡೂಕಗಳ ಕೂಪಕ್ಕೆ ಮತ್ತೊಂದು ಕೊಡುಗೆಯಾಗುವುದು ಮನುಕುಲದ ದುರಾದೃಷ್ಟ. ಬುದ್ಧ, ಆದಿನಾಥ, ಮಹಾವೀರ, ಮಹಮದ್, ನಾನಕ್, ಬಸವ, ಬಹಾಯ್ ಯಾರೇ ಆಗಲಿ ಇದರಿಂದ ಹೊರತಲ್ಲ.
ಬೆಳವಣಿಕೆ ಮತ್ತು ವಿಕಾಸದ ಹಾದಿಯಲ್ಲಿಯೇ ಇರುವ ಜಗತ್ತಿನಲ್ಲಿ ಹೊಸ ಪ್ರವಾದಿಗಳು, ತೀರ್ಥಂಕರರು ಹುಟ್ಟಲಾರರೇಕೆ? ಹುಟ್ಟಿದರೂ, ಘೋಷಿಸಿಕೊಂಡರೂ ಕೇಳುವವರಾರು? ಒಪ್ಪುವುದಾದರೂ ಹೇಗೆ ಸಾಧ್ಯ?
ಹಾಗೊಮ್ಮೆ ಯಾರಾದರೂ ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಮುಂದಾದರೂ ಜನ ಸಮೂಹ ಅವನ ಚಿಂತನೆಗಳ ಧಾರೆಯನ್ನು ಮೆಚ್ಚುವುದಕ್ಕೆ ಇಚ್ಛಿಸುವುದಿಲ್ಲ.
ತಮ್ಮ ಸಮಕಾಲೀನ ಯಾವುದೋ ಈ ವ್ಯಕ್ತಿಯನ್ನು ನಂಬಿಕೆಯ ಕೇಂದ್ರಕ್ಕೆ ಒಯ್ಯಲಾಗುವುದಿಲ್ಲ. ವಿಚಾರಗಳನ್ನು ಆಳಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ತಮ್ಮಂತೆ ಉಣ್ಣುವ, ಉಡುವಷ್ಟೇ ಮಾಡದೇ ಅತಿಮಾನುಷವಾದುದನ್ನು ಮಾಡಿದರೆ ಒಂದು ಹಂತಕ್ಕೆ ಒಪ್ಪಲು ಸಾಧ್ಯ! ಈ ಕಥೆ ಇಂದಿನದು ಮಾತ್ರವಲ್ಲ. ಅನಾದಿಕಾಲದಿಂದಲೂ ಹಾಗೆಯೇ ಇರುವುದು.
ಹಾಗಾಗಿಯೇ ಎಂದೋ, ಯಾವುದೋ ಕಾಲದಲ್ಲಿ ಏನೋ ಮಾಡಿ ಸತ್ತವರಷ್ಟೇ ದೇವರಾಗುತ್ತಾರೆ. ಈಗ ನಾನು ದೇವರೆಂದು ಘೋಷಿಸಿಕೊಂಡವರೆಲ್ಲಾ ಅಪಹಾಸ್ಯಕ್ಕೆ, ಟೀಕೆಗೆ ಅಥವಾ ವಿಮರ್ಶೆಗೆ ಗುರಿಯಾಗುತ್ತಾರೆ. ತಾನು ದೇವರೆನ್ನದೇ ಬರಿಯ ದೇವರ ಮಗನೆಂದು ಕರೆದುಕೊಂಡ ಕ್ರಿಸ್ತನಿಗೇ ಅಪಾಯ ತಪ್ಪಿರಲಿಲ್ಲ.
ಪುಟ್ಟಪರ್ತಿಯ ಸತ್ಯಸಾಯಿಬಾಬಾನ ಸಮಕಾಲೀನರಾದ ಮತ್ತು ಆತನ ವಿವಿಧ ವಿಷಯಗಳು ಸ್ಪಷ್ಟವಾಗಿ ತಿಳಿದಿರುವಂತಹ ಈ ನಮ್ಮ ಪೀಳಿಗೆಯು ಮುಗಿದಾದ ಮೇಲೆ ಮುಂಬರುವ ಪೀಳಿಗೆಯೊಂದು ಅವರ ಎಲ್ಲಾ ಪ್ಲಸ್ ಮತ್ತು ಮೈನಸ್ಸುಗಳನ್ನು ವಿವಿಧ ರೀತಿಗಳಲ್ಲಿ ಅರ್ಥೈಸುತ್ತಾ, ಈಗಿನ ಕೃಷ್ಣನ ಪರಿಕಲ್ಪನೆಯ ರೀತಿಯಲ್ಲಿ ಒಂದು ದೇವರನ್ನಾಗಿ ಸ್ಪಷ್ಟೀಕರಿಸಬಹುದು. ದೇವರೆನ್ನುವ ಅಭೂತಪೂರ್ವವಾದ, ಅತ್ಯದ್ಭುತವಾದ ಪರಿಕಲ್ಪನೆಗೆ ಸೇರಿಕೊಳ್ಳಲು ಮನುಷ್ಯನಿಗೆ ಹಲವು ದಾರಿಗಳುಂಟು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243