ಅಂತರಂಗ

ಧರ್ಮ ಮರ್ಮ – 10 : ಅಲ್ಲಿರುವುದು ನಮ್ಮನೆ

Published

on

  • ಯೋಗೇಶ್ ಮಾಸ್ಟರ್

ಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ ಅಂತ ಸುಂಸುಮ್ನೆ ಹೊಡೆಯೋ ಡೈಲಾಗ್‍ನೆಲ್ಲಾ ಯಾರೂ ವ್ಯಾವಹಾರಿಕವಾಗಿ ಸೀರಿಯಸ್ಸಾಗಿ ತಗೊಂಡಿರೋದನ್ನ ನಾವ್ಯಾರೂ ನೋಡೇ ಇಲ್ಲ. ಅಲ್ಲಿರೋದು ತಾನೇ ನಮ್ಮನೆ ಇಲ್ಲಿ ಸುಮ್ಮಸುಮ್ಮನೆ ಯಾಕೆ ಮನೆ ಕಟ್ಟಿಸೋದು? ಇಲ್ಲಿ ಇರೋದಕ್ಕೆ ಯಾಕೆ ಅಷ್ಟೋಂದು ಮುತುವರ್ಜಿ ವಹಿಸೋದು? ಅಂತೆಲ್ಲಾ ಅಂದ್ರೆ, ವೇದಾಂತ ಆಡೋಕೆ, ತಿನ್ನೋಕೆ ಬದನೆಕಾಯಿ ಅಂತ ಪೆಕ್ರುಪೆಕ್ರಾಗಿ ನಗ್ತಾರೆ.

ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ ಅಂತ ಶುದ್ಧ ಅಧಿಕ ಪ್ರಸಂಗದ ಮಾತು ನಿಜವಾಗಿಯೂ ಸಾವಿನ ದವಡೆಯಲ್ಲಿರುವವರ ಮನಸ್ಥಿತಿಗಳಿಗೆ ಅನ್ನಿಸೀತು. ಯಾವುದೇ ಕಾರಣಕ್ಕೆ ತಮ್ಮ ಸಾವಿನ ನಿಗಧಿತ ಸಮಯವನ್ನು ಅಥವಾ ಕಾಣುತ್ತಿರುವಂತೆಯೇ ಸಮೀಪಿಸುತ್ತಿರುವ ಸಾವನ್ನು ಎದುರಿಸುತ್ತಿರುವವರು ವೈರಾಗ್ಯ ಭಾವಕ್ಕೆ ಒಳಗಾಗುವುದನ್ನು ನಾನು ಕಂಡಿದ್ದೇನೆ.

ಕ್ಯಾನ್ಸರ್ ಬಾಧೆಯಲ್ಲಿ ಜೀವನ್ಮರಣದ ತಾಕಲಾಟವನ್ನು ಎದುರಿಸಿ ಆಸ್ಪತ್ರೆಯಿಂದ ಹೊರಗೆ ಬಂದಿದ್ದ ಆ ಸಮಯದಲ್ಲಿ ಡಾ. ಎಂ ವಸು ಮಳಲಿ ತಮ್ಮ ಬದುಕಿನ ಇರುವ ಒಲವಿನ ಕುರಿತೂ, ಸಾವಿನ ಬಗ್ಗೆ ಸೈದ್ಧಾಂತಿಕವಾಗಿ ಮಾತಾಡುವುದಿರಲಿ, ಆಲೋಚಿಸುವುದಕ್ಕೂ ನಿರಾಕರಿಸುತ್ತಿದ್ದರು.

ಒಂದು ಪಕ್ಷ ಅಂತಹದ್ದೊಂದು ಮಾತು ಬಂದಾಗ ನೇರವಾಗಿ ಹೇಳುತ್ತಿದ್ದರು, “ನಿಮಗೆ ಎಲ್ಲವೂ ಸರಿಯಿದ್ದು, ಸಾವಿನ ಬಗ್ಗೆ ಭಯವಿಲ್ಲದಿರುವುದಕ್ಕೆ ಬೇಕಾದ ಫಿಲಾಸಫಿಯನ್ನ ಮಾತಾಡ್ತೀರಿ. ಸಾವನ್ನೂ ರೋಮ್ಯಾಂಟಿಕ್ ಆಗಿ ಬಣ್ಣಿಸ್ತೀರಿ. ಆದರೆ ಅದನ್ನು ನನ್ನಂತವಳು ಓದಿದರೆ ಅದು ಹುಸಿ ಅಂತ ಚೆನ್ನಾಗೇ ಗೊತ್ತಾಗತ್ತೆ” ಎಂದು ಹೇಳಿದ್ದರು. ಈಗ ಅವರಿಲ್ಲ. ಆದರೆ ಅವರು ನಿಜಕ್ಕೂ ಮೃತ್ಯುವಿನ ದವಡೆಗೆ ಹೋಗಿ ನಂತರ ಮರಣಿಸುವ ನಡುವೆ ಒಂದಷ್ಟು ಕಾಲ ಚೆನ್ನಾಗಿಯೇ ತಮ್ಮ ಜೀವನದ ಘನತೆಯನ್ನು ಸ್ಪಷ್ಟವಾಗಿಯೇ ಎತ್ತಿ ಹಿಡಿಯುತ್ತಾ ಚಟುವಟಿಕೆಪೂರ್ಣವಾಗಿಯೇ ಬದುಕಿದ್ದರು.

ಆ ಸಮಯದಲ್ಲಿ ಅವರೊಡನೆ ಹತ್ತಿರದಿಂದಾದರೂ, ಹೊರಗಿನಿಂದ ಒಡನಾಡುತ್ತಿದ್ದಾಗ ಸಾವಿನ ಬಗ್ಗೆ ಅವರು ಕಾಣುವಂತಹ ಒಳದೃಷ್ಟಿಯನ್ನು ನನಗೆ ಕಾಣಲಾಗುತ್ತಿರಲಿಲ್ಲ. ಅವರೆಷ್ಟೇ ಆಳದ ದೃಷ್ಟಿಯನ್ನು ನಮಗೆ ನೀಡಿದರೂ, ನನ್ನಂತವನು ಹೆಚ್ಚೆಂದರೆ ಸಕಾರಾತ್ಮಕವಾಗಿ ಬದುಕನ್ನು ನೋಡುವುದು, ನಾವು ಹೆದರುವ ಸಾವನ್ನು ಜಾಣತನದಿಂದ ಪಕ್ಕಕ್ಕೆ ಸರಿಸಿ ಬರೀ ಜೀವಿಸುವ ಅಂಶಗಳನ್ನಷ್ಟೇ ಸರಸಮಯವಾಗಿ ಚಿತ್ರಿಸುವುದಾಗುತ್ತಿತ್ತು. ಅದೂ ಸಾವಿನ ಭಯವಿರುವವರಿಗೆ ನಾವೇನೋ ಹೆದರಿಕೆಯನ್ನು ಹೋಗಲಾಡಿಸುವಂತೆ ಅಥವಾ ಪಾಸಿಟಿವ್ ಥಿಂಕಿಂಗ್ ಹೇಳಿಕೊಡುವಂತೆ!

ನನಗೆ ಎಷ್ಟೋ ಬಾರಿ ಅನ್ನಿಸುತ್ತದೆ, ನಮ್ಮಲ್ಲಿ ಬಹುಪಾಲು ಮಂದಿ ಯಾರಾದರೂ ಸತ್ತಾಗ ಅಳುವುದು ದುಃಖದಿಂದಲ್ಲ ಭಯದಿಂದ ಎಂದು. ಯಾವುದೇ ಒಂದು ಅಪಘಾತವಾದಿರುವುದನ್ನು ನೋಡಿದರೆ, ಕೇಳಿದರೆ ಆ ಕ್ಷಣಕ್ಕೆ ಕೊಂಚ ಎಚ್ಚರಿಕೆಯಿಂದ ವರ್ತಿಸುವ ನಂತರ ಮತ್ತೆ ಮರೆತುಬಿಡುವ ಜಾಯಮಾನ ನಮ್ಮದು. ಅಂತೆಯೇ ಮರಣಿಸಿದವರು ನಮ್ಮೊಡನೆ ಒಡನಾಡಿದ್ದರೆ ಆ ನೆನಪುಗಳಿಂದ ಬಾಧಿತರಾಗುತ್ತೇವೆ.

ನಮ್ಮೊಡನೆ ಮಾತಾಡಿದವರು, ಸ್ಪಂದಿಸಿದವರು, ನಮ್ಮ ಜೊತೆ ತಮ್ಮ ಪ್ರೀತಿ, ಅಕ್ಕರೆ, ಕನಸುಗಳನ್ನು ಹಂಚಿಕೊಂಡವರು, ಬಾಳನ್ನು ಬೆಳಗಿಸಿದವರು, ಬದುಕನ್ನು ಬೆರಗಿನಿಂದ ಸವಿದವರು ಇಂದು ನಿಶ್ಚೇತನರಾಗಿ ಮಣ್ಣಿನ ಕುಪ್ಪೆಯ ಕೆಳಗೆ ಮಲಗುವರು ಅಥವಾ ಬೆಂಕಿಯಲ್ಲಿ ಸುಟ್ಟು ಬೂಧಿಯಾಗುವರು ಎಂಬ ಆಲೋಚನೆಯೇ ಒಂದು ಆಘಾತಕರ, ಅವರಿನ್ನೆಂದೂ ನಮ್ಮೊಡನೆ ಈ ಮೊದಲಿದ್ದ ಹಾಗೆ ಇರುವುದೇ ಇಲ್ಲ ಎಂದು ಬರಿದೇ ನೆನೆಸಿಕೊಳ್ಳಲೂ ಸಂಕಟಕರ.

ಏನೇ ಸಕಾರಾತ್ಮಕವಾಗಿ ಯೋಚಿಸಿದರೂ ಸಾವೆಂಬುವ ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲದೇ ಇರುವ ಕಾರಣದಿಂದಲೇ ಚೇತನ, ಆತ್ಮ, ಮುಕ್ತಿ ಇತ್ಯಾದಿಗಳನ್ನು ಚಿಂತಿಸಲಾಯ್ತು. ಬೇರೆ ದಾರಿಗಳಿಲ್ಲದೇ ಸತ್ತವರ ಆತ್ಮಕ್ಕೆ ಶಾಂತಿ ಕೋರುವ, ಅವರ ಚೈತನ್ಯವು ನಮ್ಮೊಡನೆ ಇರುವಂತಹ ಅನೇಕ ಅಸಂಗತ ವಿಚಾರಗಳಿಂದ ನಮ್ಮ ಮನಸ್ಸುಗಳಿಗೆ ಸಮಾಧಾನ ತಂದುಕೊಳ್ಳುವ ರೀತಿಗಳನ್ನು ಕಂಡುಕೊಳ್ಳಲಾಯಿತು.

ಯಾರದೇ ಶವಸಂಸ್ಕಾರಕ್ಕೆ ಹೋದಾಗ “ಬದುಕು ಇಷ್ಟೇನೇ” ಎಂದು ಅನ್ನಿಸುವಂತಹ ಸ್ಮಶಾನ ವೈರಾಗ್ಯವನ್ನೇ ಗಟ್ಟಿಯಾಗಿ ಹಿಡಿದು, ಭೂಮಿಯ ವಿಸ್ತಾರ ಜೀವನದಲ್ಲಿ ನಮ್ಮ ಆಗಮನ ಮತ್ತು ನಿರ್ಗಮನದ ನಡುವಿನ ಅವಧಿಯು ಬಹಳ ಅಲ್ಪವೇ ಆದ್ದರಿಂದ, ಅಷ್ಟೂ ಸಮಯ ಸಾರ್ಥಕವಾಗಿ, ದಯೆ, ಕರುಣೆ, ಪ್ರೀತಿ, ಭಕ್ತಿಗಳಿಂದ ಬಾಳಿ ಬದುಕಿ “ಹೊರಟೆ ಸೇರೆ ನಮ್ಮ ಊರ” ಎಂದು (ತುಕಾರಾಂ ಹೇಳುವಂತೆ) ಹೋಗುತ್ತೇವೆ ಎಂಬುದನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಲೇ ಸಂಸಾರ ಕ್ಷಣಭಂಗುರ, ನೀರಿನ ಮೇಲೆ ಗುಳ್ಳೆ ನಿಜವಲ್ಲಾ ಹರಿಯೇ ಎಂದೆಲ್ಲಾ ದಾಸರು ಹೇಳುವುದು. ಇಂತಹ ವೈರಾಗ್ಯವೇ ಜೈನ ತೀರ್ಥಂಕರರ ಕಾರಣಿಕ ಶಕ್ತಿ, ಸಾರ.

ಈ ಅರಿವಿನಿಂದಲೇ ಭಾರತದಲ್ಲಂತೂ ಸಂತವರ್ಗದ ಸೃಷ್ಟಿ ಮತ್ತು ಬೆಳವಣಿಗೆ ಬಹಳವಾಯಿತು. ಇದೇ ತಿಳುವಳಿಕೆಯೇ ಆಧ್ಯಾತ್ಮಿಕತೆಯ ನೈತಿಕತೆಯ ಭದ್ರಬುನಾದಿಯನ್ನು ಭಕ್ತಿ ಚಳವಳಿಗೆ ನೀಡಿದ್ದು. ಈ ವಿಚಾರವೇ ಜಾತಿ, ಮತ, ಧರ್ಮಗಳು ಮತ್ತು ವರ್ಗಗಳು ಹುಟ್ಟಿ ಹಾಕಿದ ಮೇಲರಿಮೆ ಮತ್ತು ಕೀಳರಿಮೆಗಳನ್ನು ನಿರಾಕರಿಸಲು, ಸಂಪೂರ್ಣ ಧಿಕ್ಕರಿಸಲು ಸಹಕರಿಸಿದ್ದು. ಅರಿವಿಲ್ಲದಂತೆ ಆದ ಹುಟ್ಟೂ, ಅರಿತಿಲ್ಲದ್ದ ಬರುವ ಸಾವಿನ ನಡುವಿನ ಜೀವಿತಾವಧಿಯನ್ನು ಸಾರ್ಥಕಗೊಳಿಸಿಕೊಳ್ಳಲು, ಅದನ್ನು ಸಂಪೂರ್ಣವಾಗಿ ಸತ್ವಭರಿತವನ್ನಾಗಿಸಲು ಭಕ್ತಿ ಮತ್ತು ವೈರಾಗ್ಯವನ್ನು ಹೇಳಿಕೊಟ್ಟಿದ್ದು ನಮ್ಮ ಭಕ್ತಿ ಪರಂಪರೆ.

ಈ ಭಕ್ತಿಪರಂಪರೆಯು ಚಳುವಳಿಯ ರೀತಿಯಲ್ಲಿ ಸಮಾಜದಲ್ಲಿ ನೆಲೆಸಿದ್ದ ಅಸಮಾನತೆಯ ವಿರುದ್ಧ ಬಹಳ ಗಟ್ಟಿತನದಿಂದಲೂ, ಸಾತ್ವಿಕ ರೀತಿಯಿಂದಲೂ ಹೋರಾಡಿತು. ಬಹುದೊಡ್ಡ ಜನ ಸಮುದಾಯಕ್ಕೆ ವೈರಾಗ್ಯದ ಮನವರಿಕೆ ಮಾಡಿತ್ತು. ಇಂದಲ್ಲ ನಾಳೆ ನಾನು ಸಾಯುತ್ತೇನೆ. ಸಾಯುವ ಮುನ್ನ ಯಾವುದೇ ನಕಾರಾತ್ಮಕವಾಗಿರುವುದನ್ನು ಸಾಧಿಸಿ, ಇತರರನ್ನು ನೋಯಿಸಿ ಹೋಗಕೂಡದೆಂಬ ದಿವ್ಯ ಜ್ಞಾನವು ಸದಾ ಜಾಗೃತವಾಗಿರಲು ಭಕ್ತಿ ಪರಂಪರೆಯವರು ಬಳಸಿದ ಅತಿ ದೊಡ್ಡ ಅಸ್ತ್ರವೆಂದರೆ ಭಗವಂತನಲ್ಲಿ ನಿಷ್ಕಾಮ ಪ್ರೀತಿ. ಯಾವ ಪ್ರತಿಫಲವನ್ನೂ ಬಯಸದ ಭಕ್ತಿ. ಬರಿದೇ ಮುಕ್ತಿ.

ಕೋಳೂರ ಕೊಡಗೂಸು

ಮುಕ್ತಿಯನ್ನು ಪಡೆಯಲು, ನಿಜವಾದ ವೈರಾಗ್ಯ ಭಾವವನ್ನು ಹೊಂದಲು ಸಾಮಾಜಿಕ ಮತ್ತು ವೈಯಕ್ತಿಕವಾದ ಸ್ಥಾನ ಮಾನಗಳ ಅರಿಮೆಗಳನ್ನು, ಅಹಂಕಾರಗಳಿಂದ ಹುಟ್ಟಿರುವ ಭ್ರಮೆಗಳಿಂದ ಹೊರಬರುವ ಅಗತ್ಯವನ್ನು ಭಕ್ತಿ ಚಳುವಳಿಯು ಹೇಳುತ್ತಾ ಹೇಳುತ್ತಾ ಬಹು ಮುಖ್ಯವಾದ ಮತ್ತೊಂದು ವಿಷಯವನ್ನೂ ಸ್ಪಷ್ಟಗೊಳಿಸಿದ್ದರು. ಆಚರಣೆ ಮತ್ತು ಧಾರ್ಮಿಕ ನಿರ್ಬಂಧ ವಿಚಾರಗಳಿಂದ ಹೊರಗೆ ಬರಬೇಕೆಂಬುದನ್ನು ಕಾಲದಿಂದ ಕಾಲಕ್ಕೆ ತಿಳಿಸುತ್ತಲೇ ಬಂದರು.

ಭಗವಂತನೆಂಬ ಪರಿಕಲ್ಪನೆಯನ್ನು ಕಲ್ಲಿನಲ್ಲಿ ಸ್ಥಿರಗೊಳಿಸಿ, ನಮ್ಮ ಭಕ್ತಿ, ಪ್ರೀತಿಗಳನ್ನು ಮುಗ್ಧತೆಯಿಲ್ಲದೇ ಬರಿಯ ಆಚರಣೆಗಳಿಗೆ ಒಳಪಡಿಸಿ, ನೇಮದಲ್ಲಿದ್ದರೆ ಅದೂ ಕೂಡ ವ್ಯರ್ಥವೆಂದು ಸಾಧಿಸಲು ಅನೇಕ ಐತಿಹ್ಯಗಳನ್ನು ಸಮಾಜದ ಕಣ್ಣ ಮುಂದೆ ತಂದರು. ಅದರಲ್ಲಿ ಕೋಳೂರು ಕೊಡಗೂಸು ಒಂದು ಸುಂದರ ಕಥೆ.

ಧಾರವಾಡ ಜಿಲ್ಲೆಯ ಹಾವೇರಿಯಿಂದ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿರುವ ಗ್ರಾಮವೇ ಈ ಕೋಳೂರು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನೇರ ತಮಿಳುನಾಡಿಗೆ ಒಯ್ಯುತ್ತಾರೆ. ಇದು ತಮಿಳು ಶೈವ ಭಕ್ತಿ ಪರಂಪರೆಯ ಪ್ರಮುಖವಾದ ಕಥೆಗಳಲ್ಲೊಂದು.ಏನೇ ಆಗಲಿ, ನಮ್ಮ ಭಕ್ತಿಯ ಸಾಂಸ್ಕೃತಿಕ ಪರಂಪರೆಯನ್ನು ತಿಳಿದುಕೊಳ್ಳಲು ಈ ಕಥೆ ಬಹಳ ಮುಖ್ಯ.

ಕೋಳೂರಿನ ಶಿವ ದೇವಾಲಯದಲ್ಲಿ ಶಿವದೇವನೆಂಬ ಬ್ರಾಹ್ಮಣ ಅರ್ಚಕ. ಅವನಿಗೆ ಒಬ್ಬಳೇ ಮಗಳು ಈ ನಮ್ಮ ಕೊಡಗೂಸು. ಅವಳೋ ಮಗುವಾಗಿದ್ದಾಗಲೇ ತಾಯನ್ನು ಕಳೆದುಕೊಂಡವಳು ಮತ್ತು ತಂದೆಯ ಸುಪರ್ದಿನಲ್ಲಿ ಬೆಳೆಯುತ್ತಾ ಬರುವಳು. ಶಿವದೇವನು ಪ್ರತಿದಿನವೂ ಶಿವನಿಗೆ ಶಾಲ್ಯಾನ್ನದಂತಹ ಭಕ್ಷ್ಯವನ್ನು ಸಿದ್ಧಪಡಿಸಿ ನೈವೇದ್ಯವನ್ನು ನೀಡುತ್ತಿದ್ದನು. (ಕೆಲವೊಂದು ಕೃತಿಗಳಲ್ಲಿ ಕಪಿಲೆಯೆಂಬ ಹಸುವಿನ ಹಾಲು ಎಂದೂ ಇದೆ.) ಒಮ್ಮೆ ಆರೋಗ್ಯ ತಪ್ಪಿದ ತನ್ನ ಸಂಬಂಧಿಕರನ್ನು ನೋಡಿ ಬರಲು ಶಿವದೇವನು ಹೋಗಬೇಕಾಗಿತ್ತು.

ತನ್ನ ಶಿವಪೂಜೆ ಮತ್ತು ನೈವೇದ್ಯದ ನೇಮವು ತಪ್ಪ ಬಾರದೆಂದು ಮಗಳಿಗೆ ಅದನ್ನು ವಹಿಸಿ ತಂದೆ ಹೋಗುವನು. ಈ ಕೂಸು ಶಿವನಿಗೆ ಆಹಾರವನ್ನು ಅರ್ಪಿಸುವುದೆಂದರೆ ಆತನಿಗೆ ತಿನ್ನಲು ಕೊಡುವುದೆಂದೇ ಭಾವಿಸುತ್ತದೆ. ಅಂತೆಯೇ ಕೊಡಲು ಹೋದಾಗ ಲಿಂಗವು ಈಗ ಮೌನವಾಗಿಯೇ ಇರುವಂತೆ ಆಗಲೂ ನಿಶ್ಚೇತನವಾಗಿಯೇ ಇರುತ್ತದೆ. ಆದರೆ ಕೊಡಗೂಸು ತನ್ನ ತಂದೆ ಕೊಡುವಾಗ ಸೇವಿಸುವ ಶಿವ ತಾನು ಕೊಡುವಾಗ ಏಕೆ ಸ್ವೀಕರಿಸುತ್ತಿಲ್ಲ? ಎಂದು ಪರಿಪರಿಯಾಗಿ ಶಿವನನ್ನು ಕರೆಯುತ್ತಾಳೆ. ಆದರೆ ಅವನು ಬರುವುದಿಲ್ಲ. ಬರ್ತೀಯೋ ಇಲ್ಲವೋ, ಎಂದು ಕಂಬಕ್ಕೋ, ಪಾಣೀಪೀಠಕ್ಕೋ ತಲೆ ಚಚ್ಚಿಕೊಂಡು ರಕ್ತಧಾರೆ ಹರಿಸಲು ಮುಂದಾದಾಗ ಶಿವನು ಪ್ರತ್ಯಕ್ಷನಾಗಿ ಅವಳಿಂದ ಆಹಾರವನ್ನು ಸ್ವೀಕರಿಸುತ್ತಾನೆ.

ಶಿವದೇವನು ಮರಳಿ ಬರುವವರೆಗೂ ಈ ಕೂಸು ಹೀಗೇ ಜೀವಂತವಾಗಿ ಎದುರಿಗೆ ಬಂದ ಶಿವನಿಗೆ ಆಹಾರ ಅರ್ಪಿಸುತ್ತಿರುತ್ತಾಳೆ. ತಂದೆ ಬರುತ್ತಾನೆ. ಅದೇ ತಾನೇ ಕೊಡಗೂಸು ದೇವಾಲಯದಿಂದ ಬರುತ್ತಾಳೆ. ತಂದೆ ನೈವೇದ್ಯ ಮಾಡಿರುವ ಪ್ರಸಾದ ಕೇಳುತ್ತಾನೆ. ಆದರೆ ಅದು ಇರುವುದಿಲ್ಲ. ಶಿವ ತಿಂದ ಎನ್ನುವ ಮಾತನ್ನು ಅರ್ಚಕ ತಂದೆ ಒಪ್ಪುವುದಿಲ್ಲ. ತಾನೇ ತಿಂದು ಶಿವನ ಮೇಲೆ ಹೇಳುವ ಮಗಳನ್ನು ಗದರಿಸುತ್ತಾನೆ. ಅದನ್ನು ನಿರೂಪಿಸಲು ಕೂಸು ಮತ್ತೆ ಶಿವನ ಮುಂದೆ ಹೋಗಿ ತಿನ್ನಲು ಕರೆಯುತ್ತಾಳೆ. ಬರುವುದಿಲ್ಲ. ಅವಳು ಅದೇ ರೀತಿ ತಲೆ ಚಚ್ಚಿಕೊಳ್ಳುವ ಕೆಲಸಕ್ಕೆ ಮುಂದಾದಾಗ ಶಿವ ಅಲ್ಲಿ ಪ್ರತ್ಯಕ್ಷನಾಗಿ ಅವಳನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾನೆ.

ಲಿಂಗದೊಳಕ್ಕೆ ಹೋಗುವ ಮಗುವನ್ನು ಹಿಡಿಯಲು ಹೋಗುವ ತಂದೆಗೆ ಅವಳ ಕೂದಲಷ್ಟೇ ಕೈಗೆ ಸಿಗುತ್ತದೆ. ಆ ಕೂದಲು ಲಿಂಗದಿಂದ ಈಗಲೂ ಹೊರಗಿದೆ ಎಂದು ಪ್ರತೀತಿ ಇದೆ. ಇದನ್ನು ತನ್ನ ರಗಳೆಯಲ್ಲಿ ಹರಿಹರ ಕವಿಯು ಬಹು ಸುಂದರವಾಗಿ ವರ್ಣಿಸಿದ್ದಾನೆ.

ಸಾಂಕೇತಿಕವಾಗಿ ವಿಜೃಂಭಿಸುವ ಕಥೆಯ ಒಗಟನ್ನು ಬಿಡಿಸಬೇಕು. ನೈಜ ಘಟನೆಯಂತೆ ವಾಸ್ತವವಾಗಿ ನೋಡಿ ವಿಮರ್ಶೆ ಮಾಡಬಾರದು. ಹಾಗೆ ಮಾಡಿಬಿಟ್ಟರೆ, ಇಡೀ ಕಥೆಯನ್ನೇ ಸುಳ್ಳು ಎಂದು ಹೇಳುವಂತಾಗಿಬಿಡುತ್ತದೆ. ದೇವಾಲಯವೆಂದರೆ ಬರೀ ಶಿವದೇವ ಮತ್ತು ಅವನ ಕೂಸಿಗೆ ಮಾತ್ರವಿತ್ತೇ? ತಾಯಿ ಇಲ್ಲದ ಈ ಮಗುವು ತಂದೆಗೆ ಪೂಜೆಗೆ ಪ್ರತಿನಿತ್ಯ ನೆರವಾಗುತ್ತಿದ್ದಾಗ ನೈವೇದ್ಯ ಮಾಡುವುದನ್ನು ನೋಡುತ್ತಿರಲಿಲ್ಲವೇ? ಅವನೋ ಮಗುವನ್ನು ಎಲ್ಲೋ ಹೊರಗೆ ಕಳುಹಿಸಿ ರಹಸ್ಯವಾಗಿ ಎಡೆ ಇಡುತ್ತಿದ್ದನೇ? ಶಿವ ಎಂಬ ಲಿಂಗವನ್ನು ಆರಾಧಿಸುವುದನ್ನು ನೋಡುತ್ತಿದ್ದಳೇ ಹೊರತು, ಅವನು ಎದ್ದು ಬಂದು ತಿಂದದ್ದೇನೂ ಅವಳೂ ನೋಡಿರಲಿಲ್ಲವಲ್ಲ! ಹೋಕ್ಕೊಳ್ಳಿ, ಶಿವ ಬಂದು ತಿನ್ನಲ್ಲಿಲ್ಲಾಂತ ಅಷ್ಟು ಪುಟ್ಟ ಬಾಲಕಿ ತಲೆ ಚಚ್ಚಿಕೊಂಡು ರಕ್ತಸ್ರಾವ ಮಾಡಿಕೊಂಡು ಸತ್ತು ಹೋಗುತ್ತೇನೆಂದು ಹೆದರಿಸಿ ತನ್ನ ಕೆಲಸ ಸಾಧಿಸಿಕೊಳ್ಳುವಷ್ಟು ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡಲು ಎಲ್ಲಿ ಕಲಿತಳು? ಹೇಗೆ ಮಾಡುವಳು? ತಂದೆ ಮಗಳ ಸತ್ಯತೆಯನ್ನು ನಿರಾಕರಿಸಿ ಅನುಮಾನಿಸಿದಾಗ ಬರುವ ಶಿವ ‘ಅಲ್ಲಾ ಕಣಯ್ಯಾ ಅರ್ಚಕಾ, ನೀನು ಬರೀ ನೇಮ ಮಾಡಿದೆ.

ನಿನ್ನ ಮಗಳು ತನ್ನ ಮುಗ್ಧತೆಯಿಂದ ನನಗೆ ಊಟವನ್ನೇ ಮಾಡಿಸಿಬಿಟ್ಟಳು ಕಣಯ್ಯಾ. ನೇಮ ಗೀಮಾ ಅಂತಿರೋ ಸಂಪ್ರದಾಯ ಅಲ್ಲ ಮುಖ್ಯ. ಮಗುವಿಗಿರುವಂತಹ ಭಕ್ತಿ ಪ್ರೀತಿ ಮುಖ್ಯ ಕಣಯ್ಯಾ’ ಅಂತ ಬುದ್ಧಿ ಹೇಳೋದು ಬಿಟ್ಟು, ತಟಕ್ಕಂತ ಬಂದು ಪಟಕ್ಕಂತ ಹಾರಿಸಿಕೊಂಡು ಹೋಗಿಬಿಡುವುದೇ! ಪಾಪದ ಶಿವದೇವನಿಗೆ ಪುತ್ರಿಶೋಕ ನೀಡಿ, ಬರೀ ಜುಟ್ಟುಳಿಸಿ ಹೋಗುವುದೇ?

ವಿಷಯ ಅದಲ್ಲ. ಶಿವದೇವ ಬ್ರಾಹ್ಮಣ. ಬ್ರಾಹ್ಮಣರಲ್ಲಿ ಯಜ್ಞೋಪವೀತ ಧರಿಸುವ ಮತ್ತು ಉಪನಯನ ಮಾಡಿಸಿಕೊಂಡು ದೇವತಾಕಾರ್ಯವನ್ನು ಮಾಡುವ ಅಧಿಕಾರ ಪುರುಷ ಹೊಂದಿರುತ್ತಾನೆ. ತಮಾಷೆಯೆಂದರೆ ಶೂದ್ರಳೆಂದು ಕರೆಯುವ ಹೆಣ್ಣು ತನಗೆ ಹೆಂಡತಿಯಾದ ಮೇಲೆ ಅವಳ ಪರವಾಗಿ ತಾನೇ ಜನಿವಾರ ಹಾಕಿಕೊಂಡು ದೇವತಾಕಾರ್ಯ ಮಾಡುತ್ತಾನೆ.

ಇಂತಹದ್ದೊಂದು ಢಾಂಭಿಕತನವನ್ನು ಧಿಕ್ಕರಿಸುವ ಕಥೆ ಇದು. ಒಬ್ಬ ಅರ್ಚಕನು ತನ್ನ ನೇಮಾದಿಗಳನ್ನು ಯಾಂತ್ರಿಕವಾಗಿ ಮಾಡುತ್ತಾನೆಯೇ ಹೊರತು, ಅವನು ಹೊರತು ಪಡಿಸಿರುವಂತಹ ಹೆಣ್ಣು ತನ್ನ ನಿಜವಾದ ಭಕ್ತಿಯಿಂದ ಯಾವ ದೈವಿಕತೆಯ ಸೂಕ್ಷ್ಮವನ್ನು ಹೊಂದುವಳೋ ಅದನ್ನು ತನ್ನ ಸಹಜತೆ ಮತ್ತು ಮುಗ್ಧತೆಯಿಂದ ಪಡೆಯುವಳು ಎಂದು ಈ ಕಥೆ ಹೇಳುವುದು.

ಹಾಗೆಯೇ ದೇವಸ್ಥಾನದ ಅರ್ಚಕನಾಗಿ ಬರಿಯ ಸಂಪ್ರದಾಯದ ಚೌಕಟ್ಟಲ್ಲಿ ಬಂಧಿತರಾಗುವ ಮಂದಿಗೆ ದೈವತ್ವದ ಅರಿವಾಗದೆಂದೂ, ಸಹಜವಾದ ಮುಗ್ಧತೆ ಮತ್ತು ಪ್ರೀತಿಯಿಂದ ಅದರ ಅನುಭೂತಿಯನ್ನು ಪಡೆಯಬೇಕೆಂಬ ಪ್ರತಿಮಾ ರೂಪದ ಕಥೆಯಿದು.

ಯೇಸುವು ಹೇಳುವುದನ್ನು ನೆನಪಿಸಿಕೊಳ್ಳೋಣ, “ನೀವು ಮಕ್ಕಳಂತಾಗದಿದ್ದರೆ ನಿಮಗೆ ಸ್ವರ್ಗ ಸಾಮ್ರಾಜ್ಯವು ಇಲ್ಲ.” ಅಂತೆಯೇ ಈ ಕಥೆ ಕೊಡುವ ಮತ್ತೊಂದು ಮಹತ್ತರ ಸೂಚನೆ ಎಂದರೆ, ನೇಮಾದಿಗಳ ಸಾಂಪ್ರದಾಯಿಕ ಚೌಕಟ್ಟನ್ನು ಮುರಿದು ಹೋಗುವವರನ್ನು ಸಂಪ್ರದಾಯವಾದಿಗಳು ಉಳಿಗೊಳಿಸುವುದಿಲ್ಲ ಎಂದೂ ಕೂಡ. ನೋಡಿ, ಕೊಡಗೂಸು ಶಿವನ ಸೇರಿಕೊಂಡುಬಿಟ್ಟಳು.

ಅವಳ ತಂದೆ ಅರ್ಚಕ ವೃತ್ತಿ ಮಾಡಿಕೊಂಡು, ಅದೇ ನೈವೇದ್ಯವಿಟ್ಟುಕೊಂಡು ಉಳಿದುಕೊಂಡ. ಸಂಪ್ರದಾಯದ ನೇಮವನ್ನು ಮುರಿದವರು ಒಂದು ಐತಿಹ್ಯವಾಗಿ ಉಳಿಯುತ್ತಾರೆ. ರೂಪಕವಾಗಿ ವಿಜೃಂಭಿಸುತ್ತಾರೆ. ಆದರೆ ನೇಮ ಮಾಡುವವರು ಉಳಿದು ಬಾಳುತ್ತಾರೆ. ಸಂಪ್ರದಾಯವು ಮುಂದುವರಿಯುತ್ತದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version