ಅಂತರಂಗ
ಕೊನೆಗೂ ಸಿಕ್ಕ ಸದ್ಗುರು
ಅದೊಂದು ರೋಚಕ ಕ್ಷಣ … ಜೀವನದ ಮಹೋನ್ನತ ಘಳಿಗೆ … ಹಲವು ವರುಷಗಳ ಹಂಬಲಕ್ಕೆ ಅಂದು ಫಲ ದೊರಕಿದ ಸಂತಸದ ಗಳಿಗೆ … ಆ ದಿವ್ಯ ಚೇತನದ ನೆಲೆ ಪತ್ತೆಯಾದ ಸಂಭ್ರಮದ ಗಳಿಗೆ..
ಅದಿರಲಿ., 1993-94 ರ ಮಾತದು .. ನಾವಾಗ ಖಾಸಗಿ ಪ್ರೌಢಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದಾಗಿನ ಕಥೆಯಿದು … ವಿಜ್ಞಾನ ವಿಷಯ ಬೋಧಿಸಲು ಹೊಸ ಶಿಕ್ಷಕರೊಬ್ಬರ ಆಗಮನವಾಯಿತು .. ಮೊದಲೇ ಹಳ್ಳಿ ಶಾಲೆ – ಹಳ್ಳಿ ಹುಡುಗರಾಗಿದ್ದ ನಮಗೆ ಅವರ ಮಾತು – ಕತೆ, ರೀತಿ – ನೀತಿ & ಎಲ್ಲಕ್ಕೂ ಮಿಗಿಲಾಗಿ ಅವರ ಸ್ಟೈಲ್ ಅತ್ಯಾಕರ್ಷಿಸಿತು. ಮೊದಲ ನೋಟದಲ್ಲೇ ವಿದ್ಯಾರ್ಥಿಗಳ ಮನ ಗೆದ್ದ ಅವರು, ಅಂದಿನಿಂದಲೇ ನಮ್ಮ ಪಾಲಿಗೆ ಸ್ಟೂಡೆಂಟ್ ಐಕಾನ್ ಎನಿಸಿದರು.
ಪಾಠ ಹೇಳುತ್ತಿದ್ದ ರೀತಿ, ಬೋಧಿಸುವ ಪರಿ, ಸದಾ ಹಸನ್ಮುಖತೆಯಿಂದಲೇ ಮನವರಿಕೆ ಮಾಡಿಸುತ್ತಿದ್ದ ಅವರ ತಾಳ್ಮೆ, ತಪ್ಪು ಮಾಡಿದಾಗ ಹೊಡೆಯದೆ – ಬೈಯದೇ, ಯಾರೊಬ್ಬರ ಮನಸ್ಸಿಗೂ ನೋವಾಗದಂತೆ ನಯವಾಗಿ ತಿದ್ದಿ – ತೀಡುತ್ತಿದ್ದ ತಾಯ್ಮಮತೆಯ ಅವರ ಅಂತಃಕರಣ, ಬೋರ್ ಎನಿಸಿದಾಗ ಹಾಡು ಹೇಳಿ ರಂಜಿಸಿ ಪಾಠ ಮುಂದುವರೆಸುತ್ತಿದ್ದ ಕ್ರಮ.
ಥೇಟ್ ರಾಜ್ ಕುಮಾರ್ ವಾಯ್ಸಲ್ಲೂ ಒಮ್ಮೊಮ್ಮೆ ಮಾತಾಡಿ, ಹಾಡ್ಹೇಳಿ, ಜೋಕ್ಸೇಳಿ ನಕ್ಕು ನಗಿಸಿ ಬೋಧಿಸುತ್ತಿದ್ದ ಅವರ ಬತ್ತದ ಉತ್ಸಾಹ, ಯಾವುದೇ ಕ್ರೀಡೆ – ಆಟೋಟದಲ್ಲೂ ವಿದ್ಯಾರ್ಥಿಗಳೊಂದಿಗೆ ತಾವೂ ಭಾಗವಹಿಸಿ ಹುರಿದುಂಬಿಸುತ್ತಿದ್ದ ರೀತಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಾರ್ಷಿಕೋತ್ಸವ ಸಂದರ್ಭದಲ್ಲಿ ತಾವೇ ನೃತ್ಯ ನಿರ್ದೇಶನ ಮಾಡಿ ವಿದ್ಯಾರ್ಥಿಗಳೊಂದಿಗೆ ವೇದಿಕೆಯಲ್ಲಿ ತಾವೂ ಕೂಡ ಒಂದು ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದ ಅವರ ಬಹುಮುಖಿ ಪ್ರತಿಭೆ … ಒಂದೇ ಎರಡೇ ಎಲ್ಲವೂ ಅದ್ಭುತ – ಅಮೋಘ … ಅವರ ಅಭೂತಪೂರ್ವ – ಅಚ್ಛರಿದಾಯಕವೆನಿಸುವ ಕ್ರಿಯಾ ಶೀಲತೆ, ಸೃಜನಶೀಲತೆ, ಪ್ರತಿಭಾ ಸಂಪನ್ನತೆ, ಹೃದಯವಂತಿಕೆ, ಕಳಕಳಿ – ಕಾಳಜಿ, ಕಾಯಕ ನಿಷ್ಠೆ ಸೇರಿದಂತೆ ಅವರ ಇಡೀ ವ್ಯಕ್ತಿತ್ವವೇ ಅಂಥದ್ದು … ಎಂಥಾ ವಿದ್ಯಾರ್ಥಿಗಾದರೂ ಎಷ್ಟೇ ವರುಷಗಳಾದರೂ ಮರೆಯಲಾಗದಂತಹ ಛಾಪು ಮೂಡಿಸುವಂಥದ್ದು ….
ಹಾಗಾಗಿಯೇ ನಾವು ಅವರನ್ನ ಸದಾ ಸ್ಮರಿಸುತ್ತಲೇ ಇರುತ್ತಿದ್ದೆವು … ನಮ್ಮ SSLC ಮುಗಿಯುತ್ತಿದ್ದಂತೆಯೇ ಅವರು ಆ ಶಾಲೆಯಿಂದ ನಿರ್ಗಮಿಸಿ ಬಿಟ್ಟಿದ್ದರು … ಅವರು ಎಲ್ಲಿಗೆ ಹೋದರು ..
ಯಾವ ಊರಿನಲ್ಲಿ ಜಾಬ್ ಮಾಡುತ್ತಿದ್ದಾರೆ ಎಂಬ ಕುರಿತು ಆ ಶಾಲೆಯ ಸಿಬ್ಬಂದಿಯವರಿಗಾಗಲಿ ಅಥವಾ ಯಾವೊಬ್ಬ ವಿದ್ಯಾರ್ಥಿಗಾಗಲಿ ಮಾಹಿತಿ ಇರಲಿ ಸುಳಿವು ಸಹ ಸಿಗಲಿಲ್ಲ … ಫೋನ್ ಮೂಲಕವಾದರೂ ಪತ್ತೆ ಹಚ್ಚೋಣವೆಂದರೆ ನಮ್ಮದು ಆಗ ಫೋನ್ ಇಲ್ಲದ ಕಾಲ .. ! ನಮ್ಮೂರಲ್ಲಿ ಆಗ ಯಾರ ಮನೆಯಲ್ಲೂ ಲ್ಯಾಂಡ್ ಲೈನ್ ಕೂಡ ಇರಲಿಲ್ಲ .. ಅಂತೆಯೇ ನಮ್ಮ ಆ ಗುರುಗಳ ಬಳಿ ಕೂಡ .. ಹಾಗಾಗಿ Long Period Communication Gap ಆಯ್ತು …
ಹೈಸ್ಕೂಲ್ ಮತ್ತು M.Phil ವಿದ್ಯಾಭ್ಯಾಸದ ನಡುವಣ ಪಯಣದಲ್ಲಿ ಹತ್ತು ಹಲವು ಮೇರು ಶಿಕ್ಷಕರ ದಿಗ್ ದರ್ಶನವೂ ಆಯ್ತು..ಆದರೂ … ಸುಮಾರು 25 ವರ್ಷ ಕಳೆದರೂ ಇವರನ್ನು ಕಾಣುವ ತವಕ ಮಾತ್ರ ಮನದಲ್ಲಿ ಮನೆ ಮಾಡಿತ್ತು … ಅದೂ ಕೂಡ ಒಂದು ಅಚ್ಚರಿಯ ಸಂಗತಿಯಾಗಿ ಮನವ ಕಾಡಿತ್ತು … !!??
ಆ ತವಕಕ್ಕೆ ಪ್ರತಿಯಾಗಿ ಕಿಂಚಿತ್ತು ಫಲ ಎಂಬಂತೆ ಮೊನ್ನೆ ಸಂಕ್ರಾಂತಿಯ ದಿನದಂದು ಒಂದಷ್ಟು ಅವರ ಇರುವಿಕೆಯ ಮೂಲದ ಮಾಹಿತಿ ಲಭಿಸಿತ್ತು … ದಿನಾಂಕ : 13/01/2018 ರಂದು ಸಂಕ್ರಾಂತಿಗೆಂದು ಹಂಪಿ – ಹೋಸಪೇಟೆಯ ಕಡೆ ಪ್ರಯಾಣ ಬೆಳೆಸಿದ್ದೆವು .. 2 ದಿನ ಅಲ್ಲಿಯೇ ತಂಗಿದ್ದ ನಾವು 15/01/2018 ರಂದು ವಾಪಸ್ ಊರಿಗೆ ಬರುತ್ತಿದ್ದಾಗ ನಮ್ಮ ಮಿತ್ರರೊಬ್ಬರ ಬಳಿ ಆಕಸ್ಮಾತ್ ಆಗಿ ನಮ್ಮ ಆ ಗುರುವಿನ ಬಗ್ಗೆ ಪ್ರಸ್ತಾಪಿಸಿದೆ .. ಅದಕ್ಕವರು – ಅಯ್ಯೋ ನೀವು ಇಷ್ಟು ದಿನ ಹುಡುಕುತಿದ್ದ ನಿಮ್ಮ ಗುರುಗಳು ಅಲ್ಲೇ ಹಗರಿಬೊಮ್ಮನ ಹಳ್ಳಿಯ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಇದಾರಂತೆ, ಅಷ್ಟು ಮಾತ್ರ ನನಗೆ ಗೊತ್ತು. But ಪಕ್ಕಾ ಅಡ್ರೆಸ್ ಆಗಲಿ ಅಥವಾ ಫೋನ್ ನಂಬರ್ ಆಗಲಿ ನಂಗೊತ್ತಿಲ್ಲ … On The Way ಬರ್ತಾ ಪತ್ತೆ ಹಚ್ಕೊಂಡು ಬನ್ನಿ ಎಂದರು.
ಅದೇ ಜಾಡು ಹಿಡಿದು ಅಲ್ಲಿಗೆ ಹೋದ್ವಿ . ಕೆಲವರನ್ನು ಕೇಳಲಾಗಿ ಗೊತ್ತಿಲ್ಲ ಎಂಬ ಉತ್ತರ..ಕೊನೆಯ ಪ್ರಯತ್ನವೆಂಬಂತೆ ಒಂದು ಪ್ರಾವಿಜನಲ್ ಸ್ಟೋರ್ನಲ್ಲಿ ವಿಚಾರಿಸಿದರೆ – ಮೊದಲು 1 ವರ್ಷದ ಹಿಂದೆ ಅವರು ಇಲ್ಲೇ ಪಕ್ಕದ ಕೇರಿಯಲ್ಲಿ ಇದ್ರು.ಈಗ ಎಲ್ಲಿದ್ದಾರೋ ಗೊತ್ತಿಲ್ಲ ಅಂದು ಬಿಟ್ಟಾಗ ನಿಜಕ್ಕೂ ಬೇಸರವೆನಿಸಿತು … ಅವರ ಫೋನ್ ನಂಬರ್ ಏನಾದ್ರೂ ಇದ್ರೆ ಕೊಡ್ತಿರಾ ಸರ್ ಎಂದೆವು … ಇಲ್ಲ ಎಂದ ಅವರು ಕೊಂಚ ಬಳಿಕ ..ಹುಂ .. ಅವರ ಮಾವ ಒಬ್ರ ನಂಬರ್ ಇದೆ ಕೊಡ್ತಿನಿ, ಬೇಕಾದ್ರೆ ಅವರ ಬಳಿ ವಿಚಾರಿಸಿ ನೋಡಿ ಎಂದರು.
ನಿಟ್ಟುಸಿರು ಬಿಟ್ಟ ನಾವು ಕೂಡಲೇ ಫೋನಾಯಿಸಿದರೆ … ಅವರೊಡನೆಯೇ ನಮ್ಮ ಗುರುಗಳೂ ಸಹ ಇದ್ದರು. ಸಂತಸಕ್ಕೆ ಪಾರವೇ ಇರಲಿಲ್ಲ..ಪರಿಚಯ ಹೇಳಿಕೊಂಡೆ. ಒಂದಷ್ಟು ಕುಶಲೋಪರಿಯೂ ಆಯಿತು.. “ಎಂಥಾ ಕೆಲಸ ಆಯ್ತಲ್ಲ, ಇನ್ನೊಮ್ಮೆ ಖುದ್ದು ಭೇಟಿಯಾಗೋಣ ಗಂಗಾಧರ್, ನಾವೀಗ ಸಂಕ್ರಾಂತಿ ಪ್ರಯುಕ್ತ ಹುಲಿಗಿಗೆ ಬಂದಿದ್ದೇವೆ. ಮತ್ತೊಮ್ಮೆ ಖಂಡಿತಾ ಭೇಟಿ ಆಗೋಣ ” ಎಂದ್ಹೇಳಿ ತಮ್ಮ ಮೊಬೈಲ್ ನಂಬರ್ ಕೊಟ್ಟು ಫೋನ್ ಮೂಲಕವೇ ಬೀಳ್ಕೊಟ್ಟರು…. ಅಂತೂ.. , ಮುಖಭೇಟಿಯಾಗದಿದ್ದರೂ ಮತ್ತೊಮ್ಮೆ ಸಿಗುವ ಭರವಸೆಯೊಂದಿಗೆ ಅಲ್ಲಿಂದ ಸೀದಾ ಊರಿಗೆ ತೆರಳಿದೆವು.
ಆ ನಮ್ಮ ಮನೋ ಮಂದಿರದ ಗುರುಗಳು ಇವರೇ …. ಶ್ರೀಯುತ ಕುಮಾರ್ ಸ್ವಾಮಿ.
ಕೊನೆಯ ಮಾತು : ಇಂದಿನ ಆತುರದ – ಆಡಂಬರದ ಶಿಕ್ಷಣ ವ್ಯವಸ್ಥೆಯ ನಡುವೆ, ತಿಂಗಳ ಸಂಬಳ ಸಿಕ್ಕರೆ ಸಾಕು ನಮ್ಮ ಬದುಕಿನ ಬಂಡಿ ಸಾಗೀತು ಎಂಬ ಧಾವಂತ ಮತ್ತು ಅನಿವಾರ್ಯತೆಗೆ ಕಟ್ಟು ಬಿದ್ದು ಉದ್ಯೋಗ ಅರಸಿ, ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ಶಿಕ್ಷಕ ವೃತ್ತಿ ಆಯ್ದುಕೊಂಡು ಗೊಣಗುತ್ತಲೇ ಕಾಲ ತಳ್ಳಿ ನಿವೃತ್ತರಾಗುವ ತೋರಿಕೆಯ ಇಂದಿನ ಅದೆಷ್ಟೋ ಮಂದಿಯ ನಡುವೆ … ವೃತ್ತಿ ಪ್ರೇಮವೊಂದನ್ನೇ ಗುರಿಯಾಗಿಸಿಕೊಂಡು ಬೋಧಿಸುವ ಇಂತಹ ಶಿಕ್ಷಕರ ಸಂಖ್ಯೆ & ಸೇವೆ ವಿರಳವೇ ಸರಿ … ಹಾಗಾಗಿ ಈ ವಿಚಾರವನ್ನು ತಮ್ಮ ಬಳಿ ಹಂಚಿಕೊಳ್ಳಬೇಕೆನಿಸಿ, ವಾಟ್ಸಾಪ್ನಲ್ಲಿ ಇದ್ದ ಅವರ ಭಾವಚಿತ್ರದೊಂದಿಗೆ, ಅವರ ಅನುಮತಿ ಇಲ್ಲದೆ … ಗುರು ಸ್ಮರಣೆ ತಮ್ಮೊಂದಿಗೆ ….
ತಸ್ಮೈ ಶ್ರೀ ಗುರುವೇ ನಮಃ
( ಲೇಖಕರು: ಗಂಗಾಧರ್ ಬಿ.ಎಲ್ ನಿಟ್ಟೂರ್ )