ಲೋಕಾರೂಢಿ
ನಿಜಕ್ಕೂ ಹೆಲಿಕಾಪ್ಟರ್ ನಿಂದ ಹಣ ಸುರೀತಾರಾ..? ಏನಿದರ ಸತ್ಯಾಸತ್ಯತೆ..?
- ಅರುಣ್ ನವಲಿ
ಕಳೆದೊಂದು ದಿನದಿಂದ ರಾಜ್ಯಾದ್ಯಾಂತ ‘ ಹೆಲಿಕ್ಯಾಪ್ಟರ್ ಮನಿ‘ ಅನ್ನೋ ಶಬ್ದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದ್ರಲ್ಲೂ ಖಾಸಗಿ ವಾಹಿನಿಯೊಂದು ಹೆಲಿಕ್ಯಾಪ್ಟರ್ ನಿಂದಲೇ ಬಡವರಿಗೆ ಹಣ ಹಂಚಲಾಗುತ್ತದೆ, ಖುದ್ದು ಜನರ ಮನೆ ತಾರಸಿಗಳ ಮೇಲೆ ಆಕಾಶದಿಂದ ದುಡ್ಡು ಎಸೆದು ಹೊಗಲಾಗುತ್ತದೆ ಎನ್ನುವ ಥರದ ವರದಿ ಪ್ರಸಾರವಾಗಿದೆ. ಹಾಗಾಗಿ, ಈ ಹೆಲಿಕ್ಯಾಪ್ಟರ್ ಮನಿ ಅನ್ನೋ ಅರ್ಥಶಾಸ್ತ್ರದ ಶಬ್ದವೀಗ ವಿಪರೀತ ಟ್ರೋಲ್ ನ ಸಂಗತಿಯಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಅದಿರಲಿ, ಟ್ರೋಲ್ ಗಳನ್ನ ಬದಿಗಿಟ್ಟು ಏನಿದು ಹೆಲಿಕ್ಯಾಪ್ಟರ್ ಮನಿ ಅಂತ ಅರ್ಥೈಸಿಕೊಳ್ಳಲು ಪ್ರಯತ್ನಿಸೋದಾದ್ರೆ ;
ಹೆಲಿಕ್ಯಾಪ್ಟರ್ ಮನಿ : ಮಿಲ್ಟನ್ ಫ್ರೀಡ್ಮನ್ ಅನ್ನೋ ಅರ್ಥಶಾಸ್ತ್ರ ಪಂಡಿತ 1969 ರಲ್ಲಿ ‘Helicoptor Money’ ಅನ್ನೋ ಈ ಶಬ್ದವನ್ನ ಮೊದಲು Coin ಮಾಡಿದ. ಯಾವುದೇ ದೇಶಕ್ಕೆ ವಿತ್ತೀಯ ಕ್ಷಾಮ ಅಂದರೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾದರೆ ತೆಗೆದುಕೊಳ್ಳಬಹುದಾದ ಕ್ರಮಗಳನ್ನ ಜನರಿಗೆ ಸರಳವಾಗಿ ವಿವರಿಸಲು ಫ್ರೀಡ್ಮನ್ ಈ ಶಬ್ದ ಪ್ರಯೋಗ ಮಾಡಿದ. ಮತ್ತದು ಜಾಗತೀಕ ಆರ್ಥಿಕತೆಯ ಸುಧಾರಣಾ ಕ್ರಮಗಳ ಪಟ್ಟಿಯಲ್ಲಿ ಜಾಗವೂ ಪಡೆಯಿತು.
ಇನ್ನೂ ಸರಳಾತೀಸರಳವಾಗಿ ಹೇಳುವುದಾದರೆ; ಒಂದು ದೇಶ ಯಾವುದೋ ಕಾರಣಗಳಿಂದ ಆರ್ಥಿಕ ದಿವಾಳಿಯಂಚಿಗೆ ಬಂದು ನಿಂತಿರುತ್ತೆ ಅಂದಾಗ ಆ ದೇಶದ ಜಿಡಿಪಿ ಸಹ ಪಾತಾಳಕ್ಕಿಳಿದು ಬಿಟ್ಟಿರೋದು ಸಹಜವೇ. ಇಲ್ಲಿ ಜಿಡಿಪಿ ಅನ್ನೋದು ದೇಶವಾಸಿಗಳ ತಲಾದಾಯ ಹೇಗೋ ಅಂತೆಯೇ ತಲಾಖರ್ಚನ್ನೂ ಅವಲಂಬಿಸಿರುತ್ತದೆ. ಅಂತಯೇ ಮಾರುಕಟ್ಟೆಯಲ್ಲಿ ಹಣದ ಹರಿವು ಸ್ತಬ್ಧವಾದರೆ ಅದು ಆರ್ಥಿಕತೆ ಉಸಿರುಗಟ್ಟುವ ವಾತಾವರಣದಲ್ಲಿದೆ ಎಂದೇ ಅರ್ಥ.
ಆಗ ಆಮ್ಲ ಜನಕ ಪೂರೈಕೆಯ ಮಾರ್ಗವಾಗಿ ಅರ್ಥ ತಜ್ಞರ ವಿವೇಚನೆಯಡಿ ಬಳಸಬಹುದಾದ ಒಂದು ದಾರಿಯೇ ಈ ಹೆಲಿಕ್ಯಾಪ್ಟರ್ ಮನಿ ಕಾನ್ಸೆಪ್ಟ್.! ಹಾಗಂತ, ಹೆಲಿಕಾಪ್ಟರ್ ಗಳಲ್ಲಿ ಹಣ ತಂದು ಸುರಿಯುತ್ತಾರೆಯೇ ಎನ್ನುವುದು ಹಾಸ್ಯಾಸ್ಪದವಷ್ಟೇ ಅಲ್ಲ ಅದು ಅವಿವೇಕತನದ ಪರಮಾವಧಿ.! ನಿರ್ದಿಷ್ಟ ಜನರ ( ಇದೂ ನೆನಪಿಡಿ) ಬ್ಯಾಂಕ್ ಖಾತೆಗಳಿಗೆ ಸರ್ಕಾರವೇ ಇಂತಿಷ್ಟು ಅಂತ ಹಣ ಬಿಡುಗಡೆ ಮಾಡಿ ಜನರನ್ನು ಖರ್ಚು ಮಾಡಲು ಪ್ರಚೋದಿಸುವುದು. ಆ ಮೂಲಕ ಮಾರುಕಟ್ಟೆಯಲ್ಲಿ ಹಣದ ಸಗಟು ಹರಿವು ಹೆಚ್ಚಿಸುವುದು ಇದರ ಯೋಜನೆ.
ಹೀಗೆ ಕೊಳ್ಳುವ ಜನರ ಖರ್ಚುಗಳಿಗೆ ಮಾರುಕಟ್ಟೆ ಉಸಿರಾಡುತ್ತ ತೆರೆದುಕೊಳ್ಳುವುದರ ಜೊತೆಜೊತೆಗೆ ವಿತ್ತೀಯ ಹೊಂದಾಣಿಕೆಯೂ ಆಗುತ್ತೆ ಅನ್ನೋದು ಇದರ ಮುಖ್ಯ ಉದ್ದೇಶ.ವಿತ್ತೀಯ ಹೊಂದಾಣಿಕೆ ಆದಂತೆ ದೇಶದ ಆರ್ಥಿಕ ಸ್ಥಿತಿ ಸಹಜ ಸ್ಥಿತಿಗೆ ಮರಳುತ್ತೆ ಅನ್ನೋದು ತಜ್ಞರ ಅಭಿಮತ.
ಇದು ಸಾಧ್ಯವೇ.? ಈ ಪ್ರಯೋಗವನ್ನ ಜಗತ್ತಿನ ಎಲ್ಲ ಕಡೆಯೂ ಪ್ರಯೋಗಿಸಲು ಆಯಾ ದೇಶಗಳು ನೋಡಿವೆಯಾದರೂ ಆ ಸಂದರ್ಭದಲ್ಲಿ ಬೇರೆ ಬೇರೆ ಮಾರ್ಗಗಳು ಗೋಚರಿಸಿದ್ದರಿಂದ ಇದರ ಸಂಪೂರ್ಣ ಪ್ರಯೋಗ ಇನ್ನೂ ಆಗಿಲ್ಲವೆಂದೇ ಹೇಳಬಹುದು.
ಜಾಗತೀಕ ಆರ್ಥಿಕ ಹಿಂಜರಿತ ಉಂಟಾದ ಕಾಲದಲ್ಲೂ ಯುರೋಪ್ ದೇಶಗಳು ಹೆಲಿಕ್ಯಾಪ್ಟರ್ ಮನಿಯ ಇನ್ನೊಂದು ಮಜಲಾದ ಆರ್ಥಿಕ ತುಷ್ಟೀಕರಣ ನೀತಿ ಅಳವಡಿಸಿಕೊಂಡು ಯಶಸ್ವಿಯಾದವು. ಇದೀಗ ಜಗತ್ತೇ ಆರ್ಥಿಕ ಮುಗ್ಗಟ್ಟಿನ್ಬಿಂದ ಜರ್ಝರಿತವಾಗಿರುವ ಈ ಸಂಕ್ರಮಣ ಕಾಲದಲ್ಲಿ ದೇಶದ ಹಣಕಾಸು ವ್ಯವಸ್ಥೆ ಡೋಲಾಯಮಾನವಾಗಿದೆ. ಈಗ ಇದೇ ಹೆಲಿಕಾಪ್ಟರ್ ಮನಿ ಕಾನ್ಸೆಪ್ಟ್ ಬಳಸಿ ದೇಶದ ಜಿಡಿಪಿ ಸಮತೋಲನಗೊಳಿಸಿ ಅಂತ ತೆಲಂಗಾಣ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಆದರೆ ಅದು ಈಗ ಕರ್ನಾಟಕದಲ್ಲಿ ನಕಾರಾತ್ಮಕ ಹಾಗೂ ವ್ಯಂಗ್ಯವಾಗಿ ಬಿಂಬಿತವಾಗ್ತಿರೋದು ದುರಂತ. ಅದಕ್ಕೆ ಕಾರಣ ತಥಾಕಥಿತ ಮಾಧ್ಯಮ ವರದಿಗಳು ಸಹ ಹೌದು. ಎಲ್ಲವನ್ನು ಬದಿಗಿರಿಸಿ ನೋಡೋದಾದ್ರೆ ಇದರ ಸಾದ್ಯಾಸಾದ್ಯತೆಗಳು ಕೆಲಕಾಲ ಯಶಸ್ವಿ ಆಗಲೂಬಹುದು.
ಇನ್ನೊಂದು ಸಂಗತಿಯೆಂದರೆ ಕೇವಲ ಜನರ ಖಾತೆಗಳಿಗೆ ಹಣ ತುಂಬುವುದು ಹೆಲಿಕ್ಯಾಪ್ಟರ್ ಮನಿ ಅಲ್ಲವೇ ಅಲ್ಲ. ಆರ್ಥಿಕ ಉತ್ತೇಜನಾ ಕ್ರಮಗಳು ಸಹ ಹೆಲಿಕಾಪ್ಟರ್ ಮನಿ ಅನಿಸಿಕೊಳ್ಳುತ್ತವೆ. ಉದಾಹರಣೆಗೆ; ಮೊನ್ನೆ ನಮ್ಮ ದೇಶದ ವಿತ್ತಸಚಿವರು ಹಾಗೂ RBI ಘೋಷಿಸಿದ ತೆರಿಗೆ ವಿನಾಯತಿ, ಇಎಮ್ ಐ ವಿನಾಯತಿ, ಬಡ್ಡಿಸಡಿಲ ನೀತಿ ಮುಂತಾಗಿ ಇವೆಲ್ಲ ಸಹ ಹೆಲಿಕಾಪ್ಟರ್ ಮನಿ ಕಾನ್ಸೆಪ್ಟೇ ಆಗಿದೆ. ಇದರ ಜೊತೆ ಇನ್ನೊಂದು ವಿಚಾರವೂ ಚರ್ಚೆಯಲ್ಲಿದೆ. ಸರ್ಕಾರ ಹಣ ಮುದ್ರಣ ಮಾಡಿ ಜನರಿಗೆ ಹಂಚುತ್ತದೆ ಅಂತ. ನಿಮಗೆಗೊತ್ತಿರಲಿ ಅದಷ್ಟು ಸುಲಭಸಾಧ್ಯವಲ್ಲ.
ಭಾರತದಂಥ ಸಂಕೀರ್ಣ ವ್ಯವಸ್ಥೆಯಲ್ಲಿ ಅದು ಅಷ್ಟು ಸುಲಭವಲ್ಲ. ಅದರಲ್ಲೂ ನಾವೀಗ ಡಿಜಿಟಲ್ ಕಾಲದಲ್ಲಿರುವ ಹೊಸ್ತಿಲಲ್ಲಿ. ಒಂದು ವೇಳೆ ಸರ್ಕಾರವೇನಾದರೂ ಹಣ ಮುದ್ರಣಕ್ಕೆ ತೊಡಗಿಸಿಕೊಂಡರೆ ದುಪ್ಪಟ್ಟು ಪ್ರಮಾಣದ ಚಿನ್ನವನ್ನ ದೇಶ ಅಡ ಇಡಬೇಕಾಗಿ ಬರುತ್ತೆ ಅನ್ನುವುದು ಗಮನದಲ್ಲಿಡಬೇಕಾದ ಸಂಗತಿ. ಆದಾಗ್ಯೂ ಜನರ ಕೈಲಿ ಹಣ ಇಡುವುದು ರಿಸ್ಕಿ ಕೆಲಸ. ಇದರಿಂದ ಜನ ಕೊಳ್ಳಲು ಮುಗಿಬಿದ್ದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಮತ್ತೆ ಹೊಸತಲೆನೋವು ಶುರುವಾಗುತ್ತದೆ.
ಇದನ್ನು ಇನ್ನೊಂದು ಮಗ್ಗುಲಲ್ಲಿ ವ್ಯಾಖ್ಯಾನಿಸುವುದಾದರೆ; ಸದ್ಯಕ್ಕೆ ಬಡ್ಡಿ ದರಗಳನ್ನ ತಗ್ಗಿಸುವುದು, ಕಿರುಸಾಲ ಮತ್ತು ಉದ್ಯಮಸಾಲಗಳನ್ನ ಮಂಜೂರು ಮಾಡುವುದು,ಉದ್ಯೋಗ ಹೆಚ್ಚಳ, ಪ್ರಾಂತ್ಯ ಉದ್ದಿಮೆ ಬೆಳೆಸುವುದು, ರೈತರು ಬೆಳೆಗಳನ್ನು ಸರ್ಕಾರವೇ ಕೊಳ್ಳುವುದು ಹೀಗೆ ಇಂತಹ ಅನೇಕ ಹಿಂಬಾಗಿಲ ಕ್ರಮಗಳನ್ನೇ ನಾವೀಗ ಹೆಲಿಕಾಪ್ಟರ್ ಮನಿ ಅಂತ ವ್ಯಾಖ್ಯಾನಿಸಿಕೊಳ್ಳಬಹುದಾಗಿದೆ. ಹಾಗೆ ನೋಡಿದರೆ ಕೇಂದ್ರ ಈ ಕೆಲಸವನ್ನು ಮೊದಲೇ ಮಾಡಿದೆ. ಅದು ಎಷ್ಟರ ಮಟ್ಟಿಗೆ ಫಲಪ್ರದ ಅನ್ನುವುದು ಜನರ ವಿವೇಚನೆ ಬಿಟ್ಟದ್ದು. ನಿಜವಾಗಲೂ ಹೆಲಿಕಾಪ್ಟರ್ ಮನಿ ಅನ್ನೋ ಕಾನ್ಸೆಪ್ಟ್ ತುಂಬಾ ವಿಸ್ತಾರವಾದ ಅರ್ಥ ಕೋಶದ ಪದ. ಅದನ್ನು ಜನರಿಗೆ ಸುಲಭವಾಗಿ ಅರ್ಥಮಾಡಿಸಬೇಕಾದ ಮಾದ್ಯಮಗಳು ಹೆಲಿಕ್ಯಾಪ್ಟರ್ ನಿಂದ ಹಣವೆಸೆದು ಹೋಗುತ್ತಾರೆ ಅಂತ ಜನರಿಗೆ ತಪ್ಪುಸಂದೇಶ ನೀಡುತ್ತಿರೋದು ಸಲ್ಲ.
ಅದರಲ್ಲೂ ಇದೀಗ ಜನರು ಮಾದ್ಯಮಗಳ ಮಾಹಿತಿಯನ್ನು ಬಲವಾಗಿ ಅವಲಂಬಿಸಿರುವ ಸಮಯದಲ್ಲಿ ಬಡವರು ಹಾಗೂ ಅವಿದ್ಯಾವಂತರು ಗಾಳಿಯಲ್ಲಿ ಶಬ್ದವಾದ ಕೂಡಲೇ ಮನೆ ಮೇಲೆ ಹೋಗಿ ನಿಲ್ಲುತೊಡಗಿದ್ದಾರೆ. ಮೊದಲೇ ಧಾವಂತದಲ್ಲಿರುವ ಜನಸಮೂಹವನ್ನು ಸೂಕ್ಷ್ಮವಾಗಿ ಹೆಗಲ ಮೇಲೆ ಕೂರಿಸಿಕೊಂಡು ದಡ ಸೇರಿಸುವ ಗುರುತರ ಜವಾಬ್ದಾರಿ ಮಾದ್ಯಮಗಳ ಮೇಲಿದೆ. ಅದು ಈ ಕಾಲದ ತುರ್ತೂ ಹೌದು.!
ಸುದ್ದಿದಿನ.ಕಾಂ|ವಾಟ್ಸಾಪ್|9980346243