ದಿನದ ಸುದ್ದಿ
ಹಿಜಾಬ್ ವಿವಾದ | ಸಂವಿಧಾನದ ಆಶಯದಂತೆ ತೀರ್ಮಾನ ; ಭಾವನೆಗಳನ್ನು ಪಕ್ಕಕ್ಕಿಡಿ : ಹೈಕೋರ್ಟ್ | ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಸುದ್ದಿದಿನ,ಬೆಂಗಳೂರು: “ಅನುಚಿತ ಗುಂಪಷ್ಟೇ ವಿವಾದವನ್ನು ಜೀವಂತವಾಗಿಡಬಲ್ಲದು ಮತ್ತು ಸಂವಿಧಾನದ ಮೇಲೆ ಎಲ್ಲರೂ ನಂಬಿಕೆ ಇಡಬೇಕು ಹಾಗೂ ಶಾಂತಿ ಕಾಪಾಡುವಂತೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಮನವಿ” ಇದು ಜನತೆಯಲ್ಲಿ ಕರ್ನಾಟಕ ಹೈಕೋರ್ಟ್(Karnataka High Court) ನ್ಯಾಯಮೂರ್ತಿ ಎಎಸ್ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಮಾಡಿರುವ ಮನವಿ.
ಕಾಲೇಜಿಗೆ ಹಿಜಬ್(Hijab) ಧರಿಸಿ ಹೋಗಲು ಅವಕಾಶ ನೀಡುವಂತೆ ಕೋರಿ ಉಡುಪಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ಪೀಠ ಮುಂದೂಡಿದೆ. ಇವತ್ತು ವಿದ್ಯಾರ್ಥಿನಿಯರ ಪರ ವಕೀಲ ದೇವದತ್ ಕಾಮತ್ ಅವರಷ್ಟೇ ವಾದ ಮಂಡನೆ ಮಾಡಿದರು. ಮಧ್ಯಹ್ನ 1 ಗಂಟೆಗೆ ಶುರುವಾದ ವಿಚಾರಣೆ ಸಂಜೆ 4:30ರವರೆಗೂ ನಡೆಯಿತು.
ವಾದ-ಪ್ರತಿವಾದದ ಆಲಿಸಿದ ಬಳಿಕ ಇವತ್ತೇ ತೀರ್ಪು ಹೊರಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಾಳೆ ಮಧ್ಯಾಹ್ನ 2:30ಕ್ಕೆ ವಿಚಾರಣೆಯನ್ನು ನ್ಯಾಯಮೂರ್ತಿ ಜೆಎನ್ ದೀಕ್ಷಿತ್ ನೇತೃತ್ವದ ಪೀಠ ಮುಂದೂಡಿದೆ. ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆ ನ್ಯಾಯಮೂರ್ತಿಗಳು ತೀವ್ರ ಕಳವಳ ವ್ಯಕ್ತಪಡಿಸಿದರು. ಆದಷ್ಟು ಬೇಗ ತೀರ್ಪು ನೀಡುವುದಾಗಿ ತಿಳಿಸಿದರು.
Karnataka hijab row | Karnataka High Court says – we will go by reason, by law, not by passion or emotions. We will go by what Constitution says. Constitution is the Bhagavad Gita for me.
— ANI (@ANI) February 8, 2022
ಅರ್ಜಿದಾರರ ಪರ ವಕೀಲರ ವಾದದಲ್ಲೇನಿದೆ..?
ಕುರಾನ್ ಪ್ರಕಾರ ಹಿಜಬ್ ಧರಿಸುವುದು ಮೂಲಭೂತ ಆಚರಣೆ. ಶೈಕ್ಷಣಿಕ ವರ್ಷ ಮುಗಿಯಲು 2 ತಿಂಗಳಷ್ಟೇ ಇದೆ. ಹಿಜಬ್ ಧರಿಸಿ ಹೋಗಲು ಅವಕಾಶ ಕೊಡಿ. ಪರೀಕ್ಷೆ ಮುಗಿಯುವವರೆಗೂ ಯೂನಿಫಾರಂ ಬಣ್ಣದ ಹಿಜಬ್ ಧರಿಸಲು ಅವಕಾಶ ಕೊಡಿ. ಆ ಬಳಿಕ ಬೇಕಾದರೆ ಈ ವಿಷಯದ ಬಗ್ಗೆ ಕೋರ್ಟ್ ನಿರ್ಧರಿಸಬಹುದು.
ಹಿಜಬ್ ಧರಿಸುವುದು ಮೂಲಭೂತ ಹಕ್ಕಲ್ಲ ಎಂಬ ಅರ್ಥದಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಈ ಸುತ್ತೋಲೆ ಕೇರಳ, ಮದ್ರಾಸ್, ಬಾಂಬೆ ಹೈಕೋರ್ಟ್ ತೀರ್ಪನ್ನು ಪಾಲಿಸಿಲ್ಲ. ಉಡುಪು ಧರಿಸುವುದು ಸುಪ್ರೀಂಕೋರ್ಟ್ ನೀಡಿರುವ ಖಾಸಗಿತನವೂ ಮೂಲಭೂತ ಹಕ್ಕು ವ್ಯಾಪ್ತಿಯಲ್ಲಿ ಬರುತ್ತದೆ.
ಜ್ಯಾತ್ಯಾತೀತತೆ ಚಿಂತನೆಯಡಿ ಧಾರ್ಮಿಕ ಆಚರಣೆಗಳನ್ನು ಪರೀಕ್ಷೆಗೊಳಪಡಿಸಲು ಸಾಧ್ಯವಿಲ್ಲ. ಧರ್ಮದ ಮೂಲಭೂತ ಆಚರಣೆಯನ್ನು ಧಾರ್ಮಿಕತೆಯ ನಂಬಿಕೆ ಮೇಲಷ್ಟೇ ನಿರ್ಧರಿಸಬೇಕು, ಜ್ಯಾತ್ಯಾತೀತ ಭಾವನೆಗಳ ಆಧಾರದಲ್ಲಿ ಅಲ್ಲ. ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿನ ಮೂಲಭೂತ ಹಕ್ಕಿಗೂ ಸರ್ಕಾರಿ ಸಂಸ್ಥೆಯಲ್ಲಿ ಆಚರಿಸಲಾಗುವ ಮೂಲಭೂತ ಹಕ್ಕಿಗೂ ವ್ಯತ್ಯಾಸ ಇದೆ.
ಹಿಜಬ್ ಧರ್ಮದ ಅವಿಭಾಜ್ಯ ಭಾಗವೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಕಾಲೇಜು ಪ್ರವೇಶಾತಿಯ ಆರಂಭದಿಂದಲೂ ವಿದ್ಯಾರ್ಥಿನಿಯರು ಹಿಜಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದರು. ಹಿಜಬ್ ಧರಿಸುವುದು ಕೆಲವುಗಳ ಉಲ್ಲಂಘನೆ ಎಂದು ಕೆಲವರು ಭಾವಿಸುವವರೆಗೂ ಏನೂ ತೊಂದರೆ ಆಗಿರಲಿಲ್ಲ. ಪ್ರತಿಯೊಂದು ಧಾರ್ಮಿಕ ಆಚರಣೆಗೂ ಸರ್ಕಾರ ಸಾರ್ವಜನಿಕ ಸುವ್ಯವಸ್ಥೆಯ ಬಣ್ಣ ನೀಡಲು ಹೊರಟರೆ ಏನಾಗಬಹುದು? ಬ್ರಾಹ್ಮಣರು ನಾಮ ಧರಿಸಿ ಅಥವಾ ಸಿಖ್ಖರು ಟರ್ಬನ್ ಧರಿಸಿ ಶಾಲೆಗೆ ಹೋದರೆ ಅದು ಸಾರ್ವಜನಿಕ ಸುವ್ಯವಸ್ಥೆಗೆ ಪರಿಣಾಮ ಬೀಳುತ್ತದೆ ಎಂದು ಸರ್ಕಾರ ಹೇಳಲಾದಿತೇ?
ಹಿಜಬ್ ಧರಿಸಿ ಹೊರಗಡೆ ಓಡಾಡಿದ್ರೆ ಸಾರ್ವಜನಿಕ ಸುವ್ಯವಸ್ಥೆ ವಿಷಯವಲ್ಲ, ಮಾರ್ಕೆಟ್‍ಗೆ ಹೋದರೆ ಸಾರ್ವಜನಿಕ ಸುವ್ಯವಸ್ಥೆಯ ವಿಷಯವಲ್ಲ. ಆದರೆ ಹಿಜಬ್ ಧರಿಸಿ ಕಾಲೇಜಿಗೆ ಹೋದರೆ ಸಾರ್ವಜನಿಕ ಸುವ್ಯವಸ್ಥೆ ಹೇಗಾತ್ತದೆ? ಜನರು ತಮ್ಮ ಮೂಲಭೂತ ಹಕ್ಕು ಚಲಾಯಿಸಲು ಸರ್ಕಾರ ವ್ಯವಸ್ಥೆ ಮಾಡಬೇಕು. ಶಾಲೆಗೆ ಹೋಗುವ ವಿದ್ಯಾರ್ಥಿಗಳ ಹಕ್ಕನ್ನು ಸರ್ಕಾರ ರಕ್ಷಣೆ ಮಾಡಬೇಕು.
ಶಾಲೆಗಳಲ್ಲಿ ಯಾರೋ ನಾಮ ಧರಿಸಿ ಬಂದರೆ, ಹಿಜಬ್ ಧರಿಸಿ ಬಂದರೆ, ಕ್ರಾಸ್ ಧರಿಸಿ ಬಂದರೆ ಅದು ಸಕಾರಾತ್ಮಕ ಜ್ಯಾತ್ಯಾತೀತತೆ. ನಾಲ್ಕೈದು ದಿನಗಳಿಂದ ಹಿಜಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಕಾಲೇಜುಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಮಾಡಲಾಗಿದೆ. ಹಿಜಬ್ ಧರಿಸಿದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿದ್ದು `ಧಾರ್ಮಿಕ ಅಸ್ಪ್ರಶ್ಯತೆ’. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಕಾನೂನು ಮಾಡಬಹುದು, ಬಾರ್ ಕೌನ್ಸಿಲ್ ರೀತಿಯಲ್ಲೇ. ಆದರೆ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಬಹುದೇ ಎಂಬುದೇ ಪ್ರಶ್ನೆ.
ಜಡ್ಜ್ ಹೇಳಿದ್ದೇನು..?
ಸಂವಿಧಾನ ಏನು ಹೇಳಿದೆಯೋ ಅದರಂತೆಯೇ ತೀರ್ಮಾನ. ಸಂವಿಧಾನವೇ ನನಗೆ ಭಗವದ್ಗೀತೆ. ಭಾವನೆಗಳ ಆಧಾರದಲ್ಲಿ ಆದೇಶ ಕೊಡಲು ಆಗಲ್ಲ, ಭಾವನೆಗಳನ್ನು ಪಕ್ಕಕ್ಕಿಡಿ. ಎರಡು ತಿಂಗಳ ಬಳಿಕ ನಿಯಮ (ಯೂನಿಫಾರಂ ನಿಯಮ) ಮಾಡಿದರೆ ಪಾಲಿಸುತ್ತೀರಾ?
ಪ್ರತಿ ದಿನ ವಿದ್ಯಾರ್ಥಿಗಳು ಬೀದಿಯಲ್ಲಿ ಹೋರಾಟ ಮಾಡುವುದನ್ನು ನೋಡಲಾಗದು. ಇದು ಒಳ್ಳೆಯ ದೃಶ್ಯ ಅಲ್ಲ. ನಮ್ಮನ್ನು ಅಂತಾರಾಷ್ಟ್ರೀಯ ಸಮುದಾಯ ಗಮನಿಸುತ್ತಿದೆ. ವಾಟ್ಸಾಪ್ ಓಪನ್ ಮಾಡಿದಾಗಲೆಲ್ಲ ಹಲವು ಮೆಸೇಜ್‍ಗಳು ಬರುತ್ತಿವೆ. ಕೋರ್ಟ್ ಆ ಆದೇಶ ಹೊರಡಿಸಿದೆ ಈ ಆದೇಶ ಹೊರಡಿಸಿದೆ ಎಂದು ಅಸಂಖ್ಯಾತ ಸಂಖ್ಯೆಗಳಿಂದ ಮೆಸೇಜ್ ಬರುತ್ತಿದೆ.
`ಹಿಜಬ್’ ಇಸ್ಲಾಂ ಅವಿಭಾಜ್ಯ ಅಂಗವೇ ಎಂಬ ಬಗ್ಗೆಯಷ್ಟೇ ವಿಚಾರಣೆ ಮಾಡುತ್ತೇವೆ. ಉಡುಪು ಧರಿಸುವುದು ಖಾಸಗಿತನ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ನಾನು ವಿದ್ಯಾರ್ಥಿಯಾದ ದಿನದಿಂದ ಇಂಥಾ ಸಂಘರ್ಷವನ್ನು ನೋಡಿರಲಿಲ್ಲ. ಪ್ರತಿಭಟನೆ ಮಾಡುವುದು, ಬೀದಿಗಿಳಿಯುವುದು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವುದು. ವಿದ್ಯಾರ್ಥಿಗಳು ಇತರರ ಮೇಲೆ ಹಲ್ಲೆ ನಡೆಸುವುದು ಒಳ್ಳೆಯದಲ್ಲ. ವಿದ್ಯಾರ್ಥಿಗಳು ಶಾಂತಿ ಕಾಪಾಡಬೇಕು.. ಜನರು ಸುವ್ಯವಸ್ಥೆ ಪಾಲಿಸಬೇಕು. ಕೋರ್ಟ್‍ಗೆ ನಂಬಿಕೆ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243