ಅಂತರಂಗ

ಹೋಳಿ ಎಂಬ ಬಯಲು ಲೈಂಗಿಕತೆಯ ಪಳಿಯುಳಿಕೆ

Published

on

  • ಆರಡಿಮಲ್ಲಯ್ಯ ಕಟ್ಟೇರ

ಹೋಳಿ ಆಟವು ಫಲವಂತಿಕೆಯ ಬಯಲು ಲೈಂಗಿಕಕ್ರಿಯೆಯ ರೂಪವೆಂಬುದನ್ನು ಈ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ವಿಲ್ ಡ್ಯೂರಾಂಟ್ ಕೂಡ ಹೋಳಿಯನ್ನು ಮುಕ್ತ ಲೈಂಗಿಕಕ್ರಿಯೆಯೆಂದು ಬರೆಯುತ್ತಾನೆ. ‘ವಾಸಂತಿದೇವಿಯ ಗೌರವಾರ್ಥ ಆಚರಿಸುವ ಹೋಲಿ ಹಚ್ಚುವ ಸ್ವೇಚ್ಚಾರದ ಲಕ್ಷಣವನ್ನು ತಳೆಯುತ್ತಿತ್ತು. ಲಾಂಛನಗಳನ್ನು ಮೆರವಣಿಗೆಗಳಲ್ಲಿ ಗೆದ್ದುಕೊಂಡು ಹೋಗುತ್ತಿದ್ದರು. ಅವುಗಳಿಂದ ಮೈಥುನದ ಚಲನೆಗಳನ್ನು ಅಭಿನಯಿಸಿ ತೋರಿಸುತ್ತಿದ್ದರು.

ಛೋಟಾನಾಗಪುರದಲ್ಲಿ ಸುಗ್ಗಿಯ ಕಾಲವು ಸಾರ್ವತ್ರಿಕ ಸ್ವೇಚ್ಛಾಚಾರಕ್ಕೆ ಸಂಕೇತವಾಗುತ್ತಿತ್ತು. ಪುರುಷರು ಎಲ್ಲಾ ರೀತಿಯ ರಿವಾಜುಗಳನ್ನು ಪಕ್ಕಕ್ಕಿಡುತ್ತಿದ್ದರು. ಮಹಿಳೆಯರು ಎಲ್ಲಾ ಲಜ್ಜೆಯನ್ನು ತೊರೆಯುತ್ತಿದ್ದರು. ತರುಣಿಯರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡಲಾಗುತ್ತಿತ್ತು’ ಎನ್ನುತ್ತಾನೆ.

ಚೀನಾದೇಶದಲ್ಲಿಯೂ ನಾಟಕವು ಧಾರ್ಮಿಕ ಫಲವಂತಿಕೆಯ ಆಚರಣೆಯಾಗಿಯೇ ನಡೆಸಲ್ಪಡುತ್ತಿತ್ತೆಂದು ಡ್ಯೂರಾಂಟ್ ಬರೆಯುತ್ತಾನೆ. ‘ಚೌ’ ರಾಜವಂಶದ ಅವಧಿಯಲ್ಲಿ, ನಾಟಕ ಸ್ವಚಂದತೆ, ಅಶ್ಲೀಲಗಳು ಮುಜುಗರ ಉಂಟು ಮಾಡುತ್ತವೆ ಎಂಬ ಕಾರಣದಿಂದ ನಾಟಕವನ್ನು ನಿಷೇಧಿಸಲಾಯಿತು. ಬುದ್ಧನು ಭಿಕ್ಕುಗಳು ನಾಟಕವನ್ನು ಯಾವುದೇ ಕಾರಣಕ್ಕೆ ನೋಡಬಾರದೆಂದು ಎಚ್ಚರಿಕೆ ವಿಧಿಸಿದ್ದ.

ಬೇಟೆಯೆಂದರೆ ಸಂಭೋಗವೆಂಬ ಅರ್ಥವೂ ಇದೆ; ಬೇಟ ಎಂದರೂ ಪ್ರಣಯವೇ. ಆಹಾರ ಸಂಚಯದ ಬೇಟೆಗೂ ಬೇಟಕ್ಕೂ ಅವಿನಾಭಾವ ಸಂಬಂಧವಿದೆ. ನಿರ್ಧಿಷ್ಟ ಅವಶ್ಯಕ ಸಂದರ್ಭದ ಕ್ರಿಯಾತ್ಮಕ ರೂಪುರೇಷೆಯೇ ಅನುಕರಣೆಯ ಒತ್ತಡವಾಗಿರುತ್ತದೆ. ಮಾನವನ ಜೀವವಿಕಾಸದ ಹಂತಗಳ ಪ್ರತಿಯೊಂದು ನಡೆಯಲ್ಲೂ ಸಂದರ್ಭದ ಸ್ಥಿರ ಅನುಕರಣೆಯನ್ನು ಮೀರಿ ನಡೆಯುವುದು ಬಹುಮುಖ್ಯ ಹಂತವಾಗಿದೆ. ಆದಿ ಮಾನವನ ಬದುಕು ಮತ್ತು ವೈಜ್ಞಾನಿಕ ಅನ್ವೇಷಣೆ ಶುರುವಾಗುವುದು ಬೇಟೆಯಿಂದ.

ಬೇಟೆಯು ಆರಾಧನೆಯಲ್ಲವಾದರೂ, ಅನುಕರಣೆಯ ಅರ್ಧಭಾಗದ ಔಪಚಾರಿಕ ಶಿಕ್ಷಣವೆಂದರೆ ಸರಿಯಾದೀತು. ಇಂಥ ಸಂದರ್ಭದಲ್ಲಿ ಬೇಟೆಗೂ ಬೇಟಕ್ಕೂ ಪ್ರತ್ಯೇಕಿಸಲಾಗದ ತಳಾದಿಯ ಸಂಬಂಧಗಳಿವೆ. ಪ್ರಾಣಿಗಳ ಬೇಟೆಯ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದ ವ್ಯಕ್ತಿಯು ಅನುಕರಿಸಿಯೇ ಬೇಟೆ ಮತ್ತು ಲೈಂಗಿಕ ಶಿಕ್ಷಣವನ್ನು ಪಡೆದದ್ದು. ಮನುಷ್ಯನ ಬೌದ್ಧಿಕ ವಿಕಾಸದ ಹಾದಿಯಲ್ಲಿ ಬೇಟೆಯ ಕ್ರಮ ಸಂಭ್ರಮದ ವಾತಾವರಣವನ್ನು ನಿರ್ಮಿಸಿರಬೇಕು.
ಬೇಟೆಯನ್ನು ನೇರ ಪ್ರಾಣಿಗಳಿಂದ ಕಲಿಯಲಾಗದ ಕೆಲವರಿಗೆ ಅದು ಬೇಟೆಯಾಡುವ ಸಹಜಾಭಿನಯದ ಪ್ರಸ್ತುತಪಡಿಸುವಿಕೆಯಾಗಿರಬಹುದು.

ಇದರಿಂದಾಗಿ ಬೇಟೆಯ ಪ್ರಮಾಣ ಹೆಚ್ಚಿ ಆ ಸಮಾರಾಧನೆಯೇ ಮುಂದೆ ಆಚರಣೆಯ ರೂಪಕ್ಕೆ ತಿರುಗಿ ಬಯಲಾಟ ಆಗಿರಬಹುದಾದ ಸಾಧ್ಯತೆಗಳಿವೆ. ಬೆಂಕಿಯ ಮುಂದೆ ಸೇರಿದ ಗುಂಪು ಆಹಾರ, ಮೈಥುನ, ನಿದ್ದೆಯನ್ನೂ ಸಹಜವೆಂಬಂತೆ ಬೆಂಕಿಯ ಬಯಲಲ್ಲಿಯೇ ಸಾಂಗವಾಗಿ ಸಾಗಿಸಿಕೊಂಡು ಬಂದಿರಲೂ ಸಾಧ್ಯ. ಬಯಲಾಟದ ಸಂದರ್ಭದಲ್ಲಿ ಹಿಡಿಯುವ ದೀವಟಿಗೆಗಳ ಕ್ರಮವೂ ಅದನ್ನೇ ಸಂಕೇತಿಸುತ್ತದೆ. ಇಂದಿಗೂ ನಡೆಯುವ ಕಾಮದಹನ ಹೋಳಿಯಲ್ಲಿ ಬೆಂಕಿಯನ್ನು ಕಾಮಾಗ್ನಿಯಾಗಿ ಪರಿಭಾವಿಸುತ್ತಿರುವುದು ಕಂಡುಬರುತ್ತದೆ.

ಕಾಡುಪ್ರಾಣಿಗಳ ದೇಹಗಳನ್ನು ಸುಟ್ಟು ತಿನ್ನಲು, ಅವುಗಳಿಂದ ರಕ್ಷೆ ಪಡೆಯಲು, ಕತ್ತಲನ್ನು ನೀಗಿಸಿದ ಬೆಳಕಾಗಿ ಮಾತ್ರ ದ್ರಾವಿಡ ಆಚರಣೆಗಳಲ್ಲಿ ಬೆಂಕಿಗೆ ಸ್ಥಾನವಿದೆ. ವಿಶೇಷವೆಂದರೆ ಆಚರಣೆಯ ಸಂದರ್ಭಗಳಲ್ಲಿ ಬೆಂಕಿಯ ಪ್ರಸ್ತುತತೆಯು ನಿಷೇಧಾತ್ಮಕ ಹಾಗೂ ಸಂಘರ್ಷಾತ್ಮಕ ನೆಲೆಗಳಲ್ಲಿಯೇ ನೆಲವಾಸಿ ದ್ರಾವಿಡ ಮತಗಳಲ್ಲಿ ಕಂಡುಬರುತ್ತದೆ. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧ ವರ್ತನಾತ್ಮಕ ಹಾಗೂ ಆಹಾರ, ಮೈಥುನ ಮುಂತಾದ ವೈಲಕ್ಷಣಗಳ ಮೂಲಕ ಈ ಕ್ರಮವನ್ನು ಗುರುತಿಸಲಾಗುತ್ತದೆ.

ಕಾಡುನಾಗರಿಕ ವ್ಯವಸ್ಥೆಯನ್ನು ದಾಟಿ ನಗರನಾಗರಿಕತೆಯ ಹೊಸ್ತಿಲನ್ನು ಮುಟ್ಟಿದ ಮೇಲೂ ಬಹಳ ಕಾಲದವರೆಗೆ ಮನುಷ್ಯ ಭೂತಕಾಲದ ಅನೇಕ ಅಭ್ಯಾಸಗಳನ್ನು ಪೂರ್ಣವಾಗಿ ಬಿಡಲಾರ. ನಾಗರಿಕ ಸಮಾಜದ ಮನುಷ್ಯನ ಗ್ರಹಿಕೆಗಳು ಹಾಗೂ ನಂಬಿಕೆಗಳಲ್ಲಿ ಆದಿಮಕಾಲದ ನಂಬಿಕೆಗಳು ಹಾಗೇ ಅಂಟಿಕೊಂಡಿವೆ.

ಆದುದರಿಂದಲೆ ನಾಗರಿಕತೆಯ ಪ್ರಾರಂಭದ ದೆಸೆಯ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಲು ಕಾಡುನಾಗರಿಕ ಅವಸ್ಥೆಯ ಸನ್ನಿವೇಶಗಳನ್ನು ವಿಶೇಷವಾಗಿ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಒಂದು ಆಚರಣೆಯನ್ನು ಹೊರಗಿನಿಂದ ನೋಡಿ ಅದರ ಆಶಯವನ್ನು ಗ್ರಹಿಸುವುದು ಕಷ್ಟವಾದಾಗ ಒಳಗಿನಿಂದಲೇ ಸೀಳಿನೋಡಬೇಕಾಗುತ್ತದೆ. ಅರ್ಥಾತ್ ಅದರಲ್ಲಿ ಬಳಕೆಯಾಗುವ ವಿವಿಧ ಸಾಧನ ಸಲಕರಣೆಗಳ ಸಾಂಕೇತಿಕತೆ ಮೂಲಕ ಅದರ ಆಶಯ ಗ್ರಹಿಸಬೇಕಾಗುತ್ತದೆ.

ನಾವು ಹೋಳಿಯನ್ನು ಇಂದಿನ ರೂಪದಲ್ಲಿ ನೋಡುವ ಮೊದಲು ಗತದ ಚಾರಿತ್ರಿಕ ಮಹತ್ವವನ್ನು ಗುರುತಿಸಬೇಕಾಗಿದೆ.
ಹೋಳಿ ಆಚರಣೆಯನ್ನು ಕುರಿತು ಎಸ್.ಎಸ್. ಹಿರೇಮಠರು, ಡಿ.ಲಿಂಗಯ್ಯನವರ ಲೇಖನದಲ್ಲಿ ಪ್ರಸ್ತಾಪವಾಗಿರುವುದನ್ನು ಉದ್ಧರಿಸುತ್ತಾರೆ. ‘ವೃಕ್ಷಾರಾಧನೆಯ ಪ್ರಾಚೀನ ಜನಾಂಗವೊಂದು ಕಾಮನಹಬ್ಬದ ಆಚರಣೆಗೆ ಕಾರಣವಾಗಿರುವ ಸಾಧ್ಯತೆಯಿದೆ. ಮಾವಿನಮರ ಅಥವಾ ಬೇವಿನಮರವನ್ನು ಪೂಜಿಸುತ್ತಿದ್ದ ಜನಪದ ಜನಾಂಗದ ಸಾಂಕೇತಿಕ ಆಚರಣೆ ಕಾಮನಹಬ್ಬ ಎಂದು ಊಹಿಸಲು ಅವಕಾಶವಿದೆ.

ಮೂಲದಲ್ಲಿ ಇದು ಶಿಶ್ನಪೂಜೆ, ಫಲವಂತಿಕೆಯ ಆರಾಧನೆ, ಕೃಷಿಕರ ಹಬ್ಬ ಶೂದ್ರ ಉತ್ಸವ. ಬೇವಿನ ಸೊಪ್ಪಿಗೆ ಕಾಮನ ಹೂವ್ವು ಎನ್ನುವ ಹೆಸರಿದೆ. ಎಸ್.ಎಸ್. ಹಿರೇಮಠರು ಹೊಸಪೇಟೆಯ ಕ್ಷೇತ್ರಕಾರ್ಯದ ಮಾಹಿತಿಯೊಂದನ್ನು ಹೇಳುತ್ತಾ ಹೋಳಿಯ ಸಂದರ್ಭದಲ್ಲಿ ಮಾಂಸಹಾರ ಭೋಜನ ಸಾಮೂಹಿಕವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಲೈಂಗಿಕ ಸ್ವಚ್ಛಂದತೆಯಿರುತ್ತದೆ ಎಂದು ಮುದುಕರೊಬ್ಬರು ಹೇಳಿದ್ದನ್ನು ದಾಖಲಿಸಿದ್ದಾರೆ.

ಹೋಳಿ ಪ್ರಾದಿಮಕಾಲದ ಸಮುದಾಯದ ಸ್ಥಿರತೆ ಮತ್ತು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಫಲವಂತಿಕೆಯೇ ಮೂಲ ಉದ್ದೇಶವಾಗಿದ್ದ ಬಯಲು ಆಟವೇ ಆಗಿತ್ತೆನ್ನುವುದನ್ನು ಅನೇಕರು ಪ್ರಸ್ತಾಪಿಸಿದ್ದಾರೆ. ‘ಈ ಪ್ರಾಚೀನ ಆಚರಣೆಗಳು ಬೇರೆಯದೆ ಉದ್ದೇಶಗಳಿಗಾಗಿ ಹುಟ್ಟಿಕೊಂಡವು ಎಂಬುದಂತೂ ನಿಜ. ಇದನ್ನು ಅರ್ಥಮಾಡಿಕೊಳ್ಳದೆ ಹೋಗಿರುವುದು ಈಗ ನಿಜವಾಗಿಯೂ ಸಮಸ್ಯೆಯಾಗಿದೆ.

ಉದಾಹರಣೆಗೆ: ವಸಂತನ ಹೋಳಿಹಬ್ಬವು ಇಂದು ಸಾರ್ವಜನಿಕರು ಮತ್ತು ಕಾನೂನುಗಳೆರಡರ ದೃಷ್ಠಿಯಲ್ಲಿಯೂ ಒಂದು ಅಶ್ಲೀಲ ಕಾಮುಕ ಹಾಗೂ ಅಸಹ್ಯಕರ ಹಬ್ಬ. ಈ ಹಬ್ಬ ಹುಟ್ಟಿಕೊಂಡದ್ದು ಅತ್ಯಂತ ಪ್ರಾಚೀನ ಅನಾಗರಿಕ ಕೃಷಿಪೂರ್ವ ಕಾಲದಲ್ಲಿ. ಆಗ ಆಹಾರದ ಕೊರತೆಯಿತ್ತು, ಅದರ ಪೂರೈಕೆಯೂ ಕೂಡ ಅನಿರ್ದಿಷ್ಟವಾಗಿತ್ತು. ಹೀಗೆ ಆಹಾರದ ಸಂಗ್ರಹಣೆಯೇ ಜೀವನೋಪಾಯವಾಗಿದ್ದ ಕಾಲದಲ್ಲಿ ಸಂತಾನಾಭಿವೃದ್ಧಿಗೆ ತೀವ್ರ ಪ್ರಚೋದನೆಯ ಅವಶ್ಯಕತೆಯಿತ್ತು. ಇಲ್ಲವಾದಲ್ಲಿ ಒಡಲಿನ ಹಸಿವು ಸಂತನೋತ್ಪತ್ತಿಗೆ ಮಾರಕವಾಗಿ ಬಿಡಬಹುದಿತ್ತು. ಹಾಗಾಗಿ ಮೂಲದಲ್ಲಿ ಹೋಳಿ ಒಂದು ಅಶ್ಲೀಲ ಹಬ್ಬವಾಗಿರಲೆ ಇಲ್ಲ’ ಎಂದು ದೇವಿಪ್ರಸಾದ್ ಚಟ್ಟೋಪಧ್ಯಾಯರು ಬರೆಯುತ್ತಾರೆ.

ಹೋಳಿಹಬ್ಬದ ಮೂಲ ಆಶಯವು ಮಾನವರ ಪ್ರಾಣಿಗಳ ಮತ್ತು ಬೆಳೆಗಳ ಫಲವತ್ತತೆಯನ್ನು ಹೆಚ್ಚಿಸುವುದೇ ಆಗಿತ್ತೆಂದು ಅನೇಕ ವಿದ್ವಾಂಸರು ವಿವರಿಸಿದ್ದಾರೆ. ಅದರ ಮೂಲರೂಪದಲ್ಲಿ ಹಾಗೂ ಲೈಂಗಿಕ ಸ್ವಚ್ಛಂದತೆಯೂ ಸೇರಿತ್ತು. ರಾಜಮಹಲ್ ಬೆಟ್ಟಗಳಲ್ಲಿ ಪರ್ಗಣ ಉತ್ಸವದ ವೇಳೆ ಅವಿವಾಹಿತರು ಲೈಂಗಿಕಕ್ರಿಯೆಯಲ್ಲಿ ತೊಡಗುತ್ತಿದ್ದರು. ಒರಿಸ್ಸಾದ ಭೂಮಿಯಾಗಳು ತಮ್ಮ ವಸಂತೋತ್ಸವದ ವೇಳೆ ರಕ್ತಸಂಬಂಧ ಪತಿ-ಪತ್ನಿ ಸಂಬಂಧ ಎಂಬುದಕ್ಕೆಲ್ಲಾ ಬೆಲೆ ಕೊಡುವುದಿಲ್ಲ. ನೀಲಗಿರಿ ಬೆಟ್ಟದ ಕೊತರಲ್ಲೂ ಇದೇ ಪದ್ಧತಿಯಿದೆ.

ಅಸ್ಸಾಮಿನ ಬುಡಕಟ್ಟುಗಳು ಬೊಂಬೆಗಳು ಮಣಿಪುರದ ಬುಡಕಟ್ಟುಗಳು ಇತ್ಯಾದಿಗಳು ಸಹ ಇದಕ್ಕೆ ಹೊರತಲ್ಲ. ಮೇಲೆ ಹೇಳಲಾದ ವಿದ್ವಾಂಸರ ಮಾತುಗಳನ್ನು ಒಪ್ಪಿಕೊಂಡು ಮುಂದುವರಿದರೆ ಬಯಲಾಟವು ಫಲವಂತಿಕೆಯ ಲೋಕವಾದಿ ಆಚರಣೆಯಾಗಿತ್ತೆಂದು; ಅದೇ ಆಚರಣೆ ಬಯಲಾಟವಾಯ್ತೆಂದು ತಿಳಿಯಲು ಸುಲಭವಾಗುತ್ತದೆ.
ಪ್ರಾಚೀನ ಇಂಡಿಯಾದ ಉತ್ಪಾದನಾ ವಿಧಿ ಆಚರಣೆಗಳ ಯಾವುದೋ ರೀತಿಯಲ್ಲಿ ಸಮಾಜಗಳ ಸೃಷ್ಟಿ ಹಾಗೂ ಪುನರುತ್ಪಾಧನೆಯನ್ನು ನಡೆಸುತ್ತವೆಂಬ ಸಹಜಜ್ಞಾನವು ಪ್ರಾಚೀನರು ಹಾಗೂ ಆಧುನಿಕರಿಬ್ಬರಿಗೂ ಇದೆಯೆಂದಾದಲ್ಲಿ ಈ ಸಹಜಜ್ಞಾನವನ್ನು ವಿವರಿಸುವುದು ನಮ್ಮ ಸಮಸ್ಯೆಯಾಗಿದೆ.

ಪ್ರಾರಂಭಕ್ಕೆ ಅತಿಮಾನವನ ಅಥವಾ ನಿಸರ್ಗದಾಚೆಗಿನ ಒಂದು ಶಕ್ತಿ ಎಂಬುದರ ಕಲ್ಪನೆ ಇಲ್ಲ. ಏಕೆಂದರೆ ಈ ಆದಿ ಬುಡಕಟ್ಟಿನ ಜನರಿಗೆ ಒಂದು ಮತವಿದೆ. ಆದರೆ ಅವರಿಗೆ ದೈವವೆಂಬುದರ ಕಲ್ಪನೆ ಇಲ್ಲ…. ಹಾಗೆ ಮತಧರ್ಮಕ್ಕೆ ದೈವದ ಕಲ್ಪನೆ ಇರಲೇಬೇಕೆಂದು ಭಾವಿಸುವುದಾದರೆ ಬೌದ್ಧಮತವು ಕೂಡ ಒಂದು ಧರ್ಮವಾಗಿ ಪರಿಗಣಿತವಾಗುವಂತಿಲ್ಲ. ಏಕೆಂದರೆ ಅಲ್ಲಿ ದೈವಕ್ಕೆ ಸ್ಥಾನವಿಲ್ಲ. ಅತಿ ಪ್ರಾಚೀನವಾದ ಮಾನವನ ಸಮುದಾಯಗಳಲ್ಲಿ ಮತಧರ್ಮವೆಂಬುದು ಇರಲು ಸಾಧ್ಯವಿರಲಿಲ್ಲವೆಂದು ಜಾನ್‌ಲುಬಾಕ್‌ನ ಅಭಿಪ್ರಾಯವಾಗಿದೆ.

ಹದಿನಾಲ್ಕನೆಯ ಶತಮಾನದ ನಂತರ ಭಕ್ತಿಪಂಥದ ಪ್ರಭಾವದಿಂದ ಭಾರತೀಯ ಬಹುಮುಖ್ಯ ಆಚರಣೆಗಳೆಲ್ಲವೂ ಲೌಕಿಕವನ್ನು ನಿರ್ಲಕ್ಷಿಸುವ ಪ್ರಯತ್ನ ಮಾಡಿದವು. ಭವವನ್ನು ನೀಗಿಸಿಕೊಳ್ಳುವ ಮೂಲಕ ಮೋಕ್ಷಕ್ಕೆ ಸಾಧನವೆಂಬಂತೆ ಭಕ್ತಿಯು ಮೂಲಸ್ಥಾಯಿಯಾಯಿತು. ಆಶಯವು ಏನೇ ಇದ್ದರೂ ಪರಿಣಾಮ ನೆಲಮೂಲ ಲೋಕವಾದಕ್ಕೆ ದೊಡ್ಡ ಪೆಟ್ಟು ನೀಡಿತು. ಒಳಿತೆಲ್ಲವೂ ದೈವಾನುಗ್ರಹವೆಂಬ ಮನೋಭಾವ ಪ್ರಬಲವಾದಂತೆ ನಾಟಕದ ಮೂಲವನ್ನೂ ದೈವತ್ವದ ಕೇಂದ್ರಕ್ಕೆ ಒಯ್ಯಲು ಸುಲಭವಾಯಿತು.

ನಂತರದ ದಿನಮಾನಗಳಲ್ಲಿ ನಾಟಕವನ್ನು ಅಧ್ಯಯನ ಮಾಡಿದವರೂ ಸಂಪ್ರದಾಯವಾದಿಗಳಾಗಿರದಿದ್ದರೂ ದೈವತ್ವವನ್ನು ನಿರಾಕರಿಸದವರಾದ ಕಾರಣ ದೈವಮೂಲ ಪ್ರಬಲವಾಗಿ ಸಂಶೋಧನೆಯಲ್ಲೂ ಮಹತ್ತರ ಸ್ಥಾನಪಡೆಯಿತು. ‘ಜನತಾ ರಂಗಭೂಮಿಯ ಹುಟ್ಟು ದೇವಪೂಜೆಯ ಮೂಲ ಮನೋಭಾವದಲ್ಲಿಯೇ ಅಡಗಿದೆ. ಕನ್ನಡನಾಡಿನ ಜಾನಪದ ರಂಗಭೂಮಿಯಾದರೂ ಈ ಮಾತಿಗೆ ಹೊರತಾದುದಲ್ಲ. ಆಹಾರ, ನಿದ್ರಾ, ಭಯ, ಮೈಥುನಗಳ ಕಾರಣದಿಂದಾಗಿ ದೇವರನ್ನೂ ದೆವ್ವಗಳನ್ನೂ ಆರಾಧಿಸುವ ಸಾಮಾನ್ಯ ಸಂಪ್ರದಾಯಗಳ ಆಚರಣೆಯಲ್ಲಿ ಹಳ್ಳಿಯ ನಾಟಕದ ಹುಟ್ಟನ್ನು ಕಾಣಬಹುದಾಗಿದೆ.

ಮಳೆ, ಗುಡುಗು, ಮಹಾಪೂರ, ಕ್ಷಾಮ, ರೋಗ, ಮರಣ ಈ ಎಲ್ಲವೂ ನೈಸರ್ಗಿಕ ಶಕ್ತಿಗಳ ಕೈವಾಡದ ಕಾರಣವೆಂದು ನೆರೆನಂಬಿದ್ದ ಪ್ರಾಚೀನ ಕನ್ನಡಿಗರು, ಆ ಶಕ್ತಿಗಳನ್ನು ಒಲಿಸಿಕೊಳ್ಳುವ ಸಲುವಾಗಿ ಮಾಡುತ್ತಿದ್ದ ಉಪಾಸನೆಗಳಲ್ಲಿ ಅಂತಹ ಶಕ್ತಿಗಳ ಅನುಕರಣವೂ ಅಡಗಿ ನಾಟಕ ಹುಟ್ಟಿತು’ ಎಂದು ಭಾವಿಸಿ ಪ್ರಾಚೀನಕಾಲದಲ್ಲಿ ನಡೆಯುತ್ತಿದ್ದ ಲೋಕಕ್ರಿಯೆಗಳನ್ನು ಸಾಂಕೇತಿಕಾರ್ಥದಲ್ಲಿ ಆಚರಿಸುವ ವಿಧಿಯಾಚರಣೆಗಳನ್ನು ಅಧ್ಯಯನಕಾರರು ದೈವಪೂಜೆ ವಿಧಿವಿಧಾನಗಳೆಂದು ಅರ್ಥೈಸಿಕೊಂಡಿದ್ದಾರೆ.

ದೈವಾರಾಧನೆಯೇ ಬಯಲಾಟದ ಮೂಲ ಎಂದು ಸಾಕ್ಷ್ಯ ಒದಗಿಸುವ ಸಂಶೋಧಕರು ಗ್ರೀಕ್‌ದೇಶದಲ್ಲೂ ದೈವಾರಾಧನೆಯಿಂದಲೇ ಬಯಲಾಟವು ಆರಂಭವಾಯಿತೆಂದು ಡಯೋನಿಸಿಯಸ್ ದೇವತೆಯ ಆಚರಣೆಯನ್ನು ಸಾಕ್ಷ್ಯವಾಗಿ ನೀಡುತ್ತಾರೆ. ಗ್ರೀಕ್ ರಂಗಭೂಮಿಯ ಮೂಲ ಡಯೋನಿಸಿಯಸ್ ಎಂಬ ಫಲಕೊಡುವ ದೇವರ ಪ್ರೀತ್ಯರ್ಥವಾಗಿ ನಡೆಯುತ್ತಿದ್ದ ಧಾರ್ಮಿಕ ಆಚರಣೆ. ಕ್ರಿ.ಪೂ. 13ನೆಯ ಶತಮಾನದಲ್ಲೇ ಪ್ರಚಲಿತವಾಗಿದ್ದ ಈ ಆಚರಣೆಯಲ್ಲಿ, ಮೆರವಣಿಗೆಯಲ್ಲಿ ಹೋತ ಬಲಿಕೊಡುವ ಸಂಪ್ರದಾಯವೂ ಮತ್ತು ಡಿಥಿರ್ಯಾಂಬ್ ಎಂಬ ಹೆಸರಿನ ಮೇಳ ಭಜನೆಯೂ ಇರುತ್ತಿತ್ತು. ಮೊದಲು ಈ ಆಚರಣೆ ಬಹುಶಃ ಒಂದು ಉನ್ಮತ್ತ ಕ್ರಿಯಾವಿಧಿಯಾಗಿತ್ತು; ನರಬಲಿಯೂ ಕೂಡಾ ಈ ಆಚರಣೆಯ ಅಂಗವಾಗಿತ್ತು.

ಆದರೆ, ಆಮೇಲೆ ಗ್ರೀಕ್ ನಾಗರಿಕತೆ ವಿಕಾಸಗೊಂಡಂತೆ ಈ ಆಚರಣೆಯೂ ನಾಗರಿಕವಾಗತೊಡಗಿತು. ಕ್ರಿ.ಪೂ. ಏಳನೆಯ ಶತಮಾನದ ಹೊತ್ತಿಗೆ ಗ್ರೀಕ್ ವೀರರ ಕಥೆಗಳು ಈ ಭಜನೆಯ ಪಠ್ಯವಾಗಿ ಸೇರಿಕೊಂಡವು. ಹೀಗೆ ಮಾರ್ಪಾಟುಗೊಂಡ ಈ ಆಚರಣೆಯೇ ಗ್ರೀಕ್ ಬುಡಕಟ್ಟುಗಳನ್ನು ಒಂದುಗೂಡಿಸುವ ಸಾಧನವೂ ಆಗಿದ್ದರಿಂದ ಇದಕ್ಕೆ ಕ್ರಿ.ಪೂ ಆರನೆಯ ಶತಮಾನದಲ್ಲಿ ರಾಜ್ಯದ ಮಾನ್ಯತೆಯೂ ದೊರಕಿತು. ಡಯೋನಿಸಿಯಸ್ ದೇವತಾಚರಣೆಯೂ ಬಯಲು ಲೈಂಗಿಕಕ್ರಿಯೆ ಆಗಿತ್ತೆಂಬುದನ್ನು ಮುಂದೆ ಆಧಾರ ಸಮೇತ ವಿವರಿಸಲಾಗುತ್ತದೆ.

ಪ್ರಾಚೀನ ಕಾಲದ ಕ್ರಿ.ಪೂ. ಶತಮಾನಗಳಲ್ಲಿ ‘ಅಥೆನ್ಸಿನಲ್ಲಿ ಸಮೃದ್ಧಿ ಇತ್ತು. ಆಲೀವ್ ಎಣ್ಣೆಯ ರಫ್ತು ವ್ಯವಹಾರ ಚೆನ್ನಾಗಿ ನಡೆಯುತ್ತಿತ್ತು. ಆ ಕಾರಣದಿಂದಲೇ ಮಣ್ಣಿನ ಜಾಡಿಗಳನ್ನು ಮಾಡುವ ಉಧ್ಯಮ ಬೆಳೆಯಿತು. ಮಣ್ಣಿನ ಹೂಜಿಯ ಮೇಲೆ ಕೆಂಪುಬಣ್ಣದ ಚಿತ್ರಗಳನ್ನು ಬಿಡಿಸುವ ಕಲೆ ಕ್ರಿ.ಪೂ. ೫೩೫ರ ಸುಮಾರಿಗೆ ಸಿದ್ದಿಸಿತು. ಇಡೀ ಜಾಡಿಯನ್ನು ಕಪ್ಪಾಗಿಸಿ ಅದರ ಮೇಲೆ ಸಹಜ ಕೆಂಪುಬಣ್ಣದಲ್ಲಿ ವಾಸ್ತವವೆಂಬಂತೆ ಕಾಣುವ ಚಿತ್ರಗಳನ್ನು ಮೂಡಿಸುತ್ತಿದ್ದರು.

ಎಣ್ಣೆಯ ವ್ಯಾಪಾರ ಒಳನಾಡಿನಲ್ಲೂ ನಡೆಯುತ್ತಾ ಜನಸಾಮಾನ್ಯರ ಆಚರಣೆ, ಸಮೂಹಗಾನ, ಅಣಕುನೃತ್ಯ, ಮದ್ಯ ದೇವತೆಯಾದ ಡಯೊನೀಸಿಯಸ್‌ನ ಆರಾಧನೆ, ಇವು ವ್ಯಾಪಕವಾಗಿ ನಗರಕ್ಕೂ ತಲುಪಿ ಈ ಆಚರಣೆಗಳೇ ರಂಗಭೂಮಿಯ ತಳಹದಿಗಳಾದವು. ಆಚರಣೆಯ ಸಮಯದಲ್ಲಿ ಹೋತದ ಬಲಿ ಕೊಡುತ್ತಿದ್ದರು. ಹಾಗಾಗಿ ಆ ಆಚರಣೆ ಟ್ರಾಗ್ ಓಡಿಯಾ ಅಥವಾ ಹೋತಗೀತೆ ಎಂಬ ಹೆಸರಿತ್ತು. ಅಂದರೆ ಬಲಿ ಮತ್ತು ಟ್ರಾಜಿಡಿಗಳ ನಡುವೆ ನೇರ ಸಂಬಂಧವಿದೆ. ಈ ಆದಿಮ ಬಲಿ ಆಚರಣೆಯೇ ಅತ್ಯಂತ ಶಕ್ತ ರಂಗಭೂಮಿ ಪ್ರತಿಮೆಯಾಗಿದೆ.

ಗ್ರೀಕ್‌ಮೂಲದಿಂದ ನಾಟಕಗಳ ಉಗಮವನ್ನು ಅನ್ವಯಿಕವಾಗಿ ಗುರುತಿಸುವುದೂ ಕನ್ನಡ ಸಂಶೋಧನೆಯ ಬಹುಮುಖ್ಯ ಲಕ್ಷಣಗಳಲ್ಲಿ ಒಂದು. ಪಾಶ್ಚಾತ್ಯ ಮಾದರಿಗಳ ಮೂಲಮಾನದಿಂದ ಕನ್ನಡದ ಅಸ್ಮಿತೆಗಳ ಆಂತರ್ಯವನ್ನು ಅರಿಯುವುದು ನಷ್ಟವಲ್ಲದಿದ್ದರೂ ನೆಲಮೂಲದ ಸತುವನ್ನು ಕಡೆಗಣಿಸದಿದ್ದರೆ ಆಯಿತು. ಎಲ್ಲವೂ ಗ್ರೀಕ್‌ನಿಂದಲೇ ಬಂದುವು ಎಂಬ ಪೂರ್ವ ತೀರ್ಮಾನವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಂಶೋಧನೆ ತೊಡಗುವುದು ಮಾತ್ರ ಅಪಾಯ. ಗ್ರೀಕ್ ಮೂಲದಿಂದ ಬಯಲಾಟದ ಸ್ವರೂಪ ಇತಿಹಾಸವನ್ನು ಹುಡುಕುವ ಸಂಶೋಧಕರು ಡಯೋನಿಸಸ್ ದೇವತೆಯ ಆಚರಣೆಯನ್ನು ಉದಾಹರಣೆ ನೀಡಿ ಇದರಿಂದ ಪ್ರಭಾವಿತಗೊಂಡ ಆಚರಣೆಗಳು ಕರ್ನಾಟಕದಲ್ಲೂ ಇದ್ದವು ಎಂದು ಬರೆಯುತ್ತಾರೆ.

‘ಡಯೋನಿಸಸ್‌ನ ಉತ್ಸವದಲ್ಲಿ ಲಿಂಗಪೂಜೆಯಿತ್ತು. ನೃತ್ಯಾದಿಗಳಿದ್ದವು. ಇವುಗಳ ವರ್ಣನೆಯನ್ನು ಓದಿದರೆ ಕಾಮದಹನದ ಉತ್ಸವ, ಮೆರವಣಿಗೆ, ವೇಷಭೂಷಣ, ಓಕುಳಿ, ಕುಣಿತ, ಸಂಭ್ರಮ, ಸ್ವಚ್ಛಂಧ ಮುಂತಾದವುಗಳ ಜ್ಞಾಪಕ ಬರುತ್ತದೆ. ಶಿವನು ಪ್ರಾಚೀನ ದೇವತೆ. ಲಿಂಗಪೂಜೆ ೫೦೦೦ ವರ್ಷಗಳ ಕೆಳಗೆ ಸಿಂಧೂ ಪ್ರಾಂತ್ಯದಲ್ಲಿತ್ತು. ಡಯೋನಿಸ್‌ಸನು ಗ್ರೀಸಿಗೆ ಪೂರ್ವದೇಶದಿಂದ ಬಂದ ದೇವತೆಯೆಂದು ಪಾಶ್ಚಾತ್ಯ ವಿದ್ವಾಂಸರೇ ಹೇಳುತ್ತಾರೆ’. ಸಂಸ್ಕೃತ ನಾಟಕಕಾರರು ಗುರುತಿಸುವಂತೆ ಡಯೋನಿಸಸ್ ದೇವತೆ ಪುರುಷದೇವತೆಯಾಗಿರದೆ ಸ್ತ್ರೀದೇವತೆಯಾಗಿದ್ದು ಮುಕ್ತ ಲೈಂಗಿಕತೆಯೇ ಅದರ ಮಾಂತ್ರಿಕ ಆಚರಣೆಯೂ ಆಗಿತ್ತು. ಮಾಂತ್ರಿಕ ಆಚರಣೆಗಳು ನೇರವಾಗಿ ಮಾತೃದೇವತೆಗಳಿಗೆ ಸಂಬಂಧಿಸುತ್ತವೆ.

‘ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅದರ ಆಳ ತಿಳಿದುಕೊಳ್ಳಬೇಕೆಂದರೆ ದೃಷ್ಟಿಯನ್ನು ಹಿಂದಕ್ಕೋಡಿಸಬೇಕು. ಪಕ್ಷಪಾತವೆಂಬುದಿರಕೂಡದು. ಅಭಿಮಾನ ಎಂಬ ಮಾತನ್ನೇ ಕೈಬಿಡಬೇಕು. ಸತ್ಯವನ್ನು ಗ್ರಹಿಸಬೇಕೆಂಬ ಬುದ್ಧಿಮಾತ್ರ ಪ್ರಧಾನವಾಗಿರಬೇಕು. ಆ ಸತ್ಯ ಅವಮಾನಕರವಾಗಿದ್ದರೂ ಸರಿ, ಅಸಹ್ಯವಾಗಿ ಕಂಡರೂ ಸರಿ. ಇಷ್ಟಕ್ಕೂ ಇಂದು ನಮಗೆ ಅಸಹ್ಯ ಎನಿಸುವ ವಸ್ತುವನ್ನು ಅಂದು ಎಲ್ಲರೂ ಆಧರಿಸಿರಬಹುದಲ್ಲವೆ? ಇಂದು ನಮಗೆ ಅವಮಾನಕರವಾಗಿ ಕಂಡ ಸಂಗತಿ ಆ ದಿನಗಳಲ್ಲಿ ದೊಡ್ಡ ಗೌರವದ ವಿಷಯವಾಗಿರಬಹುದು.

ಆದ್ದರಿಂದ ಸತ್ಯವನ್ನೊಪ್ಪಿಕೊಂಡರೆ ಯಾವ ಪ್ರಮಾದವೂ ಇಲ್ಲ’ ಎಂಬ ತಾಪಿ ಧರ್ಮರಾವ್ ಅವರ ಮಾತು ಇಲ್ಲಿ ನೆನೆಸಿಕೊಳ್ಳುವಂಥಾಹದ್ದು. ಹೋಲಿಯನ್ನು ಕುರಿತೂ ಈ ಮಾತು ಅತ್ಯಂತ ಪ್ರಸ್ತುತ. ಬೇರೆ ದೇಶಗಳಲ್ಲಿ ಆಚರಿಸುವ ಹಬ್ಬಗಳನ್ನು ನೀಡಲಾಗಿದೆ. ಅವು ಭಾರತದಲ್ಲಿ ಹೋಳಿ ಎಂದು ಕರೆಯಲ್ಪಡುವ ಆಚರಣೆಯ ಪರ್ಯಾಯ ಹೆಸರುಗಳು.

(ಬಯಲಾಟವೆಂದರೆ ಮುಕ್ತ ಲೈಂಗಿಕಕ್ರಿಯೆಯೆಂಬುದರ ಪರಿಕಲ್ಪನಾತ್ಮಕ ಸಂಶೋಧನೆಯ ಪುಸ್ತಕವೊಂದನ್ನು ಕಳೆದ ಎರಡುವರ್ಷಗಳ ಹಿಂದೆ ಬರೆದು ಮುಗಿಸಿದ್ದೆ. ಅದು ಮತ್ತಷ್ಟು ಪರಿಷ್ಕರಣೆಗೊಂದು ಸೈಂಧವ_ಸಂಕಥನ ಎಂಬ ಹೆಸರಿನಲ್ಲಿ ಪ್ರಕಟವಾಗಲಿದೆ. ಕೆಲವೇ ದಿನಗಳಲ್ಲಿ ಪಲ್ಲವ ಪ್ರಕಾಶನ ಪ್ರಕಟಿಸಲಿದೆ. ಸಂಶೋಧನಾಕೃತಿಯಲ್ಲಿ ಪ್ರಸ್ತುತ ಲೇಖನವು ಇದೆ. ಕೃತಿಯಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಒಂದು ಸಣ್ಣ ಟಿಪ್ಪಣಿ ನಿಮ್ಮ ಓದಿಗೆ.) – ಆರಡಿಮಲ್ಲಯ್ಯ ಕಟ್ಟೇರ.

Trending

Exit mobile version