ಭಾವ ಭೈರಾಗಿ
ಅದೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದಿತ್ತು ಆದರೆ…
ಏನು ಮಾಡ್ಲಿ ಸರ್ ನನಗೆ ಹಣಬಲ ಇಲ್ಲ ಅದೊಂದಿದ್ದಿದ್ದರೆ ಏನು ಬೇಕಾದ್ರು ಮಾಡ್ತಿದ್ದೆ. ನಾನು ಸಾಧನೆ ಮಾಡ್ತಿದ್ದೆ ಸಾರ್ ಆದರೆ ಸರಿಯಾದ ದಾರಿ ತೋರಿಸೋರೆ ಯಾರೂ ಇರಲಿಲ್ಲ. ನಾನು ದುಡಿಬೇಕು ಅಂತ ಏನೇನೋ ಮಾಡ್ತಿನಿ ಸಾರ್ ಸಪೋರ್ಟ್ ಮಾಡೋಕೆ ಮನೇಲಿ ಯಾರೂ ಇಲ್ಲ. ನನ್ ಹೆಂಡತಿಯೊಬ್ಬಳು ಸರಿ ಇದ್ದಿದ್ರೆ ಇಷ್ಟರಲ್ಲಿ ಮನೆ ಕಟ್ಟಿ ಬಹಳ ವರ್ಷ ಆಗಿರ್ತಿತ್ತು. ನಮ್ ಅಪ್ಪ ಅಮ್ಮ ಏನಾದ್ರೂ ಸ್ವಲ್ಪ ಮಾಡಿಟ್ಟಿದ್ರೆ ಇವತ್ತು ನಾನೂ ನಾಲ್ಕು ಜನರ ರೀತಿ ಕೖತುಂಬಾ ದುಡಿತಿದ್ದೆ ಸಾರ್. ಹೀಗೆ ಸಾವಿರ ಸಾವಿರ ಕಾರಣಗಳನ್ನ ನಮಗೆ ನಾವೇ ಹೇಳಿಕೊಂಡು ಸಮಾಧಾನ ಮಾಡಿಕೊಳ್ತೇವೆ. ಆದರೆ ನಮಗೆಲ್ಲರಿಗೂ ಗೊತ್ತು ಇವೆಲ್ಲ ಬರೀ ಕಾರಣಗಳಷ್ಟೇ ಹೊರತು ಸತ್ಯ ಅಲ್ಲ ಅಂತ.
ದೇವರು ನನಗೆ ಅದೊಂದು ಕಿತ್ತುಕೊಂಡುಬಿಟ್ಟ ಇಲ್ಲದಿದ್ರೆ ಮಾಡಿ ತೋರಿಸ್ತಿದ್ದೆ ಅಂತ ಹೇಳ್ತಾರಲ್ಲ ಅವರ ಮಾತನ್ನ ಒಂದು ಮಟ್ಟಕ್ಕೆ ಮನ್ನಿಸಬಹುದು. ಯಾಕಂದ್ರೆ ಅವರು ಬದಲಿಸಲಾಗದ ಅವರಿಂದ ಪಡೆಯಲಾಗದ ಏನನ್ನೋ ದೇವರು ಕಿತ್ತುಕೊಂಡುಬಿಟ್ಟಿರ್ತಾನೆ. ಅದರಲ್ಲಿ ಅವರ ಕಣ್ಣು, ಕಿವಿ, ಕೖ ಕಾಲು ಅಥವಾ ಇವೆಲ್ಲವೂ,,, ಹೀಗೆ ಮೂಲಭೂತವಾಗಿ ಇರಲೇ ಬೇಕಾದ ಏನನ್ನಾದರೂ ಕಿತ್ತುಕೊಂಡಿದ್ರೆ ಆಗ ಕಾಣದ ದೇವರಿಗೆ ಬಯ್ಯುತ್ತಾ ತಿರುಗುವುದರಲ್ಲಿ ಅರ್ಥ ಇರುತ್ತೆ . ಆದರೆ ಗೊತ್ತಿರಲಿ ಗೆಳೆಯರೆ ಹೀಗೆ ಇರಬೇಕಾದ ಅಂಗಗಳಲ್ಲಿ ಕೆಲವನ್ನು ಕಳದುಕೊಂಡ ಬಹುತೇಕರು ಏನಾದರೂ ಸಾಧಿಸಿರ್ತಾರೆ. ಅವರನ್ನ ಕೇಳಿ ನೋಡಿ ಅವರು ಹೇಳೋದು ನನ್ನ ಅಂಗ ವೖಕಲ್ಯ ನನ್ನ ದೌರ್ಬಲ್ಯವಾಗಬಾರದು ಸಾರ್. ಹೀಗಾಗಿ ನಾನು ಯಾರಿಗೂ ಕಡಿಮೆ ಇಲ್ಲ ಅಂತ ತೋರಿಸೋಕೆ ನನ್ನ ಮನಸ್ಸು ತುಡೀತಿತ್ತು. ಅದಕ್ಕೆ ಕಷ್ಟಪಟ್ಟು ಈ ಸಾಧನೆ ಮಾಡಿದೆ ಅಂತಾರೆ. ಅಸಲಿಗೆ ಅವರು ಹೇಳಿದ್ರಲ್ಲ ನಾನು ಎಲ್ಲದೂ ಸರಿಯಿರುವವರಿಗಿಂತ ಕಡಿಮೆ ಇರಬಾರದು ಅಂತ ಆ ಸರಿ ಇರೋರು ಬೇರೆ ಯಾರೂ ಅಲ್ಲ ನಾವೆ. ಈಗ ಹೇಳಿ ಎಲ್ಲದೂ ಸರಿ ಇರೋ ನಾವು ಏನು ಸಾಧಿಸಿದ್ದೇವೆ. ಒಬ್ಬ ಕಣ್ಣಿಲ್ಲದವನೋ ಕಾಲಿಲ್ಲದವನೋ ಹೇಳಬೇಕಾದ ಕಾರಣ ಅದೊಂದಿರಬೇಕಿತ್ತು ಅನ್ನೋದು. ಆದರೆ ಅವರು ಹೇಳಲ್ಲ, ಅದಿಲ್ಲದಿದ್ದರೂ ಸಾಧಿಸ್ತೀನಿ ಅಂತಾರೆ. ಅದನ್ನ ನಾನು ನೀವು ಹೇಳಿದರೆ ಎಷ್ಟು ಸರಿ ಅಲ್ವಾ.
ಉತ್ತಮರನ್ನು ಹುಡುಕುವುದಕ್ಕಿಂತ ನಾವೇ ಉತ್ತಮರಾಗೋದು ಒಳಿತು ಅಂತಾರೆ. ಹೀಗೆ ನಮ್ಮಂಥವರ ಕೖಲಿ ಅದೆಲ್ಲ ಆಗಲ್ಲ ಬಿಡಿ ಅಂತ ತೀರ್ಮಾನಿಸೋಕು ಮುಂಚೆ ನಮ್ಮಂಥವರಲ್ಲದೆ ಮತ್ತಾರು ಮಾಡಬೇಕು . ಅಂಥವರು ಅಂತ ಬೇರೆಯೇ ಹುಟ್ಟಿರ್ತಾರಾ ಅಂತ ನಮ್ಮನ್ನ ನಾವು ಕೇಳಿಕೊಳ್ಳಬೇಕಲ್ವಾ. ಗಾಂಧಿ, ಬುದ್ಧ ಬಸವಣ್ಣ, ಸ್ವಾಮಿ ವಿವೇಕಾನಂದ ಹೀಗೆ ನಾವು ಯಾರನ್ನೇ ಸಾಧಕರು ಅಂದ್ರೂ ಅವರಿಗೆಲ್ಲ ಇರಬಹುದಾದ ದೌರ್ಬಲ್ಯಗಳೇ ತಾನೆ ನಮಗೂ ಇರೋದು. ಅವರಂತೆಯೇ ನಮಗೂ ಎರಡು ಕಣ್ಣ ಎರಡು ಕಾಲು, ಎರಡು ಕೖ, ಒಂದು ಮೆದುಳು ಎಲ್ಲಾ ಇದೆ ಆದರೂ ನಾವು ಅದೊಂದಿಲ್ಲ ಅಂತ ಕಾರಣ ಕೊಡೋದು ಎಷ್ಟು ಸರಿ ಅಲ್ವಾ.
ಏನು ಬೇಕಾದರೂ ಮಾಡ್ತಿದ್ದೆ ಸಾರ್ ಆದ್ರೆ ಈ ಆಫೀಸು ಮನೆ ಇವುಗಳ ಮಧ್ಯೆ ಟೖಮೇ ಸಿಗಲ್ಲ ಅಂತೀವಿ. ಹಾಗಾದ್ರೆ ವಿಶ್ವೇಶ್ವರಯ್ಯನವರಿಗೇನು ದಿನಕ್ಕೆ ನಲವತ್ತೆಂಟು ಗಂಟೆ ಸಿಕ್ಕಿತ್ತಾ.,,, ನಾವೆಲ್ಲ ಇಷ್ಟು ಬದುಕಿದ್ರೂ ನಮಗೆ ಮುಂದೊಂದು ದಿನ ಎಲ್ಲಾ ಸರಿಹೋಗೋ ಕಾಲ ಬರುತ್ತೆ ಅಂತ ಕಾಯ್ತಿದ್ದೀವಿ ಆದರೆ ಕೇವಲ ಇಪ್ಪತ್ಮೂಕ್ಕೆ ಅಸುನೀಗಿದ ಜಾನ್ ಕೀಟ್ಸ್ ಹೀಗೇ ಅಂದುಕೊಂಡಿದ್ರೆ ಏನು ಮಾಡಬೇಕಿತ್ತು ಅಲ್ವಾ, ಕೇವಲ ಹದಿನೇಳು ವರ್ಷಕ್ಕೆ ಕೊನೆಯುಸಿರೆಳೆದ ಥಾಮಸ್ ಛಟ್ಟರ್ ಟನ್ ಏನೆಲ್ಲಾ ಮಾಡಬಿಟ್ಟ ಜಗತ್ತಿನ ರೊಮ್ಯಾಂಟಿಕ್ ಕವಿಗಳಲ್ಲಿ ಅತ್ಯಂತ ಕಿರಿಯವನೇ ಅವನು. ಮೂವತ್ತೆರಡಕ್ಕೆ ಶಂಕರಾಚಾರ್ಯರು ಇಹಲೋಕ ತ್ಯಜಿಸಿದ್ರು , ನಲವತ್ತು ತುಂಬುವುದರೊಳಗೆ ಸ್ವಾಮಿ ವಿವೇಕಾನಂದರು ಹೀಗೆ ಎಷ್ಟು ಜನರ ಉದಾಹರಣೆ ನೋಡಿದರೂ ನಾವು ಮತ್ತೆ ಕೊಡೋ ಕಾರಣ ನನಗೆ ಅದೊಂದಿಲ್ಲ ಸಾರ್ ಅಂತ. ಯಾವುದದು ಸಮಯ, ಊಟ, ಹಣ, ಜನಬಲ, ಶ್ರೀಮಂತಿಕೆ, ಯಾವುದಿಲ್ಲ. ಇವೆಲ್ಲವೂ ನಾವು ಸಂಪಾದಿಸಬಹುದಾದವೆ ತಾನೆ. ಮನುಷ್ಯನಿಂದ ಇವನ್ನು ಸಂಪಾದಿಸಲು ಸಾಧ್ಯವೇ ಇಲ್ಲ ಎನ್ನುವಂಥದ್ದೇನಾದರೂ ಇಲ್ಲ ಎಂಬ ಕಾರಣ ನೀಡಿದರೆ ಒಪ್ಪಹುದಿತ್ತು ಅನ್ನಿಸುತ್ತೆ.
ಏನಾದರಾಗಲಿ ಒಂದು ಸಣ್ಣ ತೀರ್ಮಾನ ಮಾಡೇ ಬಿಡೋಣ. ಇಂದಿನಿಂದ ಇಂಥ ಕುಂಟುನೆಪ ಹೇಳುವುದು ಬಿಟ್ಟು ನನ್ನ ಭವಿಷ್ಯವನ್ನು ನಾನೇ ತೀರ್ಮಾನಿಸ್ತೇನೆ ಅಂತ. ಒಂದು ಸಣ್ಣ ಸಾಧನೆ ನನ್ನಿಂದ ಸಾಧ್ಯ ಅಂತ ಹಠ ಹಿಡಿದುಬಿಡಿ. ವಾರಕ್ಕೊಂದು ಪುಸ್ತಕ ಓದೇ ತೀರ್ತೇನೆ. ತಿಂಗಳಿಗೊಂದಾದರೂ ಲೇಖನ ಬರೀತೇನೆ. ದುಡಿದದ್ದರಲ್ಲಿ ಹತ್ತು ಪರ್ಸೆಂಟ್ ಒಳ್ಳೇ ಕೆಲಸಕ್ಕೆ ಬಳಸ್ತೇನೆ ಅಂತ . ಆರಂಭದಲ್ಲೇ ಇದೆಲ್ಲ ಕಷ್ಟ ಎನಿಸಿದರೆ ನಿಮ್ಮ ವಿಚಾರದಲ್ಲಿ ನೀವು ಯಾವುದು ಅಸಾಧ್ಯ ನನ್ನಿಂದಾಗದ ಕೆಲಸ, ನಮ್ಮಂಥವರ ಕೖಲಿ ಇದೆಲ್ಲ ಆಗುತ್ತಾ ಅಂತ ಯಾವುದನ್ನ ಪೆಂಡಿಂಗ್ ಇಟ್ಟಿರ್ತೀರೋ ಅದನ್ನೇ ಕೖಗೆತ್ತಿಕೊಳ್ಳಿ. ಇದು ನನ್ನಿಂದ ಸಾಧ್ಯ ಯೆಸ್ ಈ ಕ್ಯಾನ್ ಡೂ ಇಟ್ ಅಂತ ತೀರ್ಮಾನಿಸಿಬಿಡಿ. ಒಂದು ದಿನಕ್ಕೆ ಒಂದು ವಾರಕ್ಕೆ ಆಗುವಂತಹಾ ಸಣ್ಣ ಸಣ್ಣ ಗುರಿಗಳನ್ನ ಈಡೇರಿಸ್ತಾ ಹೋಗಿ. ಆರಂಭದಲ್ಲೇ ಬೆಟ್ಟದ ತುದಿಗೆ ಕಾಲಿಡಲು ಸಾಧ್ಯವಿಲ್ಲ ಆದರೆ ಎರಡು ಹೆಜ್ಜೆ ಹತ್ತಿದ ನಂತರ ನಾವು ಎರಡು ಅಡಿಯಾದರೂ ಎತ್ತರದಲ್ಲಿರ್ತೇವೆ. ತಿರುಪತಿಗೆ ಹೋಗಬಏಕೆಂದು ವರ್ಷಗಟ್ಟಲೇ ಜಪಿಸಿದರೂ ಸಾಧ್ಯವಾಗಲ್ಲ. ಆದರೆ ಎದ್ದು ಬಸ್ ಸ್ಟ್ಯಾಂಡಿಗೆ ನಡೆದು ಹೋಗುವುದರಿಂದ ತಿರುಪತಿಗೆ ಹೋದರೂ ಹೋಗಬಹುದು. ಅದಕ್ಕೆ ಮೊದಲು ಬಸ್ ಸ್ಟಾಪ್ ತಲುಪುವ ಸಣ್ಣ ಗುರಿ ಮುಟ್ಟಇ ನಂತರ ಬಸ್ ಹತ್ತುವ ನಾಳೆ ತಿರುಪತಿ ಮುಟ್ಟಉವ ಗುರಿ ಸಾಧಿಸಬಹುದೇನೋ. ಲೆಟ್ಸ್ ಟ್ರೖ ಇಟ್.