ಅಂತರಂಗ
ಇಂಡಿಯಾದ ಶಿಕ್ಷಣ ವ್ಯವಸ್ಥೆ ಹೀಗೂ ಇರಬಹುದೇ..!
- ಕ್ರಾಂತಿರಾಜ್ ಒಡೆಯರ್ ಎಂ, ಸಹಾಯಕ ಪ್ರಾಧ್ಯಾಪಕರು, ಸೇಪಿಯೆಂಟ್ ಕಾಲೇಜು, ಮೈಸೂರು
ನನಗೆ ನೆನಪಿರುವ ಹಾಗೆ ನನ್ನ ಶಾಲಾ ವಿದ್ಯಾಭ್ಯಾಸದಿಂದ ಇಡಿದು ಉನ್ನತ ಶಿಕ್ಷಣ ವಿದ್ಯಾಬ್ಯಾಸದ್ದವರೆಗಿನ (1990 ರಿಂದ 2007) ಬಹುಪಾಲು ಶಿಕ್ಷಣ ಸರ್ಕಾರಿ ಪ್ರಾಯೋಜಿತ. ಪ್ರಾಥಮಿಕ ಶಿಕ್ಷಣವನ್ನು ನಮ್ಮ ಊರಿನ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಲು ಆದ ವೆಚ್ಚ ಸುಮಾರು2000 ರೂಪಾಯಿಗಳು ಇರಬಹುದು.
ಪ್ರೌಢ ಶಿಕ್ಷಣಕ್ಕೆ ಜವಾಹರ್ ನವೋದಯ ವಿದ್ಯಾಲಯಕ್ಕೆ ಸೇರಿದ್ದು ವರವಾಯಿತು. 12 ನೇ ತರಗತಿವರೆಗೂ ಒಂದು ರೂಪಾಯಿಯೂ ಖರ್ಚಾಗದೆ ಪ್ರೌಢ ಶಿಕ್ಷಣ ಮುಗಿಯಿತು. ನಂತರ ಉನ್ನತ ಶಿಕ್ಷಣ ಅಧ್ಯಯನಕ್ಕೆ ಸೇರಿದ್ದು ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿಗೆ. ಮೂರು ವರ್ಷಗಳ ಬಿ ಕಾಮ್ ಪದವಿ ಪಡೆಯಲು ಖರ್ಚಾದದ್ದು ಸುಮಾರು 6000 ರೂಪಾಯಿಗಳು ಇರಬಹುದು.
ಮಾನಸ ಗಂಗೋತ್ರಿಯಲ್ಲಿ ಎರಡು ವರ್ಷಗಳ ಎಂ ಬಿ ಎ ಪದವಿ ಪಡೆಯಲು ತಗುಲಿದ ವೆಚ್ಚ ಸುಮಾರು 70000 ರೂಪಾಯಿಗಳು. ಆ ಹಣವು ಕೂಡ ವಿದ್ಯಾರ್ಥಿ ವೇತನದ ಮೂಲಕ ವಾಪಸು ಬಂತು. ಒಟ್ಟಾರೆ 8000-10000 ದಲ್ಲಿ ನನ್ನ ಶಿಕ್ಷಣ ಮುಗಿದಿತ್ತು. ನನ್ನ ಅನಿಸಿಕೆಯ ಪ್ರಕಾರ ನಾನು ಪಡೆದ ಶಿಕ್ಷಣದ ಬಹುಪಾಲು ಉತ್ತಮ ಗುಣಮಟ್ಟದಿಂದ ಕೂಡಿತ್ತು. ಅಂದಿನ ವ್ಯವಸ್ಥೆಗೆ ಬೇಕಾದ ಜ್ಞಾನ ಹಾಗು ಕೌಶಲ್ಯವನ್ನ ನಾನು ಪಡೆದ ಶಿಕ್ಷಣ ವ್ಯವಸ್ಥೆ ಹೇಳಿಕೊಟ್ಟಿದ್ದಲ್ಲದೇ, ಮುಂದೆ ಉಂಟಾಗುವ ಬದಲಾವಣೆಗೂ ನನ್ನನ್ನು ಅದು ತಯಾರು ಮಾಡಿತ್ತು.
ಇಂದಿನ ದಿನಗಳಲ್ಲಿ ಅಂತಹ ಶಿಕ್ಷಣ ಮರೀಚಿಕೆ. ಶಿಕ್ಷಣ ವ್ಯವಸ್ಥೆಯು ಖಾಸಗೀಕರಣಕ್ಕೆ ಒಳಪಟ್ಟು ವ್ಯಾಪಾರದ ವಸ್ತುವಾಗಿದೆ. ಶಿಕ್ಷಣ ಶ್ರೀಮಂತರ ಪಾಲಾಗಿದೆ. ಹಣವುಳ್ಳವರಿಗೆ ಮಾತ್ರ ಗುಣಮಟ್ಟದ ಶಿಕ್ಷಣ ಎನ್ನುವಂತಾಗಿದೆ. ಆಳುವ ಸರ್ಕಾರಗಳ ಅಲಂಕಾರಿಕ ಘೋಷವಾಕ್ಯ “ಸರ್ವರಿಗೂ ಉನ್ನತ ಶಿಕ್ಷಣ” ದ ನೀತಿಯ ಅಡಿಯಲ್ಲಿ ಉನ್ನತ ಶಿಕ್ಷಣ ನೀಡುವ ಕಾಲೇಜುಗಳ ಸಂಖ್ಯೆ ಹೆಚ್ಚಳ ಹಾಗೂ ಅದಕ್ಕೆ ತಕ್ಕಂತೆ ಪ್ರಾಧ್ಯಾಪಕರ ನಿಯೋಜನೆಗೆ ಜನಸಾಮಾನ್ಯರು ಕಟ್ಟುವ ತೆರಿಗೆ ಹಣ ಬಳಕೆಯಾಗುತ್ತಿದೆಯೇ ಹೊರತು, ಅದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸಿ ಜೀವನ ಕಟ್ಟಿಕೊಡುವಲ್ಲಿ, ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಣ ವ್ಯವಸ್ಥೆಗೆ ನೀಡುತ್ತಿರುವ ಬಹುಪಾಲು ಅನುಧಾನದ ಕೊಡುಗೆ ಶೂನ್ಯ.
ಶಿಕ್ಷಣ ವ್ಯವಸ್ಥೆಯ ಅಡಿಯಲ್ಲಿರುವ ಕೆಲವೇ ಕೆಲವು ಅಧ್ಯಾಪಕರು ಇದಕ್ಕೆ ಹೊರೆತಾಗಿ ನಿಂತು, ತಾವು ಪಡೆದುಕೊಳ್ಳುವ ಸಂಬಳಕ್ಕೂ ಮೀರಿದಂತೆ ಶಿಕ್ಷಣ ವ್ಯವಸ್ಥೆಯನ್ನು ಉತ್ತಮ ಪಡಿಸಲು ಪ್ರಯತ್ನ ಪಡುತ್ತಿದ್ದರೂ, ಜಡ್ಡುಗಟ್ಟಿರುವ ವ್ಯವಸ್ಥೆ, ಸ್ವಹಿತಾಸಕ್ತಿಯ ಅಧ್ಯಾಪಕ ವೃಂದ ಹಾಗೂ ಯತೇಚ್ಛ ಕೀಳುಮಟ್ಟದ ರಾಜಕೀಯದಿಂದ, ಬದ್ಧತೆಯುಳ್ಳ ಶಿಕ್ಷಕರ ಪ್ರಾಮಾಣಿಕ ಪ್ರಯತ್ನ ವ್ಯರ್ಥವಾಗುತ್ತಿರುವುದಲ್ಲದೇ, ವಿದ್ಯಾರ್ಥಿ ಸಮೂಹವನ್ನೂ ಸಹ ತಪ್ಪು ದಾರಿಗೆ ಎಳೆದುಕೊಂಡು ಹೋಗುತ್ತಿದೆ.
ಇದರಿಂದ ಪ್ರಾಮಾಣಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೂ ಕೂಡ ಅಪ್ರಾಮಾಣಿಕರಾಗಿ ಬದಲಾಗುತ್ತಿದ್ದಾರೆ. ಇದರಿಂದ ಉನ್ನತ ಶಿಕ್ಷಣ ಪದವಿಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿ, ಹೆಚ್ಚಿನ ಮಟ್ಟದಲ್ಲಿ “ಪದವಿಯ ಅಂಕಪಟ್ಟಿಯನ್ನು” ವಿದ್ಯಾರ್ಥಿಗಳು ಪಡೆಯುತ್ತಿದ್ದಾರಾದರೂ, ಅವರು ಪಡೆದಿರುವ ಶಿಕ್ಷಣದ ಗುಣಮಟ್ಟ ಪ್ರಶ್ನಾರ್ಹ ಹಾಗೂ ಆ ಶಿಕ್ಷಣದಿಂದ ಅವರ ಜೀವನ ರೂಪಿಸಿಕೊಳ್ಳುವುದಂತೂ ಮರೀಚಿಕೆಯಾಗಿದೆ.
ಹಾಗಾದರೆ ಈ ಶಿಕ್ಷಣ ವ್ಯವಸ್ಥೆಯನ್ನು ಹೀಗೆ ಬಿಡಬೇಕೆ? ಇದನ್ನು ಸರಿಪಡಿಸುವುದಾದರೂ ಹೇಗೆ? ಎಂದು ಯೋಚಿಸುತ್ತಿದ್ದಾಗ, ವ್ಯವಸ್ಥೆಯನ್ನು ತಕ್ಕ ಮಟ್ಟಿಗೆ ಸರಿಪಡಿಸಲು ನನಗೆ ಅನಿಸಿದ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ನಾನು ಬಿ ಕಾಮ್ ಹಾಗೂ ಎಂ ಬಿ ಎ ವಿದ್ಯಾಭ್ಯಾಸ ಮಾಡಬೇಕಾದರೆ, ಒಂದು ವಿಮೆ ಕಂಪನಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡಿ ಅದರಿಂದ ಬರುವ ಕಮಿಷನ್ ಆದಾಯದಿಂದ ನನ್ನ ವಿದ್ಯಾಭ್ಯಾಸದ ಖರ್ಚಲ್ಲದೇ ಇತರೆ ಖರ್ಚು ವೆಚ್ಚಗಳನ್ನು ಸರಿಹೊಂದಿಸಿಕೊಳ್ಳಲು ನನ್ನ ತಾಯಿ ನನಗೆ ಅಡಿಪಾಯ ಹಾಕಿಕೊಟ್ಟಿದ್ದರು.
ನನ್ನಂತೆಯೇ ನನ್ನ ಹಲವು ಸ್ನೇಹಿತರು ವಿದ್ಯಾಭ್ಯಾಸದ ಜೊತೆಗೆ ಸಂಜೆಯ ವೇಳೆ ಯಾವುದಾದರೊಂದು ಆಫೀಸ್ನಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಹೋಗಿ ಬರುವ ಸಂಬಳದಿಂದ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ಸರಿದೂಗಿಸುತ್ತಿದ್ದರು.
ನಾನು ಶಿಕ್ಷಕ ವೃತ್ತಿಯನ್ನು ಆರಿಸಿಕೊಂಡ ಮೇಲೆ ನನ್ನ ಅಡಿಯಲ್ಲಿ ಅಧ್ಯಯನ ನೆಡೆಸುತ್ತಿದ್ದ ಕೆಲವು ವಿದ್ಯಾರ್ಥಿಗಳೂ ಕೂಡ ಸಂಜೆಯ ವೇಳೆಯಲ್ಲಿ ಯಾವುದಾದರೊಂದು ಆಫೀಸಿಗೆ ಪಾರ್ಟ್ ಟೈಮ್ ಕೆಲಸಕ್ಕೆ ಹೋಗಿ ಅಲ್ಲಿಂದ ಬಂದ ಸಂಬಳದಿಂದ ವಿದ್ಯಾಭ್ಯಾಸದ ಶುಲ್ಕವನ್ನು ಕಟ್ಟುತ್ತಿದ್ದದ್ದನ್ನು ನಾನು ಕಂಡಿದ್ದೇನೆ.
ಇದೇ ಸಂದರ್ಭದಲ್ಲಿ ವಿದೇಶಿ ವಿದ್ಯಾರ್ಥಿಗಳೂ ಕೂಡ ನಾನು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅವರು ಆಗಾಗಲೇ ತಮ್ಮ ದೇಶದಲ್ಲಿ ಯಾವುದಾದರೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಉನ್ನತ ಶಿಕ್ಷಣಕ್ಕೆ ಆ ದೇಶದ ಸರ್ಕಾರ ಅಥವಾ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯು ಸಂಪೂರ್ಣ ವೆಚ್ಚವನ್ನು ಭರಿಸಿ ಅವರನ್ನು ಇಲ್ಲಿಗೆ ಕಳುಹಿಸಿಕೊಟ್ಟಿತ್ತು.
ವಿದೇಶಕ್ಕೆ ಉನ್ನತ ಶಿಕ್ಷಣ ಪಡೆಯಲು ಹೋದ ನನ್ನ ಹಲವಾರು ವಿದ್ಯಾರ್ಥಿಗಳು, ಆ ದೇಶದ ಶಿಕ್ಷಣ ವ್ಯವಸ್ಥೆಯ ನಿಯಮಗಳ ಪ್ರಕಾರ ತಮ್ಮ ವಿದ್ಯಾಭ್ಯಾಸದ ಜೊತೆಗೆ ಯಾವುದಾದರೂ ಒಂದು ಕಂಪನಿಯಲ್ಲಿ ಕೆಲಸ ಮಾಡಿ ಬರುವ ಸಂಬಳದಲ್ಲಿ ವಿದ್ಯಾಭ್ಯಾಸದ ಖರ್ಚನ್ನು ಭರಿಸುವ ವ್ಯವಸ್ಥೆಗೆ ಒಳಪಟ್ಟಿದ್ದನ್ನು ನನ್ನಲ್ಲಿ ಹಂಚಿಕೊಂಡಿದ್ದರು.
ಆದರೆ, ಇಂದಿನ ಬಹುಪಾಲು ವಿದ್ಯಾರ್ಥಿಗಳ ಹಾಗೂ ಅವರ ಪೋಷಕರ ಮನಸ್ಥಿತಿ ಬೇರೆಯೇ ಆಗಿದೆ. ಉನ್ನತ ಶಿಕ್ಷಣಕ್ಕೆ ತಮ್ಮ ಮಕ್ಕಳನ್ನು ಸೇರಿಸುವ ಸಲುವಾಗಿ ಪೋಷಕರು ವಿದ್ಯಾಸಂಸ್ಥೆಗಳಿಗೆ ಕಟ್ಟುವ ಡೊನೇಷನ್ ಹಣ ಲಕ್ಷಗಳಿಂದ ಶುರುವಾಗಿ ಕೋಟಿಗಳವರೆಗೂ ಇದೇ.
ತಾವು ಕಟ್ಟುವ ಹಣ ಮುಂದೆ ಹೇಗೆ ವಾಪಸು ಪಡೆಯಬಹುದು ಅಥವಾ ಪ್ರಯೋಜನಾಕಾರಿಯಾಗಬಹುದು ಎಂಬ ಲೆಕ್ಕಾಚಾರವೂ ಇಲ್ಲದೆ ಕೇವಲ ಪ್ರತಿಷ್ಠೆಗೋಸ್ಕರ ಲಕ್ಷಗಟ್ಟಲೆ ಡೊನೇಷನ್ ಕೊಟ್ಟು ಸೋ ಕಾಲ್ಡ್ “ಒಳ್ಳೆಯ ಕಾಲೇಜಿಗೆ” ತಮ್ಮ ಮಕ್ಕಳನ್ನು ಸೇರಿಸುವುದು ವಾಡಿಕೆಯಾಗಿದೆ.
ಆದರೆ ಅಂತಹ ವಿದ್ಯಾರ್ಥಿಗಳು, ಪೋಷಕರು ಕಟ್ಟಿರುವ ಹಣಕ್ಕೂ ತಮಗೂ ಏನೂ ಸಂಬಂಧವೇ ಇಲ್ಲವೆಂದು, ತಮ್ಮ ಬೇಜವಾಬ್ದಾರಿಯಿಂದ ಶಿಕ್ಷಣವನ್ನು ನಿರ್ಲಕ್ಷಿಸಿ, ಅಡ್ಡ ದಾರಿಯನ್ನು ಹಿಡಿದು, ಇತ್ತ ಒಳ್ಳೆಯ ವಯಕ್ತಿಕ ಜೀವನವನ್ನು ರೂಪಿಸಿಕೊಳ್ಳಲೂ ಆಗದೆ, ಅತ್ತ ವೃತ್ತಿಪರ ಜೀವನವನ್ನು ರೂಪಿಸಿಕೊಳ್ಳಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿ ಸಿಲುಕುತ್ತಾರೆ.
ಇನ್ನೊಂದೆಡೆ ಬಡ ಹಾಗೂ ಮಧ್ಯಮ ವರ್ಗದ ಯುವಕರು, ಶಿಕ್ಷಣದಿಂದ ತಮ್ಮ ಪರಿಸ್ಥಿತಿ ಬದಲಾಗಬಹುದೆಂಬ ಸಾವಿರ ಆಸೆಗಳನ್ನು ಹೊತ್ತು, ಉನ್ನತ ಶಿಕ್ಷಣಕ್ಕೆ ಸರ್ಕಾರಿ ಕಾಲೇಜುಗಳಿಗೆ ಸೇರಿಕೊಳ್ಳುತ್ತಾರೆ. ಆದರೆ, ಅಲ್ಲಿನ ಮೈಗಳ್ಳ ಶಿಕ್ಷಕರು, ಜಡ್ಡು ಹಿಡಿದಿರುವ ವ್ಯವಸ್ಥೆ ಹಾಗೂ ಕೀಳು ಮಟ್ಟದ ರಾಜಕೀಯವು ಅಂತಹ ಬಡ ಹಾಗು ಮಧ್ಯಮ ವರ್ಗದ ಯುವಕರನ್ನು ತಮ್ಮತ್ತ ಸೆಳೆದು, ಅವರ ಜೀವನವನ್ನು ಹಾಳು ಮಾಡುತ್ತಿದೆ.
ಇಂದಿನ ಉನ್ನತ ಶಿಕ್ಷಣವನ್ನು ಸರಿಯಾದ ದಾರಿಗೆ ಕರೆದೊಯ್ಯಲು, ಆಳುವ ಸರ್ಕಾರಗಳು ಉತ್ತಮ ನೀತಿಗಳನ್ನು ರೂಪಿಸುವುದರ ಜವಾಬ್ದಾರಿಯ ಜೊತೆ ಜೊತೆಗೆ ಈ ಸಮಾಜದ ಎಲ್ಲ ನಾಗರಿಕರ ಕರ್ತವ್ಯವು ಇದಾಗಿದೆ. ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಸರ್ಕಾರವು ಶಿಕ್ಷಣವನ್ನು ಉಚಿತವಾಗಿ ಕೊಡುವುದರ ಜೊತೆಗೆ ಅವರಿಗೆ ಕೆಲವು ಜವಾಬ್ದಾರಿಗಳನ್ನು ಹೊರಿಸಬೇಕು. ಅಲ್ಲದೇ ಬದ್ಧತೆಯುಳ್ಳ ಶಿಕ್ಷಕರನ್ನು ವ್ಯವಸ್ಥೆಗೆ ನೇಮಕ ಮಾಡಿಕೊಂಡರೆ ಮೇಲಿನ ಆಶಯವು ಕೂಡ ಈಡೇರಿದಂತಾಗುತ್ತದೆ.
ಉನ್ನತ ಶಿಕ್ಷಣವನ್ನು ಸಂಪೂರ್ಣ ಉಚಿತ ಕೊಡಲು ಸಾಧ್ಯವಾಗದಿದ್ದರೆ, ಶಿಕ್ಷಣ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗೆ, ವಿದ್ಯಾಭ್ಯಾಸದ ಜೊತೆಗೆ ಕಡ್ಡಾಯವಾಗಿ ಯಾವುದಾದರೊಂದು ಕಂಪನಿಯಲ್ಲಿ ಕೆಲಸ ಮಾಡಿ, ತಾನು ಸಂಪಾದಿಸಿದ ಹಣದಲ್ಲಿ ಖರ್ಚು ವೆಚ್ಚವನ್ನು ಸರಿದೂಗಿಸುವ ನೀತಿಯನ್ನು ಶಿಕ್ಷಣ ವ್ಯವಸ್ಥೆ ತಂದರೆ, ವಿದ್ಯಾರ್ಥಿಗಳಲ್ಲಿ ಬೇಜವಾಬ್ದಾರಿತನ ತೊಲಗುವುದಲ್ಲದೇ, ಜಡ್ಡು ಹಿಡಿದಿರುವ ಶಿಕ್ಷಣ ವ್ಯವಸ್ಥೆಯು ಚುರುಕಾಗುತ್ತದೆ.ಈ ನೀತಿಗೆ ಹೊಂದುಕೊಳ್ಳದ ಯುವಕರಿಗೆ ಸಣ್ಣ ಸಣ್ಣ ವ್ಯವಹಾರದಲ್ಲಿ ತೊಡಗಿಕೊಳ್ಳಲು ಆಳುವ ಸರ್ಕಾರಗಳು ಸಹಾಯ ಮಾಡಬಹುದಾಗಿದೆ.
ಹೀಗೆ ಮಾಡಿದಲ್ಲಿ ಸಮಾಜಕ್ಕೆ ಜ್ಞಾನವುಳ್ಳ, ಬದ್ಧತೆಯುಳ್ಳ ಹಾಗೂ ಹೊಸ ಆಲೋಚನೆಯುಳ್ಳ ಪದವೀಧರರು ಸಿಗುತ್ತಾರೆಂಬುದು ನನ್ನ ಅನಿಸಿಕೆ. ಇಲ್ಲವಾದರೆ ಇಂದು ಕೆಟ್ಟು ನಿಂತಿರುವ ಶಿಕ್ಷಣ ವ್ಯವಸ್ಥೆ ಹಾಗೂ ಅದರಿಂದ ಪ್ರೇರಿತವಾದ ಸಮಾಜ ಇನ್ನೂ ಕೆಲಮಟ್ಟಕ್ಕೆ ಹೋಗುವ ಕಾಲ ಬಹಳ ದೂರವಿಲ್ಲ. ಆದ್ದರಿಂದ, ಆಳುವ ಸರ್ಕಾರಗಳು ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟ ಎಲ್ಲಾ ಪಾಲುದಾರರು ಎಚ್ಚೆತ್ತುಕೊಳ್ಳುವ ಸಂದರ್ಭ ಬಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243