ದಿನದ ಸುದ್ದಿ

ಇದೂ “ಹಿಟ್ ಅಂಡ್ ರನ್” ಆಗದಿರಲಿ

Published

on

ಮ್ಮು- ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳು ಮೇಲ್ನೋಟಕ್ಕೆ ಕಾನೂನುಬದ್ಧ ಮತ್ತು ಸಂವೈಧಾನಿಕ ಎಂಬ ಬಗ್ಗೆ ಕಾನೂನುವಹಿ ದೊಡ್ಡ ತಕರಾರುಗಳೇನೂ ಇರಲಾರವು. ಅಷ್ಟು ಚರ್ಚಿಸಿಯೇ ಈ ತೀರ್ಮಾನವನ್ನವರು ತೆಗೆದುಕೊಂಡಿದ್ದಾರೆ. ಸಂಘ ಮತ್ತು ಅವರ ರಾಜಕೀಯ ವಿಂಗ್ ಗಳ ಈ ರಾಜಕೀಯ ನಿಲುವುಗಳು ಬಹಳ ಹಳೆಯವು. ಹಾಗಾಗಿ ಅಚ್ಚರಿಯೇನಿಲ್ಲ.

ಇಲ್ಲಿ ಅಕ್ಷೇಪವೇನಾದರೂ ಇದ್ದರೆ, ಇದ್ದೂ ಇಲ್ಲದಂತಾಗಿರುವ ವಿರೋಧ ಪಕ್ಷಗಳ ಬಗ್ಗೆ ಸಾರ್ವಜನಿಕ ಆಕ್ಷೇಪ ಇರಬೇಕು. ಏಕೆಂದರೆ, ಇಂತಹದೊಂದು ಮಹತ್ವದ ತೀರ್ಮಾನ ಆಗುತ್ತಿರುವಾಗ ಸಮರ್ಥವಾಗಿ ಧ್ವನಿ ಎತ್ತಬಲ್ಲ ಪ್ರತಿಪಕ್ಷ ಈಗ ಉಳಿದಿಲ್ಲ.

ಸಾಮಾನ್ಯವಾಗಿ ಒಂದು ಕಾನೂನು ಜಾರಿಯಾಗುವುದು ಸಂಸತ್ತಿನ ಎರಡೂ ಸದನಗಳು ಒಂದು ಮಸೂದೆಯನ್ನು ಅಂಗೀಕರಿಸಿದ ಬಳಿಕ ಅದನ್ನು ರಾಷ್ಟ್ರಪತಿಗಳು ಒಪ್ಪಿ ಸಹಿ ಮಾಡಿದಾಗ ಅಥವಾ ಸಂಸತ್ತು ಅಧಿವೇಶನದಲ್ಲಿಇಲ್ಲದಿದ್ದಾಗ ರಾಷ್ಟ್ರಪತಿಗಳ ಸುಗ್ರೀವಾಜ್ನೆಯ ಮೂಲಕ. ಅದಾಗಿ ಆರು ತಿಂಗಳೊಳಗೆ ಆ ಸುಗ್ರೀವಾಜ್ನೆಗೆ ಸಂಸತ್ತಿನ ಅಂಗೀಕಾರ ಪಡೆಯಬೇಕಾಗುತ್ತದೆ.

ಈಗ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370ಹಿಂದೆ ಪಡೆಯುವಾಗ ಅದೆರಡನ್ನೂ ಅನುಸರಿಸಲಾಗಿಲ್ಲ. ಬದಲಾಗಿ, ಆ ಆರ್ಟಿಕಲ್ ನಲ್ಲಿ ಹೇಳಲಾಗಿರುವ “ ಅಧ್ಯಕ್ಷೀಯ ಪ್ರಕಟಣೆಯ ಮೂಲಕ ಈ ಆರ್ಟಿಕಲ್ ಅನ್ನು ಹಿಂದೆಗೆಯಬಹುದು ಅಥವಾ ಭಾಗಶಃ ಜಾರಿಯಲ್ಲಿಡಬಹುದು” ಎಂಬ ಸಂಗತಿಯನ್ನು ಮುಂದಿಟ್ಟುಕೊಂಡು, ಸ್ಥಳೀಯ ನಾಯಕರನ್ನು ಮನೆಬಂಧನದಲ್ಲಿರಿಸಿ, ಸಿಕ್ಕಾಪಟ್ಟೆ ಸೇನೆ ನಿಯೋಜಿಸಿ ಬಹಳ ಪೂರ್ವ ಸಿದ್ಧತೆಗಳೊಂದಿಗೆ ಈ ರಾಷ್ಟ್ರಪತಿಗಳ ಪ್ರಕಟಣೆ ಹೊರಡಿಸಲಾಗಿದೆ., ಸಂಸತ್ತು ಅಧಿವೇಶನದಲ್ಲಿರುವಾಗಲೇ, ಈ ವಿಚಾದ ಬಗ್ಗೆ ಯಾವುದೇ ಸಾಂವಿಧಾನಿಕ ಚರ್ಚೆ ಇಲ್ಲದೇ, ಕೇವಲ ಸಂಸತ್ತಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗಿದೆ.

ರಾಷ್ಟ್ರಪತಿಗಳ ಈ ಪ್ರಕಟಣೆ ಈಗ ಜಾರಿಗೆ ಬಂದಾಗಿದೆ. ಇದರೊಂದಿಗೆ ಜಮ್ಮು-ಕಾಶ್ಮೀರದ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಿ, ಅಲ್ಲಿ ಶಾಂತಿ ನೆಲೆಸುವಂತಾಗುವ ಜವಾಬ್ದಾರಿ ಕೂಡ ಸರ್ಕಾರದ ಹೆಗಲೇರಿದೆ. ನಾಳೆ ಅಲ್ಲಿ ಸಂಭವಿಸುವ ಯಾವುದೇ ಸ್ಥಿತಿಗೆ “ನಾವು ಸಾಂವಿಧಾನಿಕ, ಚಾರಿತ್ರಿಕ ಜವಾಬ್ದಾರಿ ಹೊರುತ್ತೇವೆ” ಎಂದು ಹೇಳುವುದು ಈ ಸರ್ಕಾರದ ಜವಾಬ್ದಾರಿ.

ಆದರೆ ಈ ಸರ್ಕಾರಕ್ಕೆ, ಆ ಬದ್ಧತೆ ತೋರಿಸಿದ ಹಿನ್ನೆಲೆ ಇಲ್ಲ. ಅದು “ನೋಟು ರದ್ಧತಿ”ಯಂತಹ ಗಂಭೀರ ತೀರ್ಮಾನದ ವೇಳೆ ಬಯಲಾಗಿದೆ. ಯಾವುದೇ ಸಿದ್ಧತೆ ಇಲ್ಲದೇ ಬರಿಯ ಮಹತ್ವಾಕಾಂಕ್ಷೆ ಮಾತ್ರದಿಂದ ತೆಗೆದುಕೊಂಡ ತೀರ್ಮಾನ ಅದು ಸಂಪೂರ್ಣ ವಿಫಲವಾಗಿರುವುದು ಈಗ ಜಗಜ್ಜಾಹೀರಾಗಿದೆ ಮತ್ತು ಸ್ವತಃ ಸರ್ಕಾರವೇ ಅದನ್ನು ಒಪ್ಪಿಕೊಂಡಿದೆ. ಆ ಬಳಿಕ GST ವಿಚಾರದಲ್ಲೂ ಸರ್ಕಾರ ಇದನ್ನೇ ಪುನರಾವರ್ತಿಸಿದೆ.

2017ರಲ್ಲಿ ಇದೇ ಸರ್ಕಾರ ಆರ್ಟಿಕಲ್ 370ತೆಗೆದುಹಾಕುವ ಪ್ರಸ್ತಾಪ ಸರ್ಕಾರದ ಎದುರು ಇಲ್ಲ ಎಂದು ಸದನದಲ್ಲಿ ಹೇಳಿಕೆಯನ್ನೂ ಕೊಟ್ಟಿದೆ. ಪರಿಸ್ಥಿತಿ ಹೀಗಿರುವಾಗ, ಈ ಸರ್ಕಾರ ಜಮ್ಮು ಕಾಶ್ಮೀರದ ಆರ್ಟಿಕಲ್ #370 ವಿಚಾರದಲ್ಲೂ ರಾತ್ರೋರಾತ್ರಿ “ಹಿಟ್ ಅಂಡ್ ರನ್” ಮಾಡಿ, ತನ್ನ ಕೆಲಸ ಮುಗಿಯಿತು ಇನ್ನು ಅಲ್ಲಿ ಏನಾದರೂ ತನಗೆ ಜವಾಬ್ದಾರಿ ಇಲ್ಲ ಎಂದು ವರ್ತಿಸತೊಡಗದಂತೆ ಬೆನ್ನುಹತ್ತುವುದು ಪ್ರತಿಪಕ್ಷಗಳ ಮತ್ತು ದೇಶದ ನಾಗರಿಕರ ಜವಾಬ್ದಾರಿ ಆಗಿದೆ. ಜಮ್ಮು-ಕಾಶ್ಮೀರದಲ್ಲಿ ಮುಂದಿನ ಎಲ್ಲ ಬೆಳವಣಿಗೆಗಳಿಗೆ ಈ ಸರ್ಕಾರ ಹೊಣೆ ಹೊರುವಂತಾಗಬೇಕು.

ರಾಜಾರಾಮ್ ತಲ್ಲೂರ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

#Article370 #JandK #Constitution #Parliament

Trending

Exit mobile version