ಅಂತರಂಗ

ಅದೊಂದು ತಪ್ಪು ಮಾಡಿ ಮೆಟ್ಟು ಹೊತ್ತೆ ಅಂದಿದ್ದರು ರವಿ ಬೆಳಗೆರೆ..!

Published

on

  • ದೇಶಾದ್ರಿ ಹೊಸ್ಮನೆ, ಪತ್ರಕರ್ತರು

ಪತ್ರಕರ್ತ ರವಿ ಬೆಳಗೆರೆ ಈಗಿಲ್ಲ. ಆದರೆ ಅವರು ಪತ್ರಕರ್ತರಾಗಿ‌ ಮಾಡಿದ ಯಡವಟ್ಟುಗಳಲ್ಲಿ ನಟಿ ರೂಪಿಣಿ ಪ್ರಕರಣವೂ ಒಂದು. ಇದು ಆಕಸ್ಮಿಕವೋ, ಉದ್ದೇಶ ಪೂರ್ವಕವೋ, ಅಚಾತುರ್ಯವೋ ,ಗೊತ್ತಿಲ್ಲ.
ಆದರೆ ‘ಹಾಯ್ ಬೆಂಗಳೂರ್ ‘ಪತ್ರಿಕೆಯ ಮೂರು‌ ಪುಟಗಳಲ್ಲಿ ಮುದ್ರಣಗೊಂಡಿದ್ದ ರೂಪಿಣಿ ಕುರಿತ ಒಂದು ವರದಿ ದೊಡ್ಡ ತಲ್ಲಣ ಎಬ್ಬಿಸಿತು.ಕೊನೆಗೆ ರವಿ ಬೆಳಗೆರೆಯವರೇ ಸಾರಿ‌ಕೇಳಿ, ಮಾಡಿದ ತಪ್ಪಿಗೆ ಸಮಜಾಯಿಷಿ ನೀಡಬೇಕಾಗಿ ಬಂತು.

ರವಿ ಬೆಳೆಗೆರೆ ಹಾಗೇನೋ‌ ಮಾಡಿದರೂ ಸರಿ, ಆದರೆ ಆ ಪ್ರಕರಣದಲ್ಲಿ‌ ಒಂದೆಡೆ ರೂಪಿಣಿ ಸಮಾಜದ ಮುಂದೆ‌ ಈರಸು- ಮುರುಸು ಅನುಭವಿಸಿದರು. ಮತ್ತೊಂಡೆ ‘ಹಾಯ್ ಬೆಂಗಳೂರ್’ ಪತ್ರಿಕೆಯ ವರದಿಗಳ ಕ್ರೆಡೆಬಿಲಿಟಿಯನ್ನೇ‌ ಕುಗ್ಗಿಸಿದ್ದು ಹೌದು. ಈ ಪ್ರಕರಣ ದೊಡ್ಡ ಚರ್ಚೆಯಲ್ಲಿ ದ್ದಾಗ ರವಿ ಬೆಳಗೆರೆ ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದರು.‌ ನಾನಾಗ‌ ಪದವಿ ವಿದ್ಯಾರ್ಥಿ. ಜತೆಗೆ ಎಚ್ಚರಿಕೆ ಪತ್ರಿಕೆಯ ವರದಿಗಾರ ಕೂಡ.‌

ಕಾರ್ಯಕ್ರಮದ ಡಿಟೈಲ್ಸ್ ಅಷ್ಟಾಗಿ ನೆನಪಿಲ್ಲ. ಒಟ್ಟಿನಲ್ಲಿ ಮೂರು ದಿವಸಗಳ‌ ಸೆಮಿನಾರ್ ಅದು. ಮೂರನೇ ದಿನ‌ರವಿ ಬೆಳಗೆರೆ ಬಂದಿದ್ದರು. ಅದಕ್ಕೂ ಮೊದಲು‌ ತರಂಗ ವಾರ ಪತ್ರಿಕೆಯ ಆಗಿನ‌ ಸಂಪಾದಕ ಸಂತೋಷ್ ಕುಮಾರ್ ಗುಲ್ವಾಡಿ ಸೇರಿ ಹಲವರು ಬಂದು ಹೋಗಿದ್ದರು. ಕೊನೆ ದಿನದ‌ ಮಾತು ರವಿ ಬೆಳಗೆರೆ ಅವರದು. ರವಿ ಬೆಳಗೆರೆ ಭಾಷಣ ಅಂದ್ರೆ ಭಾರೀ‌ ಜನ ಸೇರುತ್ತಿದ್ದ ದಿನಗಳವು. ಪತ್ರಕರ್ತರಾಗಿ ಅಷ್ಟೊಂದು ತಾರಾ ವರ್ಚಸು ಅವರಿಗಿದ್ದ. ದಿನಗಳು.ಕುವೆಂಪು ರಂಗ‌ಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಗೊಂಡಿತ್ತು.‌

ಸಂಜೆ‌‌ ಸಮಯ ಬೇರೆ, ರಂಗ‌ಮಂದಿರ ಕಿಕ್ಕಿರಿದಿತ್ತು. ಪತ್ರಕರ್ತನಾಗಿದ್ದರಿಂದ ವೇದಿಕೆಯ ಮುಂಭಾಗದ ಕುರ್ಚಿ ಯಲ್ಲೇ ಕೂರುವ ಅವಕಾಶ ಸಿಕ್ಕಿತ್ತು. ರವಿ ಬೆಳಗೆರೆಯವರ ಭಾಷಣ ಮುಗಿದು, ಪ್ರಶೋತ್ತರ ಶುರುವಾದಾಗ, ನಾನು ಕೇಳಿದ ಮೊದಲ ಪ್ರಶ್ನೆಯೇ ರೂಪಿಣಿ ಪ್ರಕರಣಕ್ಕೆ ಸಂಬಂಧಿಸಿದ್ದು. ಹಾಯ್ ಬೆಂಗಳೂರ್ ನಾನು ಕುತೂಹಲದಿಂದ ನೋಡುವ ಪತ್ರಿಕೆ. ಆದರೆ ರೂಪಿಣಿ ಪ್ರಕರಣದಲ್ಲಿ ದೊಡ್ಡದೊಂದು ಸುಳ್ಳು ಸುದ್ದಿ‌ಬರೆಯಿತು.

ಕೊನೆಗೆ ಕ್ಷಮೆ ಯಾಚಿಸಬೇಕಾಗಿ ಬಂತು. ಇದು ಯಾಕೆ ಹೀಗಾಯ್ತು? ಪತ್ರಿಕೆಯ ಕ್ರೆಡೆಬಿಲಿಟಿ ಬಗ್ಗೆ ನೀವು ಯೋಚಿಸಿರಲಿಲ್ಲವೇ? ನಾನು ಕೇಳಿದ ಈ ಪ್ರಶ್ನೆ ಗೆ ಕಿಂಚಿತ್ತು ಸಿಟ್ಟಾಗದೆ, ಉತ್ತರ ನೀಡಲು ನಿರಾಕರಿಸದೆ ನಗುತ್ತಲೇ ಎದ್ದು ನಿಂತು ಮೈಕ್ ಹಿಡಿದರು ರವಿ ಬೆಳಗೆರೆ. ‘ ಹೌದು, ಇದೊಂದು ವಿಚಾರದಲ್ಲಿ‌ನಾನು ತಪ್ಪು ಮಾಡಿ ಮೆಟ್ಟು ಹೊತ್ತೆ’ ಎಂದಷ್ಟೇ ಹೇಳಿ ಸುಮ್ಮನಾದರು‌. ರವಿ ಬೆಳೆಗೆರೆ ಹಾಗೆ ಹೇಳಿದ್ದು ಅವರ ದೊಡ್ಡತನ. ಈಗ ಅವರಿಲ್ಲ. ಹೇಗಾದ್ರೂ ಹೇಳಬಹುದು.‌

ಆದರೆ ಮಾಡಿದ್ದ ತಪ್ಪನ್ನು ಅವರು ಕಿಕ್ಕಿರಿದ ಜನ‌ಸಮೂಹದ ಮುಂದೆಯೇ ಒಪ್ಪಿಕೊಂಡರು.‌ ಹಾಗಿದ್ದ ಕಾರಣಕ್ಕಾಗಿಯೇ ಅವರು ಅಷ್ಟು ಎತ್ತರಕ್ಕೆ ಬೆಳೆದರು. ಆ ಘಟನೆಯಾಚೆ ನಾನವರನ್ನು ಯಾವತ್ತಿಗೂ ಮುಖಾ‌ಮುಖಿ ಭೇಟಿ ಮಾಡಿದವನಲ್ಲ. ಶೃಂಗೇಶ್ ಪರಿಚಯದ ಕಾರಣಕ್ಕೆ ‘ಹಾಯ್ ಬೆಂಗಳೂರ್’ ಕುತೂಹಲದ ವಾರ ಪತ್ರಿಕೆ ಆಗಿತ್ತು. ಪತ್ರಕರ್ತನಾಗಿದ್ದ ಕಾರಣಕ್ಕೆ ಅದನ್ನು ಕೊಂಡು ಓದುವ ಅಭ್ಯಾಸವೂ‌ ಇತ್ತು.ಹೀಗಿದ್ದೂ ರವಿಬೆಳಗೆರೆಯವರ ಬರಹ, ಬದುಕು ಎರಡರ ಬಗ್ಗೆಯೂ ನನ್ನ ತಕಾರಾರು ಇತ್ತು.

ನಾನು ಎಡ ಚಿಂತನೆಯ ಚಳುವಳಿಯ ಪ್ರಭಾವದಲ್ಲಿದಿದ್ದು ಅದಕ್ಕೆ ಕಾರಣ. ಹೀಗಿದ್ದು ಅವರ ಬರವಣಿಗೆಯ ಶಕ್ತಿ ನನ್ನಲ್ಲಿ ಅತೀ ದೊಡ್ಡ ಅಚ್ವರಿಗೆ ಕಾರಣವಾಗಿತ್ತು.‌ ಇತ್ತೀಚೆಗಷ್ಟೇ ಅಂದರೆ ಕಳೆದ ವರ್ಷದ ಅವರು ಬಿಗ್ ಬಾಸ್ ಗೆ ಹೋಗಿ ಬಂದಿದ್ದ ಸಂದರ್ಭ ಕನ್ನಡ‌ಪ್ರಭಕ್ಕೆ ಸಂದರ್ಶನ ನಡೆಸುವ ಅವಕಾಶ ಬಂತು.‌ ಲೇಖಕ ಹಾಗೂ ಕನ್ನಡ ಪ್ರಭದ ಸಾಪ್ತಾಹಿಕ ಸಂಪಾದಕ ಜೋಗಿ ಸರ್ ಆ ಅವಕಾಶ ಕೊಟ್ಟಿದ್ದರು.‌ಅವರೊಂದಿಗೆ ಹೋಗಿ ಒಂದಷ್ಟು ಹೊತ್ತು ಹರಟೆ ಹೊಡೆದು ಬಂದಿದ್ದೆ. ನಾನು ಅವರನ್ನು ಭೇಟಿ‌ಮಾಡಿದ್ದು ಅದೇ ಮೊದಲು ಮತ್ತು ಕೊನೆ.ಈಗ ರವಿ‌ಬೆಳೆಗೆರೆ ಇನ್ನಿಲ್ಲ ಎನ್ನುವುದು ತೀರಾ ನೋವು ತಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version