ಅಂತರಂಗ

‘ರವಿ’ಯು ಬೆಳಗದೆ ಅಸ್ತಂಗತನಾದ..!

Published

on

  • ಸುರೇಶ್ ಎನ್ ಶಿಕಾರಿಪುರ

ನಿಮ್ಮನ್ನು ದ್ವೇಷಿಸಲಿಲ್ಲ, ಅತಿಯಾಗಿ ಅಭಿಮಾನಿಸಲೂ ಇಲ್ಲ… ಆದರೂ ನೀವು ಬಿಟ್ಟು ಹೋದುದು ಮನಸಿಗೆ ಏನೋ ಕಸಿವಿಸಿ ಉಂಟುಮಾಡುತ್ತಿದೆ. ಅಂತರದಲ್ಲಿ ನಿತ್ತೂ ಅಂತರಂಗದಲ್ಲಿ ನಿಮಗೊಂದು ಸ್ಥಾನವನ್ನಂತೂ ಕೊಟ್ಟುಕೊಂಡಿದ್ದೆ ನಿಮ್ಮನ್ನು ನಿರಾಕರಿಸುತ್ತಲೇ, ನೀವು ಅಪರಾಧ ಲೋಕದ ಕತೆಗಳನ್ನು ರೋಚಕವಾಗಿ ಬರೆದು ಒಂದರ್ಥದಲ್ಲಿ ಹುಡುಗರಲ್ಲಿ ಲಾಂಗು ಹಿಡಿಯುವ ಕ್ರೇಜು ಹುಟ್ಟಿಸಿದಿರಿ.

ನಿಮ್ಮ ಆಶಯ ಅದಲ್ಲದಿದ್ದರೂ ನಿಮ್ಮ ಬರಹ ಹದಿಹರೆಯದ ಹುಡುಗರಲ್ಲಿ ಅಂತಾದ್ದೊಂದು ಹುಚ್ಚು ಎಬ್ಬಿಸಿದ್ದು ಮಿಥ್ಯೆಯಲ್ಲ. ಹರೆಯದಲ್ಲಿ ಮೈಮನಗಳನ್ನು ಆವರಿಸಿಕೊಂಡಿದ್ದ ಆ ನನ್ನ ಹುಡುಗಿ ಕಾರಣ ಹೇಳದೆ ನನ್ನ ಬಿಟ್ಟುಹೋದಾಗಲೂ ನಿಮ್ಮ ‘ಹೇಳಿಹೋಗು ಕಾರಣ’ ಓದಲಿಲ್ಲ. ನಿಮ್ಮ ಮಾಟಗಾತಿಯ ಸವಾಸಕ್ಕಂತೂ ಹೋಗಲೇ ಇಲ್ಲ‌. ಕವಿರಾಜಮಾರ್ಗ ಓದಿದ್ದ ನನಗೆ ನಿಮ್ಮ ‘ಕಾಮರಾಜಮಾರ್ಗ’ ಪುಸ್ತಕ ಮಾರಾಟದ ಅಂಗಡಿಯ ರ್ಯಾಕಿನಲ್ಲಿ ಕಂಡಾಗ ‘ಇವನೊಬ್ಬ ಆಧುನಿಕ ಕಾಮನಿರ್ದೇಶಕ’ ಎಂದು ಹೀಗಳೆದಿದ್ದೆ.

ನಿಮ್ ಖಾಸಬಾತು, ಅದು ಇದು ಯಾವುದ್ಯಾವುದೋ ಕೃತಿಗಳನ್ನ ಕಂಡರೆ ಹಾವುಕಂಡ ಹಾದಿಹೋಕನಂತೆ ಹೌಹಾರುತ್ತಿದ್ದೆ. ನನ್ನ ಕೇರಿಯ ನನ್ನ ಅಣ್ಣ ಕ.ನಾ. ವಿಜಯಕುಮಾರ, ಕ.ನಾ. ಬೀರಣ್ಣನ ಮನೆಯೇ ನಮಗೊಂದು ಓದಿನ ಪಡಸಾಲೆಯಾಗಿತ್ತು. ಅಣ್ಣ ಅಪ್ಪ ನಾಗಪ್ಪನವರು ಆಗಲೇ ಲಂಕೇಶ್ ಪತ್ರಿಕೆ ತರಿಸುತ್ತಿದ್ದರು ಆ ಪತ್ರಿಕೆಯ ಓದು ಚರ್ಚೆ ನಮ್ಮನ್ನಾ ಚಿಕ್ಕವಯಸ್ಸಿನಲ್ಲೇ ಹಿಡಿದಿಟ್ಟಿತ್ತು ಮೆಲ್ಲಗೆ ಅದೇ ಮನೆಯ ಪಡಸಾಲೆಗೆ ಹಾಯ್…. ಎನ್ನುತ್ತಾ ಬಂತು ನಿಮ್ಮ ಬೆಂಗಳೂರು.

ಅದರ ಓದೂ ಆರಂಭವಾಯಿತು.. ಲಂಕೇಶ್ ಪತ್ರಿಕೆ ನಿಮ್ಮ ಪತ್ರಿಕೆ ಎರಡರ ಚರ್ಚೆಯೂ ಅಲ್ಲೇ ಅಣ್ಣಂದಿರು ಗೆಳೆಯರ ಕೂಡಿ ಆಹೋರಾತ್ರೆ ನಡೆಯುತ್ತಿತ್ತು. ಈ ತೌಲನಿಕ ವಿಮರ್ಶೆಯಲ್ಲಿ ನಾವು ಸೋಲಿಸದಿದ್ದರೂ ನೀವು ಯಾವಾಗಲೂ ಸೋಲುತ್ತಿದ್ದಿರಿ. ಕನ್ನಡ ಸಾಹಿತ್ಯ ವೈಚಾರಿಕತೆ ಹಾಗೂ ಸಾಮಾಜಿಕ ಕಾಳಜಿ, ಯುವ ಜನತೆಯ ಹಿತದೃಷ್ಠಿಯ ಬಗ್ಗೆ ನಿಮ್ಮ ಬದ್ಧತೆ ಏನು ಎಂಬುದೇ ಈಗಲೂ ನಮ್ಮ ಪ್ರಶ್ನೆ. ನಿಮ್ಮದು ಬಹುಮುಖೀ ಪ್ರತಿಭೆ.

ನೀವು ಅತ್ಯಂತ ಸೊಗಸಾಗಿ ಡ್ರೆಸ್ ಮಾಡಿಕೊಂಡು ಮೈಕಿನ ಮುಂದೆ ನಿಂತು ಆ ನಮ್ಮ ಕನ್ನಡ ಸಿನಿಮಾಗಳ, ಭಾವಗೀತೆಗಳ ಕುರಿತು ಮಾತಾಡಲು ಬಾಯಿತೆರೆದರೆ ಏನೋ ಮೋಡಿಗೆ ನಮ್ಮನ್ನೆಲ್ಲಾ ಸಿಲುಕಿಸುತ್ತಿದ್ದಿರಿ ನಿಮ್ಮ ದನಿ ನಿಮ್ಮ ದೇಹಭಾಷೆಗೆ ಅಂತಹಾ ಆಕರ್ಶಕ ಶಕ್ತಿ ಇತ್ತು. ಆದರೂ ನಮ್ಮ ಪ್ರಶ್ನೆ ನಿಮ್ಮ ಬದ್ಧತೆಯದ್ದು ನಿಮ್ಮ ಆದ್ಯತೆಯದ್ದು. ಕೊಲೆ, ಅತ್ಯಾಚಾರ ಅಕ್ರಮಸಂಬಂಧ, ಲೈಂಗಿಕತೆ, ಅಂಡರ್ವಲ್ಡ್ ಇಂಥಹಾ ವಿಚಾರಗಳನ್ನು ನೀವು ರೋಚಕಗೊಳಿಸುತ್ತಿದ್ದಿರಿ ಖಂಡನೆಗಿಂತ ಮಂಡನೆಯೇ ಮುಖ್ಯವಾಗಿತ್ತು ನಿಮಗೆ.

ಹಾಗೆ ಬರೆಯುವಾಗಲೆಲ್ಲ ಹಸಿಹಸಿಯಾದ ಚಿತ್ರಣಗಳು ಹುಸಿಯಾಗಿದ್ದರೂ ಅಹುದಹುದು ಎಂಬ ಭ್ರಮೆ ಬಿತ್ತುತ್ತಿದ್ದ ನಿಮ್ಮ ಮಾಯಾವಿತನ ಇವೆಲ್ಲಾ ಈಗಲೂ ಪ್ರಶ್ನಾರ್ಹ‌. ಹಣದ ಸಂಪಾದೆಗಾಗಿ ಹೀಗೆ ಮಾಡಿದಿರೋ, ಅಥವಾ ನಿಮ್ಮೊಳಗಿನ ಪ್ರತಿಭಾ ಶಕ್ತಿಯನ್ನು ಬರಹರೂಪಕ್ಕೆ ಇಳಿಸುವಾಗ ವಿವೇಕವನ್ನು ಬದಿಗಿಟ್ಟುಬಿಡುತ್ತಿದ್ದಿರೋ ಅಥವಾ ನಿಮಗೊಂದು ಅಭಿಮಾನಿಗಳ ಹುಚ್ಚು ಸೈನ್ಯದ ಅವಶ್ಯಕತೆಗಾಗಿ ಬೇಕಂತಲೇ ಹಾಗೆ ಬರೆಯುತ್ತಿದ್ದಿರೋ ಗೊತ್ತಿಲ್ಲ. ಆದರೆ ನಿಮ್ಮ ಸಾಹಿತ್ಯದ ಫಲವಾದರೂ ಏನು ಎಂದು ಈಗಲೂ ನನ್ನ ಪ್ರಶ್ನೆ ಇದೆ.

ನಿಮ್ಮೊಳಗೆ ಮಾನವೀಯ ರವಿ ಇದ್ದ ನಿಮ್ಮೊಳಗೆ ಮಗುವಿ ಮನಸಿನ ರವಿ ಇದ್ದ
ನಿಮ್ಮೊಳಗೆ ಕುದಿಯುವ ಅಶಾಂತ ರವಿ ಇದ್ದ
ನಿಮ್ಮೊಳಗೆ ನಾಯಕತ್ವದ ರವಿ ಇದ್ದ
ನಿಮ್ಮೊಳಗೆ ಕಲಾವಿದ ಚಿಂತಕ ರವಿಯೂ ಇದ್ದ ಆ ರವಿ ಕರ್ನಾಟಕದ ಜನ ಜೀವನ ಸಂಸ್ಕೃತಿ ಭಾಷೆ ಬದುಕು ಬವಣೆಗಳ ಯುವಜನತೆಯ ಆಶೋತ್ತರದ ಹೋರಾಟ ಚಳುವಳಿ ಸಾಮಾಜಿಕ ನ್ಯಾಯದ ಬೆಳ್ಳಿಬೆಳಕಾಗದೆ ಗಟ್ಟಿ ದನಿಯಾಗದೆ ಅಸ್ತಂಗತನಾದ.

ಇದಾವುದನ್ನೂ ದ್ವೇಷದಿಂದ ಬರೆಯುತ್ತಿಲ್ಲ ನಿಮ್ಮ ಮೇಲಿನ ನಿಷ್ಕಲ್ಮಷ ಪ್ರೀತಿಯಿಂದಲೇ ಬರೆಯುತ್ತಿದ್ದೇನೆ‌. ಮೊನ್ನೆ ಮೊನ್ನೆ ಇನ್ನೂ ನಿಮ್ಮದೊಂದು ಸಂದರ್ಶನದ ವಿಡಿಯೋ ನೋಡಿದ್ದೆ ಅನಾರೋಗ್ಯ ಬಾದಿಸುತ್ತಿದ್ದರೂ ನಿಮ್ಮ ಮುಖದ ಆ ಚಂದ್ರಕಳೆ ಬತ್ತಿರಲಿಲ್ಲ. ಆ ಹೊಳಪು ಮಾಸಿರಲಿಲ್ಲ ಆ ಸ್ಪಿರಿಟ್ ಮಾಯವಾಗಿರಲಿಲ್ಲ ಆ ದನಿ ಕಂದಿರಲಿಲ್ಲ ಕುಂದಿರಲಿಲ್ಲ ಆದರೂ ಹೊರಟು ಹೋದಿರೆಂದು ಕೇಳಿ ಮಲಗಿದ್ದಲೇ ಮತ್ತಷ್ಟು ಹೊತ್ತು ಮಲಗಿದೆ ಕಣ್ಣು ತೇವವಾದವು.

ಕೊನೆಯದಾಗಿ ಮತ್ತೊಂದು ಮಾತು.. ನಿಮ್ಮ ಬಗ್ಗೆ ನನಗೆ ಸದಾಧಾನವಿದೆ. ಒಬ್ಬ ಪತ್ರಕರ್ತನಾಗಿ ನೀವು ಗುಲಾಮಗಿರಿಗಂತೂ ಇಳಿಯಲಿಲ್ಲ ಆ ಮಟ್ಟಿನ ಬದ್ಧತೆ ನಿಮ್ಮಲ್ಲಿತ್ತು. ಕೋಮುವಾದವನ್ನೇ ಬಂಡವಾಳವಾಗಿಸಿಕೊಂಡು ಅದರಿಂದಲೇ ಹೊಟ್ಟೆ ಹೊರೆಯುವ ಅದರಿಂದ ರಾಜಕೀಯದ ಅಧಿಕಾರ ಸಾಧಿಸುವ ಸಮಾಜಕಂಠಕರಾದ ಕೆಲವು ಪತ್ರಕರ್ತರಿಗೆ ಹೋಲಿಸಿದರೆ ನೀವೆಂದೂ ಅಂತಹಾ ಘಾತುಕ ಪಾತಕ ಆಗಿರಲಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version