ಅಂತರಂಗ
ಕಗ್ಗತ್ತಲ ವ್ಯಾಪಾರದಲ್ಲಿ, ವೇಶ್ಯೆ ಅಳುವ ಮಗು..!
- ಮೈತ್ರಾವತಿ ವಿ. ಐರಣಿ, ಚಿಕ್ಕಬೂದಿಹಾಳು, ದಾವಣಗೆರೆ
ವೇಶ್ಯಾವಾಟಿಕೆ ಎಂಬುದು ಸ್ತ್ರೀ ಕುಲಕ್ಕೆ ಅಂಟಿಕೊಂಡಿರುವ ಅಭಿಶಾಪಗಳಲ್ಲೊಂದು!ಇಂತಹ ಶಾಪದ ಕೂಪವನ್ನು ಸೃಷ್ಟಿಸಿದವರು,ಪೋಷಿಸಿದವರು ,ಪರವಾನಿಗೆ ಕೊಟ್ಟವರು ನಮ್ಮ ಸೋ ಕಾಲ್ಡ್ ಮಾರ್ಯದಸ್ಥ ಸಮಾಜ.
ವೇಶ್ಯಾ ವೃತ್ತಿ ಎಂದರೆ ಹಣದ ಪ್ರತಿಫಲಕ್ಕಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಕ್ರಿಯೆ. ಜಗತ್ತಿನಾದ್ಯಂತ ಅನಾದಿಕಾಲದಿಂದಲೂ ಇದು ರೂಢಿಯಲ್ಲಿದೆ. ವಿಪರ್ಯಾಸ ಏನೆಂದರೆ ಕಾಲಾಂತರದಲ್ಲಿ ಈ ವೃತ್ತಿಗೆ ಆಧುನಿಕತೆಯ ಸ್ಪರ್ಶ ಸಿಕ್ಕು ಹೈಟೆಕ್ ದಂಧೆಯಾಗಿ,ವ್ಯವಹಾರವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರಲ್ಲಿ ಪುರುಷರ ಸಹಭಾಗಿತ್ವ ಇದ್ದರೂ ದೂಷಿಸುವುದು ಮಾತ್ರ ಸ್ತ್ರೀಯರನ್ನೇ ಇದು ಯಾವ ಕಾಡಿನ ನ್ಯಾಯ? ನನಗಿವತ್ತಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಅದ್ಯಾರದ್ದೇ ಬದುಕಾಗಿರಬಹುದು ಬದುಕಲಾರದಷ್ಟು ಅಸಹ್ಯವಾಗಿರುವುದಿಲ್ಲ,ಹೇಸಿಗೆ ಪಡುವಷ್ಟು ನಿಷ್ಕೃಷ್ಠವಾಗಿರುವುದಿಲ್ಲ,ಲೋಕನಿಂದನೆಗೊಳಗಾಗಿ ಮುಖ ಮುಚ್ಚಿ ಓಡಾಡುವಂತಹ ಹೀನ ಸ್ಥಿತಿ ಇರುವುದಿಲ್ಲ. ಅಷ್ಟಕ್ಕೂ ಯಾರ ಬದುಕು ದಟ್ಟ ದರಿದ್ರವಲ್ಲ.ಅವರವರ ವೃತ್ತಿಗೆ ಅವರದೇ ನೆಲೆಯಲ್ಲಿ ತಕ್ಕುದಾದ ಗೌರವ ಆದರಗಳಿರುತ್ತವೆ. ಅವನೆಂತಹ ನೀಚನೇ ಆಗಿರಲಿ,ಪರಮಪಾಪಿಯೇ ಆಗಿರಲಿ, ಕೊಲೆಗಡುಕನೇ ಆಗಿರಲಿ ಅವನು ಸಹ ಸಮಾಜದಲ್ಲಿ ಚೂರು ಪಾರು ಮರ್ಯಾದೆ, ಗೌರವ ಸಂಪಾದಿಸಿರುತ್ತಾನೆ.ಅವನ ಬದುಕಿನ ಅಸ್ತಿತ್ವಕ್ಕೊಂದು ಸಾರ್ಥಕ ಕಂಡುಕೊಳ್ಳುತ್ತಾನೆ.
ಬಹುಶಃ ವೃತ್ತಿ ಗೌರವವಿಲ್ಲದ ಏಕಮಾತ್ರ ದಂಧೆ ಎಂದರೆ ಅದು ವೇಶ್ಯೆ ವೃತ್ತಿಯೊಂದೇ.ಆಕೆ ದೇಹವನ್ನು ಮಾರಿ ಅಷ್ಟೈಶರ್ಯವನ್ನು ಸಂಪಾದಿಸಿರಲಿ ಅದನ್ನು ನಾನು ನನ್ನ ದೇಹ ಮಾರಿ ಸಂಪಾದಿಸಿದ್ದೇನೆಂದು ಅಭಿಮಾನದಿಂದ, ಹೆಮ್ಮೆಯಿಂದ ಸಮಾಜದಲ್ಲಿ ನಿಂತು ಹೇಳುವ ಧೈರ್ಯ, ಸ್ಥೈರ್ಯ ಅವರಿಗಿರುವುದಿಲ್ಲ.ಯಾವುದೇ ಮಾನ,ಸಮ್ಮಾನ, ಬಡ್ತಿ, ಗೌರವಗಳಿಲ್ಲದ ಏಕಮಾತ್ರ ವೃತ್ತಿಯಿದು.
ವೇಶ್ಯೆ ಎಂದರೆ ಪರಮ ಪಾಪಿ,ನಿತ್ಯ ಕಳಂಕಿತೆ,ಲೋಕನಿಂದಿತೆ,ಜಾರಿಣಿ ಹೀಗೆ ನಾನಾ ಹೆಸುರುಗಳಿಂದ ಕರೆಸಿಕೊಳ್ಳುವ ಆ ಪಾಪದ ಜೀವಗಳಿಗೆ ಎಷ್ಟು ಜನ್ಮ ಕಳೆದರೂ ಆ ಕಳಂಕ ಅವರಿಂದ ದೂರವಾಗುವುದಿಲ್ಲ.
ಅಷ್ಟಕ್ಕೂ ವೇಶ್ಯೆ ಎಂದರೆ ಮೂಗು ಮುರಿಯುವ ಸಮಾಜದಲ್ಲಿ ನಾವು ಬದುಕಿದ್ದೇವೆ.ಹೌದು ಹಾಗಾದರೆ ಆಕೆ ವೇಶ್ಯೆಯಾಗಲಿಕ್ಕೆ ಭಾರತದಂತಹ ಮಡಿವಂತಿಕೆಯ ರಾಷ್ಟ್ರದಲ್ಲಿ ವೇಶ್ಯಾವಾಟಿಕೆ ಒಂದು ದಂಧೆಯಾಗಿ ,ವೃತ್ತಿಯಾಗಿ ಬೆಳೆಯಲಿಕ್ಕೆ ಕಾರಣ ಯಾರು?, ಅದಕ್ಕೆ ಅಧಿಕೃತವಾಗಿ ಪರವಾನಿಗೆ ಕೊಟ್ಟವರು ಯಾರು?
ವೇಶ್ಯಾವಾಟಿಕೆ ಎಂಬುದು ಸ್ತ್ರೀ ಕುಲಕ್ಕೆ ಅಂಟಿಕೊಂಡಿರುವ ಅಭಿಶಾಪಗಳಲ್ಲೊಂದು!ಇಂತಹ ಶಾಪದ ಕೂಪವನ್ನು ಸೃಷ್ಟಿಸಿದವರು,ಪೋಷಿಸಿದವರು ,ಪರವಾನಿಗೆ ಕೊಟ್ಟವರು ನಮ್ಮ ಸೋ ಕಾಲ್ಡ್ ಮಾರ್ಯದಸ್ಥ ಸಮಾಜ.
ಹೌದು ಬದುಕಿನಲ್ಲಿ ಯಾವುದೋ ಅಸಹಾಯಕತೆಗೋ,ಅನೀರಿಕ್ಷಿತ ಒತ್ತಡಕ್ಕೋ ಸಿಲುಕಿ ವೇಶ್ಯಾವಾಟಿಕೆ ಪ್ರಪಂಚಕ್ಕೆ ಕಾಲಿಡುವ ಸ್ತ್ರೀ ಜಗತ್ತಿಗೆ ವೇಶ್ಯೆ ಎಂದು ಚಿರಪರಿಚಿತಳಾಗುತ್ತಾಳೆ.ಆದರೆ ಆಕೆಯ ಅಸಹಾಯಕತೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಪುರುಷ(ಕೆಲವರು) ಮಾತ್ರ ಜಗತ್ತಿನ ಮುಂದೆ ಸಭ್ಯಸ್ಥನಾಗಿ ಕಾಣಿಸಿಕೊಳ್ಳುತ್ತಾನೆ.ಸಮಾಜದ ಇಂತಹ ಕುರುಡು ಕಾನೂನಿಗೆ ನನ್ನ ಧಿಕ್ಕಾರವಿದೆ.
ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ ದಂಧೆ ಕೋಡ್ ವರ್ಡ್ ಗಳ ಮೂಲಕ ನಡೆಯುತ್ತದೆ. ಅದಕ್ಕೆಂದೇ ದುರುಳರ ವರ್ಗ ಹುಟ್ಟಿಕೊಂಡಿದೆ.ಕಿತ್ತು ತಿನ್ನುವ ಬಡತನ, ಬದುಕಿನ ಅಸಹಾಯಕ ಸ್ಥಿತಿ, ಕಾಮುಕ ಕಣ್ಣಿನ ಕೀಚಕರ ದುರಾಸೆಗೆ ಬಲಿಯಾಗುವ ಹೆಣ್ಣು ಮಕ್ಕಳು ಮುಂದೆ ಕಾಮಾಟಿಪುರಂನ ವೇಶ್ಯಾವಾಟಿಕೆ ಅಡ್ಡೆಗಳಲ್ಲಿ ಇನ್ನೊಬ್ಬರ ದೈಹಿಕ ಸುಖದ ಸರಕಾಗುತ್ತಾಳೆ. ಮುಂಬೈ ನ ರೆಡ್ ಲೈಟ್ ಏರಿಯಾ (ಕಾಮಾಟಿಪುರಂ) ಹೆಣ್ಣು ಮಕ್ಕಳ ಪಾಲಿಗದು.
ರೌರವ ನರಕ ಇಡೀ ಜೀವ ಹಿಡಿದುಕೊಂಡು ಪರರ ಸುಖಕ್ಕಾಗಿ ಮನಸ್ಸು ಮತ್ತು ದೇಹಗಳ ನಡುವೆ ನಿತ್ಯವೂ ಹೋರಾಟ ನಡೆಸುತ್ತಿರುತ್ತಾಳೆ.ಏಕೆಂದರೆ ಪ್ರತಿಯೊಂದು ಹೆಣ್ಣಿಗೂ ಅವಳದೇ ಬದುಕಿನ ಕನಸಿರುತ್ತದೆ.ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಾಳೆ.ಆರ್ಥಿಕ ಬಿಕ್ಕಟ್ಟು, ಸಮಾಜದ ದೂಷಣೆ,ಬದುಕಿನ ಅಸಹಾಯಕತೆ ಎದುರಾದಾಗ ಆಕೆ ಯಾರದ್ದೋ ಸಹಾಯದ ಬಾಗಿಲಿಗೆ ಬಂದು ನಿಲ್ಲುತ್ತಾಳೆ.ಹಾಗಂತ ಅವಳಿಗೆ ನಿಸ್ವಾರ್ಥ ಮನಸ್ಸಿನಿಂದ, ಒಳ್ಳೆಯ ದೃಷ್ಟಿಯಿಂದ ಸಹಾಯ ಮಾಡೋ ಸಭ್ಯಸ್ಥ ಮಂದಿ ನಮ್ಮ ನಡುವೆ ಎಷ್ಟಿದ್ದಾರೆ.
ಒಬ್ಬ ಖ್ಯಾತ ಸೀರಿಯಲ್ ನಟಿಯವರು ಕಣ್ಣಾರೆ ಕಂಡ ಘಟನೆಯನ್ನು ಇಲ್ಲಿ ಪ್ರಸ್ತುತ ಪಡಿಸಲಿಚ್ಛಿಸುತ್ತೇನೆ.ಲಾಲ್ ಬಾಗ್ ಹತ್ತಿರ ಒಬ್ಬ ತಾಯಿ ತನ್ನ ಮಗುವಿಗೆ ಹಾಲು ಕುಡಿಸಲು ಹಣ ಅಂತ ಬೀದೀಲಿ ನಿಂತು ಬರುವವರ ಹತ್ತಿರ ಹಣ ಕೇಳ್ತಾಳೆ.ಯಾರು ಬಿಡಿಗಾಸು ಬಿಚ್ಛೋದಿಲ್ಲ.ಒಬ್ಬ ಬಂದು ನಿನಗೆ ಹಣ ಕೊಡ್ತೀನಿ ನನ್ನ ಜೊತೆ ಬಾ ಎಂದು ಕರೆದುಕೊಂಡು ಹೋಗುತ್ತಾನೆ.ತನ್ನಾಸೆಗಳನ್ನು ಪೂರೈಸಿಕೊಂಡು ಹಣ ಬಿಸಾಕಿ ಹೋಗುತ್ತಾನೆ.
ಹಾಗಾದರೆ ಇಲ್ಲಿ ಮಗುವಿನ ಹಸಿವಿನ ತಪ್ಪಾ? ಆ ತಾಯಿ ತೆಗೆದುಕೊಂಡ ನಿರ್ಧಾರದ ತಪ್ಪಾ? ಅಥವಾ ಆಕೆಯ ಅಸಾಹಯಕತೆಯನ್ನು ಬಳಸಿಕೊಂಡ ಆ ಆಗುತಂಕನ ತಪ್ಪಾ? ಎಲ್ಲಕ್ಕೂ ಮೌನವೋಂದೇ ಉತ್ತರ. ಈ ತರಹದ.ಸಣ್ಣ ಸಣ್ಣ ಘಟನೆಗಳಿಂದ ರೋಸಿ ಹೋದ ಹೆಣ್ಣು ಮಕ್ಕಳು ಮುಂದೆ ವೇಶ್ಯಾವಾಟಿಕೆಯನ್ನೇ ವೃತ್ತಿ ಮಾಡಿಕೊಳ್ಳುತ್ತಾರೆ. ಕಾಮಾಟಿಪುರಂನ ಗಲ್ಲಿ ಗಲ್ಲಿಗಳಲ್ಲಿ ಇಂತಹುದೇ ಅನೇಕ ಹೆಣ್ಣು ಮಕ್ಕಳು ಕಾಣ ಸಿಗುತ್ತಾರೆ.
ಇನ್ನೂ ವಿಪರ್ಯಾಸ ಎಂದರೆ ಅಂದರೆ ಎಷ್ಟೋ ದೇಶಗಳಲ್ಲಿ ಇದನ್ನು ಕಾನೂನು ಬದ್ದಗೊಳಿಸಲಾಗಿದೆ. ಇನ್ನು ಹಲವು ದೇಶಗಳಲ್ಲಿ ಅದೇ ಚಿಂತನೆಗಳು ನಡೆಯುತ್ತಿವೆ.ಭಾರತವೂ ಇದರಿಂದ ಹೊರತಾಗಿಲ್ಲ ಬಿಡಿ.ನಮ್ಮ ಸಮಾಜದ ದುರಂತ ನೋಡಿ ಸ್ತ್ರೀ ಕುಲಕ್ಕೆ ಮುಳುವಾಗಿರುವ ಈ ಶಾಪವನ್ನು ಹೊಡೆದೋಡಿಸಿ ಅವಳಿಗೂ ಒಂದು ಬದುಕು ಕಟ್ಟಿ ಕೊಡುವ ಅವಕಾಶವನ್ನು ನಾವ್ಯಾರು ಮಾಡುತ್ತಿಲ್ಲ.
ಬದಲಿಗೆ ಆಕೆಗೆ ಲೈಂಗಿಕ ಕಾರ್ಯಕರ್ತರು, ನಿತ್ಯ ಸುಮಂಗಲಿಯರು ಎಂಬ ಬಿರುದು ನೀಡಿ ಮಹಾ ಉಪಕಾರ ಮಾಡಿದ್ದೇವೆಂದು ಬೀಗುತ್ತಿದ್ದೇವೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು.
ವೇಶ್ಯಾವಾಟಿಕೆ ಭೂಮಿಯ ಮೇಲಿನ ಭೀಭತ್ಸ ನರಕ ಈ “ಕರಿ ಕತ್ತಲೆಯ ವ್ಯಾಪಾರದಲ್ಲಿ ವೇಶ್ಯೆ ಅಕ್ಷರಶಃ ಅಳುವ ಮಗು”
ಆಕೆಯ ನಿತ್ಯ ರೋಧನೆ ಕೇಳೋರು ಯಾರು?ತಾವು ಬಿಸಾಡುವ ಕಾಸಿಗೆ ಸೆರಗು ನೀಡುವ ಸರಕೆಂದೇ ಭಾವಿಸುವ ಆಕೆಯನ್ನು ಅನುಭವಿಸಿ ಹೋಗುವ ಮಂದಿಗೆ ಆಕೆಗೊಂದು ಸಾಂತ್ವನ ಹೇಳುವ ಸಮಯವಾದರೂ ಎಲ್ಲೀದ್ದೀತು!
ತೀಟೆ ತೀರಿದ ಬಳಿಕ..
ನೋಟು ಎಸೆದು
ಹೋಗುವ ಜನ ;
ತಿರುಗಿ ನೋಡಿದರೆ
ಅಸಹ್ಯ ಪಡುವ
ಅವರ ಮನ ;
ಆಮೇಲೆ ನಾನ್ಯಾರೊ,
ಅವರಾರೋ ;
ಅವರಿಗೋ..ತೀಟೆ ತೀರಿದರೆ ಸಾಕು ;
ನನಗೆ ಅದರಿಂದಲೇ ಬದುಕು;
ಕತ್ತಲೆಯಲಿ ಬೆತ್ತಲಾಗಿ
ಕಳೆದು ಹೋಗಿಹೆ ನಾನು ;
ಬೆತ್ತಲೆಯ ಮೈ ಹಿಂಡಿ,
ಸುಖಪಡುವವರಿಗೆ ತಿಳಿಯದು
ನನ್ನೊಳಗಿನ ನೋವು !
ಕಾಮರೂಪದಿ ಬರುವವರಲಿ
ರಾಮರೂಪವ ನೋಡಲಾದೀತೆ ?
ಸುಖ ಬಯಸಿ ಬರುವವರಲಿ
ನನ್ನ ನೋವ ಹೇಳಿಕೊಳ್ಳಲಾದೀತೆ(ರಚನೆ;ಕೃಷ್ಣ ಮೂರ್ತಿ)
ಈ ವೃತ್ತಿಯಲ್ಲಿ ತೊಡಗಿದ ಹೆಣ್ಣು ಮಗಳೊಬ್ಬಳು ಹೇಳಿದ ಒಂದು ಮಾತು ನಿಜಕ್ಕೂ ನನ್ನನ್ನು ತಲ್ಲಣಗೊಳಿಸಿತು.ಅನೀರಿಕ್ಷಿತವಾಗಿ ಈ ಪಾಪ ಕೂಪಕ್ಕೆ ನಾವು ಬಂದ್ವಿ ನಾವು ದೇಹವನ್ನು ಮಾತ್ರ ಕೊಡ್ತೀವಿ ನಮ್ಮ ಮನಸ್ಸನಲ್ಲ ಅದಿನ್ನೂ ಪರಿಶುದ್ಧವಾಗಿದೆ.ದೇಹ ಮಲಿನವಾಗಿದೆಯೇ ಹೊರತು ಮನಸ್ಸಲ್ಲ!
ನಮಗೂ ಮನಸಿದೆ ಅರಿತು ಕೈ ಹಿಡಿಯುವ ಮನುಷ್ಯ ಅದ್ಯಾರೇ ಆಗಿರಲಿ ತುಂಬು ಮನಸ್ಸಿನಿಂದ ಅವರನ್ನು ಸ್ವೀಕರಿಸಿ ಅವರಿಗೆ ಆದರ್ಶ ಸತಿಯಾಗಿ ಬದುಕುತ್ತೇನೆ.ನಮ್ಮನ್ನು ಕೀಳು ಭಾಷೆಯಿಂದ ನಿಂದಿಸುತ್ತಾರಲ್ಲ ನಮ್ಮ ಸೆರಗಿನಲ್ಲಿ ತಮ್ಮ ಕಾಮದ ಸುಖವನ್ನು ಪಡೆದುಕೊಂಡು ಹೋದವರನ್ನೇಕೇ ನೀವು ಕೀಳು ಭಾಷೆಯಿಂದ ನಿಂದಿಸುವುದಿಲ್ಲ ಎಂಬ ಪ್ರಶ್ನೆ ನನ್ನನ್ನು ಗದ್ಗಗದಿತಳನ್ನಾಗಿ ಮಾಡಿದ್ದಲ್ಲದೇ ಈ ಬರಹಕ್ಕೆ ಸ್ಪೂರ್ತಿಯನ್ನು ನೀಡಿತು. ಹಾಗೆ ಅವರ ಮೇಲೆ ಇದ್ದ ಮುಜುಗರದ ಭಾವವೊಂದು ಕರಗಿ ಗೌರವದ ಭಾವವು ಒಡಮೂಡಿತು.
ನಾನು ಈ ವೃತ್ತಿಯಲ್ಲಿ ತೊಡಗಿರುವವರಿಗೆ ಅಥವಾ ಮುಂದೆ ಅಸಹಾಯಕತೆಗೆ ಸಿಲುಕಿ ಈ ಪಾಪ ಕೂಪಕ್ಕೆ ಅನಿವಾರ್ಯವಾಗಿ ಬಿದ್ದರೆ ನೀವು ಚಿಂತಿಸಬೇಡಿ.ಅದೇ ಕಾಮಾಟಿಪುರಂನ ಬೀದಿಗಳಲ್ಲಿ ಬೆಳೆದ ಶ್ವೇತಾ ಕಟ್ಟಿ ಈಗ ನ್ಯೂಯಾರ್ಕ್ ವಿಶ್ವ ವಿದ್ಯಾಲಯದಲ್ಲಿ ಓದುತ್ತಿದ್ದಾಳೆ.ಆಕೆ ಏಕೆ ನಿಮಗೆ ಸ್ಪೂರ್ತಿಯಾಗಬಾರದು? ಅವಳು ನಿಮ್ಮ ಹಾಗೆ ಅನಿವಾರ್ಯ ಎಂದು ಕೂತಿದಿದ್ದರೆ ನ್ಯೂಯಾರ್ಕ್ ಇರಲಿ ಕಾಮಾಟಿಪುರಂ ಸಹ ದಾಟುತ್ತಿರಲಿಲ್ಲ.ಇವತ್ತಿನ ಕಾಲದಲ್ಲಿ ಅವಕಾಶಗಳಿಗೇನು ಕೊರತೆ ಇಲ್ಲ.
ನಿಮ್ಮ ಮನದ ಸಂಕೋಚದ ಸಂಕೋಲೆಗಳಿಂದ ಹೊರ ಬಂದರೆ ಬದುಕಿನ ಸಾವಿರ ಅವಕಾಶಗಳು ನಿಮ್ಮ ಪಾಲಿಗಿವೆ.ಯಾರದ್ದೋ ಕಾಮೋದ್ರೇಗ ತೀರಿಸಲು ನೀವೇಕೆ ಅನುಭೋಗದ ಸರಕಾಗುತ್ತೀರೀ?ನಿಮ್ಮತನವನ್ನೇ ಕಳೆದುಕೊಂಡು ನಿರ್ಭಾರ ಸ್ಥಿತಿಗೆ ತಲುಪಿ ಬದುಕುವುದು ನಿಮಗೆ ನೀವೇ ಮಾಡಿಕೊಳ್ಳುವ ಆತ್ಮವಂಚನೆ.
ಭಾರತದಂತಹ ದೇಶದಲ್ಲಿ ಪುರುಷ ಎಷ್ಟು ಜನರ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬಹುದು,ಮದುವೆ, ಮೋಸ ಎಲ್ಲವನ್ನೂ ಮಾಡಬಹುದು ಏಕೆಂದರೆ ಅವನು ಏನೇ ಮಾಡಿದರೂ ಸಭ್ಯಸ್ಥ ಆದರೆ ಅದನ್ನೇ ಸ್ತ್ರೀ ಮಾಡಿದರೆ ಅವಳಿಗೆ ನೂರೆಂಟು ಕಳಂಕ,ನಿಂದನೆಗಳು ಏಕೆಂದರೆ ನಮ್ಮ ದೇಶದಲ್ಲಿ ಮಡಿವಂತಿಕೆಯ ಗೆರೆ ಇರುವುದು ಕೇವಲ ಸ್ತ್ರೀಯರಿಗಷ್ಟೇ ಪುರುಷರಿಗಲ್ಲ.
ಜೀವನ ಪೂರ್ತಿ ಯಾರಿಗೋ ಸುಖ ಕೊಡಲಿಕ್ಕೆ ಜೈವಿಕ ಗೊಂಬೆಯಾಗಿ ನೀವಿರಬೇಕಾಗಿಲ್ಲ, ಬದುಕಿನಾಚೆಗೂ ಒಂದು ಬದುಕಿದೆ ಅದಕ್ಕಾಗಿ ಹಪಹಪಿಸಿ ಇಂತಹ ಪಾಪಕೂಪದಿಂದ ದಯವಿಟ್ಟು ಹೊರಬನ್ನಿ ಹೊಸದೊಂದು ಬದುಕು ಕಟ್ಟಿಕೊಳ್ಳಿ.ಎದೆಯಲ್ಲಿ ಆತ್ಮವಿಶ್ವಾಸ, ನ್ಯಾಯವಾಗಿ ದುಡಿದು ತಿನ್ನೋ ಹಠ ಇದ್ರೆ ಏನು ಬೇಕಾದರೂ ಸಂಪಾದಿಸಬಹುದು.
“ವೇಶ್ಯಾವಾಟಿಕೆಗೆ ಬೀಳುವುದು ಶಾಪವಲ್ಲ ಅದರಿಂದ
ಹೊರಬರದೇ ಇರುವುದು ನಿಜವಾದ ಶಾಪ.”
(ಮೈತ್ರಾವತಿ ವಿ. ಐರಣಿ,ಲೇಖಕಿ.
ಚಿಕ್ಕಬೂದಿಹಾಳು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243