ಅಂತರಂಗ
ಅರಿಮೆಯ ಅರಿವಿರಲಿ-44 : ಭಾವನೆ ಮತ್ತು ಮನೋಭಾವ ವ್ಯತ್ಯಾಸವೇನು?
- ಯೋಗೇಶ್ ಮಾಸ್ಟರ್
ಯಾವುದೇ ಮಾನಸಿಕ ಸಮಸ್ಯೆಯಿಂದ ಮತ್ತು ಅರಿಮೆಗಳಿಂದ ಬಿಡುಗಡೆ ಪಡೆಯಲು ಯತ್ನಿಸುವ ವ್ಯಕ್ತಿಗಳು ಮಾಡಬೇಕಾದ ಮೊದಲ ಕೆಲಸವೆಂದರೆ ತಮ್ಮ ಧೋರಣೆ, ವರ್ತನೆ ಮತ್ತು ಪ್ರತಿಕ್ರಿಯೆಗಳನ್ನು ಗಮನಿಸಿಕೊಳ್ಳುವುದು. ನಂತರ ತನ್ನ ಪ್ರತಿಕ್ರಿಯೆ ಅಥವಾ ಪ್ರತಿವರ್ತನೆಗಳು ಉಚಿತವಾಗಿದ್ದವೇ ಅಥವಾ ಆಗ್ರಹ ಪೂರ್ವಕವಾಗಿದ್ದವೇ ಎಂಬುದನ್ನು ಗಮನಿಸಿಕೊಳ್ಳುವಷ್ಟು ಸಂಯಮದ ಆಲೋಚನೆ ಮಾಡುವುದು.
ಅದರ ಬಗ್ಗೆ ಆಲೋಚನೆಯನ್ನು ಮಾಡಿದ ಮೇಲೆ ಇದರಿಂದ ತನ್ನ ಮನಸ್ಥಿತಿಯ ಮೇಲೆ ಮತ್ತು ಇತರರ ಮನಸ್ಸಿಗೆ ಮತ್ತು ಭಾವನೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಿತು ಎಂಬುದನ್ನು ಗಮನಿಸಬೇಕು. ಆಮೇಲೆ ಅದರ ಪರಿಣಾಮವಾಗಿ ತಮ್ಮಲ್ಲಿ ಮತ್ತು ಇತರರಲ್ಲಿ ಮೂಡಿದ ಮನಸ್ಸಿನ ಭಾವನೆಗಳು ಹಿತವಾಗಿದ್ದವೋ ಅಥವಾ ಅಹಿತಕರವಾಗಿದ್ದವೋ ಎಂಬುದನ್ನು ಗ್ರಹಿಸಬೇಕು. ಇಷ್ಟಾದ ಮೇಲೆ ಆ ವ್ಯಕ್ತಿಗೆ ತನ್ನ ಅರಿಮೆಯ ಬಗ್ಗೆ ಒಂದು ಅರಿವು ಬಂದಿರುತ್ತದೆ.
ಬದಲಾಗಲಿ ಕ್ರಮಗಳು
ನನಗೆ ಹೇಯ್ಟಸ್ ಹರ್ನಿಯಾ ಸಮಸ್ಯೆ ಬಂತು. ಗ್ಯಾಸ್ಟ್ರೋಸ್ಕೊಪಿ ಮಾಡಿದರು. ಓಸೋಫೇಗಸ್ ಹೇಯ್ಟಸ್ ಹರ್ನಿಯಾ 2 ಸೆಂಟಿ ಮೀಟರ್ ಇದೆ ಎಂದರು. ಏನೂ ಅಪಾಯವೇನಿಲ್ಲ ಎಂದ ವೈದ್ಯರು ತತ್ಕಾಲಕ್ಕೆ ಔಷಧಿ ಸೂಚಿಸಿ, ಇದು ಹೆಚ್ಚಾಗದಿರಲು ಮತ್ತು ಶಮನವಾಗಲು ಜೀವನ ಕ್ರಮದಲ್ಲಿ ಬದಲಾವಣೆಗಳನ್ನು ಸೂಚಿಸಿದರು. ಈ ಸಮಸ್ಯೆಯು ಬರಲು ಕಾರಣವಾಗಬಹುದಾದಂತಹ ಅಭ್ಯಾಸಗಳನ್ನು ಪ್ರಯತ್ನ ಪೂರ್ವಕವಾಗಿ ತ್ಯಜಿಸಿ, ಅದರ ಬದಲಿಗೆ ಕೆಲವು ಸೂಚಿತ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಹೇಳಿದರು.
ಶಾರೀರಿಕ ಸಮಸ್ಯೆಗಳಿಗೆ ಹೇಗೆ ಉಣ್ಣುವ, ಕುಡಿಯುವ, ಮಲಗುವ, ವ್ಯಾಯಾಮ ಮಾಡುವಂತಹ ಹಲವು ಅಂಶಗಳನ್ನು ಬದಲಿಸಿಕೊಳ್ಳುತ್ತಾ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆಯೋ ಹಾಗೇ ಅರಿಮೆಯೇ ಮೊದಲಾದ ಮಾನಸಿಕ ಸಮಸ್ಯೆಗಳನ್ನು ಪತ್ತೆಹಚ್ಚಿದ ಮೇಲೆ ಆಲೋಚನಾಕ್ರಮಗಳನ್ನು ಬದಲಾಯಿಸಿಕೊಳ್ಳಬೇಕು.
ಎಂತಹ ಆಲೋಚನಾ ಕ್ರಮಗಳಿಂದ ತಮಗೆ ಸಮಸ್ಯೆ ಬಂದಿದೆ ಎಂಬುದನ್ನು ಪತ್ತೆ ಹಚ್ಚಿದ ಮೇಲೆ ಅದನ್ನು ನಿವಾರಿಸಿಕೊಳ್ಳಲು ಎಂತಹ ಆಲೋಚನಾ ಕ್ರಮಗಳು ಬೇಕು ಎಂಬುದನ್ನು ಮಾನಸಿಕ ತಜ್ಞರ ನೆರವಿನಿಂದ ಅಥವಾ ಸಮಾಲೋಚಕರ ಸಹಾಯದಿಂದ ತಿಳಿದುಕೊಳ್ಳಬೇಕು. ಅದರಂತೆ ತಾನು ಹೇಗೆ ವರ್ತಿಸುತ್ತಿದ್ದೇನೆ, ಹೇಗೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದೇನೆ ಎಂಬುದನ್ನು ಮೂರನೆಯ ವ್ಯಕ್ತಿಯದನ್ನು ಗಮನಿಸಿದಂತೆಯೇ ಗಮನಿಸಬೇಕು.
ಮೊಟ್ಟ ಮೊದಲನೆಯದಾಗಿ ತಮ್ಮ ದೌರ್ಬಲ್ಯ ಅಥವಾ ಸಮಸ್ಯೆಯನ್ನು ಸಾಮಾನ್ಯೀಕರಿಸುವುದನ್ನು ನಿಲ್ಲಿಸಬೇಕು. ಉದಾಹರಣೆಗೆ ನಿಮ್ಮ ಸಂಗಾತಿಯೊಡನೆ ಜಗಳವಾಡಿದಿರಿ. ನೀವು ಕೋಪದಿಂದ ಬಹಳ ಒರಟಾಗಿ ನಡೆದುಕೊಂಡಿದ್ದೀರಿ. ಅವರು ಹಾಗೆ ವರ್ತಿಸಿದ್ದರಿಂದ ನಾನು ಹೀಗೆ ವರ್ತಿಸಿದೆ, ಅವರ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನನ್ನದಾಗಿತ್ತು ಎಂದು ತಮ್ಮದನ್ನು ಸಮರ್ಥಿಸಿಕೊಂಡು, ನನ್ನ ಜಾಗದಲ್ಲಿ ಯಾರೇ ಇದ್ದರೂ ಅವರೂ ಹೀಗೆ ಮಾಡುತ್ತಿದ್ದರು. ಇದು ಸಾಮಾನ್ಯ ಎನ್ನುವುದು. ಮಾನಸಿಕ ಸಮಸ್ಯೆಗಳಿಂದ ಮುಕ್ತವಾಗುವ ಇರಾದೆ ಇದ್ದಲ್ಲಿ ತಮ್ಮ ಆಗ್ರಹ, ಆವೇಶ ಮತ್ತು ಆಕ್ರೋಶಗಳನ್ನು ಸಮರ್ಥಿಸುವ ಮತ್ತು ಸಾಮಾನ್ಯೀಕರಿಸುವ ಕೆಲಸವನ್ನು ಮೊದಲು ನಿಲ್ಲಿಸಬೇಕು.
ಅಸ್ವಾಸ್ಥ್ಯದ ಕೂಪ
ಯಾವುದೇ ಒಂದು ಸಂಘರ್ಷ ಅಥವಾ ಅಹಿತಕರವಾದ ಸಂಗತಿ ನಡೆದಾಗ ಪದೇ ಪದೇ ಅದನ್ನೇ ಯೋಚಿಸುತ್ತಾ, ಒಬ್ಬರೇ ಇರುವಾಗಲೂ ಇದರಿಂದ ತನಗೆ ಅಪಮಾನವಾಯ್ತು, ಇದು ನನ್ನನ್ನು ಕೆಳಕ್ಕೆ ತಳ್ಳಿಬಿಟ್ಟಿತು, ಅವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು, ಯಾವಾಗ ನಾನು ಏನು ಮಾಡಿದರೆ, ಯಾರಿಂದ ಏನು ಮಾಡಿಸಿದರೆ ಅವರಿಗೂ ನನ್ನ ಹಾಗೆ ನೋವಾಗುವುದು, ಅಥವಾ ನನ್ನ ನೋವು ಶಮನವಾಗುವುದು; ಹೀಗೆಲ್ಲಾ ಆಲೋಚನೆಗಳು ಪದೇ ಪದೇ ಬರುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಅಸ್ವಾಸ್ಥ್ಯದ ಕೂಪದಲ್ಲಿ ಜಾರುತ್ತಿದ್ದೀರಿ ಎಂದು ಅರ್ಥ.
ಯಾರೋ ಒಬ್ಬರೊಡನೆ ಸಂಘರ್ಷವಾದ ಮೇಲೆ ಮತ್ತೆ ಅವರನ್ನು ಮುಖಾಮುಖಿಯಾಗುವ ಸಂದರ್ಭ ಬಂದಾಗ ಹಿಂದಿನದೆಲ್ಲಾ ನೆನಪು ಬಂದು, ನಿಮ್ಮ ಮುಖ ಬಾಡುತ್ತಿದೆ, ಒಣಗುತ್ತಿದೆ. ಅವರ ಮುಂದೆ ನಿಮಗೆ ನಡೆಯಲು, ಕೂರಲು ಆಗುತ್ತಿಲ್ಲ. ಆ ಜಾಗ ಬಿಟ್ಟು ಹೋಗಬೇಕು ಎನ್ನಿಸುತ್ತಿದೆ ಎಂದಾಗಲೂ ನೀವು ಎಚ್ಚರಗೊಳ್ಳಬೇಕು. ಯಾವುದೋ ಒಂದು ಸಮಾರಂಭ. ನಿಮ್ಮ ಜೊತೆಗೆ ಮನಸ್ತಾಪ ಇರುವವರಿಗೂ ಮತ್ತು ನಿಮಗೂ ಸಾಮಾನ್ಯವಾಗಿರುವ ಸ್ನೇಹಿತರು ಮಾಡುತ್ತಿರುವ ಕಾರ್ಯಕ್ರಮ.
ಬರುತ್ತಿರುವ ಅತಿಥಿಗಳ ಪಟ್ಟಿ ನಿಮಗೆ ತಿಳಿಯಿತು. ಅಥವಾ ನಿಮ್ಮೊಂದಿಗೆ ಮನಸ್ತಾಪ ಇರುವ ವ್ಯಕ್ತಿಯೂ ಬರುವುದು ನಿಮಗೆ ಖಚಿತ. “ಅವರು ಬರುವ ಹಾಗಿದ್ದರೆ ನಾನು ಬರುವುದಿಲ್ಲ. ನಿನಗೆ ನಾನು ಬರಬೇಕೆಂದಿದ್ದರೆ ಅವರನ್ನು ಕರೆಯಬೇಡ” ಎಂದಿರೋ, ನಿಮ್ಮಲ್ಲಿ ಅರಿಮೆಯ ಅರಿವು ಇನ್ನೂ ಬಂದಿಲ್ಲ ಎಂದು ಅರ್ಥ. ಅಥವಾ “ಖಂಡಿತ ಬರುತ್ತೇನೆ” ಎಂದು ನಗುಮುಖದಿಂದ ಒಪ್ಪಿಕೊಂಡು, ಆಮಂತ್ರಣ ಪತ್ರಿಕೆ ಸ್ವೀಕರಿಸಿ ನಂತರ ಅವತ್ತು ಮನೆಯಲ್ಲಿಯೇ ಟಿವಿ ನೋಡಿಕೊಂಡು ಕಾಲ ಕಳೆದುಕೊಂಡು ನಂತರ ಅವರು ಸಿಕ್ಕಾಗ, “ಸಾರಿ, ನನಗೆ ಅವತ್ತು ತುಂಬಾ ಹುಷಾರಿರಲಿಲ್ಲ” ಅಥವಾ “ಮನೆಗೆ ಇದ್ದಕ್ಕಿದ್ದಂತೆ ಯಾರೋ ಊರಿಂದ ಬಂದುಬಿಟ್ಟರು. ಅದಕ್ಕೆ ಬರಲಾಗಲಿಲ್ಲ. ಸಾರಿ, ಹೇಗಾಯಿತು ಕಾರ್ಯಕ್ರಮ? ಛೇ, ರಿಯಲಿ ಐ ಮಿಸ್ಡ್” ಅಂತ ಓಳು ಬಿಟ್ಟಿರೋ ಗ್ಯಾರಂಟಿ ನಿಮ್ಮಲ್ಲಿ ಕೀಳರಿಮೆ, ಮುಖೇಡಿತನವೇ ಮೊದಲಾದ ಮಾನಸಿಕ ಸಮಸ್ಯೆಗಳು ಇದೆ.
ಲಗಾಮಿರಲಿ ಕುದುರೆಗೆ
ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳೋಣ. ಯಾರಿಗೆ ತಮ್ಮ ಆಲೋಚನಾ ಕ್ರಮಗಳನ್ನು, ಗ್ರಹಿಸುವ ರೀತಿಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆಯೋ ಅವರಿಗೆ ಖಂಡಿತವಾಗಿ ತಮ್ಮ ಅಸಹನೆ, ಆಕ್ರೋಶ, ಆವೇಗ, ಆಗ್ರಹವೇ ಇತ್ಯಾದಿ ಅಹಿತಕರ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವೂ ಕೂಡಾ ಅಭಿವೃದ್ಧಿಗೊಳ್ಳುತ್ತದೆ. ಸಂಯಮದಿಂದ ನೋಡಬಲ್ಲ, ಕೇಳಬಲ್ಲ, ಆಲೋಚಿಸಬಲ್ಲ. ಸಮತೂಕದ ಮಾತುಗಳನ್ನು ಆಡಬಲ್ಲ. ತನ್ನನ್ನು ತಾನು ಸಾಕ್ಷೀಕರಿಸಿಕೊಳ್ಳುವ ಮನುಷ್ಯನು ತನ್ನ ಮನಸ್ಸಿಗೆ ಮತ್ತು ಇತರರ ಮನಸ್ಸಿಗೆ ಗಾಯವಾಗದಂತೆ ಎಚ್ಚರಿಕೆಯಿಂದ ತನ್ನ ನಡೆ, ನುಡಿ ಮತ್ತು ಆಲೋಚನೆಗಳನ್ನು ಬಳಸಬಲ್ಲ. ಹಾಗೆಯೇ ತನ್ನ ಧೋರಣೆ, ಒಲವು ಮತ್ತು ನಿಲುವುಗಳನ್ನು ಎಚ್ಚರಿಕೆಯಿಂದ ನಿಯಂತ್ರಿಸಿಕೊಳ್ಳಬಲ್ಲ.
ಕಠೋಪನಿಷತ್ತೇ ಮೊದಲಾದ ತಾತ್ವಿಕ ಪಠ್ಯಗಳಲ್ಲಿ ಮನುಷ್ಯನ ವಿಷಯ ವಾಸನೆಗಳನ್ನು ಮತ್ತು ಮನೋಭಾವದ ವಸ್ತುಗಳನ್ನು ಕುದುರೆಗಳಿಗೂ ಮತ್ತು ಬುದ್ಧಿಯನ್ನು (ಅಥವಾ ಪ್ರಜ್ಞೆಯನ್ನು) ಸಾರಥಿಗೂ ಹೋಲಿಸುತ್ತಾರೆ. ಬುದ್ಧಿಯು ಮನಸ್ಸಿನ ಭಾವಗಳ ಮೇಲೆ ಲಗಾಮನ್ನು ಹೊಂದಿರಬೇಕು. ಅದನ್ನು ನಿಯಂತ್ರಿಸಬೇಕು ಎಂದು ಸೂಚಿಸುತ್ತಾರೆ. ನಿಜ, ಇದು ಬಹಳ ಸುಂದರವಾದ ಮತ್ತು ಸರಿ ಹೊಂದುವ ರೂಪಕ. ಸವಾರನು ತನ್ನ ಕುದುರೆಯ ಲಗಾಮನ್ನು ತಾನು ಹಿಡಿದುಕೊಂಡು ತನ್ನ ಸವಾರಿಯನ್ನು ತನ್ನ ಗುರಿ ಮತ್ತು ದಾರಿಗೆ ತಕ್ಕಂತೆ ಮಾಡುವುದು ಆತನಿಗಿರುವ ಸಾಮರ್ಥ್ಯ ಮತ್ತು ತರಬೇತಿಯೇ ಸರಿ. ಅದೇ ಮನಸ್ಸಿನ ವಿಷಯಗಳ ಕುದುರೆಗಳನ್ನೂ ಹತೋಟಿಯಲ್ಲಿಡುವ ಲಗಾಮು ನಮ್ಮ ಕೈಯಲ್ಲೇ ಇರಬೇಕು.
ಭಾವನೆಗಳಿಗೂ ಮತ್ತು ಮನೋಭಾವಗಳಿಗೂ ವ್ಯತ್ಯಾಸವಿದೆ. ಅಳು, ನಗು, ಬೇಸರ, ಕೋಪ; ಇತ್ಯಾದಿ ಭಾವನೆಗಳನ್ನು ಹೊರಗಿನ ಒತ್ತಡಗಳಿಂದ ಮತ್ತು ಆಂತರಿಕ ಕಾರಣಗಳಿಂದ ನಿಗ್ರಹಿಸಿಕೊಳ್ಳಬಾರದು. ಅವುಗಳನ್ನು ಅದುಮಿಟ್ಟುಕೊಳ್ಳಬಾರದು, ವ್ಯಕ್ತಪಡಿಸಬೇಕು ನಿಜ. ಆದರೆ, ಈ ರೀತಿಯ ಭಾವನೆಗಳು ಮನೋಭಾವದ ಕಾರಣದಿಂದ ಉಂಟಾದರೆ ಅದು ಸಮಸ್ಯೆಯ ಪರಿಮಿತಿಯಲ್ಲಿ ಬರುತ್ತದೆ.
ಭಾವನೆಗಳಿಗೂ ಮತ್ತು ಮನೋಭಾವಕ್ಕೂ ವ್ಯತ್ಯಾಸವನ್ನು ತಿಳಿದುಕೊಂಡರೆ ಬಹುಶಃ ಇದು ಇನ್ನೂ ಸರಿಯಾಗಿ ಅರ್ಥವಾಗಬಹುದು. ಯಾರಿಗೋ ನೋವಾಯಿತು, ಸಾವಾಯಿತು. ಯಾರೋ ಆಪ್ತರು ಪರಸ್ಪರ ದೂರಾದರು. ಯಾರೋ ಹಸಿವಿನಿಂದ ನರಳಿದರು, ಅಥವಾ ನೀವೇ ಹಸಿವಿನಿಂದಲೋ, ಅಪಮಾನದಿಂದಲೋ ಅಥವಾ ಇನ್ನಾವುದೇ ನೋವಿನಿಂದ ನರಳಿದಿರಿ. ದುಃಖವಾಗುತ್ತದೆ. ಅಳುವಿರಿ.
ಹಾಗೆಯೇ ದೂರಾಗಿದ್ದ ಎರಡು ಜೀವಗಳು ಮತ್ತೆ ಸೇರಿದವು. ಬಹುಕಾಲದ ನಂತರ ನಿಮ್ಮ ಆಪ್ತರನ್ನು ಸಂಧಿಸಿದಿರಿ. ನಿಮಗೆ ಅಥವಾ ಇನ್ನಾರಿಗೋ ಶಿಶುವಿನ ಜನವಾಯಿತು. ಮುದ್ದು ಮಗುವಿನ ಆಟ, ಮುಗ್ಧ ಪ್ರಾಣಿಗಳ ನೋಟ, ಅರಳು ಹೂಗಳು, ಎತ್ತರದ ಮರಗಳು ಖುಷಿ ತಂದವು. ನಗುವಿರಿ. ಹೀಗೆ ಕೆಲವರು ಆ ಹೊತ್ತಿಗೆ ನಡೆದುಕೊಂಡ ಕಾರಣಕ್ಕೆ ನಿಮಗೆ ಕೋಪ ಬಂದಿತು, ಗದರುವಿರಿ. ಗಟ್ಟಿಯಾಗಿ ಮಾತಾಡುವಿರಿ. ಇವೆಲ್ಲವೂ ಕೂಡಾ ಅಲ್ಲಿನ ವಸ್ತುಸ್ಥಿತಿಗಳ ಆಧಾರದಿಂದ ಅಥವಾ ಅವುಗಳು ಪ್ರಚೋದಿಸಿದ್ದರಿಂದ ನೀವು ಅಳುವುದೋ, ನಗುವುದೋ ಅಥವಾ ಕೋಪಿಸಿಕೊಳ್ಳುವುದೋ; ಎಂತದ್ದೋ ಮಾಡಿದಿರಿ. ಇವುಗಳಿಗೆಲ್ಲಾ ವಿಷಯ ವಸ್ತು ಕಾರಣಗಳಿರುತ್ತವೆ.
ಆದರೆ ನಿಮ್ಮ ಅಳು ನಗು ಮತ್ತು ಕೋಪಗಳಿಗೆ ಹೊರಗಿನ ಕಾರಣಗಳೇನೂ ಇಲ್ಲದೇ, ನಿಮ್ಮ ಆಲೋಚನೆಗಳು, ಯೋಚನೆಗಳೇ ಕಾರಣವಾಗಿದ್ದು ಅಳು, ನಗು, ಕೋಪ, ಆಗ್ರಹ, ಆವೇಶಗಳನ್ನು ಉಂಟು ಮಾಡುತ್ತಿದೆ ಎಂದರೆ ಅದು ನಿಮ್ಮ ಮನೋಭಾವ. ಈ ಭಾವನೆಗಳು ಹುಟ್ಟುವುದಕ್ಕೆ ಕಾರಣ ನಿಮ್ಮ ಮನಸ್ಸು. ಅವು ಸಾಮಾನ್ಯವಾಗಿ ಸಹಜವಾಗಿರುವುದಿಲ್ಲ.
ಉದಾಹರಣೆಗೆ ಎಲ್ಲರೂ ಸಂತೋಷವಾಗಿರುವ ಸಮಾರಂಭವೊಂದು ನಡೆಯುತ್ತಿದೆ. ಅಲ್ಲಿ ಕೆಲವರನ್ನು ನೋಡಿ ನಿಮಗೆ ಕಿರಿಕಿರಿಯಾಗುತ್ತಿದೆ. ಯಾವುದೋ ಅಹಿತಕರ ನೆನಪಿನಿಂದ ಅಲ್ಲಿ ಇರಲೂ ಕಷ್ಟವೆನಿಸುತ್ತಿದೆ. ನಗುವ ಮುಖಗಳು ಅಸಹ್ಯವಾಗಿ ಕಾಣುತ್ತಿವೆ. ಅವರೆಲ್ಲಾ ನಗುನಗುತ್ತಾ ದೊಡ್ಡದನಿಯಲ್ಲಿ ಮಾತಾಡಿಕೊಂಡಿರುವುದು ಅಸಹನೀಯವಾಗಿ ಕಿರಿಕಿರಿಯಾಗುತ್ತಿದೆ; ಹೀಗಾದರೆ ನಿಮ್ಮ ಮನೋಭಾವದ ಕಾರಣದಿಂದ ಅನುಚಿತವಾದ ಭಾವನೆಗಳು ಅಲ್ಲಿ ಉಂಟಾಗುತ್ತಿದೆ ಎಂದು ಅರ್ಥ.
ನಿಮ್ಮ ಜೊತೆಗೆ ಜಗಳ ಮಾಡಿದ್ದವರು, ಮನಸ್ತಾಪ ಮಾಡಿಕೊಂಡು ದೂರ ಸರಿದಿರುವವರು ಯಾವುದೋ ತೊಂದರೆಗೆ ಒಳಗಾಗಿ ನೋವುಣ್ಣುತ್ತಿದ್ದಾರೆ ಎಂಬ ಸುದ್ಧಿ ಬಂತು. ಆಗ, ನಿಮಗೆ ಅವರಿಗೆ ಹಾಗೇ ಆಗಬೇಕು. ಸರಿಯಾಗಿ ಆಗಿದೆ. ಅನುಭವಿಸಿಕೊಳ್ಳಲಿ ಎಂದು ಸಂತೋಷದ ಭಾವನೆ ನಿಮ್ಮಲ್ಲಿ ಉಂಟಾದರೆ ಅದು ನಿಮ್ಮ ಮನೋಭಾವದ ಪರಿಣಾಮ ಎಂದು ತಿಳಿಯಬೇಕು. ಹಾಗೆಯೇ ನನ್ನ ಎದುರಾಳಿಗೆ ಯಶಸ್ಸೋ, ಏಳ್ಗೆಯೋ ಉಂಟಾದಾಗ ನನಲ್ಲಿ ನೋವುಂಟಾದರೆ, ನನ್ನಲ್ಲಿ ದುಃಖವಾದರೆ ಅದು ನನ್ನ ಮನೋಭಾವ.
ಸ್ಥೂಲವಾಗಿ ಇಷ್ಟು ತಿಳಿಯೋಣ. ಮನೋಭಾವದ ಕಾರಣ ನಮ್ಮ ಆಲೋಚನಾ ಕ್ರಮಗಳ ಫಲವಾದರೆ, ಭಾವನೆಗಳು ಸಾಮಾನ್ಯವಾಗಿ ಹೊರಗಿನ ಪ್ರೇರಣೆಯಿಂದ ಆಗುವವು. ಹಾಗಾಗಿಯೇ ಬಹಳ ಜನ ಕಾರಣವಿಲ್ಲದೇ ನಗುವ, ಅಥವಾ ಅಳುವವರನ್ನು ಹುಚ್ಚರು ಎಂದು ಹಣೆಪಟ್ಟಿ ಕಟ್ಟುತ್ತಿದ್ದರು. ಆದರೆ, ಕಾರಣಗಳಿರುತ್ತವೆ. ಅವು ಒಳಗೆ ಬಚ್ಚಿಟ್ಟುಕೊಂಡಿರುತ್ತವೆ. ಅದು ಹೊರಗೆ ನಮಗೆ ಗೊತ್ತಾಗುವುದಿಲ್ಲ.
ಕೊಂಚ ಮಟ್ಟಿಗೆ ನಿಯಂತ್ರಣ ಸಾಧಿಸಲು ಶಕ್ಯವಾಗಿರುವವರು ತಮ್ಮ ಎದುರಾಳಿ ಸತ್ತ ಎಂಬ ಸುದ್ಧಿ ಕೇಳಿ ‘ಅಬ್ಬಾ ಸತ್ತನಲ್ಲ!’ ಎನಿಸಿದರೂ ಹೊರಗೆ ‘ಅಯ್ಯೋ ಪಾಪ’ ಎನ್ನಬಲ್ಲ. ತನಗೆ ಆಗದೇ ಇರುವವನು ಅಥವಾ ತನ್ನ ಅಸೂಯೆಗೆ ಪಾತ್ರನಾಗಿರುವವನು ಎದುರಾಗಿ ತನಗೆ ಯಾವುದರಲ್ಲೋ ಗೆಲುವುಂಟಾಯಿತು, ಯಶಸ್ಸಾಯಿತು ಎಂದಾಗ ಕಸಿವಿಸಿಯಾದರೂ, ಹೊಟ್ಟೆಯಲ್ಲಿ ಮೆಣಸು ಅರೆಯುತ್ತಿದ್ದರೂ ಮುಖದಲ್ಲಿ ನಗೆಯನ್ನು ತಂದುಕೊಂಡು ‘ಓ, ಹೌದಾ, ವೆರಿ ನೈಸ್. ಕಂಗ್ರಾಜ್ಯುಲೇಶನ್’ ಎಂದು ಅಭಿನಂದಿಸಬಲ್ಲ.
ಆದರೆ, ಅವುಗಳನ್ನು ನಿಯಂತ್ರಣ ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದ ಮಾತ್ರಕ್ಕೆ ಅವನು ಸ್ವಾಸ್ಥ್ಯ ಮನಸ್ಸಿನವನು ಎಂದೇನಲ್ಲ. ಅವನಲ್ಲಿ ರೋಗವಿದೆ ಆದರೆ ಸ್ಫೋಟವಾಗುವಷ್ಟು ಉಲ್ಬಣಗೊಂಡಿಲ್ಲ ಎಂದು ಅರ್ಥ. ಆದ್ದರಿಂದ ರೋಗಲಕ್ಷಣಗಳು ಕಂಡ ತಕ್ಷಣವೇ ಆಲೋಚನಾ ಕ್ರಮಗಳನ್ನು, ಚಿಂತನಾ ವಿಧಾನವನ್ನು ಬದಲಾಯಿಸಿಕೊಳ್ಳುವ ಉದ್ದೇಶಪೂರ್ವಕ ಪ್ರಯತ್ನವನ್ನು ಮಾಡಬೇಕು.
ಸತತವಾಗಿ ಮಾಡುವ ಅಭ್ಯಾಸವು ಫಲವನ್ನು ಕೊಡುವುದು. ಅದರಲ್ಲಿ ಅನುಮಾನವೇ ಬೇಡ. ತನಗೆ ಅನ್ನಿಸಿದರ ವಿರುದ್ಧವಾಗಿ ಆಲೋಚನೆ ಮಾಡುವುದು ಆತ್ಮದ್ರೋಹವಲ್ಲವೇ? ತಾನು ಅಪ್ರಮಾಣಿಕವಾಗಿ ನಡೆದುಕೊಳ್ಳುತ್ತಿದ್ದೇನಲ್ಲವೇ? ಇನ್ನು ನನ್ನತನದ ಗುರುತೇನು? ಎಂದೇನಾದರೂ ಅಂದುಕೊಂಡರೆ ಅದನ್ನು ಸ್ಪಷ್ಟಪಡಿಸಬೇಕಾದ ಅಗತ್ಯ ಖಂಡಿತ ಇದೆ. ಮುಂದೆ ನೋಡೋಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243