ಅಂತರಂಗ
ಅರಿಮೆಯ ಅರಿವಿರಲಿ – 16 : ನನ್ನ ಕೊಲ್ಲುವರಿವರು
- ಯೋಗೇಶ್ ಮಾಸ್ಟರ್
ಕನ್ನಡದ ಮುಖ್ಯನಾಟಕಕಾರರಲ್ಲಿ ಒಬ್ಬರಾದ ಸಂಸ ಮೈಸೂರಿನಲ್ಲಿ ಏಕಾಂಗಿಯಾಗಿ ವಾಸವಿದ್ದರು. ಕಿಟಕಿಯಿಂದ ಬೆಳಕೂ ಒಳಗೆ ಬೀಳದಂತೆ ಇಡೀ ಕೋಣೆಗೆ ವಾರ್ತಾಪತ್ರಿಕೆಗಳನ್ನು ಅಂಟಿಸಿದ್ದರು. ಹೊರಗೆ ಹೋಗಲು ಹೆದರುವಂತ ಸ್ಥಿತಿ ತಲುಪಿದ್ದರು. ತಮ್ಮ ಸ್ನೇಹಿತರು, ಪರಿಚಯಸ್ಥರು ಬಾಗಿಲು ತಟ್ಟಿದರೂ ಬಾಗಿಲು ತೆರೆಯದಂತಹ ಮನಸ್ಥಿತಿಯನ್ನು ಅವರು ಹೊಂದಿದ್ದರು. ಸಿಕ್ಕಾಪಟ್ಟೆ ಹೆದರಿದ್ದರು. ಮೈಸೂರಿನ ಪೋಲಿಸರು ತನ್ನ ಬೆನ್ನು ಬಿದ್ದಿದ್ದಾರೆಂದುಕೊಂಡಿದ್ದರು. ಆ ಪೋಲೀಸರು ಮಾಹಿತಿದಾರರನ್ನು ಅಥವಾ ಗೂಢಾಚಾರರನ್ನು ತಮ್ಮ ಹಿಂದೆ ಬಿಟ್ಟು ತಮ್ಮೆಲ್ಲಾ ಚಲನವಲನ ಗಮನಿಸುತ್ತಾ ತಮ್ಮನ್ನು ಹಿಂಸಿಸುತ್ತಿದ್ದಾರೆಂದುಕೊಂಡಿದ್ದರು. ಅದೇ ಭಯದಿಂದ ಅವರು ಕೊನೆಯದಿನಗಳಲ್ಲಿ ತುಂಬಾ ನರಳಿದ್ದರು.
ಕೆಲವರಿಗೆ ಏನೋ ಭಯ. ಅವರ ಭಯಕ್ಕೆ ಕಾರಣವೇ ಇರುವುದಿಲ್ಲ. ತಮ್ಮನ್ನು ಕಡೆಗಣಿಸುತ್ತಾರೆ, ತಮ್ಮನ್ನು ಹಿಂಸಿಸುತ್ತಾರೆ, ತಮಗೆ ಕಿರುಕುಳಕೊಡುತ್ತಾರೆ ಎಂಬ ಭಾವ. ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ಉದ್ದೇಶಪೂರ್ವಕವಾಗಿ, ನನ್ನನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡುತ್ತಾರೆ, ನಿಂದಿಸುತ್ತಾರೆ; ಇತ್ಯಾದಿಯಷ್ಟೇ ಅಂದುಕೊಳ್ಳುವುದಲ್ಲ.
ಈ ಮನೋಭಾವವು ಉಲ್ಬಣಗೊಂಡಂತೆ ತಾನೊಂದು ದೊಡ್ಡ ಅಪಾಯದಲ್ಲಿ ಸಿಲುಕಿದ್ದೇನೆ ಎಂದು ಭಾವಿಸುವರು. ಯಾರೋ ಒಬ್ಬರು ಅಥವಾ ಇಂತಿಂತವರು ಅಥವಾ ಇಂತಹದೊಂದು ಗುಂಪು ಅಥವಾ ಇಂಥಾ ವ್ಯವಸ್ಥೆಯು ನನ್ನನ್ನು ನಿವಾರಿಸಲು ಹೊಂಚು ಹಾಕುತ್ತಿದೆ, ಸಂಚು ಹೂಡುತ್ತಿದೆ ಎಂದು ಭಾವಿಸುವರು.
ಎಲ್ಲರಿಂದ ನಾನು ದೂರಾಗಿದ್ದೇನೆ. ನನ್ನನ್ನು ಮೂಲೆಗುಂಪಾಗಿ ಮಾಡಿದ್ದಾರೆ. ನನ್ನನ್ನು ಹಿಂಸಿಸಲು ಅವರೆಲ್ಲಾ ಪಿತೂರಿಗಳನ್ನು ಹೂಡುತ್ತಿದ್ದಾರೆ ಎಂದು ತಾವು ಯಾರನ್ನು ಕುರಿತು ಆಲೋಚಿಸುತ್ತಿರುತ್ತಾರೋ ಅವರನ್ನು ದೂರುವುದು. ಅವರಿಂದ ತಪ್ಪಿಸಿಕೊಂಡು ಓಡುವುದು. ಸತತವಾಗಿ ಅಜ್ಞಾತವಾಸದಲ್ಲಿರುವುದು. ಯಾರನ್ನೂ ನಂಬದಿರುವುದು. ಯಾರೇ ತಮ್ಮ ಸಂಪರ್ಕಕ್ಕೆ ಬಂದರೂ ಅವರು ತನ್ನ ಮೇಲೆ ದ್ವೇಷ ಸಾಧಿಸುವವರಿಗೆ ನೆರವಾಗಿ ತನಗೆ ಎರವಾಗಬಹುದು ಎಂದು ಭ್ರಮಿಸುವುದು ಇತ್ಯಾದಿಗಳೆಲ್ಲಾ ಹಿಂಸೆಗೊಳಗಾಗುವ ಅರಿಮೆಯ (Persecution Complex) ಲಕ್ಷಣಗಳು.
ಇವರು ಯಾರನ್ನೂ ನಂಬುವುದಿಲ್ಲ. ತನ್ನ ಬಗ್ಗೆ ಆಡಿಕೊಳ್ಳುತ್ತಾರೆಂದುಕೊಳ್ಳುವುದು. ಯಾರು ಏನೇ ಮಾತಾಡಿದರೂ ತನ್ನ ಬಗ್ಗೆಯೇ ಆಡುತ್ತಿದ್ದಾರೆಂದುಕೊಳ್ಳುವುದು. ತನ್ನನ್ನು ಉದ್ದೇಶಿಸಿ ಪರೋಕ್ಷವಾಗಿ ಮಾತಾಡುತ್ತಿದ್ದಾರೆ ಎಂದುಕೊಳ್ಳುವುದು ಕೂಡಾ ಇದರ ಲಕ್ಷಣವೇ. ಹೀಗಾಗಿ ಯಾರಲ್ಲೂ ವಿಶ್ವಾಸವನ್ನು ಹೊಂದದೇ ಹೋಗುತ್ತಾರೆ.
ವಿಷವಿಡುವರು
ಜನರ ಮೇಲಿನ ಈ ಅವಿಶ್ವಾಸ ಅಥವಾ ಈ ಬಗೆಯ ಮಾನಸಿಕ ಅವ್ಯವಸ್ಥೆಯಿಂದ ಮುಂದೆ ಅವರ ಸ್ಥಿತಿ ಎಷ್ಟರಮಟ್ಟಿಗೆ ಹೋಗುತ್ತದೆ ಎಂದರೆ ಭ್ರಮಾಧೀನರಾದಂತೆ ವಿಲಕ್ಷಣವಾಗಿ ವರ್ತಿಸುವರು. ಸಹಜವಾದ ಪ್ರತಿಕ್ರಿಯೆಗಳಿಗೆ ಬದಲಾಗಿ ವಿಲಕ್ಷಣವಾದಂತಹ ಪ್ರತಿಕ್ರಿಯೆಗಳನ್ನು ನೀಡುವುದು ಅಥವಾ ವರ್ತಿಸುವುದೂ ಕೂಡಾ ಮಾಡುವರು.
ಇವರು ಮನೆಯವರನ್ನೂ ನಂಬುವುದಿಲ್ಲ. ಸಾಲದಕ್ಕೆ ತಮ್ಮ ಸಂಬಂಧಗಳನ್ನು ವಿಶ್ವಾಸಿಸುವುದಿಲ್ಲ. ನನಗೆ ವಿಷವಿಟ್ಟು ಬಿಡುತ್ತಾರೆ ಎಂದು ಮನೆಯಲ್ಲಿ ಸರಿಯಾಗಿ ಊಟ ಮಾಡದೇ ಇರುವುದು, ಹರಿತವಾದ ಆಯುಧದಿಂದ ತನ್ನನ್ನು ಕೊಲೆ ಮಾಡುವರೆಂದು ಚಾಕು, ಕತ್ತರಿಗಳನ್ನು ಬಚ್ಚಿಡುವುದೂ ಉಂಟು.
ಹಾಗೆ ಸ್ಥೂಲವಾಗಿ ನೋಡಿದರೆ ಅವರು ತಮಗೆ ಸಹಜಕ್ಕಿಂತ ಅತಿಯಾದ ಪ್ರಾಮುಖ್ಯತೆಯನ್ನು ಬಯಸುವಂತೆ ಕಾಣುವುದು.
ಅಂತಹ ಪ್ರಾಮುಖ್ಯತೆಯನ್ನು ನೀಡದಿದ್ದರೆ ಮೂರ್ಚೆ ಹೋಗುವುದೋ, ಅಥವಾ ಆತ್ಮಹತ್ಯೆಗೆ ಮುಂದಾಗುವುದೋ ಅಥವಾ ಎಲ್ಲಿಯೋ ಹೋಗಿ ಏಕಾಂತದಲ್ಲಿ ಅಡಗಿಕೊಳ್ಳುವುದೋ; ಎಂತದ್ದೋ ಮಾಡುತ್ತಾರೆ. ಆದರೆ ಇದು ಪ್ರಾಮುಖ್ಯತೆಯ ಬೇಡಿಕೆಯಲ್ಲ. ಅದು ಬೇರೆ, ಮಾರ್ಟಿರ್ ಕಾಂಪ್ಲೆಕ್ಸ್. ಆದರೆ ಇವರ ಕೆಲವು ವರ್ತನೆಗಳು ಸ್ಥೂಲ ನೋಟಕ್ಕೆ ಹಾಗೆ ಕಾಣುತ್ತದೆ. ಇವರಿಗೆ ಇತರರಿಂದ ಸಮಾಧಾನವೋ, ಸಾಂತ್ವಾನವೋ ಬೇಕಾಗಿರುವುದಿಲ್ಲ. ಮೊದಲಾಗಿ ಅವರು ವ್ಯಕ್ತಿಗಳನ್ನೇ ನಂಬುವುದಿಲ್ಲ. ಒಟ್ಟಾರೆ ಎಂತದ್ದೋ ಸಹಜವಾಗಿ ಪ್ರತಿಕ್ರಿಯಿಸುವ ಬದಲು ಇತರರಿಗೆ ಹೆದರಿಸುವಂತೆ ಅಥವಾ ರೇಜಿಗೆ ಹುಟ್ಟಿಸುವಷ್ಟು ಅಸಹಜವಾಗಿ ವರ್ತಿಸುವರು.
ವಿಲಕ್ಷಣ ವರ್ತನೆಗಳು
ಕೆಲವು ಮಕ್ಕಳು ಇಂತಹ ಲಕ್ಷಣಗಳನ್ನು ತೋರುವರು. ಇತರ ಮಕ್ಕಳು ತಮ್ಮನ್ನು ಬೇಕೆಂದೇ ಆಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದೋ, ತನ್ನನ್ನು ದೂರಕ್ಕೆ ತಳ್ಳುತ್ತಾರೆ ಎಂದೋ, ತನ್ನ ಕಂಡರೆ ಇಷ್ಟಪಡುವುದಿಲ್ಲ ಎಂದೋ ದೂರುತ್ತಿರುತ್ತಾರೆ. ಈ ದೂರು ನಿತ್ಯ ಗೋಳಾಟಕ್ಕೆ ಕಾರಣವೂ ಆಗಿರುತ್ತದೆ. ಇತರ ಮಕ್ಕಳಿಗೆ ಇದರಿಂದ ಇವರ ಬಗ್ಗೆ ಇನ್ನಷ್ಟು ರೇಜಿಗೆ, ಬೇಸರ ಆಗಿ ಮತ್ತಷ್ಟು ತಪ್ಪಿಸಿಕೊಳ್ಳಲು ಯತ್ನಿಸತೊಡಗುತ್ತಾರೆ. ಕೊನೆಗೆ ಸಂಬಂಧಗಳು ಕಿರಿಕಿರಿಗಳಿಂದಲೇ ಸಡಿಲಗೊಂಡು ಒಬ್ಬರನ್ನೊಬ್ಬರು ಸದಾ ನಿವಾರಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ.
ಮಗುವೊಂದು ತನಗೇನಾದರೂ ಬೇಕಾದರೆ ನಿಂತಲ್ಲಿ ಹಟ ಮಾಡದೇ, ಅಳದೇ ಗಮನ ಸೆಳೆಯಲು ಯಾವುದೋ ಟೇಬಲ್ಲಿನ ಕೆಳಗೆ ಕುಳಿತು ಅಳುತ್ತಿದೆ ಎಂದರೆ ಎಚ್ಚೆತ್ತುಕೊಳ್ಳಿ. ಯಾವಾಗಲೂ ಇತರರ ಮೇಲೆ ತನ್ನನ್ನು ಅವರು ಅವಾಯ್ಡ್ ಮಾಡ್ತಾರೆ, ನಾನೆಷ್ಟು ಇಷ್ಟಪಟ್ಟರೂ ಅವರು ನನ್ನ ಇಷ್ಟಪಡುವುದಿಲ್ಲ, ನನ್ನ ಕಂಡರೆ ಅವರಿಗೆ ಆಗುವುದಿಲ್ಲ; ಇತ್ಯಾದಿ ಮಾತುಗಳನ್ನು ಆಗ್ಗಿಂದಾಗ್ಗೆ ಹೇಳುತ್ತಿದ್ದರೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.
ತಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ವಿಶ್ವಾಸವನ್ನು ಅವರಲ್ಲಿ ತುಂಬುವ, ಅವರೊಡನೆ ಮುಕ್ತವಾಗಿ ಮಾತಾಡುವ ಮತ್ತು ಅವರಿಗೆ ಆ ರೀತಿ ಮಾತಾಡುವ ಅವಕಾಶಗಳನ್ನು ಕಲ್ಪಿಸಿಕೊಡುವ ದಿಕ್ಕಿನಲ್ಲಿ ಪೋಷಕರು ಮತ್ತು ಶಿಕ್ಷಕರು ಕೆಲಸ ಮಾಡಬೇಕು. ಬಾಲ್ಯದಲ್ಲೇ ಇಂತಹ ಲಕ್ಷಣಗಳನ್ನು ಗುರುತಿಸಿದರೆ, ತಕ್ಷಣವೇ ಅದಕ್ಕೆ ಉಪಚರಿಸಿದರೆ ಕ್ರಮೇಣ ಅದು ಇಲ್ಲವಾಗುವುದು. ವಿಲಕ್ಷಣವಾಗಿ ವರ್ತಿಸಿದಾಗೆಲ್ಲಾ ಮಕ್ಕಳ ಗಮನಕ್ಕೆ ತರಬೇಕು. ಹಾಗೆ ಅವರ ಗಮನಕ್ಕೆ ತರುವಾಗ ಸೌಜನ್ಯದಿಂದಲೂ ಮತ್ತು ಪ್ರೀತಿಯಿಂದಲೂ, ಆದರೆ ಕಟ್ಟುನಿಟ್ಟಾಗಿಯೂ ಇರಬೇಕು.
ದುರಂತ ನಾಟಕಗಳು ದುರಂತ ಅಂತ್ಯ
ಕನ್ನಡದ ನಾಟಕಕಾರ ಸಂಸರಿಗೆ ಈ ಪರ್ಸೆಕ್ಯೂಶನ್ ಕಾಂಪ್ಲೆಕ್ಸ್ ಯಾವಾಗ ಶುರುವಾಗಿತ್ತೋ ಗೊತ್ತಿಲ್ಲ. ಅವರು ಬೆಳೆಬೆಳೆದಂತೆ ಅಂತರ್ಮುಖಿಯಾಗಿರುತ್ತಿದ್ದರು. ಯಾರ ಜೊತೆಗೂ ಯಾವ ವಿಷಯವನ್ನೂ ಹಂಚಿಕೊಳ್ಳುತ್ತಿರಲಿಲ್ಲ. ಕೊನೆಕೊನೆಗೆ ಅದೆಷ್ಟು ಅತಿಯಾಯಿತೆಂದರೆ 14.02.1939ರಲ್ಲಿ ತನಗೆ ಪೋಲಿಸರು ಮತ್ತು ಅವರ ಗೂಢಾಚಾರರು ಕೊಡುತ್ತಿರುವ ಕಿರುಕುಳದಿಂದ ನನಗೆ ಜೀವನ ಅಸಹನೀಯವಾಗಿದೆ ಎಂದು ಹೇಳಿ ವೆರೋನಲ್ ಎಂಬ 150 ನಿದ್ರೆಗುಳಿಗೆಗಳನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡರು.
ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಸಣ್ಣ ಕೊಠಡಿಯಲ್ಲಿ ಸತ್ತು ಹೋಗಿದ್ದು, ಅವರ ಸಾವಿನ ಸುದ್ಧಿ ತಿಳಿದಿದ್ದು ಅನೇಕ ದಿನಗಳ ನಂತರ. ಅದೂ ಹೆಣವು ಕೊಳೆತು ಹೊರಗೆ ವಾಸನೆ ಬರಲಾರಂಭಿಸಿದ ಮೇಲೆ. ಅತ್ಯದ್ಭುತವಾದ ಸಾಹಿತ್ಯ ರಚನಾ ಸಾಮರ್ಥ್ಯ ಹೊಂದಿದ್ದ ಅವರಿಗೆ ಬಾಲ್ಯದಿಂದಲೇ ಆಪ್ತತೆಯನ್ನು ಹೊಂದಿರುವಂತಹ ಸರಿಯಾದ ವ್ಯಕ್ತಿಯ ಸಾಮಿಪ್ಯ ದೊರಕಿರಲಿಲ್ಲ. ತಂದೆಯನ್ನೂ ಎಳೆಯ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದರು. ಸಾಲದಕ್ಕೆ ಅವರು ಬರೆಯುತ್ತಿದ್ದದ್ದು ಹೆಚ್ಚು ದುರಂತ ನಾಟಕಗಳು. ಮೈಸೂರು ಸಂಸ್ಥಾನದ ಅರಸರ ರಾಜಕೀಯಗಳಲ್ಲಿ ನಡೆಯುತ್ತಿದ್ದ ಒಳಸಂಚು, ಪಿತೂರಿ, ಮತ್ಸರ, ಕೊಲೆ ಇತ್ಯಾದಿ ವಿಷಯಗಳೇ ಅವರ ಸಾಹಿತ್ಯ ವಸ್ತುಗಳು.
ಪದೇಪದೇ ಅವುಗಳ ಬಗ್ಗೆಯೇ ಆಲೋಚಿಸುವ, ಅವುಗಳ ಕುರಿತಾಗಿಯೇ ಅಧ್ಯಯನ ಮಾಡುವ, ಅವನ್ನೇ ರಚಿಸುವ ಪುನರಾವರ್ತನೆಯ ನಕಾರಾತ್ಮಕ ಚಿಂತನೆಗಳಿಂದ ತಮ್ಮ ಪರ್ಸೆಕ್ಯೂಶನ್ ಕಾಂಪ್ಲೆಕ್ಸನ್ನು ಮತ್ತಷ್ಟು ಬಲಪಡಿಸಿಕೊಂಡು ಅದರಿಂದ ಹೊರಗೆ ಬರದೇ ಅದರಲ್ಲೇ ಸತ್ತು ಹೋದರು. ದುರಂತ ನಾಟಕಗಳ ನಾಟಕಕಾರ ದುರಂತವನ್ನು ಕಂಡಿದ್ದು ಒಂದು ವಿಪರ್ಯಾಸವಾದರೂ ಅದೇನೂ ವಿಧಿಯೋ ಅಥವಾ ಪರಿಸ್ಥಿತಿಯು ಹಾಗೊದಗಿದ್ದೋ ಖಂಡಿತ ಅಲ್ಲ. ಅವರ ಮಾನಸಿಕ ಸಮಸ್ಯೆ, ಅವರಿಗಿದ್ದ ಹಿಂಸೆಗೊಳಗಾಗುವ ಅರಿಮೆಯೇ ಕಾರಣ.
ಒಂದು ವೇಳೆ ನೀವೋ, ನಿಮ್ಮ ಜೊತೆಯವರೋ, ನಿಮ್ಮ ಮಕ್ಕಳೋ ತಮ್ಮನ್ನು ಕಡೆಗಣಿಸುತ್ತಾರೆ, ತಮಗೆ ಬೇಕೆಂದೇ ಕಿರುಕುಳಕೊಡುತ್ತಾರೆ, ಅಥವಾ ಅವರು ಇವರು ಎಲ್ಲಾ ನನ್ನ ಬಗ್ಗೆಯೇ ಕೆಟ್ಟದಾಗಿ ಮಾತಾಡಿಕೊಳ್ಳುತ್ತಾರೆ, ಎಂಬಂತಹ ಲಕ್ಷಣಗಳನ್ನು ತೋರಿದರೆ ಅವರನ್ನು ಹೆಚ್ಚು ಹೆಚ್ಚು ಜನರೊಂದಿಗೆ ಬೆರೆಯಲು ಪ್ರೋತ್ಸಾಹಿಸಬೇಕು. ಪ್ರೀತಿ, ವಿಶ್ವಾಸ, ಭಾವುಕತೆ ಇಂತವುಗಳಿಂದ ಅವರ ಸಂಬಂಧವನ್ನು ಆಪ್ತಗೊಳಿಸಬೇಕು. ಒಂದು ವೇಳೆ ಇಂತಹ ಲಕ್ಷಣಗಳನ್ನು ತೋರಿಯೂ ಅವರು ಸ್ನೇಹಜೀವಿಯಾಗಿದ್ದಾರೆ, ಎಲ್ಲರೊಡನೆ ಬೆರೆಯುತ್ತಿದ್ದಾರೆ, ಕೆಲಸ ಮಾಡುವಲ್ಲಿ ತಮ್ಮ ಕೈ ಜೋಡಿಸುತ್ತಾರೆ ಎಂದಾದರೆ ಇದು ತತ್ಕಾಲದ ಸಮಸ್ಯೆಯಾಗಿದ್ದು ಕ್ರಮೇಣ ಹೊರಟುಹೋಗುತ್ತದೆ.
ಆದರೆ ಜನರಿಂದ ದೂರಾದರೆ, ಅಂತರ್ಮುಖಿಗಳಾಗಿ ಏಕಾಂಗಿಗಳಾಗಿದ್ದರೆ ಕಷ್ಟ. ಆದ್ದರಿಂದ ಮಕ್ಕಳಲ್ಲಿ ಅಥವಾ ಯುವಕರರಲ್ಲಿ ಇಂತಹ ಪರ್ಸಕ್ಯೂಶನ್ ಲಕ್ಷಣಗಳು ಕಂಡರೆ ಸಾಮಾಜಿಕ ಸಂಬಂಧವನ್ನು ಉತ್ತಮಪಡಿಸುವುದರ ಜೊತೆಗೆ, ವ್ಯಕ್ತಿಗತವಾಗಿ ಆಪ್ತತೆಯನ್ನು ಮತ್ತು ಆತ್ಮೀಯತೆಯನ್ನು ಬೆಳೆಸಿಕೊಳ್ಳುವುದು ಚಿಕಿತ್ಸಕವಾಗಿ ಕೆಲಸ ಮಾಡುತ್ತದೆ. ಪರ್ಸಕ್ಯುಶನ್ ಕಾಂಪ್ಲೆಕ್ಸ್ ಅಥವಾ ಹಿಂಸೆಗೊಳಗಾಗುವ ಅರಿಮೆಯೂ ಸೇರಿದಂತೆ ಯಾವುದೇ ಕಾಡುವ ಕಾಂಪ್ಲೆಕ್ಸ್ ಗಳನ್ನು ಬಾಲ್ಯದಲ್ಲಿಯೇ ಅಥವಾ ಆರಂಭದಲ್ಲಿಯೇ ಅಥವಾ ಬಲಿಯುವ ಮುನ್ನವೇ ಗುರುತಿಸಿದರೆ ಅದರಿಂದ ಆ ಸಮಸ್ಯೆಗೆ ಒಳಗಾಗಿರುವ ವ್ಯಕ್ತಿಗಳನ್ನು ಕಾಪಾಡಲು ಸಾಧ್ಯ. ಕೆಮ್ಮು ನೆಗಡಿ ಜ್ವರವನ್ನು ನಿವಾರಿಸಿಕೊಂಡಂತೆಯೇ ಸಮಾಲೋಚನೆ ಮತ್ತು ಮನೋಭಾವವನ್ನು ಕ್ರಮಗೊಳಿಸಿಕೊಳ್ಳುವ ವಿಧಾನಗಳಿಂದ ಇಂತಹ ಕಾಂಪ್ಲೆಕ್ಸ್‍ಗಳನ್ನು ನಿವಾರಿಸಿಕೊಳ್ಳಬಹುದು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243