ಅಂತರಂಗ
ಅರಿಮೆಯ ಅರಿವಿರಲಿ – 17 : ತ್ಯಾಗವೇ ನನ್ನುಸಿರು
- ಯೋಗೇಶ್ ಮಾಸ್ಟರ್
ತಾನು ನೋವಿಗೊಳಗಾಗುತ್ತಾ ಇತರರ ಅನುಕಂಪ ಮತ್ತು ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳುವುದೇ ಮಾರ್ಟಿರ್ ಕಾಂಪ್ಲೆಕ್ಸ್. ಬಲಿದಾನದರಿಮೆಯುಳ್ಳವರ ಧ್ಯೇಯವಾಕ್ಯ “ಪರೋಪಕಾರಾರ್ಥೇಮಿದಂ ಶರೀರಂ.”ಅತಿಯೆನಿಸುವಷ್ಟು ಅಧಿಕ ಪರೋಪಕಾರಿಗಳು.ಕೆಲವೊಮ್ಮೆ ಅದು ನೋಡುಗರಿಗೆ ಮತ್ತು ಸಹವಾಸಿಗಳಿಗೆ ಉಪಕಾರವೆನಿಸುವುದೂ ಇಲ್ಲ. ತಮ್ಮನ್ನು ತಾವು ದಂಡಿಸಿಕೊಂಡು ಮತ್ತೊಬ್ಬರಿಗೆ ಕೆಲಸ ಮಾಡುವುದನ್ನು ನೋಡಿದರೆ ಕಿರಿಕಿರಿಯಾಗುತ್ತದೆ.
ಕೆಲವೊಂದು ಮನೆಗಳಲ್ಲಿ ಹೆಂಗಸರು ತಾನು ಏನೂ ತಿನ್ನದೇ, ಕುಡಿಯದೇ ಬರಿದೇ ಕೆಲಸ ಮಾಡುತ್ತಿರುತ್ತಾರೆ. ಎಲ್ಲರಿಗೂ ಅಡುಗೆ ಮಾಡಿ ಬಡಿಸುತ್ತಾರೆ, ಪಾತ್ರೆ ತೊಳೆಯುತ್ತಾರೆ, ಬಟ್ಟೆ ಒಗೆಯುತ್ತಾರೆ. ಆದರೆ ತಮ್ಮ ಹೊಟ್ಟೆಗೇನೂ ಹಾಕಿಕೊಳ್ಳುವುದಿಲ್ಲ. ಗಮನಿಸಿದವರು ತಿನ್ನು ತಿನ್ನು ಎಂದರೂ ಇದೊಂದು ಕೆಲಸ ಮುಗಿದುಹೋಗಲಿ, ಆಮೇಲೆ ತಿನ್ನುತ್ತೇನೆ ಎನ್ನುವರು. ಹಸಿದುಕೊಂಡೇ ಎಷ್ಟು ಹೊತ್ತಾದರೂ ಕೆಲಸ ಮಾಡುತ್ತಿರುವರು. ಅವರ ಆಂತರ್ಯಕ್ಕೆ ಬೇಕಾಗಿರುವುದೇ ಅದು. ನೋಡುಗರು “ನೋಡು ಅವಳನ್ನು. ಏನೂ ತಿನ್ನದೇ, ಬರೀ ಹೊಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ತನ್ನ ಹೊಟ್ಟೆಗೇನೂ ಹಾಕಿಕೊಳ್ಳದಿದ್ದರೂ ಇತರರ ಹೊಟ್ಟೆ ತುಂಬಿಸುತ್ತಾಳೆ. ಯಾವಾಗಲೂ ಅವಳಿಗೆ ಗಂಡ, ಮಕ್ಕಳು, ಇತರರದೇ ಯೋಚನೆ. ತನ್ನ ಸ್ವಂತದ್ದೇನನ್ನೂ ಲಕ್ಷಿಸುವುದಿಲ್ಲ.” ಈ ತ್ಯಾಗಮಯಿಯ ಹಣೆಪಟ್ಟಿ ಬೇಕವರಿಗೆ. ಜ್ವರ ಬಂದಿದ್ದರೂ ಎದ್ದು ಕೆಲಸ ಮಾಡುವುದು. ಔಷಧ ತೆಗೆದುಕೊಳ್ಳುವುದನ್ನೂ ಬಿಟ್ಟು ಕೆಲಸ ಮಾಡಲು ಬರುವುದು.
ಇತರರಿಗಾಗಿ ರಾತ್ರಿ ನಿದ್ದೆಗೆಟ್ಟು ದುಡಿಯುವುದು. ಎಲ್ಲಾ ಕೆಲಸಗಳನ್ನೂ ತಾನೇ ಮೈಮೇಲೆಳೆದುಕೊಳ್ಳುವುದು. ಇಂತವೆಲ್ಲಾ ಮಾರ್ಟಿರ್ ಕಾಂಪ್ಲೆಕ್ಸ್ ಅಥವಾ ಬಲಿದಾನದರಿಮೆಯ ಅಥವಾ ಹುತಾತ್ಮನರಿಮೆಯ ಲಕ್ಷಣಗಳು. ಇತರರು ಮೊದಲು ತಾನು ನಂತರ – ಇದು ಅವರ ಆದ್ಯತೆ. ಅದಕ್ಕಾಗಿ ಅವರು ತಮ್ಮ ಆರೋಗ್ಯ ಮತ್ತು ಸುಖವನ್ನೆಲ್ಲಾ ಬೇಕಾದರೆ ತ್ಯಾಗ ಮಾಡುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ಈ ತ್ಯಾಗದ ಹಿಂದೆ ಇರುವುದು ಅವರ ಅರಿಮೆಯ ಆಳದಲ್ಲಿ ಇತರರ ಗಮನ ಸೆಳೆಯುವ ಬಯಕೆ ಮತ್ತು ಅವರ ಕಾಳಜಿಯ ಕೋರಿಕೆ.
ತಾವು ಬಯಸುವಂತಹ ಅಥವಾ ಅಂತರಾಳದ ಆಸೆಯಿಂದ ನಿರೀಕ್ಷಿಸುತ್ತಿರುವಂತಹ ಪ್ರಶಂಸೆ, ಗಮನ ಮತ್ತು ಕಾಳಜಿಗಳು ಅತ್ತ ಕಡೆಯಿಂದ ಬರದೇ ಹೋದರೆ ತಮ್ಮನ್ನು ಇನ್ನಷ್ಟು ಕಠಿಣ ಪರಿಶ್ರಮಗಳಿಗೆ ಒಳಪಡಿಸಿಕೊಳ್ಳುತ್ತಾರೆ. ಹಾನಿ ಮಾಡಿಕೊಳ್ಳುವುದು, ಘಾಸಿ ಮಾಡಿಕೊಳ್ಳುವುದು ಕೂಡಾ ಉಂಟು.ಎಲ್ಲಿಂದಲೋ ಬಿದ್ದುಬಿಡುವುದು, ಕೈ ಕುಯ್ದುಕೊಳ್ಳುವುದು. ಇವುಗಳ ಜೊತೆಗೆ ಖಿನ್ನತೆಗೂ ಜಾರುತ್ತಾರೆ. ಇದು ಅವರ ಉಗ್ರವಾದ ವರ್ತನೆಗಳಿಗೂ ದಾರಿಯಾಗುತ್ತದೆ.
ದೇಶಕ್ಕಾಗಿ ಪ್ರಾಣ ಕೊಡುತ್ತೇನೆ
ಆರನೆಯ ತರಗತಿಯೊಂದರಲ್ಲಿ ಮಕ್ಕಳೆಲ್ಲಾ ತಾವು ದೊಡ್ದವರಾದ ಮೇಲೆ ಏನಾಗಬೇಕೆಂದು ಬಯಸುತ್ತೇವೆ ಎಂದು ಹೇಳುತ್ತಿದ್ದರು. ಒಬ್ಬ ಹುಡುಗ ತಾನು ಮಿಲಿಟರಿ ಸೇರಬೇಕು ಎಂದ.
“ಮಿಲಿಟರಿ ಏಕೆ?”
“ಸೋಲ್ಜರ್ ಆಗುತ್ತೇನೆ.”
“ಸೋಲ್ಜರ್ ಆಗಿ ಏನು ಮಾಡುತ್ತೀಯಾ?”
“ದೇಶವನ್ನು ರಕ್ಷಿಸುತ್ತೇನೆ. ಶತ್ರುಗಳೊಂದಿಗೆ ಹೋರಾಡುತ್ತೇನೆ.”
“ಆಮೇಲೆ?”
“ಆಮೇಲೆ?” ಅವನಿಗೆ ಮುಂದೆ ಏನು ಹೇಳುವುದು ಎಂದು ತೋಚಲಿಲ್ಲ. ಆದರೂ ಹೇಳಿದ “ದೇಶಕ್ಕಾಗಿ ಪ್ರಾಣಬಿಡುತ್ತೇನೆ.”
“ಆಮೇಲೆ?”
“ಆಮೇಲೆ. ದೇಶಕ್ಕೆಲ್ಲಾ ಒಳ್ಳೆಯದಾಗತ್ತೆ. ಆಮೇಲೆ,” ಅವನು ಆಲೋಚಿಸಲು ಕಷ್ಟಪಡುತ್ತಿದ್ದ, “ಆಮೇಲೆ, ನನ್ನ ಹೆಸರು ಎಲ್ಲಾ ಹೇಳ್ತಾರೆ….”
“ನಿನಗೆ ಗೊತ್ತಿರುವ ಒಂದೆರಡು ಸೋಲ್ಜರ್ಸ್ ಹೆಸರು ಹೇಳು.”
ಅವನು ಒಂದೂ ಹೇಳಲಿಲ್ಲ.
ಆದರೆ ಅವನಲ್ಲಿ ಸೈನಿಕನಾಗಿ ಸಾಯುವುದೆಂದರೆ ಬಹಳ ಹೀರೋಯಿಕ್ ಆಗಿರುವ ಕಲ್ಪನೆಯಷ್ಟೇ ಇತ್ತು. ಅವನ ತಂದೆ ಅಕೌಂಟೆಂಟ್. ಅವರ ಮನೆಯಲ್ಲಿ ಯಾರೂ ಯಾವ ವಿಶೇಷ ಪ್ರತಿಭೆಯುಳ್ಳವರೂ, ಅಥವಾ ಹೆಸರುವಾಸಿಯಾದವರೂ ಇರಲಿಲ್ಲ. ಇವನೊಳಗೆ ಸಹಜವಾಗಿ ಇರುವಂತ ಆತ್ಮರತಿಗೆ ಏನಾದರೊಂದು ಪ್ರದರ್ಶನಕ್ಕೆ ವೇದಿಕೆ ಬೇಕಿತ್ತು. ಅವನು ತಾನೊಬ್ಬ ವೀರ ಸಿಪಾಯಿಯಾಗುವುದರಿಂದ ಪ್ರಖ್ಯಾತನಾಗಬಹುದು ಅಥವಾ ತಾನು ಕಂಡುಕೊಂಡಿರುವ ಆ ಹೀರೋಯಿಕ್ ಚಿತ್ರಣ ತನ್ನದಾಗಬಹುದೆಂಬ ಆಲೋಚನೆಯೋ ಏನೋ? ಆ ಬಾಲಕ ಇವತ್ತು ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದಾನೆ. ಹೆಂಡತಿ ಮಕ್ಕಳ ಜೊತೆ ಸುಖವಾಗಿದ್ದಾನೆ. ಅವನು ಸೈನಿಕನಾಗಲಿಲ್ಲ.
ಇತ್ತೀಚೆಗೆ ದೇಶದ ಮೇಲೆ ದಾಳಿ ಮಾಡುವ ಶತ್ರುಗಳ ಮತ್ತು ದೇಶಕ್ಕಾಗಿ ಹೋರಾಡುವ ವೀರ ಸೈನಿಕರ ವಿಷಯಗಳು ಬಂದಾಗ, “ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಅಪಾಯಕಾರಿ. ನಮ್ಮೊಳಗಿನ ಶತ್ರುಗಳು ಅವರು ಮಿತ್ರರಾಗಬಹುದಾದ ಅವಕಾಶವನ್ನು ಇಲ್ಲವಾಗಿಸಿ ಅವರನ್ನು ಶತ್ರುಗಳನ್ನಾಗಿಯೇ ಉಳಿಸಿ, ಅವರೊಂದಿಗೆ ಹೋರಾಡಲು ಇತರರನ್ನು ಹುರಿದುಂಬಿಸಿ ಬ್ಲಡ್ ಸ್ಪೋರ್ಟ್ ಆಡುತ್ತಿದ್ದಾರೆ. ಭಾವೋದ್ರಿಕ್ತರಾಗಿ ವಿಚಾರ ಮಾಡದೇ ಮುನ್ನುಗ್ಗುವವರೇ ಅವರಿಗೆ ಬೇಕಾಗಿರುವುದು, ಎಚ್ಚರ” ಎಂದು ಫೇಸ್ಬುಕ್ಕಿನ ತನ್ನ ಗೋಡೆಯ ಮೇಲೆ ಬರೆದುಕೊಂಡಿದ್ದ.
ಆಲೋಚನೆಗಳು ಅಸೀಮವಾಗಲಿ
ಇಷ್ಟನ್ನು ಆಲೋಚನೆ ಮಾಡೋಣ.ಅರಿಮೆಗಳಿಗೆ ಒಂದು ನಿರ್ಧರಿತ ಚೌಕಟ್ಟುಗಳಿರುತ್ತವೆ. ಅದನ್ನು ದಾಟಲು ಅಥವಾ ಮೀರಲು ನಾವು ಸಹಕರಿಸಬೇಕೆಂದರೆ ಅವರ ಆಲೋಚನೆಗಳಿಗೆ ಉತ್ತರಗಳನ್ನೋ ಅಥವಾ ಪ್ರತ್ಯಾಲೋಚನೆಗಳನ್ನು ಕೊಡಬಾರದು. ಅವರದೇ ಆಲೋಚನೆಗಳನ್ನು ವಿಸ್ತರಿಸಿಕೊಳ್ಳಲು, ತಾವು ವಿಚಾರ ಮಾಡಿರುವಷ್ಟರ, ಚಿತ್ರಿಸಿಕೊಂಡಿರುವಷ್ಟರ ಆಚೆಗೆ ಆಲೋಚನೆಗಳನ್ನು ಮಾಡಲು ಅವಕಾಶ ಮಾಡಿಕೊಡಬೇಕು. ಅರಿಮೆಗಳು ಗಟ್ಟಿಯಾಗುವುದು, ಅವರ ಸೀಮಿತ ಚೌಕಟ್ಟುಗಳ ಒಳಗಿನ ವಿಚಾರಗಳಿಗೆ ಸತತವಾಗಿ ಸ್ಪಂದಿಸುತ್ತಿದ್ದಾಗ. ಸಕಾರಾತ್ಮಕವಾಗಿಯಾದರೂ ಸ್ಪಂದಿಸಿ, ನಕಾರಾತ್ಮಕವಾಗಿಯಾದರೂ ಸ್ಪಂದಿಸಿ, ಅದು ಗಟ್ಟಿಯಾಗುತ್ತದೆ.
ನೀವು ಈಗಾಗಲೇ ತಲೆಯಲ್ಲಿ ಕೂತಿರುವ ಆ ವ್ಯಕ್ತಿಯ ವಿಚಾರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸಹಜವಾಗಿ ಅದು ಪ್ರೋತ್ಸಾಹವನ್ನು ಪಡೆದು ಮತ್ತಷ್ಟು ಗಟ್ಟಿಯಾಗುತ್ತದೆ. ನೀವು ನಕಾರಾತ್ಮಕವಾಗಿ ಸ್ಪಂದಿಸಿದಿರೋ, ಆ ವಿಚಾರಕ್ಕೆ ವಿರುದ್ಧವಾಗಿ ನೀವು ಇದ್ದೀರಿ ಎಂದು ತಮ್ಮ ವಿಚಾರವನ್ನು ಮತ್ತಷ್ಟು ಗಟ್ಟಿಯಾಗಿ ಅವುಚಿಕೊಂಡು ಹಿಡಿಯುತ್ತಾರೆ. ಅದು ತಮ್ಮನ್ನು ಬಿಟ್ಟುಹೋಗದಂತೆ, ಅಥವಾ ತಾವು ಅದನ್ನು ಬಿಡದಂತೆ ಹಟದಿಂದ ಗಟ್ಟಿ ಹಿಡಿಯುತ್ತಾರೆ. ಇದು ಸಾಮಾನ್ಯವಾಗಿ ಯಾವುದೇ ಅರಿಮೆಯ ಲಕ್ಷಣ. ಹಾಗಾಗಿ ಅರಿಮೆಯುಳ್ಳ ವ್ಯಕ್ತಿಗಳಿಗೆ ತಮ್ಮಲ್ಲಿರುವ ಯಾವುದೇ ವಿಚಾರವನ್ನು ವಿಸ್ತರಿಸಲು, ಹಿಗ್ಗಿಸಲು, ಕ್ಷಿತಿಜಗಳನ್ನು ವಿಸ್ತರಿಸಿಕೊಳ್ಳಲು, ಸೀಮೆಗಳನ್ನು ದಾಟಿ ನೋಡಲು ಅನುಕೂಲವಾಗುವಂತಹ ಅವಕಾಶಗಳನ್ನು ಒದಗಿಸಿಕೊಡಬೇಕು. ಹೇಗೆ ಅರಿಮೆಯು ತನ್ನ ತೀರಾ ಖಾಸಗಿ ಮನಸ್ಸಿನ ಭಾಗವೋ, ಹಾಗೆಯೇ ಅರಿವೂ ಕೂಡಾ ತನ್ನದೇ ಮನಸ್ಸಿನ ಆಲೋಚನೆಗಳ ವಿಸ್ತರಣೆಯಿಂದ ಲಭಿಸಿದರೆ ಆತ್ಮತೃಪ್ತಿ. ತಾನು ಯಾರದೋ ಮಾತನ್ನು ಕೇಳುತ್ತಿದ್ದೇನೆ. ಯಾರಿಗೋ ವಿಧೇಯಕನಾಗಿದ್ದೇನೆ ಎಂಬ ಕೀಳರಿಮೆಯಿರದು. ಹಾಗಾಗಿಯೇ ವಿಚಾರಗಳನ್ನಾಗಲಿ, ಆಲೋಚನೆಗಳನ್ನಾಗಲಿ ಕೊಡಬಾರದು. ಬದಲಿಗೆ ವಿಚಾರ ಮಾಡುವ ಹಾಗೆ, ಆಲೋಚನೆ ಮಾಡುವ ಹಾಗೆ ಪ್ರೇರೇಪಿಸಬೇಕು.
ಆತ್ಮರತಿಯ ಅತ್ಯುನ್ನತ ಸ್ಥಿತಿ
ರೋಮಾಂಚನಗೊಳಿಸುವಂತಹ ಹಿನ್ನೆಲೆಯ ಸಂಗೀತ, ಪರವಶಗೊಳಿಸುವ ಬೆಳಕು, ಉತ್ತಮ ಮತ್ತು ಆಕರ್ಷಕವಾದ ಚಿತ್ರೀಕರಣ, ಪರಿಣಾಮಕಾರಿಯಾದ ಅಭಿನಯ; ಇವುಗಳೆಲ್ಲಾ ಇರುವ ನೇಣಿಗೇರುವ ಅಥವಾ ಹೋರಾಡಿ ಮಡಿಯುವ ವೀರನ ಕಥೆಯನ್ನು ಸಿನಿಮಾ ಮಂದಿರದಲ್ಲಿ ನೋಡುವ ಮಂದಿಗೆ ಈ ಬಲಿದಾನದರಿಮೆಯು ಮತ್ತಷ್ಟು ಬಲಿಯುತ್ತದೆ. ಹಿಂದೆ ಬರಹಗಳು ಈ ಬಗೆಯ ಬಲಿದಾನಗಳಿಗೆ ಪ್ರೇರೇಪಿಸುತ್ತಿದ್ದವು.
ಬಲಿದಾನದರಿಮೆ ಒಂದು ಮನೋವ್ಯಾಧಿ. ನಾನುಹುತಾತ್ಮನಾಗಬೇಕು.ಮಹಾತ್ಮನಾಗಬೇಕು.ನಾನು ಮನೆ, ಮಠ, ಮಡದಿ, ಮಕ್ಕಳು, ಕೊನೆಗೆ ಜೀವ ಎಲ್ಲವನ್ನೂ ತ್ಯಾಗ ಮಾಡಬೇಕು ಎಂದು ದೃಢ ಸಂಕಲ್ಪವನ್ನು ಮಾಡಿ ಬಲಿಯಾಗುವುದು ಆತ್ಮರತಿಯ ಅತ್ಯುನ್ನತ ಸ್ಥಿತಿಯೇ ಹೊರತು ಮತ್ತೇನಿಲ್ಲ.
ಹಾಗಾದರೆ ತ್ಯಾಗ, ಬಲಿದಾನಗಳಿಗೆ ಬೆಲೆಯೇ ಇಲ್ಲವೇ? ಇವೂ ಕೂಡಾ ಮಾನಸಿಕ ಸಮಸ್ಯೆಗಳೇ ಎಂಬ ಆಲೋಚನೆ ಬಂದರೆ ಎಷ್ಟೆಷ್ಟೋ ಆಧ್ಯಾತ್ಮಿಕ ವ್ಯಕ್ತಿಗಳ ತ್ಯಾಗಗಳು, ದೇಶಭಕ್ತರ ತ್ಯಾಗಗಳೆಲ್ಲವನ್ನೂ ಈ ಮಾನದಂಡದಲ್ಲಿ ನೋಡಲಾರಂಭಿಸಿದರೆ ಗೊಂದಲವುಂಟಾಗುತ್ತದೆ. ಆದರೆ, ನಿಧಾನವಾಗಿ ಬಿಡಿಸಿ ನೋಡಿದರೆ ಅರ್ಥವಾಗುವುದು. ಸ್ವಾತಂತ್ರ್ಯ ಸಂಗ್ರಾಮದಂತಹ ಹೋರಾಟಗಳಲ್ಲಿ ಅವರಿಗೊಂದು ಸ್ಪಷ್ಟವಾದ ಗುರಿಯಿದ್ದು, ಆ ಗುರಿಸಾಧನೆಗೆ ಶ್ರಮ ಪಡುತ್ತಿರುತ್ತಾರೆ. ಆಗ ಕುಣಿಕೆಗೆ ಕೊರಳೊಡ್ಡುವ ಅಥವಾ ಗುಂಡಿಗೆ ಗುಂಡಿಗೆಯೊಡ್ಡುವ ಅನಿವಾರ್ಯತೆ ಬಂದಾಗ ಅದನ್ನು ಧೈರ್ಯದಿಂದ ಸ್ವೀಕರಿಸುತ್ತಾರೆ.
ಇವರ ಸ್ವೀಕಾರದಲ್ಲಿ ಅನಿವಾರ್ಯತೆಯೇ ಪ್ರಧಾನ. ತಮ್ಮ ವ್ಯಕ್ತಿಗತವಾದ ಮನೋಭಾವದ ಕಾರಣವು ತಮ್ಮನ್ನು ನೋವಿಗೆ ಅಥವಾ ಸಾವಿಗೆ ಒಡ್ಡಿಕೊಳ್ಳುವುದಿಲ್ಲ. ಅವರ ನೋವು ಮತ್ತು ಸಾವಿನ ಕಾರಣ ಮತ್ತು ಉದ್ದೇಶವು ಆತ್ಮಕೇಂದ್ರಿತವಾಗಿರದೇ ಸಮುದಾಯ ಕೇಂದ್ರಿತವಾಗಿರುತ್ತದೆ. ಈ ವಿಷಯದಲ್ಲಿ ಸಾವಾಗಲಿ ಅಥವಾ ನೋವಾಗಲಿ ಅವರ ಬಯಕೆಯಲ್ಲ. ಅದು ಎದುರಾದಾಗ ಹಿಮ್ಮೆಟ್ಟದೆ ಅದನ್ನು ಎದುರಿಸುವುದು. ಈ ಸ್ಪಷ್ಟತೆಯನ್ನು ತಿಳಿದರೆ ಬಲಿದಾನದರಿಮೆಯ ಲಕ್ಷಣಗಳು ಅರ್ಥವಾಗುತ್ತವೆ. ಈ ಅರಿಮೆಯುಳ್ಳವರೂ ಕೂಡಾ ಹುತಾತ್ಮರಾಗಿರಬಹುದು. ಆದರೆ ಸಾಮಾನ್ಯೀಕರಿಸಲಾಗುವುದಿಲ್ಲ.
ವೀರಗಲ್ಲು ಮಾಸ್ತಿಗಲ್ಲು
ಇನ್ನು ನಮ್ಮ ಇತಿಹಾಸದಲ್ಲಿ ತಮ್ಮ ಒಡೆಯನಿಗಾಗಿ, ಊರಿಗಾಗಿ, ಗೋವುಗಳಿಗಾಗಿ ತಮ್ಮ ಪ್ರಾಣವನ್ನು ತೆತ್ತ ಗರುಡರೇ ಮೊದಲಾದ ವೀರರನ್ನು ನೋಡುತ್ತೇವೆ. ಆ ವೀರರ ಶೌರ್ಯ ಮತ್ತು ಬಲಿದಾನವನ್ನು ಗೌರವಿಸಲು ವೀರಗಲ್ಲುಗಳು ಘನತೆಯಿಂದ ನಿಂತಿರುತ್ತವೆ. ಗಂಡನನ್ನು ಕಳೆದುಕೊಂಡ ಗರತಿಯರು ಸತಿಯಾಗಲು ಚಿತೆಯಲ್ಲಿ ಸತ್ತು ಮಹಾಸತಿಯರಾಗುತ್ತಾರೆ. ಸಮಾಜ ಬಹಳ ಕಿಲಾಡಿ. ಸಾಮೂಹಿಕ ಮನಸ್ಥಿತಿಯು ದುರ್ಬಲವಾಗಿರುವ ವ್ಯಕ್ತಿಯೊಬ್ಬನ ಮನಸ್ಥಿತಿಯ ಬಲವನ್ನು ತನ್ನ ಅಸ್ತಿತ್ವಕ್ಕೆ ಬಳಸಿಕೊಳ್ಳುವುದು ಯಾವಾಗಲಿಂದಲೋ ರೂಢಿಸಿಕೊಂಡಿದೆ.
ಅವನ ಧೈರ್ಯವನ್ನು, ವೀರಾವೇಶವನ್ನು, ಪರೋಪಕಾರಿ ಗುಣವನ್ನು, ತ್ಯಾಗವನ್ನು ವೈಭವೀಕರಿಸಿ ಹೊಗಳಿ ಹೊಗಳಿ ಅದರಿಂದ ಅವನು ಗರ್ವದಿಂದ ಆ ಘನತೆಯನ್ನು ತನ್ನದಾಗಿಸಿಕೊಂಡುಬಿಟ್ಟಿರುತ್ತಾನೆ. ಪದೇ ಪದೇ ಅದನ್ನೇ ಧ್ಯಾನಿಸುತ್ತಾ ಅವನಂತರಾಳ ಅದನ್ನೊಪ್ಪಿಕೊಳ್ಳುವುದು ಮಾತ್ರವಲ್ಲದೇ ಅಪ್ಪಿಕೊಂಡಿ ಬಿಟ್ಟಿರುತ್ತದೆ. ಅವನೀಗ ಜಾಗೃತನಾಗಲಾರ, ಜಾಗೃತನಾದರೂ ಬಿಡಲಾರ. ಪಡೆದು ಸಂಭ್ರಮಿಸಿ ಗರ್ವಪಟ್ಟ ಗೌರವಕ್ಕೆ ಜವಾಬ್ದಾರನಾಗಿ ನಡೆದುಕೊಳ್ಳಬೇಕಾಗುತ್ತದೆ. ವೀರರು ವೀರಗಲ್ಲುಗಳಾಗುತ್ತಾರೆ. ಇನ್ನು ಸತಿ ಹೋಗುವ ವಿಷಯದಲ್ಲಿಯೂ ಕೂಡಾ ಸಮಾಜವು ಹೆಣ್ಣಿಗೆ ಮಾಡಿರುವ ಶೋಷಣೆಯೇ ಸರಿ. ಊರವರೆಲ್ಲಾ ಹಾಡಿ ಕೊಂಡಾಡಿ ಗಂಡ ಸತ್ತ ಒಂದು ಹೆಣ್ಣನ್ನು ಮುತ್ತೈದೆಯಾಗಿ ಸಾಯಲು ಪ್ರೇರೇಪಿಸುತ್ತಿದ್ದದ್ದು ಏನೂ ರಚನಾತ್ಮಕವೇನಲ್ಲ.
ಅವಳು ಸಮಾಜದ ಈ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲಾಗದೇ ಸಾಯಬೇಕಿತ್ತು ಅಥವಾ ಸಮಾಜವು ರೂಪಿಸಿದ್ದ ಬಲಿದಾನದ ಅರಿಮೆಯ ಪ್ರಭಾವದ ಗರ್ವದಿಂದ ಚಿತೆಯೇರಬೇಕಿತ್ತು. ಪಾಪದ ಅವಳು ಮಾನಸಿಕ ಸಮಸ್ಯೆಯುಳ್ಳವಳು. ತಾನು ಗಂಡನ ಚಿತೆಯೊಂದಿಗೆ ಬೇಯುವುದಿಲ್ಲ, ನಾನು ಸಾಯುವುದಿಲ್ಲ ಎಂದು ಹೆದರಿಕೊಂಡು ಓಡೋಡಿ ಹೋಗುತ್ತಿದ್ದವಳನ್ನು ಎಳೆದೆಳೆದು ಬಲತ್ಕಾರದಿಂದ ಚಿತೆಗೆ ದೂಡಿರುವ ಉದಾಹರಣೆಗಳುಂಟು. ಒಟ್ಟಾರೆ ಆರೋಗ್ಯವಾದ ಮನಸ್ಥಿತಿಯಿರುವವಳು ಸಹಜವಾಗಿ ಇರುವುದಕ್ಕೆ ಬಿಡದೇ ಸಮಾಜವು ಅವಳನ್ನು ಕೊಲ್ಲುತ್ತಿತ್ತು. ಹಳತೆಲ್ಲಾ ಹೊನ್ನಲ್ಲ. ಮಹಾಸತಿಗಲ್ಲುಗಳು ನಮ್ಮ ಹೆಮ್ಮೆಯ ಸಂಕೇತಗಳೇನಲ್ಲ. ಇದೇ ರೀತಿ ನಮ್ಮ ಪುರಾತನರ ಬದುಕು ಮತ್ತು ಪ್ರಾಚೀನ ವ್ಯವಸ್ಥೆಗಳು ಅಧ್ಯಯನಗಳಿಗೆ ಬೇಕೇ ಹೊರತು, ಅನುಕರಣೆಗಲ್ಲ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243