ಅಂತರಂಗ
ಅರಿಮೆಯ ಅರಿವಿರಲಿ-22 : ಹೆಂಗಸರ ಬುದ್ಧಿ
- ಯೋಗೇಶ್ ಮಾಸ್ಟರ್
ಹೆಂಗಸರ ಬುದ್ಧಿ ಎಂಬ ಶೀರ್ಷಿಕೆ ನೋಡಿದ ತಕ್ಷಣ ನಿಮ್ಮಲ್ಲಿ ಅದೆಷ್ಟು ಜನ ‘ಮೊಣಕಾಲು ಕೆಳಗೆ’ ಎಂದು ಮನಸ್ಸಿನಲ್ಲಿಯೇ ವಾಕ್ಯವನ್ನು ಮುಂದುವರಿಸಿಕೊಂಡರೋ ಗೊತ್ತಿಲ್ಲ. ಹಾಗೆ ಗಾದೆ ವಾಕ್ಯವನ್ನು ಪೂರ್ಣಗೊಳಿಸಿದವರು ಸ್ತ್ರೀ ವಿರೋಧಿಗಳೆನಲ್ಲ. ಹೆಣ್ಣನ್ನು ಕೀಳಾಗಿ ಕಾಣುವವರೂ ಏನಲ್ಲ. ಆದರೆ ಅವರಲ್ಲಿ ಸಮಾಜವು ಹುಟ್ಟಿಸಿರುವ ಅರಿಮೆಯ ಸಂಕೇತ ಇನ್ನೂ ಜೀವಂತವಾಗಿದೆ ಅಥವಾ ತಿಳುವಳಿಕೆಯಲ್ಲಿದೆ ಎಂಬುದು ಮಾತ್ರ ನಿಜ.
ತಾನು ಸಮರ್ಥನಲ್ಲ, ತನ್ನಿಂದ ಆಗುವುದಿಲ್ಲ, ತಾನು ಲಾಯಕ್ಕಲ್ಲ ಎಂದು ಒಂದು ವ್ಯಕ್ತಿಯನ್ನು ಕೀಳರಿಮೆಗೆ ತಳ್ಳುವುದು, ಆತನ ಪ್ರತಿಭೆ ಅನಾವರಣವಾಗಲು ಬಿಡದಿರುವುದು, ಸಾಧನೆ ಮಾಡಬಹುದಾದವನು ವೇದನೆಯಲ್ಲಿಯೇ ಸಾಯುವಂತೆ ಮಾಡುವುದು ಮಾನವ ದ್ರೋಹ ಎಂದೇನೋ ಅಂದುಬಿಟ್ಟೆವು. ಅದು ಸರಿಯೇ. ಆದರೆ ನಮ್ಮ ಸಮಾಜದಲ್ಲಿ ಸಮೂಹ ಅಥವಾ ಸಮುದಾಯಗಳಿಗೇ ಸಾಮೂಹಿಕವಾಗಿ ಕೀಳರಿಮೆಯನ್ನು ಹುಟ್ಟಿಸುವಂತಹ ಸಂಚುಗಾರಿಕೆಯೇನೂ ಕಡಿಮೆ ಇಲ್ಲ.
ಅದು ಲಿಂಗದ ಆಧಾರದ ಮೇಲೆ, ಜಾತಿಯ ಆಧಾರದ ಮೇಲೆ, ವರ್ಗದ ಆಧಾರದ ಮೇಲೆ; ಯಾವುದೋ ಒಂದು ಸಮೂಹವನ್ನು ಅಥವಾ ಸಮುದಾಯವನ್ನು ಗುರಿಯಾಗಿಸಿ ಕೀಳರಿಮೆಯನ್ನು ಹುಟ್ಟಿಸುವ ಸಾಮಾಜಿಕ ಮನೋರೋಗದ ಬಗ್ಗೆಯೂ ನಾವು ಎಚ್ಚರವಾಗಿರಬೇಕು.
ಗರತಿ ಮತ್ತು ಗೊಡ್ಡಿ
ಅಡುಗೆ ಮನೆ ಸೌಟಿಗೇಕೆ ಊರಿನ ಪಾರುಪತ್ಯ? ಎನ್ನುವ ಗಾದೆಯು ಆ ಯಾವುದೋ ಒಂದು ವ್ಯಕ್ತಿಯನ್ನು ಕುರಿತಂತೆ ಹೇಳಿರುವುದಲ್ಲ. ಆ ಹೊತ್ತಿನ ಸಾಮಾಜಿಕ ವ್ಯವಸ್ಥೆಯು ಹೆಣ್ಣಾದವಳು ಅಡುಗೆ ಮನೆಯಲ್ಲಿ ದುಡಿದುಕೊಂಡಿರಬೇಕು ಹೊರಗಿನ ಕೆಲಸಕ್ಕೆ ಯೋಗ್ಯಳಲ್ಲ ಅಥವಾ ಅವಳಿಗದು ಬೇಕಿಲ್ಲ ಎಂದು ಇಡೀ ಸ್ತ್ರೀ ಸಮೂಹವನ್ನು ಮೂಲೆಗೊತ್ತುವ ಸಂಚಾಗಿತ್ತು ಅದು. ಗಾದೆ ಮಾತೆಂದರೆ ಅದೊಂದು ರೀತಿಯಲ್ಲಿ ಸಂಕಲಿತ ಅಭಿಪ್ರಾಯ.
ಸಂದರ್ಭಾನುಸಾರ ಉಲ್ಲೆಖಿಸುತ್ತಿದ್ದಂತಹ ಜನಪದರ ಧ್ವನಿ. ಗಂಡಸರ ಸೊಕ್ಕು ಉಕ್ಕೇರಿದ್ದ ಸಮಾಜದಲ್ಲಿ ಹೆಣ್ಣಿನಲ್ಲಿ ಕೀಳರಿಮೆಯನ್ನು ಹುಟ್ಟಿಸಿ ಅವಳ ಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಅಡಗಿಸುವಂತಹ ಅರಿಮೆಗಳವು.
‘ಸೊಕ್ಕಿದ ಮೇಲೆ ಹೆಣ್ಣಲ್ಲ, ಉಕ್ಕಿದ ಮೇಲೆ ಹಾಲಲ್ಲ’ ಎಂಬ ಗಾದೆಯನ್ನಾಡುವ ಜನರು ಹೆಣ್ಣು ತಮ್ಮ ಅಧೀನದಲ್ಲಿರಬೇಕೆಂದು ಬಯಸಿದ್ದವರು. ಏಕೆಂದರೆ, ‘ಹೆಂಗಸಿನ ಬುದ್ಧಿ ಮಂಡಿ ಕೆಳಗೆ.’ ‘ನೂರು ಜುಟ್ಟು ಕಲೆತರೂ ಮೂರು ಜಡೆ ಕಲೆಯೊಲ್ಲ’ ಎಂದು ಅವರ ತೀರ್ಮಾನ.
ಅವಳು ಗಂಡಿನ ಅಧೀನದಲ್ಲಿಯೇ ಇರಬೇಕು ಎನ್ನುವ ಆಶಯಕ್ಕೆ ಒಪ್ಪಿಗೆಯ ಮುದ್ರೆ ಗಂಡಿನಿಂದಲೂ, ಹೆಣ್ಣಿನಿಂದಲೂ ಬೀಳುತ್ತಿತ್ತು. ಹೆಣ್ಣೂ ಕೂಡಾ ಇದನ್ನೊಪ್ಪಿಬಿಟ್ಟಿದ್ದಳು ಅಥವಾ ಅವಳಿಗೆ ಒಪ್ಪಿಸಿಬಿಟ್ಟಿದ್ದರು. ಒಪ್ಪದೇ ಗತ್ಯಂತರವಿಲ್ಲ ಎನ್ನುವಂತಹ ಅನಿವಾರ್ಯತೆಯನ್ನು ಸೃಷ್ಟಿಸಲಾಗಿತ್ತು.
‘ಗಂಡ್ನ ಬೈದೋಳು ಗರತ್ಯಲ್ಲ’ ಅಥವಾ ‘ಗಂಡನ್ನ ಬಿಟ್ಟಾಕೆ ಗಯ್ಯಾಳಿ’ ಎಂಬ ಅಪಕೀರ್ತಿಗೆ ಒಳಗಾಗದಿರಲು ತಾನು ಹೆಣ್ಣು, ತನ್ನ ಇತಿ ಮಿತಿಯಲ್ಲಿ ತಾನಿರಬೇಕು ಎಂದು ಸೀಮೆಯನ್ನು ಕುಬ್ಜಗೊಳಿಸಿಕೊಳ್ಳುವ ಕೀಳರಿಮೆಯನ್ನು ಸಾಮಾನ್ಯವಾಗಿ ಹೊಂದಿರುವಂತಹ ಸಮಾಜ ನಮ್ಮದಾಗಿತ್ತು.
ಗಂಡನನ್ನು ಬೈದರೂ ಕಷ್ಟ, ಬಿಟ್ಟರೂ ಕಷ್ಟ; ಅಷ್ಟೇ ಅಲ್ಲ, ಅವನು ಸತ್ತರೂ ಕಷ್ಟ. ‘ಮುಂಡೆ ಮನೆ ಹೆಣ್ಣು ಬೇಡ, ಮೋಟುಗೋಡೆ ಒರಗಬೇಡ’ ಎಂಬುವ ಮಾತು. ‘ಬಂಡಿ ರಥವಲ್ಲ, ಮುಂಡೆ ಮುತ್ತೈದೆಯಲ್ಲ’ ಎನ್ನುತ್ತಾ ಮುತ್ತೈದೆಯಾದ ಹೆಣ್ಣಿಗೆ ದೊರಕಿಬಿಟ್ಟಿತೇ ಸಂಪತ್ತು? ಅವಳಿಗೆ ಮಕ್ಕಳಾಗದಿದ್ದರೆ ಮತ್ತೆ ತನಗೆ ಮಕ್ಕಳಿಲ್ಲ ಎಂಬ ಕೀಳರಿಮೆಯಲ್ಲಿ ಯಾವ ಮುತ್ತೈದೆಯ ಸೌಭಾಗ್ಯ? ಆಗಲೂ ಸಮಾಜ ಅನ್ನುವುದೇನು? ಬಂಜೇದು ಬಾಳಲ್ಲ, ಮಂಜು ಮಳೆಯಲ್ಲ! ಈ ನೋವು ತಡೆಯಲಾರದೆ ಸತ್ತಳೋ, ‘ಬಾಳಲಾರದವಳು ಬಾವಿಗೆ ಬಿದ್ದು ಸತ್ತಳಂತೆ!’ ಆಕೆ ಸಾಯಲೂ ಬಾರದು. ಬದುಕಿರಬೇಕು. ಆದರೆ ಹೇಗೆ? ‘ಬಂಜೆ ಬಾಳು, ಎಂಜಿಲೆಲೆಗೆ ಸಮ.’ ಬೇರೆ ದಾರಿ ಇಲ್ಲ.
ಏಕೆಂದರೆ ‘ಗೊಡ್ಡಿ ಹೆರಲ್ಲ, ಬಡ್ಡಿ ಆಳಲ್ಲ’ ಈಗ ನಾನು ನೋಡುತ್ತಿರುವ ಮಟ್ಟಿಗೆ ಹೆಣ್ಣಿಗೆ ಇಂತಹ ಪರಿಸ್ಥಿತಿ ವ್ಯಾಪಕವಾಗಿಯಂತೂ ಇಲ್ಲ. ಆದರೂ ಅಂದಿದ್ದ ಈ ಬಗೆಯ ವ್ಯವಸ್ಥೆಯು ಅರಿಮೆಗಳನ್ನು ಹುಟ್ಟಿಸಿ ಅಪ್ಪಣೆಗಳನ್ನು ಅರಿವಿಲ್ಲದೆಯೇ ಪಾಲಿಸುವಂತೆ ನೋಡಿಕೊಳ್ಳುವ ಹುನ್ನಾರವಿತ್ತು.
ಸೌಭಾಗ್ಯದ ಸಂಕೇತಗಳೆಂದು ಕರೆದು ಕುಂಕುಮ ಬಳೆಗಳನ್ನು ಕಿತ್ತುಕೊಂಡು ಅವಳನ್ನು ವಿರೂಪಗೊಳಿಸಲು ಯತ್ನಿಸುತ್ತಿದ್ದ ಸಮಾಜ ಅವಳ ಮನಸ್ಥಿತಿಯನ್ನು ವರ್ಣಿಸುತ್ತಿದ್ದದ್ದು ಅತ್ಯಂತ ಸ್ಯಾಡಿಸ್ಟ್ ರೀತಿಯಲ್ಲಿ ‘ಮುಂಡೆಗೆ ಮುಂಡೆಯರನ್ನು ಕಂಡರೆ ಉಂಡಷ್ಟೇ ಸಂತೋಷ’ ಎಂದು. ಇನ್ನು ಬೈಗುಳಗಳಲ್ಲಿ ಹೆಣ್ಣನ್ನೇ ವಸ್ತುವನ್ನಾಗಿಸಿಕೊಂಡಿರುವುದು ಇದೇ ಸಮಾಜವೆಂದು ಬೇರೆ ಹೇಳಬೇಕಾಗಿಲ್ಲ.
ಅಂದೆಂದೋ ಸಂಕಲಿತವಾಗಿ ಸಮಾಜವು ಹುಟ್ಟಿಸಿದ ಅಂತಹ ಅರಿಮೆಯು ಈಗಲೂ ‘ಹೆಣ್ಣು ಹಡೆದವನ ಮನೆ ನುಣ್ಣಗೆ, ಗಂಡ ಹಡೆದವನ ಮನೆ ತಣ್ಣಗೆ’ ಎಂಬ ಪಳೆಯುಳಿಕೆಗಳು ಅಲ್ಲಿ ಇಲ್ಲಿ ಕಾಣುತ್ತಿರುತ್ತದೆ. ಹೆಣ್ಣನ್ನುಕೀಳರಿಮೆಗೆ ತಳ್ಳುವ ಗಂಡಿನ ಮೇಲರಿಮೆಯು ‘ಎತ್ತು ಸೊಕ್ಕಿದರೆ ಕೊಟ್ಟಿಗೆಯಲ್ಲಿ ನಿಲ್ಲದು, ಹೆಣ್ಣು ಸೊಕ್ಕಿದರೆ ಮನೆಯಲ್ಲಿ ನಿಲ್ಲದು’ ಎಂದು ಈಗಲೂ ಗೊಣಗುತ್ತದೆ. ಏಕೆಂದರೆ ಅವರು ಗಂಡಿನ ಅಹಂ ನಂಬಿರುವುದೇನೆಂದರೆ, ‘ಹೆಣ್ಣು ಕೆಟ್ಟರೆ ಸೂಳೆ, ಗಂಡು ಕೆಟ್ಟರೆ ಜೋಗಿ’. ಅದಕ್ಕೇ ಅವರು ಯಾವಾಗಲೂ ಹೆಣ್ಣನ್ನು ಕಾಪಾಡುವಂತಹ ಜವಾಬ್ದಾರಿ ತಮ್ಮದು ಎಂದುಕೊಂಡಿದ್ದಾರೆ.ಏಕೆಂದರೆ, ‘ಪಕ್ಕದಲ್ಲಿದ್ದರೆ ಹೆಂಡತಿ, ಪೆಟ್ಟಿಯಲ್ಲಿದ್ದರೆಹಣ.’ವಿದ್ಯಾವಂತರು,ಮುಂದುವರಿದವರೆನಿಸಿಕೊಂಡವರ ಎಷ್ಟೆಷ್ಟೋ ಕುಟುಂಬಗಳಲ್ಲಿ ಈಗಲೂ ಪರಂಪರಾನುಗತವಾದ ನಂಬಿಕೆಗಳಿವೆ, ‘ಹೆಂಗಸಿಗೆ ಆಡಳಿತ ಕೊಡೋದೂ ಒಂದೇ, ಚೇಳಿಗೆ ಪಾರುಪತ್ಯ ಕೊಡೂದೂ ಒಂದೇ’ ಎಂದು. ಅದಕ್ಕೆ ಅವರ ಕಾರಣವೇನೆಂದರೆ, ಸ್ತ್ರೀ ಬುದ್ಧಿಃ ಪ್ರಳಯಾಂತಕಃ.
ನಮ್ಮೆಜಮಾನರು
‘ಹೆಂಗಸಿಗೆ ಹಿರಿತನ ಕೊಡಬಾರದು, ಹಂಗಿಸಿ ಕೂಳು ಹಾಕಬಾರದು’ ಎಂಬುದನ್ನು ತಾನೇ ಒಪ್ಪಿಕೊಂಡಿರುವ ಹೆಣ್ಣು ಈಗಲೂ ಹೇಳುವುದಿಲ್ಲವೇ ತನ್ನ ಗಂಡನೇ ತನ್ನ ಯಜಮಾನ ಎಂದು. ಸಮಾಜವು ಹುಟ್ಟಿಸಿರುವ ಕೀಳರಿಮೆಯ ಪಳೆಯುಳಿಕೆಯು “ನಮ್ಮ ಯಜಮಾನರು” ಎಂದು ಧ್ವನಿಸುತ್ತಿರುತ್ತದೆ.
‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂಬುದನ್ನು ಸಮ್ಮತಿಸಿರುವ ಹೆಣ್ಣು ಮದುವೆಯಾದ ಮೇಲೆ ತನ್ನ ಹೆಸರಿನ ಜೊತೆಗೆ ಗಂಡನ ಹೆಸರನ್ನು ಅಥವಾ ಅವನ ಕುಲನಾಮವನ್ನೋ, ಅವನ ಮನೆತನದ ಹೆಸರನ್ನೋ ಸೇರಿಸಿಕೊಳ್ಳುತ್ತಾಳೆ. ಅಪ್ಪನ ಹೆಸರಿನಿಂದ ಗಂಡನ ಹೆಸರಿಗೆ ಹಕ್ಕುಪತ್ರದ ವರ್ಗಾವಣೆಯೇ ಹೊರತು ಅವಳತನದ್ದೇನಿಲ್ಲ ಅಲ್ಲಿ.
ತಾನು ಹೆತ್ತು ಹಕ್ಕನ್ನು ಗಂಡನಿಗೆ ಕೊಡುವಂತೆ ಅಪ್ಪನ ಇನಿಶಿಯಲ್ ಅಥವಾ ಹೆಸರನ್ನು ಮಗುವಿಗೆ ಹಚ್ಚುತ್ತಾಳೆ. ಅಪ್ಪನ ಅಥವಾ ಗಂಡನ ಗುಂಗಿನಲ್ಲಿಯೇ ಇರುವ ಹೆಣ್ಣು ಇನ್ನೂ ಅಂದು ಹುಟ್ಟಿಸಿರುವ ಕೀಳರಿಮೆಯಿಂದ ಗುಣಮುಖಳಾಗಿಲ್ಲ.
ಮಗುವಿನ ಹೆಸರು ಹಲವು ಇರುವ ಕಾರಣ ನಿರ್ದಿಷ್ಟ ಗುರುತಿಗೆ ಇನಿಶಿಯಲ್ ಅಥವಾ ಸಂಕೇತಾಕ್ಷರ ಹಚ್ಚುವುದೇ ಆದರೆ ತನ್ನ ಹೆಸರನ್ನು ಹಚ್ಚುವಂತಹ ನಿರ್ಧಾರ ಅಮ್ಮ ಏಕೆ ತೆಗೆದುಕೊಳ್ಳಲು ಎಂಬುದು ನನ್ನ ಪ್ರಶ್ನೆ. ಅಥವಾ ಅಪ್ಪ ಅಮ್ಮ ಇಬ್ಬರದ್ದೂ ಸೇರಿಬಿಟ್ಟರೆ ಹೆಸರು ಹೇಳಲಾಗದಿರುವಷ್ಟು ಉದ್ದವಾಗಿಬಿಟ್ಟೀತೇ? ಸಮಾಜ ಹುಟ್ಟಿಸಿರುವ ಕೀಳರಿಮೆಯ ಸಂಕೇತವನ್ನು ಒಡೆದು ಹಾಕಲು ಅವಳಿನ್ನೂ ಸಿದ್ಧವಿಲ್ಲವೇ? ತನ್ನದೇ ಐಡೆಂಟಿಟಿ ಅಥವಾ ಸ್ವತಂತ್ರ ಗುರುತಿನ ಅಸ್ತಿತ್ವವನ್ನು ಹೊಂದಲು ಅವಳಿಗಿನ್ನೂ ಹೊಳೆದಿಲ್ಲವೇ?
ದರಿದ್ರ ಹುಟ್ಟು
ಲಿಂಗ ತಾರತಮ್ಯವನ್ನು ಮಾಡುತ್ತಾ ಗಂಡಿನ ಮೇಲ್ಮೈಯನ್ನು ಸಾಧಿಸುವ ಒಂದು ಬಗೆಯಾದರೆ, ಇನ್ನು ಜಾತಿ ಮತ್ತು ಕುಲದ ಮೂಲದಿಂದ ಗುರುತು ಹಿಡಿದು ಕೀಳರಿಮೆಗೆ ತಳ್ಳುವುದು ಇನ್ನೊಂದು. ವ್ಯಕ್ತಿ ಯಾವುದೇ ಸಾಮರ್ಥ್ಯವನ್ನು ಹೊಂದಿರಲಿ, ಆತನ ಹುಟ್ಟಿನ ಅಥವಾ ಕುಲದ ನೆಲೆಯಿಂದ ಅವನಲ್ಲಿ ಕೀಳರಿಮೆಯನ್ನು ತಂದು ಸಮಾಜದಲ್ಲಿ ಕಡೆಗಣಿಸಲು ಯತ್ನಿಸುವುದು ಏನೂ ಅಪರಿಚಿತ ವಿಷಯವಲ್ಲ.
ಬ್ರಾಹ್ಮಣರಿಗಷ್ಟೇ ವಿದ್ಯೆ ಕಲಿಸುವ ಧೋರಣೆಯ ಪರಶುರಾಮ, ರಾಜಮನೆತನದ ಕ್ಷತ್ರಿಯರಿಗಷ್ಟೇ ಪಾಠ ಮಾಡುತ್ತಾ ಬೇಡರ ಹುಡುಗನನ್ನು ನಿರಾಕರಿಸುವ ದ್ರೋಣ ಸಂಕೇತಿಸುವುದಾದರೂ ಏನನ್ನು? ತನ್ನಲ್ಲಿ ಕ್ಷತ್ರಿಯನಲ್ಲ ಮತ್ತು ದ್ರೋಣನ ಶಿಷ್ಯನಾಗಲು ಯೋಗ್ಯನಲ್ಲ ಎಂಬ ಕೀಳರಿಮೆಯನ್ನು ಹುಟ್ಟಿಸಿದರೂ ಅದನ್ನು ಮೆಟ್ಟಿದ ಏಕಲವ್ಯರು ಬಹು ಸಂಖ್ಯೆಯಲ್ಲಿಲ್ಲವಲ್ಲ ನಮ್ಮ ಸಮಾಜದಲ್ಲಿ.
ಸೂತಪುತ್ರನಾಗಿ ಅಪಮಾನಕ್ಕೆ ಒಳಗಾಗುತ್ತಿದ್ದ ಕರ್ಣನಿಗೆ ಸುಯೋಧನನೊಬ್ಬ ಬೆಂಬಲವಾಗಿ ನಿಲ್ಲಬೇಕಾಯ್ತು. ಜಾತಿಯ ಕೀಳರಿಮೆ ಅದೆಷ್ಟು ಪ್ರತಿಭೆಗಳನ್ನು, ಸಾಮರ್ಥ್ಯಗಳನ್ನು ನಾಶ ಮಾಡಿದೆಯೋ ಲೆಕ್ಕವಿಟ್ಟವರಾರು? ಇಂಥಾ ಜಾತಿ, ಕುಲಗಳಲ್ಲಿ ಹುಟ್ಟಿದವನು ಅದಕ್ಕಷ್ಟೇ ಸೀಮಿತನಾಗಿರಬೇಕೆಂಬ ಅರಿಮೆಯು ಶ್ರೇಣಿಯನುಸಾರವಾಗಿ ಅರಿಮೆಗಳನ್ನು ಹುಟ್ಟಿ ಹಾಕುತ್ತಿತ್ತು ಎಂಬುದಕ್ಕೆ ಈ ಲೇಖನದಿಂದ ಪ್ರತ್ಯೇಕವಾಗಿ ತಿಳಿದುಕೊಳ್ಳಬೇಕಾಗಿರುವಷ್ಟು ಹೊಸತಿನ ವಿಷಯವೇನಲ್ಲ.
‘ಬ್ರಾಹ್ಮಣ ಗಳಿಸಿದ್ದು ಪಿಂಡಕ್ಕೆ, ಒಕ್ಕಲಿಗ ಗಳಿಸಿದ್ದು ದಂಡಕ್ಕೆ, ತುರುಕ ಗಳಿಸಿದ್ದು ಖಂಡಕ್ಕೆ, ಹೊಲೆಯ ಗಳಿಸಿದ್ದು ಹೆಂಡಕ್ಕೆ’ ಎನ್ನುವ ಗಾದೆಯನ್ನಾಡುವ ಜನರು ‘ಧೋತ್ರ ದೊಡ್ಡದಾದ ಮಾತ್ರಕ್ಕೆ ಗೋತ್ರ ದೊಡ್ಡದೇ?’ ಎಂದು ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ವರ್ಣವನ್ನು ಬದಲಾಯಿಸಿಕೊಳ್ಳುತ್ತೇವೆಂದರೂ ಒಪ್ಪುತ್ತಿರಲಿಲ್ಲ. ‘ಮಾದಿಗನನ್ನು ಮನೆಗೆ ಬಿಡಬೇಡ, ಕೋಣವನ್ನು ನೀರಿಗೆ ಬಿಡಬೇಡ’ ಎಂಬುವ ಗಾದೆಯು ಆ ಸಮುದಾಯದವರಲ್ಲಿ ಹುಟ್ಟಿಸುವ ಅರಿಮೆ ಯಾವ ಘನ ಉದ್ದೇಶವನ್ನು ಹೊಂದಿದೆ? ‘ತುಪ್ಪದ ಹಾಗಿದ್ದರೂ ತುರುಕನ ಸಹವಾಸ ಬೇಡ’ ಎನ್ನುವ ಸಮಾಜದ ಧ್ವನಿಯು ಮುಸಲ್ಮಾನನು ಎಷ್ಟೇ ಒಳ್ಳೆಯವನಾಗಿದ್ದರೂ ಅಥವಾ ಅವನಿಂದ ಒಳ್ಳೆಯ ಕೆಲಸಗಳಾಗುತ್ತಿದ್ದರೂ ಅವನನ್ನು ಸೇರಿಸಿಕೊಳ್ಳಬೇಡ ಎನ್ನುವ ಗಾದೆ ಮಾತು ಹೇಳುತ್ತಿರುವ ಗುಟ್ಟೇನು? ಸಮುದಾಯದಲ್ಲಿ ಹುಟ್ಟಿಸುವ ಇಂತಹ ಸಾಮಾಜಿಕ ಕೀಳರಿಮೆಗಳು ಕರೋನಾ ವೈರಸ್ಸಿಗಿಂತ ಹೆಚ್ಚು ಸಾಂಕ್ರಾಮಿಕ. ರೋಗದ ಸೋಂಕಾದರೂ ಒಂದಷ್ಟು ಕಾಲ. ಆದರೆ ಇಂತಹ ಸಾಮಾಜಿಕ ಧೋರಣೆಗಳ ಸೋಂಕು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತವೆ.
ಹಣದ ಕೊರತೆಯಿರುವವನಲ್ಲಿ ಹುಟ್ಟಿಸಿರುವ ಕೀಳರಿಮೆಯಿಂದ ಒಬ್ಬ ಖಾಲಿ ಪರ್ಸು ಜೇಬಿನಲ್ಲಿಟ್ಟುಕೊಂಡು, ‘ಅಯ್ಯೋ, ನಾನು ಇವತ್ತು ಪರ್ಸ್ ಮರೆತು ಬಂದಿದ್ದೇನೆ. ಹಣ ತಂದಿಲ್ಲ’ ಎನ್ನುವನ್ನು ಕಂಡಿರಬಹುದು. ಅವನಿಗೆ ತನ್ನಲ್ಲಿ ಹಣವಿಲ್ಲ ಎಂಬ ನಿಜವನ್ನು ಒಪ್ಪಿಕೊಳ್ಳಲು ಕೀಳುಭಾವ ಕಾಡುವುದು.
ಇಂಗ್ಲೀಷ್ ಮೀಡಿಯಂ ಮಕ್ಕಳ ಮುಂದೆ ಕನ್ನಡ ಮೀಡಿಯಂ ಮಕ್ಕಳು ಅನುಭವಿಸುವ ಕೀಳರಿಮೆಯ ಉದಾಹರಣೆಗಳು ಕಣ್ಣಿಗೆ ಬೀಳುತ್ತಿರುತ್ತವೆ.
ಒಟ್ಟಾರೆ ಈ ಲೇಖನ ಹೇಳಲು ಹೋದದಿಷ್ಟು.ವ್ಯಕ್ತಿಗಳಲ್ಲಿ ಹುಟ್ಟುವ ಕೀಳರಿಮೆಯಂತೆ ಸಮಾಜದಲ್ಲಿಯೂ ಸಾಮುದಾಯಿಕವಾಗಿ ಕೀಳರಿಮೆಗಳು ಹುಟ್ಟಿವೆ, ಬೆಳೆದಿವೆ ಮತ್ತು ಅದರ ಫಲವನ್ನು ಅನುಭವಿಸುತ್ತಿದ್ದೇವೆ. ಇದರಿಂದ ಬಿಡುಗಡೆ ಹೊಂದಲೂ ಸಾಮುದಾಯಿಕ ಅರಿಮೆಯ ಸಾಮಾಜಿಕ ಅರಿವಿರಲಿ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243