ಅಂತರಂಗ

ಅರಿಮೆಯ ಅರಿವಿರಲಿ – 23 : ನಾನು ದ ಗ್ರೇಟ್

Published

on

  • ಯೋಗೇಶ್ ಮಾಸ್ಟರ್

ದೂರ ಸ್ಥಳದಿಂದ ಕಟ್ಟಡದ ಕೆಲಸಕ್ಕಾಗಿ ಬಂದಿರುವ ಕೂಲಿಕಾರ್ಮಿಕರ ಟೆಂಟುಗಳವು. ನಮ್ಮ ಮನೆಯ ಎದುರಿನ ಮೈದಾನದಲ್ಲೇ ಅವರ ವಾಸ್ತವ್ಯ. ಗಂಡಸರು ಮತ್ತು ಹೆಂಗಸರು ಒಟ್ಟಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದಾಗ ನಾನೂ ಅವರೊಡನೆ ಸೇರಿಕೊಂಡೆ. ಮಾತಿನಲ್ಲಿ ತಿಳಿಯಿತು ಅವರು ತಮಟೆಗಳನ್ನು ನುಡಿಸುವುದರಲ್ಲಿ ನಿಪುಣರು ಎಂದು. ನಾನು ಹೇಳಿದೆ ನನಗೆ ತಮಟೆ ಸದ್ದಿಗೆ ಕುಣಿಯಲು ಬಹಳ ಇಷ್ಟ. ಹೆಣಕ್ಕೆ ಹೊಡೆಯುವ ಹಲಗೆಗೂ ನಾನು ಕುಣಿಯುವವನೇ ಎಂದೆ. “ಥೂ ಥೂ, ನಾವು ಅವರಲ್ಲರೀ. ನಾವು ದೇವರಿಗೆ ಮಾತ್ರ ತಮಟೆ ಹೊಡೆಯುವವರು” ಎಂದ ಅವರ ಹಿರಿಯರಲ್ಲೊಬ್ಬ. ತಮಟೆ ಹೊಡೆಯುವವರಲ್ಲಿ ನಾವು ಶ್ರೇಷ್ಟ. ಹೆಣಕ್ಕೆ ಹೊಡೆಯುವವರು ಕನಿಷ್ಟ. ಅದಕ್ಕೆ ನಮ್ಮನ್ನು ಹೋಲಿಸಿಬಿಟ್ಟಿರಲ್ಲಾ ಎಂದು ಅವರ ಧೋರಣೆ.

ಕೀಳರಿಮೆಯನ್ನು ಮೆಟ್ಟಲು ತಮಗಿಂತ ಕೀಳಾಗಿರುವವರನ್ನು ಗುರುತಿಸುವ ಧಾವಂತ ವ್ಯಕ್ತಿಗಳಲ್ಲೂ, ಜಾತಿಗಳಲ್ಲೂ, ಜಾತಿಗಳ ಪಂಗಡಗಳಲ್ಲೂ, ಗೋತ್ರಗಳಲ್ಲೂ, ಧರ್ಮಗಳಲ್ಲೂ, ಜನಾಂಗಗಳಲ್ಲೂ, ವೃತ್ತಿಗಳಲ್ಲೂ. ಐಷಾರಾಮದ ಕಾರಿನಲ್ಲಿ ಪ್ರಯಾಣಿಸುತ್ತಿರುವವನು ತನ್ನ ಪಕ್ಕದಲ್ಲಿ ಬರುವ ಕಡೆಮೆ ಬೆಲೆಯ ಕಾರಿನವನ ಕಡೆ ಹರಿಸುವ ದೃಷ್ಟಿಯಲ್ಲಿ ಮೇಲರಿಮೆ ಇದೆ. ಸುಂದರವಾದ ತನ್ನ ಹೆಂಡತಿ ಅಥವಾ ಪ್ರೇಯಸಿಯ ಜೊತೆಯಲ್ಲಿ ಹೆಜ್ಜೆ ಹಾಕುವ ಪುರುಷನಿಗೆ ಇವನ ಕಡೆಗೆ ಅಸೂಯೆಯಿಂದ ನೋಡುವ ಒಂದಷ್ಟು ಕಣ್ಣುಗಳು ಬೇಕು. ಇಷ್ಟು ಸುಂದರವಾಗಿರುವವಳೊಂದಿಗೆ ಹೋಗುತ್ತಿರುವ ಅವನೆಂತಹ ಲಕ್ಕಿ ಎಂದು ಅವರಿವರು ಇವನನ್ನು ನೋಡುತ್ತಿರಬೇಕು.

ನಮ್ಮ ಏರಿಯಾದಲ್ಲಿ ನಮ್ಮ ಮನೆಯೇ ಅತ್ಯಂತ ದೊಡ್ಡದು ಮತ್ತು ಸುಂದರ ಎನ್ನುವ ಖುಷಿ. ನಡೆದುಕೊಂಡು ಹೋಗುವ ಮಕ್ಕಳ ಮುಂದೆ ಸೈಕಲ್ ತುಳಿಯುತ್ತಾ ಹೋಗುವ ಮಕ್ಕಳ ಧಿಮಾಕು. ಹೀಗೇ ಪಟ್ಟಿ ಮಾಡುತ್ತಾ ಹೋದರೆ ಕೊನೆ ಮೊದಲಿಲ್ಲ. ತಾನು ಇತರರಿಗಿಂತ ಒಂದು ಪಟ್ಟು ಹೆಚ್ಚು; ಇದು ಭಾವ. ಅದಕ್ಕೆ ಯಾವುದಾದರೂ ಕಾರಣವಾಗಿರಬಹುದು. ನನ್ನೆದುರು ಇರುವವನ ತಲೆಗೂದಲು ಉದುರಿ ಬೋಳಾಗಿದ್ದು, ನನ್ನ ತಲೆ ತುಂಬ ಕೂದಲಿದೆ; ಇಷ್ಟು ಸಾಕು ನಾನು ಅವನಿಗಿಂತ ಗ್ರೇಟ್ ಆಗುವುದಕ್ಕೆ. ಅವನಿಗೂ ತಲೆಯಲ್ಲಿ ಕೂದಲಿದೆ, ನನಗೂ ಕೂದಲಿದೆ. ಆದರೆ ಅವನದು ಬೆಳ್ಳಗಾಗಿದೆ. ನನ್ನದು ಪೂರ್ತಿ ಕಪ್ಪಗಿದೆ. ಈಗಲೂ ನಾನು ಗ್ರೇಟ್.

ಸ್ಟಾರ್ ವಾರ್

ಇಲ್ಲೊಂದು ಸೊಸೆಯರಿಬ್ಬರ ಕತೆ ನೋಡಿ. ಸುಮ ಶಮ ಇಬ್ಬರೂ ಒಂದು ಮನೆಯ ಸೊಸೆಯರು. ಸುಮ ಶಮಳಿಗಿಂತ ಮೇಲೆಂದು ಭಾವಿಸುತ್ತಾಳೆ. ಏಕೆಂದರೆ ಅವಳು ಹಿರಿ ಸೊಸೆ. ಅವಳೇ ಮನೆಗೆ ಮೊದಲು ಬಂದಿರುವುದು. ಆದರೆ ಶಮ ತಾನೇ ಮೇಲೆಂದು ಭಾವಿಸುತ್ತಾಳೆ. ಏಕೆಂದರೆ ಅವಳು ಸುಮಳಿಗಿಂತ ತೆಳ್ಳಗೆ ಬೆಳ್ಳಗೆ ಇದ್ದಾಳೆ. ಅವಳು ತೆಳ್ಳಗೆ ಬೆಳ್ಳಗೆ ಇದ್ದರೂ ಸುಮ ತಾನೇ ಮೇಲೆನ್ನುತ್ತಾಳೆ ಏಕೆಂದರೆ ಅವಳು ಈ ಮನೆಗೆ ಹೆಚ್ಚು ವರದಕ್ಷಿಣೆ ತಂದಿದ್ದಾಳೆ. ಆದರೂ ಶಮ ತಾನೇ ಮೇಲೆಂದುಕೊಳ್ಳುತ್ತಾಳೆ ಏಕೆಂದರೆ ಅವಳು ವಿದ್ಯಾವಂತೆ ಮತ್ತು ಉದ್ಯೋಗಸ್ಥೆ.

ಆದರೂ ಸುಮ ತಾನು ಮೇಲೆಂದು ಅಂದುಕೊಳ್ಳುತ್ತಾಳೆ ಏಕೆಂದರೆ ಪ್ರತಿಯೊಂದಕ್ಕೂ ಅತ್ತೆ ಮಾವ ತನ್ನನ್ನೇ ಕೇಳುವುದು. ಹಾಗಿದ್ದರೂ ಶಮ ತಾನು ಮೇಲು ಎಂದುಕೊಳ್ಳಲು ಕಾರಣವಿದೆ ಏಕೆಂದರೆ, ಇಂಟರ್ ನೆಟ್‍ನಲ್ಲಿ ಆಗ ಬೇಕಾದ ವ್ಯವಹಾರಕ್ಕೆಲ್ಲಾ ಅವರು ಇವಳನ್ನೇ ಅವಲಂಬಿಸಿರುವುದು. ಹಾಗಿದ್ದರೂ ಶಮನೇ ಗ್ರೇಟು ಏಕೆಂದರೆ ಅವರ ಮನೆಯ ನಾಯಿ ಅವಳಿಗೇ ಬಾಲ ಅಲ್ಲಾಡಿಸುವುದು ಮತ್ತು ಕರೆದ ಕೂಡಲೇ ಬರುವುದು. ಆದರೂ ಶಮ ತಾನೇ ಮೇಲೆಂದು ಅಂದುಕೊಳ್ಳುತ್ತಾಳೆ, ನಾಯಿಗೆ ಅದೆಂತದ್ದೋ ಸಮಸ್ಯೆ ಬಂದಾಗ ಅವಳ ವೆಟರ್ನರಿ ಡಾಕ್ಟರ್ ಫ್ರೆಂಡ್ ಕೊಟ್ಟ ಸಲಹೆಯಿಂದ ಸರಿಹೋಯಿತೆಂದು.

ಒಟ್ಟಾರೆ ಇಬ್ಬರೂ ಸಮ ಸಮ ಅಲ್ಲ, ಅಷ್ಟೇ. ಸ್ಟಾರ್ ವಾರ್ ಗಳು ವಾರಾರಗಿತ್ತಿಗಳಲಿದ್ದಂತೆ ಕಛೇರಿಗಳಲ್ಲಿ, ವಿಧಾನ ಸಭೆಗಳಲ್ಲಿ, ಕಲಾಕ್ಷೇತ್ರಗಳಲ್ಲಿ, ಧಾರ್ಮಿಕ ಪೀಠಗಳಲ್ಲಿ, ಸಾಹಿತ್ಯ ಸಂಸ್ಕೃತಿಯ ಕ್ಷೇತ್ರಗಳಲ್ಲಿ; ಎಲ್ಲಿ ಬೇಕಾದರೂ ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಣುವುದು. ಇಲ್ಲಿ ಎರಡು ಬಗೆಯ ಮೇಲರಿಮೆಗಳನ್ನು ಗಮನಿಸಿದಿರಿ. ಒಂದು ತನ್ನಲ್ಲಿರುವ ಕೀಳರಿಮೆಯನ್ನು ಮೆಟ್ಟಲು ತನಗಿಂತ ಕೀಳಾಗಿರುವವರನ್ನು ಗುರುತಿಸುವ ಪ್ರಯತ್ನದಲ್ಲಿ ತನ್ನ ಮೇಲರಿಮೆಯನ್ನು ತೃಪ್ತಿಪಡಿಸಿಕೊಳ್ಳುವುದು. ಮತ್ತೊಂದು ಅವರಿಗಿಂತ ತಾನು ಭಿನ್ನ ಅಥವಾ ವಿಶೇಷವಾಗಿರುವ ಕಾರಣದಿಂದ ಶ್ರೇಷ್ಟವೆಂದು ಭಾವಿಸುವುದು. ಎರಡೂ ಕೂಡಾ ಮಾನಸಿಕ ಸಮಸ್ಯೆಯೇ.

ದಮನಕಾರಿ ವ್ಯಸನ

ಶಾಲಾ ಕಾಲೇಜುಗಳಲ್ಲಿ ಹಿರಿಯ ಮಕ್ಕಳು ಹೊಸದಾಗಿ ಸೇರ್ಪಡೆಯಾಗುವ ಮಕ್ಕಳ ಮೇಲೆ ನಡೆಸುವ ದೌರ್ಜನ್ಯ, ರ್ಯಾಗಿಂಗ್ ಕೂಡಾ ಮೇಲರಿಮೆಯ ಕಾರಣವೇ. ಅವರಷ್ಟೇ ಮೇಲೆಂದು ಅಥವಾ ಶ್ರೇಷ್ಟವೆಂದು ಭಾವಿಸಿ ಸುಮ್ಮನಾಗಿಬಿಡುವಂತಿದ್ದರೆ ಹೋಗ್ಲಿ ಬಿಡು ಅತ್ತ ಅಂತ ಸುಮ್ಮನಿದ್ದುಬಿಡಬಹುದಾಗಿತ್ತು. ಆದರೆ ವಿಷಯ ಅಷ್ಟಕ್ಕೇ ನಿಲ್ಲುವುದಿಲ್ಲ. ನನ್ನ ಧರ್ಮ ಅಥವಾ ಜಾತಿ ಎಷ್ಟು ಶ್ರೇಷ್ಟ ಎಂದು ಗೊತ್ತಾದ ಮೇಲೆ ಅದು ಇತರ ಧರ್ಮದವರಿಗೂ ಗೊತ್ತಾಗಬೇಕಲ್ಲಾ. ಅದಕ್ಕೆ ಅವರ ಲೋಪದೋಷಗಳನ್ನು ಹುಡುಕಿ ತೆಗೆದು, ಅದಕ್ಕೆ ಪರ್ಯಾಯವಾಗಿ ತಮ್ಮದು ಅದೆಷ್ಟು ಶ್ರೇಷ್ಟ ಎಂಬುದನ್ನು ಹೇಳುವುದು. ಅವರ ಅವಹೇಳನಕ್ಕೆ ಇಳಿಯುವುದು.

ನನ್ನ ಧರ್ಮದ ಮೇಲರಿಮೆಯನ್ನು ಅವನ ಧರ್ಮದ ಮೇಲರಿಮೆಯು ಒಪ್ಪುವುದಿಲ್ಲವಲ್ಲ; ಅವನೂ ಮತ್ತೊಂದೇನೋ ಹೇಳುತ್ತಾ ದಾಳಿಯಿಡುತ್ತಾನೆ. ಅಲ್ಲಿಗೆ ಕೆಸರೆರಚಾಟ ಪ್ರಾರಂಭವಾಗುತ್ತದೆ. ಸಂಸ್ಕೃತಿ, ಜನಾಂಗ, ಪ್ರದೇಶ, ಪಕ್ಷಗಳು ಹೀಗೆ ಯಾವುದಾದರೂ ನಡೆಯುತ್ತದೆ ಮೇಲರಿಮೆಯನ್ನು ಸಾಧಿಸಲು. ನಾನು ಹುಟ್ಟಿದಾಗಿನಿಂದ ನನ್ನ ಧರ್ಮದ ವಿಚಾರವನ್ನೇ ಅಥವಾ ಜಾತಿಯ ವಿಚಾರವನ್ನೇ ಆಳವಾಗಿ ತಿಳಿದುಕೊಂಡಿರುವುದಿಲ್ಲ.

ಇನ್ನು ಜಗತ್ತಿನ ಇತರ ಧರ್ಮಗಳ ಮತ್ತು ಪಂಗಡಗಳ ಬಗ್ಗೆ ತಿಳಿದುಕೊಂಡಿರುವುದು ದೂರವೇ ಉಳಿಯಿತು. ಆದರೂ ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುತ್ತೇನೆ, ಇಡೀ ಜಗತ್ತಿನಲ್ಲಿ ನನ್ನ ಧರ್ಮವೇ ಶ್ರೇಷ್ಟ ಎಂದು. ಯಾವ ವ್ಯಕ್ತಿಯು ನಿಜವಾದ ಅಧ್ಯಯನ ಮಾಡಿರುತ್ತಾನೆಯೋ ಅವನಿಗೆ ಯಾವುದೂ ಶ್ರೇಷ್ಟವಾಗಿರುವುದಿಲ್ಲ ಅಥವಾ ಕನಿಷ್ಟವಾಗಿರುವುದಿಲ್ಲ. ಎಲ್ಲದರಲ್ಲೂ ಅವನಿಗೆ ಇದು ಅಗತ್ಯ ಅಥವಾ ಅನಗತ್ಯ ಎಂಬುದಷ್ಟೇ ಗೋಚರಿಸುತ್ತಿರುತ್ತದೆ.

ರೋಗಾಯೋಗ

ಅಗತ್ಯ ಮತ್ತು ಅನಗತ್ಯ, ಉಚಿತ ಮತ್ತು ಅನುಚಿತ, ವಾಸ್ತವ ಮತ್ತು ಅವಾಸ್ತವ, ಪ್ರಾಯೋಗಿಕ ಮತ್ತು ಅಪ್ರಯೋಗಿಕ, ಆರೋಗ್ಯ ಮತ್ತು ಅನಾರೋಗ್ಯ; ಇವುಗಳ ನೆಲೆಗಟ್ಟಿನಿಂದ ನೋಡುವುದನ್ನು ಬಿಟ್ಟು, ಶ್ರೇಷ್ಟ ಮತ್ತು ಕನಿಷ್ಟ, ಮೇಲು ಮತ್ತು ಕೀಳು, ಪವಿತ್ರ ಮತ್ತು ಅಪವಿತ್ರ ಎಂಬ ದೃಷ್ಟಿಯಿಂದ ನೋಡುತ್ತಿದ್ದಾನೆಂದರೆ ಆ ವ್ಯಕ್ತಿಗೆ ಶ್ರೇಷ್ಟತೆಯ ವ್ಯಸನ ಅಂದರೆ ಮೇಲರಿಮೆಯ ಮಾನಸಿಕ ಸಮಸ್ಯೆ ಇದೆ ಎಂದು ಅರ್ಥ.

ಇದು ಏಕೆ ಅಪಾಯವೆಂದರೆ, ವ್ಯಕ್ತಿಯ ಮತ್ತು ಸಮುದಾಯಗಳ ಅಹಂಕಾರವನ್ನು ಬಲಗೊಳಿಸುತ್ತದೆ. ಬಲಗೊಳ್ಳುವ ಅಹಂಕಾರವು ಒಳಗೊಳ್ಳುವ ಅಥವಾ ವಿನೀತವಾಗುವ ಅಥವಾ ಸ್ವೀಕರಿಸುವಂತಹ ಯಾವುದೇ ಸಲಿಲತೆಯ ಗುಣವನ್ನು ಕಳೆದುಕೊಳ್ಳುತ್ತವೆ. ಪೆಡುಸಾಗಲಾರಂಭಿಸುತ್ತದೆ. ಇಂತಹ ಪೆಡಸುತನಗಳಿಂದ ದೌರ್ಜನ್ಯಗಳು ಮತ್ತು ದಬ್ಬಾಳಿಕೆಗಳು ಪ್ರಾರಂಭವಾಗಿ ಸಾಮರಸ್ಯ ಕೇಡುತ್ತವೆ. ಸಂಘರ್ಷಗಳು ಪ್ರಾರಂಭವಾಗಿ ಗೆಲುವೇ ಗುರಿಯಾಗುತ್ತವೆ. ಅವರಲ್ಲಿ ಸಂವಾದ ಇರುವುದಿಲ್ಲ. ವಾದಗಳು, ವಿತಂಡವಾದಗಳು, ಕುತರ್ಕಗಳು ಇರುತ್ತವೆ. ಯಾವುದರದ್ದೇ ವಾದಿಗಳು ತಾವು ತಮ್ಮ ವಾದದಲ್ಲಿ ಗೆಲ್ಲಬೇಕೆಂದು ಬಯಸುತ್ತಾರೆ.

ಅವರು ತಮ್ಮ ವಿರುದ್ಧ ಸಿದ್ಧಾಂತದವರನ್ನು ಎದುರಾಗುವುದೇ ತಾವು ಶ್ರೇಷ್ಟ, ನೀವು ಕನಿಷ್ಟ ಎಂಬುದನ್ನು ಸಾಧಿಸಿ ತೋರಿಸಲಿಕ್ಕೆ. ಹಾಗಾಗಿ ಅವರು ತಮ್ಮ ಎದುರಾಳಿಗಳ ಮಾತುಗಳನ್ನು ಕೇಳುವುದೇ ಇಲ್ಲ. ಅವರು ತಮಗೆ ಆಕ್ರಮಣ ಮಾಡಬೇಕೆಂದು ಬಯಸುತ್ತಿರುತ್ತಾರೆ. ಬುಲ್ ಫೈಟಲ್ಲಿ ಇದ್ದಂತೆ. ಕೆಂಪು ಬಟ್ಟೆಯನ್ನು ತೋರಿಸಿ ತೋರಿಸಿ ಕೆಣಕಿ ಗೂಳಿಯು ಮಲ್ಲನನ್ನು ಕೆಣಕಲು ಬಂದಾಗ ಅವನು ಅದನ್ನು ತಡೆದು ಅಥವಾ ಎತ್ತಿ ಎಸೆದು ತನ್ನ ಬಹುಪರಾಕ್ರಮವನ್ನು ತೋರಿಸುವಂತೆ, ತನ್ನ ಶಕ್ತಿ ಪ್ರದರ್ಶನ ಮಾಡುವಂತೆ, ವಾದಿಗಳೂ ತಮ್ಮ ಎದುರಾಳಿಗಳನ್ನು ಕೆಣಕುತ್ತಾರೆ. ಅವರು ಆಕ್ರಮಣ ಮಾಡಿದರೆ ಇವರು ಪ್ರತ್ಯಾಕ್ರಮಣವನ್ನು ಮಾಡಿ ತಮ್ಮ ಶಕ್ತಿಯನ್ನು, ಕೋಪವನ್ನು ತೋರಿ ಮೇಲ್ಗೈಯನ್ನು ಸಾಧಿಸಬಹುದು. ಇದು ಮೇಲರಿಮೆಗಳ ಮೇಲಾಟಗಳ ಕಣ್ಣು ಮುಚ್ಚಾಲೆಯಾಟ.

ರೋಗ ಲಕ್ಷಣಗಳು

ವ್ಯಕ್ತಿಗಳಲ್ಲಿನ ಮೇಲರಿಮೆಯ ಲಕ್ಷಣಗಳನ್ನು ಗುರುತಿಸುವುದ ತಿಳಿದರೆ, ಅದೇ ರೀತಿಯಲ್ಲಿ ಸಾಮುದಾಯಿಕವಾಗಿಯೂ ಸಮಾಜದಲ್ಲಿ ಅದನ್ನು ಗುರುತಿಸಬಹುದು. ವ್ಯಕ್ತಿಯೊಬ್ಬನ ಮಾನಸಿಕ ಆರೋಗ್ಯವು ಸಮಾಜದ ಮಾನಸಿಕ ಆರೋಗ್ಯಕ್ಕೆ ತೀರಾ ಅವಶ್ಯಕ. ಏಕೆಂದರೆ ವ್ಯಕ್ತಿ ವ್ಯಕ್ತಿಗಳಿಂದಲೇ ಸಮುದಾಯ ಮತ್ತು ಸಮಾಜ ಎಂದು ಮರೆಯದಿರೋಣ.

ಪ್ರಾರಂಭಿಕ ಲಕ್ಷಣ; ತಮ್ಮ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು. ತಾವೆಷ್ಟು ಮೌಲ್ಯವುಳ್ಳವರು ಎಂದು ಪದೇಪದೇ ನಿರೂಪಿಸಲು ಯತ್ನಿಸುತ್ತಿರುವುದು.
ನಂತರ, ತಮ್ಮಲ್ಲಿರುವ ಕುಂದುಕೊರತೆಗಳನ್ನು ಅಥವಾ ಲೋಪದೋಷಗಳನ್ನು ಒಪ್ಪದಿರುವುದು. ಯಾರಾದರೂ ಅದಕ್ಕೆ ಬೆರಳು ಮಾಡಿ ತೋರಿಸಿದರೆ ವಾದಗಳಿಂದ ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು. ಸಮಜಾಯಿಷಿ ಕೊಟ್ಟುಕೊಳ್ಳುವುದು. ತಮ್ಮನ್ನು ತಾವು ಇತರರೊಂದಿಗೆ ಮೇಲ್‍ಸ್ತರದಲ್ಲಿ ಹೋಲಿಸಿಕೊಳ್ಳುವುದು.

ತಾವೆಷ್ಟು ಘನತೆಯುಳ್ಳವರು, ಪ್ರತಿಷ್ಟೆ ಎಂತದ್ದು, ತಮ್ಮ ಗೌರವ ಎಂದರೆ ಏನು ಎಂಬುದನ್ನು ತೋರ್ಪಡಿಕೊಳ್ಳುತ್ತಿರುವುದು ಮತ್ತು ಸಾಬೀತುಪಡಿಸಲು ಯತ್ನಿಸುತ್ತಿರುವುದು.ಇತರರ ವ್ಯಕ್ತಿತ್ವದ ಕುರಿತು ಮಾತಾಡುವುದು, ಇತರರ ಚಾರಿತ್ರ್ಯ ಹರಣಕ್ಕೆ ಪ್ರಯತ್ನಿಸುವುದು ಹಾಗೂ ಇತರರ ಸಣ್ಣ ಪುಟ್ಟ ದೋಷಗಳಿಗೆ ವಿಪರೀತವಾಗಿ ತಲೆಕೆಡಿಸಿಕೊಂಡು ಅದಕ್ಕೆ ಖಂಡನೆ, ಶಿಕ್ಷೆ, ದಂಡನೆ ಎಂದೆಲ್ಲಾ ಹುಯಿಲೆಬ್ಬಿಸುತ್ತಿರುವುದು. ಏಕೆಂದರೆ ಇತರರನ್ನು ಅಪರಾಧಿಯಾಗಿಸಿ ತಮ್ಮನ್ನು ತೀರ್ಪುಗಾರರನ್ನಾಗಿಸಿಕೊಳ್ಳುವುದರಲ್ಲಿ ಈ ಅರಿಮೆಗೆ ಭಾರೀ ಖುಷಿ.

ಎಲ್ಲವೂ ತಮ್ಮ ಕೇಂದ್ರಿತವಾಗಿರಬೇಕೆಂಬ ಬಯಕೆ ಅವರದು. ಒಂದು ಶಾಲೆಯಲ್ಲಿ ಸಣ್ಣ ಮಗುವೊಂದು ಚೆನ್ನಾಗಿ ಓದುವುದು ಬರೆಯುವುದು ಮಾಡುತ್ತದೆ. ಆದರೆ ಶಿಕ್ಷಕರು ಅದಕ್ಕೇ ವಿಶೇಷ ಗಮನ ಕೊಡಬೇಕೆಂದು ಅದು ಬಯಸುತ್ತದೆ. ಮಗುವು ಶೌಚಾಲಯಕ್ಕೆಲ್ಲಾದರೂ ಹೋದಾಗ ಪಾಠವನ್ನು ಪ್ರಾರಂಭಿಸಿಬಿಟ್ಟಿದ್ದರೆ ಅಥವಾ ಮುಂದುವರಿಸಿಬಿಟ್ಟಿದ್ದರೆ ಗಲಾಟೆ ಮಾಡುತ್ತದೆ. ಮತ್ತೆ ಪ್ರಾರಂಭಿಸಲು ಬಯಸುತ್ತದೆ. ಎಲ್ಲರ ಎದುರಿಗೆ ತನ್ನನ್ನು ಸರಿಪಡಿಸಲು ಒಪ್ಪುವುದಿಲ್ಲ. ಅವಮಾನವಾಯಿತೆಂದು ಅಳುತ್ತದೆ. ಹಟ ಹಿಡಿಯುತ್ತದೆ. ಇದು ಮಗುವಾಗಿರುವುದರಿಂದ ನೇರವಾಗಿ ಅಭಿವ್ಯಕ್ತಗೊಳಿಸುತ್ತದೆ. ಆದರೆ ಹಿರಿಯರಾದವರಲ್ಲಿ ಈ ಬಗೆಯ ಅರಿಮೆ ಇದ್ದಲ್ಲಿ ಇಷ್ಟು ನೇರವಾಗಿ ಮತ್ತು ಮಗುವಿನ ರೀತಿಯಲ್ಲಿ ವ್ಯಕ್ತಪಡಿಸದಿದ್ದರೂ, ಆ ಮಗುವಿನ ಮನೋಭಾವವೇ ಅವರದಾಗಿರುತ್ತದೆ. ಅದನ್ನು ಬೇರೊಂದು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ.
ಆತ್ಮರತಿಯ ಮತ್ತೊಂದು ಪದರವೇ ಮೇಲರಿಮೆಯಾಗಿರುವುದರಿಂದ ಅದರ ಮತ್ತು ಇದರ ಹಲವಾರು ಲಕ್ಷಣಗಳಲ್ಲಿ ಸಾಮ್ಯತೆಗಳಿವೆ.

ಮೇಲರಿಮೆಯವರೂ ತಮ್ಮನ್ನು ಬಿರುದುಬಾವಲಿಗಳಿಂದ ಪರಾಕುಗೊಳ್ಳಲು ಬಯಸುತ್ತಿರುತ್ತಾರೆ. ತಮ್ಮ ಅಂಕೆಯಲ್ಲಿ, ನಿಯಂತ್ರಣದಲ್ಲಿ ವಿಷಯಗಳು, ಸಂಗತಿಗಳು ಇರಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲದೇ, ಸಾರ್ವಜನಿಕ ಸಮಾರಂಭಗಳಲ್ಲಿತಮ್ಮ ಗೌರವ ಘನತೆಯನ್ನು ನೋಡಿ ಉಳಿದವರು ಮಸುಕಾಗುವಂತಹ ಪೆÇ್ರೀಟೋಕಾಲುಗಳು ಇರಬೇಕೆಂದು ಬಯಸುತ್ತಾರೆ.
ಉಫ್, ಒಟ್ಟಾರೆ ತಾನು ಮೇಲು, ಶ್ರೇಷ್ಟ ಎಂಬ ಅರಿಮೆಯು ಗೀಳಿನಂತಹ ಅಥವಾ ವ್ಯಸನದಂತಹ ಒಂದು ಮನೋರೋಗ. ಅದನ್ನು ಆತ್ಮಾಭಿಮಾನ ಮತ್ತು ಸ್ವಾಭಿಮಾನ ಇತ್ಯಾದಿಗಳಿಂದ ಕರೆದುಕೊಂಡು ಮನಸ್ಸಿನ ಆರೋಗ್ಯಕ್ಕೆ ವಂಚಿಸಬಾರದು. ಸ್ವಾಭಿಮಾನಕ್ಕೂ, ಅಹಂಕಾರಕ್ಕೂ, ಹೆಮ್ಮೆಗೂ, ಮೇಲರಿಮೆಗೂ ವ್ಯತ್ಯಾಸಗಳಿವೆ. ಮುಂದೆ ನೋಡೋಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version