ಅಂತರಂಗ
ಅರಿಮೆಯ ಅರಿವಿರಲಿ-26 : ಹಿಟ್ಟಿನ ಹುಂಜ
- ಯೋಗೇಶ್ ಮಾಸ್ಟರ್
ಜನ್ನನ ಯಶೋಧರ ಚರಿತೆಯಲ್ಲಿ ರಾಜ ಯಶೋಧರನ ಮಡದಿ ಅಮೃತಮತಿಯು ಮಾವುತ ಅಷ್ಟಾವಂಕನಿಗೆ ಆಕರ್ಷಿತಳಾಗುತ್ತಾಳೆ. ಇದನ್ನು ಕಂಡ ರಾಜ ಅವರನ್ನು ಕೊಲ್ಲಲು ಖಡ್ಗ ತೆಗೆಯುತ್ತಾನೆ. ಆದರೆ ಅಹಿಂಸೆಯನ್ನು ಪಾಲಿಸುವ ಜೈನಧರ್ಮದವನಾದ್ದರಿಂದ ಸುಮ್ಮನಾಗುತ್ತಾನೆ. ಅವನ ದುಗುಡ ಕಂಡ ಅವನ ತಾಯಿ ಕಾರಣ ಕೇಳಿದರೆ, ವಾಸ್ತವವನ್ನು ಹೇಳಲು ಹಿಂಜರಿಯುವ ರಾಜ ಕೆಟ್ಟ ಕನಸೊಂದನ್ನು ಕಂಡೆ ಎನ್ನುತ್ತಾನೆ. ದುಃಸ್ವಪ್ನ ಬಾಧೆಯ ಪರಿಹಾರಕ್ಕೆ ಜೋತಿಷಿ ಹುಂಜವನ್ನು ಬಲಿಕೊಡಲು ಹೇಳುತ್ತಾರೆ. ಮತ್ತದೇ ಅಹಿಂಸಾ ಧರ್ಮ.
ಸರಿ, ಒಂದು ಹಿಟ್ಟಿನ ಹುಂಜವನ್ನು ಮಾಡಿ ಬಲಿಕೊಡುವ ಶಾಸ್ತ್ರ ಮಾಡಲು ಸಿದ್ಧರಾಗುತ್ತಾರೆ. ಹಿಟ್ಟಿನ ಹುಂಜದ ಸೌಂದರ್ಯಕ್ಕೆ ಮರುಳಾದ ಒಂದು ಆತ್ಮ ಅದರಲ್ಲಿ ಬಂದು ಸೇರಿಕೊಳ್ಳುತ್ತದೆ. ಅದು ತಿಳಿಯದೇ ಯಶೋಧರ ಹಿಟ್ಟಿನ ಹುಂಜವನ್ನು ಕತ್ತರಿಸಿದಾಗ ಅದು ‘ಕ್ಕೊಕ್ಕೊಕ್ಕೋ’ ಎಂದು ವಿಕಾರವಾಗಿ ಕೂಗುತ್ತಾ ರಕ್ತಕಾರಿಕೊಂಡು ಬಿದ್ದು ಸಾಯುತ್ತದೆ. ಇದರಿಂದ ಮನನೊಂದ ಯಶೋಧರ ಪ್ರಾಯಶ್ಚಿತ್ತವಾಗಿ ಕಾಡಿಗೆ ಹೋಗಲು ನಿರ್ಧರಿಸುತ್ತಾನೆ. ಹೀಗೆ ಕತೆ ಮುಂದುವರಿಯುತ್ತದೆ.
ಕೂಗುತ್ತಾ ಸಾಯುವ ಹಿಟ್ಟಿನ ಹುಂಜದ ರೂಪಕವು ವ್ಯಕ್ತಿಯ ಮನೋಭಾವವು ಅವನ ಕ್ರಿಯೆಗಳಲ್ಲಿ, ವರ್ತನೆಗಳಲ್ಲಿ ಪ್ರಕಟಗೊಳ್ಳುತ್ತದೆ. ರಕ್ತ ಮಾಂಸವಿಲ್ಲದ ಹಿಟ್ಟಿನ ಹುಂಜವು ರಕ್ತಕಾರುವಂತೆ ಅಪರಾಧದ ಅರಿಮೆಯುಳ್ಳ ವ್ಯಕ್ತಿಗಳ ಕ್ರಿಯೆಗಳು ಮತ್ತು ಆಲೋಚನೆಗಳು ಅನಗತ್ಯವಾದ ಅಪರಾಧ ಪ್ರಜ್ಞೆಯಿಂದ ಕೂಡಿರುತ್ತವೆ.
ಯಶೋಧರನಿಗೆ ಕೊಲ್ಲುವ ಕೋಪ ಬಂದಿತ್ತು. ಆದರೆ ಅವನ ಧಾರ್ಮಿಕ ಕಟ್ಟುಪಾಡು ಅವನ ಕೈ ಕಟ್ಟಿಹಾಕಿತು. ಮನಸ್ಸಿನ ಒಳಗೆ ಹುಟ್ಟಿದ ಹಿಂಸೆ ಮಾಡುವಷ್ಟರ ಕೋಪ ಹೊರಗೆ ಬರಲೇ ಬೇಕಾಗಿತ್ತು. ಅದು ಹಿಟ್ಟಿನ ಹುಂಜದ ಬಲಿಯಲ್ಲಿ ಹೊರಗೆ ಬಂತು.
ಎಲ್ಲೋ, ಏಕೋ, ಹೇಗೋ ಹುಟ್ಟಿದ ಆಲೋಚನೆಗಳು, ಘಟನೆಗಳು, ಸಾಕ್ಷೀಕರಿಸುವ ಸಂಗತಿಗಳು, ಅನುಭವಗಳು ವ್ಯಕ್ತಿಗಳಲ್ಲಿ ಅರಿಮೆಗಳನ್ನು ಸೃಷ್ಟಿಸುತ್ತವೆ. ಅವುಗಳು ಮುಂದೆ ವಿಷಯಗಳು ಅಥವಾ ಸಂಗತಿಗಳು ವಾಸ್ತವದಲ್ಲಿರಲಿ ಇಲ್ಲದಿರಲಿ ಕೆಲಸ ಮಾಡುತ್ತಿರುತ್ತವೆ, ನಿಜವಾಗಿರುವಂತೆ. ಅದೇ ಅರಿಮೆಗಳು ಉಂಟು ಮಾಡುವ ಸಮಸ್ಯೆ.
ಐದು ಬಗೆಗಳು
ಏನಾದರೂ ತಪ್ಪಾದಾಗ ‘ಹೌದು, ನಾನು ಈ ತಪ್ಪು ಮಾಡಿದೆ’ ಎಂದು ತಪ್ಪೊಪ್ಪಿಕೊಳ್ಳುವುದು ಸಾಧಾರಣ. ಆದರೆ, ತಪ್ಪು ಮಾಡದಿದ್ದರೂ ತನ್ನ ಎಲ್ಲಾ ಕ್ರಿಯೆಗಳೂ ತಪ್ಪಿನಿಂದಲೇ ಕೂಡಿವೆ ಎಂದು ಭಾವಿಸುತ್ತಿರುವುದು ಗಿಲ್ಟ್ ಕಾಂಪ್ಲೆಕ್ಸ್ ಅಥವಾ ಅಪರಾಧದ ಅರಿಮೆ. ಸಾಧಾರಣವಾಗಿ ಅಪರಾಧದ ಅರಿಮೆಯಲ್ಲಿ ಐದು ರೀತಿಗಳನ್ನು ಗಮನಿಸಬಹುದು. ತಪ್ಪಾಗಿ ನಡೆದುಕೊಳ್ಳುವುದು ಅಥವಾ ತಪ್ಪಾದ ಕೆಲಸ ಮಾಡುವುದು, ಅಪರಾಧದ ಆಲೋಚನೆಗಳನ್ನು ಮಾಡುತ್ತಿರುವುದು, ಹುಸಿ ಆರೋಪಗಳನ್ನು ತಾನೇ ಮಾಡಿಕೊಳ್ಳುವುದು, ಕರುಣೆಗಾಗಿ ತನ್ನನ್ನು ಆರೋಪಿಸಿಕೊಳ್ಳುವುದು ಮತ್ತು ಅಪರಾಧ ಮಾಡಿದ ಮೇಲೆ ಅದರ ಭಾವದಲ್ಲಿರುವುದು.
ಸಾಮಾನ್ಯವಾಗಿ ಅಪರಾಧದ ಅರಿಮೆಯ ಮೂಲ ಬಾಲ್ಯದಲ್ಲೇ. ತಪ್ಪು ಮಾಡಿದಾಗ ಸಿಗುವ ಶಿಕ್ಷೆಯಿಂದ ತಪ್ಪು ಮಾಡಿಬಿಡುತ್ತೇನೆ ಅಥವಾ ತಪ್ಪು ಆಗಿಬಿಟ್ಟರೆ ಎಂಬ ಆತಂಕ ಮೊಳೆಯ ತೊಡಗುತ್ತದೆ. ಇದೂ ಕೂಡಾ ಅತಿ ಸಣ್ಣವಯಸ್ಸಿನಲ್ಲಿಯೇ ಅಪರಾಧದರಿಮೆಯು ಮೂಡುವ ಬಗೆ. ಒಂದು ವೇಳೆ ಮಕ್ಕಳು ಅನಾರೋಗ್ಯಕರವಾದಂತಹ ಧೋರಣೆಯನ್ನು ತಮ್ಮ ತಪ್ಪುಗಳ ಬಗ್ಗೆ ಹೊಂದತೊಡಗಿದರೆ ಮುಂದೆ, ಅಂದರೆ ಅವರು ವಯಸ್ಕರಾದಾಗ ಅದು ಬಹಳ ಗಟ್ಟಿಯಾದ ಮನೋಭಾವವಾಗುತ್ತದೆ. ಸುಳ್ಳು ಹೇಳುವ ಮಗುವಿಗೆ ಶಿಕ್ಷೆ ಕೊಡಲಾಯಿತೆಂದು ಇಟ್ಟುಕೊಳ್ಳಿ. ಮಗುವಿಗೆ ಆ ಸುಳ್ಳು ಹೇಳುವ ಕಾರಣವೊಂದು ಇದ್ದಿರುತ್ತದೆ. ಅದನ್ನು ನೀವು ಪರಿಗಣಿಸಲಿಲ್ಲ. ಬರಿಯ ಸುಳ್ಳು ಹೇಳುವ ಕಾರಣಕ್ಕೆ ದಂಡಿಸಿದಿರಿ. ನಿಮ್ಮಿಂದ ದಂಡನೆಗೆ ಗುರಿಯಾಗದಂತೆ ಸುಳ್ಳನ್ನು ಹೇಳುವ ತಂತ್ರಗಾರಿಕೆಯನ್ನು ಅವನು ರೂಢಿಸಿಕೊಳ್ಳುತ್ತಾನೆ. ಮುಂದೊಬ್ಬ ಸುಳ್ಳು ಸಾಮಾಜ್ರ್ಯದ ಚಕ್ರವರ್ತಿಯಾಗುತ್ತಾನೆ.
ಮಕ್ಕಳು ನಿಜವನ್ನೇ ಹೇಳಿದಾಗ ತಾವು ಎದುರಿಸುವ ಸಮಸ್ಯೆಗಳಿಗೆ ಹೆದರಿ ಪೆÇೀಷಕರಿಗೆ ಹಿತವಾದ ಮತ್ತು ಅವರು ಮೆಚ್ಚುವ ಸುಳ್ಳುಗಳನ್ನು ಹೇಳುತ್ತಾರೆ. ಅದನ್ನು ಮನೆಯವರು ಒಪ್ಪುತ್ತಾರೆ. ಈ ಯಶಸ್ಸಿನಿಂದ ಉತ್ತೇಜಿತವಾಗುವ ಮಗುವು ಗಿಲ್ಟ್ ಕಾನ್ಶಸ್ (ಅಪರಾಧ ಪ್ರಜ್ಞೆ) ಇಲ್ಲದೆಯೇ ಆರಾಮವಾಗಿ ಸುಳ್ಳುಗಳನ್ನು ಹೇಳುತ್ತಿರುತ್ತದೆ. ಒಂದು ವೇಳೆ ಅವನು ಸುಳ್ಳು ಹೇಳಿದಾಗಲೆಲ್ಲಾ ಸಿಕ್ಕಿ ಹಾಕಿಕೊಂಡ ಎಂದಿಟ್ಟುಕೊಳ್ಳಿ. ಅದಕ್ಕೆ ಬೇಕಾದಷ್ಟು ಬೈಗುಳ ಮತ್ತು ದಂಡನೆಗಳು ಆಗ್ಗಿಂದಾಗೆ ಸಿಕ್ಕಿವೆ ಎಂದಿಟ್ಟುಕೊಳ್ಳಿ. ಕಾಲಾಂತರದಲ್ಲಿ ತಾನು ಸಹಜವಾಗಿ ಮಾತಾಡುವಾಗಲೂ ತಪ್ಪು ಮಾತಾಡುತ್ತಿರುವ ಅಪರಾಧದ ಅರಿಮೆ ಬೆಳೆಯುತ್ತದೆ.
ಒಂದು ತಿಳಿದುಕೊಳ್ಳೋಣ.
ಮನಸ್ಸಿಗೆ ಬಲಸಿಗುವುದಾದರೂ, ಸಮಸ್ಯೆಗೆ ಒಳಗಾಗುವುದಾದರೂ ವ್ಯಕ್ತಿಯ ಸುತ್ತಲೂ, ಅದರಲ್ಲೂ ಮಗುವಿನ ಸುತ್ತಲೂ ನಡೆಯುವ ಚಟುವಟಿಕೆಗಳ ಮೂಲಕ. ಯಾವುದಪ್ಪಾ ಆ ಚಟುವಟಿಕೆಗಳು ಅಂದರೆ, ಯಾವುದೇ ಒಂದು ಕ್ರಿಯೆಯ ಕಾರಣ ಮತ್ತು ಪರಿಣಾಮಗಳನ್ನು ಆಲೋಚಿಸುವುದು, ಎದುರಿಗೆ ಇರುವ ಯಾವುದೇ ವಿಷಯವನ್ನು, ಸಂಗತಿಯನ್ನು ಗ್ರಹಿಸುವುದು, ಯಾವುದೇ ಒಂದು ತನ್ನ ಕಡೆಯಿಂದ ಆಗುವಾಗ ತೀರ್ಮಾನಗಳನ್ನು ತೆಗೆದುಕೊಳ್ಳುವುದು, ಕೇಳಿಸಿಕೊಳ್ಳುವುದು, ಗಮಸಿಸುವುದು ಅಥವಾ ಸಾಕ್ಷೀಕರಿಸುವುದು; ಇವೆಲ್ಲವೂ ಕೂಡಾ ಮನಸ್ಸಿನ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ. ಸಕಾರಾತ್ಮಕವಾಗಿದ್ದರೆ, ವಿವೇಚನೆಯಿಂದ ಕೂಡಿದ್ದರೆ ಧನಾತ್ಮಕ ಪರಿಣಾಮಗಳಾದರೆ, ನಕಾರಾತ್ಮಕವಾಗಿದ್ದರೆ, ವಿವೇಚನೆಯಿಂದ ಕೂಡಿರದೇ ಇದ್ದರೆ ಋಣಾತ್ಮಕ ಪರಿಣಾಮಗಳಾಗುತ್ತವೆ.
ನೈತಿಕ ನಿಯಮಗಳು ಮತ್ತು ಸಹಜ ಕ್ರಿಯೆಗಳು
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಆಲೋಚನೆ, ಕ್ರಿಯೆ ಬಗ್ಗೆ ಹೊಂದಿರುವ ತಪ್ಪಾದ ಮನೋಭಾವದ ಕಾರಣಗಳಿಂದಲೇ ಅಪರಾಧದ ಅರಿಮೆ ಉಂಟಾಗುವುದು. ಇನ್ನೂ ಸರಿಯಾದ ಉದಾಹರಣೆಯೆಂದರೆ ನಮ್ಮ ದೇಶದಲ್ಲಿ ಈಗಲೂ ಬಹಳಷ್ಟು ಯುವ ಪೀಳಿಗೆಯು ಹಸ್ತ ಮೈಥುನದ ಬಗ್ಗೆ ಅಪರಾಧ ಪ್ರಜ್ಞೆಯನ್ನು ಹೊಂದಿವೆ. ಲೈಂಗಿಕತೆಯ ಬಗ್ಗೆ ಇರುವ ಪೂರ್ವಾಗ್ರಹ ಆಲೋಚನೆಗಳಿಂದಾಗಿ ಶೀಲ ಅಶ್ಲೀಲಗಳ ಪರಿಕಲ್ಪನೆಯನ್ನು ಹೊಂದಿವೆ.
ಹಸ್ತಮೈಥುನದಿಂದ ಕ್ರಮೇಣ ತಮ್ಮ ಲೈಂಗಿಕ ಸಾಮರ್ಥ್ಯ ಕುಗ್ಗುವುದೆಂದು, ಶಾರೀರಿಕ ಸದೃಢತೆ ಕ್ಷೀಣಿಸುವುದೆಂದು ತಿಳಿದಿರುವ ಕಾರಣದಿಂದ ಉದ್ರಿಕ್ತರಾದಾಗ ಸಹಜವಾಗಿ ಹಸ್ತಮೈಥುನ ಮಾಡಿಕೊಂಡಾದ ಮೇಲೆ ತಪ್ಪು ಮಾಡಿರುವ ಭಾವದಲ್ಲಿ ಆಲೋಚನೆಗಳನ್ನು ಹೊಂದುವುದು. ಅಥವಾ ತಾನು ಈ ಕೆಲಸ ಮಾಡಬಾರದು, ಮಾಡಬಾರದು ಎಂದು ಅಳುಕುತ್ತಲೇ ಮಾಡಿಕೊಳ್ಳುವುದು.
ಇನ್ನೂ ಕೆಲವರು ಹದಿಹರೆಯದಲ್ಲಿ ಸತತವಾದ ಹಸ್ತಮೈಥುನದಲ್ಲಿ ತೊಡಗಿದ್ದು ನಂತರ ಮದುವೆಯ ಸಮಯ ಬಂದಾಗ ಆ ತಮ್ಮ ಕೃತ್ಯದಿಂದಾಗಿ ತಮಗೆ ಮಕ್ಕಳಾಗುವುದಿಲ್ಲ, ಅಥವಾ ಸಂಗಾತಿಯನ್ನು ತೃಪ್ತಿಪಡಿಸಲಾಗುವುದಿಲ್ಲ ಎಂಬ ಭಯದಿಂದ ಮದುವೆಯಾಗಲು ಹಿಂಜರಿಯುವುದು. ಈ ವಿಷಯದಲ್ಲಿ ನೀವು ಗಮನಿಸಬೇಕಾಗಿರುವುದೇನೆಂದರೆ ವಾಸ್ತವವಾಗಿ ಒಬ್ಬ ಯುವಕ ಹಸ್ತಮೈಥುನವನ್ನು ಮಾಡಿಕೊಳ್ಳುವುದು ಸಹಜ ಹಾಗೂ ಅದರಿಂದ ಅವನ ಸಂಗಾತಿಯೊಡನೆ ನಡೆಸುವ ಲೈಂಗಿಕ ಕ್ರಿಯೆಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.
ಆದರೆ ಅವನಲ್ಲಿ ಬಿತ್ತಲಾಗಿರುವಂತಹ ವಿಚಾರಗಳಿಂದಾಗಿ ತಾನು ಹಸ್ತಮೈಥುನ ಮಾಡಿಕೊಳ್ಳುವಾಗ ಅವನಲ್ಲಿ ಅಪರಾಧಿ ಮನೋಭಾವ ಕಾಡುವುದು.
ಹೀಗೆ ಉಂಟಾಗುವ ನಕಾರಾತ್ಮಕ ಭಾವನೆಗಳು ತಪ್ಪು ವಿವರಣೆಗಳನ್ನು ಕೊಡುತ್ತಿರುತ್ತವೆ, ಅತಿಯಾಗಿ ಚಿಂತಿಸುವಂತೆ ಮಾಡುತ್ತವೆ, ಯಾರದೋ ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಯನ್ನು ಇದರೊಂದಿಗೆ ತಳುಕು ಹಾಕಿ ಸಾಮಾನ್ಯೀಕರಿಸುವಂತೆ ಮಾಡುತ್ತದೆ. ತನ್ನ ಬೇರೆ ಯಾವುದಾದರೂ ದೌರ್ಬಲ್ಯವನ್ನು ಇದರೊಂದಿಗೆ ಬೆಸೆಯುವಂತೆ ಮಾಡುತ್ತದೆ; ಇವೆಲ್ಲವೂ ಅಪರಾಧದ ಅರಿಮೆಯ ಕೆಲಸಗಳೇ.
ವಿವೇಚನೆ ಮತ್ತು ಪ್ರಜ್ಞೆ
ಯಾರಿಗಾದರೂ ಕೊಟ್ಟ ಮಾತನ್ನು ಮುರಿಯುವುದು, ಯಾರಿಗೋ ತಿಳಿಯದಂತೆ ಏನನ್ನೋ ತೆಗೆದುಕೊಂಡು ಬಿಡುವುದು, ಸುಳ್ಳು ಹೇಳುವುದು; ಹೀಗೆ ಯಾವುದನ್ನೇ ಮಾಡಿದರೂ ಒಂದು ವೇಳೆ ಇತರರಿಗೆ ಗೊತ್ತಾಗದಿದ್ದರೂ ‘ಯಾರಿಗೂ ಗೊತ್ತಾಗಿಲ್ಲ’ ಎಂಬ ಸಮಾಧಾನವೇನೂ ಶಾಶ್ವತವಾಗಿ ಇರುವುದೇನಲ್ಲ. ಸಮಾಜದ ನೈತಿಕತೆಯ ಉಲ್ಲಂಘನೆಯ ಅರಿವು ಇರುವುದರಿಂದ ತಾನು ತಪ್ಪು ಮಾಡಿರುವುದಾಗಿ ವ್ಯಕ್ತಿಗೆ ಅನ್ನಿಸುತ್ತಿದ್ದರೆ, ಅದನ್ನೇ ನಾನು ಗಿಲ್ಟ್ ಕಾನ್ಶಸ್ ಅಥವಾ ಅಪರಾಧ ಪ್ರಜ್ಞೆ ಎನ್ನುವುದು. ಅದು ಕಾಡಬಹುದು, ಅಥವಾ ಕ್ರಮೇಣ ಮರೆತು ಹೋಗಬಹುದು. ಆದರೆ ಅದು ಕಾಡಿರುವಷ್ಟು ಗಾಢತೆಯಿಂದ ಮನಸ್ಸಿನಲ್ಲಿ ಅರಿಮೆಯು ಉಂಟಾಗಲು ಕಾರಣವಾಗಿರುತ್ತದೆ.
ಹಾಗೆಯೇ, ಮತ್ತೆ ಕೆಲವು ತಪ್ಪು ಕೆಲಸಗಳನ್ನು ಅವಕಾಶವಿದ್ದರೂ ಮಾಡಲು ಮನಸ್ಸು ಸಮ್ಮತಿಸುವುದಿಲ್ಲ. ಅಲ್ಲಿ ನಮ್ಮನ್ನು ಕಾವಲು ಕಾಯಲು ಯಾರೂ ಇಲ್ಲದಿರಬಹುದು. ತಪ್ಪು ಮಾಡಿದ ಮೇಲೆ ಸುಲಭವಾಗಿ ತಪ್ಪಿಸಿಕೊಳ್ಳುವ ಸಾಧ್ಯತೆಗಳಿರಬಹುದು. ನಿಂದನೆ ದಂಡನೆಗಳೇನೂ ಇಲ್ಲದಿರಬಹುದು. ಆದರೆ ಈ ತಪ್ಪನ್ನು ಮಾಡಲು ಮನಸ್ಸು ಒಪ್ಪುವುದಿಲ್ಲ. ಅದು ತಪ್ಪು ಎಂದು ತಿಳಿದಿದೆ. ಅಪರಾಧಿ ಎಂದು ಯಾರೂ ಗುರುತಿಸದಿದ್ದರೂ ತನ್ನನ್ನೇ ಅಪರಾಧಿ ಎಂದು ತಾನೇ ಅಂದುಕೊಳ್ಳಲು ತಯಾರಾಗಿರುವುದಿಲ್ಲ. ಇದು ವಿವೇಚನೆ ಅಥವಾ ಆತ್ಮಸಾಕ್ಷಿಯ ಪರಿಣಾಮ. ಇದನ್ನು ಗಿಲ್ಟ್ ಕಾನ್ಶನ್ಸ್ ಎನ್ನುವುದು.
ಸಾಮಾನ್ಯವಾಗಿ ಗಿಲ್ಟ್ ಕಾನ್ಶನ್ಸ್ ಇರುವವರು ಅಪರಾಧಗಳನ್ನು ಮಾಡುವುದಿಲ್ಲ. ಹಾಗೆಯೇ ಒಂದು ಏನಾದರೂ ಮಾಡಿದರೂ ಅದನ್ನು ಒಪ್ಪಿಕೊಂಡು ಬಿಡುತ್ತಾರೆ. ಪಡೆಯುವ ಶಿಕ್ಷೆಯು ಅವರನ್ನು ಅಪರಾಧ ಮುಕ್ತರನ್ನಾಗಿಸುವ ಭಾವವೂ ಬರಬಹುದು. ಆದರೆ, ಅಪರಾಧವನ್ನು ನಿರಾಕರಿಸಿ ಗಿಲ್ಟ್ ಕಾನ್ಶಸ್ ಅಥವಾ ಅಪರಾಧ ಪ್ರಜ್ಞೆಯಲ್ಲಿ ನರಳುತ್ತಿರುವುದಕ್ಕೆ ಅವರು ಸಾಮಾನ್ಯವಾಗಿ ಸಿದ್ಧವಿರುವುದಿಲ್ಲ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243