ಅಂತರಂಗ

ಅರಿಮೆಯ ಅರಿವಿರಲಿ – 28 : ವಿಲಕ್ಷಣ ಸಮಾಜ

Published

on

  • ಯೋಗೇಶ್ ಮಾಸ್ಟರ್

ಯಾವ ನಮ್ಮ ಸಂಘಜೀವನದ ಬಹುದೊಡ್ಡ ಶಕ್ತಿಯೆಂದು ಬಹಳ ಕೊಂಡಾಡುತ್ತೇವೆಯೋ ಆ ಸಮಾಜವು ಬಹಳ ವಿಲಕ್ಷಣವಾಗಿದೆ. ಅರಿಮೆಗಳೇ ಆಗಲಿ ಅಥವಾ ಇತರ ಮಾನಸಿಕ ಸಮಸ್ಯೆಗಳೇ ಆಗಲಿ ಅದರದೇ ಬಹುದೊಡ್ಡ ಕಾಣಿಕೆ. ಅದರ ದೃಷ್ಟಿಯ ಮಾನದಂಡದ ಆಧಾರದ ಮೇಲೆಯೇ ಒಬ್ಬನ ವರ್ತನೆ ಮತ್ತು ಆಲೋಚನೆಗಳು ಸರಿಯಿದೆಯೇ ಇಲ್ಲವೇ, ವಿಲಕ್ಷಣವೇ, ಸುಲಕ್ಷಣವೇ, ಅವಲಕ್ಷಣವೇ ಎಂದು ನಿರ್ಧರಿಸುವುದು. ಅದರಲ್ಲೂ ಅಪರಾಧದ ಅರಿಮೆಯನ್ನು, ಕೀಳರಿಮೆ, ಮೇಲರಿಮೆಯೇ ಮೊದಲಾದ ಸಮಸ್ಯೆಗಳನ್ನು ಅರಿಯುವಲ್ಲಿ ಸಮಾಜದ ವಿಲಕ್ಷಣತೆಯನ್ನು ಅರಿಯಲೇ ಬೇಕು.

ಪ್ರಾಮಾಣಿಕತೆ ಮೌಲ್ಯವೇ?

ಪ್ರಾಮಾಣಿಕತೆ ಬಹುದೊಡ್ಡ ಮೌಲ್ಯ ಎಂದು ನೈತಿಕತೆಯ ಹಲವು ಗುಣಗಳಲ್ಲಿ ಮಹತ್ತರ ಸ್ಥಾನ ಕೊಡುತ್ತೇವೆ. ಆನೆಸ್ಟಿ ಈಸ್ ಬೆಸ್ಟ್ ಪಾಲಿಸಿ ಎನ್ನುತ್ತೇವೆ. ಸರಿ, ಪ್ರಾಮಾಣಿಕತೆ ಎಂದರೇನು? ನಂಬಿಕೆಗೆ ಅರ್ಹವಾಗಿರುವಂತಹ ಗುಣ, ಸತ್ಯಕ್ಕೆ ನಿಷ್ಠವಾಗಿರುವ ಸ್ವಭಾವ, ವಾಸ್ತವದ ಸತ್ಯವನ್ನು ಬದ್ಧತೆಯಿಂದ ಒಪ್ಪಿದ್ದು ಅದನ್ನು ಹುಸಿಯಿಂದ ಮುಚ್ಚದೇ, ವಸ್ತುವಿಗೆ ನಿಷ್ಟವಾಗಿದ್ದು, ಮತ್ತೇನನ್ನೋ ತೋರಿಕೆಯಲ್ಲಿ ಪ್ರದರ್ಶಿಸದೇ ಇರುವುದು ಪ್ರಾಮಾಣಿಕತೆ ಎಂದು ಅರ್ಥೈಸಬಹುದು. ಇನ್ನೂ ಸ್ವಲ್ಪ ಬಿಡಿಸೋಣ, ವಸ್ತುನಿಷ್ಟವಾಗಿದ್ದು ಅಂತರಂಗದಲ್ಲಿ ಏನಿದೆಯೋ ಅದನ್ನೇ ಬಹಿರಂಗದಲ್ಲೂ ನಿಷ್ಟೆಯಿಂದ ಪ್ರಕಟಿಸುವುದು.

ಪ್ರಾಮಾಣಿಕತೆ ಎಂದರೆ ನಮ್ಮ ಸಮಾಜಉದಾಹರಣೆಗಳನ್ನು ಕೊಡಲು ಬಹಳ ಇಷ್ಟಪಡುವ ಸಂಗತಿಗಳ ಬಗೆಗಳೆಂದರೆ,ಆಟೋಚಾಲಕರೊಬ್ಬರು ತಮ್ಮ ಗಾಡಿಯಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋದ ಲಕ್ಷಾಂತರ ರೂಪಾಯಿಗಳನ್ನು ಅಥವಾ ಅಷ್ಟು ಮೌಲ್ಯದ ಚಿನ್ನಾಭರಣಗಳನ್ನು ಪೋಲಿಸ್ ಸ್ಟೇಷನ್‍ಗೆ ಒಪ್ಪಿಸುವುದು. ಹೌದು, ಇದು ನಿಜಕ್ಕೂ ಪ್ರಾಮಾಣಿಕತೆಯೇ. ತನ್ನದಲ್ಲದ ವಸ್ತುವನ್ನು ತಾನು ಸುಖಿಸುವ ಬದಲು, ಅದನ್ನು ಕಳೆದುಕೊಂಡವರ ನೋವು ಮತ್ತು ಸಂಕಟಗಳನ್ನು ಊಹಿಸಿಕೊಂಡು, ಪಾಪ ಎಂದು ಅವರಿಗೆ ಕನಿಕರಿಸಿ, ತಮ್ಮ ಆಸೆಗಳನ್ನು ಹತ್ತಿಕ್ಕಿಕೊಂಡು, ಪ್ರಲೋಭನೆಗಳೊಂದಿಗೆ ಹೋರಾಡಿ ಗೆದ್ದು ಬದುಕಿನ ಲೌಕಿಕ ಸುಖಕ್ಕೆ ಬೇಕಾದ ಹಣವನ್ನು ನಿರಾಕರಿಸುವುದು ಸಂನ್ಯಾಸಿಗಳು ಅನಿವಾರ್ಯವಾಗಿ ಮಾಡುವ ಸರ್ವಸಂಗ ಪರಿತ್ಯಾಗಕ್ಕಿಂತ ದೊಡ್ಡದೇ. ನಮಗೆಲ್ಲಾ ಈ ಪ್ರಾಮಾಣಿಕತೆ ಬಹಳ ಪ್ರೀತಿಯಾಗುತ್ತದೆ.ಸರಿ, ಮತ್ತೊಂದು ಬಗೆಯ ಪ್ರಾಮಾಣಿಕತೆಯನ್ನು ನೋಡೋಣ.

ಯಾರದೋ ಮನೆಗೆ ಹೋಗಿದ್ದೇವೆ. ಬಹಳ ದಿನಗಳ ನಂತರದ ಭೇಟಿ. ದೂರ ಪ್ರಯಾಣ ಮಾಡಿದ್ದೇವೆ. ಅವರು ನಮ್ಮನ್ನು ನೋಡಿದ ತಕ್ಷಣ ತುಂಬಾ ಉಲ್ಲಾಸ ಮತ್ತು ಉತ್ಸಾಹದಿಂದ ಮಾತಾಡುತ್ತಾ ನಮಗೆ ಹಸಿವಾಗಿರಬಹುದೆಂಬ ಆಲೋಚನೆಯೂ ಕೂಡಾ ಮಾಡದೇ, “ಬಹುಕಾಲ ನಂತರದ ನಮ್ಮಿಬ್ಬರ ಈ ಭೇಟಿ ಹೇಗನಿಸುತ್ತಿದೆ” ಎಂದು ಉತ್ಸುಕರಾಗಿ ಕೇಳುತ್ತಾರೆ. ನಾವು “ನೀವೀಗ ನಮ್ಮ ಹಸಿವಿಗೆ ಉಣಬಡಿಸಿದರೆ ಬಹಳ ಸುಖಕರವೂ, ಸಂತೋಷವೂ ಆಗಿರುತ್ತದೆ. ಇದೇ ಹಸಿವು ಮುಂದುವರಿದರೆ ಸಂಕಟವೂ, ದುಃಖವೂ ಆಗುತ್ತದೆ” ಎಂದು ನಮ್ಮ ಸಾಂದರ್ಭಿಕ ಅಗತ್ಯವನ್ನು ಅಲ್ಲಿ ತಿಳಿಸುತ್ತೇವೆ.

ಆಗ ಅವರು “ಅಯ್ಯೋ, ಕ್ಷಮಿಸಿ. ನಿಮ್ಮನ್ನು ನೋಡಿದ ಖುಷಿಯಲ್ಲಿ ಎಲ್ಲವೂ ಮರೆತು ಹೋಯಿತು” ಎಂದು ಅವರ ಮರೆವುಗೇಡಿತನಕ್ಕೆ ಕ್ಷಮೆ ಕೇಳಿ ಮುಂದಿನ ವ್ಯವಸ್ಥೆಯನ್ನು ಮಾಡುತ್ತಾರೆ. ಅವರು ಅವರ ಉತ್ಸಾಹದ ಉಲ್ಲಾಸದಲ್ಲಿ ಪ್ರಾಮಾಣಿಕವಾಗಿ ಮೈಮರೆತಿದ್ದರು. ನಾವು ನಮ್ಮ ಹಸಿವಿನ ಬಾಧೆಯಲ್ಲಿ ಪ್ರಾಮಾಣಿಕವಾಗಿ ಆ ಭೇಟಿಯ ಸಂತೋಷಕ್ಕೆ ಮೈಮರೆತಿರಲಿಲ್ಲ. ಇಬ್ಬರೂ ಪ್ರಾಮಾಣಿಕರೇ. ಪರಸ್ಪರ ಅದನ್ನು ವ್ಯಕ್ತಪಡಿಸಿದೆವು. ಸಮಾಜವಾಗಲಿ, ಅಲ್ಲಿ ಪರಸ್ಪರ ನಾವಾಗಲಿ ನಕಾರಾತ್ಮಕವಾಗೇನೂ ಆಲೋಚಿಸಲಿಲ್ಲ.

ಈಗ ಪ್ರಾಮಾಣಿಕತೆಯ ಇನ್ನೊಂದು ಉದಾಹರಣೆ ನೋಡೋಣ. ನಾವು ಗೆಳೆಯರಿಬ್ಬರು. ಅವನು ಹೊಸದಾಗಿ ಮದುವೆಯಾಗಿರುವ ಹೆಂಡತಿಯನ್ನು ಕರೆದುಕೊಂಡು ನನ್ನ ಮನೆಗೆ ಬಂದಿದ್ದಾನೆ. ತನ್ನ ಹೆಂಡತಿಯ ಸೌಂದರ್ಯದ ಬಗ್ಗೆ ಅವನಿಗೆ ಇರುವ ವಿಪರೀತ ಹೆಮ್ಮೆ ಕಾಣಿಸುತ್ತಿದೆ. ನನ್ನ ಬಾಯಿಂದ ಅವನಿಗೆ ಅದನ್ನು ಕೇಳುವ ಆಸೆಯೂ ಉತ್ಕಟವಾಗಿದೆ. ಒಂದಷ್ಟು ಊಟೋಪಚಾರಗಳು ಮುಗಿದ ಮೇಲೆ ನಾವಿಬ್ಬರೇ ಇರುವಾಗ ಕೇಳುತ್ತಾನೆ. “ಹೇಗನಿಸಿದಳು? ಪ್ರಾಮಾಣಿಕವಾಗಿ ಹೇಳು.” ಹೇಳಿದೆ, “ನಿನ್ನ ಹೆಂಡತಿ ತುಂಬಾ ಸುಂದರವಾಗಿದ್ದಾಳೆ. ತುಂಬಾ ಜಾಣೆ ಅಂತಲೂ ತೋರುತ್ತದೆ. ಅವಳ ಮುಖ ಮಾತ್ರವಲ್ಲ ದೇಹ” ಅಂಗಾಂಗಗಳನ್ನೆಲ್ಲಾ ವಿವರಿಸಿ ವರ್ಣಿಸುತ್ತಿದ್ದೇನೆ. ಅವನ ಮುಖ ಕೆಂಪೇರುತ್ತಿದೆ ಕೋಪದಿಂದ, ನಾನು ಮುಂದುವರಿಸಿ, “ಇಷ್ಟು ಚೆನ್ನಾಗಿರುವ ಹೆಣ್ಣು ನಿನಗೆ ಯೋಗ್ಯವಲ್ಲ ಎನಿಸುತ್ತದೆ” ಇನ್ನೂ ಮುಂದುವರಿಸಿ, “ಅವಳೊಂದಿಗೆ ನಾನು ಸುಖಿಸಬೇಕು ಎಂದು ಆಸೆಯಾಗುತ್ತಿದೆ” ಎಂದು ಮುಗಿಸಿದ್ದೇನೆ.

ಅವನು ಕೋಪದಿಂದ ಚೀರಾಡುತ್ತಾನೆ, ಹೊಡೆಯಲು ಬರುತ್ತಾನೆ, ಒಂದು ವೇಳೆ ಅವನಿಗೆ ದೈಹಿಕವಾಗಿ ಸಾಮರ್ಥ್ಯವಿದ್ದರೆ ನನಗೆ ಚೆನ್ನಾಗಿ ಹೊಡೆಯುತ್ತಾನೆ, ಅವನ ಹೆಂಡತಿ ವಿಷಯ ತಿಳಿದು ನನ್ನ ಮುಖದ ಮೇಲೆ ಉಗಿದು ಹೋಗುತ್ತಾಳೆ. ನನಗೆ ಹೆಂಡತಿಯೇನಾದರೂ ಇದ್ದರೆ ಬರಲು ತೆಗೆದುಕೊಂಡು ಬಾರಿಸುತ್ತಾಳೆ. ನನ್ನ ಸ್ನೇಹಿತ ಊರೆಲ್ಲಾ ಈ ಕತೆ ಹೇಳುತ್ತಾನೆ. ‘ಥೂ, ಹೊಲಸು ನನ್ನ ಮಗ. ಅವನಿಗೆ ಮಾನಸಿಕ ರೋಗವಿರಬೇಕು. ಅವನು ಹುಚ್ಚ. ಅತಿಕಾಮಿ. ಅನಾಗರಿಕ’ ಇತ್ಯಾದಿಗಳನ್ನೆಲ್ಲಾ ಹೇಳಿ ಬೈಯುತ್ತಾರೆ. ಹಾಗಾದರೆ ಪ್ರಾಮಾಣಿಕವಾಗಿರಬೇಕೆಂದು ಬಯಸುವ ಸಮಾಜ ಪ್ರಾಮಾಣಿಕವಾಗಿಯೇ ವ್ಯಕ್ತಿಯೊಬ್ಬ ತನ್ನ ಮನದಾಳದ ಅನಿಸಿಕೆ ಮತ್ತು ಬಯಕೆಯನ್ನು ಹೇಳಿದರೆ ಹೀಗೇಕೆ ಉರಿದುರಿದು ಉಗಿದಿದ್ದು?

ನಿಜ ಸುಳ್ಳುಗಳ ನಡುವೆ

ಇನ್ನು ಸತ್ಯದ ವಿಷಯಕ್ಕೆ ಬರೋಣ. ಅಸಲಿಗೆ ‘ಸತ್ಯ’ ಎಂದರೇನು? ಸತ್ಯವೆಂಬ ವಸ್ತು ಅಥವಾ ವಿಚಾರ ಇರುವುದಾಗಿರಬೇಕು. ಇಲ್ಲವಾಗಿರುವುದಲ್ಲ. ಇಷ್ಟೇ ಸುಲಭ ಮತ್ತು ಸರಳವೇ ಸತ್ಯದ ವ್ಯಾಖ್ಯಾನ?
ಇರಲಿ, ನಾನು ಹಕ್ಕಿಯೊಂದು ತಂತಿಯ ಮೇಲೆ ಕುಳಿತಿರುವುದನ್ನು ನೋಡಿದೆ. ಅದು ಸತ್ಯ. ತಂತಿಯ ಮೇಲೆ ಹಕ್ಕಿ ಕೂತಿದೆ ಎಂದು ಹೇಳುತ್ತೇನೆ. ಅಂದರೆ ಸತ್ಯವನ್ನು ಹೇಳಿದ್ದೇನೆ. ತಂತಿಯ ಮೇಲೆ ಹಕ್ಕಿ ಕೂತಿಲ್ಲ. ಆದರೆ ನಾನು ಹಕ್ಕಿ ತಂತಿಯ ಮೇಲೆ ಕೂತಿದೆ ಎಂದು ಹೇಳುತ್ತೇನೆ. ಅದು ಸುಳ್ಳು. ಇಲ್ಲದಿರುವುದನ್ನು ಇದೆ ಎನ್ನುವುದು, ಇರುವುದನ್ನು ಇಲ್ಲ ಎನ್ನುವುದು ಸುಳ್ಳು ತಾನೇ? ತಂತಿಯ ಮೇಲೆ ಹಕ್ಕಿ ಕೂತಿದೆ ಎಂದು ನಾನು ಹೇಳುತ್ತೇನೆ. ಅದು ಸತ್ಯ. ಅದನ್ನು ನನ್ನಿಂದ ಕೇಳಿಸಿಕೊಂಡ ನೀವು ಬಂದು ನೋಡಿದಿರಿ. ಅದು ಹಾರಿ ಹೋಗಿತ್ತು. ಇರಲಿಲ್ಲ.

ನೀವೀಗ ಬಂದವರು ನನ್ನ ಸತ್ಯವನ್ನು ಹೇಗೆ ಒಪ್ಪಿಕೊಳ್ಳುವಿರಿ? ಹೌದು ಹಕ್ಕಿ ಕೂತಿದೆ ಎನ್ನಲಾಗದು. ನಾನು ಹಾರಿ ಹೋಯಿತು ಎನ್ನಬೇಕು. ನೀವು ಹೌದಾ ಎನ್ನುವಿರಿ. ನನ್ನೊಡನೆ ಹಿಂದೆ ಆಗಿರುವ ಅನುಭವಗಳ ಆಧಾರದಲ್ಲಿ ನೀವು ಅದನ್ನು ನಿಜವೆಂದು ಒಪ್ಪುತ್ತೀರಿ ಅಥವಾ ಸುಳ್ಳೆಂದು ನಿರಾಕರಿಸುತ್ತೀರಿ. ತೋಳ ಬಂತು ತೋಳ ಕತೆ ನೆನಪಿಸಿಕೊಳ್ಳಿ. ಅಂದರೆ, ನಿಜ ಮತ್ತು ಸುಳ್ಳುಗಳೂ ಕೂಡಾ ವಸ್ತುವಿನ ಅಥವಾ ವಿಚಾರದ ಅಸ್ತಿತ್ವಕ್ಕಿಂತ ಮುಖ್ಯವಾಗಿ ಗ್ರಹಿಸುವುದರ ಆಧಾರದ ಮೇಲೆ, ನಾವು ನಂಬಲು ಇಷ್ಟಪಡುವುದರ ಆಧಾರದ ಮೇಲೆ ಅವಲಂಬಿತವಾಗಿದೆ ಅಂತಾಯ್ತು. ಹಾಗಾದರೆ ಸತ್ಯವನ್ನು ಸರ್ವಕಾಲಿಕ ಮೌಲ್ಯವೆಂದು ಹೇಗೆ ನಿರ್ಧರಿಸುವಿರಿ?

ದೃಷ್ಟಿಯಲ್ಲಿದೆ ಸೌಂದರ್ಯ

ಅವಳು ಸಿಂಗರಿಸಿಕೊಂಡು ಬಂದಳು. ನಾನು ಮತ್ತು ನೀವು; ಇಬ್ಬರೂ ಅಲ್ಲಿದ್ದೇವೆ. ಅವಳು ಕೇಳಿದಳು “ನಾನು ಹೇಗೆ ಕಾಣುತ್ತಿದ್ದೇನೆ?”
ನೀವು ಹೇಳಿದಿರಿ, “ತುಂಬಾ ಸುಂದರವಾಗಿ ಕಾಣುತ್ತಿದ್ದೀಯ” ಎಂದು. “ನಿಜ ಹೇಳು” ಎಂದಳು ಅವಳು. “ಅಸಹ್ಯವಾಗಿದ್ದೀಯ. ಚೂರೂ ಚೆನ್ನಾಗಿಲ್ಲ. ನಿನಗೆ ಕಲರ್ ಸೆನ್ಸೇ ಇಲ್ಲ. ಕೆಟ್ಟದಾಗಿ ಇರುವುದರ ಜೊತೆಗೆ ಕೆಟ್ಟದಾಗಿ ಬಟ್ಟೆ ಹಾಕಿದ್ದೀಯ” ಎನ್ನುತ್ತೇನೆ. ಇದು ನಿಜ. ಅವಳು ಚೆನ್ನಾಗಿಲ್ಲ. ಸೌಂದರ್ಯ ಎಂದರೆ ಏನೇನೋ ಮಾನದಂಡ ನನಗಿದೆ. ಬಣ್ಣಗಳ ಆಯ್ಕೆಯ ಬಗ್ಗೆ ನನಗೆ ತುಂಬಾ ಶಾಸ್ತ್ರೀಯ ಜ್ಞಾನವಿದೆ. ನಾನು ನಿಜವನ್ನೇ ಹೇಳುತ್ತಿದ್ದೇನೆ. ನೀವು ಹೇಳುತ್ತೀರಿ, “ಇಲ್ಲ. ಅವಳು ಸುಂದರವಾಗಿದ್ದಾಳೆ. ಆ ಬಣ್ಣಗಳೂ ಒಂದು ರೀತಿಯಲ್ಲಿ ಸುಂದರವಾಗಿದೆ.” ನಿಮ್ಮ ಮಾತನ್ನು ನಾನು ಒಪ್ಪದೇ “ನೀನು ಸುಳ್ಳು ಹೇಳುತ್ತಿದ್ದೀಯ.ಅವಳನ್ನು ಮೆಚ್ಚಿಸುವ ಸಲುವಾಗಿ” ಎಂದು ಆರೋಪ ಮಾಡುತ್ತೇನೆ.

ಗೊತ್ತಾಯ್ತಲ್ಲಾ? ಸೌಂದರ್ಯ ಮಾತ್ರವಲ್ಲ ನೋಡುಗನ ದೃಷ್ಟಿಯಲ್ಲಿರುವುದು. ಸತ್ಯವೂ ಕೂಡಾ ಗ್ರಹಿಕೆಯ ಮೇಲೆ ಅವಲಂಬಿತವಾಗಿರುವುದು. ಕರುಣೆ ಒಂದು ಅತ್ಯುತ್ತಮ ಮೌಲ್ಯ. ಅದನ್ನು ಹೊಂದಿರುವುದು ಶ್ರೇಷ್ಟ ವ್ಯಕ್ತಿತ್ವದ ಭಾಗ. ಸರಿ, ಅಲ್ಲೊಂದು ಅತ್ಯಾಚಾರ ನಡೆಯಿತು. ಬಲಿಪಶುವಾದ ಹೆಣ್ಣು ಮಗು ಸತ್ತಿತು. ಆರೋಪಿಯನ್ನು ಎನ್ ಕೌಂಟರ್ ಮಾಡಿಯೋ ಅಥವಾ ಮರಣದಂಡನೆ ನೀಡಿಯೋ ಸಾಯಿಸಿದರು. ನನಗೆ ಈಗ ಬಲಿಯಾದ ಆ ಅತ್ಯಾಚಾರದ ಆರೋಪಿಯ ಬಗ್ಗೆ ಕರುಣೆ ಬಂತು. ಪಾಪ, ಆತನನ್ನು ಕೊಲ್ಲಬಾರದು. ಆತನಿಗೆ ಹಿಂಸೆ ಕೊಡಬಾರದು. ಆತನನ್ನು ದಯೆಯಿಂದ ಕಾಣಬೇಕು ಎನ್ನುತ್ತೇನೆ. ಅತ್ಯಾಚಾರಿಗೆ ಕರುಣೆ ತೋರಬಾರದು ಎನ್ನುತ್ತದೆ ಬಹುಮಂದಿಯ ಸಮೂಹ.

ಅಂದರೆ ಅತ್ಯುತ್ತಮ ಆಂತರಿಕ ಮೌಲ್ಯವೆಂದು ನೀವು ಗ್ರಹಿಸಿರುವ ಮತ್ತು ಅಭ್ಯಾಸ ಮಾಡಿರುವ ಕರುಣೆಯನ್ನು ನೀವು ಪ್ರದರ್ಶಿಸಬೇಕಾದರೂ ಸಮಾಜದ ಅನುಮತಿ ಬೇಕು. ಯಾರಿಗೆ ಕರುಣೆ ತೋರಿಸಬೇಕು, ಯಾರಿಗೆ ತೋರಿಸಬಾರದು ಅದು ನಿರ್ಧರಿಸುತ್ತದೆ.

ನಾನು ರಸ್ತೆಯಲ್ಲಿ ಕೈ ಒಡ್ಡಿದವರಿಗೆ ಹಣವನ್ನು ನೀಡಿದಾಗ, “ಅಪಾತ್ರರಿಗೆ ದಾನ ಮಾಡಬಾರದು.ಅವರು ಅದನ್ನು ಅನ್ನಕ್ಕೆ ಬಳಸುವುದಿಲ್ಲ. ಮದ್ಯಪಾನಕ್ಕೆ ಬಳಸುತ್ತಾರೆ.ಹಾಗಾಗಿ ಹಣ ಕೊಟ್ಟು ರೂಢಿ ಮಾಡಬಾರದು” ಎಂದು ಅದೆಷ್ಟು ಜನ ತಡೆದಿಲ್ಲ! ಔದಾರ್ಯವೆನ್ನುವುದು ಮಹೋನ್ನತ ಮೌಲ್ಯವಾಗಿದ್ದರೂ ಅದನ್ನು ಪಡೆಯಲು ಪಾತ್ರ ಅಪಾತ್ರಗಳನ್ನು ನಿರ್ಧರಿಸಲು ಹಲವು ಮಾನದಂಡಗಳನ್ನು ನಮ್ಮೊಡನೆಯ ಸಹಜೀವಿಗಳೇ ಹೊಂದಿರುವರು.

ಈ ಬಗೆಯ ಹಲವು ಮೌಲ್ಯಗಳು ಅತ್ಯಂತ ಪ್ರಶಂಸೆಗೆ ಮತ್ತು ಮಾನ್ಯತೆಗೆ ಪಾತ್ರವಾಗಿದ್ದರೂ ಅವುಗಳ ಪ್ರದರ್ಶನದಲ್ಲಿ ವ್ಯಕ್ತಿಗಳಿಗೆ ಭಯಂಕರ ತೊಡಕುಗಳಿವೆ. ವ್ಯಕ್ತಿಯೊಬ್ಬನಲ್ಲಿ ಸತ್ಯವಾಗಿ ಹುಟ್ಟುವ ವಿಚಾರಗಳನ್ನು ಅಥವಾ ಭಾವನೆಗಳನ್ನು ಅವನು ಪ್ರಾಮಾಣಿಕವಾಗಿಯೇ ಅಭಿವ್ಯಕ್ತಿಗೊಳಿಸಲಾಗದಂತಹ ವ್ಯವಸ್ಥೆ ನಮ್ಮ ಸಮಾಜದ್ದು. ಅದಕ್ಕೇ ವಿಲಕ್ಷಣ ಎಂದಿದ್ದು. ಯಾವುದನ್ನು ಮೌಲ್ಯವೆಂದು ಗ್ರಹಿಸಲಾಗಿರುತ್ತದೆಯೋ ಅದನ್ನು ಕಾರ್ಯರೂಪಕ್ಕೆ ತರಲು ತೊಡಕುಗಳಿವೆ. ಸಂಘರ್ಷಗಳಾಗುತ್ತವೆ.

ಇದರಿಂದಾಗಿಯೇ ವ್ಯಕ್ತಿಯ ಮನಸ್ಸಿನಲ್ಲಿ ತಾಕಲಾಟಗಳುಉಂಟಾಗುವುದು.ಪ್ರಾಮಾಣಿಕತೆಯಿಂದ ಇರು ಎನ್ನುವ ಸಮಾಜ ಅಂತಹ ಪ್ರಾಮಾಣಿಕತೆಯನ್ನು ಖಂಡಿಸುತ್ತದೆ, ಇಂತಹ ಪ್ರಾಮಾಣಿಕತೆಯನ್ನು ಪುರಸ್ಕರಿಸುತ್ತೇವೆ ಎನ್ನುತ್ತದೆ. ಸತ್ಯ ಹೇಳು ಎನ್ನುತ್ತದೆ. ಆದರೆ ‘ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್’ ಎನ್ನುತ್ತದೆ. ಸತ್ಯವನ್ನು ಹೇಳುವುದಿದ್ದರೂ ಪ್ರಿಯವಾಗುವಂತೆ ಹೇಳು. ನಿನ್ನ ಮನಸ್ಸಿನಲ್ಲಿ ಮೂಡಿದ ಭಾವನೆಯಂತೆ ಪ್ರಾಮಾಣಿಕವಾಗಿ ಹೇಳಿಬಿಡಬೇಡ ಎನ್ನುತ್ತದೆ. ಮೌಲ್ಯ ಮತ್ತು ನೈತಿಕತೆ ಇತ್ಯಾದಿಗಳನ್ನು ಅರ್ಥೈಸಿಕೊಳ್ಳುವಿಕೆಯಲ್ಲೇ ಮಾನವನ ಮನಸ್ಸು ಸೊರಗಿ ಹೋಗಿರುತ್ತದೆ.

ಅರಿಮೆಗಳು ಮತ್ತು ಇತರ ಮಾನಸಿಕ ಸಮಸ್ಯೆಗಳು ಇಂತಹ ಮನಸ್ಸಿನ ಒಳ ಬೇಗುದಿಯ ಪರಿಣಾಮಗಳೇ. ಸತ್ಯ, ಪ್ರಾಮಾಣಿಕತೆ, ಔದಾರ್ಯ, ಕರುಣೆ ಇತ್ಯಾದಿ ಮೌಲ್ಯಗಳೇ ನಿಜ. ಆದರೆ ಅವುಗಳನ್ನು ಒಬ್ಬ ವ್ಯಕ್ತಿ ಸುಮ್ಮನೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ.
ಹಾಗಾದರೆ ಇದಕ್ಕೆ ಪರಿಹಾರವಿಲ್ಲವೇ? ಮೌಲ್ಯ ಎನ್ನುವುದು ಇಲ್ಲವೇ? ಮೌಲ್ಯಕ್ಕೆ ಮೌಲ್ಯ ಮಾಪನವಿದೆಯೇ? ಮನುಷ್ಯತ್ವ ಎಂದರೇನು? ಮಾನವೀಯ ಮೌಲ್ಯಗಳು ಎನ್ನುವವು ನೈಸರ್ಗಿಕವೇ? ನೋಡೋಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version