ಅಂತರಂಗ
ಅರಿಮೆಯ ಅರಿವಿರಲಿ-31 : ಸೇಡೆಂಬ ಸೋಂಕು
- ಯೋಗೇಶ್ ಮಾಸ್ಟರ್
ಕೆಲವೊಮ್ಮೆ ಕೆಲವರು ತಾವು ತೊಂದರೆಯಲ್ಲಿದ್ದಾಗ ಸಹಾಯ ಕೇಳುತ್ತಾರೆ. ನಮಗೆ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಆ ಸಮಯಕ್ಕೆ ನಿರ್ಲಕ್ಷಿಸಿಬಿಡುತ್ತೇವೆ. ಯಾವುದೋ ಕಾರಣದಿಂದ ಮುಂದೂಡಿರುತ್ತೇವೆ. ಅವರಿಗೆ ಮಾಡುವ ಕೆಲಸಕ್ಕೆ ಪ್ರಾಧಾನ್ಯತೆ ಕೊಟ್ಟಿರುವುದಿಲ್ಲ. ಆಮೇಲೆ ಅವರಿಗೆ ಆ ಸಹಾಯದ ಅವಶ್ಯಕತೆಯೇ ಇರುವುದಿಲ್ಲ ಅಥವಾ ನಮ್ಮ ಸಹಾಯ ಪಡೆದುಕೊಳ್ಳಲಾಗದೇ ಇನ್ನೇನಾದರೂ ತೊಂದರೆ ಆಗಿಬಿಟ್ಟಿರುತ್ತದೆ. ಆಗಲೂ ಕೂಡಾ ನಮಗೆ ಅಪರಾಧ ಪ್ರಜ್ಞೆ ಕಾಡುತ್ತದೆ.ಇಂತಹ ಹತ್ತು ಹಲವು ಅನುಭವಗಳು ಅರಿಮೆಗಳಾಗಿ ಬೇರೂರಿದರೂ ಆಶ್ಚರ್ಯವಿಲ್ಲ.
ನೀವೆಲ್ಲೋ ಹೊರಡುತ್ತಿರುತ್ತೀರಿ. ನಿಮ್ಮ ಮನೆಯಲ್ಲಿರುವ ವಯಸ್ಸಾದವರೋ ಅಥವಾ ಸಣ್ಣ ಮಕ್ಕಳೋ ನಿಮಗೆ ಏನನ್ನೋ ಹೇಳಲು ಅಥವಾ ಕೇಳಲು ಪ್ರಯತ್ನಿಸುತ್ತಾರೆ. ಅದನ್ನು ಕೇಳಿಸಿಕೊಳ್ಳುವಷ್ಟೂ ವ್ಯವಧಾನವಿರದ ನೀವು ಅಲ್ಲಿಂದ ಹೊರಟುಬಿಡುತ್ತೀರಿ. ಸ್ವಲ್ಪ ದೂರ ಸಾಗಿದ ಮೇಲೆ ಆ ವೃದ್ಧರ ಅಥವಾ ಮಗುವಿನ ಕೇಳುತ್ತಿದ್ದ ಅಥವಾ ಮಾತಾಡುತ್ತಿದ್ದ ಮುಖ ನೆನಪಿಗೆ ಬರುತ್ತದೆ. ಆಗ ನಿಮಗೆ ಪಿಚ್ಚೆನಿಸುತ್ತದೆ. ಹಾಗೆ ಬರಬಾರದಿತ್ತು ಎಂದು ಪದೇ ಪದೇ ಅನ್ನಿಸುತ್ತದೆ. ಅದನ್ನು ಹೇಗೆ ಸರಿಮಾಡುವುದು ಎಂದು ಆಲೋಚಿಸುತ್ತೀರಿ. ಈ ಬಗೆಯ ಅಪರಾಧದ ಅರಿಮೆಗೆ ಕಂಪಾಶನ್ ಗಿಲ್ಟ್ ಅಥವಾ ಅನುಕಂಪದ ಅಪರಾಧದ ಅರಿಮೆಯೆಂದೇ ಕರೆಯುತ್ತಾರೆ.
ಅನುಕಂಪಿತ ಅಪರಾಧ
ಕೆಲವೊಮ್ಮೆ ನಮ್ಮದೇ ಸಮಸ್ಯೆ ಇರುವಾಗ ಗಮನಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಸಾಂದರ್ಭಿಕವಾಗಿ ಮೂಡುವ ಉಪೇಕ್ಷೆಯ ಭಾವದಿಂದ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಕೆಲವೊಮ್ಮೆ, ಸಹಾಯ ಮಾಡಬೇಕು ಎಂದು ಬಹಳ ಗಂಭೀರವಾಗಿ ಒಲವನ್ನು ಹೊಂದಿದ್ದರೂ ಸಂಪನ್ಮೂಲಗಳ ಕೊರತೆ ಅಥವಾ ಸಮಯದ ಅಭಾವದಿಂದ ಸಹಾಯ ಮಾಡಿರುವುದಿಲ್ಲ. ಕಾರಣ ಯಾವುದೇ ಆದರೂ ಅಪರಾಧದ ಭಾವ ಕಾಡುತ್ತದೆ.
ಹೀಗೊಮ್ಮೆ ಯಾರಾದರೂ ಸಹಾಯ ಕೇಳಿದಾಗ “ಅವರು ನನ್ನ ವಿಷಯದಲ್ಲಿ ಇಂತಹ ತಪ್ಪು ಮಾಡಿದ್ದರು. ಆದ ಕಾರಣದಿಂದ ನಾನು ಅವರಿಗೆ ಸಹಾಯ ಮಾಡುವುದಿಲ್ಲ” ಎಂದು ಆಲೋಚಿಸಿದರೆ, ಅಂದೆಂದೋ ನನಗೆ ಸಹಾಯ ಬೇಕಿತ್ತು. ಆದರೆ ಅವರು ಮಾಡಿರಲಿಲ್ಲ. ಹಾಗಾಗಿ ಈಗ ನಾನು ಮಾಡುವುದಿಲ್ಲ ಎಂದರೆ ಅವರಲ್ಲಿ ಸೇಡಿನ ಭಾವ ಇದೆ ಎಂದು ಅರ್ಥ. ಸೇಡಿನ ಭಾವವೂ ಕೂಡಾ ಗಂಭೀರವಾದಂತಹ ಮನೋರೋಗವೇ ಹೌದು.
ಸೇಡಿನ ರೋಗ
ನಾರ್ಸಿಸಂನ ಅಥವಾ ಆತ್ಮರತಿಯ ಒಂದು ಭಾಗವೂ ಆಗಿರುವ ಈ ಸೇಡು ತೀರಿಸಿಕೊಳ್ಳುವ ಸಮಸ್ಯೆಯನ್ನು posttraumatic stress disorder (PTSD)ಅಥವಾ ಸೇಡಿನೊತ್ತಡದ ಸಮಸ್ಯೆ ಎಂದು ಕರೆಯಬಹುದು. ತಮ್ಮ ಜೀವನದಲ್ಲಿ ನಡೆದಂತಹ ನಷ್ಟ, ಸಾವು, ನೋವು, ಅವಮಾನ, ನಿರಾಸೆ ಇತ್ಯಾದಿ ಕಹಿ ಘಟನೆಗಳಿಂದ, ನೊಂದಿದ್ದು, ಅದಕ್ಕೆ ಕಾರಣರಾದವರ ಮೇಲೆ ತಮ್ಮ ಕೋಪವನ್ನು ತೋರಿಸಿಕೊಳ್ಳುವಂತಹ ಮನೋಭಾವ ಇದು. ನಮಗೆ ಯಾರಿಂದ ಬೇಸರವಾಗಿರುತ್ತದೆಯೋ, ನಷ್ಟವಾಗಿರುತ್ತದೆಯೋ ಅವರ ಕೋಪವಿರುವುದು ಸಹಜವೇ, ಹೇಗಾದರೂ ಸರಿ ತೀರಿಕೊಂಡೇ ತೀರುತ್ತೇವೆ ಎನ್ನಬೇಡಿ.
ಇದೊಂದು ಬಹಳ ಗಂಭೀರವಾದಂತಹ ಮತ್ತು ಕೇಡಿನ ಪರಿಣಾಮಗಳನ್ನು ಬೀರುವಂತಹ ಮಾನಸಿಕ ಸಮಸ್ಯೆ. ಇಂತಹ ಅನೇಕಾನೇಕ ಮಾನಸಿಕ ಸಮಸ್ಯೆಗಳನ್ನೆಲ್ಲಾ ಸಹಜ ಎಂದು ಪದೇಪದೇ ಹೇಳುತ್ತಲೇ ನಮ್ಮ ಸಮಾಜದಲ್ಲಿ ಅಪರಾಧಗಳು ತೀವ್ರತರದಲ್ಲಿ ಹೆಚ್ಚಿರುವುದು. ಅಪರಾಧಿಗಳು ಹೆಚ್ಚಿದ್ದು ಜೀವಗಳಿಗೆ ಭದ್ರತೆ ಇಲ್ಲದೇ ಹೋಗಿರುವುದು. ಈ ಮಾನಸಿಕ ಸಮಸ್ಯೆಯಿಂದಾಗಿ ಸೇಡಿನ ಭಾವದ ಒತ್ತಡದಿಂದ ಬಳಲುತ್ತಿರುವವರು ತಾವೂ ನೆಮ್ಮದಿಯಾಗಿರುವುದಿಲ್ಲ. ತಮ್ಮ ಜೊತೆಗೆ ಇರುವ ಇತರ ವ್ಯಕ್ತಿಗಳೂ, ಸಂಬಂಧಗಳೂ ನೆಮ್ಮದಿಯಾಗಿರುವುದಿಲ್ಲ ಮತ್ತು ಯಾರನ್ನು ದ್ವೇಷಿಸುತ್ತಾರೆಯೋ ಅವರನ್ನೂ ನೆಮ್ಮದಿಯಾಗಿರಿಸಬಾರದೆಂದು ಪ್ರಯತ್ನಿಸುತ್ತಿರುತ್ತಾರೆ.
ತಮ್ಮ ನೋವಿಗೆ, ನಷ್ಟಕ್ಕೆ, ಅವಮಾನಕ್ಕೆ ಕಾರಣರಾದವರನ್ನು ನಷ್ಟಕ್ಕೆ, ಅವಮಾನಕ್ಕೆ ಮತ್ತು ನೋವಿಗೆ ತಳ್ಳುವ ಈ ಮನೋರೋಗವಿರುವವರು “ನಾವು ಅವರಿಗೆ ಬುದ್ಧಿ ಕಲಿಸುತ್ತೇವೆ” ಎಂದು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾರೆ. ಈ ರೋಗವು ಸಾಂಕ್ರಮಿಕದಂತೆ ವರ್ತಿಸುತ್ತದೆ. ಅದರಿಂದ ಒಬ್ಬ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳಲು ಹಲವಾರು ಜನರೂ ಒಂದಾಗುವುದರಿಂದ ಗುಂಪು ಘರ್ಷಣೆಗಳು ನಡೆಯುವುದು, ಸಾಮೂಹಿಕ ರಕ್ತಪಾತಗಳಾಗುವುದೂ ನಡೆಯುವುದುಂಟು. ಹೊಂಚು ಹಾಕಿ ಕೊಲ್ಲುವುದು, ಎಷ್ಟೋ ಕಾಲಗಳಿಂದ ಕೊಲೆ ಮಾಡಲೆಂದೇ ಸಂಚು ಹೂಡುವುದು, ಅದಕ್ಕೆ ಅವರಿವರನ್ನು ಸಹಾಯಕ್ಕೆ ತೆಗೆದುಕೊಳ್ಳುವುದು; ಇತ್ಯಾದಿಗಳೆಲ್ಲವೂ ಕೂಡಾ ಈ ರೋಗದ ಪ್ರತಿಫಲವೇ. ಸಣ್ಣದೋ ದೊಡ್ಡದೋ ರೋಗ ರೋಗವೇ.
ಕೆಲವರು ತಾವಾಗಿ ಕೊಲೆ ಮಾಡಲು, ಅಥವಾ ಸೇಡು ತೀರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಅವರಿಗೆ ತೊಂದರೆ ಆಗಲೆಂದು ಕಾಯುತ್ತಿರುತ್ತಾರೆ. ಇದೊಂದು ಪುಟ್ಟ ಮಾನದಂಡವನ್ನು ಇಟ್ಟುಕೊಳ್ಳೋಣ. ನಮಗೆ ತೊಂದರೆ ಮಾಡಿದ್ದಾರೆಂದು ಅಥವಾ ನಷ್ಟ ಮಾಡಿದ್ದಾರೆಂದು ಆ ವ್ಯಕ್ತಿಗಳಿಗೂ ಕೂಡಾ ತೊಂದರೆ ನಷ್ಟವಾಗಲೆಂದು ಬಯಸುವ ಮನಸ್ಸಾದರೆ, ಅಥವಾ ಆದಾಗ ಸಂತೋಷವಾದರೆ, ಅವನಿಗೆ ಹಾಗೆ ಆಗಬೇಕಿತ್ತು ಎಂದು ಯಾರಿಗಾದರೂ ಅನ್ನಿಸಿದರೆ ಅವರಿಗೆ ಈ ಸಮಸ್ಯೆ ಇದೆ ಎಂದೇ ಅರ್ಥ.
ಅದಕ್ಕೆ ಶಬ್ಧಗಳಲ್ಲಿ ಬೇರೆ ಬೇರೆ ರೂಪಗಳನ್ನು ಕೊಡುತ್ತೇವೆ. “ಒಬ್ಬರಿಗೆ ಕೆಟ್ಟದು ಮಾಡಿದರೆ ಒಳ್ಳೆಯದಾಗತ್ತಾ? ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರೆಯೇ?” ಎಂದೋ, “ನನ್ನ ಹೊಟ್ಟೆ ಉರಿ ಅವನನ್ನು ಸುಮ್ಮನೆ ಬಿಡುತ್ತದಾ?” ಎಂದೋ, “ದೇವರು ಸರಿಯಾಗಿ ತೋರಿಸದೇ ಇರುತ್ತಾನಾ?”; ಇವೆಲ್ಲವೂ ಪಿ ಟಿ ಎಸ್ ಡಿ ಅಥವಾ ಸೇಡಿನೊತ್ತಡದ ಸಮಸ್ಯೆಯ ಲಕ್ಷಣಗಳೇ.
ಈ ಸೇಡಿನ ಆಗ್ರಹದ ಮನೋಭಾವವು ಸಾಮಾನ್ಯವಾಗಿ ಸಹಜವಾಗಿಯೇ ಬರುವುದು. ಆದರೆ ಅದನ್ನು ಮುಂದುವರಿಸಿಕೊಂಡು ಪ್ರಜ್ಞಾಪೂರ್ವಕವಾಗಿ, ಅರಿವಿನಿಂದ ಕೂಡಿದವರಾಗಿ ಸರಿಪಡಿಸಿಕೊಳ್ಳದಿದ್ದರೆ ಅದು ಬಹಳ ಗಂಭೀರವಾದ ಮಾನಸಿಕ ಸಮಸ್ಯೆಯಾಗಿ ಪರಿಣಮಿಸಿ, ಗಂಭೀರವಾದ, ಭೀಕರವಾದ ಪರಿಣಾಮಗಳನ್ನು ಉಂಟು ಮಾಡುತ್ತದೆ.ಸೇಡು ತೀರಿಸಿಕೊಳ್ಳುವ ರೋಗವು ನಿಜಕ್ಕೂ ಬಾಲ್ಯದಲ್ಲಿಯೇ ತುಟಿಗಳಲ್ಲಿ ಹಾಲು ಆರುವ ಮುನ್ನವೇ ಹುಟ್ಟುತ್ತದೆ ಮತ್ತು ಬೆಳೆಯುತ್ತದೆ.
ಮಗುವು ನೆಲದ ಮೇಲೆ ಎಡವಿ ಬಿದ್ದಾಗ, ಅಳುತ್ತಿರುವ ಮಗುವನ್ನು ಸಮಾಧಾನಿಸಲು ಎಂದು, “ನೋವಾಯ್ತಾ? ಯಾರು ನಿನ್ನ ಬೀಳಿಸಿದ್ದು, ಹೊಡಿ, ಹೊಡಿ” ಎಂದು ನೆಲಕ್ಕೆ ‘ಅತ್ತ’ ಮಾಡಿಸುವಾಗಲೇ ಸೇಡಿನ ಭಾವದ ಬೀಜ ಬಿತ್ತಿದ್ದಾಯ್ತು. ಇನ್ನು ಚೌಕಾಬಾರದಲ್ಲಿ, ಪಗಡೆಯ ಆಟದಲ್ಲಿ ತನ್ನ ಕಾಯನ್ನು ಹೊಡೆದ ಅವನ ಕಾಯನ್ನು ಹೇಗಾದರೂ ಹೊಡೆಯಲೇ ಬೇಕೆಂದು ಹಟ ಹಿಡಿಯುವಲ್ಲಿ ಸೇಡಿನ ಭಾವ ಬಿತ್ತುವುದಿಲ್ಲ ಎಂದುಕೊಂಡಿರಾ? ಯಾರಾದರೂ ಮಗುವು ಕೇಳಿದ್ದನ್ನು ಕೊಡದೇ ಹೋದಾಗ ಅಥವಾ ತರದೇ ಇದ್ದಾಗ, ಆ ಕೋಪಕ್ಕೆ ಅಳಲು ಪ್ರಾರಂಭಿಸಿದಾಗ, “ಅವರು ನಿನಗೆ ಕೊಡಲಿಲ್ಲವಾ? ಅತ್ತ ಮಾಡು, ಅತ್ತ ಮಾಡು” ಎಂದು ನೀವು ಮಗುವಿನಿಂದ ಅವರಿಗೆ ಹೊಡೆಸುತ್ತಿದ್ದಾಗ ಸೇಡಿನ ಭಾವ ಬಲಿಯುವುದಿಲ್ಲ ಎಂದುಕೊಂಡಿರುವಿರಾ? ನನಗೆ ನಿರಾಸೆ ಉಂಟು ಮಾಡಿರುವವರನ್ನು, ನನಗೆ ಕೋಪ ತರಿಸಿದವರನ್ನು, ನನಗೆ ಹಿತ ಕೊಡದಿರುವವರನ್ನು ದಂಡಿಸಬೇಕು, ಶಿಕ್ಷಿಸಬೇಕು ಎಂದು ಬೆಳೆಸಿಕೊಳ್ಳುವ ಅರಿಮೆ ಮುಂದೆ ಎಷ್ಟರಮಟ್ಟಿಗೆ ಅರಳಿ ಬೆಳೆದು ವಿಸ್ತಾರವಾಗುವುದು ಗೊತ್ತೇ?
ಇನ್ನೊಂದು ವಿಷಯವೂ ನೆನಪಿನಲ್ಲಿಡಬೇಕು. ಅವರ್ಯಾರನ್ನೋ ತೋರಿಸಿ ಅತ್ತ ಮಾಡಿಸುವ ನಾವು ಎಷ್ಟೋ ವಿಷಯಗಳಲ್ಲಿ ನಾವೂ ಮಗುವಿನ ಅಥವಾ ವ್ಯಕ್ತಿಯ ನಿರೀಕ್ಷೆಗೆ ತಕ್ಕುದಾಗಿ ನಡೆದುಕೊಳ್ಳಲಾಗುವುದಿಲ್ಲ. ಅದು ಸಕಾರಣವೂ ಆಗಿರುವುದಿಲ್ಲ. ಆಗ ನಾವೂ ಅದರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗುತ್ತದೆ ಮತ್ತು ಅದರ ಮನಸ್ಸಿನಲ್ಲಿ ನಿರಾಸೆ, ಕೋಪ ಮತ್ತು ಬೇಸರವನ್ನು ಮೂಡಿಸಿರುತ್ತೇವೆ. ಆಗ ಈಗಾಗಲೇ ರೂಢಿಯಾಗಿರುವ ಸೇಡಿನ ಆಗ್ರಹದಂತೆ ಆ ಮನಸ್ಸು ನಮ್ಮನ್ನೂ ದ್ವೇಷಿಸಲು ಆರಂಭಿಸುತ್ತದೆ. ಎಷ್ಟೋ ಮಕ್ಕಳು ತಾವು ದೊಡ್ಡವರಾದ ಮೇಲೆ ತಮ್ಮ ತಂದೆ, ತಾಯಿ ಅಥವಾ ಇತರ ಕುಟುಂಬದ ಸದಸ್ಯರ ಮೇಲೆ ನಾನಾ ರೀತಿಯಲ್ಲಿ ಸೇಡುತೀರಿಸಿಕೊಳ್ಳುತ್ತಿರುತ್ತಾರೆ.
ಆದರೆ ಅದನ್ನು ಸೇಡು ಎಂದು ಅವರು ಭಾವಿಸಿರುವುದಿಲ್ಲ. ನಮ್ಮ ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳಿಂದ ಹಿಡಿದು, ಅನೇಕಾನೇಕ ಚಾರಿತ್ರಿಕ ದಾಖಲೆಗಳೂ ಸೇಡಿನ ರಾಜಕಾರಣ ಮತ್ತು ಸಂಘರ್ಷವನ್ನು ಬಹಳ ಸ್ಪಷ್ಟವಾಗಿ ಮತ್ತು ಹಟಮಾರಿತನದಿಂದ ಸಾಧಿಸಿವೆ. ಇನ್ನು ಸಿನಿಮಾಗಳಲ್ಲಂತೂ ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ, ಸಹೋದರರ ಸವಾಲ್ ಎನ್ನುತ್ತಾ ಹಲವಾರು ಚಲನಚಿತ್ರಗಳು ಸೇಡನ್ನು ತೀರಿಸಿಕೊಳ್ಳುವುದೇ ಒಂದು ಮೌಲ್ಯವೆಂಬಂತೆ ಪ್ರತಿಪಾದಿಸಿಕೊಂಡು ಬಂದಿವೆ.ವಿಶ್ವದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಸೇಡು ತೀರಿಸಿಕೊಳ್ಳುವುದು ಅಥವಾ ಪ್ರತಿಕಾರ ತೆಗೆದುಕೊಳ್ಳುವುದು ಒಂದು ವೀರತೆಯ ಲಕ್ಷಣವೆಂದು ಪ್ರದರ್ಶಿಸಿದ್ದಾರೆ. ಸೇಡು ಮನಸ್ಸಿನ ವಿಕೃತಿಯ ಲಕ್ಷಣ. ಈ ರೋಗ ಬರೀ ವ್ಯಕ್ತಿಗಳಲ್ಲಿ ಮಾತ್ರವಲ್ಲ ಸಾಮುದಾಯಿಕವಾಗಿಯೂ ಕೂಡಾ ಸೋಂಕನ್ನು ಹರಡಿಸುತ್ತದೆ.
ಸಾಮುದಾಯಿಕ ಸೋಂಕು
ಈ ಮುಸ್ಲೀಂ ಉಗ್ರರಿದ್ದಾರೆ ಎಂದು ಇಲ್ಲಿರುವ ಮುಸ್ಲೀಮರನ್ನು ಅನುಮಾನಿಸುವುದು, ಅಪಮಾನಿಸುವುದು, ಅವರ ಮೇಲೆ ಸೇಡು ತೀರಿಸಿಕೊಳ್ಳುವಂತೆ ವರ್ತಿಸುವುದು ಕೂಡಾ ಸಾಮುದಾಯಿಕವಾದ ಪಿ ಟಿ ಎಸ್ ಡಿ. ಹಾಗೆಯೇ ಬ್ರಾಹ್ಮಣರು ಮತ್ತು ಇತರ ಸವರ್ಣೀಯವೆಂದು ಗುರುತಿಸಿಕೊಂಡಿರುವ ಸಮುದಾಯಗಳು ತಮ್ಮ ಮಡಿವಂತಿಕೆಯಿಂದ ಇತರ ತಳವರ್ಗದವರಿಗೆ ಅಪಮಾನ ಮಾಡಿದ್ದವು ಎಂದು ಇಂದು ಅವರನ್ನು ಅಪಮಾನಿಸುವುದು, ಅನುಮಾನಿಸುವುದು, ಹೆಜ್ಜೆ ಹೆಜ್ಜೆಗೂ ಅವರನ್ನು ನಿಂದಿಸುವುದು, ಎಲ್ಲರನ್ನೂ ಒಂದೇ ತಟ್ಟೆಯಲ್ಲಿಟ್ಟು ತೂಗುವುದು ಕೂಡಾ ಇದೇ ಮನೋರೋಗದ ಲಕ್ಷಣವೇ.
ಸೇಡಿನ ಮನೋಭಾವಕ್ಕೆ ಯಾವುದಾದರೂ ಒಂದು ಲಾಂಛನ ಬೇಕಾಗಿರುತ್ತದೆ. ಅದು ತನ್ನನ್ನು ತಾನು ಪ್ರಕಟಗೊಳಿಸಿಕೊಳ್ಳಲು ಯತ್ನಿಸುತ್ತಿರುತ್ತದೆ. ಯಾವ ನೆಪವಾದರೂ ಸರಿಯೇ. ಯಾವುದೇ ಪ್ರತಿಕ್ರಿಯೆ, ಪ್ರತಿಭಟನೆಯು ಸಾಂದರ್ಭಿಕವಾದ ಕ್ರಿಯೆಗೆ ಮತ್ತು ಪೂರ್ವಾಗ್ರಹವಿಲ್ಲದೆಯೇ ಇದೆಯೇ ಎಂಬುವುದನ್ನು ನಾವೇ ಗಮನಿಸಿಕೊಳ್ಳಬೇಕಾಗುತ್ತದೆ. ವ್ಯಕ್ತಿಯಿಂದ ಆದ ನಕಾರಾತ್ಮಕವಾದ ಅನುಭವದಿಂದ ತಾವೂ ನಕಾರಾತ್ಮಕವಾಗಿ ಅವರಿಗೆ ಚುರುಕು ಮುಟ್ಟಿಸಬೇಕು ಎಂಬ ಸೇಡಿನ ಭಾವ ಹೇಗೆ ವ್ಯಕ್ತಿಯಲ್ಲಿನ ಮಾನಸಿಕ ಸಮಸ್ಯೆಯೋ ಹಾಗೆಯೇ ಸಾಮುದಾಯಿಕವಾಗಿಯೂ ಕೂಡಾ ಇಂತಹ ಸಂಕಲಿತ ಮಾನಸಿಕ ಸಮಸ್ಯೆಗಳು ಇರುತ್ತವೆ.
ಹಿಂದೆಂದೋ ಅಥವ ಈಗೆಲ್ಲೋ ಆದ ಮತಾಂತರವನ್ನು ವಿರೋಧಿಸಲು ಅದಕ್ಕೆ ಸಂಬಂಧವೇ ಇಲ್ಲದ ಇತರ ಮುಸ್ಲೀಂ ಮತ್ತು ಕ್ರೈಸ್ತರ ಮೇಲೆ ದಾಳಿ ಮಾಡುವುದು, ಯಾರೋ ಕರ್ಮಠ ಬ್ರಾಹ್ಮಣರ ಮಡಿವಂತಿಕೆಯ ಮತ್ತು ಸಂಕುಚಿತ ಮನಸ್ಥಿತಿಯನ್ನು ವಿರೋಧಿಸಲು ಎಲ್ಲಾ ಬ್ರಾಹ್ಮಣರೂ ಹೀಗೆ ಎಂದು ನಿರ್ಧಾರಕ್ಕೆ ಬರುವುದು, ಅವಹೇಳನ ಮಾಡುವುದು; ಸಾಮುದಾಯಿಕ ಮಾನಸಿಕ ಸಮಸ್ಯೆಗಳೇ ಆಗಿವೆ.ಇದರ ಜೊತೆಗೆ ಸೇಡಿನ ಭಾವವು ಸೇರಿಕೊಂಡರೆ ನಾಗರಿಕ ಸಮಾಜದಲ್ಲಿ ಸಾಮರಸ್ಯ ಕದಡುವುದು. ಪ್ರತಿಯೊಬ್ಬರ ಬದುಕಿಗೆ ಅಗತ್ಯವಿರುವುದನ್ನು ಗಮನಿಸದೇ ಸೇಡು ತೀರಿಸಿಕೊಳ್ಳುವ ಉನ್ಮತ್ತತೆಯಲ್ಲಿ ಕತ್ತಿ ಝಳಪಿಸುತ್ತಿರುತ್ತಾರೆ.
ಹೌದು, ವ್ಯಕ್ತಿಗತವಾಗಿ ನಮಗೆ ನಿರಾಸೆಯಾಗಿದೆ. ಸಾಮುದಾಯಿಕವಾಗಿ ನಮಗೆ ನೋವಾಗಿದೆ. ಹಾಗಾದರೆ ಏನು ಮಾಡಬೇಕು? ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಮಾನಸಿಕ ಸಮಸ್ಯೆ ಎಂದಾದರೆ ಅದನ್ನು ನಿವಾರಿಕೊಳ್ಳಲು ಏನು ಮಾಡಬೇಕು? ಆ ಬಾಧೆಯನ್ನು ಶಮನ ಮಾಡಿಕೊಳ್ಳಲು ಏನು ಮಾಡಬೇಕು? ಮುಂದೆ ನೋಡೋಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243