ಅಂತರಂಗ

ಅರಿಮೆಯ ಅರಿವಿರಲಿ-32 : ಕತ್ತಿ ಎತ್ತಿದವರೆಲ್ಲಾ

Published

on

  • ಯೋಗೇಶ್ ಮಾಸ್ಟರ್

ಸೇಡಿನ ಭಾವ ಎಂಬುದು ಒಂದು ಗಂಭೀರವಾದ ಮತ್ತು ಭೀಕರವಾದ ಮನೋರೋಗವೆಂದಾಯಿತು. ಆದರೆ ಅದನ್ನು ಸರಿಪಡಿಸಲು ಸಮಾಜದಲ್ಲಿ ಧರ್ಮದ ನೈತಿಕ ಪ್ರಜ್ಞೆಯು ಕೆಲಸ ಮಾಡಲು ಶ್ರಮಿಸುತ್ತಲೇ ಇದೆ. ಮನಶಾಸ್ತ್ರವೆಂದರೆ ಬರಿಯ ವೈಜ್ಞಾನಿಕವಾದ ಚಿಕಿತ್ಸೆಯನ್ನೇ ಒಳಗೊಂಡಿರಬೇಕೆಂದು ಭಾವಿಸಲಾಗದು.

ಮನೋರೋಗಕ್ಕೆ ಆಧ್ಯಾತ್ಮಿಕತೆ, ಧಾರ್ಮಿಕವಾದ ನೈತಿಕತೆ ಮತ್ತು ಮಾದರಿ ಆಧ್ಯಾತ್ಮಿಕ ಪುರುಷರ ಜೀವನ ಮತ್ತು ಬೋಧನೆಗಳಿಗೆ ಬದ್ಧತೆಯೂ ಕೂಡಾ ಚಿಕಿತ್ಸಕವಾಗಿ ಕೆಲಸ ಮಾಡಬಹುದು. ಸತ್ಸಂಗಗಳು ಅಸಹಾಯಕತೆ, ಖಿನ್ನತೆ ಮತ್ತು ಹತಾಶೆಗಳನ್ನು ಶಮನ ಮಾಡಲು ಪರೋಕ್ಷವಾಗಿ ಸಮಾಲೋಚನೆ ಮಾಡುತ್ತಾ ನೆರವಾಗುತ್ತಿದ್ದವು. ಹಾಗೆಯೇ, ಕುಟುಂಬದವರ ಅಥವಾ ಆತ್ಮೀಯರ ಸಾವು, ಆರ್ಥಿಕವಾದ ನಷ್ಟಗಳು ಉಂಟು ಮಾಡುವ ಒತ್ತಡದ ನಿರ್ವಹಣೆಯೂ ಆಧ್ಯಾತ್ಮಿಕತೆ ಅಥವಾ ಧಾರ್ಮಿಕತೆಯು ಸಾಂತ್ವಾನ ನೀಡುತ್ತಿದ್ದವು.

ಅಸಹಾಯಕ ಯೇಸು

ಯೇಸು ಎಂಬ ಪ್ರಜ್ಞಾವಂತ ಮತ್ತು ಸಮಾಜ ಸುಧಾರಕ ವ್ಯಕ್ತಿಯನ್ನು ಶಿಲುಬೆಗೆ ಏರಿಸುವ ಸನ್ನಿವೇಶವನ್ನು ಗಮನಿಸಿ. ಯೇಸುವಿಗೆ ತನ್ನ ಬೋಧನೆಯ ಉದ್ದೇಶ ಯಶಸ್ವಿಯಾಗುತ್ತಿಲ್ಲ ಎಂಬ ಅರಿವಾಗಿತ್ತು. ಅತ್ಯಂತ ಅಸಹಾಯಕ ಸ್ಥಿತಿಯನ್ನು ತಲುಪಿಯಾಗಿತ್ತು. ಯೇಸುವಿನ ಜೊತೆಯಲ್ಲಿದ್ದ ಶಿಷ್ಯರೆಲ್ಲಾ ದೂರಾದರು. ಸಂಪ್ರದಾಯವಾದಿ ಪುರೋಹಿತರು ತಮ್ಮ ಕಂದಾಚಾರದ ನಂಬುಗೆಗಳಿಗೆ ವ್ಯತಿರಿಕ್ತವಾಗಿರುವ ಯೇಸುವನ್ನು ಪ್ರಭುತ್ವದಿಂದ ಶಿಕ್ಷಿಸಲು ಮುಂದಾಗಿದ್ದರು. ಈ ಎಲ್ಲದರ ಒತ್ತಡವು ಹೆಚ್ಚಾಗಿ ಗೆತ್ಸೆಮನೆ ಎಂಬ ತೋಪಿನಲ್ಲಿ ಅತೀವ ದುಃಖದಿಂದ ಚಿಂತಾಕ್ರಾಂತರಾಗಿ ಪ್ರಾಣ ಹಿಂಡುವಷ್ಟು ಮನೋವೇದನೆಯನ್ನು ಅನುಭವಿಸುತ್ತಾರೆ. “ಸಾಧ್ಯವಾದರೆ, ಈ ವಿಷಮ ಗಳಿಗೆಯು ದೂರವಾಗಲಿ” ಎಂದು ದೇವರಿಗೆ ಪ್ರಾರ್ಥಿಸುತ್ತಾರೆ.ನಂತರ ಮುಂದೆ ಅವರ ಬಂಧನವಾಗಿ ಅವರ ಪ್ರಾರ್ಥನೆ ಫಲಿಸುವುದಿಲ್ಲ. ಬಂಧಿಸುತ್ತಾರೆ, ವಿಚಾರಣೆ ನಡೆಸುತ್ತಾರೆ, ಅಪಮಾನಿಸುತ್ತಾರೆ, ಹಿಂಸಿಸುತ್ತಾರೆ, ಶಿಲುಬೆಗೇರಿಸಿ ಕೊಲ್ಲಲು ಎಳೆದೊಯ್ಯುತ್ತಾರೆ.

ವ್ಯಕ್ತಿಯ ಅಸಹಾಯಕತೆಯ ಪರಮಾವಧಿಯಲ್ಲಿ ಘಾಸಿತವಾಗಿರುವ ಭಾವವಿರುತ್ತದೆ. ಆಗ ಅವನು ತನ್ನ ಘಾಸಿತ ಸ್ಥಿತಿಗೆ ಕಾರಣರಾದ ಇತರರನ್ನು ದೂರುವನು. ತನ್ನನ್ನು ನೋಯಿಸುವ ವ್ಯಕ್ತಿಗೆ ನೋಯಿಸುವ ಬಲವಾದ ಆಲೋಚನೆಗಳು ಬರಬಹುದು. ಆದರೆ ಯೇಸುವನ್ನು ಗೆತ್ಸೆಮನೆ ತೋಪಿನಲ್ಲಿ ಬಂಧಿಸಿದಾಗ ತಮ್ಮ ಶಿಷ್ಯರಲ್ಲೊಬ್ಬ ಕತ್ತಿಯನ್ನು ಎತ್ತಿದಾಗ “ಕತ್ತಿ ಎತ್ತಿದವರೆಲ್ಲಾ ಕತ್ತಿಯಿಂದಲೇ ಹತರಾಗುವರು” ಎಂದು ತಡೆಯುವರು. ತಮ್ಮ ಮನಸ್ಸಿನ ನೋವಿಗೆ ಕಾರಣರಾದವರನ್ನು ನಾವು ನೋಯಿಸಿದರೆ, ಅದೇ ಸಿದ್ಧಾಂತ ಅವರಿಗೂ ಅನ್ವಯವಾಗುತ್ತದೆ. ಅವರೂ ಕೂಡಾ ಮತ್ತೆ ನಮ್ಮನ್ನು ನೋಯಿಸಲು ಮುಂದಾಗುತ್ತಾರೆ. ಅವರಿಂದ ನೋವುಂಡ ಸೇಡನ್ನು ತೀರಿಸಿಕೊಳ್ಳಲು ನಾವು ಮತ್ತೆ….. ಹೀಗೆ ಅದು ಮುಂದುವರಿಯುತ್ತಿರುತ್ತದೆ.

ಭೂಗತ ಯುದ್ಧಗಳದ್ದು ಇದೇ ಕತೆ ತಾನೇ. ಒಬ್ಬರು ಯಾರೋ ಅರಿವಿನಲ್ಲಿ, ಪ್ರಜ್ಞಾಪೂರ್ವಕವಾಗಿ, ತಮ್ಮ ಸಾತ್ವಿಕ ಉದ್ದೇಶದ ಅನುಸಾರವಾಗಿ ಕತ್ತಿಗಳ ಸರಣಿಯಿಂದ ಹಿಂದೆ ಸರಿಯಬೇಕು. ಅದೇ ಯೇಸು ಮಾಡಲು ಹೇಳಿದ್ದು. ಯೇಸುವಿನ ಅಸಹಾಯಕ ಮನಸ್ಥಿತಿಯು ಎಷ್ಟರಮಟ್ಟಿಗೆ ತಲುಪಿತ್ತೆಂದರೆ; ಯೇಸುವನ್ನು ಕೊರಡೆಗಳಿಂದ ಹೊಡೆದು ಹಿಂಸೆ ಕೊಡುತ್ತಾ ಹೋಗುತ್ತಿದ್ದಾಗ ಜೆರೂಸಲೇಮಿನ ಕೆಲವು ಸ್ತ್ರೀಯರು ನೊಂದು ಹಿಂಸೆಗೊಳಗಾಗುತ್ತಿರುವ ಯೇಸುವಿಗಾಗಿ ಅಳುತ್ತಾರೆ. ಆಗ ಯೇಸು, “ನೀವು ನನಗಾಗಿ ಅಳಬೇಡಿ. ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ಶೋಕಿಸಿ” ಎಂದು ಹೇಳುತ್ತಾ ಮುಂದುವರಿದಂತೆ “ಮುಂದೆ ಒಂದು ಕಾಲವು ಬರುತ್ತದೆ.

ಆಗ ಜನರು ಬಂಜೆಯರೇ ಭಾಗ್ಯವಂತರು, ಹೆರದವಳೇ, ಹಾಲೂಡಿಸದವಳೇ ಧನ್ಯಳು” ಎನ್ನುವರು ಎಂದು ರೋಗಗ್ರಸ್ತ ಮನಸ್ಥಿತಿಯ ಪ್ರಭಾವದಿಂದ ಉನ್ಮತ್ತರಾಗಿ ಕಂಟಕರಾಗುವ ಪೀಳಿಗೆಗಳ ಬಗ್ಗೆ ಹೇಳುವರು. ತಮ್ಮ ಮಕ್ಕಳು ಪೀಡೆಗಳಾಗಿ ಬದಲಾಗುವುದನ್ನು ಯಾವ ಹೆತ್ತವರೂ ನೋಡಲು ಇಚ್ಛಿಸುವುದಿಲ್ಲ. ಪೀಳಿಗೆ ಪೀಳಿಗೆಗಳೇ ಇಂತಹ ರೋಗಗ್ರಸ್ತ ಮನಸ್ಥಿತಿಯವರಾಗಿಬಿಡುವರು. ಸ್ವಸ್ಥ ಮತ್ತು ಸಾತ್ವಿಕ ಮನಸ್ಥಿತಿಯ ಹಸಿಮರಕ್ಕೇ ಇಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತಾರೆಂದರೆ, ಇನ್ನು ಒಣ ಮರದ ಗತಿ ಏನು? ಎಂದು ಯೇಸುವಿನ ಆತಂಕವಾಗಿತ್ತು.

ತಾವೇನು ಮಾಡುತ್ತಿದ್ದೇವೆಂದು ತಿಳಿಯರು

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ತನ್ನನ್ನು ಹಿಂಸಿಸಿದರೂ ಕ್ಷಮಿಸುವಂತಹ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಯನ್ನೇ ಸಹಿಸಿಕೊಳ್ಳದೇ ಕ್ರೌರ್ಯದ ಪರಮಾವಧಿಯಲ್ಲಿ ಬೇಯಿಸುತ್ತಿರುವ ವ್ಯವಸ್ಥೆ ಮತ್ತು ಸಮೂಹವನ್ನು ನೋಡುತ್ತಿದ್ದೇವೆ. ಇನ್ನು ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂದು ಕೇಡಿಗೆ ಸೇಡು ಎಂದು ಎಲ್ಲರೂ ಪ್ರವರ್ತಿಸಲು ಆರಂಭಿಸಿದರೆ ಸಮಾಜದ ಸ್ಥಿತಿ ಇನ್ನೆಷ್ಟು ರಕ್ತಸಿಕ್ತವಾಗಬೇಕು! ಮಕ್ಕಳು ಅಂತಹ ರಕ್ತಪಿಪಾಸಿನ ಸೇಡಿನ ಕ್ರೂರಿಗಳಾಗಿ ಪರಿವರ್ತಿತವಾಗುವ ಬದಲು, ಮಕ್ಕಳು ಹುಟ್ಟದೇ ಹೋಗಿದ್ದರೇನೇ ಚೆನ್ನಾಗಿರುತ್ತಿತ್ತು ಎಂಬ ಜಿಗುಪ್ಸೆ ಮತ್ತು ನೋವು ಹಾಗೂ ಹತಾಶಭಾವ ಉಂಟಾಗುತ್ತದೆ.

ಈ ಹತಾಶ ಭಾವ, ಅಸಹಾಯಕತೆ, ನೋವಿನ ಆಕ್ರೋಶ; ಇವಾವುದನ್ನೂ ಇಟ್ಟುಕೊಳ್ಳಬಾರದೆಂದೇ “ಅಪ್ಪಾ, ಇವರನ್ನು ಕ್ಷಮಿಸಿ ಬಿಡಿ. ತಾವು ಏನು ಮಾಡುತ್ತಿದ್ದೇವೆಂದು ತಾವೇ ತಿಳಿಯರು” ಎಂದು ತಮ್ಮ ಕೇಡಿನ ಅರಿಮೆಯಿಂದ ತಮಗೆ ನೋಯಿಸಿದ ವ್ಯಕ್ತಿಗಳನ್ನು ಕ್ಷಮಿಸಿಬಿಡುತ್ತಾರೆ. ಅದೇ ಸೇಡಿನ ಮನೋರೋಗಕ್ಕೆ ಅತ್ಯಂತ ತಕ್ಕುದಾದ ಮತ್ತು ಪ್ರಮುಖವಾದ ಚಿಕಿತ್ಸೆ. ಕ್ಷಮೆ. ಮೂದಲಿಕೆ ಮಾಡಿ ಅಪಮಾನ ಮಾಡಿದವರನ್ನು, ಹಿಂಸೆ ಕೊಟ್ಟವರನ್ನು, ಸುಳ್ಳು ಆರೋಪಿಸಿದವರನ್ನು, ಕೊನೆಗೆ ತಮ್ಮ ಸಾವಿಗೇ ಕಾರಣರಾದವರನ್ನು ಕ್ಷಮಿಸುವ ಮೂಲಕ ತನ್ನ ಮನಸ್ಸಿನಲ್ಲಿ ಲವಲೇಶವೂ ಸೇಡಿನ ಭಾವವನ್ನು ಇಟ್ಟುಕೊಳ್ಳದೇ ಯೇಸು ಲೋಕದಿಂದ ನಿರ್ಗಮಿಸುವ ಮನಸ್ಸು ಮಾಡುತ್ತಾರೆ.

ಯೇಸುವಿನ ನಿರೀಕ್ಷೆಗೆ ತಕ್ಕಂತೆ ಅವರ ವಿರೋಧಿಗಳಿರಲಿ, ಅವರ ಅನುಯಾಯಿಗಳೇ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ನಿಮ್ಮ ಹತ್ತಿರ ತಲೆ ಚಚ್ಚಿಕೊಳ್ಳಬೇಕಲ್ಲಾ ಎನ್ನುವಂತೆ ಹತಾಶರಾಗುತ್ತಿದ್ದರು. ಅಳುತ್ತಿದ್ದರು. ನಿಮಗೆ ಹೇಳುವ ಬದಲು ಇನ್ನಾರಿಗೋ ಹೇಳಿದ್ದರೆ ಅವರೆಷ್ಟೋ ಸುಧಾರಿಸುತ್ತಿದ್ದರು ಎಂದು ನೋವುಣ್ಣುತ್ತಾರೆ.

ಒಬ್ಬ ಸುಧಾರಣೆಯ ಸ್ಪಷ್ಟ ಮತ್ತು ಅಗಾಧ ಆಕಾಂಕ್ಷೆಯನ್ನು ಹೊಂದಿದ್ದ ಯೇಸುವಿಗೆ ಆದ ನಿರಾಸೆ, ನೋವು, ಅಸಹಾಯಕತೆ, ತಿರಸ್ಕಾರ, ಅಂತಿಮವಾಗಿ ಮರಣವನ್ನೂ ಪಡೆದರೂ, ಲೌಕಿಕ ಪ್ರಪಂಚ ಮತ್ತು ಭೌತಿಕ ಶರೀರವನ್ನು ಬಿಟ್ಟು ಹೋಗುವಾಗಲೂ ತಾನು ಸೇಡಿನ ಭಾವವನ್ನು ಹೊಂದಬಾರದಾಗಿ ನಿಶ್ಚಯಿಸುತ್ತಾರೆ.

ಸೇಡಿನ ರೋಗಕ್ಕೆ ಚಿಕಿತ್ಸೆಯಾಗಿ ಯೇಸುವಿನ ನಿದರ್ಶನ ಕಾಣುವುದಷ್ಟೇ ಅಲ್ಲದೇ ತಮ್ಮ ಶಿಷ್ಯರಿಗೂ ಅದನ್ನು ಬೋಧಿಸುತ್ತಿರುತ್ತಾರೆ. ತಾವು ಕ್ಷಮೆಗೆ ಒಳಗಾಗ ಬೇಕಾದರೂ, ಈ ಕ್ಷಮಿಸುವ ಕ್ರಿಯೆ ಮತ್ತು ಪ್ರತಿಕ್ರಿಯೆಯು ತಮ್ಮಿಂದಲೇ ಆರಂಭವಾಗಬೇಕೆಂದು ನಿರ್ದೇಶಿಸುತ್ತಾರೆ. “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ, ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ” ಎಂಬುವುದರಲ್ಲಿ ನಾನು ಮೊದಲು ಕ್ಷಮಿಸಬೇಕು. ನನ್ನ ಇತರರು ಕ್ಷಮಿಸುವುದು ನಂತರ.

ತನ್ನಂತೆ ಪರರ ಬಗೆದೊಡೆ

ನಿನ್ನ ಕಣ್ಣಿನಲ್ಲಿ ದಿಮ್ಮಿ ಇದೆ. ಇತರರ ಕಣ್ಣಿನಲ್ಲಿರುವ ಸಣ್ಣ ಕಣವನ್ನು ಏಕೆ ನೋಡುತ್ತೀಯಾ ಎಂದು ಹೇಳುತ್ತಾ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಯೇಸುವಿನಿಂದ ಪ್ರೇರಣೆ ಸಿಗುತ್ತದೆ. ಸೇಡಿನ ರೋಗಕ್ಕೆ ಆತ್ಮಾವಲೋಕನ, ಆತ್ಮವಿಮರ್ಶೆಯೂ ಕೂಡಾ ಉತ್ತಮವಾದ ಚಿಕಿತ್ಸೆಯೇ. “ಇನ್ನೂ ಮುಂದುವರಿದಂತೆ, ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ” ಎಂಬ ಸೂಚನೆಯೂ ಸೇಡು ನಿಗ್ರಹಕ್ಕೆ ನೇರ ಕಡಿವಾಣ. “ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು” ಎಂದು ಸರ್ವಜ್ಞ ಕೂಡಾ ಇದನ್ನೇ ಧ್ವನಿಸುವುದು.

ದೇವರಿಗೆ ಪ್ರಾರ್ಥನೆ ಸಲ್ಲಿಸಲು ಪೀಠದ ಮುಂದೆ ಇರುವಾಗ ತನ್ನ ನೆರೆಯವನೊಂದಿಗೆ ಮನಸ್ತಾಪ, ವ್ಯಾಜ್ಯವೇನಾದರೂ ಇದ್ದರೆ, ಮೊದಲು ಹೋಗಿ ಅದನ್ನು ಸರಿಪಡಿಸಿಕೊಂಡು ಬಂದು ನಿನ್ನ ಪೂಜೆಯನ್ನು ಮುಂದುವರಿಸು ಎಂದು ಯೇಸುವಿನ ಸ್ಪಷ್ಟವಾದ ನಿಲುವು. ದೇವನಿಗಿಂತ ಜೀವದ ಮನಸಿನ ಸ್ವಾಸ್ಥ್ಯವೇ ಪ್ರಧಾನ.

ಈ ಚಿಕಿತ್ಸೆಯು ಅರಿವಿನ ಮೂಲಕ. ಮಾನಸಿಕ ಸಮಸ್ಯೆಗಳು ಕೂಡಾ ಸಾಂಕ್ರಾಮಿಕ. ಆದರೆ ಇವುಗಳ ಸೋಂಕು ಹರಡುವುದು ವೈರಸ್ಸು ಅಥವಾ ಇನ್ನಾವುದೋ ಸೂಕ್ಷ್ಮ ಜೀವಿಗಳಿಂದಲ್ಲ. ಅಸೂಕ್ಷ್ಮತೆಯಿಂದ. ತಮ್ಮ ಸಮಸ್ಯೆಯನ್ನು ತಾವೇ ತಿಳಿದುಕೊಳ್ಳದೇ ತೋರುವ ವರ್ತನೆಗಳಿಂದ, ಇತರ ವ್ಯಕ್ತಿಗಳನ್ನು ಉಪಚರಿಸುವ ರೀತಿಗಳಿಂದ ರೋಗಗಳು ಹರಡುತ್ತದೆ. ಕೆಲವೊಮ್ಮೆ ನಮ್ಮಲ್ಲಿರುವ ಮಾನಸಿಕ ಸಮಸ್ಯೆಯು ಸಂಪೂರ್ಣವಾಗಿ ಗುಣವಾಗದೇ ಇರಬಹುದು.

ಆದರೆ ನಮಗಿರುವ ಸಮಸ್ಯೆಯು ಇತರರನ್ನು ಬಾಧಿಸದಿರುವಂತೆ, ಅವರಿಗೂ ರೋಗ ಹತ್ತಿಸದಂತೆ, ಅದರಲ್ಲೂ ಸೇಡಿನ ಸೋಂಕು ಹತ್ತದಂತೆ ನೋಡಿಕೊಳ್ಳಲು ಸಾಧ್ಯ. ನಮಗೆ ನೆಗಡಿ ಅಥವಾ ಕೆಮ್ಮು ಬಂದಾಗ ನಮ್ಮ ಸೀನು ಇತರರ ಮೇಲೆ ಸಿಡಿದು ಅವರಿಗೂ ಕೂಡಾ ಸೋಂಕಿನಿಂದ ನೆಗಡಿ ಬಾರಂತೆ ನೋಡಿಕೊಳ್ಳುತ್ತೇವಲ್ಲಾ? ಅದೇ ರೀತಿಯಲ್ಲಿ ನಮ್ಮಲ್ಲಿದೆ ಎಂಬ ಅರಿವು ಉಂಟಾಗುವುದು ಮುಖ್ಯ ಮತ್ತು ಅದರ ಸೋಂಕು ಹರಡದಂತೆ ನೋಡಿಕೊಳ್ಳುವುದು ಮುಖ್ಯ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version