ಅಂತರಂಗ

ಅರಿಮೆಯ ಅರಿವಿರಲಿ-34 : ಕೌಟುಂಬಿಕ ವ್ಯವಹಾರ

Published

on

  • ಯೋಗೇಶ್ ಮಾಸ್ಟರ್

ಬ್ಬ ವ್ಯಕ್ತಿ ಆ ಒಂದು ಘಟನೆಯ ಮುಂಚೆ ಆರೋಗ್ಯಕರವಾಗಿದ್ದ. ಆದರೆ ಆ ಘಟನೆಯ ನಂತರ ಪೂರ್ತಿ ಅಸ್ವಸ್ಥ. ಅದು ಕೆಲವು ಘಟನೆಗಳು ಮಾಡುವ ಆಘಾತ.‌ ಈ posttraumatic embitterment disorder (PTED) ವಕ್ಕರಿಸಿದ ನಂತರ ಎಷ್ಟು ಕಾಲ ಇರುವುದೋ, ಏನೇನೆಲ್ಲಾ ಪ್ರಭಾವಗಳನ್ನು ಬೀರುವುದೋ ಹೇಳಲಾಗದು. ಗಂಡ ಹೆಂಡಿರ ನಡುವಿನ ಜಗಳ ಹೆಚ್ಚಾಗಿ ಇಬ್ಬರಿಗೂ ಸಹಿಸಲು ಸಾಧ್ಯವಾಗುವುದಿಲ್ಲ ಎಂದಾದಾಗ ನ್ಯಾಯಾಲಯದ ಮೊರೆ ಹೋಗಿ ವಿಚ್ಛೇದನೆ ಪಡೆದುಕೊಳ್ಳುತ್ತಾರೆ.

ಆದರೆ ಈ ವಿಚ್ಛೇದನೆಯ ನಂತರ ಭೌತಿಕವಾಗಿ, ಲೌಕಿಕವಾಗಿ ಇಬ್ಬರಿಗೂ ಅಂತರವೇನೋ ಉಂಟಾಗುತ್ತದೆ. ಆದರೆ, ಇಬ್ಬರಲ್ಲೂ ಮಾನಸಿಕವಾದಂತಹ ಒಂದು ಛಾಯೆ ಆವರಿಸಿಯೇ ಇರುತ್ತದೆ. ಆದ್ದರಿಂದಲೇ ವಿಚ್ಛೇದನೆಯ ನಂತರ ಇಬ್ಬರಿಗೂ ಆಪ್ತ ಸಮಾಲೋಚನೆಯ ಅಗತ್ಯವಿರುತ್ತದೆ. ಅದರಲ್ಲೂ ಮಕ್ಕಳೇನಾದರೂ ಇದ್ದಲ್ಲಿ ಈ ಬಗೆಯ ಸಮಾಲೋಚನೆಯ ಅಗತ್ಯ ಹೆಚ್ಚಿರುತ್ತದೆ.

ಒಂದೇ ಬಳ್ಳಿಯ ಹೂಗಳು

ಗಂಡ ಹೆಂಡರ ಸಂಬಂಧವೇನೋ ಕಾನೂನಾತ್ಮಕವಾಗಿ ಕತ್ತರಿಸಿಕೊಳ್ಳಲಾಗುವುದು. ಆದರೆ ಅದಕ್ಕಿಂತಲೂ ಕೆಟ್ಟದಾದ ಸಂಘರ್ಷಗಳು ವಿಚ್ಛೇದನದ ವ್ಯಾಪ್ತಿಗೇ ಬರದಂತಹ ಕೌಟುಂಬಿಕ ಸಂಬಂಧಗಳಲ್ಲಿರುತ್ತವೆ. ಅವುಗಳನ್ನು ಹೇಗೆ ಕತ್ತರಿಸಿಕೊಳ್ಳಲಾಗುತ್ತದೆ. ಒಂದೇ ಕಳ್ಳುಬಳ್ಳಿ, ಒಂದೇ ರಕ್ತ, ಹೆತ್ತ ತಾಯಿ ತಂದೆ, ಒಡಹುಟ್ಟಿದವರು; ಹೀಗೆ ಭಾವುಕ ಕಟ್ಟುಗಳು ಬಿಗಿದಿರುತ್ತವೆ. ಈ ಭಾವುಕತೆಯು ಮತ್ತದೇ ಸಮಾಜ ಸೃಷ್ಟಿಸಿರುವುದು. ಮಗ ತಾಯಿಯ ಜೊತೆ ಜಗಳ ಮಾಡಿದರೆ ಸಮಾಜವೇ ಹೇಳುತ್ತದೆ. ಅವಳು ಹೆತ್ತ ತಾಯಿ ನೀನು ಹೀಗೆ ವರ್ತಿಸಬಾರದು ಎಂದು.

ಹೀಗಾಗಿ ಎಷ್ಟೆಷ್ಟೋ ಮನೆಗಳಲ್ಲಿ ಕುಟುಂಬದ ಸದಸ್ಯರು ತಮ್ಮ ತಮ್ಮ ನಡುವೆ ಗೋಡೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುತ್ತಾರೆ. ಹೊರಗಿನ ನೋಟಕ್ಕೆ ಅವರು ಒಂದೇ ಮನೆಯ ಒಂದು ಕುಟುಂಬದ ಸದಸ್ಯರು. ಆದರೆ ಅವರ ನಡುವೆ ದೊಡ್ಡ ದೊಡ್ಡ ಕಂದಕಗಳು ಇದ್ದು, ಅವರು ಅವುಗಳನ್ನು ಎಂದಿಗೂ ದಾಟದಂತಹ ಸ್ಥಿತಿಯಲ್ಲಿ ಇರುತ್ತಾರೆ. ಪ್ರತಿದಿನವೂ ಒಬ್ಬರಿಗೊಬ್ಬರು ಅನುಮಾನಿಸುತ್ತಿರುತ್ತಾರೆ, ಅಪಮಾನಿಸುತ್ತಿರುತ್ತಾರೆ, ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ. ಯಾರಾದರೂ ಸತ್ತಾಗ ಎಲ್ಲರೂ ಒಟ್ಟಿಗೇ ಹೋಗುತ್ತಾರೆ. ಮದುವೆಯೇ ಮೊದಲಾದ ಸಮಾರಂಭಗಳಿಗೆ ಒಟ್ಟಿಗಿರುತ್ತಾರೆ.ಅವರ ನಡುವೆ ನಡೆಯುವ ಎಲ್ಲಾ ವಿದ್ಯಮಾನಗಳೂ ಕೌಟುಂಬಿಕ ವ್ಯವಹಾರ.ವ್ಯಾವಹಾರಿಕವಾಗಿರುವ ಕೌಟುಂಬಿಕ ಸಂಬಂಧಗಳು ಪರಸ್ಪರ ಸೇಡಿನ ಮನೋಭಾವವನ್ನು ಗಾಢಗೊಳಿಸುತ್ತಿರುತ್ತದೆ.

ಕಾರಣ ಬೇಡದ ಆಪ್ತತೆಗಳು

ವಾಸ್ತವವಾಗಿ ಸಂಬಂಧಗಳು ಭಾವನಾತ್ಮಕವಾಗಿರಲು ಆ ಸಂಬಂಧಕ್ಕೆ ಹೆಸರೇ ಬೇಕಾಗಿರುವುದಿಲ್ಲ. ಆತ್ಮೀಯತೆ ಮತ್ತು ಆಪ್ತತೆಯು ವ್ಯಕ್ತಿಗಳ ನಡುವೆ ಅಕಾರಣವಾಗಿಯೋ, ಕಾರಣವಿದ್ದೋ ಬೆಳೆಯುವುದು. ಆ ಬಗೆಯ ಸಂಬಂಧಗಳು ಮುದ ಕೊಡುತ್ತಿರುತ್ತವೆ ಮತ್ತು ಸಾಂತ್ವಾನ ನೀಡುತ್ತಿರುತ್ತವೆ.
ಬಹುಕಾಲದಿಂದ ನೋಡಿರುವ ಮನೆಯೊಳಗಿನ ವ್ಯಕ್ತಿಯು ಹೀಗೆ ಎಂಬ ಹಣೆಪಟ್ಟಿ ಕಟ್ಟಿ ಅವನ ಬೇರೆ ಯಾವ ಬದಲಾವಣೆಯನ್ನೂ ನೋಡಲು ಮತ್ತೊಂದು ವ್ಯಕ್ತಿಗೆ ಇಚ್ಛೆಯೇ ಇರುವುದಿಲ್ಲ.

ಹಾಗಾಗಿ, ವ್ಯಕ್ತಿಯಲ್ಲಿನ ಆಲೋಚನೆಗಳಲ್ಲಿ, ವಿಚಾರಗಳಲ್ಲಿ, ಧೋರಣೆಗಳಲ್ಲಿ ಬದಲಾವಣೆಯು ಶುರುವಾಗಿದ್ದರೂ ಆ ವ್ಯಕ್ತಿಯ ಬಗ್ಗೆ ತಾನು ಹಾಕಿಕೊಂಡಿರುವ ಕನ್ನಡಕದ ಮೂಲಕವೇ ನೋಡುವುದರಿಂದ ಆ ಬದಲಾವಣೆಗಳನ್ನು ಗುರುತಿಸಲಾಗುವುದಿಲ್ಲ. ತಿರಸ್ಕಾರದ ಭಾವ ಎಷ್ಟು ಗಾಢವಾಗಿರಬಹುದೆಂದರೆ ಅಂತಹ ಬದಲಾವಣೆಗಳನ್ನು ಬಯಸುವುದೂ ಇಲ್ಲ. ಕೆಲವರು ತಮ್ಮ ಮನೆಯ ಸದಸ್ಯರ ನಡುವೆ ಜಗಳವಾಗಿ ಸಮಾಲೋಚನೆಗೆಂದು ಬಂದಾಗ, “ನೀವು ಹೀಗೆ ವರ್ತಿಸಿ, ಹೀಗೆ ಪ್ರತಿಕ್ರಿಯೆಗಳನ್ನು ನೀಡಿ. ಅವರು ಬದಲಾಗಬಹುದು. ಸರಿ ಹೋಗುವ ಸಾಧ್ಯತೆಗಳಿವೆ.

ಅವರಿಗೆ ಇಂತಹ ಸಮಸ್ಯೆ ಇದೆ. ಆ ಸಮಸ್ಯೆ ನಿವಾರಣೆಯಾಗಬೇಕೆಂದರೆ ನೀವು ಹೀಗೆ ಮಾಡಬೇಕೆಂದು” ಸಲಹೆ ನೀಡಿದರೆ, “ಇಲ್ಲ ಸಾರ್, ಅವರು ಸರಿ ಹೋಗುವುದಿಲ್ಲ. ನಾನಿಷ್ಟು ವರ್ಷಗಳಿಂದ ನೋಡಿದ್ದೇನಲ್ಲವಾ? ಅವರು ಎಂದಿಗೂ ಸರಿ ಹೋಗುವುದಿಲ್ಲ” ಎಂದು ನಕಾರಾತ್ಮಕವಾಗಿಯೇ ಪ್ರತಿಕ್ರಿಯಿಸುತ್ತಾರೆ. ನಿಜ ಹೇಳಬೇಕೆಂದರೆ ಇವರಿಗೂ ಅವರು ಸರಿ ಹೋಗುವುದು ಬೇಡ. ಇವರು ಅವರ ಬಗ್ಗೆ ಈ ಹಿಂದೆ ದೂರಿರುವುದು, ಈಗ ದೂರುತ್ತಿರುವುದು; ಯಾವುದೂ ಸುಳ್ಳಾಗಬಾರದು. ಅಷ್ಟೇ ಅಲ್ಲ. ಇವರು ಅವರಿಗೆ ‘ಹೀಗೆ’ ಎಂದು ಕಟ್ಟಿರುವ ಹಣೆಪಟ್ಟಿಯು ವಿಫಲವಾಗಬಾರದು. ಈ ಬಗೆಯ ಸಮಸ್ಯೆಗಳು ಕೂಡಾ ತನ್ನೊಡನೆ ಬಾಳುತ್ತಿರುವ ವ್ಯಕ್ತಿಯ ಬದಲಾವಣೆಯನ್ನು ನೋಡಲು ಸಮ್ಮತಿಸುವುದಿಲ್ಲ.

ಅಕ್ಕ ತಂಗಿಯ ನಡುವಿನ ಸಂಘರ್ಷದಲ್ಲಿ ಅಕ್ಕ ತನ್ನ ತಂಗಿಯನ್ನು ಖಳನಾಯಕಿಯನ್ನಾಗಿ ಚಿತ್ರಿಸಿರುವಾಗ ಅವಳು ಒಮ್ಮಿಂದೊಮ್ಮೆಲೇ ಯಾವುದೇ ಕಾರಣಕ್ಕೆ ಒಳ್ಳೆಯವಳಾಗಿ ನಾಯಕಿಯಾಗಲು ಅಕ್ಕಗೆ ಇಷ್ಟವಿರುವುದಿಲ್ಲ. ಅವಳು ಒಳ್ಳೆಯವಳಾಗಿಬಿಟ್ಟರೆ, ತಾನು ದೂರಿರುವವರ ಮುಂದೆ ಸುಳ್ಳಿಯಾಗಿಬಿಡುತ್ತೇನೆ ಎಂಬ ಆತಂಕ. ಇದು ಸೇಡಿನ ಮನೋಭಾವವೇ. ಹೀಗೆ ಜೀವನ ಪೂರ್ತಿ ತಮ್ಮ ಮನಸ್ಸಿನ ಸ್ವಾಸ್ಥ್ಯವನ್ನು ಪದೇಪದೇ ಹಾಳುಗೆಡವಿಕೊಳ್ಳುತ್ತಲೇ ಇರುತ್ತಾರೆ.

ಸೇಡಿನ ರೋಗದ ಲಕ್ಷಣಗಳು

ಸೇಡಿನ ರೋಗದ ಲಕ್ಷಣಗಳೇನೆಂದರೆ, ತಮ್ಮ ಖಿನ್ನತೆ, ಬಳಲಿಕೆ, ಅಹಿತಕರವಾದ ಸ್ಥಿತಿಗೆ ಯಾರು ಕಾರಣ ಮತ್ತು ಯಾವುದು ಕಾರಣ ಎಂದು ತಿಳಿದಿರುತ್ತಾರೆ. ತನಗೆ ಆಗಿರುವುದು ಅನ್ಯಾಯ, ದ್ರೋಹ ಎಂದು ಸ್ಪಷ್ಟವಾಗಿ ತಿಳಿದಿರುತ್ತಾರೆ. ಆ ಸಂಗತಿ ಅಥವಾ ವ್ಯಕ್ತಿಯ ಕಾರಣದಿಂದ ತಾನು ಈ ಅಸಹಾಯಕ ಸ್ಥಿತಿಯಲ್ಲಿದ್ದೇನೆ, ಕೋಪಗೊಂಡಿದ್ದೇನೆ, ಆಘಾತಗೊಂಡಿದ್ದೇನೆ ಎಂದು ಪದೇ ಪದೇ ನೆನೆಸಿಕೊಳ್ಳುತ್ತಿರುತ್ತಾರೆ.

ಸಾಧ್ಯವಾದ ಕಡೆಗಳಲ್ಲೆಲ್ಲಾ ಹೇಳುತ್ತಿರುತ್ತಾರೆ ಮತ್ತು ಹಾಗೆ ಹೇಳುವಾಗ ಪದೇ ಪದೇ ನೆನಪಿಸಿಕೊಳ್ಳುವುದರಿಂದ ಅವರು ಅವರ ಬಗ್ಗೆ ಹೊಂದಿರುವ ನಕಾರಾತ್ಮಕವಾದ ಆಲೋಚನೆಯು ಬಲಗೊಳ್ಳುತ್ತಿರುತ್ತದೆ. ಹಾಗೂ ಅದರ ಕುರಿತಾದ ಭಾವನಾತ್ಮಕವಾದ ನೋವು ಆಳವಾಗುತ್ತಾ ಹೋಗುತ್ತದೆ. ಮಾನಸಿಕವಾಗಿ ಆ ನೋವನ್ನು ಜೀವಂತವಾಗಿಡುವ ಕಾರಣದಿಂದ ಭಾವನಾತ್ಮಕವಾಗಿ ಆ ನೋವು ನಿಜವಾಗಿ ಇಲ್ಲದಿದ್ದರೂ, ಕೃತಕವಾಗಿಯಾದರೂ ಶೋಕ, ಖಿನ್ನತೆ ಮತ್ತು ಆಘಾತವನ್ನು ಪ್ರದರ್ಶಿಸುವ ಅನಿವಾರ್ಯತೆ ಅವರಿಗಿರುತ್ತದೆ.

ಇನ್ನೂ ಕೆಲವರಿಗೆ ಅದೊಂದು ರೀತಿಯಲ್ಲಿ ಅಡಗಿಕೊಂಡಿರುವ ನಾಗರದಂತೆ ಇದ್ದು, ನೆನಪಿನ ಬುಟ್ಟಿ ತೆರೆದಾಗೆಲ್ಲಾ ಹೆಡೆ ಎತ್ತಿ ರೋಷದಿಂದ ಬುಸುಗುಡುತ್ತದೆ ಮತ್ತು ಕಚ್ಚಲು ಪ್ರಯತ್ನಿಸುತ್ತಲೇ ಇರುತ್ತದೆ. ಆ ಒಂದು ದಿನ ಅನುಭವಿಸಿದ ನೋವು, ನಿರಾಸೆ, ಕೋಪ ಮತ್ತು ಅಸಹಾಯಕತೆಗಳನ್ನೆಲ್ಲಾ ಮತ್ತೆ ಮತ್ತೆ ನೆನಪಿನೊಂದಿಗೆ ಮರುಕಳಿಸುವಂತೆ ಮಾಡಿಕೊಳ್ಳುತ್ತಾರೆ. ತಾವು ಸಂಘರ್ಷವನ್ನು ಹೊಂದಿರುವ ವ್ಯಕ್ತಿಯ ಜೊತೆ ಮತ್ತೆ ಸಂಬಂಧವನ್ನು ಸರಿಮಾಡಿಕೊಳ್ಳಲು ಇವರಿಗೇ ಸಲಹೆ ಮತ್ತು ನಿರ್ದೇಶನಗಳನ್ನು ಕೊಡಲು ಪ್ರಾರಂಭಿಸಿದರೆ, ಇವರ ಸಂಬಂಧವನ್ನೇ ಕಡೆದುಕೊಳ್ಳಬಹುದು.

ಏಕೆಂದರೆ ಈಗ ಅವರಿಗೆ ಬೇಕಾಗಿರುವುದು ಸಂಬಂಧದಲ್ಲಿ ಸುಧಾರಣೆಯಲ್ಲ. ತಮ್ಮ ನೋವಿಗೆ ಪ್ರತಿಕಾರವನ್ನು ತೀರಿಸಿಕೊಳ್ಳಬೇಕು. ಸೇಡು! ಅದು ಎಷ್ಟರಮಟ್ಟಿಗೆ ಮುಟ್ಟಬಹುದು ಎಂದರೆ, ಕೊಲೆ ಅಥವಾ ಆತ್ಮಹತ್ಯೆಯವರೆಗೂ ಹೋಗಬಹುದು.
ಇದಕ್ಕೆ ಪರಿಹಾರವೆಂದರೆ, ಪ್ರತಿಯೊಂದನ್ನು ತನ್ನ ಆಲೋಚನೆಯಂತೆಯೇ ನೋಡುವುದನ್ನು ನಿಲ್ಲಿಸುವುದು. ಅಂದರೆ ಯಾವುದೇ ಒಂದು ವಸ್ತುವನ್ನು, ಸಂಗತಿಯನ್ನು ಅಥವಾ ವ್ಯಕ್ತಿಯನ್ನು ತಮ್ಮಲ್ಲಿ ಈಗಾಗಲೇ ಇರುವಂತಹ ಆಲೋಚನೆಗಳ ಚೌಕಟ್ಟಿನಲ್ಲಿ ಅಳವಡಿಸದಂತಹ ಎಚ್ಚರಿಕೆಯನ್ನು ಹೊಂದುವುದು.

ಯಾವುದೇ ವ್ಯಕ್ತಿಯನ್ನು ನೋಡಿದ ಕೂಡಲೇ “ಇವರು ಹೀಗೆ” ಎಂದು ಭಾವ ಮೂಡುತ್ತಿದ್ದಂತೆ ಎಚ್ಚರಿಕೆಯನ್ನು ಹೊಂದುವುದು. ಯಾರಿಗೂ ಹಣೆಪಟ್ಟಿಯನ್ನು ಕಟ್ಟದೇ, ತಾನೂ ಕಟ್ಟಿಕೊಳ್ಳದಂತೆ ಇರುವ ಅಭ್ಯಾಸವನ್ನು ಉದ್ದೇಶಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಮಾಡುವುದು. ಯಾವುದೋ ಕಾಗದವನ್ನು ಬರೆಯುತ್ತೀರಿ. ಅದು ಸರಿಹೋಗಲಿಲ್ಲವೆಂದರೆ ಬೇಸರದಿಂದ ಹರಿದು ಚೂರು ಚೂರು ಮಾಡದೇ ಅದನ್ನು ಹಾಗೆಯೇ ಪಕ್ಕಕ್ಕಿರಿಸುವುದು ರೂಢಿ ಮಾಡಿಕೊಳ್ಳಬೇಕು. ಯಾವುದಾದರೂ ವಸ್ತುಗಳಿಂದ ಕೆಲಸ ಮಾಡುತ್ತಿದ್ದಾಗ ಅವು ಸರಿಹೋಗದಿದ್ದರೆ ಅದನ್ನು ನಾಶ ಮಾಡುವ ರೂಢಿ ಇದ್ದರೆ ಅದನ್ನು ಮೊದಲು ತಪ್ಪಿಸಬೇಕು.

ಎಲ್ಲದರಲ್ಲೂ ನನಗೇನು ಲಾಭ ಎನ್ನುವಂತಹ ಆಲೋಚನೆಯೇ ಒಂದು ಮಾನಸಿಕ ಸಮಸ್ಯೆ. ಯಾರಿಂದ, ಯಾವುದರಿಂದ ನನಗೇನಾಗಬೇಕಿದೆ ಎಂಬ ಜಿಗುಪ್ಸೆಯೂ ಕೂಡಾ ಅದೇ ಮಾನಸಿಕ ಸಮಸ್ಯೆಯ ಮತ್ತೊಂದು ಮುಖ. ಕನ್ನಡಕವಿಲ್ಲದೇ, ಲಾಭ ನಷ್ಟಗಳ ಆಲೋಚನೆ ಇಲ್ಲದೆ ಸಂಗತಿಗಳನ್ನು ಮತ್ತು ವ್ಯಕ್ತಿಗಳನ್ನು ನೋಡುವ ಜಾಣರು ತಮ್ಮ ಮನದಲ್ಲಿ ಗಾಯ ಮಾಡಿಕೊಳ್ಳಲಾರರು ಮತ್ತು ಅದನ್ನು ಪದೇ ಪದೇ ಕೆರೆದುಕೊಂಡು ಹುಣ್ಣು ಮಾಡಿಕೊಳ್ಳಲಾರರು.

ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು ನೀನು ನೆನೆನೆನೆದು ಕೆರಳಿ
ಧರೆಯಲ್ಲವನು ಶಪಿಸಿ ಮನದಿ ನರಕವ ನಿಲಿಸಿ
ನರಳುವುದು ಬದುಕೇನೋ ಮಂಕುತಿಮ್ಮ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version