ಅಂತರಂಗ

ಅರಿವಿನ ಅರಿವಿರಲಿ-37 : ಬರೆಗಳು ಬರೆವುದೇನನ್ನು..?

Published

on

  • ಯೋಗೇಶ್ ಮಾಸ್ಟರ್

ಹಿಂಸೆ ನೀಡಿ ಅಥವಾ ಕ್ರೌರ್ಯವನ್ನು ಪ್ರದರ್ಶಿಸಿ ವಿಕೃತವಾದ ಆನಂದವನ್ನು ಪಡೆಯುವುದಕ್ಕೆ ಸ್ಯಾಡಿಸಂ ಅಥವಾ ಕ್ರೌರ್ಯಾಮೋದ ಎನ್ನುತ್ತೇವೆ ಎಂಬುದೇನೋ ಸರಿ. ಆದರೆ ಸರಣಿ ಕೊಲೆಗಾರರಲ್ಲಿ, ಸೈಕೋಪಾತ್‍ಗಳಲ್ಲಿ ಮಾತ್ರವೇ ಈ ಬಗೆಯ ಮನಸ್ಥಿತಿ ಇರುವುದು ಎಂದುಕೊಂಡಿದ್ದರೆ ಅದು ನಮ್ಮ ಅಜ್ಞಾನ.

ಮಗುವು ಹೇಳಿದ ಮಾತು ಕೇಳಲಿಲ್ಲ ಎಂದು ಮೊಗಚುಕೈಯನ್ನು ಬಿಸಿ ಮಾಡಿ ಬರೆ ಹಾಕುವ ತಾಯಿ, ಬೆಲ್ಟ್ ತೆಗೆದುಕೊಂಡು ಬಾಸುಂಡೆ ಬರುವ ಹಾಗೆ ಹೊಡೆಯುವ ತಂದೆ, ಮೆದುವಾದ ಅಂಗೈ ಮೇಲೆ ಬೆತ್ತ ಬೀಸುವ ಶಿಕ್ಷಕರು ಮಗುವಿನ ಒಳಿತಿಗೆ ಉಳಿಯ ಪೆಟ್ಟನ್ನು ಕಲ್ಲಿಗೆ ನೀಡಿ ಶಿಲ್ಪವನ್ನಾಗಿಸುತ್ತಿದ್ದೇವೆ ಎಂದು ಸಮಜಾಯಿಶಿ ಕೊಡುವರಾ? ಅದು ಅವರವರ ಅಸ್ವಸ್ಥ ಮನಸ್ಥಿತಿಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ.
ಮಗುವು ನೋವಿನಿಂದ ಕಿರುಚುತ್ತಿದ್ದರೂ, ಅಳುತ್ತಿದ್ದರೂ ನಿನಗೆ ಇನ್ನೂ ಎರಡು ಬೀಳಬೇಕು ಎಂದು ಉನ್ಮತ್ತರಂತೆ ನಿರ್ದಾಕ್ಷಿಣ್ಯವಾಗಿ ಹೊಡೆಯುತ್ತಲೇ ಇರುತ್ತಾರಲ್ಲಾ ಅವರು ಯಾವ ಹಂತಕ್ಕೆ ಸಮಾಧಾನವಾಗಿ ಸುಮ್ಮನಾಗುತ್ತಾರೆ ಎಂದು ಗಮನಿಸಿ.

ಬೇರೆಯವರು ಬಂದು ಇವರನ್ನು ಮಗುವಿನಿಂದ ಬೇರ್ಪಡಿಸಿ ಪಾಪದ ಮಗುವಿನ್ನು ಹೀಗೆ ಹೊಡೆದಿದ್ದೀಯಲ್ಲಾ ನಿನಗೇನಾಗಿದೆ? ನಿನಗೆ ಅಯ್ಯೋ ಅನ್ನಿಸುವುದಿಲ್ಲವಾ? ಎಂದು ಅವರೇನಾದರೂ ಹೊಡೆದವರಿಗೆ ಹೇಳಿದರೆ, ಅವರು ತಮಗೆ ಅಪಮಾನವಾದಂತೆ ಭಾವಿಸುತ್ತಾರೆ. ತನ್ನಲ್ಲಿ ಅಯ್ಯೋ ಪಾಪ ಎನ್ನುವ ಗುಣವಿಲ್ಲ ಎಂದು ತಮ್ಮನ್ನು ಖಳರನ್ನಾಗಿ ನೋಡಿದರೆಂದು ಅವರಿಗೆ ಕೋಪ ಬರುತ್ತದೆ. ಅದಕ್ಕೆ, “ನಿನ್ನಿಂದ ನಾನು ಅವರಿಂದ ಬೈಯಿಸಿಕೊಳ್ಳಬೇಕು. ಅನ್ನಿಸಿಕೊಳ್ಳಬೇಕು” ಎಂದು ಮತ್ತೆ ಮಗುವಿಗೇ ಅನ್ನುತ್ತಾ ಶಿಕ್ಷೆಯನ್ನು ಮುಂದುವರಿಸುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ. ನೋಡಿ, ಇಂಥಾ ಮಾದರಿಗಳನ್ನೆಲ್ಲಾ ಗಂಭೀರವಾಗಿ ಗಮನಿಸಿ.

ಕೋಪ ಬಂದಾಗ ಕೆಲವರು ಹೀಗೆ ಹೊಡೆಯುವುದು ಸಹಜ ಎಂದು ಸುಮ್ಮನಾಗಬೇಡಿ. ಬೇರೆಯವರನ್ನು ಎಷ್ಟು ಗಮನಿಸುತ್ತೇವೆಯೋ ಅದಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ನಾವು ಗಮನಿಸಿಕೊಳ್ಳೋಣ. ಮನಶಾಸ್ತ್ರವು ತನ್ನ ವಿಷಯ ಸ್ವಭಾವದ ಅನುಗುಣವಾಗಿ ಶಿಸ್ತಿನಿಂದ ಅಳವಡಿಸಿಕೊಳ್ಳುವ ಒಂದು ನೈತಿಕವಾದ ಗುಣವಿದೆ. ಅದೇನೆಂದರೆ ಸಮಾಜವು ಏನೆಲ್ಲಾ ಹೇಳಿ ಒಂದು ವ್ಯಕ್ತಿಯನ್ನು ಖಂಡಿಸಿದರೂ, ಮನಶಾಸ್ತ್ರವು ಅವನ ಗುಣ ನಡವಳಿಕೆಗೆ ಕಾರಣವನ್ನು ನೋಡುವ ಕಾಳಜಿಯನ್ನು ವ್ಯಕ್ತಪಡಿಸುತ್ತದೆ ಮತ್ತು ಕರುಣೆಯಿಂದ ಕಾಣುತ್ತದೆ.

ರೋಗವು ಯಾವುದೇ ಕಾರಣದಿಂದ ಬಂದಿದ್ದಾದರೂ ವೈದ್ಯನು ತನ್ನ ರೋಗಿಯನ್ನು ಉಪಚರಿಸುವ ನೈತಿಕತೆ ಅದು. ವ್ಯಕ್ತಿಯ ವ್ಯಕ್ತಿಗತ ವಿಷಯಗಳನ್ನು ತಿಳಿಯುವ ಮನಶಾಸ್ತ್ರಜ್ಞನಿಗೆ ಗೋಪ್ಯತೆಯನ್ನು ಕಾಪಾಡುವುದೂ ಕೂಡಾ ನೈತಿಕ ಹೊಣೆಗಾರಿಕೆ. ಇದು ಕನ್ಫೆಶನ್ ಬಾಕ್ಸಲ್ಲಿ ಚರ್ಚಿನ ಪಾದ್ರಿಯು ತಾನು ಕೇಳುವ ವ್ಯಕ್ತಿಯ ಪಾಪ ನಿವೇದನೆಯ ಗೋಪ್ಯತೆಯನ್ನು ಕಾಪಾಡುವ ನೈತಿಕ ಕರ್ತವ್ಯದಂತೆ.

ಅದೇ ರೀತಿಯಲ್ಲಿ ನೋಡಿದರೆ, ನಾವು ತಿಳಿಯುತ್ತಿದ್ದ ವಿಷಯದಲ್ಲಿ ಮಗುವು ಎಷ್ಟರಮಟ್ಟಿಗೆ ಬಲಿಪಶುವೋ, ಆ ಪೋಷಕರು ಮತ್ತು ಶಿಕ್ಷಕರೂ ಕೂಡಾ ಮತ್ತೊಂದು ರೀತಿಯ ಬಲಿಪಶುಗಳು. ಅವರ ಇಂತಹ ಮಾನಸಿಕ ಸಮಸ್ಯೆಗಳ ಸುಳುಹುಗಳನ್ನು ಅವರ ಪೋಷಕರು ಮತ್ತು ಶಿಕ್ಷಕರು ಗುರುತಿಸದೇ, ಅದಕ್ಕೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡದೇ ಬಿಟ್ಟದ್ದು ಹೀಗೆ ಎಲ್ಲೆಲ್ಲಿ ಅವಕಾಶಗಳು ಸಿಗುವುದೋ ಅಲ್ಲೆಲ್ಲಾ ಪ್ರತಿಫಲಿಸುತ್ತಿರುತ್ತದೆ.

ಹಾಗೆಯೇ ಇಂತಹ ಆಕ್ರಮಣಕ್ಕೆ ಒಳಗಾಗುವ ಮಗುವಿನ ಮನೋಭಾವ ಅಥವಾ ಸ್ವಭಾವವೂ ಕೂಡಾ ಇಂಥಾ ಆಕ್ರಮಣಗಳ ಪ್ರತಿಫಲವಾಗಿಯೇ ರೂಪುಗೊಳ್ಳುತ್ತಿರುತ್ತದೆ. ಒಂದೋ ಭಯದಿಂದ ಖಿನ್ನತೆಗೆ ಜಾರುತ್ತದೆ ಅಥವಾ ಅದೂ ಕೂಡಾ ಆಕ್ರಮಣಕಾರಿಯಾಗಿ ರೂಪುಗೊಳ್ಳುತ್ತದೆ. ಬರೆಗಳನ್ನು ಮೂಡಿಸಿಕೊಳ್ಳುವ ಮಗುವಿನ ಖಾಲಿಸ್ಲೇಟಿನ ಮನಸ್ಸಿನಲ್ಲಿ ಪೋಷಕರು ಮತ್ತು ಶಿಕ್ಷಕರು ಶಾಶ್ವತವಾಗಿ ಏನೇನೆಲ್ಲಾ ಬರೆದಿರುತ್ತಾರೆಂದು ಅವರಿಗೂ ಗೊತ್ತಿರುವುದಿಲ್ಲ, ಮಗುವಿಗೂ ಗೊತ್ತಿರುವುದಿಲ್ಲ.

ಇಂತಹ ಆಕ್ರಮಣಕಾರಿ ಪ್ರವೃತ್ತಿಯವರಿಗೆ ಯಾರಾದರೂ ಬಲಿಪಶು ಬೇಕಾಗಿರುತ್ತದೆ. ಈ ಪ್ರವೃತ್ತಿಯನ್ನು ಒಂದು ಸಾಂದರ್ಭಿಕ ಪ್ರತಿಕ್ರಿಯೆ ಎಂಬಷ್ಟು ಸಹಜವಾಗಿ ನೋಡಲಾಗದು. ಆಕ್ರಮಣದಾನಂತರ ವ್ಯಕ್ತಿ ಆಕ್ರಮಣಕಾರಿಯಾಗಿ ವರ್ತಿಸಿದ ನಂತರ ಅವರಲ್ಲಿ ಉಂಟಾಗುವ ಕ್ಷೋಭೆ ಮತ್ತು ತಲ್ಲಣಗಳು ನಿಜಕ್ಕೂ ಅವರ್ಣನೀಯ. ಕೆಲವೊಮ್ಮೆ ಆಕ್ರಮಣಕ್ಕೊಳಗಾದವರ ಮೇಲೆ ಕನಿಕರ ಮೂಡುತ್ತದೆ. ತಾನು ಹೀಗೆ ಮಾಡಬಾರದಿತ್ತು ಎನಿಸುತ್ತದೆ. ಮತ್ತೆ ಕೆಲವೊಮ್ಮೆ ತಾನು ಮಾಡಿದ್ದು ಸರಿ ಎಂದುಕೊಳ್ಳುವುದಕ್ಕಿಂತ ಅವರ ಕ್ರಿಯೆಗೆ ತನ್ನ ಪ್ರತಿಕ್ರಿಯೆ ಆಯ್ತೇ ಹೊರತು ನಾನಾಗಿ ಹೀಗೆ ಮಾಡಲಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಮಗುವಿನ ವಿಷಯದಲ್ಲಿ ಏಕಮುಖ ಆಕ್ರಮಣವಾಗುತ್ತದೆ. ಆದರೆ ಮಗುವಲ್ಲದೇ ಸಮವಯಸ್ಕರೋ ಅಥವಾ ಇತರರೋ ಆಗಿದ್ದರೆ ಪ್ರತ್ಯಾಕ್ರಮಣವಾಗುವ ಸಂಭವವೂ ಉಂಟು. ಆಗ ಉಂಟಾಗುವ ಮನೋಭಾವಗಳು ಇನ್ನೂ ಸಂಕೀರ್ಣ. ಏನೇ ಆದರೂ ಕ್ಷಮೆಯನ್ನು ಕೇಳುವುದೋ, ಇನ್ನೊಮ್ಮೆ ಹೀಗಾಗದಿರುವಂತೆ ನೋಡಿಕೊಳ್ಳುತ್ತೇನೆ ಎಂದು ರಾಜಿ ಮಾಡಿಕೊಂಡು ಸಮಾಧಾನ ಮಾಡಿಕೊಳ್ಳುವುದೋ ಅಪರೂಪದ ಪ್ರಕರಣಗಳು. ಸಾಮಾನ್ಯವಾಗಿ ಈ ಆಕ್ರಮಣ ಪ್ರವೃತ್ತಿಯ ಸಮಸ್ಯೆಯುಳ್ಳವರು ಸಮರ್ಥಿಸಿಕೊಳ್ಳಲೇ ಹಾತೊರೆಯುವರು.

ಉನ್ಮತ್ತತೆಯ ತೃಪ್ತಿ

ಹಿಂಸಾರತಿ ಅಥವಾ ಕ್ರೌರ್ಯಾಮೋದ ಅಥವಾ ಸ್ಯಾಡಿಸಂನಲ್ಲಿ ಹಿಂಸೆಯನ್ನು ಕೊಟ್ಟಾದ ಮೇಲೆ ಅಥವಾ ಕ್ರೌರ್ಯವನ್ನು ಪ್ರದರ್ಶಿಸಿದ ಮೇಲೆ ಅವರು ಆನಂದವನ್ನು ಪಡೆಯುತ್ತಾರೆಂದೇ ಅಂದುಕೊಳ್ಳುವಷ್ಟಿಲ್ಲ. ಅದು ಯಾವುದೇ ಭಾವವಾಗಿರಬಹುದು. ಅದ್ಯಾವುದೋ ಒಂದು ಮಾನಸಿಕವಾಗಿ ದೊರಕಬೇಕು. ಅದನ್ನು ತೃಪ್ತಿ ಎನ್ನುಬಹುದು. ಉನ್ಮತ್ತತೆಯಿಂದ ದೊರಕುವುದು ಏನು ಎಂದರೆ ಸಾಮಾನ್ಯವಾಗಿ ಸಂತೋಷ ಎಂದುಬಿಡುತ್ತೇವೆ. ಹಾಗಾಗಿ ಸ್ಯಾಡಿಸಂನಲ್ಲಿಯೂ ಕ್ರೌರ್ಯದಿಂದ ಸಂತೋಷಪಡುವವರು ಎಂದು ಸಾಮಾನ್ಯೀಕರಿಸಿಬಿಡುತ್ತೇವೆ. ಆದರೆ ಅದು ಹಾಗೇನೂ ಇಲ್ಲ. ಸಾಮಾನ್ಯ ಸ್ಯಾಡಿಸ್ಟ್ ಗಳೂ ಸಿನಿಮಾಗಳಲ್ಲಿ ಸೈಕೋಪಾತ್‍ಗಳಂತೆ ಹಿಂಸೆಕೊಟ್ಟು ಗಹಗಹಿಸಿ ನಗುತ್ತಿರುತ್ತಾರೆ ಎಂದೇನೂ ಅಂದುಕೊಳ್ಳುವುದು ಬೇಡ.

ಅಳಬಹುದು, ನಗಬಹುದು, ಮಾದಕತೆಯನ್ನು ಅನುಭವಿಸಬಹುದು, ಅವೇನೂ ಇಲ್ಲದೇ ಕುತೂಹಲದಿಂದ ಏನಾಗುತ್ತದೆ ಎಂದು ಕಾಯಬಹುದು, ತಾನೇ ನೋವನ್ನು ಅನುಭವಿಸಬಹುದು; ಹೀಗೆ ಏನೋ ಒಂದು ಬೇಕಾಗಿರುತ್ತದೆ. ಅದೇನು ಬೇಕಾಗಿದೆಯೋ ಅದು ಅವರಿಗೇ ಗೊತ್ತಿರುವುದಿಲ್ಲ. ಅದೊಂದು ರೀತಿಯ ಉನ್ಮತ್ತತೆ. ಮಿತಿಮೀರಿದ ಉನ್ಮತ್ತತೆ. ಒಬ್ಬರಿಗೆ ಆಕ್ರಮಣ ಮಾಡಿ ಗೋಳಿಡುತ್ತಿರುವುದರಲ್ಲಿ ತೃಪ್ತಿಯಾದರೆ, ಮತ್ತೊಬ್ಬರಿಗೆ ಆಕ್ರಮಣ ಮಾಡಿ ತಮಗೇ ಗಾಯಗೊಳಿಸಿಕೊಳ್ಳುವುದರಲ್ಲಿ ತೃಪ್ತಿ. ಇನ್ನೂ ಕೆಲವರಿಗೆ ತಾವು ಮಾಡಿದ ಆಕ್ರಮಣದಿಂದಾಗಿ ಅಥವಾ ಅನಾಹುತಕಾರಿ ಕೆಲಸಗಳಿಂದ ಏನೇನೆಲ್ಲಾ ಆಗುತ್ತಿದೆ ಎಂದು ಗುಟ್ಟಾಗಿ ಗಮನಿಸುತ್ತಿರುವುದರಲ್ಲಿ, ಅವನ್ನು ಅನುಸರಿಸುವುದರಲ್ಲಿ ತೃಪ್ತಿ.

ಈ ಸ್ಯಾಡಿಸಂ ಅಥವಾ ಹಿಂಸಾರತಿ ಎನ್ನುವುದು ದಿಢೀರನೆ ಯಾರೋ ಒಬ್ಬರಲ್ಲಿ ಉಂಟಾಗಿಬಿಡುವುದಲ್ಲ, ಅಥವಾ ಸ್ವಯಂಕೃತ ಅಪರಾಧದ ಫಲವಾಗಿ ಮನುಷ್ಯನೊಬ್ಬನಲ್ಲಿರುವ ಕೆಟ್ಟತನವಲ್ಲ. ಸಣ್ಣ ಮಗುವಾಗಿದ್ದಾಗಿನಿಂದಲೂ ವಯಸ್ಕನಾಗುವವರೆಗೂ ಪ್ರಕ್ರಿಯೆಯಾಗಿ ರೂಪುಗೊಂಡಿರುವ ಮಾನಸಿಕ ಸಮಸ್ಯೆ ಇದು ಎಂದು ಸ್ಪಷ್ಟಪಡಿಸಲು ಹೆಣಗುತ್ತಿರುವುದು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version