ಅಂತರಂಗ

ಅರಿಮೆಯ ಅರಿವಿರಲಿ-39 : ಉದ್ಧಟತನ ಪ್ರವೃತ್ತಿ

Published

on

  • ಯೋಗೇಶ್ ಮಾಸ್ಟರ್

ಅಪರಾಧ

ಪರಾಧ ಎನ್ನುವ ವ್ಯಾಖ್ಯಾನವೇ ನಮ್ಮ ತಿಳುವಳಿಕೆಯ ಕೊರತೆಯನ್ನು ತೋರಿಸುತ್ತದೆ. ಸಾಮಾನ್ಯವಾಗಿ “ಸಾರ್ವಜನಿಕ ಹಿತಾಸಕ್ತಿಗೆ ಘಾಸಿಗೊಳಿಸುವ ಮತ್ತು ಕಾನೂನುಬಾಹಿರವಾದ ಶಿಕ್ಷಾರ್ಹ ಕೃತ್ಯಗಳನ್ನು ಅಪರಾಧ” ಎಂದು ವಿವರಿಸುತ್ತಾರೆ. ಸರಳ ಹೇಳಿಕೆಯಲ್ಲಿ ‘ಗುರುತರವಾದ, ಗಂಭೀರವಾದ ಮತ್ತು ಶಿಕ್ಷಾರ್ಹ ಕೃತ್ಯಗಳು’ ಎಂಬುದೇ ಅದರ ಮೇಲಿನ ಒತ್ತು. ಆದರೆ ಗುರುತರವಾದ ಮತ್ತು ಗಂಭೀರವಾದ ಎಂಬ ಪರಿಗಣನೆಗೆ ಬರುವ ಕೃತ್ಯಗಳು ಯಾವವು? ಯಾವುದನ್ನು ಹಾಗೆ ಗುರುತಿಸುತ್ತೀರಿ?
ಕಾನೂನು ಬಾಹಿರ ಕೃತ್ಯಗಳು ಎಂದು ಯಾವುದನ್ನು ಅಪರಾಧ ಎಂದು ಕರೆಯುತ್ತೇವೆಯೋ ಅದಕ್ಕಿಂತ ಮಿಗಿಲಾದ ಅನೇಕ ಅಪರಾಧಗಳು ಸಾಮಾನ್ಯವಾಗಿದ್ದು ಅವನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸಲಾಗುವುದೇ ಇಲ್ಲ.

ಅದರಲ್ಲೂ ಅಪರಾಧಿಗಳನ್ನಾಗಿ ರೂಪಿಸುವಂತಹ ಕೃತ್ಯವು ಇನ್ನೂ ಗುರುತರವಾದದ್ದು ಮತ್ತು ಗಂಭೀರವಾದದ್ದಾದರೂ ಕೂಡಾ ಅವುಗಳನ್ನು ಅಪರಾಧ ಎಂದು ಗುರುತಿಸುವುದಿಲ್ಲ ಹಾಗೂ ಅವನ್ನು ಮಾಡುವವರನ್ನು ಅಪರಾಧಿಗಳು ಎಂದು ಕರೆಯುವುದೇ ಇಲ್ಲ. ಮೂರು ನೆಲೆಗಳಲ್ಲಿ ಅಪರಾಧಗಳಾಗುವುದನ್ನು ಗುರುತಿಸೋಣ. ವ್ಯಕ್ತಿಗತ ಅಥವಾ ವೈಯಕ್ತಿಕ, ಸಾಮಾಜಿಕ ಮತ್ತು ಕಾನೂನಾತ್ಮಕ ಎಂಬುವೇ ಆ ಮೂರು ನೆಲೆಗಳು. ಈ ಮೂರೂ ನೆಲೆಗಳಲ್ಲಿ ಉಂಟಾಗುವ ಅಪರಾಧಗಳಿಗೆ ಅನೇಕ ಕಾರಣಗಳು ಮತ್ತು ಪ್ರಭಾವಗಳು ಇರುತ್ತವೆ. ಅಪರಾಧಿ ಎಂದು ಗುರುತು ಹಚ್ಚಲ್ಪಡದಿದ್ದರೂ ಅಥವಾ ತಾವು ತಮ್ಮನ್ನು ಅಪರಾಧಿ ಎಂದು ಗುರುತಿಸಿಕೊಳ್ಳದಿದ್ದರೂ ಅವರಿಂದ ಅಪರಾಧಗಳು ನಡೆಯುತ್ತಲೇ ಇರುತ್ತವೆ.

ನಿರ್ದೇಶಿತ ಮತ್ತು ಉದ್ದೇಶಿತ ನೈತಿಕತೆಯ ಉಲ್ಲಂಘನೆ, ಆಕಸ್ಮಿಕವಾಗಿ ಘಟಿಸುವಂತವು, ಯಾರಿಂದಲೋ ಅಥವಾ ಯಾವುದರಿಂದಲೋ ಪ್ರೇರಿತ ಎಂದೋ, ಯಾವುದೇ ಬಗೆಯ ಉನ್ಮತ್ತತೆಯಿಂದಲೋ, ಉದ್ದೇಶಿತವಾಗಿ ಅಥವಾ ಅನುದ್ದೇಶಿತವಾಗಿ ಅಪಾಯಗಳನ್ನು ಎದುರಿಸುವ ಸಾಹಸಿಗಳಾಗುವುದರಿಂದಲೋ, ಸೇಡು, ಅಸೂಯೆಯಂತಹ ಶೀತಲ ಮನಸ್ಥಿತಿಯ ಗಾಢ ಪರಿಣಾಮದಿಂದಲೋ ಅಪರಾಧಗಳಾಗುತ್ತವೆ.ಇನ್ನೂ ಬಹುಪಾಲು ಮಕ್ಕಳಿಗೆ ಮುಂಚಿನಿಂದಲೂ ಇವನು ಹೀಗೆ, ಇವನು ಈ ರೀತಿಯ ಹುಡುಗ ಎಂದು ಹಣೆಪಟ್ಟಿ ಕಟ್ಟುವುದರಿಂದಲೂ ಅಪರಾಧಿಯಾಗಿ ರೂಪುಗೊಳ್ಳುತ್ತಿರುತ್ತಾರೆ.

ವೈಯಕ್ತಿಕವಾಗಿ ಅನಿಯಂತ್ರಿತ ವರ್ತನೆಗಳ ಸಮಸ್ಯೆ (ಅಬ್ಸೆಸ್ಸಿವ್ ಕಂಪಸ್ಲಿವ್ ಡಿಸಾರ್ಡರ್), ಉದ್ಧಟತನದ ಸಮಸ್ಯೆಗಳು ಮತ್ತು ಸಮಾಜ ವಿರೋಧಿ ವರ್ತನೆಗಳ ಸಮಸ್ಯೆ ಇವುಗಳು ಕಂಡುಬಂದಲ್ಲಿ ಆ ವ್ಯಕ್ತಿಗೆ ಚಿಕಿತ್ಸೆ ನೀಡಬೇಕು. ಹಾಗೆಯೇ ಸಾಮುದಾಯಕ ಅಥವಾ ಸಾಮಾಜಿಕ ಚಿಕಿತ್ಸೆಯನ್ನೂ ನೀಡಬೇಕು.

ಯಾರು ಮೇಲಿಂದ ಮೇಲೆ ಸಮಾಜ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದು, ಸಾಮಾಜಿಕ ಕ್ರಮಗಳನ್ನು ಭಂಗ ಮಾಡುತ್ತಾ, ಉದ್ಧಟನದಿಂದ ಮತ್ತು ಆಗ್ರಹದಿಂದ ತಮ್ಮ ಕೆಲಸಗಳ ಮೂಲಕ ಇತರ ನಾಗರಿಕರಿಗೆ ಅಥವಾ ತನ್ನೊಂದಿಗೆ ಬಾಳುತ್ತಿರುವ ಸಹಜೀವಿಗಳಿಗೆ ಕಿರುಕುಳ ಕೊಡುತ್ತಿರುತ್ತಾರೋ ಅವರನ್ನು ಗುರುತಿಸಬೇಕು. ಇದಾಗ ಬೇಕಾಗಿರುವುದು ದೊಡ್ಡವರಾದ ಮೇಲೆ ಎನ್ನುವುದು ತೀರಾ ತಡವಾದಂತೆ. ಮಕ್ಕಳಲ್ಲೇ ಗುರುತಿಸಬೇಕು.

ಉದ್ಧಟತನ ಮತ್ತು ಅನಿಯಂತ್ರಿತ ವರ್ತನೆಗಳ ಸಮಸ್ಯೆಗಳು ಒಟ್ಟೊಟ್ಟಿಗೆ ತಮ್ಮ ಕೆಲಸವನ್ನು ಮಾಡುತ್ತಿರುತ್ತವೆ. ಒಬ್ಬ ವ್ಯಕ್ತಿಯ ಅನಿಯಂತ್ರಿತ ವರ್ತನೆಗಳು ಅವನ ಸಹಜೀವಿಗಳಿಗೆ ಅಥವಾ ಸಮಾಜಕ್ಕೆ ಅನಪೇಕ್ಷಿತ ವರ್ತನೆಗಳಾಗಿವೆ ಎಂದರೆ ಅಲ್ಲಿ ಎಚ್ಚೆತ್ತುಕೊಳ್ಳಬೇಕು. ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಈ ಉದ್ಧಟತನ ವರ್ತನೆ ಸಮಸ್ಯೆ ಎಲ್ಲಾ ದೇಶಗಳಲ್ಲೂ, ಎಲ್ಲಾ ಕಾಲಗಳಲ್ಲೂ ಕಾಡುತ್ತಿರುವಂತಹ ಸಾಮಾನ್ಯ ಸಮಸ್ಯೆಯೇ ಆಗಿದೆ. ಈ ಸಮಸ್ಯೆ ಇರುವಂತಹ ಮಕ್ಕಳು ಬೆಳೆದಂತೆಲ್ಲಾ ಬಹುಪಾಲು ಸಮಾಜ ವಿರೋಧದ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಅವರ ಮೊದಲ ಲಕ್ಷಣಗಳೆಂದರೆ ಅಶಿಸ್ತಿನ ಜೀವನ ಶೈಲಿಯಿಂದಾಗಿ ಆರ್ಥಿಕ ಮುಗ್ಗಟ್ಟುಗಳನ್ನು ಹೊಂದುತ್ತಾರೆ.

ಕೊರತೆಯ ಒತ್ತಡ ಮತ್ತು ಅದನ್ನು ನೀಗಿಸಿಕೊಳ್ಳಲು ದಾರಿ ತೋರದಿರುವುದು ಅವರ ಮನಸ್ಸನ್ನು ಕೆರಳಿಸುತ್ತಿರುತ್ತದೆ. ಅದಕ್ಕೆ ತಾವೇ ಕಾರಣ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿರದ ಕಾರಣ ಆ ಸಿಟ್ಟು ಮತ್ತು ಸೆಡವನ್ನು ಬೇರೆ ಯಾವುದ್ಯಾವುದೋ ರೀತಿಗಳಲ್ಲಿ ತೋರ್ಪಡಿಸಲು ಹಾತೊರೆಯುತ್ತಿರುತ್ತಾರೆ. ಗುಂಪುಗಲಭೆಗಳು ಅವರಿಗೆ ಒಳ್ಳೆಯ ವೇದಿಕೆಯಾಗುತ್ತದೆ.

ಉದ್ಧಟತನದ ಮಕ್ಕಳು ಮತ್ತು ಹದಿಹರೆಯದವರು ತಮಗೆ ಒಳ್ಳೆಯದು ಅಥವಾ ಬೆಳವಣಿಗೆಗೆ ಪೂರಕವಾಗಿರುವುದನ್ನು ಕುಟುಂಬ ಮತ್ತು ಸಮಾಜವು ಕೊಡುತ್ತಿದ್ದರೂ ತಮಗಿರುವ ಸಮಸ್ಯೆಯ ಕಾರಣದಿಂದಾಗಿ ಅದನ್ನು ನಿರಾಕರಿಸುತ್ತಿರುತ್ತಾರೆ. ಇದಕ್ಕೆ ಹಟಮಾರಿತನ ಮತ್ತು ಉದ್ಧಟನ ಎರಡೂ ಆಪ್ತಗೆಳೆಯರಾಗಿರುತ್ತಾರೆ. ಹಟಮಾರಿತನವು ಮೂಲ ಮಾನಸಿಕ ಸ್ಥಿತಿಯಾಗಿದ್ದರೆ, ಉದ್ಧಟತನವು ಅದನ್ನು ಅಭಿವ್ಯಕ್ತಿಸುವ ಪ್ರಕಟಣೆಯಾಗಿರುತ್ತದೆ.

ಮಕ್ಕಳಾಗಿದ್ದಾಗಲೂ ಇವರನ್ನು ನಿಭಾಯಿಸುವುದು ಬರಿಯ ಭಾವನಾತ್ಮಕ ಮತ್ತು ಸಾಮಾಜಿಕ ಸಮಸ್ಯೆ ಮಾತ್ರವಲ್ಲ. ಆರ್ಥಿಕವಾಗಿಯೂ ಕೂಡಾ ಮನೆಯವರಿಗೆ ಒತ್ತಡವಿರುತ್ತದೆ. ಕುಟುಂಬದ ಸೀಮಿತ ಸಂಪನ್ಮೂಲಗಳ ಪರಿವೇ ಇಲ್ಲದೇ ಈ ಬಗೆಯ ಮಕ್ಕಳು ದೊಡ್ಡ ದೊಡ್ಡ ಬಯಕೆಯ ಒತ್ತಡಗಳನ್ನು ಮನೆಯವರ ಮೇಲೆ ಹೇರುವ ಕಾರಣದಿಂದ ಅವರಲ್ಲಿ ಸಂಘರ್ಷಗಳು ಸಾಮಾನ್ಯವಾಗಿರುತ್ತದೆ. ಈ ಮಕ್ಕಳನ್ನು ತೃಪ್ತಿ ಪಡಿಸುವುದು ಕಷ್ಟ ಸಾಧ್ಯ. ಏಕೆಂದರೆ ಇವರ ತೃಪ್ತಿಯು ನಿಜವಾದ ಅಗತ್ಯದ ಅಥವಾ ಕೊರತೆಯ ಮೇಲೆ ಆಧರಿತವಾಗಿರದೇ ಮಾನಸಿಕವಾದ ಸಮಸ್ಯೆಯಾಗಿರುತ್ತದೆ.

ಆದ್ದರಿಂದ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ತೋರುವ ಈ ಉದ್ಧಟತನದ ವರ್ತನೆಗಳ ಸಮಸ್ಯೆಗೆ ಬರಿಯ ಮಾನಸಿಕ ಚಿಕಿತ್ಸಾಲಯಗಳು ಮಾತ್ರವಲ್ಲದೇ ಸಾಮಾಜಿಕ ಸಂಸ್ಥೆಗಳು, ಶಾಲೆಗಳು, ಆರಕ್ಷಕ ವ್ಯವಸ್ಥೆ, ಅಪರಾಧ ನಿಯಂತ್ರಣ ಕಾನೂನು ವ್ಯವಸ್ಥೆ, ಮೊಟ್ಟ ಮೊದಲನೆಯದಾಗಿ ಕುಟುಂಬಗಳು ಒಟ್ಟಾಗಿ ಯೋಜಿತವಾಗಿ ಕೆಲಸ ಮಾಡಬೇಕು.

ಉಲ್ಲಂಘನೆ ಮತ್ತು ಅತಿಕ್ರಮಣ

ಉದ್ಧಟತನದ ವರ್ತನೆಗಳ ಸಮಸ್ಯೆ ಇರುವ ಮಕ್ಕಳನ್ನು ಬಹುಬೇಗ ಗುರುತಿಸಬಹುದು. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಯಾವುದನ್ನು ಮಾಡಬಾರದು ಎಂದು ಅಲ್ಲಿ ನಿಯಮವನ್ನು ಮಾಡಿರುತ್ತಾರೋ ಅಲ್ಲಿ ಬೇಕೆಂದೇ ಅದನ್ನು ಮಾಡುವುದು. ಇಲ್ಲಿ ಉಗುಳಬೇಡಿ ಎಂದು ಅಲ್ಲೊಂದು ಫಲಕವಿದ್ದರೆ ಬಾರದಿರುವ ಎಂಜಲ್ಲನ್ನು ತಂದುಕೊಂಡು ಕ್ಯಾಕರಿಸಿ ಉಗುಳಿ ಖುಷಿಪಡುವುದು. ಇಲ್ಲಿ ಗಲಾಟೆ ಮಾಡಬಾರದು ಅಥವಾ ನಿಶ್ಶಬ್ಧತೆಯನ್ನು ಕಾಪಾಡಿ ಎಂದಿದ್ದರೆ ‘ಹೋ’ ಎಂದು ಕಿರುಚುವುದು. ವಸ್ತು ಸಂಗ್ರಹಾಲಯಗಳಲ್ಲಿ ಸಂರಕ್ಷಿಸಿಟ್ಟ ವಸ್ತುಗಳನ್ನು ಹಾನಿ ಮಾಡುವುದು, ಪುರಾತತ್ವ ಸಂರಕ್ಷಿತ ಸ್ಮಾರಕಗಳ ಮೇಲೆ ಕೆತ್ತುವುದು, ವಿಗ್ರಹಗಳನ್ನು ಭಗ್ನಗೊಳಿಸುವುದು, ವಿರೂಪಗೊಳಿಸುವುದು; ಇತ್ಯಾದಿ.

ಸಾಮಾನ್ಯವಾಗಿ ಇಂತಹ ಕ್ರಿಯೆಗಳು ಕುಟುಂಬದವರೊಡನೆ ಹೋದಾಗ ಮಾಡುವುದಕ್ಕಿಂತ ಸ್ನೇಹಿತರ ಗುಂಪುಗಳೊಡನೆ ಹೋದಾಗ ಹೆಚ್ಚಾಗುತ್ತವೆ. ಶಾಲೆಗಳಲ್ಲಿ ಮಕ್ಕಳನ್ನು ಗುಂಪುಗಳಲ್ಲಿ ಹೊರಗೆ ಕರೆದುಕೊಂಡು ಹೋದಾಗ ಇಂತಹ ದುಂಡಾವರ್ತಿ ಮತ್ತು ಉಲ್ಲಂಘನೆಯ ವರ್ತನೆಗಳನ್ನು ಶಿಕ್ಷಕರು ಕಾಣುತ್ತಾರೆ. ಆದರೆ ನಮ್ಮ ಬಹುಪಾಲು ಶಿಕ್ಷಕರ ಸಮಸ್ಯೆಯೆಂದರೆ ಅದಕ್ಕೆ ಅಲ್ಲಿ ತಮ್ಮ ಪ್ರತಿಕ್ರಿಯೆಯನ್ನು ತೋರುತ್ತಾರೆಯೇ ಹೊರತು ಅಂತಹ ಮಕ್ಕಳನ್ನು ಗುರುತಿಸಿ ಮನೋವೈಜ್ಞಾನಿಕವಾದಂತಹ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವ ಅರಿವು, ಒಲವು, ಸಹನೆ ಮತ್ತು ಕಾಳಜಿ ಇಲ್ಲದಿರುವುದು.

ಮಕ್ಕಳ ಉಲ್ಲಂಘನೆ, ಅತಿಕ್ರಮ ಮತ್ತು ದುಂಡಾವರ್ತಿ ವರ್ತನೆಗಳು ಜವಾಬ್ದಾರಿ ಹೊತ್ತಿರುವ ತಮ್ಮ ನಿಂದನೆಗೆ ಕಾರಣವಾಗುತ್ತದೆ ಎಂದು ಬೈದೋ, ಹೊಡೆದೋ, ಹೆದರಿಸಿಯೋ ಸುಮ್ಮನಿರಿಸಲು ಯತ್ನಿಸುತ್ತಾರೆಯೋ ಹೊರತು ಅವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವುದೇ ಇಲ್ಲ. ನಮ್ಮ ಭಾರತದ ಮಟ್ಟಿಗಂತೂ ಇದು ರಾಷ್ಟ್ರೀಯ ಸಮಸ್ಯೆ. ಯಾವುದೇ ರೀತಿಯ ಉಲ್ಲಂಘನೆಗಳನ್ನು ಮಾಡುವಂತಹ ಮನಸ್ಥಿತಿಯಿರುವವರು ಸಮಾನ ಮನಸ್ಥಿತಿಯ ಮಂದಿಯ ಗುಂಪುಗಳಲ್ಲಿ ಗರಿಗೆದರುತ್ತಾರೆ. ಶಕ್ತಿಪಡೆಯುತ್ತಾರೆ. ಸುಂದರವಾಗಿರುವ ಸಂರಕ್ಷಿತ ಐತಿಹಾಸಿಕ ಸ್ಮಾರಕಗಳನ್ನು ಹಾಳುಗೆಡವುವರು ಇಂತವರೇ.

ವಿಗ್ರಹವೊಂದರ ಮೊನಚು ನಾಸಿಕದ ಸೌಂದರ್ಯವನ್ನು ಕಲ್ಲಿಂದ ಬಡಿದು ಚಪ್ಪೆ ಮೂಗು ಮಾಡಿ ವಿರೂಪಗೊಳಿಸುವ ಈ ಮಂದಿಗೆ ರಸಿಕತನವಿರುವುದಿಲ್ಲ. ಸೌಂದರ್ಯವನ್ನು ಗ್ರಹಿಸುವ ಸ್ವಭಾವವಿರುವುದಿಲ್ಲ. ರಸಗ್ರಹಣದ ತರಬೇತಿ ಇರುವುದಿಲ್ಲ. ಪುರಾತತ್ವ ಪ್ರದೇಶಗಳಿಗೆ ಹೋದಾಗ ಅಲ್ಲಿನ ಸ್ಮಾರಕಗಳ ಮಧ್ಯೆ ನಡೆದಾಡುವಾಗ ಆವರಿಸುವ ಹಳತರ ಗಮಲು ಅವರಿಗೆಂದೂ ವಾಸನೆಯಾಗುವುದೇ ಇಲ್ಲ. ಇವೆಲ್ಲಾ ಉದ್ಧಟನದ ಸಮಸ್ಯೆಯೇ ಆಗಿದ್ದು ಉಲ್ಲಂಘನೆಯ ಪ್ರಕಟಣೆಗಳಾಗಿರುತ್ತವೆ. ಇದೇ ಉದ್ಧಟನವು ಅತಿಕ್ರಮಣದ ಮೂಲಕವೂ ಪ್ರಕಟಣೆಗೊಳ್ಳುತ್ತಿರುತ್ತವೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version