ಅಂತರಂಗ
ಅರಿಮೆಯ ಅರಿವಿರಲಿ-41 : ಅತಿಕ್ರಮಣ ಮತ್ತು ಆಕ್ರಮಣ ಪ್ರವೃತ್ತಿ
- ಯೋಗೇಶ್ ಮಾಸ್ಟರ್
ಪ್ರತಿಕ್ರಿಯೆಗಳಿಂದ ಹಣೆಪಟ್ಟಿಗಳು
ಹೊರಗೆ ಆಡಕ್ಕೆ ಹೋಗಿದ್ದ ಮಗುವು ಅಳುತ್ತಾ ಮನೆಗೆ ಬಂದಾಗ, ಕಾರಣ ಕೇಳಲಾಗುವುದು. ಮಗುವು ಅವನ್ಯಾರೋ ಹೊಡೆದ ಎಂದು ಹೇಳುವುದು. ಅದಕ್ಕೆ ಪೋಷಕರು ಕೊಡಬಹುದಾದ ವಿವಿಧ ಪ್ರತಿಕ್ರಿಯೆಗಳು.
- ನೀನೂ ತಿರುಗಿಸಿ ಒಂದು ಬಿಡೋದು ಬಿಟ್ಟು ಅಳುತ್ತಾ ಬಂದಿದ್ದೀಯಲ್ಲಾ. ಅಲ್ಲೇ ಒಂದು ವಾಪಸ್ಸು ಕೊಡಬೇಕಿತ್ತು.
- ಯಾರದು ಹೊಡೆದಿದ್ದು? ಯಾಕೆ ಹೊಡೆದ? ನೀನು ಏನು ಮಾಡಿದೆ? ಅಲ್ಲಿ ಯಾರೂ ಇರಲಿಲ್ಲವಾ?
- ನಡೀ ನೋಡೋಣ ಅವನು ಯಾರೋ? ಎಷ್ಟು ಧೈರ್ಯ ಅವನಿಗೆ ನಿನ್ನ ಮೇಲೆ ಕೈ ಮಾಡಕ್ಕೆ?
- ಸರಿ, ಇನ್ನೊಂದು ಸಲ ಅವನ ಜೊತೆ ಸೇರಬೇಡ. ನೀನು ಬೇರೆಯವರ ಜೊತೆ ಆಡು.
- ಅದಕ್ಕೆ ಹೇಳೋದು. ಹೋಗಬೇಡ, ಆಡಬೇಡಾಂತ. ಮನೇಲಿ ಕೂತ್ಕೊಂಡು ಓದ್ಕೊಂಡು ಬರ್ಕೊಂಡು ಇದ್ದಿದ್ದರೆ ಹೀಗಾಗ್ತಿತ್ತಾ? ಇನ್ನೊಂದು ಸಲ ಆಡಕ್ಕೆ ಹೋಗ್ಬೇಡ, ಹೋಗು ಓದ್ಕೋ ಹೋಗು.
- ನಾನು ಹೇಳಿದರೆ ಎಲ್ಲಿ ಕೇಳ್ತೀಯಾ? ಯಾಕೆ ಹೋಗಬೇಕು? ಹೋಗೋದು, ಅತ್ತುಕೊಂಡು ಬರೋದು. ಈ ಸಂಪತ್ತಿಗೆ ಆಡಕ್ಕೆ ಯಾಕೆ ಹೋಗಬೇಕು?
- ತಿರುಗಿಸಿ ಹೊಡೆಯೋಕೆ ಧೈರ್ಯ ಶಕ್ತಿ ಇದ್ದರೆ ಹೋಗಬೇಕು. ಆಡಬೇಕು. ಇಲ್ಲಾಂದ್ರೆ ಬಾಯಿಮುಚ್ಚಿಕೊಂಡು ಮನೇಲೇ ಇರಬೇಕು.
ಮಗುವಿಗೆ ತನ್ನ ಮನೆಯಲ್ಲಿ ಈ ಎಲ್ಲಾ ತರಹದ ಪ್ರತಿಕ್ರಿಯೆಗಳು ಸಿಗುವುದಿಲ್ಲ. ಯಾವುದಾದರೂ ಒಂದೆರಡು ಮಾದರಿಯ ಪ್ರತಿಕ್ರಿಯೆಗಳು ಸದಾ ಸಿಗುತ್ತಿರುತ್ತವೆ. ಈ ಪ್ರತಿಕ್ರಿಯೆಗಳೋ, ಪೋಷಕರ ಧೋರಣೆ, ಮಾನಸಿಕ ಸ್ಥಿತಿ, ಮನೋಭಾವದ ಮೇಲೆ ನಿರ್ಧರಿತವಾಗಿರುತ್ತದೆ. ಅದು ಮಗುವಿನ ಒರಟುತನವನ್ನು ಅಥವಾ ಹೇಡಿತನವನ್ನು ಅಥವಾ ಹಿಂಜರಿಕೆಯನ್ನು ಅಥವಾ ಸೇಡಿನ ಭಾವವನ್ನು ಅಥವಾ ಅಸಹಾಯಕತೆಯನ್ನು ಅಥವಾ ದೌರ್ಬಲ್ಯವನ್ನು ಅಥವಾ ಪರಾವಲಂಬಿತನವನ್ನು ಬಲಗೊಳಿಸುತ್ತಿರುತ್ತದೆ.
ಈ ಬಗೆಯ ಪ್ರತಿಕ್ರಿಯೆಗಳು ಮಗುವಿಗೆ ತನ್ನ ಬಾಲ್ಯ ಜೀವನದಲ್ಲಿ ಅದೆಷ್ಟು ಸಲ, ಅದೆಷ್ಟು ಸಂದರ್ಭಗಳಲ್ಲಿ ದೊರಕುತ್ತಿರುತ್ತದೆ. ಪ್ರತಿ ಸಲವೂ ಮಗುವಿನ ಯಾವುದೋ ಒಂದು ಮನೋಭಾವವನ್ನು ಅದು ಗಟ್ಟಿಗೊಳಿಸುತ್ತಾಬರುವ ಪ್ರಕ್ರಿಯೆಯಲ್ಲಿರುತ್ತದೆ. ಹೀಗೇ ಗುಣ ಸ್ವಭಾವಗಳು ರೂಪುಗೊಳ್ಳುವುದು. ಅದು ಗಟ್ಟಿಗೊಂಡಾಗ ಪೋಷಕರು ಹೇಳುವುದೇನು? “ಮೊದಲಿಂದಲೂ ಇವನು / ಇವಳು ಇರುವುದೇ ಹೀಗೆ.” ಅಲ್ಲಿಗೆ ಅಚ್ಚಾಯ್ತು ಹಣೆಪಟ್ಟಿ.
ಹಣೆಪಟ್ಟಿ ಬಿದ್ದಾದ ಬಳಿಕ ಅದನ್ನು ಮಗುವೂ ಕೂಡಾ ಉಳಿಸಿಕೊಳ್ಳಲು ತನಗೇ ಅರಿವಿಲ್ಲದಂತೆ ಉಳಿಸಿಕೊಳ್ಳಲು ಹೆಣಗಾಡುತ್ತಿರುತ್ತದೆ. ನೋಡಿ ಇದರ ವಿಪರ್ಯಾಸ. ಮಗುವಿನ ಮನೋಭಾವವನ್ನು ರೂಪಿಸುವಲ್ಲಿ ಹಿರಿಯರೇ ವಸ್ತುಗಳನ್ನು ಒದಗಿಸುವುದು. ನಂತರ ತಾವೇ ಇವನು / ಇವಳು ಹೀಗೆ ಎಂದು ಹಣೆಪಟ್ಟಿ ಕಟ್ಟುವುದು.
ವಾಸ್ತವವಾಗಿ ಒರಟುತನ, ಧೈರ್ಯ, ಹುಂಬತನ, ಆಕ್ರಮಣಕಾರಿ, ಭಯ, ಹಿಂಜರಿಕೆ, ಪರಾವಲಂಬನ, ಸ್ವಾವಲಂಬನ, ಮುಖೇಡಿತನ, ಹಟಮಾರಿತನ, ಸಹನೆ; ಹೀಗೆ ಎಲ್ಲಾ ಬಗೆಯ ಮನೋಭಾವಗಳೂ ಸಾಮಾನ್ಯ ಮಿಶ್ರಣದಲ್ಲಿರುತ್ತದೆ. ಆದರೆ ಹಿರಿಯರು ಪದೇಪದೇ ಕೊಡುವ ಪ್ರತಿಕ್ರಿಯೆಗಳಿಂದಾಗಿ ಯಾವುದಾದರೂ ಕೆಲವು ಮನೋಭಾವಗಳು ಅಭಿವೃದ್ಧಿ ಹೊಂದುತ್ತವೆ. ಅವುಗಳು ಗಟ್ಟಿಗೊಳ್ಳುತ್ತಾ ಸ್ವಭಾವವಾಗಿ ರೂಪುಗೊಳ್ಳುತ್ತವೆ.
ಅಹಂಕಾರವೇ ತಂದೆ, ಹಟವೇ ತಾಯಿ
ಈ ಸರಣಿಯ ಸಾಲನ್ನು ಗಮನಿಸಿ. ಹಟಮಾರಿತನ, ಉದ್ಧಟನ, ಉಲ್ಲಂಘನೆ, ಅತಿಕ್ರಮಣ, ಆಕ್ರಮಣ, ಹಿಂಸೆ, ಇವೆಲ್ಲದರಿಂದ ಪಡೆಯುವ ವಿಲಕ್ಷಣ ತೃಪ್ತಿ. ಹಟಮಾರಿತನ ಎಂಬ ತಾಯಿಯ ಮಕ್ಕಳು ಇವೆಲ್ಲಾ. ಉದ್ಧಟನ ಮತ್ತು ಉಲ್ಲಂಘನೆ ಮಾಡುವ ಮಕ್ಕಳ ಮುಂದಿನ ಹೆಜ್ಜೆಯೇ ಅತಿಕ್ರಮಣ. ಬೇರೆಯವರ ಆಟದಲ್ಲಿ, ಕೆಲಸದಲ್ಲಿ ತನಗೆ ಪ್ರವೇಶವಿರದಿದ್ದರೂ, ಅಗತ್ಯವಿರದಿದ್ದರೂ ಮಧ್ಯೆ ಪ್ರವೇಶಿಸಿ ಅವರ ಕೆಲಸ ಅಥವಾ ಆಟವನ್ನು ಹಾಳುಗೆಡವುವುದು.
ಸ್ವಲ್ಪ ಬೆಳೆದ ಮಕ್ಕಳು ತಮ್ಮ ವಯಸ್ಸಿನ ಸಾಮರ್ಥ್ಯಕ್ಕೆ ತಕ್ಕಂತೆ ಆಟಗಳನ್ನು ಆಡುವಾಗ ಅವರಿಗಿಂತ ಚಿಕ್ಕವರು ಅವರ ಆಟದಲ್ಲಿ ಭಾಗವಾಗಿರಲು ಇಷ್ಟಪಡುತ್ತಾರೆ. ಆಗ ದೊಡ್ಡ ಮಕ್ಕಳು ಸಹಜವಾಗಿ ಇಷ್ಟಪಡುವುದಿಲ್ಲ. ಆದರೆ ಸಣ್ಣ ಮಕ್ಕಳು ದೊಡ್ಡ ದನಿ ಎತ್ತಿ ಅತ್ತು ದೊಡ್ಡವರನ್ನು ಆಕರ್ಷಿಸುತ್ತಾರೆ. ಆಗ ಬಂದ ದೊಡ್ಡವರು ಅವನಿಗೆ ಆಡಕ್ಕೆ ಬರಲ್ಲ ಅಂದ್ರೆ ಹೇಳಿಕೊಡಿ ಅಂತ ಸಣ್ಣ ಮಗುವಿನ ಪರ ವಹಿಸುತ್ತಾರೆ. ಈ ದೊಡ್ಡ ಮಕ್ಕಳಿಗೋ ತಮ್ಮ ಆಟದ ಓಘ ಮತ್ತು ಓಟವನ್ನು ಕಳೆದುಕೊಳ್ಳಲು ಇಷ್ಟವಿರುವುದಿಲ್ಲ. ಚಿಕ್ಕವು ಬಂದರೆ ಸಹಜವಾಗಿ ಆಟವು ವೇಗವನ್ನು ಕಳೆದುಕೊಳ್ಳುತ್ತದೆ.
ಆದರೆ ದೊಡ್ಡವರ ಬೆಂಬಲದಿಂದ ಸಣ್ಣವರು ಗೆದ್ದರಾದರೆ ಅಲ್ಲಿಗೆ ಅತಿಕ್ರಮ ಪ್ರವೇಶದ ರೂಢಿ ಸಣ್ಣವರಿಗಾಗುತ್ತದೆ. ಅವರು ಆಟದಲ್ಲಿ ಪ್ರಾರಂಭವಾದ ಈ ಪ್ರವೇಶವನ್ನು ತಮ್ಮ ಹಕ್ಕಾಗಿ ತೆಗೆದುಕೊಂಡು ದಬ್ಬಾಳಿಕೆಗೆ ದಾರಿ ಮಾಡಿಕೊಳ್ಳುತ್ತಾರೆ. ಆಟದ್ದು ಬರಿಯ ಉದಾಹರಣೆಯಷ್ಟೇ. ಇದು ಬೇರೆಬೇರೆ ಯಾವ ಚಟುವಟಿಕೆಗಳಲ್ಲಾದರೂ ವ್ಯಕ್ತವಾಗಬಹುದು.
ಇದು ಇಲ್ಲಿಗೇ ನಿಲ್ಲುವುದಿಲ್ಲ.ಎಲ್ಲಾ ವಿಷಯಗಳಲ್ಲೂ ಹೀಗೇ ಆಗುತ್ತಿರುತ್ತದೆ. ಮನೆಯಲ್ಲಿ ಆದ ಅಭ್ಯಾಸವನ್ನು ಶಾಲೆಯಲ್ಲಿಯೂ, ತಮ್ಮ ಸ್ನೇಹಿತರ ವರ್ತುಲಗಳಲ್ಲಿಯೂ, ವಯಸ್ಕರಾದ ಮೇಲೆ ತಮ್ಮ ಸಹದ್ಯೋಗಿಗಳಲ್ಲಿಯೂ ಮುಂದುವರಿಸುತ್ತಾರೆ.
ಅವರಿಬ್ಬರೂ ಏಕೋ ಹೇಗೋ ಹತ್ತಿರವಾಗಿದ್ದಾರೆ, ಏನೋ ಮಾತಾಡಿಕೊಳ್ಳುತ್ತಾರೆ ಎಂದರೆ ಇವರಿಗೆ ತಿಳಿದುಕೊಳ್ಳುವ ಹಟ. ಸಾಧ್ಯವಾದರೆ ತಮ್ಮ ಮಾತನ್ನು, ಸಲಹೆಯನ್ನು ಧಾರಾಳವಾಗಿ ಮತ್ತು ಅಧಿಕಾರಯುತವಾಗಿ ನೀಡುವ ಚಟ.
ಒಡಹುಟ್ಟುಗಳಲ್ಲಿ ವಯಸ್ಸಿನ ಅಂತರ ತೀರಾ ಹೆಚ್ಚಾಗಿದ್ದರೆ ಇಂತಹ ಸಮಸ್ಯೆಗಳು ಹೆಚ್ಚು. ಮೂರು, ನಾಲ್ಕು ವಯಸ್ಸಿನ ಅಂತರ ಆದರ್ಶಪ್ರಾಯವಾದದ್ದು. ಸಣ್ಣ ಮಕ್ಕಳು ದೊಡ್ಡ ಮಕ್ಕಳ ಆಟದಲ್ಲಿ ನುಗ್ಗಲು ಹಟ ಮಾಡಿದಾಗ, “ಆಟಕ್ಕುಂಟು ಲೆಕ್ಕಕ್ಕಿಲ್ಲ” ಅಂತ ಸೇರಿಸಿಕೊಳ್ಳಿ ಎಂದು ಹಿರಿಯರು ಪುಸಲಾಯಿಸುತ್ತಾರೆ. ಹೌದು, ಅದನ್ನು ಮಾಡಬಹುದು. ಆದರೆ, ಎಲ್ಲಾ ಆಟಗಳಲ್ಲೂ ಅದು ಆಗದು.
ಆದ್ದರಿಂದ ಸೇರಿಸಿಕೊಳ್ಳಬೇಕಾದ ಕಡೆ ಸೇರಿಸಿಕೊಳ್ಳಲಿ, ಆಗದಿರುವಾಗ “ಬೇಡ, ನಿನಗೆ ಆ ಆಟ ಈಗ ಆಡಲು ಆಗದು. ಸ್ವಲ್ಪ ದೊಡ್ಡವನಾದ ಮೇಲೆ ಅವರ ಜೊತೆ ಆಡಬಹುದು.ಈಗ ನಾನು ನೀನು ಆಡೋಣ” ಎಂದು ವಯಸ್ಸಿಗೆ ಅನುಗುಣವಾಗಿ ಬೇರೆಯ ಆಟದ ಆಯ್ಕೆ ಮಾಡಲು ಹಿರಿಯರು ಮನವೊಲಿಸಬೇಕು. ಹಾಗೆಯೇ ಕೆಲವು ಸಮಯವನ್ನು ದೊಡ್ಡ ಮಕ್ಕಳು ತಮ್ಮ ಚಿಕ್ಕ ಸೋದರ ಅಥವಾ ಸೋದರಿಯರ ಜೊತೆಗೆ ಅವರಿಗೆ ತಕ್ಕನಾಗಿ ಆಡುವುದನ್ನೂ ಪ್ರೋತ್ಸಾಹಿಸಬೇಕು. ದೊಡ್ಡವರು ಆಟದ ಭಾಗವಾದರೆ ದೊಡ್ಡ ಮಕ್ಕಳೂ ಇದನ್ನು ಕಲಿಯುತ್ತಾರೆ.
ಒಟ್ಟಾರೆ ದೊಡ್ಡದಾಗಲಿ, ಸಣ್ಣದಾಗಲಿ ಮಗುವು ಸಲಿಲತೆ ಕಲಿಯದಿದ್ದರೆ, ಸರಿಸಿಕೊಳ್ಳುವುದನ್ನು ಕಲಿಯದೇ ಹೋದರೆ ಸದಾ ತನ್ನ ಹಟವನ್ನು ಗೆಲ್ಲಿಸಿಕೊಳ್ಳಲು ಯತ್ನಿಸುತ್ತಿರುತ್ತದೆ. ಇದರಿಂದ ಅದರ ಅಹಂಕಾರ ಬಲಿಯತೊಡಗುತ್ತದೆ. ವಯಸ್ಕರಾಗುವ ಹೊತ್ತಿಗೆ ಯಾವಾಗ ಅಹಂಕಾರವು ಬಲಿತು ಬಲಿಷ್ಟವಾಗಿರುತ್ತದೋ ಆಗ ತಮ್ಮ ಅತಿಕ್ರಮಣ ಪ್ರವೇಶವನ್ನೆಲ್ಲಾ ತಮ್ಮ ಹಕ್ಕೆಂದೇ ಪ್ರತಿಪಾದಿಸುತ್ತಾರೆ.
ತಮ್ಮ ಪ್ರವೇಶದಿಂದ ಇತರರಿಗೆ ಸಮಸ್ಯೆಯಾಗುತ್ತದೆ ಎಂದರೂ, ಅವರಿಗೆ ಬೇಸರವಾಗುತ್ತದೆ ಎಂದರೂ ಮತ್ತಷ್ಟು ಹಟದಿಂದ ಮುಂದುವರಿಯುತ್ತಾರೆ. ಇದರಿಂದ ಇತರರಿಗೆ ಹಿಂಸೆಯಾಗುತ್ತದೆ ಎಂದರೂ “ಆಗಲಿ” ಎನ್ನುತ್ತಾರೆ. ಇವರಿಂದ ಅವರಿಗೆ ಬಾಧೆ ಎನಿಸಿದರೆ ಅವರನ್ನು ಮಣಿಸಿದ್ದೇವೆ, ಗೆದ್ದಿದ್ದೇವೆ ಎಂದು ಇವರಿಗೆ ಸಂತೋಷವೇ ಆಗುತ್ತದೆ. ಮತ್ತೊಬ್ಬರನ್ನು ಅಗತ್ಯವಿರಲಿ, ಇಲ್ಲದಿರಲಿ ಮಣಿಸುವ ಗೀಳು ಅತಿಕ್ರಮಣದ, ಮತ್ತೊಬ್ಬರ ವ್ಯಕ್ತಿಗತ ವ್ಯಾಪ್ತಿಯನ್ನು ಉಲ್ಲಂಘನೆ ಮಾಡುವ ಗೀಳುರೋಗ. ಇದು ಹಿಂಸಾರತಿ ಅಥವಾ ಕ್ರೌರ್ಯಾಮೋದ ಅಥವಾ ಸ್ಯಾಡಿಸಂಗೂ ದಾರಿ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243