ಅಂತರಂಗ
ಅರಿಮೆಯ ಅರಿವಿರಲಿ-51 : ಆತ್ಮ ಸಾಕ್ಷಾತ್ಕಾರ
- ಯೋಗೇಶ್ ಮಾಸ್ಟರ್
ಮಿದುಳು ನಮ್ಮ ದೇಹದ ಎಲ್ಲಾ ಗ್ರಹಿಕೆ, ಸಂದೇಶ, ಕ್ರಿಯೆ ಮತ್ತು ಪ್ರತಿಕ್ರಿಯೆಗಳೇ ಮೊದಲಾದ ಮನಸ್ಸಿಗೆ ಮತ್ತು ವರ್ತನೆಗಳಿಗೆ ಸಂಬಂಧಪಟ್ಟ ಚಟುವಟಿಕೆಗಳ ಕೇಂದ್ರವಾಗಿದ್ದರೂ ಅದು ಮನಸಲ್ಲ ಎಂದು ಗೊತ್ತಿದೆ. ತರಗತಿಯಲ್ಲಿ ಕುಳಿತುಕೊಂಡು ಮನೆಯ ಬಗ್ಗೆ ಯೋಚಿಸುತ್ತಿದ್ದವರಿಗೆ ಎಲ್ಲಿದೆ ನಿನ್ನ ಮನಸ್ಸು ಎಂದರೆ, ಮನೆಯಲ್ಲಿದೆ ಎನ್ನುತ್ತೀರಿ. ಮನಸ್ಸೆಲ್ಲಿದೆ ಎಂದರೆ ಅದು ಯೋಚಿಸುವ ವಿಷಯವೇನು ಎಂದು ಹೇಳುತ್ತೀರಿ.
ಮ್ಯೂಸಿಕ್ ಸಿಸ್ಟಮ್ಮಿಂದ ಸಂಗೀತ ಬರುತ್ತಿದೆ. ಆದರೆ ನಿಮಗೆ ಅದು ಚೆನ್ನಾಗಿ ಗೊತ್ತಿದೆ ಮ್ಯೂಸಿಕ್ ಸಿಸ್ಟಮ್ಮೇ ಸಂಗೀತವನ್ನು ಸೃಷ್ಟಿಸಿದ್ದಲ್ಲ. ಅದೊಂದು ಉಪಕರಣ. ಅದು ಎಲ್ಲೋ ಸೃಷ್ಟಿಸಿದ ಸಂಗೀತವನ್ನು ಇಲ್ಲಿ ಹೊಮ್ಮಿಸುತ್ತಿದೆ ಎಂದು ನಿಮಗೆ ಗೊತ್ತು. ನಾವ್ಯಾರೂ ಮ್ಯೂಸಿಕ್ ಸಿಸ್ಟಮ್ಮಿಗೆ ಸಂಗೀತವೊಂದನ್ನು ಸಂಯೋಜಿಸು, ಸಾಹಿತ್ಯವನ್ನು ಬರೆ ಎಂದು ಹೇಳುವುದಿಲ್ಲ. ಹಾಗೆಯೇ ಮ್ಯೂಸಿಕ್ ಸಿಸ್ಟಮ್ ಸರಿ ಇರದಿದ್ದರೆ ಅದು ಸಂಗೀತವನ್ನು ಕೇಳಿಸುವುದಿಲ್ಲ.
ಹಾಗೆಯೇ ಮೆದುಳು ಆಲೋಚನೆಗಳ, ಭಾವನೆಗಳ ಮತ್ತು ಸಂಕಲ್ಪಗಳ ಸೃಷ್ಟಿ ಮಾಡುವ ತಯಾರಿಕಾ ಕೇಂದ್ರವಲ್ಲ. ಆದರೂ ಅದು ಅವೆಲ್ಲವನ್ನೂ ನಿರ್ವಹಿಸುತ್ತದೆ. ಆದರೆ ಮೆದುಳೆಂಬ ಉಪಕರಣವು ಸರಿಯಾಗಿ ಕೆಲಸ ಮಾಡದಿದ್ದ ಪಕ್ಷದಲ್ಲಿ, ಅಥವಾ ಅದಕ್ಕೆ ಹಾನಿಯಾದ ಸಂದರ್ಭದಲ್ಲಿ ಈ ಆಲೋಚನೆಗಳು, ಭಾವನೆಗಳು ಮತ್ತು ಸಂಕಲ್ಪಗಳೆಲ್ಲವೂ ಕೂಡಾ ಚಟುವಟಿಕೆಯಿಂದ ಪ್ರಕಟಗೊಳ್ಳಲು ಆಗುವುದಿಲ್ಲ. ತುಂಬಾ ಸರಳವಾಗಿ ವಿವರಿಸಲು ಮಿದುಳು ಹಾರ್ಡ್ ವೇರ್, ಮನಸ್ಸೆಂಬುದು ಸಾಫ್ಟ್‍ವೇರ್.
ಒಟ್ಟಾರೆ ಈ ಮನಶಾಸ್ತ್ರವೆಂದರೆ ನಮ್ಮ ಚೈತನ್ಯ, ನಮ್ಮತನ ಮತ್ತು ಮನಸ್ಸುಗಳ ಅನುಭವಗಳ, ಸಂಭವಗಳ, ಸಂಗತಿಗಳ ಕ್ರಮಬದ್ಧ ಅಧ್ಯಯನ ಎಂದು ಸ್ಥೂಲವಾಗಿ ಗ್ರಹಿಸಬಹುದು. ಮನಸ್ಸು ಎಂಬುದು ವಿವರಣೆಗೆ ಸುಲಭವಾಗಿ ಸಿಗುವಂತಹ ಪದಾರ್ಥವಲ್ಲದಿದ್ದರೂ ಕ್ರಮದಲ್ಲಿರುವ ಒಂದು ವಸ್ತು. ಅಮೂರ್ತವಾಗಿದ್ದರೂ ಇದಕ್ಕೆ ರೀತಿನೀತಿಗಳಿವೆ.ಕ್ರಿಯೆ ಪ್ರತಿಕ್ರಿಯೆಗಳಿಗೆ ಸ್ಪಂದಿಸುತ್ತದೆ. ಪ್ರಯೋಗಗಳಿಗೆ ನಿರ್ಧಿಷ್ಟವಾದ ಮತ್ತು ನಿರೀಕ್ಷಿಸಲಾಗುವ ಫಲಿತಾಂಶಗಳನ್ನು ತೋರುತ್ತದೆ.
ಅಂದರೆ ಇದು ವಿವರಣೆಗಳಿಗೆ ಎಟುಕಲಾರದ, ನಿಯಂತ್ರಣಕ್ಕೆ ಸಿಗಲಾರದ, ನಿರ್ದಿಷ್ಟ ದಿಕ್ಕಿನಲ್ಲಿ ನಡೆಸಲಾಗದ ವಿಚಿತ್ರದ ವಸ್ತುವೇನಲ್ಲ. ಮನಸ್ಸಿನ ವಿಷಯದಲ್ಲಿ ತಪ್ಪು ಪ್ರಯೋಗಗಳು, ತಪ್ಪು ಗ್ರಹಿಕೆಗಳು ಮತ್ತು ತಪ್ಪು ವಿವರಣೆಗಳನ್ನು ನಾವು ನೋಡುವುದರಲ್ಲಿ ಮನಸ್ಸಿನ ತಪ್ಪೇನೂ ಇಲ್ಲ. ಇದು ಸೂಕ್ಷ್ಮ. ಅದರಲ್ಲೇನೂ ಸಂಶಯವಿಲ್ಲ. ಎಳೆ ಎಳೆಯಾಗಿರುವ ಅದರ ಮುಖಗಳಲ್ಲಿ ಒಂದೆಳೆಯನ್ನು ಗಮನಿಸಬೇಕು. ಅದನ್ನೇ ಅಧ್ಯಯನ ಮಾಡಬೇಕು.
ನಮ್ಮದೇ ಮನಸ್ಸಿನ ಅನೇಕಾನೇಕ ಪ್ರಕಟಣೆಗಳಾದ ವರ್ತನೆಗಳು, ಪ್ರತಿವರ್ತನೆಗಳು, ಕ್ರಿಯೆ-ಪ್ರತಿಕ್ರಿಯೆಗಳು, ಸಂಕಲ್ಪಗಳು, ಆಲೋಚನೆಗಳು, ಅರಿವುಗಳು, ಅರಿಮೆಗಳು; ಹೀಗೆ ಅನೇಕಾನೇಕ ರೀತಿಗಳಲ್ಲಿ ಪ್ರಕಟವಾಗುವ ಮನಸ್ಸಿನ ಮುಖಗಳನ್ನು ಗಮನಿಸಬೇಕು, ಗ್ರಹಿಸಬೇಕು. ತಮಾಷೆ ಎಂದರೆ, ಗಮನಿಸಬೇಕಾಗಿರುವುದು, ಗಮನಕ್ಕೆ ಒಳಗಾಗಬೇಕಾಗಿವುದು, ಗ್ರಹಿಸಬೇಕಾಗಿರುವುದು, ಗ್ರಹಿಸುವಿಕೆಗೆ ಒಳಗಾಗಬೇಕಾಗಿರುವುದು, ತರಬೇತಿ ನೀಡಬೇಕಾಗಿರುವುದು, ತರಬೇತಿ ಪಡೆಯಬೇಕಾಗಿರುವುದೂ ಒಂದೇ ವಸ್ತು. ಇನ್ನೂ ಸರಳವಾಗಿ ಹೇಳುವುದಾದರೆ ನನ್ನ ನಾನೇ ಗಮನಿಸಿಕೊಂಡು, ಅರ್ಥ ಮಾಡಿಕೊಂಡು, ನನಗೆ ನಾನೇ ತರಬೇತಿಯನ್ನು ಕೊಟ್ಟುಕೊಳ್ಳಬೇಕು.
ಈ ಅರಿವು ಬಂತು, ತಂತ್ರಗಾರಿಕೆ ಸಿದ್ಧಿಸಿತು ಎಂದರೆ ಜ್ಞಾನೋದಯವಾಯಿತು ಎಂದರ್ಥ. ಆಗ ಆತ್ಮಸಾಕ್ಷಾತ್ಕಾರ ಎನ್ನುವುದು ಆಗುವುದು.
ಇದು ಯಾರೋ ವಿಶೇಷವಾದ ದೈವೀಕವಾಗಿ ಆಯ್ಕೆಯಾಗಿರುವ ಮಹಾನ್ ವ್ಯಕ್ತಿಗಳಿಗೆ, ಬಾಬಗಳಿಗೆ, ಸದ್ಗುರುಗಳಿಗೆ ಮಾತ್ರ ಆಗುವುದು ಎಂದುಕೊಳ್ಳಬೇಡಿ.
ಕಾರೊಂದನ್ನು ಚಲಾಯಿಸಲು ಕಲಿಯಬೇಕೆಂದರೆ ಜನ್ಮಜನ್ಮಾಂತರಗಳ ತಪಸ್ಸು ಮಾಡಿರಬೇಕು, ವೀರ್ಯಾಣು ಮತ್ತು ಅಂಡಾಣುಗಳಿಂದಲ್ಲದೇ ಮಂತ್ರದಿಂದಲೋ, ಮಾವಿನ ಹಣ್ಣಿನಿಂದಲೋ, ಬಿಳಿಯ ಆನೆಯೊಂದು ಗರ್ಭವನ್ನು ಪ್ರವೇಶಿಸಿಯೋ ಅಥವಾ ತಾಯಿಯು ಕನ್ಯೆಯಾಗಿಯೇ ಉಳಿದಿದ್ದು ದೇವದೂತ ಬಂದು ಕೊಟ್ಟ ಸಂದೇಶದಿಂದ ಹುಟ್ಟಿರಬೇಕು.
ಅಂತವರು ಮಾತ್ರವೇ ಕಾರು ಕಲಿಯಲು ಸಾಧ್ಯ ಎಂಬುದು ಎಷ್ಟು ಹಾಸ್ಯಾಸ್ಪದವೋ. ಅಸಾಮಾನ್ಯ ಮನುಷ್ಯರಿಗೆ ಮಾತ್ರ ಆಗುವಂತ ಜ್ಞಾನೋದಯವಿದು ಎನ್ನುವುದೂ ಕೂಡಾ ಅಷ್ಟೇ ಹಾಸ್ಯಾಸ್ಪದ. ಆತ್ಮಸಾಕ್ಷಾತ್ಕಾರ ಅಥವಾ ನಮ್ಮದೇ ಮನಸ್ಸಿನ ಬಗ್ಗೆ ನಮಗೇ ಅರಿವೆಂಬ ಈ ಜ್ಞಾನೋದಯ ಯಾರಿಗೆ ಬೇಕಾದರೂ ಆಗುತ್ತದೆ. ಇದನ್ನು ಬರೆದಿರುವ ನನಗೂ, ಓದುತ್ತಿರುವ ನಿಮಗೂ.
ಭಿನ್ನಭಿನ್ನ ಆತ್ಮಗಳು
ಆದರೆ ಎಲ್ಲಾ ವ್ಯಕ್ತಿಗಳಿಗೂ ಒಂದೇ ಬಗೆಯ ಮನಸ್ಥಿತಿಗಳು ಇರುವುದಿಲ್ಲ. ಪ್ರತಿಯೊಬ್ಬನೂ ಮತ್ತೊಬ್ಬನಿಗಿಂತ ಭಿನ್ನವಾಗಿರುತ್ತಾನೆ. ಅವನಲ್ಲಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಚಿಂತನೆಗಳಲ್ಲಿ ವ್ಯತ್ಯಾಸವಿರುತ್ತದೆ. ಪ್ರತಿಯೊಬ್ಬನೂ ಅವನದೇ ಆದ ಭಾವುಕತೆಯನ್ನು, ಪ್ರತಿಭೆ ಮತ್ತು ವಿಚಾರಗಳನ್ನು, ಜೊತೆಗೆ ಅವುಗಳನ್ನೆಲ್ಲಾ ಕ್ರಿಯಾತ್ಮಕಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತಾನೆ, ಜೊತೆಜೊತೆಗೇ ಒಯ್ಯುತ್ತಿರುತ್ತಾನೆ. ವಸ್ತು ವಿಷಯಗಳಿಗೆ ಸ್ಪಂದಿಸುವುದರಲ್ಲಿ ವ್ಯತ್ಯಾಸವಿರುತ್ತದೆ. ಕಾಲದಿಂದ ಕಾಲಕ್ಕೆ ಬದಲಾವಣೆಗಳನ್ನು ಹೊಂದುತ್ತಿರುತ್ತದೆ. ಒಬ್ಬರನ್ನು ಪ್ರಭಾವಿಸುತ್ತಿರುತ್ತಾನೆ ಮತ್ತು ಪ್ರಭಾವಕ್ಕೊಳಗಾಗುತ್ತಿರುತ್ತಾನೆ.
ಆತ್ಮಗನ್ನಡಿ
ಈಗ ನಮಗೆ ಸಧ್ಯಕ್ಕೆ ತಾಂತ್ರಿಕವಾಗಿ ಮತ್ತು ಲೌಕಿಕವಾಗಿ ಆತ್ಮಸಾಕ್ಷಾತ್ಕಾರ ಆಗಬೇಕಂದ್ರೆ ಕೆಲವು ವಿಷಯಗಳ ಬಗ್ಗೆ ಅರಿವಿರಬೇಕು. ಅವುಗಳೇನೆಂದರೆ;
- ಆತ್ಮಗೌರವ: ತನ್ನನ್ನು ತಾನು ಗೌರವದಿಂದ ಕಾಣುವುದು. ತನ್ನ ಬಗ್ಗೆ ತನಗೆ ಸದಾಭಿಪ್ರಾಯ ಇರುವುದು.
- ಆತ್ಮಸತ್ವ: ತಾನು ಮಹತ್ವವುಳ್ಳವನು, ಸಾಮರ್ಥ್ಯವುಳ್ಳವನು ಎಂಬ ಅರಿವನ್ನು ಹೊಂದಿರುವುದು. ಸುಮ್ಮನೆ ಅಂದುಕೊಳ್ಳುವುದಲ್ಲ. ಇರುವುದು ನಿಜ. ಅದನ್ನು ಕಂಡುಕೊಳ್ಳುವುದು.
- ಆತ್ಮಚಿತ್ರಣ: ತಾನು ಹೇಗಿದ್ದೇನೆ ಎಂಬುದರ ಬಗ್ಗೆ ತಾನು ನೋಡಿಕೊಳ್ಳುವುದು. ಇದರಲ್ಲಿ ದೈಹಿಕವಾಗಿ ಹೇಗೆ ಇದ್ದೇನೆಂಬ ತಿಳುವಳಿಕೆಯ ಜೊತೆಜೊತೆಗೆ ಹೇಗೆ ವರ್ತಿಸುತ್ತೇನೆ, ಪ್ರತಿಕ್ರಿಯಿಸುತ್ತೇನೆ, ಸ್ಪಂದಿಸುತ್ತೇನೆ, ಆಲೋಚಿಸುತ್ತೇನೆ ಎಂಬುದರ ಬಗ್ಗೆಯೂ ಕೂಡಾ ಗಮನಿಸುವುದು.
- ಆತ್ಮಾದರ್ಶ: ತಾನು ಹೇಗೆ ಕಾಣಿಸಬೇಕು, ಹೇಗಿರಬೇಕು, ತನ್ನ ವ್ಯಕ್ತಿತ್ವ ಹೇಗಿರಬೇಕೆಂಬ ಸ್ಪಷ್ಟ ಮಾದರಿಯನ್ನು ಹೊಂದಿರುವುದು.
- ಆತ್ಮಾಧಿಕಾರ: ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ತನ್ನ ಪಾತ್ರಗಳನ್ನು ಗುರುತಿಸಿಕೊಂಡು ಅವುಗಳಿಗೆ ಅನುಗುಣವಾದ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು ಜವಾಬ್ದಾರಿಯನ್ನು ಹೊರುವುದು.
- ತನ್ನ ವಿಶೇಷ ಗುರುತುಗಳನ್ನು ಮತ್ತು ಗುಣಗಳನ್ನು ಗುರುತಿಸಿಕೊಳ್ಳುವುದು.
ಇದನ್ನು ಓದುತ್ತಿರುವ ನೀವು ಯಾವ ವಯಸ್ಸಿನವರೇ ಆಗಿರಲಿ, ಈ ಹೊತ್ತಿನಿಂದಲೇ ಇದನ್ನು ಪ್ರಾರಂಭಿಸಬಹುದು. ಹೇ, ನನಗೆ ಎಲ್ಲಾ ಸಾಕ್ಷಾತ್ಕಾರವಾಗಿ ಹೋಗಿದೆ. ನಾನೇನೂ ನೋಡಿಕೊಳ್ಳುವಷ್ಟಿಲ್ಲ. ಈ ಲೇಖನ ಓದಿ ನನಗೆ ಈ ವಿಷಯ ತಿಳಿಯಬೇಕಿಲ್ಲ ಅಂತೇನಾದರೂ ಅನ್ನಿಸಿಬಿಟ್ಟರೆ, ನಿಮ್ಮತನದಲ್ಲಿ ಸಮಸ್ಯೆಯು ಜೀವಂತವಾಗಿ ಇದೆ ಎಂದೇ ಅರ್ಥ.
ಏಕೆಂದರೆ ಈ ತನ್ನತನದ ಸಾಕ್ಷಾತ್ಕಾರ ಅಥವಾ ಆತ್ಮಸಾಕ್ಷಾತ್ಕಾರ ಒಮ್ಮೆ ಆಗಿಬಿಟ್ಟು ಜೀವನ ಪರ್ಯಂತ ಬಂಡವಾಳವಾಗಿರುವ ಉಳಿಕೆಯನ್ನು ಬಳಸುವ ವ್ಯವಹಾರವಲ್ಲ. ಜೀವನ ಪರ್ಯಂತ ಪ್ರಕ್ರಿಯೆಯಲ್ಲಿರುವಂತದ್ದು.ಜೀವಂತವಾಗಿರುವವರೆಗೂ ವಿಕಾಸವಾಗುತ್ತಿರುತ್ತೇವೆ. ಬದಲಾವಣೆಗೆ ಒಳಗಾಗುತ್ತಿರುತ್ತೇವೆ. ಬೆಳವಣಿಗೆ ಮತ್ತು ವಿಕಾಸವೇ ಜೀವಂತಿಕೆಯ ಲಕ್ಷಣ.
ಯಾವುದು ಬೆಳೆಯುತ್ತಿಲ್ಲವೋ, ವಿಕಾಸವಾಗುತ್ತಿಲ್ಲವೋ, ಪರಿವರ್ತನೆಗಳಿಗೆ ಒಡ್ಡಿಕೊಳ್ಳುತ್ತಿಲ್ಲವೋ, ಒಗ್ಗುತ್ತಿಲ್ಲವೋ ಅವು ಚಲನೆಯಲ್ಲಿದ್ದರೂ ಶವಗಳೇ. ಹಾಗಾಗಿ ತಡವಾಗಿದ್ದರೂ ಇಲ್ಲದೇ ಹೋಗುವುದಕ್ಕಿಂತ ಉತ್ತಮ. ಆದರೆ, ಮಕ್ಕಳ ವಿಷಯದಲ್ಲಿ ನಾವು ಈ ಆತ್ಮಸಾಕ್ಷಾತ್ಕಾರದ ಪ್ರಕ್ರಿಯೆಯು ಕ್ರಮದಲ್ಲಿ ಪ್ರಾರಂಭವಾಗುವಂತೆ ನೋಡಿಕೊಳ್ಳಬೇಕು.
ತನ್ನ ತಾನು ಅರಿಯುವಂತಹ ಪ್ರಕ್ರಿಯೆಯ ದಿಕ್ಕಿನಲ್ಲಿ ಮಕ್ಕಳನ್ನು ತೊಡಗಿಸಿದ್ದೇ ಆದರೆ, ಅವರು ಜಗತ್ತನ್ನು ಅರಿಯಲು, ಗ್ರಹಿಸಲು ಆರಂಭಿಸುತ್ತಾರೆ. ತನಗೆ ಜಗತ್ತು ಹೊಂದಿಕೊಳ್ಳಬೇಕೆಂಬ ಭ್ರಮೆಯನ್ನು ತೊರೆದು, ಜಗತ್ತಿಗೆ ಹೊಂದಿಕೊಳ್ಳುತ್ತಾರೆ. ಪ್ರತಿ ಕ್ಷಣವೂ ತಾವು ಜೀವಂತವಾಗಿರುವ ಅನುಭವದಲ್ಲಿ ಹೊಸತನ್ನು ಗ್ರಹಿಸುತ್ತಿರುತ್ತಾರೆ. ಬೆಳೆಯುತ್ತಿರುತ್ತಾರೆ, ಅರಳುತ್ತಿರುತ್ತಾರೆ, ಮುಖ್ಯವಾಗಿ ಜೀವಂತಿಕೆಯಿಂದ ಇರುತ್ತಾರೆ. ಅವರಿಗೆ ಹಾಗಿರುವಂತೆ ತರಬೇತಿಗೊಳಿಸುತ್ತಾ ಜೀವಂತಿಕೆಯಿಂದ ಇರುವ ಭಾಗ್ಯ ನಮ್ಮದೂ ಆಗಲಿ.
ಹೊಸಹೊಸಬನಾಗುವನನುಕ್ಷಣಂ ಮಾನವನು
ವಸುಧೆಯಾ ಮೂಸೆಯಲಿ ಪುಟಪಾಕವಾಂತು
ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೆ
ಕಸವೆಲ್ಲ ಕಳೆದವನು – ಮಂಕುತಿಮ್ಮ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243