ಅಂತರಂಗ
ಅರಿಮೆಯ ಅರಿವಿರಲಿ-46 : ನನ್ನತನದ ಜತನ
- ಯೋಗೇಶ್ ಮಾಸ್ಟರ್
ವ್ಯಕ್ತಿ ಮತ್ತು ಸಮಾಜ; ಈ ಎರಡೂ ಪರಸ್ಪರ ಪ್ರಭಾವಗಳನ್ನು ಬೀರಿಕೊಳ್ಳುತ್ತಲೇ ಇರುತ್ತವೆ. ಹಾಗಾಗಿ ನನ್ನತನವೆಂದು ನಾವು ಏನನ್ನೇ ಕರೆದುಕೊಂಡರೂ ಅದು ಸಮಾಜದಲ್ಲಿ ಪ್ರಚಲಿತದಲ್ಲಿರುವಂತಹ ನೈತಿಕತೆ, ಸಾಂಸ್ಕೃತಿಕ ಪ್ರಭಾವ, ಧಾರ್ಮಿಕ ಹಿನ್ನೆಲೆ ಮತ್ತು ಕೌಟುಂಬಿಕ ಪರಿಸರ, ಇದೆಲ್ಲದರ ಜೊತೆಗೆ ಸಾಮಾಜಿಕ ವಾತಾವರಣದಿಂದಲೇ ರೂಪಿತವಾಗಿರುತ್ತದೆ.
ಒಂದೋ ಸಮಾಜವು ಒಪ್ಪಿಕೊಂಡಿರುವ ಮೌಲ್ಯವನ್ನು ತನ್ನದಾಗಿಸಿಕೊಂಡಿರುವ ತನ್ನತನ ರೂಪುಗೊಳ್ಳಬೇಕು ಇಲ್ಲವೇ ಅದನ್ನು ವಿರೋಧಿಸುವಂತಹ ಬಂಡಾಯದ ಆಲೋಚನೆಗಳಿಂದ ಸ್ಥಾಪಿತ ಮೌಲ್ಯಗಳನ್ನು ಪ್ರತಿಭಟಿಸುತ್ತಾ ತನ್ನತನವನ್ನು ರೂಪಿಸಿಕೊಳ್ಳಬೇಕು. ಒಟ್ಟಾರೆ ‘ಹೂ’ ಅಂದರೂ, ‘ಉಹು’ ಅಂದರೂ ಸಮಾಜವೇ ಆಧಾರ. ಮನುಷ್ಯ ಸಂಘಜೀವಿಯಾಗಿರುವುದೇ ಒಂದು ಸಹಜ ಲಕ್ಷಣ ಅಥವಾ ತಾಪತ್ರಯ; ಏನನ್ನುತ್ತೀರೋ ಅದು ಅವರವರ ಅನುಭವಗಳಿಗೆ ಅಥವಾ ಅವುಗಳಿಂದ ಮೂಡಿರುವ ಅಭಿಪ್ರಾಯಗಳಿಗೆ ಬಿಟ್ಟಿದ್ದು.
ನಾನು ಮತ್ತು ನನ್ನತನ
ನಾನು ಎಂಬುದು ತೀರಾ ವ್ಯಾಕರಣ ತಂತ್ರದಂತೆ ಸನ್ನಿವೇಶಕ್ಕೆ ಅನುಗುಣವಾಗಿ ಉಪಯೋಗಿಸುವುದರಿಂದ ಅದು ಹೆಚ್ಚು ಸಾರ್ವತ್ರಿಕವಾಗಿ ಬಳಕೆಯಾಗುತ್ತದೆ. ಈ ಸಾರ್ವಜನಿಕವಾದ ‘ನಾನು’ ಎಂಬುದನ್ನು ಬಿಟ್ಟು ಖಾಸಗಿಯಾಗಿರುವ ನಾನು ಎಂಬುವುದನ್ನು ಗುರುತಿಸಿಕೊಳ್ಳಲು ಮತ್ತು ಗಮನಿಸಿಕೊಳ್ಳಲು ಪ್ರಯತ್ನಿಸಿದರೆ ‘ನನ್ನತನ’ ಎಂಬುದನ್ನು ಒಂದು ಹಂತಕ್ಕೆ ಅಪ್ಪಿಕೊಳ್ಳಲು ಅಥವಾ ಆವಾಹಿಸಿಕೊಳ್ಳಲು ಸಾಧ್ಯ.
ಆಂತರಿಕವಾಗಿ ಕೆಲವು ಮೌಲ್ಯಗಳನ್ನು ಮತ್ತು ಗುಣಗಳನ್ನು ತನ್ನದೆಂದು ಒಲವಿನಿಂದ ಒಪ್ಪಿಕೊಂಡಿರುವ ಮತ್ತು ಅಭ್ಯಾಸ ಮಾಡುತ್ತಿರುವ ವಿಷಯಗಳ ಆಪ್ತತೆಯನ್ನು ‘ನನ್ನತನ’ ಎಂದು ಗುರುತಿಸಿಕೊಳ್ಳಬಹುದು. ನನ್ನತನವನ್ನು ಗುರುತಿಸಿಕೊಳ್ಳಲು ತಾತ್ವಿಕವಾಗಿಯೂ ಮತ್ತು ತಾಂತ್ರಿಕವಾಗಿಯೂ ಕೆಲವು ಸಾಮರ್ಥ್ಯಗಳಿರಬೇಕು.
ಅವೇನಪ್ಪಾಂದ್ರೆ, ಮೊದಲನೆಯದಾಗಿ ತನ್ನನ್ನು ತಾನು ನೋಡಿಕೊಳ್ಳುವ ಅಥವಾ ತನ್ನ ಒಲವು, ನಿಲುವು, ನಡವಳಿಗೆ, ಭಾವ, ಭಂಗಿ, ವಿಚಾರ; ಒಟ್ಟಾರೆ ವ್ಯಕ್ತಿತ್ವವನ್ನಾಗಿ ರೂಪಿಸಿರುವಂತಹ ಎಲ್ಲಾ ಅಂಶಗಳ ಪ್ರದರ್ಶಿಸುವ ವ್ಯಕ್ತಿಯನ್ನಾಗಿ ಸಾಕ್ಷೀಕರಿಸುವ ಸಾಮರ್ಥ್ಯವಿರಬೇಕು. ಆಗ ಆ ವ್ಯಕ್ತಿಗೆ ತಾನು ಹೇಗೆ, ತನ್ನಲ್ಲಿ ಏನೇನೆಲ್ಲಾ ಗುಣ-ಅವಗುಣಗಳಿವೆ, ಅವು ಹೇಗೆ ಕಾಣುತ್ತವೆ? ಚೆಂದವಾಗಿ, ಘನವಾಗಿ ಕಾಣುತ್ತದೆಯೋ, ಎದ್ವಾತದ್ವ ಕಾಣುತ್ತದೆಯೋ, ವಿದೂಷಕನಂತೆ ಕಾಣುತ್ತದೆಯೋ, ಪೆಕರನಂತೆ ಕಾಣುತ್ತದೆಯೋ; ಹೀಗೆ ಯಾವ ರೀತಿಯಲ್ಲಿ ತನಗೆ ತನ್ನ ವ್ಯಕ್ತಿತ್ವದ ಪ್ರದರ್ಶನ ಕಾಣುತ್ತಿದೆ ಎಂಬುದನ್ನು ತಾನೇ ನೋಡಿಕೊಳ್ಳುವ ಸಾಮರ್ಥ್ಯವಿರಬೇಕು. ಅದು ಹಾಗೇ ಇರಲಿ, ಅಥವಾ ಹಾಗಿರಬಾರದು ಎಂಬ ನಿರ್ಣಯ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಸ್ಪಷ್ಟವಾದ ದೃಷ್ಟಿಯನ್ನು ತನ್ನ ಕಡೆಗೆ ತಾನೇ ಬೀರಿಕೊಳ್ಳುವಂತಿರಬೇಕು.
ಸರಿ, ಇನ್ನು ಎರಡನೆಯದು ಅಂದರೆ ತನ್ನನ್ನು ತಾನು ವಿಮರ್ಶೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಸಮರ್ಥನಾಗಿರಬೇಕು. ಒಟ್ಟಾರೆ ಸ್ವಮೋಹವಿರಬಾರದು ಅಥವಾ ಆತ್ಮರತಿ ಇರಬಾರದು. ಸ್ವಕುಚ ಮರ್ಧನದ ಸುಖದಲ್ಲಿ ಮೈಮರೆಯುವಂತಹ ಗೀಳು ಇದ್ದವರಿಗೆ ‘ನನ್ನತನ’ ಎನ್ನುವುದು ಆತ್ಮರತಿಯ ಅಹಂಕಾರದ ಪ್ರದರ್ಶನದ ಭಾಗವಾಗಿಬಿಡುವುದೇ ಹೊರತು, ತನ್ನ ಅಂತಃಸತ್ವದ ಅರಿವೇನಲ್ಲ. ಈ ನನ್ನತನ ಎನ್ನುವ ವ್ಯಕ್ತಿತ್ವದ ಅರಿವಿನಲ್ಲಿ ಪ್ರತಿಬಿಂಬದಂತೆ ಕಾಣುವ ವರ್ತನೆಗಳು, ಪ್ರತಿಕ್ರಿಯೆಗಳು, ಪ್ರದರ್ಶನಗಳು ಪ್ರತಿಜೀವಿಯ ಕ್ರಿಯೆಗೆ ತಕ್ಕಂತಹ ಪ್ರತಿಕ್ರಿಯೆಯಾಗಿರದೇ ತನ್ನತನದ ಅಭಿವ್ಯಕ್ತಿಯಾಗಿರುತ್ತದೆ.
ಉದಾಹರಣೆಗೆ ಹೇಳುವುದಾದರೆ, ಒಬ್ಬ ವ್ಯಕ್ತಿಯು ಸಹನೆಯ ಮತ್ತು ಸಹಾನುಭೂತಿಯ ಮೌಲ್ಯಗಳು ತನ್ನ ವ್ಯಕ್ತಿತ್ವದ ಭಾಗವಾಗಿರಬೇಕೆಂದು ಬಯಸಿ ತನ್ನತನವನ್ನು ಹಾಗೆ ರೂಪಿಸಿಕೊಂಡಿರುತ್ತಾರೆ. ಆಗ ಮತ್ತೊಬ್ಬ ವ್ಯಕ್ತಿಯು ಅವನ ಮೇಲೆ ಮಾತಿನಲ್ಲಿ ದಾಳಿ ಮಾಡುತ್ತಾನೆ. ಯಾವುದೋ ಕಾರಣಕ್ಕೆ ಕೆಟ್ಟಾಕೊಳಕು ಮಾತುಗಳ ಸಹಸ್ರ ನಾಮಾರ್ಚನೆ ಮಾಡುತ್ತಾನೆ. ಆಗ ಸಹನೆ ಮತ್ತು ಸಹಾನುಭೂತಿಯ ವ್ಯಕ್ತಿತ್ವದ ಮನುಷ್ಯ ತಾನು ಆರಾಧಿಸುವ ಗುಣಗಳನ್ನು ಬಿಟ್ಟುಕೊಡದೇ, ಆ ವ್ಯಕ್ತಿಯ ಭಾಷೆಯಲ್ಲಿ ಆತನಿಗೆ ಪ್ರತಿಕ್ರಿಯಿಸದೇ, ಉತ್ತಮವಾದ ಭಾಷೆಯಲ್ಲಿ ಮತ್ತು ಸಹಾನುಭೂತಿಯ ಧೋರಣೆಯಲ್ಲಿಯೇ ಮಾತಾಡುತ್ತಾನೆ. ಎದುರಾಳಿಯು ಅದೆಷ್ಟೇ ಪ್ರಚೋದಿಸಿದರೂ ಈ ವ್ಯಕ್ತಿಯು ತನ್ನತನವನ್ನು ಅವನ ಪ್ರಚೋದನೆಗೆ ಬಲಿಗೊಡಲು ಸಿದ್ಧವಿರುವುದಿಲ್ಲ.
ಹಾಗೆಯೇ ಪ್ರಾಮಾಣಿಕ ವ್ಯಕ್ತಿತ್ವ, ಸರಳವಾದ ಉಡುಗೆ ಮತ್ತು ನೇರವಾದ ಮಾತುಗಳನ್ನು ತನ್ನದಾಗಿಸಿಕೊಂಡಿರುವ ವ್ಯಕ್ತಿಯು ಯಾವುದೇ ಸಭೆ, ಸಮಾರಂಭಕ್ಕೆ ಹೋಗುವಾಗಲೂ ತನ್ನ ಉಡುಗೆ ತೊಡುಗೆಗಳನ್ನು ಸರಳವಾಗಿಯೇ ತೊಟ್ಟಿರುತ್ತಾನೆ.ಹಾಗೆಯೇ ತನಗೇನಾದರೂ ಗೊತ್ತಿರದಿದ್ದ ವಿಷಯವಾದರೆ ‘ತನ್ನ ಎಲ್ಲಿ ಅಜ್ಞಾನಿ ಎಂದು ಸಭಿಕರು ಭಾವಿಸಿಬಿಡುತ್ತಾರೋ’ ಎಂದು ಹುಸಿಪಾಂಡಿತ್ಯದ ಪ್ರದರ್ಶನ ಮಾಡದೇ, ನನಗೆ ಈ ವಿಷಯದ ಬಗ್ಗೆ ತಿಳುವಳಿಕೆ ಇಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಇಷ್ಟು ಮಾತ್ರ ನಿಮಗೆ ಗೊತ್ತಿಲ್ಲವಾ? ಎಂದು ಯಾರಾದರೂ ವ್ಯಂಗ್ಯವಾಡಿದರೂ ಹೌದು ಗೊತ್ತಿಲ್ಲ ಎಂಬ ಒಪ್ಪಿಕೊಳ್ಳುವಿಕೆಯಿಂದ ತಮ್ಮತನವನ್ನು ಬಿಟ್ಟುಕೊಡುವುದಿಲ್ಲ. ಹೀಗೆ ನನ್ನತನದಲ್ಲಿ ಎಷ್ಟೊಂದು ವಿಷಯಗಳನ್ನು ಅಡಕ ಮಾಡಬಹುದು. ತನ್ನ ಆಸೆ, ತನ್ನ ಮೌಲ್ಯ, ಅಭಿರುಚಿ, ಆಸಕ್ತಿ; ಹೀಗೆ ಮೆಚ್ಚುವ ವಿಷಯಗಳೆಲ್ಲಾ ತನ್ನತನದ ರೂಪುಗೊಳ್ಳುವಿಕೆಯಲ್ಲಿ ಭಾಗಗಳಾಗುತ್ತವೆ.
ಒಟ್ಟಾರೆ ನನ್ನತನ ಎಂಬುದು ಶುದ್ಧ ಸಕಾರಾತ್ಮಕವಾದ ಗುಣಗಳ ಮೊತ್ತವೇ ಆಗಿರುತ್ತದೆ. ಒಂದು ವೇಳೆ ವ್ಯಕ್ತಿಯು ತನ್ನಲ್ಲಿ ಯಾವುದಾದರೂ ದೌರ್ಬಲ್ಯ ಅಥವಾ ದೋಷಗಳನ್ನು ಕಂಡುಕೊಂಡಿದ್ದರೆ ಅದು ನನ್ನತನದ ಭಾಗವಾಗಿರದೇ ಅವು ಆತ್ಮಾವಲೋಕನದ ಭಾಗವಾಗಿರುವುದು. ಅಂತಹ ಆತ್ಮಾವಲೋಕನವೂ ಕೂಡಾ ಸಕಾರಾತ್ಮಕ ವ್ಯಕ್ತಿತ್ವದ ಭಾಗವಾಗಿದ್ದು ತನ್ನತನದ ನಿರ್ವಹಣೆಯೇ ಆಗಿರುತ್ತದೆ.
ಇಲ್ಲಿ ಗಮನಿಸಿ, ತನ್ನತನ ಎಂಬುದನ್ನು ಗಮನಿಸುವ ಅಥವಾ ರೂಪಿಸಿಕೊಳ್ಳುವ ನೆಪದಲ್ಲಿ ವ್ಯಕ್ತಿಗಳು ತಮ್ಮ ಅರಿಮೆಗಳನ್ನು, ಮಾನಸಿಕ ಸಮಸ್ಯೆಗಳನ್ನು ಮತ್ತು ತಮ್ಮದೇ ವರ್ತನೆಗಳ ರೀತಿ ನೀತಿಗಳನ್ನು ಗಮನಿಸಿಕೊಳ್ಳಲು ಮತ್ತು ತನ್ನ ಇಡಿಯಾದ ವ್ಯಕ್ತಿತ್ವವನ್ನು ಸಾಕ್ಷೀಕರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ನಿಜವಾಗಿಯೂ ಮಾನಸಿಕ ಆರೋಗ್ಯಕ್ಕೆ ಒಂದು ಉತ್ತಮವಾದ ಏರು ಮೆಟ್ಟಿಲೇ ಆಗಿರುತ್ತದೆ.
ನನ್ನತನದ ಆಳ ಮತ್ತು ಎತ್ತರ
ನಾನು ತಂದೆ, ನಾನು ತಾಯಿ, ನಾನು ಶಿಕ್ಷಕ, ನಾನು ಧಾರ್ಮಿಕವ್ಯಕ್ತಿ, ನಾನೊಬ್ಬ ಸ್ನೇಹಿತ, ನಾನು ಅಣ್ಣ, ನಾನೊಬ್ಬ ರಾಜಕಾರಣಿ, ನಾನೊಬ್ಬ ಕಲಾವಿದ; ಈ ಎಲ್ಲಾ ನಾನು ಎಂಬ ಪಾತ್ರಗಳ ಆಂತರಿಕ ಮೌಲ್ಯವಾಗಿ ನನ್ನತನ ಹೊಳೆಯುತ್ತದೆ. ಅಧ್ಯಾತ್ಮ ಮತ್ತು ಧಾರ್ಮಿಕತೆಯಲ್ಲೂ ಧ್ವನಿಸುವ ನಾನು ಎಂಬ ಪರಿಕಲ್ಪನೆಯು ನಾನೆಂಬ ಅಹಂಕಾರವಾಗಿದ್ದರೆ, ಇನ್ನೂ ಆಳಕ್ಕಿಳಿದರೆ ನಾನು ಎಂಬುದು ಪಾತ್ರಗಳನ್ನು, ಹುದ್ದೆ, ಅಧಿಕಾರಗಳನ್ನು, ಲೋಕವು ಆರೋಪಿಸುವ ಎಲ್ಲಾ ಗುರುತುಗಳನ್ನು, ನೀಡುವ ಬೆಲೆಗಳನ್ನು ಮೀರಿ ಆತ್ಮ ಎಂಬುದಾಗಿಯೂ ಗುರುತಿಸಲ್ಪಡುತ್ತದೆ.
ಆತ್ಮ ಎಂದರೂ ತನ್ನ ಎಂಬ ಅರ್ಥದಲ್ಲಿಯೇ ಸಾಹಿತ್ಯದ ತಂತ್ರಗಾರಿಕೆಯಲ್ಲಿ ಬಳಸಲ್ಪಟ್ಟರೂ ಅಧ್ಯಾತ್ಮದಲ್ಲಿ ಇಹದಲ್ಲಿರುವ್ ವ್ಯಕ್ತಿಯ ಚೈತನ್ಯವೆಂದು ಗುರುತಿಸಬಹುದು. ಆದರೆ ನಾನು ಎಂದು ಹೊರಪದರದಿಂದ ಗುರುತಿಸುತ್ತೀರೋ, ಆತ್ಮ ಎಂದು ಆಧ್ಯಾತ್ಮಿಕವಾಗಿ ಆಂತರಿಕ ಚೈತ್ಯನ್ಯವೆಂದು ಗುರುತಿಸುತ್ತೀರೋ; ಮನಶಾಸ್ತ್ರದಲ್ಲಿ ಪ್ರಜ್ಞಾವಸ್ಥೆಯಲ್ಲಿರುವ ಅಥವಾ ಜಾಗೃತವಾಗಿರುವಂತಹ ತನ್ನನ್ನು ತಾನು ಬುದ್ಧಿಪೂರ್ವಕವಾಗಿ ವಿವೇಚಿಸಿಕೊಳ್ಳುವಂತಹ ಒಂದು ಅರಿವು.
ಆ ತನ್ನತನದ ಅರಿವು ದೇಹಭಾವವನ್ನು, ಭಾವನೆಗಳನ್ನು, ವಿಚಾರಗಳನ್ನು, ಸಾಮಾಜೋಸಾಂಸ್ಕೃತಿಕ ಎಚ್ಚರವನ್ನು, ಆಧ್ಯಾತ್ಮವನ್ನು, ಪ್ರತಿಭೆಯನ್ನು, ಕೌಶಲ್ಯವನ್ನು, ಧೋರಣೆಗಳನ್ನು; ಹೀಗೆ ನೀವು ಯಾವ ಯಾವ ಆಯಾಮಗಳಿಂದ ಒಬ್ಬ ವ್ಯಕ್ತಿಯನ್ನು ಗುರುತಿಸಲು ಸಾಧ್ಯವೋ ಎಲ್ಲವನ್ನೂ ಒಳಗೊಂಡಿರುತ್ತದೆ.
ಈ ತನ್ನತನ ಎನ್ನುವುದು ಹುಟ್ಟಿನಿಂದ ಬರುವುದಲ್ಲ. ತಾನೇ ತನ್ನ ವಿವೇಚನೆ ಮತ್ತು ಪ್ರಜ್ಞೆಯಿಂದ ರೂಢಿಸಿಕೊಳ್ಳುವುದು ಮತ್ತು ರೂಪಿಸಿಕೊಳ್ಳುವುದು. ವ್ಯಕ್ತಿಯು ಬೆಳೆಯುತ್ತಾ ಬೆಳೆಯುತ್ತಾ ಅದು ಬಲಗೊಳ್ಳುವುದು. ಇದು ಹೇಗೆ ಸಮಗ್ರವೋ ಹಾಗೆಯೇ ಒಂದೊಂದು ಭಿನ್ನ ವಿಷಯಗಳಾಗಿಯೂ ಕೂಡ ಪ್ರಕಟಗೊಳ್ಳುವ ಸಾಧ್ಯತೆಗಳು ಇರುತ್ತವೆ. ತಾನು ಎಂದರೆ ಏನು ಎಂಬ ವಿಚಾರ ಮತ್ತು ಭಾವನೆಗಳ ಒಟ್ಟು ಮೌಲಿಕ ಮೊತ್ತದ ಪ್ರಜ್ಞೆಯೇ ತನ್ನತನ.
ನಾನೇ ದೀವಿಗೆ ನನ್ನದೇ ಬೆಳಕು
ನನ್ನತನದ ಪರಿಕಲ್ಪನೆಯ ಆಧಾರದ ಮೇಲೆ ಆತ್ಮಸ್ಥೈರ್ಯ, ಆತ್ಮಬಲ, ಆತ್ಮಾವಲೋಕನ, ಸ್ವವಿವೇಚನೆ, ಸ್ವಸಾಮರ್ಥ್ಯ, ಆತ್ಮಗೌರವ; ಹೀಗೆ ಹಲವು ಆಯಾಮಗಳು ತನ್ನತನದ ಪರಿಕಲ್ಪನೆಯ ಫಲವಾಗಿ ಮುನ್ನೆಲೆಗೆ ಬರುತ್ತವೆ. ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ಪೋಷಿಸಿಕೊಳ್ಳಲು ಸಾಧ್ಯವಾಗುತ್ತದೆ. ತನ್ನ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವಂತೆ ಆತ್ಮವಿಮರ್ಶೆ ಮಾಡಿಕೊಳ್ಳಲೂ ಸಾಧ್ಯವಾಗುತ್ತದೆ.
ಈ ವಿಷಯದ ಬಗ್ಗೆ ಸೂಕ್ಷ್ಮ ದೃಷ್ಟಿಯನ್ನು ಹೊಂದಿದ್ದ ಅನೇಕ ಕುಶಲರು, ಪ್ರಜ್ಞಾವಂತರು ದಿನಚರಿಗಳನ್ನು ಬರೆಯುವ ರೂಢಿಯನ್ನು ಬೆಳೆಸಿಕೊಂಡಿದ್ದರು. ಆಯಾ ದಿನದ ಕೊನೆಯಲ್ಲಿ ಮಲಗುವ ಮುನ್ನ ತಾವು ದಿನವಿಡೀ ಸಂಪರ್ಕಿಸಿದ ವ್ಯಕ್ತಿಗಳನ್ನು, ಸಂವಹನಗಳನ್ನು, ಸಂಭಾಷಣೆಗಳನ್ನು, ಸಂದರ್ಭಗಳನ್ನು, ಸನ್ನಿವೇಶಗಳನ್ನು ಅವಲೋಕಿಸಿ ಅವನ್ನು ದಾಖಲು ಮಾಡುವಂತಹ ಕೆಲಸ ಮಾಡುತ್ತಿದ್ದರು. ಅದು ಬಹಳ ಆತ್ಮಾವಲೋಕನ ಅಥವಾ ತನ್ನ ತಾನು ವಿಮರ್ಶಿಸಿಕೊಳ್ಳಲು, ತನ್ನ ಕೆಲಸಗಳನ್ನು ವಿವೇಚನೆಯಿಂದ ಪುನರಾವಲೋಕನ ಮಾಡಿಕೊಳ್ಳಲು ಒಂದು ಉತ್ತಮ ಅವಕಾಶವಾಗುತ್ತಿತ್ತು.
ಇಂದು ರಾತ್ರಿ ತನ್ನ ತಾನು ನೋಡಿಕೊಂಡ ವ್ಯಕ್ತಿಯು ಮರುದಿನ ಬೆಳಗ್ಗೆ ತನ್ನ ಎಷ್ಟೋ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಹೊಸದಿನವನ್ನು ಎಚ್ಚರಿಕೆಯಿಂದ ಮತ್ತು ವಿವೇಚನೆಯಿಂದ ಮಾಡಲು ಸಾಧ್ಯವಾಗುತ್ತಿತ್ತು. ತನ್ನದೇ ಆಲೋಚನೆಗಳನ್ನು, ತನ್ನದೇ ಮನೋಭಾವಗಳನ್ನು, ತನ್ನದೇ ಧೋರಣೆಗಳನ್ನು ತಾನೇ ಸ್ವಮೋಹವಿಲ್ಲದೇ, ಆತ್ಮರತಿಯಿಂದ ಸಮರ್ಥಿಸಿಕೊಳ್ಳದೇ ನೋಡಿಕೊಳ್ಳುವುದೆಂದರೆ ಅದೊಂದು ಮಹತ್ತರವಾದ ಗುಣವಾಗುತ್ತದೆ. ಮನಶಾಸ್ತ್ರೀಯವಾಗಿ ಇದು ಎಷ್ಟು ಮಹತ್ವವೋ ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿಯೂ ಕೂಡಾ ಈ ಪ್ರಜ್ಞೆಯು ಮೌಲ್ಯವುಳ್ಳದ್ದು. ಹಾಗಾಗಿಯೇ ನನ್ನತನವೆಂಬುದನ್ನು ರೂಪಿಸಿಕೊಳ್ಳುವುದು ಮತ್ತು ಜೋಪಾನ ಮಾಡಿಕೊಳ್ಳುವುದು ಅದೆಷ್ಟು ಮುಖ್ಯ ಮತ್ತು ಅಗತ್ಯ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243