ಅಂತರಂಗ
ಅರಿಮೆಯ ಅರಿವಿರಲಿ-3 : ಮನೋಬರಹವುಂಟು ಹಣೆಬರಹವಿಲ್ಲ
- ಯೋಗೇಶ್ ಮಾಸ್ಟರ್
ಸಹಜವಾಗಿ ಅಥವಾ ಸರಳವಾಗಿ ಇರಬಹುದಾದದ್ದು ತೊಡಕುಗಳನ್ನೋ, ಜಟಿಲತೆಯನ್ನೋ ಅಥವಾ ಸಂಕೀರ್ಣತೆಯನ್ನೋ ಹೊಂದಿರುವಂತಹದ್ದಕ್ಕೆ ಕಾಂಪ್ಲೆಕ್ಸ್ ಅಂತ ಅನ್ನುತ್ತೇವೆ. ನನ್ನ ತಿಳುವಳಿಕೆಯ ಪರಿಮಿತಿಯಲ್ಲಿ ಮನುಷ್ಯನ ಮನಸ್ಸು ಜಗತ್ತಿನಲ್ಲಿರುವ ಯಾವುದೇ ವಿಷಯ ವಸ್ತುಗಳಿಗಿಂತ ಸಂಕೀರ್ಣವಾಗಿರುವುದು, ಗೋಜುಗೋಜಲಾಗಿರುವುದು.
ವಿಪರ್ಯಾಸವೆಂದರೆ ಸಾಮಾನ್ಯವಾಗಿ ಮನುಷ್ಯ ಸರಳವಾಗಿರಬಹುದಾದ ತನ್ನ ಮನಸ್ಸನ್ನು ತಾನೇ ಸಂಕೀರ್ಣಗೊಳಿಸಿಕೊಳ್ಳುವುದು. ಸರಳ ಅಂದರೆ ಯಾವ ಮನಸ್ಸೂ ತೀರಾ ಸರಳವಾಗೇನೂ ಇದ್ದಿರುವುದಿಲ್ಲ. ಸಹಜವಾಗಿಯೇ ಕೆಲವು ಬಗೆಯ ಜಟಿಲತೆಗಳು ಮನಸ್ಸಿಗೆ ಇರುತ್ತವೆ. ಆದರೆ, ಅವನ್ನು ಗಮನಿಸಿಕೊಂಡು ಹೋಗಲಾಡಿಸಿಕೊಳ್ಳುವ ಬದಲು ಅಥವಾ ಅದನ್ನು ಪೋಷಿಸುವ ಬದಲು ಮತ್ತಷ್ಟು ಸಂಕೀರ್ಣಗೊಳಿಸಿಕೊಳ್ಳುತ್ತಾ ಹೋಗುವುದು ಮನುಷ್ಯನ ಸಾಮಾನ್ಯವಾದ ಹಣೆಬರಹ. ಕ್ಷಮಿಸಿ ಇದು ಹಣೆಬರಹವಲ್ಲ. ಮನೋಬರಹ.
ಯಾರೊಬ್ಬರ ಮನೋಬರಹದ ಆಧಾರದ ಮೇಲೆ ಹಣೆಬರಹವೆಂದು ಅದೇನು ಹೇಳುತ್ತೇವೋ ಅದು ನಿರ್ಧಾರವಾಗುವುದು. ಇಷ್ಟು ತಿಳಿಯೋಣ. ನಮ್ಮ ಕಲಿಕೆ, ಸಾಧನೆ, ವೇದನೆ, ಸಂಬಂಧಗಳು ಕೊಡುವ ನೋವು, ಮೋಸ ಹೋಗುವುದು, ವೈಫಲ್ಯ; ಇತ್ಯಾದಿಗಳನ್ನೆಲ್ಲಾ ಹಣೆ ಬರಹವೆಂದು ನಿಟ್ಟುಸುರು ಬಿಡುವರ ಬಹುಪಾಲು ವಿಷಯಗಳು ಮನೋಬರಹದ ಮೇಲೆ. ಮನಸ್ಸೆಂಬ ಕಾಲ್ಪನಿಕ ಸ್ಲೇಟಿನ ಮೇಲೆ ಏನೇನೋ ಏನೇನೋ ಬರೆದಿರುತ್ತದೆ. ಮಗುವಾಗಿದ್ದಾಗ ಖಾಲಿಸ್ಲೇಟಾಗಿರುತ್ತದೆ. ಅದರ ಮೇಲೆ ಅಮ್ಮ, ಅಪ್ಪ, ಅಜ್ಜಿ, ಕುಟುಂಬ, ಶಾಲೆ, ಸಮಾಜ, ಧರ್ಮ; ಹೀಗೇ ಎಲ್ಲರೂ ತೋಚಿದಂತೆಲ್ಲಾ ಗೀಚುತ್ತಾ ಹೋಗುತ್ತಾರೆ.
ಸಾಲದಕ್ಕೆ ಇವರೆಲ್ಲರ ಪಾಠ ಪ್ರವಚನದಿಂದಾಗಿ ನಾವೂ ನಮ್ಮದನ್ನು ಗೀಚಿಕೊಂಡುಕೊಂಡು ಹೋಗುತ್ತೇವೆ. ಇದೇ ಮನೋಬರಹ. ನಮ್ಮ ಸಾಧನೆ, ವೇದನೆ, ವೈಫಲ್ಯಗಳಿಗೆ ಬಹುಪಾಲು ಕಾರಣ ಬ್ರಹ್ಮನೆಂಬುವನ್ಯಾರೋ ಬರೆದಿರುವ ಹಣೆಬರಹವಲ್ಲ. ನಾವೂ ಮತ್ತು ನಮ್ಮವರು ಬರೆದಿರುವ ಮನೋಬರಹ. ಅಂತಹ ಬರಹಗಳೇನಕವು ಅರಿಮೆಗಳಾಗುತ್ತವೆ. ನಾವು ಬಹುಪಾಲು ಮಂದಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವವರು. ಎಡವಿದ ಕಲ್ಲನ್ನು ದೂರುವ ಜನ. ಕಲ್ಲನ್ನು ಎಡವಿದರೆ, ಈ ದರಿದ್ರದ ಕಲ್ಲು ಅಡ್ಡಬಂದು ಎಡವಿದೆ ಎನ್ನುವವರು. ಒಂದು ಮಗುವೂ ಕೂಡಾ ನಾನು ಆಡುವಾಗ ಬಿದ್ದೆ ಎನ್ನದು. ಅವನ್ಯಾರೋ ದೂಡಿದ, ತಳ್ಳಿದ. ಇವನ್ಯಾರೋ ಬೀಳಿಸಿದ ಎನ್ನುವುದು.
ಕುಡಿತ, ಸಿಗರೇಟಿನ ಚಟದಿಂದ ಚಟ್ಟ ಹತ್ತುವ ಹಂತಕ್ಕೆ ಹೋಗಿರುವ ಹುಡುಗನ ತಾಯಿ, ನಮ್ಮ ಹುಡುಗ ಒಳ್ಳೆಯವನೇ ಆದರೆ ಅವನು ಸಹವಾಸದಿಂದ ಕೆಟ್ಟ ಅಂತ ಅನ್ನುವಳು. ಅಂತಹ ತರಬೇತಿಯೇ ನಮಗೆ ಸಿಕ್ಕಿರುವುದು. ಹಾಗಾಗಿ, ನನ್ನ ವೈಫಲ್ಯಕ್ಕೆ ನಾನೇ ಕಾರಣ ಎನ್ನುವ ನಾಚಿಗೇಡಿತನದ ಮಾತಾಡದೇ ನನ್ನ ಹಣೆಬರಹ ಹಾಗಿದ್ದುದರಿಂದ ಹಾಗಾಯಿತು ಎನ್ನುವವರು ನಾವು. ಸರಿ, ಈಗ ಮನೋಬರಹಗಳು ಅರಿಮೆಗಳಾಗುವುದು ಎಂತು? ನೋಡೋಣ.
ಕಾಡುವ ಕಾಂಪ್ಲೆಕ್ಸುಗಳು
ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳಿಂದ ಸಾಮಾನ್ಯವಾಗಿ ಗ್ರಹಿಸುವ ವಿಷಯಗಳೂ ಮತ್ತು ಮತ್ತೊಂದು ಇಂದ್ರಿಯವಾದ ಮನಸ್ಸಿನ ಆಲೋಚನಾ ಕ್ರಮಗಳನ್ನು ವಿರೂಪಗೊಳಿಸಿ, ಅಸ್ವಾಭಾವಿಕವಾದ ವರ್ತನೆಗಳನ್ನು ಪ್ರಕಟಗೊಳಿಸುವುದನ್ನೇ ಮಾನಸಿಕ ಜಟಿಲತೆಗಳೆಂದು ಅಥವಾ ಕಾಂಪ್ಲೆಕ್ಸ್‍ಗಳೆಂದು ಕರೆಯಹುದು. ಅರಿಮೆ ಎಂದೂ ಇದನ್ನು ಕರೆಯಬಹುದು. ಯಾವುದು ಅಪ್ರಜ್ಞಾಪೂರ್ವಕವಾಗಿ ನಮ್ಮ ಮನಸ್ಸಿನಾಳದಲ್ಲಿರುತ್ತದೆಯೋ ಅದನ್ನು ಅರಿಮೆ ಎನ್ನಬಹುದು. ಉದಾಹರಣೆಗೆ ಮಾತೃಭಾಷೆಯನ್ನೇ ತೆಗೆದುಕೊಂಡರೆ, ಅದು ವಾತಾವರಣದ ಪ್ರಭಾವದಿಂದ ರೂಪುಗೊಂಡಿರುವಂತಹ ಅರಿಮೆ. ನುಡಿಯರಿಮೆ. ಭಾವುಕವಾದಾಗ, ಆಳವಾದ ಮನಸ್ಸಿನಲ್ಲಿ ಆಲೋಚನೆಗಳು ಮೂಡುವಾಗ, ಸಿದ್ಧತೆ ಇಲ್ಲದೇ ಅಭಿವ್ಯಕ್ತಿಸುವಾಗ ಸಾಮಾನ್ಯವಾಗಿ ತಮ್ಮ ತಾಯ್ನುಡಿಯೇ ಮೇಲ್ಗೈ ಸಾಧಿಸುತ್ತದೆ. ಅದೇ ರೀತಿ ಭಾಷೆಯ ಉಚ್ಚಾರಣೆಯೂ ಕೂಡಾ. ಇದನ್ನು ಉಲಿಯರಿಮೆ ಎನ್ನಬಹುದೇನೋ.
ಯಾವುದೇ ವ್ಯಕ್ತಿಗೆ ತನ್ನ ತಾಯ್ನುಡಿಯ ಉಚ್ಚಾರಣೆ ಅಥವಾ ಪ್ರಾದೇಶಿಕ ಶೈಲಿಯ ಉಚ್ಚಾರಣೆ ಅಂತರ್ಗತವಾಗಿದ್ದು ಅವನಿಗೆ ಅರಿವಿಲ್ಲದಂತೆಯೇ ಆತನ ಮಾತುಗಳಲ್ಲಿ ಇಣುಕುತ್ತಿರುತ್ತದೆ. ಇದೇ ರೀತಿ ಅರಿಮೆಗಳು ಮನಸ್ಸಿಗೆ ಸಂಬಂಧಪಟ್ಟಂತೆಯೂ ಇವೆ. ಸಕಾರತ್ಮವಾಗಿದ್ದರೆ ಸಂತೋಷ. ನಕಾರಾತ್ಮಕವಾಗಿದ್ದರೆ ಸಮಸ್ಯೆ. ಈಗ ಇಲ್ಲಿ ಚರ್ಚಿಸುತ್ತಿರುವ ಮಾನಸಿಕ ಅರಿಮೆಗಳ ಪ್ರಭಾವವು ನಕಾರಾತ್ಮಕವೇ ಆಗಿರುವುದರಿಂದ ಅವುಗಳನ್ನು ಸಮಸ್ಯೆಗಳೆಂದೇ ಪರಿಗಣಿಸಬೇಕಾಗುತ್ತದೆ. ಈ ಕಾಡುವ ಕಾಂಪ್ಲೆಕ್ಸ್‍ಗಳು ಅಥವಾ ಅರಿಮೆಗಳು ವ್ಯಕ್ತಿಯ ಆಳವಾದ ಮನಸ್ಸಿನಲ್ಲಿ ಬೇರುಬಿಟ್ಟಿರುತ್ತದೆ.
ಜಟಿಲತೆಗಳಿಂದ ಕೂಡಿರುವ ಈ ಮಾನಸಿಕ ಅರಿಮೆಯು ವ್ಯಕ್ತಿಯು ಇನ್ನೊಬ್ಬರಿಗೆ ಹೇಗೆ ಕಾಣಿಸುತ್ತಾನೆ, ಇನ್ನೊಬ್ಬರ ಜೊತೆ ಹೇಗೆ ವರ್ತಿಸುತ್ತಾನೆ ಎಂಬುದನ್ನು ವಿನ್ಯಾಸಗೊಳಿಸುವುದರಿಂದ ಒಬ್ಬ ವ್ಯಕ್ತಿಯ ಜೀವನದಲ್ಲಿ ಇವು ಬಹಳ ಪ್ರಭಾವಶಾಲಿಯಾಗಿರುತ್ತವೆ. ಒಬ್ಬನ ಸಾಧನೆ, ವೈಫಲ್ಯಗಳನ್ನು ನಿರ್ಧರಿಸುವಲ್ಲಿಯೂ ಈ ಅರಿಮೆಗಳು ಪಾತ್ರವನ್ನು ವಹಿಸುತ್ತವೆ.
ಇವುಗಳು ವ್ಯಕ್ತಿಗಳಲ್ಲಿ ಮೂಡುವುದಾದರೂ ಹೇಗೆ? ಹೀಗೇ ಅಂತ ನಿರ್ಧಿಷ್ಟವಾಗಿ ಹೇಳಕ್ಕೆ ಆಗಲ್ಲ. ಕೆಲವು ಸಲ ಹುಟ್ಟಿದಾಗಿನಿಂದಲೇ ಬಂದುತ್ತವೆ. ಕೆಲವೊಂದು ಸಲ ವ್ಯಕ್ತಿ ವಾಸಿಸುವ ವಾತಾವರಣವು ಅವನ್ನು ರೂಪಿಸುತ್ತದೆ. ಏನೇ ಆದರೂ ಮಗುವಿನ ಬಾಲ್ಯದಲ್ಲಿಯೇ ಇವನ್ನು ಗುರುತಿಸಲು ಸಾಧ್ಯ. ಹೇಗೆ ಮಗುವಿಗೆ ಹೇಳಿಕೊಡುತ್ತಾ ನಾವು ಕಲಿಯುತ್ತಾ ಹೋಗುತ್ತೇವೆಯೋ, ಹಾಗೇ ಮಗುವಿನ ಮಾನಸಿಕ ಸ್ಥಿತಿಗಳನ್ನು ಅಧ್ಯಯನ ಮಾಡುತ್ತಾ, ಅವಲೋಕಿಸುತ್ತಾ ನಮ್ಮದನ್ನು ನಾವೂ ನೋಡಿಕೊಳ್ಳಬಹುದು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243